Skip to content
Opens in a new window
Listen to this chapter • 7:27

[1] ತರುವಾಯ ಬೆಚಲಯೇಲ್ ಮತ್ತು ಒಹೋಲಿಯಾಬನೂ ಯೆಹೋವ ದೇವರು ಆಜ್ಞಾಪಿಸಿದಂತೆಯೇ ಎಲ್ಲವುಗಳನ್ನು ಮಾಡುವರು. ಅವರು ಪರಿಶುದ್ಧಸ್ಥಳದ ಸೇವೆಗೋಸ್ಕರ ಎಲ್ಲಾ ವಿಧವಾದ ಕೆಲಸವನ್ನು ಯೆಹೋವ ದೇವರಿಂದ ಜ್ಞಾನ ವಿವೇಕಗಳನ್ನು ಹೊಂದಿದ ಇತರರೊಂದಿಗೆ ಕೆಲಸಮಾಡುವರು,” ಎಂದು ಹೇಳಿದನು.

[2] ಬೆಚಲಯೇಲನನ್ನು, ಒಹೋಲಿಯಾಬನನ್ನು ಮತ್ತು ಯೆಹೋವ ದೇವರು ಜ್ಞಾನಕೊಟ್ಟಿದ್ದ ಪ್ರತಿಯೊಬ್ಬ ಶಿಲ್ಪಿಯನ್ನೂ ಆ ಕೆಲಸ ಮಾಡುವುದಕ್ಕೆ ಸಿದ್ಧ ಮನಸ್ಸಿದ್ದ ಪ್ರತಿಯೊಬ್ಬನನ್ನೂ ಮೋಶೆಯು ಕರೆದನು.

[3] ಅವರು ಪರಿಶುದ್ಧ ಆಲಯದ ನಿರ್ಮಾಣಕ್ಕೋಸ್ಕರ ಇಸ್ರಾಯೇಲರು ತಂದ ಕಾಣಿಕೆಗಳನ್ನೆಲ್ಲಾ ಮೋಶೆಯ ಬಳಿಯಿಂದ ತೆಗೆದುಕೊಂಡರು. ಇದಲ್ಲದೆ ಅವರು ಪ್ರತಿದಿನ ಬೆಳಿಗ್ಗೆ ಉಚಿತವಾದ ಕಾಣಿಕೆಗಳನ್ನು ತರುತ್ತಿದ್ದರು.

[4] ಆಗ ಪರಿಶುದ್ಧಸ್ಥಳದ ಕೆಲಸವನ್ನು ಮಾಡುವ ಜ್ಞಾನಿಗಳೆಲ್ಲರೂ ತಮ್ಮ ತಮ್ಮ ಕೆಲಸವನ್ನು ಬಿಟ್ಟು ಬಂದು,

[5] ಮೋಶೆಯ ಸಂಗಡ ಮಾತನಾಡಿ, “ಯೆಹೋವ ದೇವರು ಮಾಡಬೇಕೆಂದು ಆಜ್ಞಾಪಿಸಿದ ಸೇವೆಯ ಕೆಲಸಕ್ಕೆ ಬೇಕಾಗಿರುವುದಕ್ಕಿಂತ ಹೆಚ್ಚಾಗಿ ಕಾಣಿಕೆಗಳನ್ನು ಈ ಜನರು ತರುತ್ತಿದ್ದಾರೆ,” ಎಂದು ಹೇಳಿದರು.

[6] ಆಗ ಮೋಶೆಯು, “ಇನ್ನು ಮೇಲೆ ಪರಿಶುದ್ಧಸ್ಥಳದ ಕಾಣಿಕೆಗೋಸ್ಕರ ಯಾವ ಪುರುಷನಾಗಲಿ, ಸ್ತ್ರೀಯಾಗಲಿ ಕೆಲಸ ಮಾಡಬಾರದೆಂದು ಪಾಳೆಯದಲ್ಲೆಲ್ಲಾ ಪ್ರಕಟಿಸಬೇಕು,” ಎಂದು ಆಜ್ಞಾಪಿಸಿದನು. ಹೀಗೆ ಜನರು ಕಾಣಿಕೆಗಳನ್ನು ತರುವುದನ್ನು ನಿಲ್ಲಿಸಿಬಿಟ್ಟರು.

[7] ಏಕೆಂದರೆ ಎಲ್ಲಾ ಕೆಲಸವನ್ನು ಮಾಡುವುದಕ್ಕೆ ಸಾಕಾಗಿ ಮಿಕ್ಕುವಷ್ಟು ಸಾಮಗ್ರಿಗಳು ದೊರೆತವು.

[8] ಕೆಲಸದವರಲ್ಲಿದ್ದ ಶಿಲ್ಪಿಗಳೆಲ್ಲರೂ ಗುಡಾರವನ್ನು ಹತ್ತು ಪರದೆಗಳಿಂದ ಮಾಡಿ, ನಯವಾಗಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ಕೌಶಲ್ಯದ ಕೆಲಸದಿಂದಲೂ ಕೆರೂಬಿಗಳನ್ನು ಮಾಡಿದರು.

[9] ಎಲ್ಲಾ ಪರದೆಗಳೂ ಒಂದೇ ಅಳತೆಯವುಗಳಾಗಿದ್ದವು. ಪ್ರತಿಯೊಂದು ಪರದೆಯು ಸುಮಾರು ಹದಿಮೂರು ಮೀಟರ್ ಉದ್ದ ಮತ್ತು ಎರಡು ಮೀಟರ್ ಅಗಲವಿದ್ದವು.

[10] ಅವರು ಐದು ಪರದೆಗಳನ್ನು ಒಂದಕ್ಕೊಂದು ಜೋಡಿಸಿದರು ಮತ್ತು ಇನ್ನುಳಿದ ಐದು ಪರದೆಗಳನ್ನೂ ಒಂದಕ್ಕೊಂದು ಜೋಡಿಸಿದರು.

[11] ಕೊನೆಯ ಪರದೆಯ ಅಂಚಿನ ಒಂದು ಜೋಡಣೆಯ ಸ್ಥಳದಲ್ಲಿ ನೀಲಿ ದಾರಿನ ಕುಣಿಕೆಗಳನ್ನು ಮಾಡಿದ್ದಲ್ಲದೆ, ಎರಡನೆಯ ಜೋಡಣೆಯ ಕಟ್ಟಕಡೆಯ ಪರದೆಯ ಅಂಚಿನಲ್ಲಿಯೂ ಅದೇ ಪ್ರಕಾರ ಮಾಡಿದರು.

[12] ಒಂದು ಪರದೆಯಲ್ಲಿ ಐವತ್ತು ಕುಣಿಕೆಗಳನ್ನು ಮಾಡಿ, ಇನ್ನೊಂದು ಪರದೆಯ ಅಂಚನ್ನು ಜೋಡಿಸುವ ಸ್ಥಳದಲ್ಲಿ ಐವತ್ತು ಕುಣಿಕೆಗಳನ್ನು ಮಾಡಿದರು. ಆ ಕುಣಿಕೆಗಳು ಒಂದು ಪರದೆಯನ್ನು ಮತ್ತೊಂದು ಪರದೆಯು ಹಿಡಿದುಕೊಳ್ಳುವಂತೆ ಮಾಡಿದರು.

[13] ಅವರು ಬಂಗಾರದ ಐವತ್ತು ಕೊಂಡಿಗಳನ್ನು ಮಾಡಿ, ಅವುಗಳಿಂದ ಎರಡು ಜೋಡಣೆ ಪರದೆಗಳನ್ನು ಒಂದಕ್ಕೊಂದು ಜೋಡಿಸಿದರು. ಹೀಗೆ ಅದು ಒಂದೇ ಗುಡಾರವಾಯಿತು.

[14] ಈ ಗುಡಾರದ ಮೇಲೆ ಹೊದಿಸುವುದಕ್ಕಾಗಿ ಅವರು ಮೇಕೆಯ ಕೂದಲಿನಿಂದ ಹನ್ನೊಂದು ಪರದೆಗಳನ್ನು ಮಾಡಿದರು.

[15] ಒಂದೊಂದು ಪರದೆಯು ಸುಮಾರು ಹದಿಮೂರುವರೆ ಮೀಟರ್ ಉದ್ದ ಮತ್ತು ಒಂದುವರೆ ಮೀಟರ್ ಅಗಲ ಇರಬೇಕು. ಹನ್ನೊಂದು ಪರದೆಗಳೂ ಒಂದೇ ಅಳತೆಯಾಗಿದ್ದವು.

[16] ಅವರು ಐದು ಪರದೆಗಳನ್ನು ಒಂದಾಗಿ ಜೋಡಿಸಿ ಇನ್ನುಳಿದ ಆರು ಪರದೆಗಳನ್ನು ಒಂದಾಗಿ ಜೋಡಿಸಿದರು.

[17] ಅವರು ಕೊನೆಯ ಒಂದು ಪರದೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನು, ಜೋಡಣೆಯಲ್ಲಿರುವ ಕೊನೆಯ ಎರಡನೆಯ ಪರದೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನು ಮಾಡಿದರು.

[18] ಅದು ಒಂದೇ ಡೇರೆ ಆಗುವಂತೆ ಅವುಗಳ ಜೋಡಣೆಗೆ ಅವರು ಕಂಚಿನ ಐವತ್ತು ಕೊಂಡಿಗಳನ್ನು ಮಾಡಿದರು.

[19] ಅದಲ್ಲದೆ ಗುಡಾರದ ಮೇಲ್ಹೊದಿಕೆಯನ್ನು ಕೆಂಪು ಬಣ್ಣದಲ್ಲಿ ಅದ್ದಿ ತೆಗೆದ ಟಗರುಗಳ ಚರ್ಮದಿಂದ ಮಾಡಿದರು. ಅದರ ಮೇಲೆ ಕಡಲುಹಂದಿಯ ಚರ್ಮದ ಮೇಲ್ಹೊದಿಕೆಯನ್ನು ಮಾಡಿದರು.

[20] ಗುಡಾರವು ನಿಂತುಕೊಂಡಿರುವುದಕ್ಕೆ ಅವರು ಜಾಲಿ ಮರದಿಂದ ಚೌಕಟ್ಟುಗಳನ್ನು ಮಾಡಿದರು.

[21] ಒಂದೊಂದು ಚೌಕಟ್ಟಿನ ಉದ್ದವು ಸುಮಾರು ನಾಲ್ಕುವರೆ ಮೀಟರ್ ಮತ್ತು ಅಗಲ ಅರವತ್ತೆಂಟು ಸೆಂಟಿಮೀಟರ್ ಇತ್ತು.

[22] ಒಂದು ಚೌಕಟ್ಟಿಗೆ ಒಂದಕ್ಕೊಂದು ಸರಿಯಾದ ಅಂತರದಲ್ಲಿ ಎರಡು ಕೈಗಳನ್ನು ಮಾಡಿದರು. ಅದೇ ಪ್ರಕಾರ ಅವರು ಗುಡಾರದ ಎಲ್ಲಾ ಚೌಕಟ್ಟುಗಳಿಗೆ ಮಾಡಿದರು.

[23] ಅವರು ಗುಡಾರದ ದಕ್ಷಿಣ ಭಾಗದಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮಾಡಿದರು.

[24] ಅವರು ಇಪ್ಪತ್ತು ಚೌಕಟ್ಟುಗಳ ಕೆಳಗೆ ನಾಲ್ವತ್ತು ಬೆಳ್ಳಿಯ ಗದ್ದಿಗೇ ಕಲ್ಲುಗಳನ್ನು ಮಾಡಿದರು ಮತ್ತು ಒಂದೊಂದು ಚೌಕಟ್ಟಿನ ಕೆಳಗೆ ಅದರ ಎರಡು ಪಟ್ಟಿಗಳಿಗಾಗಿ ಎರಡೆರಡು ಕುಳಿಗಳನ್ನು ಮಾಡಿದರು.

[25] ಇನ್ನೊಂದು ಭಾಗಕ್ಕೆ ಅಂದರೆ ಗುಡಾರದ ಉತ್ತರ ದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮಾಡಿದರು.

[26] ಒಂದೊಂದು ಚೌಕಟ್ಟಿನ ಕೆಳಗೆ ಎರಡೆರಡು ಗದ್ದಿಗೇ ಕಲ್ಲುಗಳಂತೆ ನಲವತ್ತು ಬೆಳ್ಳಿಯ ಗದ್ದಿಗೇ ಕಲ್ಲುಗಳನ್ನು ಮಾಡಿದರು.

[27] ಗುಡಾರದ ಹಿಂಭಾಗಕ್ಕೆ ಅಂದರೆ ಪಶ್ಚಿಮದ ಕಡೆಗೆ ಆರು ಚೌಕಟ್ಟುಗಳನ್ನು ಮಾಡಿದರು.

[28] ಅವರು ಗುಡಾರದ ಹಿಂಭಾಗದ ಎರಡು ಮೂಲೆಗಳಿಗೆ ಬೇರೆ ಎರಡು ಚೌಕಟ್ಟುಗಳನ್ನು ಮಾಡಿದರು.

[29] ಈ ಮೂಲೆಗಳನ್ನು ಅಡಿಯಲ್ಲಿ ಜೋಡಿಸಿರಬೇಕು. ಮೇಲ್ಭಾಗದಲ್ಲಿಯೂ ಒಂದೇ ಬಳೆಗೆ ಜೋಡಿಸಿದರು. ಇದೇ ರೀತಿಯಲ್ಲಿ ಅವರು ಎರಡು ಮೂಲೆಗಳಲ್ಲಿ ಎರಡಕ್ಕೂ ಮಾಡಿದರು.

[30] ಇಂಥ ಎಂಟು ಚೌಕಟ್ಟುಗಳಿದ್ದವು. ಪ್ರತಿಯೊಂದು ಚೌಕಟ್ಟಿನ ಕೆಳಗೆ ಎರಡೆರಡು ಕೂರುಗದ್ದಿಗೇ ಕಲ್ಲುಗಳಂತೆ ಅವುಗಳಿಗೆ ಹದಿನಾರು ಬೆಳ್ಳಿಯ ಕೂರುಗದ್ದಿಗೇ ಕಲ್ಲುಗಳಿದ್ದವು.

[31] ಅವರು ಜಾಲಿ ಮರದಿಂದ ಅಗುಳಿಗಳನ್ನು ಮಾಡಿದರು, ಗುಡಾರದ ಒಂದು ಕಡೆಯ ಚೌಕಟ್ಟುಗಳಿಗೆ ಐದು ಅಗುಳಿಗಳು,

[32] ಗುಡಾರದ ಇನ್ನೊಂದು ಭಾಗದ ಚೌಕಟ್ಟುಗಳಿಗೆ ಐದು ಅಗುಳಿಗಳನ್ನು, ಅದರ ಹಿಂದುಗಡೆಯ ಅಂದರೆ ಪಶ್ಚಿಮ ಭಾಗದಲ್ಲಿರುವ ಚೌಕಟ್ಟುಗಳಿಗೆ ಐದು ಅಗುಳಿಗಳನ್ನು ಮಾಡಿದರು.

[33] ಮಧ್ಯದ ಅಗುಳಿಯು ಚೌಕಟ್ಟುಗಳ ನಡುವೆ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ಹಾದು ಹೋಗುವಹಾಗೆ ಮಾಡಿದರು.

[34] ಆ ಚೌಕಟ್ಟುಗಳನ್ನು ಬಂಗಾರದಿಂದ ಹೊದಿಸಿ, ಆ ಅಗುಳಿಗಳಿಗಾಗಿ ಬಂಗಾರದಿಂದ ಬಳೆಗಳನ್ನು ಮಾಡಿ, ಮಾಡಿದ ಅಗುಳಿಗಳನ್ನು ಬಂಗಾರದಿಂದ ಹೊದಿಸಿದರು.

[35] ಪರದೆಯನ್ನು ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಮಾಡಿದರು. ಅದರ ಮೇಲೆ ಕೌಶಲ್ಯದಿಂದ ಕಸೂತಿಹಾಕಿ ಮಾಡಿದ ಕೆರೂಬಿಗಳುಳ್ಳದ್ದನ್ನಾಗಿ ಅದನ್ನು ಮಾಡಿದರು.

[36] ಅದಕ್ಕೆ ಜಾಲಿ ಮರದ ನಾಲ್ಕು ಸ್ತಂಭಗಳನ್ನು ಮಾಡಿ, ಬಂಗಾರ ತಗಡುಗಳಿಂದ ಅವುಗಳನ್ನು ಹೊದಿಸಿದರು. ಅವುಗಳಿಗೆ ಬಂಗಾರದ ಕೊಂಡಿಗಳನ್ನು ಮಾಡಿ, ಅವುಗಳಿಗೆ ಬೆಳ್ಳಿಯ ನಾಲ್ಕು ಗದ್ದಿಗೇ ಕಲ್ಲುಗಳನ್ನು ಎರಕ ಹೊಯ್ದರು.

[37] ಗುಡಾರದ ಬಾಗಿಲಿಗೆ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರುಗಳಿಂದ ಹೊಸೆದು ಕಸೂತಿ ಕೆಲಸಮಾಡಿದ ಪರದೆಯನ್ನು ಮಾಡಿದರು.

[38] ಕೊಂಡಿಯಿರುವ ಐದು ಕಂಬಗಳನ್ನು ಮಾಡಿ, ಅವುಗಳ ತಲೆಗಳನ್ನೂ ಕಂಬಗಳನ್ನೂ ಬಂಗಾರದಿಂದ ಹೊದಿಸಿದರು. ಆದರೆ ಅವುಗಳ ಐದು ಗದ್ದಿಗೇ ಕಲ್ಲುಗಳನ್ನು ಕಂಚಿನಿಂದ ಮಾಡಿದರು.

ವಿಮೋಚನಕಾಂಡ — Chapters