Skip to content
Opens in a new window
Listen to this chapter • 7:41

[1] “ನೀನು ಜಾಲಿ ಮರದ ಕಟ್ಟಿಗೆಯಿಂದ ಧೂಪವೇದಿಯನ್ನು ಮಾಡಬೇಕು.

[2] ಅದರ ಉದ್ದ ಮತ್ತು ಅಗಲ ಸುಮಾರು ನಲವತ್ತೈದು ಸೆಂಟಿಮೀಟರ್, ಅದರ ಎತ್ತರ ಸುಮಾರು ತೊಂಬತ್ತು ಸೆಂಟಿಮೀಟರ್ ಇದ್ದು, ಅದು ಚಚ್ಚೌಕವಾಗಿರಬೇಕು. ಅದರ ಕೊಂಬುಗಳನ್ನು ಸಹ ಜಾಲಿ ಮರದಿಂದಲೇ ಮಾಡಬೇಕು.

[3] ಅದರ ಮೇಲ್ಭಾಗವನ್ನೂ ಅದರ ಸುತ್ತಲಿನ ಬದಿಗಳನ್ನೂ ಕೊಂಬುಗಳನ್ನೂ ಶುದ್ಧ ಬಂಗಾರದಿಂದ ಹೊದಿಸಿ, ಅದರ ಸುತ್ತಲೂ ಬಂಗಾರದ ಗೋಟನ್ನು ಮಾಡಬೇಕು.

[4] ಅದರ ಗೋಟಿನ ಕೆಳಗೆ ಎರಡು ಬದಿಗಿರುವ ಎರಡು ಮೂಲೆಗಳಲ್ಲಿ ಎರಡು ಬಂಗಾರದ ಬಳೆಗಳನ್ನು ಮಾಡಬೇಕು. ಇವುಗಳನ್ನು ಹೊರುವುದಕ್ಕಾಗಿ ಅವುಗಳಲ್ಲಿ ಕೋಲುಗಳನ್ನು ಸಿಕ್ಕಿಸಬೇಕು.

[5] ಆ ಕೋಲುಗಳನ್ನು ಜಾಲಿ ಮರದಿಂದ ಮಾಡಿ, ಅವುಗಳನ್ನು ಬಂಗಾರದಿಂದ ಹೊದಿಸಬೇಕು.

[6] ಅದನ್ನು ಒಡಂಬಡಿಕೆಯ ಮಂಜೂಷದ ಮುಂದೆ ಇರುವ ಪರದೆಯ ಮುಂದೆಯೂ ನಾನು ನಿನ್ನನ್ನು ಸಂಧಿಸುವ ಸ್ಥಳದಲ್ಲಿ ಇರುವ ಮಂಜೂಷದ ಮೇಲಿನ ಕರುಣಾಸನದ ಮುಂದೆಯೂ ಇಡಬೇಕು.

[7] “ಅದರ ಮೇಲೆ ಆರೋನನು ಪರಿಮಳ ಧೂಪವನ್ನು ಸುಡಬೇಕು. ಪ್ರತಿದಿನ ಬೆಳಿಗ್ಗೆ ಸುಡಬೇಕು. ಪ್ರತಿದಿನ ಬೆಳಿಗ್ಗೆ ದೀಪಗಳನ್ನು ಸಿದ್ಧಮಾಡುವಾಗ ಅದನ್ನು ಸುಡಬೇಕು.

[8] ಆರೋನನು ಸಂಜೆ ದೀಪಗಳನ್ನು ಹಚ್ಚುವ ಸಮಯದಲ್ಲಿ ಧೂಪವೇದಿಯ ಮೇಲೆ ಧೂಪವನ್ನು ಸುಡಬೇಕು. ಅದೇ ನಿಮ್ಮ ಸಂತತಿಯವರಿಗೆ ಯೆಹೋವ ದೇವರ ಮುಂದೆ ಅರ್ಪಿಸಬೇಕಾದ ನಿತ್ಯವಾದ ಧೂಪವು.

[9] ನೀವು ಅದರ ಮೇಲೆ ಬೇರೆ ಧೂಪವನ್ನಾಗಲಿ, ದಹನಬಲಿಗಳನ್ನಾಗಲಿ, ಧಾನ್ಯಗಳ ಅರ್ಪಣೆಯನ್ನಾಗಲಿ ಅರ್ಪಿಸಬಾರದು. ಇಲ್ಲವೆ ಪಾನಾರ್ಪಣೆಯನ್ನು ಅದರ ಮೇಲೆ ಹೊಯ್ಯಬಾರದು.

[10] ಆರೋನನು ಮತ್ತು ಅವನ ಸಂತತಿಯವರು ವರ್ಷಕ್ಕೆ ಒಂದು ಸಾರಿ ಪಾಪ ಪರಿಹಾರದ ಬಲಿಯ ರಕ್ತದಿಂದ ಅದರ ಕೊಂಬುಗಳಿಗೆ ಹಚ್ಚಿ ಪ್ರಾಯಶ್ಚಿತ್ತ ಮಾಡಬೇಕು. ಅದು ಯೆಹೋವ ದೇವರಿಗೆ ಮಹಾಪರಿಶುದ್ಧವಾದದ್ದು.”

[11] ಆಗ ಯೆಹೋವ ದೇವರು ಪ್ರಕಟಪಡಿಸಿ ಮೋಶೆಗೆ,

[12] “ನೀನು ಇಸ್ರಾಯೇಲರನ್ನು ಎಣಿಸಲು ಜನಗಣತಿಯನ್ನು ತೆಗೆದುಕೊಂಡಾಗ ಪ್ರತಿಯೊಬ್ಬನು ತನ್ನ ಜೀವನದ ವಿಮೋಚನೆಯ ಕ್ರಯವನ್ನು ಯೆಹೋವ ದೇವರಿಗೆ ಕೊಡಬೇಕು. ಈ ರೀತಿ ಮಾಡಿದಲ್ಲಿ ಅವರನ್ನು ಎಣಿಸುವಾಗ ಅವರಲ್ಲಿ ವ್ಯಾಧಿ ಉಂಟಾಗುವುದಿಲ್ಲ.

[13] ಲೆಕ್ಕಿತರಾದವರಲ್ಲಿ ಸೇರುವ ಪ್ರತಿಯೊಬ್ಬ ಮನುಷ್ಯನು ಕೊಡಬೇಕಾದದ್ದು ಏನೆಂದರೆ ಶೆಕೆಲಿಗೆ ಇಪ್ಪತ್ತು ಗೇರಾಗಳ ಪ್ರಕಾರವಾಗಿ ಪರಿಶುದ್ಧ ಆಲಯದ ಶೆಕೆಲಿನ ಮೇರೆಗೆ ಅರ್ಧ ಶೆಕೆಲ್ ಕೊಡಬೇಕು. ಅರ್ಧ ಶೆಕೆಲ್ ಯೆಹೋವ ದೇವರಿಗೆ ಅರ್ಪಿಸುವ ಕಾಣಿಕೆಯಾಗಿರಬೇಕು.

[14] ಲೆಕ್ಕಿತರಾದವರಲ್ಲಿ ಇಪ್ಪತ್ತು ವರ್ಷದವರೂ ಅದಕ್ಕೂ ಹೆಚ್ಚು ಪ್ರಾಯವುಳ್ಳವರೂ ಯೆಹೋವ ದೇವರಿಗೆ ಕಾಣಿಕೆಯನ್ನು ಕೊಡಬೇಕು.

[15] ನಿಮ್ಮ ಜೀವನದ ಪ್ರಾಯಶ್ಚಿತ್ತಕ್ಕೆ ಯೆಹೋವ ದೇವರಿಗೆ ಅರ್ಪಿಸುವ ಕಾಣಿಕೆಯನ್ನು ಕೊಡುವುದರಲ್ಲಿ ಐಶ್ವರ್ಯವಂತರು ಅರ್ಧ ಶೇಕೆಲಿಗಿಂತ ಹೆಚ್ಚು ಕೊಡಬಾರದು. ಬಡವನು ಕಡಿಮೆ ಕೊಡಬಾರದು.

[16] ಪ್ರಾಯಶ್ಚಿತ್ತದ ಹಣವನ್ನು ಇಸ್ರಾಯೇಲರಿಂದ ತೆಗೆದುಕೊಂಡು ದೇವದರ್ಶನದ ಗುಡಾರದ ಕೆಲಸಕ್ಕಾಗಿ ಪ್ರತ್ಯೇಕಿಸಬೇಕು. ಇದೇ ಯೆಹೋವ ದೇವರ ಮುಂದೆ ಇಸ್ರಾಯೇಲರಿಗೆ ಜ್ಞಾಪಕಾರ್ಥಕ್ಕಾಗಿಯೂ ಅವರ ಪ್ರಾಯಶ್ಚಿತ್ತಕ್ಕಾಗಿಯೂ ಇರುವುದು,” ಎಂದರು.

[17] ಯೆಹೋವ ದೇವರು ಮೋಶೆಗೆ,

[18] “ತೊಳೆದುಕೊಳ್ಳುವದಕ್ಕಾಗಿ ಕಂಚಿನ ಬೋಗುಣಿಯನ್ನು ಮಾಡಿಸಿ ಅದಕ್ಕೆ ಕಂಚಿನ ಪೀಠವನ್ನೂ ಮಾಡಿಸಿ, ಅದನ್ನು ದೇವದರ್ಶನದ ಗುಡಾರ ಮತ್ತು ಬಲಿಪೀಠದ ಮಧ್ಯದಲ್ಲಿಟ್ಟು, ಅದರಲ್ಲಿ ನೀರನ್ನು ತುಂಬಿಸಿಡಬೇಕು.

[19] ಏಕೆಂದರೆ ಆರೋನನೂ ಅವನ ಪುತ್ರರೂ ಅದರಲ್ಲಿ ಕೈಕಾಲುಗಳನ್ನು ತೊಳೆಯಬೇಕು.

[20] ಅವರು ದೇವದರ್ಶನದ ಗುಡಾರದಲ್ಲಿ ಪ್ರವೇಶಿಸುವಾಗ ಸೇವೆ ಮಾಡುವುದಕ್ಕೂ, ಬೆಂಕಿಯಿಂದ ಯೆಹೋವ ದೇವರಿಗೆ ದಹನಬಲಿಯನ್ನು ಅರ್ಪಿಸುವುದಕ್ಕೂ ಬಲಿಪೀಠದ ಬಳಿಗೆ ಬರುವಾಗ ಅವರು ಸಾಯದ ಹಾಗೆ ನೀರಿನಲ್ಲಿ ತೊಳೆದುಕೊಳ್ಳಬೇಕು.

[21] ಅವರು ಸಾಯದ ಹಾಗೆ ತಮ್ಮ ಕೈಕಾಲುಗಳನ್ನು ತೊಳೆದುಕೊಳ್ಳಬೇಕು. ಇದೇ ಅವನಿಗೂ ಅವನ ಸಂತತಿಯವರಿಗೂ ತಲತಲಾಂತರಗಳಲ್ಲಿ ನಿತ್ಯವಾದ ಕಟ್ಟಳೆಯಾಗಿರಬೇಕು,” ಎಂದರು.

[22] ಯೆಹೋವ ದೇವರು ಮೋಶೆಗೆ,

[23] “ಉತ್ತಮವಾದ ತೈಲಗಳನ್ನು ಆರು ಕಿಲೋಗ್ರಾಂ ಸ್ವಚ್ಛವಾದ ರಕ್ತಬೋಳವು, ಇದರ ಅರ್ಧದಷ್ಟು ಮೂರು ಕಿಲೋಗ್ರಾಂ ಸುಗಂಧವಾದ ಲವಂಗಚಕ್ಕೆಯನ್ನು ಮತ್ತು ಮೂರು ಕಿಲೋಗ್ರಾಂ ಸುಗಂಧವಾದ ಬಜೆಯನ್ನು,

[24] ಆರು ಕಿಲೋಗ್ರಾಂ ದಾಲ್ಚಿನ್ನಿಯನ್ನು ಪರಿಶುದ್ಧಸ್ಥಳದ ಅಳತೆಯ ಮೇರೆಗೆ ಇವುಗಳನ್ನು ನೀನು ತೆಗೆದುಕೊಳ್ಳಬೇಕು. ಸುಮಾರು ನಾಲ್ಕು ಲೀಟರಷ್ಟು ಓಲಿವ್ ಎಣ್ಣೆಯನ್ನು ಸಹ ತೆಗೆದುಕೊಂಡು,

[25] ಅದರಿಂದ ಸುಗಂಧಕಾರನ ವಿದ್ಯೆಯ ಪ್ರಕಾರ ಪರಿಶುದ್ಧವಾದ ಅಭಿಷೇಕ ತೈಲವನ್ನು ಮಾಡು. ಇದು ಪರಿಶುದ್ಧವಾದ ಅಭಿಷೇಕದ ತೈಲವಾಗಿರುವುದು.

[26] ಅದರಿಂದ ಸಭೆಯ ಗುಡಾರವನ್ನೂ ಒಡಂಬಡಿಕೆಯ ಮಂಜೂಷವನ್ನೂ

[27] ಮೇಜನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ದೀಪಸ್ತಂಭವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಧೂಪದ ವೇದಿಯನ್ನೂ

[28] ದಹನಬಲಿಯ ಪೀಠವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಗಂಗಾಳವನ್ನೂ, ಅದರ ಕಾಲುಗಳನ್ನೂ ಅಭಿಷೇಕಿಸು.

[29] ಅವು ಮಹಾಪರಿಶುದ್ಧವಾಗುವಂತೆ ಅವುಗಳನ್ನು ಶುದ್ಧಮಾಡು. ಅವುಗಳನ್ನು ಮುಟ್ಟುವುದೆಲ್ಲವೂ ಪರಿಶುದ್ಧವಾಗಿರಬೇಕು.

[30] “ಆರೋನನನ್ನೂ, ಅವನ ಪುತ್ರರನ್ನೂ ಅಭಿಷೇಕಿಸಿ, ಅವರು ನನಗೆ ಯಾಜಕ ಸೇವೆಮಾಡುವಂತೆ ಅವರನ್ನು ಪ್ರತಿಷ್ಠೆ ಮಾಡು, ಎಂದರು.

[31] ನೀನು ಇಸ್ರಾಯೇಲರಿಗೆ: ‘ತಲತಲಾಂತರಗಳಲ್ಲಿ ಇದು ನನಗೆ ಪರಿಶುದ್ಧವಾದ ಅಭಿಷೇಕ ಎಣ್ಣೆಯಾಗಿರಬೇಕು.

[32] ಇದನ್ನು ಮನುಷ್ಯರ ಮೇಲೆ ಹೊಯ್ಯಬಾರದು. ಇದರ ಮಾದರಿಯಂತೆ ಅಥವಾ ಇದಕ್ಕೆ ಸಮಾನವಾದದ್ದನ್ನು ಮಾಡಬಾರದು. ಇದು ಪರಿಶುದ್ಧವಾದದ್ದು. ನೀವು ಸಹ ಇದನ್ನು ಪರಿಶುದ್ಧವೆಂದು ತಿಳಿದುಕೊಳ್ಳಬೇಕು.

[33] ಇದರ ಹಾಗೆ ತೈಲ ಮಾಡುವವನೂ ಯಾಜಕನಲ್ಲದವನ ಮೇಲೆ ಇದನ್ನು ಹಚ್ಚುವವನನ್ನು ಸ್ವಜನರೊಳಗಿಂದ ತೆಗೆದುಹಾಕಬೇಕು,’ ಎಂದು ಹೇಳು,” ಎಂದರು.

[34] ಯೆಹೋವ ದೇವರು ಮೋಶೆಗೆ, “ನೀನು ಹಾಲು ಮಡ್ಡಿ, ಗುಗ್ಗಲ ಹಾಗೂ ಗಂಧದ ಚಕ್ಕೆ ಎಂಬ ಪರಿಮಳಗಳನ್ನೂ ಶುದ್ಧವಾದ ಸಾಮ್ರಾಣಿಯನ್ನೂ ತೆಗೆದುಕೋ. ಅವು ಸಮತೂಕವಾಗಿರಲಿ.

[35] ಅದನ್ನು ಸುಗಂಧ ತೈಲ ಮಾಡುವವರ ವಿದ್ಯೆಯ ಪ್ರಕಾರ ಬೆರಸಿ, ಶುದ್ಧವಾದ ಮತ್ತು ಪವಿತ್ರವಾದ ತೈಲವನ್ನು ಮಾಡಬೇಕು.

[36] ಅದರಲ್ಲಿ ಸ್ವಲ್ಪ ಪುಡಿಮಾಡಿ, ದೇವದರ್ಶನದ ಗುಡಾರದಲ್ಲಿ ನಾನು ನಿನ್ನನ್ನು ಸಂಧಿಸುವ ಸ್ಥಳದಲ್ಲಿ ಒಡಂಬಡಿಕೆಯ ಮಂಜೂಷದ ಮುಂದೆ ಇಡು. ಅದು ನಿಮಗೆ ಮಹಾಪರಿಶುದ್ಧವಾಗಿರಲಿ.

[37] ನೀನು ಮಾಡುವ ಧೂಪದ ಮಾದರಿಯಂತೆ ನಿಮಗೋಸ್ಕರ ಮಾಡಿಕೊಳ್ಳಬಾರದು. ಅದನ್ನು ಯೆಹೋವ ದೇವರಿಗೆ ಪವಿತ್ರವೆಂದು ಪರಿಗಣಿಸಬೇಕು.

[38] ಸುವಾಸನೆಗಾಗಿ ಅದನ್ನು ಮಾಡಿಕೊಳ್ಳುವವನನ್ನು ಅವನ ಕುಲದಿಂದ ಬಹಿಷ್ಕರಿಸಬೇಕು.”

ವಿಮೋಚನಕಾಂಡ — Chapters