Skip to content
Opens in a new window
Listen to this chapter • 5:02

[1] ದೇವರು ಈ ಎಲ್ಲಾ ವಾಕ್ಯಗಳನ್ನು ಹೇಳಿದರು:

[2] “ನಿನ್ನನ್ನು ಈಜಿಪ್ಟ್ ದೇಶದಿಂದಲೂ ದಾಸತ್ವದ ನಾಡಿನೊಳಗಿಂದಲೂ ಹೊರಗೆ ತಂದ ನಿನ್ನ ದೇವರಾದ ಯೆಹೋವ ದೇವರು ನಾನೇ.

[3] “ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು.

[4] ಮೇಲಿನ ಆಕಾಶದಲ್ಲಾಗಲಿ, ಕೆಳಗಿನ ಭೂಮಿಯಲ್ಲಾಗಲಿ, ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿ ಇರುವ ಯಾವುದರ ವಿಗ್ರಹವನ್ನಾಗಲಿ, ರೂಪವನ್ನಾಗಲಿ ನೀನು ಮಾಡಿಕೊಳ್ಳಬಾರದು.

[5] ನೀನು ಅವುಗಳಿಗೆ ಅಡ್ಡ ಬೀಳಬಾರದು ಮತ್ತು ಆರಾಧಿಸಲೂಬಾರದು. ಏಕೆಂದರೆ ನಿನ್ನ ದೇವರಾದ ನಾನು, ನನಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದ ಸ್ವಾಮ್ಯಾಸಕ್ತನಾದ ಯೆಹೋವ ದೇವರಾಗಿದ್ದೇನೆ. ನನ್ನನ್ನು ಹಗೆ ಮಾಡುವ ತಂದೆತಾಯಿಗಳ ಅಪರಾಧವನ್ನು ಮಕ್ಕಳ ಮೇಲೆಯೂ ಮೂರನೆಯ ನಾಲ್ಕನೆಯ ತಲೆಗಳವರೆಗೂ ಬರಮಾಡುವೆನು.

[6] ನನ್ನನ್ನು ಪ್ರೀತಿಸಿ, ನನ್ನ ಆಜ್ಞೆಗಳನ್ನು ಕೈಗೊಳ್ಳುವವರಿಗೆ, ಸಾವಿರ ತಲೆಗಳವರೆಗೆ ಪ್ರೀತಿ ತೋರಿಸುತ್ತೇನೆ.

[7] ನಿನ್ನ ದೇವರಾದ ಯೆಹೋವ ದೇವರ ಹೆಸರನ್ನು ದುರುಪಯೋಗಮಾಡಬಾರದು. ಏಕೆಂದರೆ ಯೆಹೋವ ದೇವರು ತಮ್ಮ ಹೆಸರನ್ನು ದುರುಪಯೋಗಮಾಡುವವರನ್ನು ಶಿಕ್ಷಿಸದೆ ಬಿಡುವುದಿಲ್ಲ.

[8] ಸಬ್ಬತ್ ದಿನವನ್ನು ಪರಿಶುದ್ಧ ದಿನವೆಂದು ಜ್ಞಾಪಕದಲ್ಲಿಟ್ಟುಕೊಂಡು ಆಚರಿಸಿರಿ.

[9] ಆರು ದಿನಗಳಲ್ಲಿ ನೀನು ದುಡಿದು, ನಿನ್ನ ಕೆಲಸವನ್ನೆಲ್ಲಾ ಮಾಡಬೇಕು.

[10] ಆದರೆ ಏಳನೆಯ ದಿನ ನಿನ್ನ ದೇವರಾದ ಯೆಹೋವ ದೇವರ ಸಬ್ಬತ್ ದಿನವಾಗಿದೆ. ಅದರಲ್ಲಿ ನೀನಾಗಲೀ, ನಿನ್ನ ಮಗನಾಗಲೀ, ನಿನ್ನ ಮಗಳಾಗಲೀ, ನಿನ್ನ ದಾಸನಾಗಲೀ, ನಿನ್ನ ದಾಸಿಯಾಗಲೀ, ನಿನ್ನ ಪಶುಗಳಾಗಲೀ ಮತ್ತು ನಿನ್ನ ಊರಲ್ಲಿರುವ ಅನ್ಯದೇಶದವರು ಸಹ ಯಾವ ಕೆಲಸವನ್ನೂ ಮಾಡಬಾರದು.

[11] ಏಕೆಂದರೆ ಆರು ದಿನಗಳಲ್ಲಿ ಯೆಹೋವ ದೇವರು ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಉಂಟುಮಾಡಿ, ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ಆದ್ದರಿಂದ ಯೆಹೋವ ದೇವರು ಸಬ್ಬತ್ ದಿನವನ್ನು ಆಶೀರ್ವದಿಸಿ, ಅದನ್ನು ಪರಿಶುದ್ಧ ಮಾಡಿದರು.

[12] ನಿನ್ನ ದೇವರಾದ ಯೆಹೋವ ದೇವರು ನಿನಗೆ ಕೊಡುವ ದೇಶದಲ್ಲಿ ನೀನು ಬಹುಕಾಲ ಬಾಳುವಂತೆ ನಿನ್ನ ತಂದೆತಾಯಿಗಳನ್ನು ಗೌರವಿಸು.

[13] ಕೊಲೆ ಮಾಡಬೇಡ.

[14] ವ್ಯಭಿಚಾರ ಮಾಡಬೇಡ.

[15] ಕದಿಯಬೇಡ.

[16] ನಿನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಹೇಳಬೇಡ.

[17] ನಿನ್ನ ನೆರೆಯವನ ಮನೆಯನ್ನು ಆಶಿಸಬೇಡ. ನಿನ್ನ ನೆರೆಯವನ ಹೆಂಡತಿಯನ್ನು ಆಶಿಸಬೇಡ. ಅವನ ದಾಸನನ್ನಾಗಲಿ, ಅವನ ದಾಸಿಯನ್ನಾಗಲಿ, ಅವನ ಎತ್ತನ್ನಾಗಲಿ, ಅವನ ಕತ್ತೆಯನ್ನಾಗಲಿ, ನಿನ್ನ ನೆರೆಯವನಿಗೆ ಇರುವ ಯಾವುದನ್ನೂ ಆಶಿಸಬೇಡ.”

[18] ಜನರೆಲ್ಲಾ ಗುಡುಗುಗಳನ್ನೂ ಮಿಂಚುಗಳನ್ನೂ ತುತೂರಿಯ ಶಬ್ದವನ್ನೂ ಬೆಟ್ಟದಲ್ಲಿ ಹೊಗೆ ಹಾಯುವುದನ್ನೂ ನೋಡಿದರು. ಜನರು ಅದನ್ನು ನೋಡಿ ನಡುಗುತ್ತಾ ದೂರಹೋಗಿ ನಿಂತುಕೊಂಡರು.

[19] ಅವರು ಮೋಶೆಗೆ, “ನೀನೇ ನಮ್ಮ ಸಂಗಡ ಮಾತನಾಡು, ಆಗ ನಾವು ಕೇಳುವೆವು. ನಾವು ಸಾಯದ ಹಾಗೆ ದೇವರು ನಮ್ಮೊಂದಿಗೆ ನೇರವಾಗಿ ಮಾತನಾಡಲು ಬಿಡಬೇಡಿ,” ಎಂದು ವಿನಂತಿಸಿಕೊಂಡರು.

[20] ಆಗ ಮೋಶೆಯು ಜನರಿಗೆ, “ಭಯಪಡಬೇಡಿರಿ. ಏಕೆಂದರೆ ನಿಮ್ಮನ್ನು ಪರೀಕ್ಷಿಸುವುದಕ್ಕೋಸ್ಕರವೂ ನೀವು ಪಾಪಮಾಡದಂತೆ ಅವರ ಭಯವು ನಿಮಗಿರಲೆಂದೂ ದೇವರು ಬಂದಿದ್ದಾರೆ,” ಎಂದನು.

[21] ಆಗ ಜನರು ದೂರದಲ್ಲಿ ನಿಂತರು. ಮೋಶೆಯು ದೇವರಿದ್ದ ಕಾರ್ಗತ್ತಲೆಯ ಹತ್ತಿರ ಬಂದನು.

[22] ಯೆಹೋವ ದೇವರು ಮೋಶೆಗೆ, “ನೀನು ಇಸ್ರಾಯೇಲರಿಗೆ ಹೀಗೆ ಹೇಳಬೇಕು, ‘ನಾನು ಆಕಾಶದಿಂದ ನಿಮ್ಮ ಸಂಗಡ ಮಾತನಾಡಿದ್ದನ್ನು ನೀವು ನೋಡಿದ್ದೀರಿ.

[23] ನನ್ನ ಹೊರತಾಗಿ ಬೆಳ್ಳಿ ಬಂಗಾರಗಳ ದೇವರುಗಳನ್ನು ಮಾಡಿಕೊಳ್ಳಬೇಡಿರಿ.

[24] “ ‘ಬಲಿಪೀಠವನ್ನು ಮಣ್ಣಿನಿಂದ ಮಾಡಬೇಕು. ಅದರ ಮೇಲೆ ನಿಮ್ಮ ಸಮರ್ಪಣೆಗಳಾದ ದಹನಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಕುರಿಮೇಕೆಗಳನ್ನೂ ದನಗಳನ್ನೂ ಅರ್ಪಿಸಬೇಕು. ನಾನು ನನ್ನ ಹೆಸರನ್ನು ಗೌರವಿಸುವಂತೆ ಮಾಡುವ ಎಲ್ಲಾ ಸ್ಥಳಗಳಲ್ಲಿಯೂ ನಾನು ನಿಮ್ಮ ಬಳಿಗೆ ಬಂದು ನಿಮ್ಮನ್ನು ಆಶೀರ್ವದಿಸುವೆನು.

[25] ಬಲಿಪೀಠವನ್ನು ಕಲ್ಲಿನಿಂದ ಮಾಡಿದರೆ, ಅದನ್ನು ಕೆತ್ತಿದ ಕಲ್ಲಿನಿಂದ ಕಟ್ಟಬಾರದು. ಏಕೆಂದರೆ ಉಳಿಯನ್ನು ಅದರ ಮೇಲೆ ಉಪಯೋಗಿಸಿದರೆ, ಅದನ್ನು ಅಪವಿತ್ರಮಾಡಿದ ಹಾಗಾಗುತ್ತದೆ.

[26] ನನಗಾಗಿ ಬಲಿಪೀಠದ ಮೇಲೆ ಹೋಗಲು ಹತ್ತುವಾಗ ನಿನ್ನ ಬೆತ್ತಲೆತನ ಕಾಣಬಾರದು. ಅದರ ಮೆಟ್ಟಲುಗಳನ್ನು ಹತ್ತಬಾರದು,’ ಎಂದು ಹೇಳಿದರು.

ವಿಮೋಚನಕಾಂಡ — Chapters