[1] “ಸುಳ್ಳು ಸುದ್ದಿಯನ್ನು ಹಬ್ಬಿಸಬಾರದು. ದುರುದ್ದೇಶಪೂರಿತ ಸಾಕ್ಷಿಯಾಗುವ ಮೂಲಕ ದುಷ್ಟರಿಗೆ ಸಹಾಯಮಾಡಬೇಡ.
[2] “ಕೆಟ್ಟದ್ದನ್ನು ಮಾಡುವವರು ಬಹುಮಂದಿ ಆದರೂ ನೀವು ಅವರನ್ನು ಹಿಂಬಾಲಿಸಬೇಡ. ಬಹುಮಂದಿಯೊಂದಿಗೆ ನ್ಯಾಯಕ್ಕೆ ವಿರುದ್ಧವಾಗಿ ವ್ಯಾಜ್ಯದಲ್ಲಿ ಸಾಕ್ಷಿಕೊಡಬೇಡ.
[3] ಬಡವನಿಗೂ ವ್ಯಾಜ್ಯದಲ್ಲಿ ಮುಖದಾಕ್ಷಿಣ್ಯ ಮಾಡಬೇಡ.
[4] “ನೀವು ವೈರಿಯ ಎತ್ತಾಗಲಿ, ಕತ್ತೆಯಾಗಲಿ ತಪ್ಪಿಸಿಕೊಂಡು ಹೋಗುವಾಗ, ಅದು ನಿಮಗೆ ಸಿಕ್ಕಿದರೆ ನೀವು ಅದನ್ನು ಖಂಡಿತವಾಗಿ ತಿರುಗಿ ಅವನಿಗೆ ತಂದುಕೊಡಬೇಕು.
[5] ನಿಮ್ಮನ್ನು ಹಗೆ ಮಾಡುವವನ ಕತ್ತೆಯು ತನ್ನ ಹೊರೆಯ ಕೆಳಗೆ ಬಿದ್ದಿರುವುದನ್ನು ನೀವು ಕಂಡಾಗ, ಅವನಿಗೆ ಸಹಾಯ ಮಾಡುವುದಕ್ಕೆ ಮನಸ್ಸಿಲ್ಲದಿದ್ದರೂ ನೀವು ಖಂಡಿತವಾಗಿ ಅವನಿಗೆ ಸಹಾಯಮಾಡಬೇಕು.
[6] “ಬಡವನ ವ್ಯಾಜ್ಯದಲ್ಲಿ ನ್ಯಾಯವನ್ನು ತಪ್ಪಿಸಿ ತೀರ್ಪುಕೊಡಬಾರದು.
[7] ಸುಳ್ಳಿನ ವಿಷಯಗಳಿಂದ ನೀವು ದೂರವಿರಬೇಕು. ನಿರಪರಾಧಿ, ನೀತಿವಂತ ಆದ ವ್ಯಕ್ತಿಗೆ ಮರಣದಂಡನೆ ವಿಧಿಸಬಾರದು. ಅಂಥ ದುಷ್ಕೃತ್ಯ ಮಾಡಿದವನಿಗೆ ನಾನು ಶಿಕ್ಷೆ ವಿಧಿಸದೆ ಬಿಡುವುದಿಲ್ಲ.
[8] “ಲಂಚವನ್ನು ತೆಗೆದುಕೊಳ್ಳಬಾರದು. ಏಕೆಂದರೆ ಲಂಚವು ಜ್ಞಾನಿಗಳ ಕಣ್ಣುಗಳನ್ನು ಕುರುಡುಮಾಡಿ, ನಿರಪರಾಧಿಗೆ ದೊರಕಬೇಕಾದ ನ್ಯಾಯವನ್ನು ತಪ್ಪಿಸುತ್ತದೆ.
[9] “ಪರದೇಶಿಯರನ್ನು ಪೀಡಿಸಬಾರದು. ಏಕೆಂದರೆ ಈಜಿಪ್ಟ್ ದೇಶದಲ್ಲಿ ನೀವೂ ಪರದೇಶಿಗಳಾದ್ದಿರಷ್ಟೇ, ಅಂಥವರ ಮನೋವ್ಯಥೆಯನ್ನು ನಿಮಗೆ ತಿಳಿದಿದೆ.
[10] “ಆರು ವರ್ಷ ನಿಮ್ಮ ಭೂಮಿಗೆ ಬೀಜ ಹಾಕಿ, ಅದರ ಬೆಳೆಯನ್ನು ಕೂಡಿಸಬೇಕು.
[11] ಆದರೆ ಏಳನೆಯ ವರುಷದಲ್ಲಿ ಅದಕ್ಕೆ ವಿಶ್ರಾಂತಿಯನ್ನು ಕೊಟ್ಟು, ಅದನ್ನು ಬೀಳುಬಿಡಬೇಕು. ಆಗ ನಿಮ್ಮ ಜನರಲ್ಲಿರುವ ಬಡವರು ಅದರಲ್ಲಿ ಬೆಳೆದದ್ದನ್ನು ತಿನ್ನಲಿ. ಅವರು ಬಿಟ್ಟದ್ದನ್ನು ಕಾಡುಮೃಗಗಳು ತಿನ್ನಲಿ. ನಿಮ್ಮ ದ್ರಾಕ್ಷಿತೋಟದ, ಓಲಿವ್ ಮರಗಳ ವಿಷಯದಲ್ಲಿಯೂ ಹಾಗೆಯೇ ಮಾಡಬೇಕು.
[12] “ಆರು ದಿವಸ ನೀವು ನಿಮ್ಮ ಕೆಲಸಗಳನ್ನು ಮಾಡಬೇಕು. ಏಳನೆಯ ದಿನದಲ್ಲಿ ನೀವು, ನಿಮ್ಮ ಎತ್ತು ಮತ್ತು ನಿಮ್ಮ ಕತ್ತೆ ವಿಶ್ರಮಿಸಿಕೊಳ್ಳಬೇಕು. ಇದಲ್ಲದೆ ನಿಮ್ಮ ಮನೆಯಲ್ಲಿ ಜನಿಸಿದ ದಾಸದಾಸಿಯರೂ ಪರದೇಶಸ್ಥರೂ ದಣಿವು ಆರಿಸಿಕೊಳ್ಳಲಿ.
[13] “ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಜಾಗರೂಕತೆಯಿಂದ ಕೈಗೊಳ್ಳಬೇಕು. ಬೇರೆ ದೇವರುಗಳ ಹೆಸರನ್ನು ಎತ್ತಬೇಡ. ಅದನ್ನು ಉಚ್ಚರಿಸಲೂ ಬೇಡ.
[14] “ವರ್ಷಕ್ಕೆ ಮೂರು ಸಾರಿ ನನಗೆ ಹಬ್ಬ ಮಾಡಬೇಕು.
[15] “ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸಬೇಕು. ಅಬೀಬ ತಿಂಗಳಿನ ನೇಮಕವಾದ ಸಮಯದಲ್ಲಿ ಏಳು ದಿನಗಳವರೆಗೆ ನಾನು ನಿಮಗೆ ಆಜ್ಞಾಪಿಸಿದ ಪ್ರಕಾರ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಏಕೆಂದರೆ ನೀವು ಆ ತಿಂಗಳಲ್ಲೇ ಈಜಿಪ್ಟಿನಿಂದ ಹೊರಗೆ ಬಂದಿದ್ದೀರಿ. “ಒಬ್ಬರೂ ಕಾಣಿಕೆಯಿಲ್ಲದೆ ಬರಿಗೈಯಿಂದ ನನ್ನ ಸನ್ನಿಧಿಗೆ ಬರಬಾರದು.
[16] “ನೀವು ಬಿತ್ತಿದ ಹೊಲದಲ್ಲಿ ಪ್ರಥಮ ಫಲವು ದೊರೆತಾಗ ಸುಗ್ಗಿ ಹಬ್ಬವನ್ನು ಆಚರಿಸಬೇಕು. “ಹೊಲತೋಟಗಳ ಬೆಳೆಯನ್ನು ಕೂಡಿಸುವಾಗ ಅಂದರೆ, ವರ್ಷದ ಕೊನೆಯಲ್ಲಿ ಫಲಸಂಗ್ರಹದ ಹಬ್ಬವನ್ನು ಆಚರಿಸಬೇಕು.
[17] “ವರ್ಷಕ್ಕೆ ಮೂರು ಸಾರಿ ನಿಮ್ಮಲ್ಲಿರುವ ಪುರುಷರೆಲ್ಲಾ ಸಾರ್ವಭೌಮ ಯೆಹೋವ ದೇವರ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬೇಕು.
[18] “ಬಲಿ ಅರ್ಪಣೆಯ ರಕ್ತವನ್ನು ಹುಳಿಯಿರುವ ರೊಟ್ಟಿಯ ಸಂಗಡ ಅರ್ಪಿಸಬಾರದು. “ಯಾವುದೇ ಹಬ್ಬದ ಅರ್ಪಣೆಯಲ್ಲಿ ಕೊಬ್ಬನ್ನು ಬೆಳಗಿನವರೆಗೆ ಇಟ್ಟುಕೊಳ್ಳಬಾರದು.
[19] “ನಿಮ್ಮ ಭೂಮಿಯ ಪ್ರಥಮ ಫಲಗಳಲ್ಲಿ ಅತ್ಯುತ್ತಮವಾದದ್ದನ್ನು ನಿಮ್ಮ ಯೆಹೋವ ದೇವರ ಆಲಯಕ್ಕೆ ತರಬೇಕು. “ಮೇಕೆಯ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು.
[20] “ಮಾರ್ಗದಲ್ಲಿ ನಿಮ್ಮನ್ನು ಕಾಪಾಡುವುದಕ್ಕೋಸ್ಕರವೂ ನಾನು ಸಿದ್ಧಮಾಡಿದ ಸ್ಥಳಕ್ಕೆ ತರುವುದಕ್ಕೋಸ್ಕರವೂ ನಾನು ಒಬ್ಬ ದೂತನನ್ನು ನಿಮ್ಮ ಮುಂದೆ ಕಳುಹಿಸುತ್ತೇನೆ.
[21] ಅವನ ವಿಷಯದಲ್ಲಿ ಜಾಗ್ರತೆಯಾಗಿದ್ದು, ಅವನ ಮಾತಿಗೆ ವಿಧೇಯರಾಗಿರಿ. ಅವನಿಗೆ ಕೋಪವನ್ನೆಬ್ಬಿಸಬೇಡಿರಿ. ಏಕೆಂದರೆ ನನ್ನ ಹೆಸರು ಅವನಲ್ಲಿ ಇರುವುದರಿಂದ ಅವನು ನಿಮ್ಮ ದ್ರೋಹಗಳನ್ನು ಮನ್ನಿಸುವುದಿಲ್ಲ.
[22] ಅವನ ಮಾತಿಗೆ ನೀವು ನಿಜವಾಗಿಯೂ ವಿಧೇಯರಾಗಿ ನಾನು ಹೇಳಿದ್ದನ್ನೆಲ್ಲಾ ನೀವು ಮಾಡಿದರೆ, ನಿಮ್ಮ ಶತ್ರುಗಳಿಗೆ ನಾನು ಶತ್ರುವಾಗಿಯೂ ನಿಮ್ಮ ವಿರೋಧಿಗಳಿಗೆ ನಾನು ವಿರೋಧಿಯಾಗಿಯೂ ಇರುವೆನು.
[23] ಏಕೆಂದರೆ ನನ್ನ ದೂತನು ನಿಮ್ಮ ಮುಂದೆ ಹೋಗಿ ಅಮೋರಿಯರು, ಹಿತ್ತಿಯರು, ಪೆರಿಜೀಯರು, ಕಾನಾನ್ಯರು, ಹಿವ್ವಿಯರು ಮತ್ತು ಯೆಬೂಸಿಯರು ಇರುವ ದೇಶಕ್ಕೆ ನಿಮ್ಮನ್ನು ಬರಮಾಡುವನು. ಅವರನ್ನು ನಾನು ನಿರ್ಮೂಲ ಮಾಡುವೆನು.
[24] ಅವರ ದೇವರುಗಳಿಗೆ ನೀವು ಅಡ್ಡಬೀಳಲೂಬಾರದು, ಅವುಗಳನ್ನು ಆರಾಧಿಸಲೂಬಾರದು. ಇದಲ್ಲದೆ ನೀವು ಅವರ ಕೃತ್ಯಗಳ ಪ್ರಕಾರ ಮಾಡದೆ, ಅವರನ್ನು ನಿರ್ಮೂಲ ಮಾಡಿಬಿಟ್ಟು, ಅವರ ವಿಗ್ರಹಗಳನ್ನು ಪೂರ್ಣವಾಗಿ ಒಡೆದುಹಾಕಬೇಕು.
[25] ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಆರಾಧನೆ ಮಾಡಬೇಕು. ಆಗ ಆತನು ನಿಮ್ಮ ಆಹಾರವನ್ನೂ ನೀರನ್ನೂ ಆಶೀರ್ವದಿಸುವನು. ನಾನು ವ್ಯಾಧಿಯನ್ನು ನಿಮ್ಮ ಮಧ್ಯದಿಂದ ತೊಲಗಿಸಿಬಿಡುವೆನು.
[26] ಗರ್ಭ ಸ್ರಾವವಾಗಲಿ, ಬಂಜೆತನವಾಗಲಿ ನಿಮ್ಮ ದೇಶದಲ್ಲಿ ಇರುವುದಿಲ್ಲ. ನಾನು ನಿಮಗೆ ಸಂಪೂರ್ಣವಾದ ಆಯುಷ್ಯವನ್ನು ಅನುಗ್ರಹಿಸುವೆನು.
[27] “ನೀವು ಹೋಗುವ ಎಲ್ಲ ಜಾಗಗಳಲ್ಲಿಯೂ ನನ್ನ ಮೇಲಿನ ಭೀತಿಯನ್ನು ನಿಮ್ಮನ್ನು ಎದುರಿಸುವ ಜನರಲ್ಲಿ ಉಂಟುಮಾಡಿಸಿ, ಕಳವಳವನ್ನು ಉಂಟುಮಾಡುವೆನು ಮತ್ತು ನಿಮ್ಮನ್ನು ವಿರೋಧಿಸುವವರೆಲ್ಲಾ ನಿಮಗೆ ಬೆನ್ನು ತೋರಿಸುವಂತೆ ಮಾಡುವೆನು.
[28] ಹಿವ್ವಿಯರು, ಕಾನಾನ್ಯರು ಮತ್ತು ಹಿತ್ತಿಯರೂ ನಿಮ್ಮ ಎದುರಿನಿಂದ ಓಡಿಹೋಗುವಂತೆ ಕಡಜದ ಹುಳಗಳನ್ನು ನಿಮ್ಮ ಮುಂದೆ ಕಳಹಿಸುವೆನು.
[29] ಭೂಮಿಯು ಬರಿದಾಗದಂತೆಯೂ ಕಾಡುಮೃಗಗಳು ನಿಮ್ಮ ವಿರೋಧವಾಗಿ ಹೆಚ್ಚಾಗದ ಹಾಗೆಯೂ ಅವುಗಳನ್ನು ಒಂದೇ ವರ್ಷದಲ್ಲಿ ನಿಮ್ಮ ಎದುರಿನಿಂದ ಓಡಿಸದೆ
[30] ನೀವು ಅಭಿವೃದ್ಧಿಯಾಗಿ ದೇಶವನ್ನು ಸ್ವತಂತ್ರಿಸಿಕೊಳ್ಳುವವರೆಗೆ ಸ್ವಲ್ಪ ಸ್ವಲ್ಪವಾಗಿ ಹೊರಡಿಸುತ್ತಿರುವೆನು.
[31] “ಕೆಂಪು ಸಮುದ್ರದಿಂದ ಫಿಲಿಷ್ಟಿಯರ ಸಮುದ್ರದವರೆಗೆ ಮರುಭೂಮಿಯಿಂದ ನದಿಯವರೆಗೂ ನಿಮ್ಮ ಮೇರೆಗಳನ್ನು ನೇಮಿಸುವೆನು. ದೇಶದ ನಿವಾಸಿಗಳನ್ನು ನಿಮ್ಮ ಕೈಗಳಿಗೆ ಒಪ್ಪಿಸುವೆನು. ನೀವು ಅವರನ್ನು ನಿಮ್ಮ ಎದುರಿನಿಂದ ಓಡಿಸಿಬಿಡುವಿರಿ.
[32] ಅವರ ಸಂಗಡ, ಅವರ ದೇವರುಗಳ ಸಂಗಡ ಯಾವ ಒಡಂಬಡಿಕೆಯನ್ನು ಮಾಡಿಕೊಳ್ಳಬಾರದು.
[33] ನನಗೆ ವಿರೋಧವಾಗಿ ನೀವು ಪಾಪಮಾಡದಂತಾಗಬೇಕಾದರೆ, ಅವರು ನಿಮ್ಮ ದೇಶದಲ್ಲಿ ವಾಸವಾಗಿರಬಾರದು. ಏಕೆಂದರೆ ನೀವು ಅವರ ದೇವರುಗಳನ್ನು ಆರಾಧಿಸಿದರೆ ಅದು ನಿಮಗೆ ಖಂಡಿತವಾಗಿ ಉರುಲಾಗಿರುವುದು.”