Skip to content
Opens in a new window
Listen to this chapter • 5:59

[1] ಯೆಹೋವ ದೇವರು ಮೋಶೆಗೆ, “ನೀನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ಜನರ ಸಂಗಡ ಈ ಸ್ಥಳವನ್ನು ಬಿಟ್ಟು ನಾನು ಅಬ್ರಹಾಮನಿಗೂ, ಇಸಾಕನಿಗೂ, ಯಾಕೋಬನಿಗೂ, ‘ನಿಮ್ಮ ಸಂತತಿಯವರಿಗೆ ಅದನ್ನು ಕೊಡುವೆನು,’ ಎಂದು ಹೇಳಿ ಪ್ರಮಾಣ ಮಾಡಿದ ದೇಶಕ್ಕೆ ಹೋಗು.

[2] ನಾನು ನಿನ್ನ ಮುಂದೆ ದೂತನನ್ನು ಕಳುಹಿಸಿ ಕಾನಾನ್ಯರನ್ನೂ, ಅಮೋರಿಯರನ್ನೂ, ಹಿತ್ತಿಯರನ್ನೂ, ಪೆರಿಜೀಯರನ್ನೂ, ಹಿವ್ವಿಯರನ್ನೂ, ಯೆಬೂಸಿಯರನ್ನೂ ಹೊರದೂಡುವೆನು.

[3] ಹಾಲೂ ಜೇನೂ ಹರಿಯುವ ದೇಶಕ್ಕೆ ಹೋಗು. ನಾನು ನಿಮ್ಮ ಸಂಗಡ ಹೋಗುವುದಿಲ್ಲ ಏಕೆಂದರೆ ನೀವು ಮಾತು ಕೇಳದ ಹಟಮಾರಿ ಜನರಾಗಿದ್ದೀರಿ ಮತ್ತು ಮಾರ್ಗದಲ್ಲಿ ನಾನು ನಿಮ್ಮನ್ನು ಸಂಹರಿಸಬೇಕಾಗಬಹುದು,” ಎಂದರು.

[4] ಜನರು ಈ ಕಠಿಣವಾದ ಮಾತುಗಳನ್ನು ಕೇಳಿದಾಗ ದುಃಖಪಟ್ಟರು. ಯಾರೂ ತಮ್ಮ ಆಭರಣಗಳನ್ನು ಧರಿಸಿಕೊಳ್ಳಲಿಲ್ಲ.

[5] ಏಕೆಂದರೆ ಯೆಹೋವ ದೇವರು ಮೋಶೆಗೆ, “ಇಸ್ರಾಯೇಲರಿಗೆ ಹೀಗೆ ಹೇಳು: ‘ನೀವು ಆಜ್ಞೆಗಳನ್ನು ಪಾಲಿಸದ ಹಟಮಾರಿ ಜನರು. ನಾನು ಕ್ಷಣಮಾತ್ರವೂ ನಿಮ್ಮೊಡನೆ ಬಂದರೆ ನೀವು ನಿರ್ಮೂಲವಾಗಿಬಿಡುವಿರಿ. ಹೀಗಿರುವುದರಿಂದ ಈಗ ನಿಮ್ಮ ಆಭರಣಗಳನ್ನು ನಿಮ್ಮಿಂದ ತೆಗೆದುಬಿಡಿರಿ, ನಾನು ನಿಮಗೆ ಏನು ಮಾಡಬೇಕೆಂಬುದನ್ನು ತೀರ್ಮಾನಿಸುವೆನು’ ಎಂದು ಹೇಳು,” ಎಂದು ತಿಳಿಸಿದರು.

[6] ಅದರಂತೆಯೇ ಇಸ್ರಾಯೇಲರು ಹೋರೇಬ್ ಬೆಟ್ಟದ ಬಳಿಯಲ್ಲಿ ತಮ್ಮ ಆಭರಣಗಳನ್ನು ತೆಗೆದುಬಿಟ್ಟರು.

[7] ಮೋಶೆಯು ಗುಡಾರವನ್ನು ತೆಗೆದು ಪಾಳೆಯದ ಹೊರಗೆ ಪಾಳೆಯಕ್ಕೆ ದೂರವಾಗಿ ಹಾಕಿ, ಅದಕ್ಕೆ “ದೇವದರ್ಶನದ ಗುಡಾರ” ಎಂದು ಹೆಸರಿಟ್ಟನು. ತರುವಾಯ ಯೆಹೋವ ದೇವರನ್ನು ಹುಡುಕುವವರೆಲ್ಲಾ ಪಾಳೆಯದ ಹೊರಗೆ ಇರುವ ದೇವದರ್ಶನದ ಗುಡಾರಕ್ಕೆ ಹೋದರು.

[8] ಇದಾದ ಮೇಲೆ ಮೋಶೆಯು ಗುಡಾರದ ಬಳಿಗೆ ಹೊರಗೆ ಹೋಗುತ್ತಿರುವಾಗ ಜನರೆಲ್ಲರೂ ಎದ್ದು, ತಮ್ಮ ತಮ್ಮ ಗುಡಾರಗಳ ಬಾಗಿಲುಗಳಲ್ಲಿ ನಿಂತುಕೊಂಡು ಮೋಶೆಯು ಗುಡಾರದಲ್ಲಿ ಪ್ರವೇಶಿಸುವವರೆಗೆ ಅವನ ಹಿಂದೆ ನೋಡುತ್ತಿದ್ದರು.

[9] ಮೋಶೆ ಗುಡಾರದೊಳಗೆ ಹೋಗುವಾಗ, ಮೇಘಸ್ತಂಭವು ಪ್ರವೇಶದ್ವಾರದ ಬಳಿಯಲ್ಲಿ ನಿಲ್ಲುತ್ತಿತ್ತು. ಆಗ ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡುತ್ತಿದ್ದರು.

[10] ಜನರೆಲ್ಲರೂ ಗುಡಾರದ ಬಾಗಿಲಲ್ಲಿ ನಿಂತ ಮೇಘಸ್ತಂಭವನ್ನು ನೋಡುವಾಗ ತಮ್ಮ ತಮ್ಮ ಡೇರೆಗಳ ಬಾಗಿಲುಗಳಲ್ಲಿ ಎದ್ದು ನಿಂತು ಯೆಹೋವ ದೇವರನ್ನು ಆರಾಧಿಸುತ್ತಿದ್ದರು.

[11] ಒಬ್ಬ ಮನುಷ್ಯನು ತನ್ನ ಸ್ನೇಹಿತನ ಸಂಗಡ ಮಾತನಾಡುವಂತೆ ಯೆಹೋವ ದೇವರು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತನಾಡುತ್ತಿದ್ದರು. ತರುವಾಯ ಅವನು ಪಾಳೆಯಕ್ಕೆ ಹಿಂದಿರುಗಿ ಹೋಗುತ್ತಿದ್ದನು. ಆದರೆ ಅವನ ಸೇವಕನೂ ನೂನನ ಮಗನೂ ಆದ ಯೆಹೋಶುವನೆಂಬ ಯೌವನಸ್ಥನು ಗುಡಾರವನ್ನು ಬಿಟ್ಟುಹೋಗಲಿಲ್ಲ.

[12] ಮೋಶೆಯು ಯೆಹೋವ ದೇವರಿಗೆ, “ ‘ಈ ಜನರನ್ನು ನಡೆಸಿಕೊಂಡು ಹೋಗು,’ ಎಂದು ನನಗೆ ಹೇಳುತ್ತಿರುವಿರಿ. ಯಾರನ್ನು ನನ್ನ ಸಂಗಡ ಕಳುಹಿಸುವಿರಿ, ಎಂದು ನೀವು ನನಗೆ ತಿಳಿಸಲಿಲ್ಲ. ಆದರೂ ನೀವು ನನಗೆ, ‘ನಾನು ನಿನ್ನನ್ನು ನಿನ್ನ ಹೆಸರಿನ ಮೂಲಕ ತಿಳಿದಿದ್ದೇನೆ, ನನ್ನ ದೃಷ್ಟಿಯಲ್ಲಿ ನಿನಗೆ ಕೃಪೆ ದೊರೆಯಿತು,’ ಎಂದೂ ಹೇಳಿದ್ದೀರಲ್ಲಾ.

[13] ಹಾಗಾದರೆ ಈಗ ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರೆಕಿದ್ದೇ ಆದರೆ ನಾನು ನಿಮ್ಮನ್ನು ತಿಳಿಯುವ ಹಾಗೆ, ನಿಮ್ಮ ಮಾರ್ಗವನ್ನು ನನಗೆ ತೋರಿಸಿ. ಆಗ ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರಕಿರುವುದು. ಈ ಜನಾಂಗವು ನಿಮ್ಮ ಜನರೇ, ಎಂದು ಜ್ಞಾಪಿಸಿಕೊಳ್ಳುವೆನು,” ಎಂದು ಹೇಳಿದನು.

[14] ಆಗ ಯೆಹೋವ ದೇವರು, “ನನ್ನ ಪ್ರಸನ್ನತೆಯು ನಿನ್ನ ಸಂಗಡ ಹೋಗುವುದು. ನಾನು ನಿನಗೆ ವಿಶ್ರಾಂತಿಯನ್ನು ಕೊಡುವೆನು,” ಎಂದರು.

[15] ಮೋಶೆಯು ಅವರಿಗೆ, “ನಿಮ್ಮ ಪ್ರಸನ್ನತೆಯು ನಮ್ಮೊಂದಿಗೆ ಹೋಗದಿದ್ದರೆ ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗಬೇಡಿ.

[16] ಏಕೆಂದರೆ ನನಗೂ ನಿಮ್ಮ ಜನರಿಗೂ ನಿಮ್ಮ ದೃಷ್ಟಿಯಲ್ಲಿ ದಯೆ ದೊರಕಿತೆಂದು ಯಾವುದರಿಂದ ತಿಳಿದುಬರುವುದು? ನೀವು ನನ್ನೊಂದಿಗೆ ಹೋಗುವುದರಿಂದಲ್ಲವೋ? ಹೀಗೆ ನಾನೂ ನಿಮ್ಮ ಜನರೂ ಭೂಮಿಯ ಮೇಲಿರುವ ಎಲ್ಲಾ ಜನರಿಂದ ಪ್ರತ್ಯೇಕವಾಗಿರುವೆವು,” ಎಂದನು.

[17] ಅದಕ್ಕೆ ಯೆಹೋವ ದೇವರು ಮೋಶೆಗೆ, “ನೀನು ಆಡಿದ ಈ ಮಾತಿನಂತೆಯೇ ನಾನು ಇದನ್ನು ಮಾಡುತ್ತೇನೆ. ಏಕೆಂದರೆ ನನ್ನ ದೃಷ್ಟಿಯಲ್ಲಿ ನಿನಗೆ ದಯೆ ದೊರಕಿತು. ನಾನು ನಿನ್ನನ್ನು ನಿನ್ನ ಹೆಸರಿನಿಂದ ತಿಳಿದಿದ್ದೇನೆ,” ಎಂದರು.

[18] ಆಗ ಮೋಶೆ, “ನಿಮ್ಮ ಮಹಿಮೆಯನ್ನು ನನಗೆ ತೋರಿಸಿ ಎಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ,” ಎಂದನು.

[19] ಅದಕ್ಕೆ ಅವರು, “ನಾನು ನನ್ನ ಒಳ್ಳೆಯತನವನ್ನೆಲ್ಲಾ ನಿನ್ನ ಎದುರಿಗೆ ಹಾದು ಹೋಗ ಮಾಡಿ, ಯೆಹೋವ ದೇವರ ಹೆಸರನ್ನು ನಿನ್ನ ಮುಂದೆ ಪ್ರಕಟಮಾಡಿ, ಯಾವನ ಮೇಲೆ ನನ್ನ ಕರುಣೆ ಉಂಟೋ, ಅವನನ್ನು ಕರುಣಿಸುವೆನು. ಯಾವನ ಮೇಲೆ ನನ್ನ ಕನಿಕರವಿದೆಯೋ ಅವನನ್ನು ಕನಿಕರಿಸುವೆನು,” ಎಂದರು.

[20] ಮತ್ತೆ ದೇವರು ಮೋಶೆಗೆ, “ನೀನು ನನ್ನ ಮುಖವನ್ನು ನೋಡಲಾರಿ. ಏಕೆಂದರೆ ಯಾವ ಮನುಷ್ಯನೂ ನನ್ನನ್ನು ನೋಡಿ ಬದುಕಿರಲಾರನು,” ಎಂದರು.

[21] ಇದಲ್ಲದೆ ಯೆಹೋವ ದೇವರು, “ನನ್ನ ಬಳಿಯಲ್ಲಿ ಒಂದು ಸ್ಥಳವಿದೆ. ನೀನು ಬಂಡೆಯ ಮೇಲೆ ನಿಂತುಕೋ.

[22] ಆಗ ನನ್ನ ಮಹಿಮೆಯು ಹಾದುಹೋಗುವಾಗ, ನಿನ್ನನ್ನು ಬಂಡೆಯ ಬಿರುಕಿನಲ್ಲಿ ನಿಲ್ಲಿಸಿ, ನಿನ್ನ ಮೇಲೆ ನನ್ನ ಕೈ ಮುಚ್ಚುವೆನು.

[23] ತರುವಾಯ ನನ್ನ ಕೈಯನ್ನು ತೆಗೆದುಬಿಡುವೆನು. ಆಗ ನೀನು ನನ್ನ ಬೆನ್ನನ್ನು ನೋಡುವೆ, ಆದರೆ ನನ್ನ ಮುಖವು ನಿನಗೆ ಕಾಣಿಸುವುದಿಲ್ಲ,” ಎಂದರು.

ವಿಮೋಚನಕಾಂಡ — Chapters