Skip to content
Opens in a new window
Listen to this chapter • 7:29

[1] ಯೆಹೋವ ದೇವರು ಮೋಶೆಗೆ,

[2] “ನನಗೆ ಕಾಣಿಕೆಗಳನ್ನು ತೆಗೆದುಕೊಂಡು ಬರುವಂತೆ ಇಸ್ರಾಯೇಲರ ಸಂಗಡ ಮಾತನಾಡು. ಯಾರ ಹೃದಯದಲ್ಲಿ ಕಾಣಿಕೆ ಕೊಡಬೇಕೆಂಬ ಪ್ರೇರಣೆ ಹುಟ್ಟುತ್ತದೋ, ಅಂಥವರ ಕಾಣಿಕೆಯನ್ನು ನೀನು ತೆಗೆದುಕೊಳ್ಳಬೇಕು.

[3] “ನೀನು ಅವರಿಂದ ತೆಗೆದುಕೊಳ್ಳಬೇಕಾದ ಕಾಣಿಕೆಗಳು: “ಚಿನ್ನ, ಬೆಳ್ಳಿ, ಕಂಚು,

[4] ನೀಲಿ, ಧೂಮ್ರ, ರಕ್ತವರ್ಣದಾರಗಳು, ನಾರುಬಟ್ಟೆಗಳು, ಮೇಕೆಯ ಕೂದಲು,

[5] ಕೆಂಪು ಬಣ್ಣದಲ್ಲಿ ಅದ್ದಿದ ಟಗರುಗಳ ಚರ್ಮಗಳು, ಕಡಲುಹಂದಿಯ ಚರ್ಮಗಳು, ಜಾಲಿ ಮರದ ಕಟ್ಟಿಗೆ.

[6] ದೀಪಕ್ಕಾಗಿ ಓಲಿವ್ ಎಣ್ಣೆ ಮತ್ತು ಅಭಿಷೇಕಿಸುವ ಎಣ್ಣೆಗೋಸ್ಕರ ಪರಿಮಳ ಧೂಪಕ್ಕೋಸ್ಕರ ಸುಗಂಧ ದ್ರವ್ಯಗಳು,

[7] ಏಫೋದ್ ಕವಚಕ್ಕಾಗಿ ಗೋಮೇಧಿಕಗಳು ಮತ್ತು ಎದೆಪದಕದಲ್ಲಿ ಹಚ್ಚಬೇಕಾದ ನಾನಾ ರತ್ನಗಳು ಇವೆ.

[8] “ನಾನು ಅವರ ಮಧ್ಯದಲ್ಲಿ ವಾಸಿಸುವ ಹಾಗೆ ಅವರು ನನಗೆ ಒಂದು ಪರಿಶುದ್ಧ ಆಲಯವನ್ನು ಕಟ್ಟಬೇಕು.

[9] ಗುಡಾರದ ಮಾದರಿಯನ್ನೂ, ಅದರ ಎಲ್ಲಾ ಸಲಕರಣೆಗಳ ಮಾದರಿಯನ್ನೂ ನಾನು ನಿನಗೆ ತೋರಿಸುವಂತೆಯೇ ನೀನು ಮಾಡಬೇಕು.

[10] “ಜಾಲಿ ಮರದಿಂದ ಸುಮಾರು ಒಂದು ಮೀಟರ್ ಉದ್ದ ಮತ್ತು ಅರವತ್ತೆಂಟು ಸೆಂಟಿಮೀಟರ್ ಅಗಲ ಮತ್ತು ಅರವತ್ತೆಂಟು ಸೆಂಟಿಮೀಟರ್ ಎತ್ತರವಾಗಿರುವ ಮಂಜೂಷವನ್ನು ಮಾಡಬೇಕು.

[11] ಅದನ್ನು ಶುದ್ಧ ಬಂಗಾರದಿಂದ ಒಳಗೂ ಹೊರಗೂ ಹೊದಿಸಬೇಕು. ಅದರ ಸುತ್ತಲೂ ಬಂಗಾರದ ತೋರಣವನ್ನು ಮಾಡಿಸಬೇಕು.

[12] ಅದಕ್ಕೆ ನಾಲ್ಕು ಬಂಗಾರದ ಬಳೆಗಳನ್ನು ಎರಕಹೊಯಿಸಿ ಅದರ ನಾಲ್ಕು ಮೂಲೆಗಳಲ್ಲಿ ಎಂದರೆ ಒಂದು ಕಡೆಯಲ್ಲಿ ಎರಡು ಬಳೆಗಳನ್ನು ಮತ್ತೊಂದು ಕಡೆಯಲ್ಲಿ ಎರಡು ಬಳೆಗಳನ್ನು ಇಡಬೇಕು.

[13] ಆಮೇಲೆ ಜಾಲಿ ಮರದ ಕೋಲುಗಳನ್ನು ಮಾಡಿಸಿ, ಅವುಗಳಿಗೆ ಬಂಗಾರದಿಂದ ಹೊದಿಸಬೇಕು.

[14] ಮಂಜೂಷವನ್ನು ಹೊರುವುದಕ್ಕಾಗಿ ಕೋಲುಗಳನ್ನು ಮಂಜೂಷದ ಎರಡು ಕಡೆಗಳಲ್ಲಿರುವ ಬಳೆಗಳಲ್ಲಿ ಸೇರಿಸಬೇಕು.

[15] ಮಂಜೂಷದ ಬಳೆಗಳಲ್ಲಿಯೇ ಕೋಲುಗಳನ್ನು ಇಡಬೇಕು. ಅವುಗಳೊಳಗಿಂದ ಕೋಲುಗಳನ್ನು ತೆಗೆಯಬಾರದು.

[16] ಮಂಜೂಷದಲ್ಲಿ ನಾನು ನಿನಗೆ ಕೊಡುವ ಒಡಂಬಡಿಕೆಯ ಶಾಸನದ ಹಲಗೆಯನ್ನು ಇಡಬೇಕು.

[17] “ಸುಮಾರು ನೂರಹತ್ತು ಸೆಂಟಿಮೀಟರ್ ಉದ್ದವೂ ಎಪ್ಪತ್ತು ಸೆಂಟಿಮೀಟರ್ ಅಗಲವೂ ಇರುವ ಕರುಣಾಸನವನ್ನು ಶುದ್ಧ ಬಂಗಾರದಿಂದ ಮಾಡಬೇಕು.

[18] ಕರುಣಾಸನದ ಎರಡು ತುದಿಗಳಲ್ಲಿ ಎರಡು ಬಂಗಾರದಿಂದ ಕೆರೂಬಿಗಳನ್ನು ನಕಾಸಿ ಕೆಲಸದಿಂದ ಮಾಡಿಸಬೇಕು.

[19] ಒಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನೂ ಇನ್ನೊಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನೂ ಮಾಡಿಸಬೇಕು. ಹೀಗೆ ಕರುಣಾಸನದ ಎರಡೂ ಬದಿಗಳಲ್ಲಿ ಕೆರೂಬಿಯನ್ನು ಮಾಡಿಸಬೇಕು.

[20] ಆ ಕೆರೂಬಿಗಳು ತಮ್ಮ ರೆಕ್ಕೆಗಳನ್ನು ಮೇಲಕ್ಕೆ ಚಾಚಿರುವಂತೆಯೂ ಕರುಣಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚುವಂತೆಯೂ ಕೆರೂಬಿಗಳ ಮುಖಗಳು ಎದುರುಬದುರಾಗಿ ಕರುಣಾಸನವನ್ನು ನೋಡುತ್ತಿರಬೇಕು.

[21] ಕರುಣಾಸನವನ್ನು ಮಂಜೂಷದ ಮೇಲಿಡಬೇಕು ಮತ್ತು ಮಂಜೂಷದಲ್ಲಿ ನಾನು ನಿನಗೆ ಕೊಡುವ ಒಡಂಬಡಿಕೆಯ ಶಾಸನಗಳನ್ನು ಇಡಬೇಕು.

[22] ನಾನು ಅಲ್ಲಿ ನಿನಗೆ ದರ್ಶನವನ್ನು ಕೊಟ್ಟು, ಕರುಣಾಸನದ ಮೇಲೆ ಒಡಂಬಡಿಕೆಯ ಮಂಜೂಷದ ಮೇಲಿರುವ ಎರಡು ಕೆರೂಬಿಗಳ ಮಧ್ಯದಿಂದ ಇಸ್ರಾಯೇಲರ ವಿಷಯದಲ್ಲಿ ನಾನು ನಿನಗೆ ಆಜ್ಞಾಪಿಸುವವುಗಳನ್ನೆಲ್ಲಾ ನಿನಗೆ ತಿಳಿಸುವೆನು.

[23] “ಸುಮಾರು ತೊಂಬತ್ತು ಸೆಂಟಿಮೀಟರ್ ಉದ್ದ, ನಲವತ್ತೈದು ಸೆಂಟಿಮೀಟರ್ ಅಗಲ ಮತ್ತು ಅರವತ್ತೆಂಟು ಸೆಂಟಿಮೀಟರ್ ಎತ್ತರ ಇರುವ ಮೇಜನ್ನು ಜಾಲಿ ಮರದಿಂದ ಮಾಡಬೇಕು.

[24] ಶುದ್ಧ ಬಂಗಾರದಿಂದ ಮೇಜನ್ನು ಹೊದಿಸಿ, ಅದರ ಸುತ್ತಲೂ ಬಂಗಾರದ ತೋರಣವನ್ನು ಮಾಡಬೇಕು.

[25] ಮೇಜಿನ ಸುತ್ತಲೂ ಅಂಗೈ ಅಗಲದ ಅಡ್ಡಪಟ್ಟಿಯನ್ನು ಮಾಡಿಸಿ, ಅಂಚಿನ ಸುತ್ತಲೂ ಬಂಗಾರದ ತೋರಣವನ್ನು ಮಾಡಬೇಕು.

[26] ಇದಲ್ಲದೆ ಆ ಮೇಜಿಗೆ ಬಂಗಾರದ ನಾಲ್ಕು ಬಳೆಗಳನ್ನು ಮಾಡಿ, ಅವುಗಳನ್ನು ಅದರ ನಾಲ್ಕು ಕಾಲುಗಳಲ್ಲಿರುವ ನಾಲ್ಕು ಮೂಲೆಗಳಿಗೆ ಜೋಡಿಸಬೇಕು.

[27] ಅಂಚಿಗೆ ಸಮೀಪವಾಗಿ ಮೇಜನ್ನು ಹೊತ್ತುಕೊಂಡು ಹೋಗಲು ಇರುವ ಕೋಲುಗಳಿಗೆ ಬಳೆಗಳು ಇರಬೇಕು.

[28] ಮೇಜನ್ನು ಹೊರುವುದಕ್ಕಾಗಿ ಕೋಲುಗಳನ್ನು, ತೋರಣವನ್ನು ಜಾಲಿ ಮರದಿಂದ ಮಾಡಿ, ಬಂಗಾರದಿಂದ ಹೊದಿಸಬೇಕು.

[29] ಇದಲ್ಲದೆ ನೀನು ಪಾತ್ರೆಗಳನ್ನು, ಧೂಪಾರತಿಗಳನ್ನು, ಮುಚ್ಚಳಗಳನ್ನು ಪಾನಾರ್ಪಣೆಗೆ ಹೂಜೆಗಳನ್ನೂ ಬೇಕಾದ ಬಟ್ಟಲುಗಳನ್ನೂ, ಶುದ್ಧ ಬಂಗಾರದಿಂದ ಮಾಡಬೇಕು.

[30] ಮೇಜಿನ ಮೇಲೆ ನೈವೇದ್ಯದ ರೊಟ್ಟಿಯನ್ನು ಯಾವಾಗಲೂ ನನ್ನ ಮುಂದೆ ಇಡಬೇಕು.

[31] “ಶುದ್ಧ ಬಂಗಾರದಿಂದ ದೀಪಸ್ತಂಭವನ್ನು ಮಾಡಬೇಕು. ಅದರ ಬುಡವನ್ನೂ ಕಂಬವನ್ನೂ ನಕಾಸಿ ಕೆಲಸದಿಂದ ಮಾಡಬೇಕು. ದೀಪಸ್ತಂಭದ ಬುಡದಿಂದಲೇ ಅಖಂಡವಾಗಿ ಪುಷ್ಪದ ಗೊಂಚಲುಗಳಂತೆಯೂ ಹಣತೆಗಳಂತೆಯೂ ಮೊಗ್ಗುಗಳಂತೆಯೂ ಇರಬೇಕು.

[32] ದೀಪಸ್ತಂಭದಿಂದ ಆರು ಕೊಂಬೆಗಳು ಹೊರ ಬಂದಿರಬೇಕು. ಅಂದರೆ ಒಂದು ಭಾಗದಿಂದ ಮೂರು ಕೊಂಬೆಗಳೂ ಮತ್ತೊಂದು ಭಾಗದಿಂದ ಮೂರು ಕೊಂಬೆಗಳೂ ಹೊರಗೆ ಬರಬೇಕು.

[33] ಒಂದು ಕೊಂಬೆಯಲ್ಲಿ ಬಾದಾಮಿ ಪುಷ್ಟದಂತಿರುವ ಮೂರು ಹಣತೆಗಳು, ಮೊಗ್ಗು ಪುಷ್ಟಗಳಿರಬೇಕು ಮತ್ತು ಮತ್ತೊಂದು ಕೊಂಬೆಯಲ್ಲಿ ಬಾದಾಮಿಯ ಪುಷ್ಟವಿದ್ದ ಮೂರು ಹಣತೆಗಳು, ಮೊಗ್ಗು ಪುಷ್ಟಗಳಿರಬೇಕು. ಈ ಪ್ರಕಾರ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳಲ್ಲಿಯೂ ಇರಬೇಕು.

[34] ದೀಪಸ್ತಂಭದಲ್ಲಿಯೇ ಬಾದಾಮಿ ಹೂವುಗಳಂತೆಯೂ ಮೊಗ್ಗುಗಳಂತೆಯೂ ಅದಕ್ಕೊಂದು ಪುಷ್ಪದ ಆಕಾರದಲ್ಲಿ ನಾಲ್ಕು ಹಣತೆಗಳು ಇರಬೇಕು.

[35] ದೀಪಸ್ತಂಭದಿಂದ ಹೊರಬರುವ ಒಂದು ಮೊಗ್ಗು ಮೊದಲ ಜೋಡಿ ಕೊಂಬೆಗಳ ಅಡಿಯಲ್ಲಿರಬೇಕು. ಎರಡನೇ ಮೊಗ್ಗು ಎರಡನೇ ಜೋಡಿಯ ಅಡಿಯಲ್ಲಿ ಮತ್ತು ಮೂರನೆಯ ಮೊಗ್ಗು ಮೂರನೆಯ ಜೋಡಿಯ ಅಡಿಯಲ್ಲಿ ಹೀಗೆ ಆರು ಕೊಂಬೆಗಳು ಇರಬೇಕು.

[36] ಅದರ ಮೊಗ್ಗುಗಳೂ ಕೊಂಬೆಗಳೂ ಅದರಿಂದಲೇ ಬಂದಿರಬೇಕು. ದೀಪಸ್ತಂಭವನ್ನೆಲ್ಲಾ ಶುದ್ಧ ಬಂಗಾರದ ಒಂದೇ ಅಚ್ಚಿನಲ್ಲಿ ಬರೆದ ಕಲಾಕೃತಿಯಾಗಿರಬೇಕು.

[37] “ಅದರ ಏಳು ದೀಪಗಳನ್ನು ಮಾಡಿ ಅವು ಮುಂದುಗಡೆಯಲ್ಲಿ ಪ್ರಕಾಶಕೊಡುವಂತೆ ಅವುಗಳನ್ನು ಹೊತ್ತಿಸಬೇಕು.

[38] ಇದಲ್ಲದೆ ಅದರ ಕುಡಿ ಕತ್ತರಿಸುವ ಕತ್ತರಿಗಳನ್ನೂ ಬೂದಿಯ ಪಾತ್ರೆಗಳನ್ನೂ ಶುದ್ಧ ಬಂಗಾರದಿಂದಲೇ ಮಾಡಬೇಕು.

[39] ದೀಪಸ್ತಂಭವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಒಂದು ತಲಾಂತು ಶುದ್ಧ ಬಂಗಾರದಿಂದ ಮಾಡಬೇಕು.

[40] ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಅವುಗಳನ್ನು ಮಾಡುವಂತೆ ನೋಡಿಕೋ.

ವಿಮೋಚನಕಾಂಡ — Chapters