Skip to content
Opens in a new window
Listen to this chapter • 6:07

[1] ದೇವರು ಮೋಶೆಗೂ, ತಮ್ಮ ಜನರಾದ ಇಸ್ರಾಯೇಲರಿಗೂ ಮಾಡಿದವುಗಳೆಲ್ಲವನ್ನೂ ಯೆಹೋವ ದೇವರು ಇಸ್ರಾಯೇಲರನ್ನು ಈಜಿಪ್ಟಿನೊಳಗಿಂದ ಹೊರಗೆ ತಂದದ್ದನ್ನೂ, ಮಿದ್ಯಾನಿನ ಯಾಜಕನೂ, ಮೋಶೆಯ ಮಾವನೂ ಆಗಿದ್ದ ಇತ್ರೋವನಿಗೆ ಮುಟ್ಟಿತು.

[2] ಅವನು ತನ್ನ ಬಳಿಗೆ ಕಳುಹಿಸಲಾಗಿದ್ದ ಮೋಶೆಯ ಹೆಂಡತಿ ಚಿಪ್ಪೋರಳನ್ನು ಮತ್ತು ಆಕೆಯ ಇಬ್ಬರು ಪುತ್ರರನ್ನು ಕರೆದುಕೊಂಡು ಬಂದನು.

[3] ಮೋಶೆಯು, “ನಾನು ಪರದೇಶದಲ್ಲಿ ಅನ್ಯನಾಗಿದ್ದೆನು,” ಎಂದು ಹೇಳಿ ಆ ಪುತ್ರರಲ್ಲಿ ಒಬ್ಬನಿಗೆ ಗೇರ್ಷೋಮ್ ಎಂದು ಹೆಸರಿಟ್ಟಿದ್ದನು.

[4] “ನನ್ನ ತಂದೆಯ ದೇವರು ನನ್ನ ಸಹಾಯಕನಾಗಿದ್ದು, ಫರೋಹನ ಖಡ್ಗದಿಂದ ಬಿಡುಗಡೆ ಮಾಡಿದನು,” ಎಂದು ಹೇಳಿ ಇನ್ನೊಬ್ಬ ಮಗನಿಗೆ ಎಲೀಯೆಜೆರ್ ಎಂದು ಹೆಸರಿಟ್ಟಿದ್ದನು.

[5] ಮೋಶೆಯ ಮಾವನಾದ ಇತ್ರೋವನ ಸಂಗಡ ಮೋಶೆಯ ಹೆಂಡತಿಯನ್ನೂ, ಅವನ ಪುತ್ರರನ್ನೂ ಮೋಶೆಯ ಬಳಿಗೆ ಅವನು ತಂಗಿದ್ದ ಮರುಭೂಮಿಯಲ್ಲಿ ದೇವರ ಬೆಟ್ಟದ ಬಳಿಗೆ ಬಂದರು.

[6] ಆಗ ಅವನು ಮೋಶೆಗೆ, “ನಿನ್ನ ಮಾವ ಇತ್ರೋವನೆಂಬ ನಾನು ನಿನ್ನ ಹೆಂಡತಿ, ಇಬ್ಬರು ಮಕ್ಕಳನ್ನೂ ಕರೆದುಕೊಂಡು ನಿನ್ನ ಬಳಿಗೆ ಬಂದಿದ್ದೇನೆ,” ಎಂದು ಹೇಳಿ ಕಳುಹಿಸಿದನು.

[7] ಮೋಶೆಗೆ ತನ್ನ ಮಾವನನ್ನು ಎದುರುಗೊಂಡು ಅವನನ್ನು ವಂದಿಸಿ, ಮುದ್ದಿಟ್ಟನು. ಅವರು ಪರಸ್ಪರ ಕ್ಷೇಮಸಮಾಚಾರವನ್ನು ಕೇಳಿಕೊಂಡು ಗುಡಾರಕ್ಕೆ ಬಂದರು.

[8] ಇಸ್ರಾಯೇಲರಿಗೋಸ್ಕರ ಯೆಹೋವ ದೇವರು ಫರೋಹನಿಗೂ ಈಜಿಪ್ಟಿನವರಿಗೂ ಮಾಡಿದ್ದೆಲ್ಲವನ್ನೂ, ಅವರಿಗೆ ಒದಗಿದ ಎಲ್ಲಾ ಸಂಕಟವನ್ನೂ ಯೆಹೋವ ದೇವರು ತಮ್ಮನ್ನು ಹೇಗೆ ತಪ್ಪಿಸಿದನೆಂಬುದನ್ನೂ ಮೋಶೆಯು ತನ್ನ ಮಾವನಿಗೆ ತಿಳಿಯಪಡಿಸಿದನು.

[9] ಇದಲ್ಲದೆ ಯೆಹೋವ ದೇವರು ಇಸ್ರಾಯೇಲರಿಗೆ ಮಾಡಿದ ಎಲ್ಲಾ ಉಪಕಾರಕ್ಕಾಗಿಯೂ, ಯೆಹೋವ ದೇವರು ಅವರನ್ನು ಈಜಿಪ್ಟಿನವರ ಕೈಗಳಿಂದ ತಪ್ಪಿಸಿದ್ದಕ್ಕಾಗಿಯೂ ಇತ್ರೋವನು ಸಂತೋಷಪಟ್ಟನು.

[10] ಇತ್ರೋವನು, “ಈಜಿಪ್ಟಿನವರ ಕೈಗೂ ಫರೋಹನ ಕೈಗೂ ಈಜಿಪ್ಟಿನವರ ಅಧಿಕಾರದೊಳಗಿಂದಲೂ ಜನರನ್ನು ತಪ್ಪಿಸಿದ ಯೆಹೋವ ದೇವರಿಗೆ ಸ್ತೋತ್ರವಾಗಲಿ.

[11] ಎಲ್ಲಾ ದೇವರುಗಳಿಗಿಂತ ಯೆಹೋವ ದೇವರೇ ದೊಡ್ಡವರೆಂದು ಈಗ ನಾನು ತಿಳಿದುಕೊಂಡಿದ್ದೇನೆ. ಏಕೆಂದರೆ ಈಜಿಪ್ಟಿನವರು ಗರ್ವಪಟ್ಟಿದ್ದರಿಂದ ಯೆಹೋವ ದೇವರು ಅವರನ್ನು ತಗ್ಗಿಸಿದರು,” ಎಂದನು.

[12] ಮೋಶೆಯ ಮಾವ ಇತ್ರೋವನು ದಹನಬಲಿಯನ್ನೂ, ಯಜ್ಞಗಳನ್ನೂ ದೇವರಿಗಾಗಿ ತೆಗೆದುಕೊಂಡು ಬಂದನು. ಆರೋನನೂ, ಇಸ್ರಾಯೇಲಿನ ಹಿರಿಯರೆಲ್ಲರೂ ದೇವರ ಸನ್ನಿಧಿಯಲ್ಲಿ ಮೋಶೆಯ ಮಾವನ ಸಂಗಡ ಭೋಜನವನ್ನು ಮಾಡುವುದಕ್ಕೆ ಬಂದರು.

[13] ಮರುದಿನ ಮೋಶೆಯು ಜನರಿಗೆ ನ್ಯಾಯತೀರಿಸುವುದಕ್ಕೆ ಕೂತುಕೊಂಡಾಗ, ಜನರು ಬೆಳಗಿನಿಂದ ಸಂಜೆಯವರೆಗೆ ಮೋಶೆಯ ಬಳಿಯಲ್ಲಿ ನಿಂತಿದ್ದರು.

[14] ಇತ್ರೋವನು ಮೋಶೆಯು ಜನರಿಗಾಗಿ ಮಾಡುವುದನ್ನೆಲ್ಲಾ ನೋಡಿದಾಗ, ಅವನು ಮೋಶೆಗೆ, “ಇದೇನು ಜನರಿಗೆ ನೀನು ಮಾಡುವುದು? ಏಕೆ ನೀನೊಬ್ಬನೇ ನ್ಯಾಯಾಧೀಶನಾಗಿ ಕೂತಿರಲಾಗಿ, ಜನರು ಬೆಳಗಿನಿಂದ ಸಂಜೆಯವರೆಗೆ ನಿನ್ನ ಬಳಿಯಲ್ಲಿ ನಿಂತಿರಬೇಕು?” ಎಂದನು.

[15] ಅದಕ್ಕೆ ಮೋಶೆಯು ತನ್ನ ಮಾವನಿಗೆ, “ದೇವರ ವಿಷಯವಾಗಿ ಕೇಳುವುದಕ್ಕಾಗಿ ಜನರು ನನ್ನ ಬಳಿಗೆ ಬರುತ್ತಾರೆ.

[16] ಅವರಿಗೆ ಏನಾದರೂ ವ್ಯಾಜ್ಯವಿದ್ದರೆ ನನ್ನ ಬಳಿಗೆ ಬರುತ್ತಾರೆ. ನಾನು ಒಬ್ಬರ ಸಂಗಡ ಇನ್ನೊಬ್ಬರಿಗಿರುವ ವ್ಯಾಜ್ಯವನ್ನು ತೀರಿಸುತ್ತೇನೆ. ದೇವರ ನಿಯಮಗಳನ್ನೂ, ಆಜ್ಞೆಗಳನ್ನೂ ಅವರಿಗೆ ತಿಳಿಯಪಡಿಸುತ್ತೇನೆ,” ಎಂದನು.

[17] ಮೋಶೆಯ ಮಾವನು ಅವನಿಗೆ, “ನೀನು ಮಾಡುವ ಕಾರ್ಯವಿಧಾನ ಸರಿಯಲ್ಲ,

[18] ನೀನೂ, ನಿನ್ನ ಸಂಗಡ ಇರುವ ಜನರೂ ಖಂಡಿತ ಬಳಲುವಿರಿ. ಏಕೆಂದರೆ ಇದು ನಿನಗೆ ಬಹು ಭಾರ. ನೀನೊಬ್ಬನೇ ಇದನ್ನು ಮಾಡಲಾರೆ.

[19] ಆದ್ದರಿಂದ ಈಗ ನನ್ನ ಮಾತನ್ನು ಕೇಳು, ನಿನಗೆ ಆಲೋಚನೆ ಹೇಳುತ್ತೇನೆ. ದೇವರು ನಿನ್ನ ಸಂಗಡ ಇರಲಿ. ನೀನು ಜನರಿಗಾಗಿ ದೇವರ ಪಕ್ಷದಲ್ಲಿದ್ದು, ಅವರ ವ್ಯಾಜ್ಯಗಳನ್ನು ದೇವರ ಮುಂದೆ ತರಬೇಕು.

[20] ನಿಯಮಗಳನ್ನೂ, ಆಜ್ಞೆಗಳನ್ನೂ ಅವರಿಗೆ ಕಲಿಸಿ, ಅವರು ನಡೆಯಬೇಕಾದ ಮಾರ್ಗವನ್ನೂ, ಅವರು ಮಾಡಬೇಕಾದ ಕೆಲಸವನ್ನೂ ಅವರಿಗೆ ತೋರಿಸಬೇಕು.

[21] ಇದಲ್ಲದೆ ನೀನು ಸಮಸ್ತ ಜನರೊಳಗೆ ಸಮರ್ಥರು ಅಂದರೆ ದೇವರಿಗೆ ಭಯಪಡುವವರೂ, ಸತ್ಯವಂತರೂ, ದುರಾಶೆಯನ್ನು ಹಗೆಮಾಡುವವರೂ ಆಗಿರುವವರನ್ನು ಸಾವಿರ ಮಂದಿಯ ಮೇಲೆಯೂ, ನೂರು ಮಂದಿಯ ಮೇಲೆಯೂ, ಐವತ್ತು ಮಂದಿಯ ಮೇಲೆಯೂ, ಹತ್ತು ಮಂದಿಯ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸು.

[22] ಇವರು ಎಲ್ಲಾ ಕಾಲಗಳಲ್ಲಿಯೂ ಜನರಿಗೆ ನ್ಯಾಯತೀರಿಸಲಿ. ಆದರೆ ದೊಡ್ಡ ವ್ಯಾಜ್ಯಗಳನ್ನೆಲ್ಲಾ ನಿನ್ನ ಮುಂದೆ ತಂದು, ಸಣ್ಣ ವ್ಯಾಜ್ಯಗಳನ್ನೆಲ್ಲಾ ತಾವೇ ತೀರಿಸಲಿ. ಆಗ ನಿನಗೆ ಸುಲಭವಾಗುವುದು. ಅವರೂ ನಿನ್ನ ಸಂಗಡ ಭಾರವನ್ನು ಹೊರುವರು.

[23] ಈ ಕಾರ್ಯವನ್ನು ಮಾಡುವುದಕ್ಕೆ ದೇವರು ನಿನಗೆ ಅಪ್ಪಣೆ ಕೊಟ್ಟರೆ, ಆಗ ನೀನು ಇದನ್ನು ನಿರ್ವಹಿಸಲು ಶಕ್ತನಾಗುವೆ. ಈ ಜನರೆಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ಸಮಾಧಾನದಿಂದ ಹೋಗುವರು,” ಎಂದನು.

[24] ಮೋಶೆಯು ತನ್ನ ಮಾವನ ಮಾತನ್ನು ಕೇಳಿ, ಅವನು ಹೇಳಿದ್ದನ್ನೆಲ್ಲಾ ಮಾಡಿದನು.

[25] ಮೋಶೆಯು ಇಸ್ರಾಯೇಲರಲ್ಲಿ ಇರುವ ಸಮರ್ಥರನ್ನು ಆರಿಸಿಕೊಂಡು, ಅವರನ್ನು ಜನರ ಮೇಲೆ ಮುಖ್ಯಸ್ಥರನ್ನಾಗಿ ಮಾಡಿ, ಸಾವಿರ ಮಂದಿಯ ಮೇಲೆ, ನೂರು ಮಂದಿಯ ಮೇಲೆ, ಐವತ್ತು ಮಂದಿಯ ಮೇಲೆ, ಹತ್ತು ಮಂದಿಯ ಮೇಲೆ ಅಧಿಕಾರಿಗಳನ್ನಾಗಿ ನೇಮಿಸಿದನು.

[26] ಇವರು ಎಲ್ಲಾ ಕಾಲಗಳಲ್ಲಿ ಜನರಿಗೆ ನ್ಯಾಯತೀರಿಸಿ, ಕಠಿಣ ವ್ಯಾಜ್ಯಗಳನ್ನು ಮೋಶೆಯ ಬಳಿಗೆ ತರುತ್ತಿದ್ದರು. ಸಣ್ಣ ವ್ಯಾಜ್ಯಗಳನ್ನು ತಾವೇ ತೀರಿಸಿದರು.

[27] ತರುವಾಯ ಮೋಶೆಯು ತನ್ನ ಮಾವ ಇತ್ರೋವನಿಗೆ ಸಾಗಕಳುಹಿಸಿದಾಗ, ಅವನು ಸ್ವದೇಶಕ್ಕೆ ಹೊರಟುಹೋದನು.

ವಿಮೋಚನಕಾಂಡ — Chapters