Skip to content
Opens in a new window
Listen to this chapter • 10:00

[1] “ಅವರು ನನಗೆ ಯಾಜಕ ಸೇವೆಮಾಡುವಂತೆ ನೀನು ಅವರನ್ನು ಶುದ್ಧ ಮಾಡಲು ಮಾಡಬೇಕಾದದ್ದೇನೆಂದರೆ: ದೋಷವಿಲ್ಲದ ಒಂದು ಹೋರಿಯನ್ನೂ ಎರಡು ಟಗರುಗಳನ್ನೂ,

[2] ಅತ್ಯುತ್ತಮ ಗೋಧಿಯ ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನೂ ಎಣ್ಣೆ ಹೊಯ್ದ ಹುಳಿಯಿಲ್ಲದ ಹೋಳಿಗೆಗಳನ್ನೂ ಎಣ್ಣೆ ಹಚ್ಚಿದ ಹುಳಿಯಿಲ್ಲದ ಪೂರಿಗಳನ್ನೂ ತೆಗೆದುಕೊಳ್ಳಬೇಕು.

[3] ಇವುಗಳನ್ನು ಒಂದೇ ಬುಟ್ಟಿಯಲ್ಲಿ ಇಟ್ಟುಕೊಂಡು ಹೋರಿ ಮತ್ತು ಎರಡು ಟಗರುಗಳ ಸಂಗಡ ತೆಗೆದುಕೊಂಡು ಬರಬೇಕು.

[4] ಆರೋನನನ್ನೂ ಅವನ ಪುತ್ರರನ್ನೂ ದೇವದರ್ಶನದ ಗುಡಾರದ ಬಾಗಿಲಿನ ಬಳಿಗೆ ತಂದು, ನೀರಿನಲ್ಲಿ ಅವರನ್ನು ತೊಳೆಯಬೇಕು.

[5] ತರುವಾಯ ಆ ವಸ್ತ್ರಗಳನ್ನು ತೆಗೆದುಕೊಂಡು ಆರೋನನಿಗೆ ಅಂಗಿಯನ್ನೂ ಏಫೋದಿನ ನಿಲುವಂಗಿಯನ್ನೂ ಏಫೋದನ್ನೂ ಎದೆಪದಕವನ್ನೂ ತೊಡಿಸಿ, ಏಫೋದಿನ ಕಲಾತ್ಮಕವಾದ ನಡುಕಟ್ಟಿನಿಂದ ಅವನ ನಡುವನ್ನೂ ಕಟ್ಟಿ,

[6] ಅವನ ತಲೆಗೆ ಮುಂಡಾಸವನ್ನು ಇಟ್ಟು, ಮುಂಡಾಸದ ಮೇಲೆ ಪರಿಶುದ್ಧ ಪಟ್ಟವನ್ನು ಇಟ್ಟು,

[7] ಅಭಿಷೇಕಿಸುವ ಎಣ್ಣೆಯನ್ನು ತೆಗೆದುಕೊಂಡು, ಅವನ ತಲೆಯ ಮೇಲೆ ಹೊಯ್ದು, ಅವನನ್ನು ಅಭಿಷೇಕಿಸಬೇಕು.

[8] ನೀನು ಅವನ ಪುತ್ರರನ್ನು ಕರೆದುಕೊಂಡು ಬಂದು ಅವರಿಗೆ ನಿಲುವಂಗಿಗಳನ್ನು ತೊಡಿಸಿ,

[9] ಆರೋನನಿಗೂ ಅವನ ಪುತ್ರರಿಗೂ ಮುಂಡಾಸುಗಳನ್ನು ಇಟ್ಟು ನಡುಕಟ್ಟುಗಳನ್ನು ಕಟ್ಟಬೇಕು, ಅವರಿಗೆ ಹೀಗೆ ಅವರಿಗೆ ಯಾಜಕತ್ವ ಸೇವೆಯು ಶಾಶ್ವತ ಕಟ್ಟಳೆಯಾಗಿರುವುದು. “ಈ ರೀತಿಯಾಗಿ ಆರೋನನನ್ನೂ ಅವನ ಪುತ್ರರನ್ನೂ ನೀನು ಪ್ರತಿಷ್ಠೆ ಮಾಡಬೇಕು.

[10] “ಇದಲ್ಲದೆ ಆ ಹೋರಿಯನ್ನು ಸಭೆಯ ಗುಡಾರದ ಮುಂದೆ ತರಬೇಕು. ಆರೋನನೂ ಅವನ ಪುತ್ರರೂ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು.

[11] ತರುವಾಯ ನೀನು ಆ ಹೋರಿಯನ್ನು ಯೆಹೋವ ದೇವರ ಮುಂದೆ ದೇವದರ್ಶನದ ಗುಡಾರದ ಬಾಗಿಲಲ್ಲಿ ವಧಿಸಬೇಕು.

[12] ನೀನು ಹೋರಿಯ ರಕ್ತವನ್ನು ತೆಗೆದುಕೊಂಡು ನಿನ್ನ ಬೆರಳಿನಿಂದ ಬಲಿಪೀಠದ ಕೊಂಬುಗಳಿಗೆ ಹಚ್ಚಿ, ರಕ್ತವನ್ನೆಲ್ಲಾ ಬಲಿಪೀಠದ ಅಡಿಯಲ್ಲಿ ಸುರಿಯಬೇಕು.

[13] ನೀನು ಕರುಳುಗಳನ್ನೂ ಅವುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಕಾಳಿಜದ ಮೇಲಿರುವ ಕೊಬ್ಬನ್ನೂ ಎರಡು ಮೂತ್ರ ಜನಕಾಂಗಗಳನ್ನೂ ಅವುಗಳ ಕೊಬ್ಬನ್ನೂ ತೆಗೆದುಕೊಂಡು ಬಲಿಪೀಠದ ಮೇಲೆ ಸುಡಬೇಕು.

[14] ಇದಲ್ಲದೆ ಹೋರಿಯ ಮಾಂಸವನ್ನೂ ಅದರ ಚರ್ಮವನ್ನೂ, ಅದರ ಸಗಣಿಯನ್ನೂ ಪಾಳೆಯದ ಹೊರಗೆ ಬೆಂಕಿಯಿಂದ ಸುಡಬೇಕು. ಅದು ಪಾಪ ಪರಿಹಾರದ ಬಲಿಯಾಗಿದೆ.

[15] “ನೀನು ಒಂದು ಟಗರನ್ನು ಸಹ ತೆಗೆದುಕೊಳ್ಳಬೇಕು. ಆರೋನನು ಮತ್ತು ಅವನ ಪುತ್ರರು ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು.

[16] ತರುವಾಯ ಆ ಟಗರನ್ನು ನೀನು ವಧಿಸಿ, ಅದರ ರಕ್ತವನ್ನು ತೆಗೆದುಕೊಂಡು ಬಲಿಪೀಠದ ಮೇಲೆ ಸುತ್ತಲೂ ಚಿಮುಕಿಸಬೇಕು.

[17] ಇದಲ್ಲದೆ ಆ ಟಗರನ್ನು ತುಂಡುತುಂಡಾಗಿ ಕಡಿದು, ಅದರ ಕರುಳುಗಳನ್ನೂ ಕಾಲುಗಳನ್ನೂ ತೊಳೆದು, ಅದರ ತುಂಡುಗಳನ್ನು ತಲೆಯ ಸಂಗಡ ಇಡಬೇಕು.

[18] ಅದನ್ನೆಲ್ಲಾ ಬಲಿಪೀಠದ ಮೇಲೆ ಸುಡಬೇಕು. ಅದು ಯೆಹೋವ ದೇವರಿಗೆ ದಹನಬಲಿಯಾಗಿದೆ. ಅದು ಯೆಹೋವ ದೇವರಿಗೆ ಸುವಾಸನೆಯ ದಹನಬಲಿ.

[19] “ಆ ಇನ್ನೊಂದು ಟಗರನ್ನು ನೀನು ತಂದಾಗ, ಆರೋನನೂ ಅವನ ಪುತ್ರರೂ ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು.

[20] ತರುವಾಯ ನೀನು ಅದನ್ನು ವಧಿಸಿ, ಅದರ ರಕ್ತವನ್ನು ಆರೋನನ ಮತ್ತು ಅವನ ಪುತ್ರರ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿ, ಆ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಬೇಕು.

[21] ಆರೋನನೂ ಅವನ ವಸ್ತ್ರಗಳೂ ಅವನೊಂದಿಗೆ ಅವನ ಪುತ್ರರೂ ಅವರ ವಸ್ತ್ರಗಳೂ ಪರಿಶುದ್ಧವಾಗುವ ಹಾಗೆ ಬಲಿಪೀಠದ ಮೇಲಿರುವ ರಕ್ತವನ್ನೂ, ಅಭಿಷೇಕ ತೈಲವನ್ನೂ ತೆಗೆದುಕೊಂಡು ಆರೋನನ ಮೇಲೆಯೂ ಅವನ ವಸ್ತ್ರಗಳ ಮೇಲೆಯೂ ಅವನ ಪುತ್ರರ ಮೇಲೆಯೂ ಅವರ ವಸ್ತ್ರಗಳ ಮೇಲೆಯೂ ನೀನು ಚಿಮುಕಿಸಬೇಕು.

[22] “ಇದಲ್ಲದೆ ಆ ಟಗರಿನ ಕೊಬ್ಬನ್ನೂ ಬಾಲವನ್ನೂ ಕರುಳುಗಳ ಮೇಲಿರುವ ಕೊಬ್ಬನ್ನೂ ಕಾಳಿಜದ ಮೇಲಿರುವ ಕೊಬ್ಬನ್ನೂ ಎರಡು ಮೂತ್ರ ಜನಕಾಂಗಗಳನ್ನೂ ಅವುಗಳ ಕೊಬ್ಬನ್ನೂ ಬಲದೊಡೆಯನ್ನೂ ತೆಗೆದುಕೊಳ್ಳಬೇಕು. ಏಕೆಂದರೆ ಅದು ಪ್ರತಿಷ್ಠೆಯ ಟಗರು.

[23] ಯೆಹೋವ ದೇವರ ಸನ್ನಿಧಿಯಲ್ಲಿರುವ ಹುಳಿಯಿಲ್ಲದ ರೊಟ್ಟಿಯ ಪುಟ್ಟಿಯೊಳಗಿಂದ ಒಂದು ರೊಟ್ಟಿಯನ್ನೂ ಎಣ್ಣೆಯ ಒಂದು ಹೋಳಿಗೆಯನ್ನೂ ಒಂದು ಪೂರಿಯನ್ನೂ

[24] ನೀನು ತೆಗೆದುಕೊಂಡು ಅವುಗಳನ್ನೆಲ್ಲಾ ಆರೋನನ ಮತ್ತು ಅವನ ಪುತ್ರರ ಕೈಗಳಿಗೆ ಕೊಟ್ಟು, ಅವರು ಯೆಹೋವ ದೇವರ ಮುಂದೆ ಅದನ್ನು ನೈವೇದ್ಯವಾಗಿ ನಿವಾಳಿಸಬೇಕು.

[25] ನೀನು ಅವುಗಳನ್ನು ಅವರ ಕೈಗಳಿಂದ ತೆಗೆದುಕೊಂಡು, ಬಲಿಪೀಠದ ಮೇಲೆ ದಹನಬಲಿಯಾಗಿ ಯೆಹೋವ ದೇವರ ಮುಂದೆ ಸುವಾಸನೆಗೋಸ್ಕರ ದಹಿಸಬೇಕು. ಅದು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಅರ್ಪಣೆ.

[26] ಇದಲ್ಲದೆ ಆರೋನನು ಪ್ರತಿಷ್ಠೆಯ ಟಗರಿನ ಎದೆಯ ಭಾಗವನ್ನು ತೆಗೆದುಕೊಂಡು, ನೈವೇದ್ಯವಾಗಿ ಯೆಹೋವ ದೇವರ ಸನ್ನಿಧಿಯಲ್ಲಿ ನಿವಾಳಿಸಬೇಕು. ಅದು ನಿನ್ನ ಪಾಲಾಗಿರುವುದು.

[27] “ನೀನು ನೈವೇದ್ಯ ಮಾಡಿದ ಎದೆಯ ಭಾಗವನ್ನೂ, ಅರ್ಪಣೆ ಮಾಡಿದ ಬಲದ ಮುಂದೊಡೆಯನ್ನೂ, ಆರೋನನ, ಅವನ ಪುತ್ರರಿಗೆ ಸಲ್ಲಬೇಕಾದ ಪ್ರತಿಷ್ಠಿತ ಟಗರಿನ ಭಾಗವನ್ನು ಪ್ರತಿಷ್ಠಿಸು.

[28] ಅದು ಆರೋನನಿಗೂ ಅವನ ಪುತ್ರರಿಗೂ ಇಸ್ರಾಯೇಲರ ಕಡೆಯಿಂದ ನಿತ್ಯವಾಗಿ ಕೊಡುವ ಭಾಗವಾಗಿರಬೇಕು. ಏಕೆಂದರೆ ಅದು ನೈವೇದ್ಯವಾಗಿದೆ. ಇಸ್ರಾಯೇಲರ ಸಮಾಧಾನದ ಬಲಿಗಳ ಅರ್ಪಣೆಗಳಿಂದ ಅವರು ಯೆಹೋವ ದೇವರಿಗೆ ನೈವೇದ್ಯ ಮಾಡುವಂಥದ್ದು ಆಗಿರಬೇಕು.

[29] “ಇದಲ್ಲದೆ ಆರೋನನಿಗೆ ಇದ್ದ ಪರಿಶುದ್ಧ ವಸ್ತ್ರಗಳು ಅವನ ತರುವಾಯ ಅವನ ಪುತ್ರರಿಗೆ ಆಗಬೇಕು. ಅವರು ಅಭಿಷಿಕ್ತರಾಗಿ ಅವುಗಳನ್ನು ಧರಿಸಿಕೊಂಡು, ಪ್ರತಿಷ್ಠಿತರಾಗಬೇಕು.

[30] ಅವನ ಬದಲಾಗಿ ಅವನ ಮಗನು ಯಾಜಕತ್ವವನ್ನು ನಡೆಸಿ, ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವಂತೆ ದೇವದರ್ಶನದ ಗುಡಾರದೊಳಗೆ ಪ್ರವೇಶಿಸಿದ ದಿನದಿಂದ ಅವುಗಳನ್ನು ಏಳು ದಿನಗಳವರೆಗೆ ತೊಟ್ಟುಕೊಳ್ಳಬೇಕು.

[31] “ಪ್ರತಿಷ್ಠೆಯ ಟಗರನ್ನು ತೆಗೆದುಕೊಂಡು ನೀನು ಅದರ ಮಾಂಸವನ್ನು ಪರಿಶುದ್ಧ ಸ್ಥಳದಲ್ಲಿ ಬೇಯಿಸಬೇಕು.

[32] ಆರೋನನೂ ಅವನ ಪುತ್ರರೂ ಟಗರಿನ ಮಾಂಸವನ್ನೂ ಪುಟ್ಟಿಯಲ್ಲಿರುವ ರೊಟ್ಟಿಯನ್ನೂ ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಊಟಮಾಡಬೇಕು.

[33] ಅವರನ್ನು ಪ್ರತಿಷ್ಠೆ ಮಾಡುವುದಕ್ಕೋಸ್ಕರ ಮತ್ತು ಪರಿಶುದ್ಧ ಮಾಡುವುದಕ್ಕೋಸ್ಕರ ಅವರಿಗಾಗಿ ಪ್ರಾಯಶ್ಚಿತ್ತ ಮಾಡಿದವುಗಳನ್ನು ಅವರೇ ಊಟಮಾಡಬೇಕು. ಇತರರು ಅದನ್ನು ಉಣ್ಣಬಾರದು. ಏಕೆಂದರೆ ಅವು ಪರಿಶುದ್ಧವಾದವುಗಳು.

[34] ಪ್ರತಿಷ್ಠೆ ಬಲಿ ಮಾಂಸದಲ್ಲಿಯೂ ರೊಟ್ಟಿಯಲ್ಲಿಯೂ ಮರುದಿನದವರೆಗೆ ಏನಾದರೂ ಉಳಿದರೆ ಅದನ್ನು ಬೆಂಕಿಯಿಂದ ಸುಡಬೇಕು. ಅದು ಪರಿಶುದ್ಧವಾಗಿರುವುದರಿಂದ ಅದನ್ನು ಮರುದಿನ ತಿನ್ನಬಾರದು.

[35] “ಹೀಗೆ ಆರೋನನಿಗೂ ಅವನ ಪುತ್ರಿರಿಗೂ ನಾನು ನಿನಗೆ ಆಜ್ಞಾಪಿಸಿದ ಎಲ್ಲವುಗಳ ಪ್ರಕಾರಮಾಡಿ, ಏಳು ದಿವಸ ಅವರನ್ನು ಪ್ರತಿಷ್ಠೆ ಕ್ರಮವನ್ನು ಮಾಡಬೇಕು.

[36] ಪ್ರತಿದಿನ ದೋಷಪರಿಹಾರಕ್ಕಾಗಿ ಒಂದು ಹೋರಿಯನ್ನು ಯಜ್ಞ ಮಾಡಬೇಕು. ಬಲಿಪೀಠವನ್ನು ಶುದ್ಧಿಮಾಡುವುದಕ್ಕಾಗಿ ಅದರ ಮೇಲೆ ಪಾಪ ಪರಿಹಾರದ ಬಲಿಯನ್ನು ಸಮರ್ಪಿಸಿ, ಅದನ್ನು ದೇವರ ಸೇವೆಗಾಗಿ ಪ್ರತಿಷ್ಠಿಸುವುದಕ್ಕಾಗಿ ಅಭಿಷೇಕಿಸಬೇಕು.

[37] ಏಳು ದಿವಸ ಬಲಿಪೀಠಕ್ಕೊಸ್ಕರ ಪ್ರಾಯಶ್ಚಿತ್ತ ಮಾಡಿ, ಅದನ್ನು ಪವಿತ್ರ ಮಾಡಬೇಕು. ಆಗ ಬಲಿಪೀಠವು ಅತಿ ಪರಿಶುದ್ಧವಾಗಿರುವುದು. ಬಲಿಪೀಠವನ್ನು ಮುಟ್ಟುವುದೆಲ್ಲಾ ಪವಿತ್ರವಾಗಿರಬೇಕು.

[38] “ಬಲಿಪೀಠದ ಮೇಲೆ ನೀನು ಅರ್ಪಿಸಬೇಕಾದದ್ದು ಇದೇ: ಒಂದು ವರ್ಷದ ಎರಡು ಕುರಿಮರಿಗಳನ್ನು ಪ್ರತಿದಿನ ಬಿಟ್ಟುಬಿಡದೆ ದಹನಬಲಿಯಾಗಿ ಅರ್ಪಿಸಬೇಕು.

[39] ಒಂದು ಕುರಿಮರಿಯನ್ನು ಮುಂಜಾನೆಯಲ್ಲಿಯೂ ಮತ್ತೊಂದನ್ನು ಸಾಯಂಕಾಲದಲ್ಲಿಯೂ ಸಮರ್ಪಿಸಬೇಕು.

[40] ಒಂದು ಲೀಟರ್ ಕುಟ್ಟಿ ತೆಗೆದ ಓಲಿವ್ ಎಣ್ಣೆಯನ್ನು ಸುಮಾರು ಒಂದುವರೆ ಕಿಲೋಗ್ರಾಂ ಗೋಧಿಹಿಟ್ಟಿಗೆ ಬೆರೆಸಿ, ಒಂದು ಲೀಟರ್ ದ್ರಾಕ್ಷಾರಸವನ್ನು ಸಮರ್ಪಣೆಗಾಗಿ ಆ ಮೊದಲನೆಯ ಕುರಿಯ ಸಮೇತ ಹೋಮ ಮಾಡಬೇಕು.

[41] ಇನ್ನೊಂದು ಕುರಿಮರಿಯನ್ನು ಸಂಜೆಯಲ್ಲಿ ಅರ್ಪಿಸಬೇಕು. ಬೆಳಿಗ್ಗೆ ಮಾಡಿದಂತೆಯೇ ಅದರ ಧಾನ್ಯ ಸಮರ್ಪಣೆಯನ್ನೂ ಪಾನದ ಅರ್ಪಣೆಯನ್ನೂ ಯೆಹೋವ ದೇವರಿಗೆ ಸುವಾಸನೆಯಾಗಿರುವಂತೆ ಬೆಂಕಿಯಿಂದ ಅರ್ಪಿಸಬೇಕು.

[42] “ಇದು ತಲತಲಾಂತರಗಳಲ್ಲಿಯೂ ನಿತ್ಯಕ್ಕೂ ದೇವದರ್ಶನದ ಗುಡಾರದ ಮುಂದೆ ಯೆಹೋವ ದೇವರ ಸನ್ನಿಧಿಯಲ್ಲಿ ನಾನು ನಿಮ್ಮ ಸಂಗಡ ಮಾತನಾಡುವುದಕ್ಕೆ ಸಂಧಿಸುವಲ್ಲಿ ಇದೇ ನಿತ್ಯವಾದ ದಹನಬಲಿಯಾಗಿರುವುದು.

[43] ಅಲ್ಲಿ ನಾನು ಇಸ್ರಾಯೇಲರನ್ನು ಸಂಧಿಸುವೆನು. ಅದು ನನ್ನ ಮಹಿಮೆಯಿಂದ ಪವಿತ್ರವಾಗುವುದು.

[44] “ನಾನು ದೇವದರ್ಶನದ ಗುಡಾರವನ್ನೂ ಬಲಿಪೀಠವನ್ನೂ ಪರಿಶುದ್ಧ ಮಾಡುವೆನು. ಆರೋನನನ್ನೂ ಅವನ ಪುತ್ರರನ್ನೂ ನನಗೆ ಯಾಜಕ ಸೇವೆಮಾಡುವಂತೆ ಪವಿತ್ರ ಮಾಡುವೆನು.

[45] ಇಸ್ರಾಯೇಲರ ಮಧ್ಯದಲ್ಲಿ ನಾನು ವಾಸಮಾಡಿ, ಅವರಿಗೆ ನಾನು ದೇವರಾಗಿರುವೆನು.

[46] ಅವರ ಮಧ್ಯದಲ್ಲಿ ನಾನು ವಾಸವಾಗಿರುವದಕ್ಕಾಗಿ ಅವರನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿದ ಅವರ ದೇವರಾದ ಯೆಹೋವ ದೇವರು ನಾನೇ ಎಂದು ಅವರಿಗೆ ತಿಳಿಯುವುದು. ನಾನೇ ಅವರ ದೇವರಾದ ಯೆಹೋವ ದೇವರು.

ವಿಮೋಚನಕಾಂಡ — Chapters