Skip to content
Opens in a new window
Listen to this chapter • 8:37

[1] ಮೋಶೆಯು ಬೆಟ್ಟದಿಂದ ಇಳಿಯದೆ ತಡಮಾಡಿದ್ದನ್ನು ಇಸ್ರಾಯೇಲರು ನೋಡಿದಾಗ, ಅವರು ಆರೋನನ ಬಳಿಗೆ ಕೂಡಿಬಂದು ಅವನಿಗೆ, “ನೀನು ಎದ್ದು ನಮ್ಮನ್ನು ಮುನ್ನಡೆಸಿಕೊಂಡು ಹೋಗುವ ದೇವರುಗಳನ್ನು ನಮಗಾಗಿ ಮಾಡು. ಏಕೆಂದರೆ ಈಜಿಪ್ಟ್ ದೇಶದೊಳಗಿಂದ ನಮ್ಮನ್ನು ಕರೆದುಕೊಂಡು ಬಂದ ಮನುಷ್ಯನಾದ ಈ ಮೋಶೆಗೆ ಏನಾಯಿತೋ ನಮಗೆ ತಿಳಿಯದು,” ಎಂದರು.

[2] ಅದಕ್ಕೆ ಆರೋನನು ಅವರಿಗೆ, “ನಿಮ್ಮ ಹೆಂಡತಿಯರ ಮತ್ತು ನಿಮ್ಮ ಪುತ್ರಪುತ್ರಿಯರ ಕಿವಿಗಳಲ್ಲಿರುವ ಚಿನ್ನದ ವಾಲೆಗಳನ್ನು ಬಿಚ್ಚಿ ನನ್ನ ಬಳಿಗೆ ತನ್ನಿರಿ,” ಎಂದನು.

[3] ಆಗ ಜನರೆಲ್ಲರೂ ತಮ್ಮ ಕಿವಿಗಳಲ್ಲಿದ್ದ ಚಿನ್ನದ ವಾಲೆಗಳನ್ನು ಕಿತ್ತು ಆರೋನನ ಬಳಿಗೆ ತಂದರು.

[4] ಅವನು ಅವುಗಳನ್ನು ಅವರ ಕೈಗಳಿಂದ ತೆಗೆದುಕೊಂಡು, ಉಳಿಯಿಂದ ರೂಪಿಸಿ, ಎರಕ ಹೊಯ್ದು, ಕರುವಾಗಿ ಮಾಡಿದನು. ಆಗ ಅವರು, “ಇಸ್ರಾಯೇಲರೇ, ನಿಮ್ಮನ್ನು ಈಜಿಪ್ಟ್ ದೇಶದೊಳಗಿನಿಂದ ಬರಮಾಡಿದ ನಿಮ್ಮ ದೇವರುಗಳು ಇವೇ,” ಎಂದರು.

[5] ಆರೋನನು ಅದನ್ನು ನೋಡಿ ಅದರ ಮುಂದೆ ಬಲಿಪೀಠವನ್ನು ಕಟ್ಟಿದನು. “ನಾಳೆ ಯೆಹೋವ ದೇವರಿಗೆ ಹಬ್ಬ,” ಎಂದು ಪ್ರಕಟಿಸಿದನು.

[6] ಮರುದಿನ ಬೆಳಿಗ್ಗೆ ಜನರು ಎದ್ದು, ದಹನಬಲಿಗಳನ್ನೂ, ಸಮಾಧಾನ ಬಲಿಗಳನ್ನೂ ಸಮರ್ಪಿಸಿದರು. ಬಳಿಕ ತಿನ್ನಲೂ ಕುಡಿಯಲೂ ಕುಳಿತುಕೊಂಡರು, ಆಮೇಲೆ ಎದ್ದು ಕುಣಿದಾಡಿದರು.

[7] ಆಗ ಯೆಹೋವ ದೇವರು ಮೋಶೆಗೆ, “ನೀನು ಇಳಿದು ಹೋಗು ಏಕೆಂದರೆ ನೀನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ನಿನ್ನ ಜನರು ತಮ್ಮನ್ನು ಕೆಡಿಸಿಕೊಂಡಿದ್ದಾರೆ.

[8] ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಬೇಗನೆ ಬಿಟ್ಟು, ತಮಗೆ ಎರಕ ಹೊಯ್ದ ಕರುವನ್ನು ಮಾಡಿಕೊಂಡು, ಅದನ್ನು ಆರಾಧಿಸುತ್ತಾ, ಅದಕ್ಕೆ ಬಲಿ ಅರ್ಪಿಸಿ, ‘ಇಸ್ರಾಯೇಲರೇ, ನಿಮ್ಮನ್ನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ನಿಮ್ಮ ದೇವರುಗಳು ಇವುಗಳೇ,’ ಎಂದು ಹೇಳುತ್ತಿದ್ದಾರೆ.”

[9] ಇದಲ್ಲದೆ ಯೆಹೋವ ದೇವರು ಮೋಶೆಗೆ, “ನಾನು ಈ ಜನರನ್ನು ನೋಡಿದ್ದೇನೆ. ಇವರು ಹಟಮಾರಿ ಜನರೇ,

[10] ಹೀಗಿರುವುದರಿಂದ ನನ್ನ ಕೋಪಾಗ್ನಿಯು ಅವರ ಮೇಲೆ ಉರಿದು ಅವರನ್ನು ದಹಿಸಿಬಿಡುವಂತೆ ನನ್ನನ್ನು ಬಿಡು. ತರುವಾಯ ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡುವೆನು,” ಎಂದರು.

[11] ಅದಕ್ಕೆ ಮೋಶೆ, ತನ್ನ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ ಬೇಡಿಕೊಂಡು ಹೇಳಿದ್ದೇನೆಂದರೆ, “ಯೆಹೋವ ದೇವರೇ, ನೀವು ಮಹಾಶಕ್ತಿಯಿಂದಲೂ, ಬಲವುಳ್ಳ ಕೈಯಿಂದಲೂ ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿದ ನಿಮ್ಮ ಜನರ ಮೇಲೆ ಏಕೆ ನಿಮ್ಮ ಕೋಪವು ಉರಿಯುವುದು?

[12] ‘ಕೇಡಿನ ನಿಮಿತ್ತವೂ ಬೆಟ್ಟಗಳಲ್ಲಿ ಅವರನ್ನು ಸಾಯಿಸಿ, ಭೂಮಿಯ ಮೇಲಿನಿಂದ ಅವರನ್ನು ಅಳಿಸಿಬಿಡುವುದಕ್ಕೂ, ದೇವರು ಅವರನ್ನು ಹೊರಗೆ ಬರಮಾಡಿದ್ದಾರೆ,’ ಎಂದು ಈಜಿಪ್ಟಿನವರು ಏಕೆ ಹೇಳಬೇಕು? ತಾವು ಕೋಪಾಗ್ನಿಯನ್ನು ಬಿಟ್ಟು ತಿರುಗಿಕೊಳ್ಳಿ. ನಿಮ್ಮ ಜನರಿಗೆ ವಿರೋಧವಾದ ಈ ಕೇಡಿನ ವಿಷಯದಲ್ಲಿ ತಮ್ಮ ಮನಸ್ಸನ್ನು ಬದಲಾಯಿಸಿರಿ.

[13] ಆ ನಿಮ್ಮ ಸೇವಕರಾದ ಅಬ್ರಹಾಮನನ್ನೂ, ಇಸಾಕನನ್ನೂ, ಇಸ್ರಾಯೇಲನನ್ನೂ ಜ್ಞಾಪಕಮಾಡಿಕೊಳ್ಳಿರಿ, ಯಾರಿಗೆ ನೀವು ಆಣೆಯಿಟ್ಟು ಪ್ರಮಾಣಮಾಡಿ: ‘ಆಕಾಶದ ನಕ್ಷತ್ರಗಳ ಹಾಗೆ ನಿನ್ನ ಸಂತತಿಯನ್ನು ಹೆಚ್ಚಿಸಿ, ನಾನು ಹೇಳಿದ ಈ ದೇಶವನ್ನು ನಿಮ್ಮ ಸಂತತಿಯವರಿಗೆ ಕೊಡುವೆನು ಮತ್ತು ಅವರು ನಿತ್ಯವಾಗಿ ಸ್ವಾಧೀನವಾಗಿಟ್ಟುಕೊಳ್ಳುವರು’ ಎಂದು ಮಾತುಕೊಡಲಿಲ್ಲವೆ?” ಎಂದನು.

[14] ಆಗ ಯೆಹೋವ ದೇವರು ತಮ್ಮ ಜನರಿಗೆ ಮಾಡುವೆನೆಂದು ಹೇಳಿದ ಕೇಡಿನ ವಿಷಯದಲ್ಲಿ ಮನಸ್ಸನ್ನು ಮಾರ್ಪಡಿಸಿಕೊಂಡರು.

[15] ಮೋಶೆಯು ತಿರುಗಿಕೊಂಡು ಎರಡೂ ಬದಿಯಲ್ಲಿ ಬರೆದಿರುವ ಸಾಕ್ಷಿಯ ಎರಡು ಹಲಗೆಗಳನ್ನು ಕೈಯಲ್ಲಿ ಹಿಡಿದುಕೊಂಡು ಬೆಟ್ಟದಿಂದ ಇಳಿದು ಬಂದನು. ಆ ಹಲಗೆಗಳ ಎರಡೂ ಬದಿಗಳಲ್ಲಿ ಅಂದರೆ ಈ ಕಡೆಯಲ್ಲಿಯೂ ಮತ್ತು ಆ ಕಡೆಯಲ್ಲಿಯೂ ಬರಹವಿತ್ತು.

[16] ಆ ಹಲಗೆಗಳು ದೇವರ ಕೆಲಸಗಳಾಗಿದ್ದವು. ಆ ಹಲಗೆಗಳ ಮೇಲೆ ಕೆತ್ತಿದ ಬರಹವು ದೇವರದ್ದೇ ಆಗಿತ್ತು.

[17] ಯೆಹೋಶುವನು ಜನರು ಕೂಗುತ್ತಿದ್ದ ಶಬ್ದವನ್ನು ಕೇಳಿ ಮೋಶೆಗೆ, “ಪಾಳೆಯದ ಕಡೆಯಿಂದ ಯುದ್ಧದ ಶಬ್ದವು ಕೇಳಿಸುತ್ತದೆ,” ಎಂದು ಹೇಳಿದನು.

[18] ಅದಕ್ಕೆ ಮೋಶೆಯು ಹೀಗೆ ಉತ್ತರಿಸಿದನು: “ಅದು ಜಯಧ್ವನಿಯು ಅಲ್ಲ, ಅಪಜಯದ ಧ್ವನಿಯೂ ಅಲ್ಲ. ಆದರೆ ನನಗೆ ಹಾಡುವ ಧ್ವನಿಯು ಕೇಳಿಸುತ್ತಿದೆ.”

[19] ಇದಾದ ಮೇಲೆ ಮೋಶೆ ಪಾಳೆಯದ ಸಮೀಪಕ್ಕೆ ಬಂದು ಆ ಕರುವನ್ನೂ, ಅವರ ಕುಣಿದಾಟವನ್ನೂ ನೋಡಿದಾಗ, ಮೋಶೆಯು ಕೋಪಗೊಂಡು ಕೈಯಲ್ಲಿದ್ದ ಹಲಗೆಗಳನ್ನು ಬೆಟ್ಟದ ಅಡಿಯಲ್ಲಿ ಬಿಸಾಡಿ ಅವುಗಳನ್ನು ಒಡೆದುಬಿಟ್ಟನು.

[20] ಅವರು ಮಾಡಿದ ಕರುವನ್ನು ಅವನು ತೆಗೆದುಕೊಂಡು, ಅದನ್ನು ಬೆಂಕಿಯಿಂದ ಸುಟ್ಟು ಪುಡಿಯಾಗುವವರೆಗೆ ಅರೆದು ನೀರಿನ ಮೇಲೆ ಚೆಲ್ಲಿ, ಆ ನೀರನ್ನು ಇಸ್ರಾಯೇಲರು ಕುಡಿಯುವಂತೆ ಮಾಡಿದನು.

[21] ಮೋಶೆಯು ಆರೋನನಿಗೆ, “ಈ ಜನರ ಮೇಲೆ ದೊಡ್ಡ ಪಾಪವನ್ನು ನೀನು ಬರಮಾಡುವಂತೆ ಅವರು ನಿನಗೆ ಏನು ಮಾಡಿದರು?” ಎಂದು ಕೇಳಿದನು.

[22] ಅದಕ್ಕೆ ಆರೋನನು, “ನನ್ನ ಒಡೆಯನೇ ಕೋಪಗೊಳ್ಳಬೇಡಿ ಈ ಜನರು ಕೆಡುಕಿನ ಮನಸ್ಸಿನವರಾಗಿದ್ದಾರೆಂದು ನೀವು ಬಲ್ಲಿರಿ.

[23] ಅವರು ನನಗೆ, ‘ನಮ್ಮನ್ನು ಮುನ್ನಡೆಸಿಕೊಂಡು ಹೋಗುವ ದೇವರುಗಳನ್ನು ಮಾಡು. ಏಕೆಂದರೆ ಈಜಿಪ್ಟ್ ದೇಶದೊಳಗಿಂದ ನಮ್ಮನ್ನು ಬರಮಾಡಿದ ಈ ಮೋಶೆಗೆ ಏನಾಯಿತೋ ನಮಗೆ ತಿಳಿಯದು,’ ಎಂದು ಹೇಳಿದರು.

[24] ಆದ್ದರಿಂದ ನಾನು ಅವರಿಗೆ, ‘ಚಿನ್ನ ಇದ್ದವರು ಅದನ್ನು ತರಲಿ,’ ಎಂದೆನು. ಅವರು ಅದನ್ನು ನನಗೆ ಕೊಟ್ಟರು. ಆಗ ನಾನು ಅದನ್ನು ಬೆಂಕಿಯಲ್ಲಿ ಹಾಕಿದಾಗ, ಈ ಕರುವು ಉಂಟಾಯಿತು,” ಎಂದನು.

[25] ಮೋಶೆಯು ಜನರು ಕ್ರಮವಿಲ್ಲದಿರುವುದನ್ನು ಕಂಡನು. ಆರೋನನು ಅವರನ್ನು ಮಿತಿಮೀರಿ ಇಷ್ಟಬಂದಂತೆ ಮಾಡುವದಕ್ಕೆ ಅವಕಾಶ ಮಾಡಿಕೊಟ್ಟದ್ದರಿಂದ ಅವರ ವೈರಿಗಳ ಮುಂದೆ ಅಪಹಾಸ್ಯಕ್ಕೆ ಆಸ್ಪದವಾಯಿತು.

[26] ಮೋಶೆಯು ಪಾಳೆಯದ ಬಾಗಿಲಲ್ಲಿ ನಿಂತುಕೊಂಡು, “ಯೆಹೋವ ದೇವರ ಪಕ್ಷದವರೆಲ್ಲರೂ ನನ್ನ ಬಳಿಗೆ ಬರಲಿ,” ಎಂದನು. ಆಗ ಲೇವಿಯರೆಲ್ಲರು ಅವನ ಬಳಿಗೆ ಕೂಡಿಬಂದರು.

[27] ಆಗ ಅವನು ಅವರಿಗೆ, “ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ಪ್ರತಿಯೊಬ್ಬನು ತನ್ನ ಖಡ್ಗವನ್ನು ಪಕ್ಕದಲ್ಲಿ ಕಟ್ಟಿಕೊಂಡು ಪಾಳೆಯದಲ್ಲೆಲ್ಲಾ ಒಂದು ದ್ವಾರದಿಂದ ಇನ್ನೊಂದು ದ್ವಾರಕ್ಕೆ ಹೋಗಿ ಹೋಗುತ್ತಾ ಬರುತ್ತಾ ತನ್ನ ಸಹೋದರನನ್ನೂ, ತನ್ನ ಜೊತೆಗಾರನನ್ನೂ ಮತ್ತು ನೆರೆಹೊರೆಯವನೆಂದು ಲಕ್ಷಿಸದೆ ಕೊಲ್ಲಲಿ,’ ” ಎಂದು ಹೇಳಿದನು.

[28] ಲೇವಿಯರು ಮೋಶೆಯು ಆಜ್ಞಾಪಿಸಿದಂತೆ ಮಾಡಿದರು. ಆ ದಿನ ಹೆಚ್ಚು ಕಡಿಮೆ ಮೂರು ಸಾವಿರ ಜನರು ಸತ್ತರು.

[29] ಆಗ ಮೋಶೆ ಆ ಲೇವಿಯರಿಗೆ, “ಈ ದಿನ ನಿಮ್ಮಲ್ಲಿ ಪ್ರತಿಯೊಬ್ಬನು ಮಗನನ್ನಾದರೂ, ಅಣ್ಣತಮ್ಮಂದಿರನ್ನಾದರೂ ಲಕ್ಷ್ಯಕ್ಕೆ ತೆಗೆದುಕೊಳ್ಳದೆ, ನಿಮ್ಮನ್ನೇ ಯೆಹೋವ ದೇವರ ಸೇವೆಗೆ ಪ್ರತಿಷ್ಠಾಪಿಸಿಕೊಂಡಿದ್ದೀರಿ. ಆದ್ದರಿಂದ ಅವರು ಈ ದಿನ ನಿಮ್ಮನ್ನು ಆಶೀರ್ವದಿಸಿರುವರು,” ಎಂದು ಹೇಳಿದನು.

[30] ಮರುದಿನದಲ್ಲಿ, ಮೋಶೆಯು ಜನರಿಗೆ, “ನೀವು ದೊಡ್ಡ ಪಾಪವನ್ನು ಮಾಡಿದ್ದೀರಿ. ಆದ್ದರಿಂದ ನಾನು ಈಗ ಬೆಟ್ಟವನ್ನು ಹತ್ತಿ ಯೆಹೋವ ದೇವರ ಬಳಿಗೆ ಹೋಗುವೆನು. ಒಂದು ವೇಳೆ ನಿಮ್ಮ ಪಾಪಕ್ಕಾಗಿ ನಾನು ಪ್ರಾಯಶ್ಚಿತ್ತ ಮಾಡಿಕೊಳ್ಳಬಹುದು,” ಎಂದನು.

[31] ಹೀಗೆ ಮೋಶೆಯು ಯೆಹೋವ ದೇವರ ಬಳಿಗೆ ತಿರುಗಿ ಹೋಗಿ, “ಅಯ್ಯೋ, ಈ ಜನರು ದೊಡ್ಡ ಪಾಪವನ್ನು ಮಾಡಿದ್ದಾರೆ. ಅವರು ತಮಗೆ ಚಿನ್ನದ ದೇವರುಗಳನ್ನು ಮಾಡಿಕೊಂಡಿದ್ದಾರೆ.

[32] ಆದರೂ ಈಗ ನೀವು ಅವರ ಪಾಪವನ್ನು ಕ್ಷಮಿಸಬೇಕು. ಇಲ್ಲವಾದರೆ ನೀವು ಬರೆದ ಗ್ರಂಥದಿಂದ ನನ್ನ ಹೆಸರನ್ನು ಅಳಿಸಿಬಿಡಿ,” ಎಂದು ಬೇಡಿಕೊಂಡನು.

[33] ಅದಕ್ಕೆ ಯೆಹೋವ ದೇವರು ಮೋಶೆಗೆ, “ನನಗೆ ವಿರೋಧವಾಗಿ ಪಾಪಮಾಡಿದವನ ಹೆಸರನ್ನೇ ನಾನು ನನ್ನ ಪುಸ್ತಕದಿಂದ ಅಳಿಸಿಬಿಡುವೆನು.

[34] ಆದರೆ ಈಗ ನೀನು ಹೋಗಿ, ಜನರನ್ನು ನಿನಗೆ ನಾನು ಹೇಳಿದ ಸ್ಥಳಕ್ಕೆ ಕರೆದುಕೊಂಡು ಹೋಗು. ಇಗೋ, ನನ್ನ ದೂತನು ನಿನ್ನನ್ನು ಮುನ್ನಡೆಸುವನು. ಆದರೂ ನಾನು ವಿಚಾರಿಸುವ ದಿನ ಬಂದಾಗ ಅವರ ಪಾಪಕ್ಕೆ ತಕ್ಕಂತೆ ಅವರನ್ನು ಶಿಕ್ಷಿಸುತ್ತೇನೆ,” ಎಂದರು.

[35] ಹೀಗೆ ಆರೋನನು ಮಾಡಿದ ಕರುವನ್ನು ಅವರು ಆರಾಧಿಸಿದ್ದರಿಂದ ಯೆಹೋವ ದೇವರು ಜನರನ್ನು ಉಪದ್ರವದಿಂದ ಬಾಧಿಸಿದರು.

ವಿಮೋಚನಕಾಂಡ — Chapters