[1] ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
[2] “ಇಸ್ರಾಯೇಲರಲ್ಲಿ ಹುಟ್ಟಿರುವ ಪ್ರತಿಯೊಂದು ಚೊಚ್ಚಲ ಗಂಡನ್ನು ನನಗಾಗಿ ಮೀಸಲಾಗಿಡು. ಮನುಷ್ಯರಾಗಿರಲಿ, ಪಶುಪ್ರಾಣಿಗಳಾಗಿರಲಿ ಪ್ರಥಮ ಗರ್ಭಫಲವು ನನ್ನದಾಗಿದೆ,” ಎಂದರು.
[3] ಆಗ ಮೋಶೆಯು ಜನರಿಗೆ, “ನೀವು ಈಜಿಪ್ಟಿನ ದಾಸತ್ವದಿಂದ ಹೊರಬಂದ ಈ ದಿನವನ್ನು ಜ್ಞಾಪಕಮಾಡಿಕೊಳ್ಳಿರಿ. ಏಕೆಂದರೆ ಯೆಹೋವ ದೇವರು ನಿಮ್ಮನ್ನು ತಮ್ಮ ಭುಜಬಲದಿಂದ ಅಲ್ಲಿಂದ ಹೊರಗೆ ಬರಮಾಡಿದ್ದಾರೆ. ಹೀಗಿರುವುದರಿಂದ ಈ ದಿನ ನೀವು ಹುಳಿರೊಟ್ಟಿಯನ್ನು ತಿನ್ನಬಾರದು.
[4] ಅಬೀಬ ತಿಂಗಳಿನ ಈ ದಿನದಲ್ಲಿ ನೀವು ಹೊರಗೆ ಬಂದಿದ್ದೀರಿ.
[5] ಆದ್ದರಿಂದ ಯೆಹೋವ ದೇವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಹಾಲೂ ಜೇನೂ ಹರಿಯುವ ದೇಶಕ್ಕೆ ಅಂದರೆ ಕಾನಾನ್ಯರ, ಹಿತ್ತಿಯರ, ಅಮೋರಿಯರ, ಹಿವ್ವಿಯರ, ಯೆಬೂಸಿಯರ ದೇಶಕ್ಕೆ ನಿಮ್ಮನ್ನು ಕರೆತಂದು ಅದನ್ನು ನಿಮಗೆ ಕೊಟ್ಟಾಗ ಈ ಹಬ್ಬವನ್ನು ಈ ತಿಂಗಳಲ್ಲಿ ಆಚರಿಸಬೇಕು.
[6] ನೀವು ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿವಸ ತಿನ್ನಬೇಕು. ಏಳನೆಯ ದಿನದಲ್ಲಿ ಯೆಹೋವ ದೇವರಿಗೆ ಹಬ್ಬವನ್ನಾಚರಿಸಬೇಕು.
[7] ಆ ಏಳು ದಿನಗಳಲ್ಲಿ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕು. ಅಲ್ಲದೆ ನಿಮ್ಮ ಬಳಿಯಲ್ಲಿ ಹುಳಿಯಾಗಲಿ ಇಲ್ಲವೆ ಹುಳಿಹಿಟ್ಟಾಗಲಿ ನಿಮ್ಮ ಯಾವ ಮೇರೆಯಲ್ಲೂ ಕಾಣಬಾರದು.
[8] ಆ ದಿನದಲ್ಲಿ ನಿಮ್ಮ ಮಕ್ಕಳಿಗೆ, ‘ನಾವು ಈಜಿಪ್ಟಿನಿಂದ ಹೊರಗೆ ಬಂದಾಗ ಯೆಹೋವ ದೇವರು ನಮಗೆ ಮಾಡಿದ್ದನ್ನು ಸ್ಮರಿಸುವುದಕ್ಕಾಗಿ ಇದನ್ನು ಆಚರಿಸುತ್ತೇವೆ,’ ಎಂದು ತಿಳಿಸಬೇಕು.
[9] ಏಕೆಂದರೆ ಯೆಹೋವ ದೇವರು ನಿಮ್ಮನ್ನು ತಮ್ಮ ಭುಜಬಲದಿಂದ ಈಜಿಪ್ಟಿನಿಂದ ಹೊರಗೆ ಬರಮಾಡಿದ್ದಾರೆ. ಆದ್ದರಿಂದ ದೇವರ ನಿಯಮವು ನಿಮ್ಮ ಬಾಯಲ್ಲಿ ಇರುವಂತೆ, ಈ ಆಚರಣೆಯು ನಿಮ್ಮ ಕೈಯಲ್ಲಿ ಗುರುತಾಗಿಯೂ ನಿಮ್ಮ ಹಣೆಯಲ್ಲಿ ಜ್ಞಾಪಕಾರ್ಥವಾಗಿಯೂ ಇರಬೇಕು.
[10] ಹೀಗಿರುವುದರಿಂದ ನೀವು ಪ್ರತಿ ವರುಷವು ನೇಮಿತವಾದ ಕಾಲದಲ್ಲಿ ಈ ಶಾಸನವನ್ನು ಕೈಗೊಳ್ಳಬೇಕು.
[11] “ಯೆಹೋವ ದೇವರು ನಿಮಗೂ ನಿಮ್ಮ ಪಿತೃಗಳಿಗೂ ಪ್ರಮಾಣ ಮಾಡಿದ ಪ್ರಕಾರ, ನಿಮ್ಮನ್ನು ಕಾನಾನ್ಯರ ದೇಶಕ್ಕೆ ಬರಮಾಡಿ, ಅದನ್ನು ನಿಮಗೆ ಕೊಟ್ಟನಂತರ,
[12] ನಿಮ್ಮಲ್ಲಿಯೂ ನಿಮ್ಮ ಪಶುಪ್ರಾಣಿಗಳಲ್ಲಿಯೂ ಹುಟ್ಟುವ ಪ್ರತಿಯೊಂದು ಗರ್ಭದ ಪ್ರಥಮ ಫಲವನ್ನು ನೀವು ಯೆಹೋವ ದೇವರಿಗೆ ಕೊಡಬೇಕು.
[13] ಕತ್ತೆಯ ಚೊಚ್ಚಲು ಮರಿಗೆ ಬದಲಾಗಿ ಕುರಿಮರಿಯನ್ನು ಕೊಟ್ಟು ವಿಮೋಚಿಸಿಕೊಳ್ಳಬೇಕು. ಹಾಗೆ ವಿಮೋಚಿಸಿಕೊಳ್ಳದೆ ಹೋದರೆ ಅದರ ಕುತ್ತಿಗೆ ಮುರಿಯಬೇಕು. ಮನುಷ್ಯರಲ್ಲಿ ಚೊಚ್ಚಲ ಗಂಡು ಮಕ್ಕಳನ್ನು ಬದಲುಕೊಟ್ಟು, ವಿಮೋಚಿಸಲೇಬೇಕು.
[14] “ಮುಂದೆ ಬರುವ ಕಾಲದಲ್ಲಿ ನಿಮ್ಮ ಪುತ್ರರು ನಿಮಗೆ, ‘ಇದರ ಅರ್ಥವೇನು?’ ಎಂದು ಕೇಳುವಾಗ, ನೀವು ಅವರಿಗೆ, ‘ಯೆಹೋವ ದೇವರು ತಮ್ಮ ಭುಜಬಲದಿಂದ ನಮ್ಮನ್ನು ಈಜಿಪ್ಟಿನ ದಾಸತ್ವದೊಳಗಿಂದ ಹೊರಗೆ ಬರಮಾಡಿದ್ದಾರೆ.
[15] ಫರೋಹನು ಹಟಮಾರಿತನದಿಂದ ನಮ್ಮನ್ನು ಕಳುಹಿಸದೆ ಇದ್ದಾಗ, ಯೆಹೋವ ದೇವರು ಈಜಿಪ್ಟ್ ದೇಶದಲ್ಲಿ ಚೊಚ್ಚಲಾದದ್ದನ್ನೆಲ್ಲಾ ಎಂದರೆ, ಮನುಷ್ಯರ ಹಾಗೂ ಪಶುಪ್ರಾಣಿಗಳ ಚೊಚ್ಚಲಾದವುಗಳನ್ನು ಕೊಂದುಹಾಕಿದರು. ಆದ್ದರಿಂದ ಚೊಚ್ಚಲ ಗಂಡುಗಳನ್ನೆಲ್ಲಾ ಯೆಹೋವ ದೇವರಿಗೆ ಅರ್ಪಿಸುತ್ತೇವೆ. ನಮ್ಮ ಪುತ್ರರಲ್ಲಿ ಚೊಚ್ಚಲಾದವರೆಲ್ಲರನ್ನು ವಿಮೋಚಿಸುತ್ತೇವೆ,’
[16] ಇದು ನಿಮ್ಮ ಕೈಯಲ್ಲಿ ಗುರುತಾಗಿಯೂ ನಿಮ್ಮ ಹಣೆಯ ಮೇಲೆ ಸಂಕೇತವಾಗಿಯೂ ಇರಲಿ. ಏಕೆಂದರೆ ಯೆಹೋವ ದೇವರು ತಮ್ಮ ಭುಜಬಲದಿಂದ ನಮ್ಮನ್ನು ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದ್ದಾರೆ ಎಂದು ಹೇಳಬೇಕು,” ಎಂದರು.
[17] ಫರೋಹನು ಜನರನ್ನು ಕಳುಹಿಸಿಬಿಟ್ಟಾಗ, ಫಿಲಿಷ್ಟಿಯರ ದೇಶದ ದಾರಿಯು ಸಮೀಪವಿದ್ದರೂ ದೇವರು ಅವರನ್ನು ಅದರಲ್ಲಿ ನಡೆಸಲಿಲ್ಲ. ಏಕೆಂದರೆ ದೇವರು, “ಜನರು ಯುದ್ಧವನ್ನು ನೋಡಿ, ಮನಸ್ಸನ್ನು ಬೇರೆಮಾಡಿಕೊಂಡು, ಈಜಿಪ್ಟಿಗೆ ಹಿಂದಿರುಗಿಯಾರು,” ಎಂದು ಹೇಳಿದರು.
[18] ಹೀಗಿರುವುದರಿಂದ ಯೆಹೋವ ದೇವರು ಜನರನ್ನು ಕೆಂಪುಸಮುದ್ರದ ಮರುಭೂಮಿಯಲ್ಲಿ ಸುತ್ತಿಕೊಂಡು ಹೋಗುವಂತೆ ಮಾಡಿದರು. ಇಸ್ರಾಯೇಲರು ಯುದ್ಧಸನ್ನದ್ಧರಾಗಿ ಈಜಿಪ್ಟ್ ದೇಶದೊಳಗಿಂದ ಹೋದರು.
[19] ಆಗ ಮೋಶೆಯು ತನ್ನೊಂದಿಗೆ ಯೋಸೇಫನ ಎಲುಬುಗಳನ್ನು ತೆಗೆದುಕೊಂಡು ಹೋದನು. ಏಕೆಂದರೆ ಯೋಸೇಫನು ಇಸ್ರಾಯೇಲರಿಗೆ, “ದೇವರು ನಿಜವಾಗಿಯೂ ನಿಮ್ಮ ಸಹಾಯಕ್ಕೆ ಬರುವರು. ಆಗ ನೀವು ನನ್ನ ಎಲುಬುಗಳನ್ನು ಇಲ್ಲಿಂದ ನಿಮ್ಮ ಕೂಡ ತೆಗೆದುಕೊಂಡು ಹೋಗಬೇಕು,” ಎಂದು ಹೇಳಿ ಅವರಿಂದ ದೃಢಪ್ರಮಾಣ ಮಾಡಿಸಿದ್ದನು.
[20] ಹೀಗೆ ಅವರು ಸುಕ್ಕೋತಿನಿಂದ ಪ್ರಯಾಣಮಾಡಿ, ಏತಾಮಿನ ಮರುಭೂಮಿಯ ಅಂಚಿನಲ್ಲಿ ಇಳಿದುಕೊಂಡರು.
[21] ಇದಲ್ಲದೆ ಅವರು ಹಗಲೂ ರಾತ್ರಿಯೂ ಪ್ರಯಾಣ ಮಾಡುವ ಹಾಗೆ ಯೆಹೋವ ದೇವರು ಹಗಲಲ್ಲಿ ಅವರಿಗೆ ದಾರಿ ತೋರಿಸುವುದಕ್ಕೆ ಮೇಘದ ಸ್ತಂಭದಲ್ಲಿಯೂ ರಾತ್ರಿಯಲ್ಲಿ ಅವರಿಗೆ ಬೆಳಕು ಕೊಡುವುದಕ್ಕೆ ಅಗ್ನಿಯ ಸ್ತಂಭದಲ್ಲಿಯೂ ಅವರ ಮುಂದೆ ಹೋದರು.
[22] ದೇವರು ಹಗಲಲ್ಲಿ ಮೇಘಸ್ತಂಭವನ್ನೂ ರಾತ್ರಿಯಲ್ಲಿ ಅಗ್ನಿಸ್ತಂಭವನ್ನೂ ಜನರ ಎದುರಿನಿಂದ ತೆಗೆದುಬಿಡಲಿಲ್ಲ.