[1] ಬೆಚಲಯೇಲನು ಜಾಲಿ ಮರದಿಂದ ಸುಮಾರು ಒಂದು ಮೀಟರ್ ಉದ್ದ ಮತ್ತು ಅರವತ್ತೆಂಟು ಸೆಂಟಿಮೀಟರ್ ಅಗಲ ಮತ್ತು ಎತ್ತರವಾಗಿರುವ ಮಂಜೂಷವನ್ನು ಮಾಡಿದನು.
[2] ಅದನ್ನು ಶುದ್ಧ ಬಂಗಾರದಿಂದ ಒಳಗೂ ಹೊರಗೂ ಹೊದಿಸಿ, ಅದರ ಸುತ್ತಲೂ ಬಂಗಾರದ ತೋರಣವನ್ನು ಮಾಡಿದನು.
[3] ಅದರ ನಾಲ್ಕು ಬಂಗಾರದ ಬಳೆಗಳನ್ನು ಎರಕಹೊಯಿಸಿ ಅದರ ನಾಲ್ಕು ಮೂಲೆಗಳಲ್ಲಿ ಎಂದರೆ ಒಂದು ಕಡೆಯಲ್ಲಿ ಎರಡು ಬಳೆಗಳನ್ನು ಮತ್ತೊಂದು ಕಡೆಯಲ್ಲಿ ಎರಡು ಬಳೆಗಳನ್ನು ಇರಿಸಿದನು.
[4] ಆಮೇಲೆ ಜಾಲಿ ಮರದ ಕೋಲುಗಳನ್ನು ಮಾಡಿಸಿ, ಅವುಗಳಿಗೆ ಬಂಗಾರದಿಂದ ಹೊದಿಸಬೇಕು.
[5] ಮಂಜೂಷವನ್ನು ಹೊರುವುದಕ್ಕಾಗಿ ಕೋಲುಗಳನ್ನು ಮಂಜೂಷದ ಎರಡು ಕಡೆಗಳಲ್ಲಿರುವ ಬಳೆಗಳಲ್ಲಿ ಸೇರಿಸಿದನು.
[6] ಇದಲ್ಲದೆ ಸುಮಾರು ನೂರಹತ್ತು ಸೆಂಟಿಮೀಟರ್ ಉದ್ದವೂ ಎಪ್ಪತ್ತು ಸೆಂಟಿಮೀಟರ್ ಅಗಲವೂ ಇರುವ ಕರುಣಾಸನವನ್ನು ಶುದ್ಧ ಬಂಗಾರದಿಂದ ಮಾಡಿದನು.
[7] ಅವನು ಕರುಣಾಸನದ ಎರಡು ತುದಿಗಳಲ್ಲಿ ಎರಡು ಬಂಗಾರದಿಂದ ಕೆರೂಬಿಗಳನ್ನು ನಕಾಸಿ ಕೆಲಸದಿಂದ ಮಾಡಿದನು.
[8] ಒಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನೂ ಇನ್ನೊಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನೂ ಮಾಡಿದನು. ಹೀಗೆ ಕರುಣಾಸನದ ಎರಡೂ ಬದಿಗಳಲ್ಲಿ ಕೆರೂಬಿಯನ್ನು ಮಾಡಿದನು.
[9] ಆ ಕೆರೂಬಿಗಳು ತಮ್ಮ ರೆಕ್ಕೆಗಳನ್ನು ಮೇಲಕ್ಕೆ ಚಾಚಿರುವಂತೆಯೂ ಕರುಣಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚುವಂತೆಯೂ ಇದ್ದವು. ಕೆರೂಬಿಗಳ ಮುಖಗಳು ಎದುರುಬದುರಾಗಿ ಕರುಣಾಸನವನ್ನು ನೋಡುತ್ತಿದ್ದವು.
[10] ಸುಮಾರು ತೊಂಬತ್ತು ಸೆಂಟಿಮೀಟರ್ ಉದ್ದ, ನಲವತ್ತೈದು ಸೆಂಟಿಮೀಟರ್ ಅಗಲ ಮತ್ತು ಅರವತ್ತೆಂಟು ಸೆಂಟಿಮೀಟರ್ ಎತ್ತರ ಇರುವ ಮೇಜನ್ನು ಜಾಲಿ ಮರದಿಂದ ಮಾಡಿದನು.
[11] ಆಮೇಲೆ ಅದನ್ನು ಶುದ್ಧ ಬಂಗಾರದಿಂದ ಹೊದಿಸಿ, ಸುತ್ತಲೂ ಬಂಗಾರದ ತೋರಣ ಕಟ್ಟಿದನು.
[12] ಸುತ್ತಲೂ ಅಂಗೈ ಅಗಲದ ಅಡ್ಡಪಟ್ಟಿಯನ್ನು ಮಾಡಿಸಿ, ಅಂಚಿನ ಸುತ್ತಲೂ ಬಂಗಾರದ ತೋರಣವನ್ನು ಕಟ್ಟಿದರು.
[13] ಮೇಜಿಗೆ ಬಂಗಾರದ ನಾಲ್ಕು ಬಳೆಗಳನ್ನು ಎರಕ ಹೊಯ್ದು, ಅವುಗಳನ್ನು ಅದರ ನಾಲ್ಕು ಕಾಲುಗಳಲ್ಲಿರುವ ನಾಲ್ಕು ಮೂಲೆಗಳಿಗೆ ಜೋಡಿಸಿದರು.
[14] ಮೇಜನ್ನು ಹೊತ್ತುಕೊಂಡು ಹೋಗಲು ಕೋಲುಗಳನ್ನು ಮಾಡಿ, ಈ ಬಳೆಗಳನ್ನು ಅಡ್ಡಪಟ್ಟಿಗೆ ಸಮೀಪದಲ್ಲಿ ಕೂಡಿಸಿದರು.
[15] ಮೇಜನ್ನು ಹೊತ್ತುಕೊಂಡು ಹೋಗುವವರಿಗಾಗಿ ಜಾಲಿ ಮರದಿಂದ ಕೋಲುಗಳನ್ನು ಮಾಡಿ, ಅವುಗಳಿಗೆ ಬಂಗಾರದಿಂದ ಹೊದಿಸಲಾಯಿತು.
[16] ಮೇಜಿನ ಮೇಲೆ ಇಡಬೇಕಾದ ಉಪಕರಣಗಳನ್ನು ಅಂದರೆ ಹರಿವಾಣ, ಧೂಪಾರತಿಗಳು, ಹೂಜೆಗಳು, ಪಾನದ್ರವ್ಯಗಳ ಅರ್ಪಣೆಗಾಗಿ ಬೇಕಾಗುವ ಬಟ್ಟಲುಗಳನ್ನು ಶುದ್ಧ ಬಂಗಾರದಿಂದ ಮಾಡಿದರು.
[17] ಚೊಕ್ಕ ಬಂಗಾರದಿಂದ ದೀಪಸ್ತಂಭವನ್ನು ಮಾಡಿದರು. ಅದರ ಬುಡವನ್ನೂ ಕಂಬವನ್ನೂ ನಕಾಸಿ ಕೆಲಸದಿಂದ ಮಾಡಿದರು. ದೀಪಸ್ತಂಭದ ಬುಡದಿಂದಲೇ ಅಖಂಡವಾಗಿ ಪುಷ್ಪದ ಗೊಂಚಲುಗಳಂತೆಯೂ ಹಣತೆಗಳಂತೆಯೂ ಮೊಗ್ಗುಗಳಂತೆಯೂ ಇದ್ದವು.
[18] ಆ ದೀಪಸ್ತಂಭದಿಂದ ಆರು ಕೊಂಬೆಗಳು ಹೊರ ಬಂದಿದ್ದವು. ಅಂದರೆ ಒಂದು ಭಾಗದಿಂದ ಮೂರು ಕೊಂಬೆಗಳೂ ಮತ್ತೊಂದು ಭಾಗದಿಂದ ಮೂರು ಕೊಂಬೆಗಳೂ ಹೊರಗೆ ಬಂದಿದ್ದವು.
[19] ಒಂದು ಕೊಂಬೆಯಲ್ಲಿ ಬಾದಾಮಿ ಪುಷ್ಟದಂತಿರುವ ಮೂರು ಹಣತೆಗಳು, ಮೊಗ್ಗು ಪುಷ್ಟಗಳಿದ್ದವು ಮತ್ತು ಮತ್ತೊಂದು ಕೊಂಬೆಯಲ್ಲಿ ಬಾದಾಮಿಯ ಪುಷ್ಟವಿದ್ದ ಮೂರು ಹಣತೆಗಳು ಮೊಗ್ಗು ಪುಷ್ಟಗಳಿದ್ದವು. ಈ ಪ್ರಕಾರ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳಲ್ಲಿಯೂ ಇದ್ದವು.
[20] ದೀಪಸ್ತಂಭದಲ್ಲಿಯೇ ಬಾದಾಮಿ ಹೂವುಗಳಂತೆಯೂ ಮೊಗ್ಗುಗಳಂತೆಯೂ ಅದಕ್ಕೊಂದು ಪುಷ್ಪದ ಆಕಾರದಲ್ಲಿ ನಾಲ್ಕು ಹಣತೆಗಳು ಇದ್ದವು.
[21] ದೀಪಸ್ತಂಭದಿಂದ ಹೊರಬರುವ ಒಂದು ಮೊಗ್ಗು ಮೊದಲ ಜೋಡಿ ಕೊಂಬೆಗಳ ಅಡಿಯಲ್ಲಿತ್ತು, ಎರಡನೇ ಮೊಗ್ಗು ಎರಡನೇ ಜೋಡಿಯ ಅಡಿಯಲ್ಲಿ ಮತ್ತು ಮೂರನೆಯ ಮೊಗ್ಗು ಮೂರನೆಯ ಜೋಡಿಯ ಅಡಿಯಲ್ಲಿ ಹೀಗೆ ಆರು ಕೊಂಬೆಗಳಿದ್ದವು.
[22] ಅದರ ಮೊಗ್ಗುಗಳೂ ಕೊಂಬೆಗಳೂ ಅದರಿಂದಲೇ ಬಂದಿದ್ದವು. ದೀಪಸ್ತಂಭವನ್ನೆಲ್ಲಾ ಶುದ್ಧ ಬಂಗಾರದ ಒಂದೇ ಅಚ್ಚಿನಲ್ಲಿ ಬರೆದ ಕಲಾಕೃತಿಯಾಗಿತ್ತು.
[23] ಅವರು ಏಳು ದೀಪಗಳನ್ನೂ ಕುಡಿ ಕತ್ತರಿಸುವ ಕತ್ತರಿಗಳನ್ನೂ ಬೂದಿಯ ಪಾತ್ರೆಗಳನ್ನೂ ಶುದ್ಧ ಬಂಗಾರದಿಂದಲೇ ಮಾಡಿದರು.
[24] ದೀಪಸ್ತಂಭವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಒಂದು ತಲಾಂತು ಶುದ್ಧ ಬಂಗಾರದಿಂದ ಮಾಡಿದರು.
[25] ಜಾಲಿ ಮರದ ಕಟ್ಟಿಗೆಯಿಂದ ಧೂಪವೇದಿಯನ್ನು ಮಾಡಿದರು. ಅದರ ಉದ್ದ ಮತ್ತು ಅಗಲ ಸುಮಾರು ನಲವತ್ತೈದು ಸೆಂಟಿಮೀಟರ್, ಅದರ ಎತ್ತರ ಸುಮಾರು ತೊಂಬತ್ತು ಸೆಂಟಿಮೀಟರ್ ಇದ್ದು, ಅದು ಚಚ್ಚೌಕವಾಗಿತ್ತು. ಅದರ ಕೊಂಬುಗಳನ್ನು ಸಹ ಜಾಲಿ ಮರದಿಂದಲೇ ಮಾಡಲಾಗಿತ್ತು.
[26] ಅದರ ಮೇಲ್ಭಾಗವನ್ನೂ ಅದರ ಸುತ್ತಲಿನ ಬದಿಗಳನ್ನೂ ಕೊಂಬುಗಳನ್ನೂ ಶುದ್ಧ ಬಂಗಾರದಿಂದ ಹೊದಿಸಿದರು. ಅದರ ಸುತ್ತಲೂ ಬಂಗಾರದ ಗೋಟನ್ನು ಕಟ್ಟಿಸಿದರು.
[27] ಅದರ ಗೋಟಿನ ಕೆಳಗೆ ಎರಡು ಬದಿಗಿರುವ ಎರಡು ಮೂಲೆಗಳಲ್ಲಿ ಎರಡು ಬಂಗಾರದ ಬಳೆಗಳನ್ನು ಮಾಡಿದರು, ಇವುಗಳನ್ನು ಹೊರುವುದಕ್ಕಾಗಿ ಅವುಗಳಲ್ಲಿ ಕೋಲುಗಳನ್ನು ಸಿಕ್ಕಿಸಿದರು.
[28] ಕೋಲುಗಳನ್ನು ಜಾಲಿ ಮರದಿಂದ ಮಾಡಿ, ಅವುಗಳನ್ನು ಬಂಗಾರದಿಂದ ಹೊದಿಸಿದರು.
[29] ಅನಂತರ ಅವರು ಸುಗಂಧಕಾರನ ವಿದ್ಯೆಯ ಪ್ರಕಾರ ಪರಿಶುದ್ಧವಾದ ಅಭಿಷೇಕ ತೈಲವನ್ನು ಮತ್ತು ಪರಿಮಳ ದ್ರವ್ಯದಿಂದ ಶುದ್ಧವಾದ ಧೂಪವನ್ನು ತಯಾರಿಸಿದರು.