[1] ಆಗ ಯೆಹೋವ ದೇವರು ಮೋಶೆಗೆ, “ನಾನು ಫರೋಹನಿಗೆ ಮಾಡುವುದನ್ನು ಈಗ ನೀನು ನೋಡುವೆ. ನನ್ನ ಬಲವಾದ ಹಸ್ತವನ್ನು ಕಂಡು ಅವನು ಅವರನ್ನು ಹೋಗಗೊಡಿಸುವನು. ನನ್ನ ಬಲವಾದ ಹಸ್ತದ ಕಾರಣದಿಂದ ಅವನು ಅವರನ್ನು ತನ್ನ ದೇಶದೊಳಗಿಂದ ಹೊರಡಿಸುವನು,” ಎಂದರು.
[2] ಇದಲ್ಲದೆ ದೇವರು ಮೋಶೆಯ ಸಂಗಡ ಮಾತನಾಡಿ, “ನಾನೇ ಯೆಹೋವ ದೇವರು.
[3] ನಾನೇ ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಸರ್ವಶಕ್ತ ದೇವರೆಂದು ಪ್ರಕಟಿಸಿಗೊಂಡೆನು. ಆದರೆ ಯೆಹೋವ ದೇವರೆಂಬ ನನ್ನ ಹೆಸರಿನಿಂದ ನಾನು ಅವರಿಗೆ ಪೂರ್ಣವಾಗಿ ತಿಳಿಸಲಿಲ್ಲ.
[4] ಕಾನಾನ್ ದೇಶವನ್ನು ಅಂದರೆ, ಅವರು ವಾಸವಾಗಿದ್ದ ಅವರ ಪ್ರವಾಸದ ದೇಶವನ್ನು ನಾನು ಅವರಿಗೆ ಕೊಡುವೆನೆಂದು ಅವರ ಸಂಗಡ ನನ್ನ ಒಡಂಬಡಿಕೆಯನ್ನು ದೃಢಪಡಿಸಿದೆನು.
[5] ಈಜಿಪ್ಟಿನವರು ದಾಸರನ್ನಾಗಿ ಇಟ್ಟುಕೊಂಡಿರುವ ಇಸ್ರಾಯೇಲರ ನರಳುವಿಕೆಯನ್ನು ಕೇಳಿ, ನನ್ನ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡೆನು.
[6] “ಆದ್ದರಿಂದ ಇಸ್ರಾಯೇಲರಿಗೆ, ‘ನಾನೇ ಯೆಹೋವ ದೇವರು. ನಾನು ನಿಮ್ಮನ್ನು ಈಜಿಪ್ಟಿನ ಬಿಟ್ಟಿಕೆಲಸದಿಂದ ಅವರಿಗೆ ದಾಸತ್ವದಲ್ಲಿರುವುದರಿಂದ, ನಾನು ಚಾಚಿದ ಬಾಹುವಿನಿಂದಲೂ ಬಲವಾದ ನ್ಯಾಯತೀರ್ಪುಗಳಿಂದಲೂ ನಿಮ್ಮನ್ನು ಬಿಡಿಸುವೆನು.
[7] ನಿಮ್ಮನ್ನು ನನ್ನ ಜನರನ್ನಾಗಿ ತೆಗೆದುಕೊಂಡು ನಿಮಗೆ ದೇವರಾಗಿರುವೆನು. ಈಜಿಪ್ಟಿನ ಬಿಟ್ಟಿಕೆಲಸಗಳೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿದಾಗ, ಯೆಹೋವ ದೇವರಾಗಿರುವ ನಾನೇ ನಿಮ್ಮ ದೇವರಾಗಿದ್ದೇನೆಂದು ನಿಮಗೆ ತಿಳಿಯುವುದು.
[8] ನಾನು ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಕೊಡುವೆನೆಂದು ಕೈಯನ್ನೆತ್ತಿ ಪ್ರಮಾಣ ಮಾಡಿದ ದೇಶದಲ್ಲಿ ನಿಮ್ಮನ್ನು ಬರಮಾಡಿ, ಅದನ್ನು ನಿಮಗೆ ಸೊತ್ತಾಗಿ ಕೊಡುವೆನೆಂದು ಹೇಳಿದ ಯೆಹೋವ ದೇವರು ನಾನೇ,’ ಎಂದು ಹೇಳು,” ಎಂದರು.
[9] ಮೋಶೆಯು ಇಸ್ರಾಯೇಲರಿಗೆ ಹಾಗೆ ಹೇಳಿದಾಗ, ಅವರು ಮನೋವೇದನೆಯ ದೆಸೆಯಿಂದಲೂ ಕ್ರೂರವಾದ ದಾಸತ್ವದ ದೆಸೆಯಿಂದಲೂ ಮೋಶೆಯ ಮಾತನ್ನು ಕೇಳಲಿಲ್ಲ.
[10] ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
[11] “ನೀನು ಈಜಿಪ್ಟಿನ ಅರಸನಾದ ಫರೋಹನ ಬಳಿಗೆ ಹೋಗಿ, ಅವನು ಇಸ್ರಾಯೇಲರನ್ನು ತನ್ನ ದೇಶದಿಂದ ಹೊರಗೆ ಕಳುಹಿಸುವಂತೆ ಅವನ ಸಂಗಡ ಮಾತನಾಡು,” ಎಂದರು.
[12] ಆದರೆ ಮೋಶೆಯು ಯೆಹೋವ ದೇವರ ಸನ್ನಿಧಿಯಲ್ಲಿ, “ಇಗೋ, ಇಸ್ರಾಯೇಲರೇ ನನ್ನ ಮಾತನ್ನು ಕೇಳದಿರುವಲ್ಲಿ, ತೊದಲು ಮಾತನಾಡುವ ನನ್ನ ಮಾತನ್ನು ಫರೋಹನು ಕೇಳುವುದು ಹೇಗೆ?” ಎಂದನು.
[13] ಯೆಹೋವ ದೇವರು ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ, ಇಸ್ರಾಯೇಲರನ್ನು ಈಜಿಪ್ಟಿನ ದೇಶದೊಳಗಿಂದ ಹೊರಗೆ ಬರಮಾಡುವಂತೆ ಇಸ್ರಾಯೇಲರ ಬಳಿಗೂ ಅರಸನಾದ ಫರೋಹನ ಬಳಿಗೂ ಹೋಗಬೇಕೆಂದು ಅವರಿಗೆ ಆಜ್ಞಾಪಿಸಿದರು.
[14] ಇಸ್ರಾಯೇಲ್ ಗೋತ್ರಗಳ ಮನೆಯ ಮುಖ್ಯಸ್ಥರು ಇವರೇ: ಇಸ್ರಾಯೇಲನ ಜೇಷ್ಠ ಪುತ್ರನಾದ ರೂಬೇನನ ಪುತ್ರರು: ಹನೋಕ್, ಪಲ್ಲೂ, ಹೆಚ್ರೋನ್, ಕರ್ಮೀ. ಇವರು ರೂಬೇನನ ಗೋತ್ರಗಳ ಮೂಲ ಪುರುಷರು.
[15] ಸಿಮೆಯೋನನ ಪುತ್ರರು: ಯೆಮೂಯೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯಳ ಮಗನಾದ ಸೌಲ. ಇವು ಸಿಮೆಯೋನನ ಗೋತ್ರಗಳು.
[16] ತಮ್ಮ ತಮ್ಮ ವಂಶಾವಳಿಗಳ ಪ್ರಕಾರವಾಗಿರುವ ಲೇವಿಯ ಪುತ್ರರ ಹೆಸರುಗಳು: ಗೇರ್ಷೋನ್, ಕೊಹಾತ್, ಮೆರಾರೀ. ಲೇವಿಯು ನೂರಮೂವತ್ತೇಳು ವರ್ಷಗಳವರೆಗೆ ಬದುಕಿದ್ದನು.
[17] ಗೇರ್ಷೋನನ ಪುತ್ರರು ಅವರ ಗೋತ್ರಗಳಿಗನುಸಾರವಾಗಿ: ಲಿಬ್ನೀ ಮತ್ತು ಶಿಮ್ಮೀಯರು.
[18] ಕೊಹಾತನ ಪುತ್ರರು: ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್. ಕೊಹಾತನು ಜೀವಿಸಿದ ವರ್ಷಗಳು ನೂರಮೂವತ್ತಮೂರು.
[19] ಮೆರಾರೀಯ ಪುತ್ರರು: ಮಹ್ಲೀ, ಮೂಷೀ. ವಂಶಾವಳಿಗಳ ಪ್ರಕಾರ ಇವೇ ಲೇವಿಯ ಗೋತ್ರಗಳು.
[20] ಅಮ್ರಾಮನು ತನ್ನ ಸೋದರತ್ತೆಯಾದ ಯೋಕೆಬೆದಳನ್ನು ಮದುವೆಯಾದನು. ಆಕೆಯು ಅವನಿಗೆ ಆರೋನನನ್ನೂ, ಮೋಶೆಯನ್ನೂ ಹೆತ್ತಳು. ಅಮ್ರಾಮನು ಜೀವಿಸಿದ ಕಾಲ ನೂರಮೂವತ್ತೇಳು ವರ್ಷಗಳು.
[21] ಇಚ್ಹಾರನ ಪುತ್ರರು: ಕೋರಹ, ನೆಫೆಗ್ ಮತ್ತು ಜಿಕ್ರಿ.
[22] ಉಜ್ಜೀಯೇಲನ ಪುತ್ರರು: ಮೀಶಾಯೇಲ್, ಎಲ್ಜಾಫಾನ್ ಮತ್ತು ಸಿತ್ರಿ.
[23] ಆರೋನನು ಅಮ್ಮೀನಾದಾಬನ ಮಗಳೂ ನಹಶೋನನ ಸಹೋದರಿಯೂ ಆದ ಎಲೀಶೇಬಳನ್ನು ಮದುವೆಯಾದನು. ಆಕೆಯು ಅವನಿಗೆ ನಾದಾಬ್, ಅಬೀಹೂ, ಎಲಿಯಾಜರ್, ಈತಾಮಾರ್ ಇವರನ್ನು ಹೆತ್ತಳು.
[24] ಕೋರಹನ ಪುತ್ರರು: ಅಸ್ಸೀರ್ ಎಲ್ಕಾನಾ, ಅಬೀಯಾಸಾಫ್ ಎಂಬುವರು. ಇವು ಕೋರಹೀಯರ ಗೋತ್ರಗಳು.
[25] ಆರೋನನ ಮಗ ಎಲಿಯಾಜರನು ಪೂಟಿಯೇಲನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆಯಾದನು. ಆಕೆಯು ಅವನಿಗೆ ಫೀನೆಹಾಸನನ್ನು ಹೆತ್ತಳು. ಗೋತ್ರಗಳ ಪ್ರಕಾರ ಇವರು ಲೇವಿಯರ ಗೋತ್ರಗಳ ಮುಖ್ಯಸ್ಥರು.
[26] ಆರೋನ್, ಮೋಶೆ ಇವರಿಗೆ, “ಇಸ್ರಾಯೇಲರನ್ನು ಅವರವರ ಗೋತ್ರಗಳಿಗನುಸಾರವಾಗಿ ಈಜಿಪ್ಟಿನ ಒಳಗಿಂದ ಹೊರಗೆ ಬರಮಾಡಬೇಕು,” ಎಂದು ಯೆಹೋವ ದೇವರು ಹೇಳಿದ್ದರು.
[27] ಆದುದರಿಂದ ಮೋಶೆ, ಆರೋನರೂ ಇಸ್ರಾಯೇಲರನ್ನು ಹೊರಗೆ ತರುವುದಕ್ಕಾಗಿ ಈಜಿಪ್ಟಿನ ಅರಸನಾದ ಫರೋಹನ ಸಂಗಡ ಮಾತನಾಡಿದರು.
[28] ಯೆಹೋವ ದೇವರು ಈಜಿಪ್ಟ್ ದೇಶದಲ್ಲಿ ಮೋಶೆಯ ಸಂಗಡ ಮಾತನಾಡಿದರು.
[29] ಅವರು ಮೋಶೆಗೆ, “ನಾನೇ ಯೆಹೋವ ದೇವರು. ನಾನು ನಿನಗೆ ಹೇಳುವುದನ್ನೆಲ್ಲಾ ಈಜಿಪ್ಟಿನ ಅರಸನಾದ ಫರೋಹನಿಗೆ ತಿಳಿಸು,” ಎಂದರು.
[30] ಅದಕ್ಕೆ ಮೋಶೆಯು ಯೆಹೋವ ದೇವರ ಮುಂದೆ, “ಇಗೋ, ನಾನು ತೊದಲು ಮಾತನಾಡುವವನು. ಫರೋಹನು ನನ್ನ ಮಾತನ್ನು ಹೇಗೆ ಕೇಳುತ್ತಾನೆ?” ಎಂದನು.