Skip to content
Opens in a new window
Listen to this chapter • 4:01

[1] ತರುವಾಯ ಯೆಹೋವ ದೇವರು ಮೋಶೆಗೆ, “ನೀನು, ಆರೋನ್, ನಾದಾಬ್, ಅಬೀಹೂ ಮತ್ತು ಇಸ್ರಾಯೇಲಿನ ಹಿರಿಯರಲ್ಲಿ ಎಪ್ಪತ್ತು ಮಂದಿಯೂ ಈ ಬೆಟ್ಟವನ್ನು ಹತ್ತಿ ಯೆಹೋವ ದೇವರಾದ ನನ್ನ ಬಳಿಗೆ ಬಂದು ದೂರದಲ್ಲಿ ಆರಾಧಿಸಿರಿ.

[2] ಮೋಶೆ ಒಬ್ಬನೇ ಯೆಹೋವ ದೇವರ ಸಮೀಪಕ್ಕೆ ಬರಲಿ. ಬೇರೆ ಯಾರೂ ಸಮೀಪಕ್ಕೆ ಬರಬಾರದು. ಜನರೂ ಅವನ ಸಂಗಡ ಮೇಲೇರಿ ಬರಬಾರದು,” ಎಂದು ಹೇಳಿದರು.

[3] ಮೋಶೆಯು ಬಂದು ಯೆಹೋವ ದೇವರ ಎಲ್ಲಾ ಮಾತುಗಳನ್ನೂ ಎಲ್ಲಾ ನ್ಯಾಯವಿಧಿಗಳನ್ನು ಜನರಿಗೆ ತಿಳಿಸಿದನು. ಆಗ ಜನರೆಲ್ಲಾ ಒಂದೇ ಸ್ವರದಿಂದ, “ಯೆಹೋವ ದೇವರು ಹೇಳಿದ ಎಲ್ಲಾ ಮಾತುಗಳ ಪ್ರಕಾರ ಮಾಡುತ್ತೇವೆ,” ಎಂದು ಉತ್ತರಕೊಟ್ಟರು.

[4] ಮೋಶೆಯು ಯೆಹೋವ ದೇವರು ಪ್ರಕಟಪಡಿಸಿದ ಮಾತುಗಳನ್ನೆಲ್ಲಾ ಬರೆದಿಟ್ಟನು. ಅವನು ಮರುದಿನ ಬೆಳಿಗ್ಗೆ ಎದ್ದು ಬೆಟ್ಟದ ಕೆಳಗೆ ಬಲಿಪೀಠವನ್ನು ಕಟ್ಟಿಸಿ, ಇಸ್ರಾಯೇಲಿನ ಹನ್ನೆರಡು ಗೋತ್ರಗಳಿಗನುಸಾರವಾಗಿ ಹನ್ನೆರಡು ಸ್ತಂಭಗಳನ್ನು ನಿಲ್ಲಿಸಿದನು.

[5] ಅವನು ಯೆಹೋವ ದೇವರಿಗೆ ದಹನಬಲಿಗಳನ್ನೂ ಸಮಾಧಾನದ ಬಲಿಗಾಗಿ ಹೋರಿಗಳನ್ನೂ ಅರ್ಪಿಸುವುದಕ್ಕಾಗಿ ಇಸ್ರಾಯೇಲರ ಯೌವನಸ್ಥರನ್ನು ಕಳುಹಿಸಲು ಅವರು ಅದನ್ನು ಅರ್ಪಿಸಿದರು.

[6] ಮೋಶೆಯು ರಕ್ತದಲ್ಲಿ ಅರ್ಧವನ್ನು ತೆಗೆದುಕೊಂಡು ಬೋಗುಣಿಗಳಲ್ಲಿ ಹಾಕಿದನು ಮತ್ತು ರಕ್ತದಲ್ಲಿ ಮಿಕ್ಕ ಅರ್ಧವನ್ನು ಬಲಿಪೀಠದ ಮೇಲೆ ಚಿಮುಕಿಸಿದನು.

[7] ಒಡಂಬಡಿಕೆಯ ಗ್ರಂಥವನ್ನು ತೆಗೆದುಕೊಂಡು ಜನರ ಸಭೆಯಲ್ಲಿ ಓದಿದನು. ಆಗ ಅವರು, “ಯೆಹೋವ ದೇವರ ಆಜ್ಞೆಗಳನ್ನೆಲ್ಲಾ ನಾವು ಅನುಸರಿಸಿ ಅವುಗಳಿಗೆ ವಿಧೇಯರಾಗುವೆವು,” ಎಂದರು.

[8] ತರುವಾಯ ಮೋಶೆಯು ರಕ್ತವನ್ನು ತೆಗೆದುಕೊಂಡು ಜನರ ಮೇಲೆ ಚಿಮುಕಿಸಿ, “ಈ ಎಲ್ಲಾ ಮಾತುಗಳ ವಿಷಯದಲ್ಲಿ ಯೆಹೋವ ದೇವರು ನಿಮ್ಮೊಂದಿಗೆ ಮಾಡಿದ ಒಡಂಬಡಿಕೆಯ ರಕ್ತ,” ಎಂದನು.

[9] ಆಗ ಮೋಶೆ, ಆರೋನ್, ನಾದಾಬ್, ಅಬೀಹೂ ಮತ್ತು ಇಸ್ರಾಯೇಲಿನ ಹಿರಿಯರಲ್ಲಿ ಎಪ್ಪತ್ತು ಮಂದಿಯೂ ಮೇಲಕ್ಕೆ ಹೋದರು.

[10] ಅವರು ಇಸ್ರಾಯೇಲಿನ ದೇವರನ್ನು ನೋಡಿದರು. ಆತನ ಪಾದಗಳ ಕೆಳಗೆ ನೀಲ ವರ್ಣದ ಕಲ್ಲಿನ ಕೆಲಸಕ್ಕೆ ಸಮಾನವಾದದ್ದೂ, ಆಕಾಶದ ಹಾಗೆ ನಿರ್ಮಲವಾದದ್ದೂ ಇತ್ತು.

[11] ಆದರೆ ದೇವರು ಇಸ್ರಾಯೇಲರ ಶ್ರೇಷ್ಠರನ್ನು ತಳ್ಳಿಬಿಡಲಿಲ್ಲ. ಅವರು ಸಹ ದೇವರನ್ನು ನೋಡಿ, ಊಟಮಾಡಿ, ಪಾನಮಾಡಿದರು.

[12] ಯೆಹೋವ ದೇವರು ಮೋಶೆಗೆ, “ಬೆಟ್ಟವನ್ನೇರಿ, ನನ್ನ ಬಳಿಗೆ ಬಂದು ಇಲ್ಲೇ ಇರು. ನಿಯಮವನ್ನು ಹಾಗು ಆಜ್ಞೆಗಳನ್ನು ನೀನು ಜನರಿಗೆ ಬೋಧನೆಮಾಡುವಂತೆ ಬರೆದಿರುವ ಕಲ್ಲಿನ ಹಲಗೆಗಳನ್ನು ನಾನು ನಿನಗೆ ಕೊಡುತ್ತೇನೆ,” ಎಂದು ಹೇಳಿದರು.

[13] ಆಗ ಮೋಶೆಯೂ ಅವನ ಸಹಾಯಕನಾದ ಯೆಹೋಶುವನೂ ದೇವರ ಬೆಟ್ಟದ ಮೇಲೆ ಹೊರಟರು.

[14] ಆಗ ಮೋಶೆ ಹಿರಿಯರಿಗೆ, “ನಾವು ನಿಮ್ಮ ಬಳಿಗೆ ತಿರುಗಿ ಬರುವವರೆಗೆ ಇಲ್ಲಿ ನಮಗಾಗಿ ಕಾದುಕೊಂಡಿರಿ. ಆರೋನನೂ ಹೂರನೂ ನಿಮ್ಮ ಸಂಗಡ ಇರುತ್ತಾರೆ. ಯಾರಿಗಾದರೂ ವ್ಯಾಜ್ಯವಿದ್ದರೆ ಅವರ ಬಳಿಗೆ ಹೋಗಲಿ,” ಎಂದನು.

[15] ಮೋಶೆ ಬೆಟ್ಟವನ್ನೇರಿ ಹೋದಾಗ ಮೇಘವು ಬೆಟ್ಟವನ್ನು ಮುಚ್ಚಿಕೊಂಡಿತು.

[16] ಇದಲ್ಲದೆ ಯೆಹೋವ ದೇವರ ಮಹಿಮೆಯು ಸೀನಾಯಿ ಬೆಟ್ಟದ ಮೇಲೆ ನೆಲೆಯಾಗಿದ್ದುದರಿಂದ ಮೇಘವು ಅದನ್ನು ಆರು ದಿನಗಳವರೆಗೆ ಮುಚ್ಚಿಕೊಂಡಿತು. ಏಳನೆಯ ದಿನದಲ್ಲಿ ಆತನು ಮೇಘದೊಳಗಿಂದ ಮೋಶೆಯನ್ನು ಕರೆದರು.

[17] ಯೆಹೋವ ದೇವರ ಮಹಿಮೆಯ ದೃಶ್ಯವು ಇಸ್ರಾಯೇಲರ ಕಣ್ಣುಗಳ ಮುಂದೆ ಬೆಟ್ಟದ ತುದಿಯಲ್ಲಿ ದಹಿಸುವ ಅಗ್ನಿಯಂತಿತ್ತು.

[18] ಆಗ ಮೋಶೆಯು ಮೇಘದ ಮಧ್ಯಕ್ಕೆ ಬಂದು ಬೆಟ್ಟವನ್ನೇರಿದನು. ಅವನು ಹಗಲಿರುಳು ನಲವತ್ತು ದಿವಸ ಪರ್ವತದ ಮೇಲಿದ್ದನು.

ವಿಮೋಚನಕಾಂಡ — Chapters