Skip to content
Opens in a new window
Listen to this chapter • 7:37

[1] ಅನಂತರ ಯೆಹೋವ ದೇವರು ಮೋಶೆಗೆ ಹೇಳಿದ್ದೇನಂದರೆ, “ಫರೋಹನ ಬಳಿಗೆ ಹೋಗಿ ಅವನಿಗೆ, ‘ಹಿಬ್ರಿಯರ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನನ್ನನ್ನು ಆರಾಧಿಸುವಂತೆ ನನ್ನ ಜನರನ್ನು ಕಳುಹಿಸು.”

[2] ಅವರನ್ನು ಕಳುಹಿಸುವುದಕ್ಕೆ ನಿರಾಕರಿಸಿ ಇನ್ನೂ ತಡೆದರೆ,

[3] ಯೆಹೋವ ದೇವರ ಕೈ ಹೊಲದಲ್ಲಿರುವ ನಿನ್ನ ಪಶುಗಳ ಮೇಲೆ ಇರುವುದು. ಕುದುರೆ, ಕತ್ತೆ, ಒಂಟೆ, ಎತ್ತು, ಕುರಿ, ಆಡು ಇವುಗಳ ಮೇಲೆ ಕಠಿಣವಾದ ಉಪದ್ರವ ಬರುವುದು.

[4] ಯೆಹೋವ ದೇವರು ಇಸ್ರಾಯೇಲರ ಪಶುಗಳನ್ನೂ ಈಜಿಪ್ಟಿನವರ ಪಶುಗಳನ್ನೂ ವಿಂಗಡಿಸುವರು. ಇಸ್ರಾಯೇಲರ ಪಶುಗಳಲ್ಲಿ ಒಂದೂ ಸಾಯುವುದಿಲ್ಲ,’ ” ಎಂದರು.

[5] ಇದಲ್ಲದೆ ಯೆಹೋವ ದೇವರು, “ನಿರ್ದಿಷ್ಟವಾದ ಒಂದು ಸಮಯವನ್ನು ನೇಮಿಸಿ, ನಾಳೆ ಯೆಹೋವ ದೇವರು ಈ ಕಾರ್ಯವನ್ನು ಈ ದೇಶದಲ್ಲಿ ಮಾಡುವರು, ಎಂದು ಹೇಳು,” ಎಂದರು.

[6] ಮಾರನೆಯ ದಿನವೇ ಯೆಹೋವ ದೇವರು ಆ ಕಾರ್ಯವನ್ನು ಮಾಡಲಾರಂಭಿಸಿದರು. ಈಜಿಪ್ಟಿನ ಪಶುಗಳೆಲ್ಲಾ ಸತ್ತು ಹೋದವು. ಆದರೆ ಇಸ್ರಾಯೇಲರ ಪಶುಗಳಲ್ಲಿ ಒಂದೂ ಸಾಯಲಿಲ್ಲ.

[7] ಫರೋಹನು ಆಳುಗಳನ್ನು ಕಳುಹಿಸಿ ನೋಡಿದಾಗ, ಇಸ್ರಾಯೇಲರ ಪಶುಗಳಲ್ಲಿ ಒಂದೂ ಸತ್ತಿರಲಿಲ್ಲ. ಆದರೆ ಫರೋಹನ ಹೃದಯವು ಕಠಿಣವಾಗಿದ್ದುದರಿಂದ ಅವನು ಜನರನ್ನು ಹೋಗಗೊಡಿಸಲಿಲ್ಲ.

[8] ಆಗ ಯೆಹೋವ ದೇವರು ಮೋಶೆ ಆರೋನರಿಗೆ, “ಕೈತುಂಬಾ ಒಲೆಯ ಬೂದಿಯನ್ನು ತೆಗೆದುಕೊಳ್ಳಿರಿ. ಅದನ್ನು ಮೋಶೆಯು ಫರೋಹನ ಮುಂದೆ ಆಕಾಶದ ಕಡೆಗೆ ತೂರಲಿ.

[9] ಆಗ ಅದು ಈಜಿಪ್ಟ್ ದೇಶದಲ್ಲೆಲ್ಲಾ ಪುಡಿಯಾಗುವುದು. ಅದು ಈಜಿಪ್ಟ್ ದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಹುಣ್ಣುಗಳಾಗುವ ಬೊಕ್ಕೆಗಳು ಏಳುವಂತೆ ಮಾಡುವುದು,” ಎಂದು ಹೇಳಿದರು.

[10] ಆಗ ಅವರು ಒಲೆಯ ಬೂದಿಯನ್ನು ತೆಗೆದುಕೊಂಡು ಫರೋಹನ ಮುಂದೆ ನಿಂತರು. ಮೋಶೆಯು ಅದನ್ನು ಆಕಾಶದ ಕಡೆಗೆ ತೂರಿದನು. ಆಗ ಅದು ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಹರಡಿ ಹುಣ್ಣುಗಳಾಗುವಂಥ ಬೊಕ್ಕೆಗಳಾದವು.

[11] ಇದಲ್ಲದೆ ಮಂತ್ರಗಾರರು ಹುಣ್ಣಿನ ನಿಮಿತ್ತ ಮೋಶೆಯ ಮುಂದೆ ನಿಂತುಕೊಳ್ಳಲಾರದೆ ಹೋದರು. ಏಕೆಂದರೆ ಹುಣ್ಣುಗಳು ಮಂತ್ರಗಾರರ ಮೇಲೆಯೂ ಈಜಿಪ್ಟಿನವರ ಮೇಲೆಯೂ ಇದ್ದವು.

[12] ಆದರೆ ಯೆಹೋವ ದೇವರು ಫರೋಹನ ಹೃದಯವನ್ನು ಕಠಿಣ ಮಾಡಿದರು. ಯೆಹೋವ ದೇವರು ಮೋಶೆಗೆ ಹೇಳಿದಂತೆಯೇ ಅವನು ಅವರ ಮಾತನ್ನು ಕೇಳಲಿಲ್ಲ.

[13] ಯೆಹೋವ ದೇವರು ಮೋಶೆಗೆ, “ಬೆಳಿಗ್ಗೆ ಎದ್ದು ಫರೋಹನ ಮುಂದೆ ನಿಂತುಕೊಂಡು ಅವನಿಗೆ, ‘ಹಿಬ್ರಿಯರ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನನ್ನು ಅವರು ಆರಾಧಿಸುವ ಹಾಗೆ ನನ್ನ ಜನರನ್ನು ಕಳುಹಿಸು.

[14] ಭೂಲೋಕದಲ್ಲೆಲ್ಲಾ ನನ್ನ ಹಾಗೆ ಯಾರೂ ಇಲ್ಲವೆಂದು ನೀನು ತಿಳಿದುಕೊಳ್ಳುವ ಹಾಗೆ, ಈ ಸಾರಿ ನಾನು ಎಲ್ಲಾ ಉಪದ್ರವಗಳನ್ನು ನಿನ್ನ ಮೇಲೆಯೂ ನಿನ್ನ ಸೇವಕರ ಮೇಲೆಯೂ ನಿನ್ನ ಜನರ ಮೇಲೆಯೂ ಬರಮಾಡುವೆನು.

[15] ಈಗ ನನ್ನ ಕೈಚಾಚಿ ನಿನ್ನನ್ನೂ, ನಿನ್ನ ಜನರನ್ನೂ ಉಪದ್ರವದಿಂದ ಬಾಧಿಸುವೆನು. ನಿನ್ನನ್ನು ಭೂಮಿಯೊಳಗಿಂದ ನಿರ್ಮೂಲ ಮಾಡುವೆನು.

[16] ಆದರೆ ನಿಶ್ಚಯವಾಗಿ ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ, ನನ್ನ ಹೆಸರನ್ನು ಭೂಮಿಯ ಮೇಲೆಲ್ಲಾ ಪ್ರಸಿದ್ಧಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಸಾಯಿಸದೆ ಉಳಿಸಿದ್ದೇನೆ.

[17] ನೀನು ಇನ್ನೂ ಅವರನ್ನು ಕಳುಹಿಸದೆ ನನ್ನ ಜನರಿಗೆ ವಿರೋಧವಾಗಿ ನಿನ್ನನ್ನು ನೀನೇ ಹೆಚ್ಚಿಸಿಕೊಳ್ಳುತ್ತೀಯೋ?

[18] ಹಾಗಾದರೆ ನಾಳೆ ಇಷ್ಟು ಹೊತ್ತಿಗೆ ಮಹಾ ಕಠಿಣವಾದ ಆಲಿಕಲ್ಲಿನ ಮಳೆಯನ್ನು ಬೀಳುವಂತೆ ಮಾಡುವೆನು. ಅಂಥದ್ದು ಈಜಿಪ್ಟಿನಲ್ಲಿ, ಅದರ ರಾಜ್ಯವು ಸ್ಥಾಪಿತವಾದಂದಿನಿಂದ ಇಲ್ಲಿಯವರೆಗೂ ಆಗಿಲ್ಲ.

[19] ಹೀಗಿರುವುದರಿಂದ ಯಾರನ್ನಾದರೂ ಕಳುಹಿಸಿ ನಿನ್ನ ಪಶುಗಳನ್ನೂ, ಹೊಲದಲ್ಲಿ ನಿನಗಿರುವವುಗಳನ್ನೂ ಭದ್ರಪಡಿಸು. ಏಕೆಂದರೆ ಮನೆಗಳಿಗೆ ಬಾರದೆ ಹೊಲದಲ್ಲಿ ಸಿಕ್ಕುವ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಆಲಿಕಲ್ಲಿನ ಮಳೆಯು ಸುರಿದು ಕೊಲ್ಲುವುದು,’ ಎಂದು ಹೇಳು,” ಎಂದರು.

[20] ಆಗ ಫರೋಹನ ಸೇವಕರಲ್ಲಿ ಯೆಹೋವ ದೇವರ ವಾಕ್ಯಕ್ಕೆ ಭಯಪಟ್ಟವರೆಲ್ಲರೂ ತಮ್ಮ ದಾಸರನ್ನೂ ಪಶುಗಳನ್ನೂ ಮನೆಗಳಿಗೆ ಓಡಿ ಬರುವಂತೆ ಮಾಡಿದರು.

[21] ಆದರೆ ಯೆಹೋವ ದೇವರ ವಾಕ್ಯಕ್ಕೆ ಮನಸ್ಸು ಕೊಡದವರು, ತಮ್ಮ ದಾಸರನ್ನೂ ಪಶುಗಳನ್ನೂ ಹೊಲದಲ್ಲಿ ಬಿಟ್ಟರು.

[22] ಆಗ ಯೆಹೋವ ದೇವರು ಮೋಶೆಗೆ, “ಆಕಾಶದ ಕಡೆಗೆ ನಿನ್ನ ಕೈಚಾಚು. ಈಜಿಪ್ಟ್ ದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಮತ್ತು ಈಜಿಪ್ಟ್ ದೇಶದಲ್ಲಿ ಇರುವ ಎಲ್ಲಾ ಹೊಲದ ಬೆಳೆಯ ಮೇಲೆಯೂ ಆಲಿಕಲ್ಲಿನ ಮಳೆ ಸುರಿಯುವುದು,” ಎಂದು ಪ್ರಕಟಪಡಿಸಿದರು.

[23] ಮೋಶೆಯು ಆಕಾಶದ ಕಡೆಗೆ ತನ್ನ ಕೋಲನ್ನು ಚಾಚಿದನು. ಆಗ ಯೆಹೋವ ದೇವರು ಗುಡುಗುಗಳನ್ನೂ ಆಲಿಕಲ್ಲಿನ ಮಳೆಯನ್ನೂ ಸುರಿಸಿದರು. ಸಿಡಿಲು ನೆಲಕ್ಕೆ ಬಡಿಯಿತು. ಸಿಡಿಲಿನ ಆರ್ಭಟದೊಂದಿಗೆ ಯೆಹೋವ ದೇವರು ಈಜಿಪ್ಟ್ ದೇಶದ ಮೇಲೆ ಆಲಿಕಲ್ಲಿನ ಮಳೆಯನ್ನು ಸುರಿಸಿದರು.

[24] ಸಿಡಿಲಿನ ಆರ್ಭಟದೊಂದಿಗೆ ಕಠಿಣವಾದ ಆಲಿಕಲ್ಲಿನ ಮಳೆಯೂ ಸುರಿಯಿತು. ಈಜಿಪ್ಟ್ ಒಂದು ರಾಷ್ಟ್ರವಾದಂದಿನಿಂದ ಅಂಥ ಘೋರವಾದ ಆಲಿಕಲ್ಲಿನ ಮಳೆಯೂ ಆ ದೇಶದಲ್ಲಿ ಆಗಿರಲಿಲ್ಲ.

[25] ಆ ಆಲಿಕಲ್ಲಿನ ಮಳೆಯು ಈಜಿಪ್ಟ್ ದೇಶದಲ್ಲೆಲ್ಲಾ ಮನುಷ್ಯರು ಮೊದಲುಗೊಂಡು ಪಶುಗಳವರೆಗೂ ಹೊಲದಲ್ಲಿ ಇದ್ದದ್ದನ್ನೆಲ್ಲಾ ಹಾಳುಮಾಡಿತು. ಹೊಲದ ಎಲ್ಲಾ ಸೊಪ್ಪನ್ನೂ ಹಾಳು ಮಾಡಿ, ಎಲ್ಲಾ ಮರಗಳನ್ನು ಮುರಿದುಹಾಕಿತು.

[26] ಇಸ್ರಾಯೇಲರು ಇದ್ದ ಗೋಷೆನ್ ಪ್ರಾಂತದಲ್ಲಿ ಆಲಿಕಲ್ಲಿನ ಮಳೆಯು ಇರಲಿಲ್ಲ.

[27] ಆಗ ಫರೋಹನು ಮೋಶೆ ಆರೋನರನ್ನು ಕರೆಕಳುಹಿಸಿ ಅವರಿಗೆ, “ಈ ಸಲ ನಾನು ಪಾಪಮಾಡಿದ್ದೇನೆ, ಯೆಹೋವ ದೇವರು ನೀತಿವಂತನು. ಆದರೆ ನಾನೂ, ನನ್ನ ಜನರೂ ತಪ್ಪಿತಸ್ಥರು.

[28] ಆದ್ದರಿಂದ ಈ ಬಲವಾದ ಗುಡುಗುಗಳೂ ಆಲಿಕಲ್ಲಿನ ಮಳೆಯೂ ಇನ್ನು ಸಾಕು. ಇವುಗಳು ನಿಂತುಹೋಗುವಂತೆ ಯೆಹೋವ ದೇವರನ್ನು ಬೇಡಿಕೊಳ್ಳಿರಿ, ನೀವು ಇನ್ನು ಇಲ್ಲಿ ಇರದಂತೆ ನಾನು ನಿಮ್ಮನ್ನು ಕಳುಹಿಸಿಬಿಡುವೆನು,” ಎಂದನು.

[29] ಮೋಶೆಯು ಅವನಿಗೆ, “ನಾನು ಪಟ್ಟಣವನ್ನು ಬಿಟ್ಟುಹೋದ ಕೂಡಲೇ, ಯೆಹೋವ ದೇವರ ಕಡೆಗೆ ನನ್ನ ಕೈಗಳನ್ನು ಚಾಚಿ ಪ್ರಾರ್ಥಿಸುವೆನು. ಭೂಮಿಯು ಯೆಹೋವ ದೇವರದೇ ಎಂದು ನೀನು ತಿಳಿದುಕೊಳ್ಳುವಂತೆ ಗುಡುಗುಗಳು ನಿಂತುಹೋಗುವುವು. ಆಲಿಕಲ್ಲಿನ ಮಳೆಯು ಇನ್ನು ಇರದು.

[30] ಆದರೂ ನೀನು ಮತ್ತು ನಿನ್ನ ಅಧಿಕಾರಿಗಳು ದೇವರಾದ ಯೆಹೋವ ದೇವರಿಗೆ ಭಯಪಡುವುದಿಲ್ಲವೆಂದು ನಾನು ಬಲ್ಲೆನು,” ಎಂದನು.

[31] ಜವೆಗೋಧಿಗೆ ತೆನೆಯೂ ಅಗಸೆಯ ಮೊಗ್ಗುಗಳೂ ಇದ್ದುದರಿಂದ ಅಗಸೆಯೂ ಜವೆಗೋಧಿಯೂ ಹಾಳಾದವು.

[32] ಆದರೆ ಗೋಧಿ ಮತ್ತು ಕಡಲೆ ಬೆಳೆದಿಲ್ಲವಾದ್ದರಿಂದ ಹಾಳಾಗಲಿಲ್ಲ.

[33] ತರುವಾಯ ಮೋಶೆಯು ಫರೋಹನನ್ನು ಬಿಟ್ಟು ಪಟ್ಟಣದ ಹೊರಗೆ ಬಂದಾಗ, ತನ್ನ ಕೈಗಳನ್ನು ಯೆಹೋವ ದೇವರ ಕಡೆಗೆ ಚಾಚಿದನು. ಆಗ ಗುಡುಗುಗಳೂ ಆಲಿಕಲ್ಲಿನ ಮಳೆಯೂ ನಿಂತುಹೋದವು. ಇನ್ನು ಮಳೆಯು ಭೂಮಿಯ ಮೇಲೆ ಬೀಳಲಿಲ್ಲ.

[34] ಮಳೆ, ಆಲಿಕಲ್ಲಿನ ಮಳೆ, ಗುಡುಗುಗಳು ನಿಂತುಹೋದದ್ದನ್ನು ಫರೋಹನು ನೋಡಿದಾಗ, ಅವನು ಪುನಃ ಪಾಪಮಾಡಿದನು. ತನ್ನ ಅಧಿಕಾರಿಗಳ ಸಹಿತವಾಗಿ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು.

[35] ಫರೋಹನ ಹೃದಯವು ಕಠಿಣವಾಯಿತು. ಯೆಹೋವ ದೇವರು ಮೋಶೆಗೆ ಹೇಳಿದಂತೆ, ಅವನು ಇಸ್ರಾಯೇಲರನ್ನು ಕಳುಹಿಸಲೇ ಇಲ್ಲ.

ವಿಮೋಚನಕಾಂಡ — Chapters