Skip to content
Opens in a new window
Listen to this chapter • 7:38

[1] ಬೆಚಲೇಲನು ಜಾಲಿ ಮರದಿಂದ ದಹನಬಲಿಯ ಪೀಠವನ್ನು ಮಾಡಿದರು. ಅದರ ಎತ್ತರವು ಸುಮಾರು ಒಂದು ಮೀಟರ್ ಇರಬೇಕು. ಅದರ ಉದ್ದ ಮತ್ತು ಅಗಲವು ಸುಮಾರು ಎರಡೂವರೆ ಮೀಟರ್ ಚಚ್ಚೌಕವಾಗಿರಬೇಕು.

[2] ಅದರ ನಾಲ್ಕು ಮೂಲೆಗಳಲ್ಲಿ ಕೊಂಬುಗಳನ್ನು ಮಾಡಿದರು. ಆ ಕೊಂಬುಗಳು ಆ ಬಲಿಪೀಠಕ್ಕೆ ಏಕವಾಗಿರಬೇಕು. ಅವುಗಳನ್ನು ಕಂಚಿನಿಂದ ಹೊದಿಸಿದರು.

[3] ಅನಂತರ ಅವರು ಬಲಿಪೀಠದ ಉಪಕರಣಗಳನ್ನೆಲ್ಲಾ ಅಂದರೆ ಬಟ್ಟಲುಗಳು, ಸಲಿಕೆಗಳು, ಮುಳ್ಳುಚಮಚಗಳು, ಬೋಗುಣಿಗಳು, ಅಗ್ಗಿಷ್ಟಿಕೆಗಳು ಇವುಗಳೆನ್ನೆಲ್ಲಾ ಕಂಚಿನಿಂದ ಮಾಡಿದರು.

[4] ಬಲಿಪೀಠಕ್ಕೆ ಹೆಣಿಗೆ ಕೆಲಸದಿಂದ ಕಂಚಿನ ಜಾಳಿಗೆಯನ್ನು ಮಾಡಿದರು. ಅದು ಬಲಿಪೀಠದ ಸುತ್ತಲಿರುವ ಕಟ್ಟಿಗೆಯ ಕಟ್ಟೆಯ ಕೆಳಗೆ ಇದ್ದು, ಅದನ್ನು ಬಲಿಪೀಠದ ಕೆಳಭಾಗದಿಂದ ಮಧ್ಯದವರೆಗೆ ಇರುವಂತೆ ಮಾಡಿದರು.

[5] ವೇದಿಯನ್ನು ಹೊರುವಾಗ ಕೋಲು ಸಿಕ್ಕಿಸುವುದಕ್ಕೋಸ್ಕರ ಅದರ ನಾಲ್ಕು ಮೂಲೆಗಳಲ್ಲಿ ನಾಲ್ಕು ಬಳೆಗಳನ್ನು ಕಂಚಿನಿಂದ ಎರಕ ಹೊಯ್ದರು.

[6] ಅವರು ಜಾಲಿ ಮರದಿಂದ ಕೋಲುಗಳನ್ನು ಮಾಡಿ, ಅವುಗಳನ್ನು ಕಂಚಿನಿಂದ ಹೊದಿಸಿದರು.

[7] ಬಲಿಪೀಠವನ್ನು ಹೊರುವುದಕ್ಕೆ ಅದರ ಎರಡೂ ಬದಿಯಲ್ಲಿ ಮಾಡಿದ ಕೋಲುಗಳನ್ನು ಬಳೆಗಳಲ್ಲಿ ಸೇರಿಸಿದರು. ಅವರು ಆ ಬಲಿಪೀಠವನ್ನು ಚೌಕಟ್ಟುಗಳಿಂದ ಪೊಳ್ಳಾಗಿರುವಂತೆ ಮಾಡಿದರು.

[8] ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಸೇವೆಮಾಡುತ್ತಿದ್ದ ಸ್ತ್ರೀಯರಿಂದ ಕೂಡಿಸಿದ ಕಂಚಿನ ದರ್ಪಣಗಳಿಂದ ಕಂಚಿನಿಂದ ಬೋಗುಣಿಯನ್ನು ಅದರ ಪೀಠವನ್ನೂ ಮಾಡಿದರು.

[9] ಅವರು ಗುಡಾರದ ಅಂಗಳವನ್ನು ಮಾಡಿದರು. ಹೇಗೆಂದರೆ ದಕ್ಷಿಣ ದಿಕ್ಕಿನಲ್ಲಿರುವ ಅಂಗಳಕ್ಕೋಸ್ಕರ ನಯವಾಗಿ ಹೊಸೆದ ನಾರಿನ ಪರದೆಗಳನ್ನು ಮಾಡಲಾಗಿತ್ತು. ಅವು ಸುಮಾರು ನಲವತ್ತೈದು ಮೀಟರ್ ಉದ್ದವಾಗಿದ್ದವು.

[10] ಆ ಕಡೆಯಲ್ಲಿ ಇಪ್ಪತ್ತು ಸ್ತಂಭಗಳಿದ್ದವು ಮತ್ತು ಅವುಗಳಿಗೆ ಇಪ್ಪತ್ತು ಕಂಚಿನ ಗದ್ದಿಗೇ ಕಲ್ಲುಗಳಿದ್ದವು. ಸ್ತಂಭಗಳ ಕೊಂಡಿಗಳನ್ನು ಮತ್ತು ಅವುಗಳ ಪಟ್ಟಿಗಳನ್ನು ಬೆಳ್ಳಿಯಿಂದ ಮಾಡಲಾಗಿತ್ತು.

[11] ಉತ್ತರ ದಿಕ್ಕಿನ ಪರದೆಗಳು ಸುಮಾರು ನಲವತ್ತೈದು ಮೀಟರ್ ಉದ್ದವಾಗಿದ್ದವು. ಇಪ್ಪತ್ತು ಸ್ತಂಭಗಳು ಮತ್ತು ಇಪ್ಪತ್ತು ಕಂಚಿನ ಗದ್ದಿಗೇ ಕಲ್ಲುಗಳಿದ್ದವು. ಆ ಸ್ತಂಭಗಳ ಕೊಂಡಿಗಳು ಮತ್ತು ಕಟ್ಟುಗಳು ಬೆಳ್ಳಿಯಿಂದ ಮಾಡಿದ್ದಾಗಿದ್ದವು.

[12] ಅಂಗಳದ ಪಶ್ಚಿಮ ಭಾಗದಲ್ಲಿ ಸುಮಾರು ಇಪ್ಪತ್ತಮೂರು ಮೀಟರ್ ಉದ್ದವಾದ ಪರದೆಗಳಿದ್ದವು. ಹತ್ತು ಸ್ತಂಭಗಳು ಮತ್ತು ಆ ಸ್ತಂಭಗಳಿಗೆ ಹತ್ತು ಗದ್ದಿಗೇ ಕಲ್ಲುಗಳಿದ್ದವು. ಸ್ತಂಭಗಳ ಕೊಂಡಿ ಮತ್ತು ಅಲಂಕಾರದ ಮೇಲಿನ ಕಟ್ಟುಗಳು ಬೆಳ್ಳಿಯದ್ದಾಗಿದ್ದವು.

[13] ಪೂರ್ವದಿಕ್ಕಿನಲ್ಲಿ ಸೂರ್ಯೋದಯದ ಕಡೆಗೆ ಅಂಗಳದ ಅಗಲವು ಸುಮಾರು ಇಪ್ಪತ್ತಮೂರು ಮೀಟರವಾಗಿತ್ತು.

[14] ದ್ವಾರದ ಒಂದು ಬದಿಯ ಪರದೆಗಳು ಸುಮಾರು ಆರುವರೆ ಮೀಟರ್ ಉದ್ದವಾಗಿದ್ದವು. ಅವುಗಳಿಗೆ ಮೂರು ಸ್ತಂಭಗಳು, ಆ ಸ್ತಂಭಗಳಿಗೆ ಮೂರು ಗದ್ದಿಗೇ ಕಲ್ಲುಗಳು ಇದ್ದವು.

[15] ಅಂಗಳದ ದ್ವಾರದ ಎರಡೂ ಕಡೆಗಳಲ್ಲಿ ಸುಮಾರು ಆರುವರೆ ಮೀಟರ್ ಉದ್ದವಾದ ಪರದೆಗಳಿದ್ದವು, ಅವುಗಳಿಗೆ ಮೂರು ಸ್ತಂಭಗಳು ಮತ್ತು ಮೂರು ಗದ್ದಿಗೇ ಕಲ್ಲುಗಳಿದ್ದವು.

[16] ಅಂಗಳದ ಸುತ್ತಲಿದ್ದ ಎಲ್ಲ ಪರದೆಗಳು ನಯವಾಗಿ ಹೊಸೆದ ನಾರಿನ ಬಟ್ಟೆಯಿಂದ ಮಾಡಲಾಗಿದ್ದವು.

[17] ಸ್ತಂಭಗಳ ಗದ್ದಿಗೇ ಕಲ್ಲುಗಳು ಕಂಚಿನದ್ದಾಗಿದ್ದವು. ಸ್ತಂಭಗಳ ಕೊಂಡಿಗಳು ಮತ್ತು ಕಟ್ಟುಗಳು ಬೆಳ್ಳಿಯದ್ದಾಗಿದ್ದವು. ಸ್ತಂಭದ ಬೋದಿಗೆಗಳು ಬೆಳ್ಳಿಯಿಂದ ಹೊದಿಸಲಾಗಿತ್ತು. ಅಂಗಳದ ಎಲ್ಲಾ ಸ್ತಂಭಗಳಿಗೆ ಬೆಳ್ಳಿಯ ಕಟ್ಟುಗಳಿದ್ದವು.

[18] ಗುಡಾರದ ಅಂಗಳದ ದ್ವಾರಕ್ಕಾಗಿ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಕಸೂತಿ ಕೆಲಸಮಾಡಿದ ಇಪ್ಪತ್ತು ಮೊಳದ ಪರದೆ ಮಾಡಲಾಗಿತ್ತು. ಅದರ ಉದ್ದವು ಇಪ್ಪತ್ತು ಮೊಳವಾಗಿತ್ತು. ಅಗಲ, ಎತ್ತರಗಳಲ್ಲಿ ಅಂಗಳದ ಉಳಿದ ಪರದೆಗಳಿಗೆ ಸರಿಯಾಗುವಂತೆ ಐದು ಮೊಳ ಇತ್ತು.

[19] ಅವುಗಳಿಗೆ ನಾಲ್ಕು ಸ್ತಂಭಗಳು, ಆ ಕಂಬಗಳಿಗೆ ನಾಲ್ಕು ಕಂಚಿನ ಗದ್ದಿಗೇ ಕಲ್ಲುಗಳಿದ್ದವು. ಅವುಗಳ ಕೊಂಡಿಗಳು ಬೆಳ್ಳಿಯದ್ದಾಗಿದ್ದವು. ಅವುಗಳ ಬೋದಿಗಳ ಹೊದಿಕೆ ಮತ್ತು ಅಲಂಕಾರದ ಪಟ್ಟಿಗಳು ಬೆಳ್ಳಿಯದ್ದಾಗಿದ್ದವು.

[20] ಗುಡಾರದ ಮತ್ತು ಅಂಗಳದ ಸುತ್ತಲೂ ಇರುವ ಎಲ್ಲಾ ಗೂಟಗಳೂ ಕಂಚಿನಿಂದ ಮಾಡಿದ್ದಾಗಿದ್ದವು.

[21] ದೇವದರ್ಶನದ ಗುಡಾರಕ್ಕೆ ಅಂದರೆ ಒಡಂಬಡಿಕೆಯ ನಿಯಮದ ಗುಡಾರ ನಿರ್ಮಾಣಕ್ಕೆ ಬಳಸಿದ ವಸ್ತುಗಳ ಲೆಕ್ಕ ಇವು: ಮೋಶೆಯ ಆಜ್ಞೆಯ ಮೇರೆಗೆ ಯಾಜಕನಾದ ಆರೋನನ ಮಗನಾದ ಈತಾಮಾರನ ನಿರ್ದೇಶನದಲ್ಲಿ ಲೇವಿಯರ ಕೈಯಿಂದ ಲೆಕ್ಕ ಮಾಡಿಸಿದ್ದು.

[22] ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಯೆಹೂದ ಕುಲದವನಾದ ಊರಿಯ ಮಗನೂ ಹೂರನ ಮೊಮ್ಮಗನೂ ಆದ ಬೆಚಲಯೇಲನು ಮಾಡಿದನು.

[23] ಅವನ ಜೊತೆಯಲ್ಲಿ ದಾನ್ ಕುಲದವನಾದ ಅಹೀಸಾಮಾಕನ ಮಗ ಒಹೋಲಿಯಾಬನೂ ಇದ್ದನು. ಇವನು ಕೆತ್ತನೆ ಕೆಲಸ ಮಾಡುವವನೂ ಕುಶಲ ಕೆಲಸಗಾರನೂ ನೀಲಿ, ಧೂಮ್ರ ಮತ್ತು ರಕ್ತವರ್ಣದ ನಯವಾದ ನಾರಿನಿಂದ ಹೊಸೆದು ಕಸೂತಿ ಕೆಲಸ ಮಾಡುವವನೂ ಆಗಿದ್ದನು.

[24] ಪರಿಶುದ್ಧಾಲಯದ ಸೇವೆಗೆ ನೇಮಕವಾದ ಪರಿಶುದ್ಧ ಕೆಲಸಕ್ಕೆ ಉಪಯೋಗಿಸಿದ ಎಲ್ಲಾ ಬಂಗಾರವು ವಿಶೇಷವಾಗಿ ಅರ್ಪಿಸಿದ ಕಾಣಿಕೆಯಾಗಿತ್ತು, ಅದು ಇಪ್ಪತ್ತೊಂಬತ್ತು ತಲಾಂತು ಮತ್ತು ಏಳುನೂರ ಮೂವತ್ತು ಶೆಕೆಲ್ ಇತ್ತು.

[25] ಪರಿಶುದ್ಧಾಲಯದ ನಿಯಮದ ಮೇರೆಗೆ ಸಮೂಹದ ಜನಗಣತಿಯಲ್ಲಿ ದಾಖಲಿಸಿದ ಜನರಿಂದ ಸಂಗ್ರಹಿದ ಬೆಳ್ಳಿಯ ತೂಕವು ಸುಮಾರು 3,400 ಕಿಲೋಗ್ರಾಂ ಇತ್ತು.

[26] ಪರಿಶುದ್ಧಾಲಯದ ನಿಯಮದ ಮೇರೆಗೆ ಪ್ರತಿಯೊಬ್ಬ ಮನುಷ್ಯನಿಂದ ಒಂದೊಂದು “ಬೆಕಾ” ಅಂದರೆ ಅರ್ಧ ಶೆಕೆಲ್ ಆಗಿತ್ತು. ಕೊಟ್ಟವರ ಲೆಕ್ಕವನ್ನು ಇಪ್ಪತ್ತು ವರ್ಷದವರು ಮತ್ತು ಅದಕ್ಕೆ ಮೇಲಿನ ಪ್ರಾಯದವರನ್ನು ಲೆಕ್ಕ ಮಾಡಲಾಗಿ ಅದು 6,03,550 ಗಂಡಸರ ಸಂಖ್ಯೆ ಇತ್ತು.

[27] ಪರಿಶುದ್ಧಾಲಯದ ಗದ್ದಿಗೇ ಕಲ್ಲುಗಳಿಗೆ ಮತ್ತು ಪರದೆಗಳ ಗದ್ದಿಗೇ ಕಲ್ಲುಗಳಿಗೆ ಎರಕ ಹೊಯ್ಯಲು 3,400 ಕಿಲೋಗ್ರಾಂ ಬೆಳ್ಳಿ ಹಿಡಿಯಿತು. ಒಂದು ಗದ್ದಿಗೇ ಕಲ್ಲಿಗೆ ಮೂವತ್ನಾಲ್ಕು ಕಿಲೋಗ್ರಾಂನಂತೆ ನೂರು ಗದ್ದಿಗೇ ಕಲ್ಲುಗಳಿಗೆ 3,400 ಕಿಲೋಗ್ರಾಂ ಬೆಳ್ಳಿ ಆಯಿತು.

[28] ಒಂದರ ತೂಕ ಸುಮಾರು 34 ಕಿಲೋಗ್ರಾಂ ಇತ್ತು. ಅವನು ಕಂಬಗಳಿಗೆ ಕೊಂಡಿಗಳನ್ನೂ ಕಂಬದ ಬೋದಿಗೆ ಮೇಲ್ಹೊದಿಕೆಯನ್ನೂ ಅಲಂಕಾರದ ಪಟ್ಟಿಗಳನ್ನೂ ಮಾಡಿದರು.

[29] ವಿಶೇಷ ಕಾಣಿಕೆಯಾಗಿ ಬಂದ ಕಂಚು 2,425 ಕಿಲೋಗ್ರಾಂ ತೂಕವಿತ್ತು.

[30] ಆ ಕಂಚಿನಿಂದ ಅವರು ದೇವದರ್ಶನದ ಗುಡಾರದ ದ್ವಾರಗಳಿಗೆ ಗದ್ದಿಗೇ ಕಲ್ಲುಗಳನ್ನೂ ಬಲಿಪೀಠವನ್ನೂ ಅದಕ್ಕೆ ಕಂಚಿನ ಜಾಳಿಗೆಯನ್ನೂ ಬಲಿಪೀಠದ ಸಮಸ್ತ ಪಾತ್ರೆಗಳನ್ನೂ ಮಾಡಿದರು.

[31] ಅಂಗಳದ ಸುತ್ತಲಿನ ಗದ್ದಿಗೇ ಕಲ್ಲುಗಳನ್ನೂ, ಗುಡಾರದ ಮತ್ತು ಅಂಗಳದ ಸುತ್ತಲಿನ ಎಲ್ಲಾ ಗೂಟಗಳನ್ನೂ ಮಾಡಿದರು.

ವಿಮೋಚನಕಾಂಡ — Chapters