[1] ಯೆಹೋವ ದೇವರು ಮೋಶೆಯನ್ನು ಕರೆದು, ದೇವದರ್ಶನದ ಗುಡಾರದೊಳಗಿಂದ ಅವನೊಂದಿಗೆ ಮಾತನಾಡಿ,
[2] ನೀನು ಇಸ್ರಾಯೇಲರಿಗೆ ಆಜ್ಞಾಪಿಸಬೇಕಾದದ್ದೇನಂದರೆ: “ ‘ನಿಮ್ಮಲ್ಲಿ ಯಾರಾದರೂ ಯೆಹೋವ ದೇವರಿಗೆ ಒಂದು ಪ್ರಾಣಿಯನ್ನು ಕಾಣಿಕೆಯಾಗಿ ಸಮರ್ಪಿಸಲು ಆಶಿಸಿದರೆ, ಅದನ್ನು ದನಕರುಗಳಿಂದಾಗಲಿ, ಆಡು ಕುರಿಗಳಿಂದಾಗಲಿ ಆಯ್ದುಕೊಂಡು ಸಮರ್ಪಿಸಲಿ.
[3] “ ‘ಅಂಥವನು ದನಕರುಗಳನ್ನು ದಹನಬಲಿಯನ್ನಾಗಿ ಸಮರ್ಪಿಸುವುದಾದರೆ, ಆ ಪ್ರಾಣಿ ಕಳಂಕರಹಿತವಾದ ಗಂಡಾಗಿರಬೇಕು. ಯೆಹೋವ ದೇವರಿಗೆ ಒಪ್ಪಿಗೆಯಾಗುವಂತೆ ಅದನ್ನು ದೇವದರ್ಶನದ ಗುಡಾರದ ಬಳಿಗೆ ತರಬೇಕು.
[4] ದಹನಬಲಿ ಅರ್ಪಿಸುವವನು ತನ್ನ ಕೈಯನ್ನು ಆ ಪ್ರಾಣಿಯ ತಲೆಯ ಮೇಲೆ ಇಡಬೇಕು. ಹೀಗೆ ಅದು ಅವನಿಗೋಸ್ಕರ ಅವನ ಪ್ರಾಯಶ್ಚಿತ್ತಕ್ಕಾಗಿ ಅಂಗೀಕಾರವಾಗುವುದು.
[5] ಅವನು ಆ ಹೋರಿಯನ್ನು ಯೆಹೋವ ದೇವರ ಮುಂದೆ ವಧಿಸಬೇಕು. ಆಗ ಯಾಜಕರಾದ ಆರೋನನ ಪುತ್ರರು ರಕ್ತವನ್ನು ತಂದು, ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿರುವ ಬಲಿಪೀಠದ ಸುತ್ತಲೂ ಚಿಮುಕಿಸಬೇಕು.
[6] ಅವನು ಆ ದಹನಬಲಿಯ ಚರ್ಮವನ್ನು ಸುಲಿದು, ಅದರ ದೇಹವನ್ನು ಕಡಿದು, ತುಂಡುತುಂಡಾಗಿ ಮಾಡಬೇಕು.
[7] ಯಾಜಕನಾದ ಆರೋನನ ಪುತ್ರರು ಬಲಿಪೀಠದ ಮೇಲೆ ಕ್ರಮವಾಗಿ ಕಟ್ಟಿಗೆಯನ್ನು ಇಡಬೇಕು.
[8] ಆಗ ಯಾಜಕರಾದ ಆರೋನನ ಪುತ್ರರು ಅದರ ಭಾಗಗಳನ್ನು ಅಂದರೆ, ತಲೆಯನ್ನೂ ಮತ್ತು ಕೊಬ್ಬನ್ನೂ ಬಲಿಪೀಠದ ಮೇಲೆ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ಕ್ರಮವಾಗಿ ಇಡಬೇಕು.
[9] ಅದರ ಕರುಳುಗಳನ್ನೂ, ಕಾಲುಗಳನ್ನೂ ಅವರು ನೀರಿನಲ್ಲಿ ತೊಳೆಯಬೇಕು. ಯಾಜಕನು ಎಲ್ಲವನ್ನೂ ಬಲಿಪೀಠದ ಮೇಲೆ ಬೆಂಕಿಯಿಂದ ಸಮರ್ಪಿಸುವ ದಹನಬಲಿಯಂತೆಯೂ, ಯೆಹೋವ ದೇವರಿಗೆ ಸುವಾಸನೆಯಾಗುವಂತೆಯೂ ಸುಡಬೇಕು.
[10] “ ‘ದಹನಬಲಿಗೋಸ್ಕರ ತನ್ನ ಕಾಣಿಕೆಯು ಮಂದೆಯಿಂದ ತರುವುದಾದರೆ ಅವನು ಕುರಿಗಳಲ್ಲಾಗಲಿ, ಮೇಕೆಗಳಲ್ಲಾಗಲಿ, ಕಳಂಕರಹಿತ ಒಂದು ಗಂಡನ್ನು ತರಬೇಕು.
[11] ಅವನು ಅದನ್ನು ಬಲಿಪೀಠದ ಉತ್ತರದ ಕಡೆಯಲ್ಲಿ ಯೆಹೋವ ದೇವರ ಮುಂದೆ ವಧಿಸಬೇಕು. ಇದಲ್ಲದೆ ಯಾಜಕರಾದ ಆರೋನನ ಪುತ್ರರು ಅದರ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಬೇಕು.
[12] ಅರ್ಪಿಸುವವನು ಆ ಪ್ರಾಣಿಯ ದೇಹವನ್ನು ತುಂಡುತುಂಡಾಗಿ ಕಡಿದ ಮೇಲೆ, ಯಾಜಕನು ಆ ತುಂಡುಗಳನ್ನೂ, ತಲೆಯನ್ನೂ, ಕೊಬ್ಬನ್ನೂ ಬಲಿಪೀಠದ ಮೇಲಿನ ಬೆಂಕಿಯಲ್ಲಿ ಕಟ್ಟಿಗೆಯ ಮೇಲೆ ಕ್ರಮವಾಗಿ ಇಡಬೇಕು.
[13] ಕರುಳುಗಳನ್ನೂ ಕಾಲುಗಳನ್ನೂ ನೀರಿನಿಂದ ತೊಳೆಯಬೇಕು. ಆಗ ಯಾಜಕನು ಅವೆಲ್ಲವುಗಳನ್ನೂ ತಂದು ಬಲಿಪೀಠದ ಮೇಲೆ ಸುಡಬೇಕು. ಬೆಂಕಿಯಿಂದ ಸಮರ್ಪಿಸುವ ದಹನಬಲಿ ಯೆಹೋವ ದೇವರಿಗೆ ಸುವಾಸನೆಯಾಗುವಂತೆಯೂ ಸುಡಬೇಕು.
[14] “ ‘ಯೆಹೋವ ದೇವರಿಗೆ ದಹನಬಲಿಯಾಗಿ ಸಮರ್ಪಿಸುವಂಥದ್ದು ಪಕ್ಷಿಗಳಾಗಿದ್ದರೆ, ಅವನು ತನ್ನ ಯಜ್ಞಕ್ಕಾಗಿ ಬೆಳವಕ್ಕಿಯನ್ನಾಗಲಿ ಇಲ್ಲವೆ ಪಾರಿವಾಳದ ಮರಿಯನ್ನಾಗಲಿ ತರಬೇಕು.
[15] ಆಗ ಯಾಜಕನು ಅದನ್ನೂ ಬಲಿಪೀಠದ ಬಳಿಗೆ ತಂದು ಅದರ ತಲೆಯನ್ನು ಮುರಿದು, ಬಲಿಪೀಠದ ಮೇಲೆ ಸುಡಬೇಕು. ಅದರ ರಕ್ತವನ್ನು ಬಲಿಪೀಠದ ಹೊರಬದಿಯಲ್ಲಿ ಹಿಂಡಬೇಕು.
[16] ಇದಲ್ಲದೆ ಅವನು ಅದರ ರೆಕ್ಕೆ ಪುಕ್ಕಗಳೊಂದಿಗೆ ಕರುಳುಗಳನ್ನೂ ಕಿತ್ತು, ಬಲಿಪೀಠದ ಬಳಿ ಪೂರ್ವ ಭಾಗದಲ್ಲಿ ಬೂದಿಯಿರುವ ಸ್ಥಳದಲ್ಲಿ ಬಿಸಾಡಬೇಕು.
[17] ಅವನು ಅದನ್ನು ರೆಕ್ಕೆಗಳೊಂದಿಗೆ ಹರಿಯಬೇಕು. ಆದರೆ ಬೇರೆಬೇರೆಯಾಗಿ ವಿಭಾಗಿಸಬಾರದು. ಆಗ ಯಾಜಕನು ಅದನ್ನು ಬಲಿಪೀಠದ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ಸಮರ್ಪಿಸುವ ದಹನಬಲಿ ಯೆಹೋವ ದೇವರಿಗೆ ಸುವಾಸನೆಯಾಗುವಂತೆ ಸುಡಬೇಕು.