Skip to content
Opens in a new window
Listen to this chapter • 5:26

[1] ಈ ಸಮಯದಲ್ಲಿ ಲೇವಿಯ ವಂಶದವನಾದ ಒಬ್ಬನು ಲೇವಿಯ ಸ್ತ್ರೀಯನ್ನು ಮದುವೆಯಾದನು.

[2] ಆ ಸ್ತ್ರೀಯು ಗರ್ಭಧರಿಸಿ, ಗಂಡು ಮಗುವನ್ನು ಹೆತ್ತಳು. ಅದು ಸುಂದರವಾಗಿದ್ದುದರಿಂದ ಮೂರು ತಿಂಗಳು ಬಚ್ಚಿಟ್ಟರು.

[3] ಆದರೆ ಅದನ್ನು ಹೆಚ್ಚುಕಾಲ ಬಚ್ಚಿಡುವುದಕ್ಕಾಗದೆ ಇದ್ದಾಗ, ಅವನಿಗಾಗಿ ಆಪಿನ ಪೆಟ್ಟಿಗೆಯನ್ನು ತೆಗೆದುಕೊಂಡು, ಜೇಡಿಮಣ್ಣನ್ನು ಮತ್ತು ರಾಳವನ್ನು ಹಚ್ಚಿ, ಕೂಸನ್ನು ಅದರಲ್ಲಿಟ್ಟು, ನೈಲ್ ನದಿಯ ಅಂಚಿನಲ್ಲಿ ಇದ್ದ ಜಂಬು ಹುಲ್ಲಿನಲ್ಲಿ ಇಟ್ಟರು.

[4] ಕೂಸಿಗೆ ಏನಾಗುವುದೋ ಎಂದು ತಿಳಿದುಕೊಳ್ಳುವುದಕ್ಕೆ ದೂರದಲ್ಲಿ ಅದರ ಅಕ್ಕ ನಿಂತುಕೊಂಡಳು.

[5] ಆಗ ಫರೋಹನ ಮಗಳು ನೈಲ್ ನದಿಯಲ್ಲಿ ಸ್ನಾನ ಮಾಡುವದಕ್ಕೆ ಬಂದಳು. ಆಕೆಯ ದಾಸಿಯರು ನದಿಯ ಅಂಚಿನಲ್ಲಿ ತಿರುಗಾಡುತ್ತಿದ್ದರು. ಫರೋಹನ ಮಗಳು ಜಂಬು ಹುಲ್ಲಿನಲ್ಲಿದ್ದ ಪೆಟ್ಟಿಗೆಯನ್ನು ನೋಡಿ ತನ್ನ ದಾಸಿಯನ್ನು ಕಳುಹಿಸಿ, ಅದನ್ನು ತರಿಸಿದಳು.

[6] ಆ ಪೆಟ್ಟಿಗೆಯನ್ನು ತೆರೆದಾಗ, ಕೂಸನ್ನು ನೋಡಿದಳು. ಕೂಸು ಅಳುತ್ತಿತ್ತು. ಆಕೆಗೆ ಅದರ ಮೇಲೆ ಕನಿಕರ ಹುಟ್ಟಿತು. ಅವಳು, “ಇದು ಹಿಬ್ರಿಯರ ಮಕ್ಕಳಲ್ಲಿ ಒಂದಾಗಿರಬೇಕು,” ಎಂದು ಹೇಳಿದಳು.

[7] ಆಗ ಮಗುವಿನ ಅಕ್ಕ ಫರೋಹನ ಮಗಳಿಗೆ, “ನಾನು ಹೋಗಿ ಈ ಕೂಸಿಗೆ ಹಾಲು ಕೊಟ್ಟು ಸಾಕುವುದಕ್ಕೆ ಹಿಬ್ರಿಯ ಸ್ತ್ರೀಯರಿಂದ ಒಬ್ಬ ದಾದಿಯನ್ನು ನಿನಗೋಸ್ಕರ ಕರೆದುಕೊಂಡು ಬರಲೋ?” ಎಂದಳು.

[8] ಫರೋಹನ ಮಗಳು ಆಕೆಗೆ, “ಹೌದು, ಹೋಗು,” ಎಂದಳು. ಆಗ ಆ ಹುಡುಗಿಯು ಹೋಗಿ ಕೂಸಿನ ತಾಯಿಯನ್ನೇ ಕರೆದುಕೊಂಡು ಬಂದಳು.

[9] ಫರೋಹನ ಮಗಳು ಆಕೆಗೆ, “ಈ ಮಗುವನ್ನು ತೆಗೆದುಕೊಂಡುಹೋಗಿ, ನನಗೋಸ್ಕರ ಸಾಕು. ನಾನು ನಿನಗೆ ಸಂಬಳವನ್ನು ಕೊಡುವೆನು,” ಎಂದಳು. ಆಗ ಆ ಸ್ತ್ರೀಯು ಕೂಸನ್ನು ತೆಗೆದುಕೊಂಡುಹೋಗಿ ಸಾಕಿದಳು.

[10] ಆ ಮಗುವು ಬೆಳೆದಾಗ, ಅವನನ್ನು ಫರೋಹನ ಮಗಳ ಬಳಿಗೆ ತೆಗೆದುಕೊಂಡು ಹೋದಳು. ಅವನು ಆಕೆಗೆ ಮಗನಾದನು. ಆಕೆಯು, “ನೀರಿನೊಳಗಿಂದ ಇವನನ್ನು ಎಳೆದೆ,” ಎಂದು ಹೇಳಿ ಅವನಿಗೆ “ಮೋಶೆ” ಎಂದು ಹೆಸರಿಟ್ಟಳು.

[11] ಹಲವು ವರ್ಷಗಳ ನಂತರ ಮೋಶೆಯು ದೊಡ್ಡವನಾದ ಮೇಲೆ ತನ್ನ ಸಹೋದರರ ಬಳಿಗೆ ಹೋಗಿ ಅವರ ಬಿಟ್ಟೀ ಕೆಲಸಗಳನ್ನು ನೋಡಿದಾಗ, ಒಬ್ಬ ಈಜಿಪ್ಟಿನವನು ತನ್ನ ಸಹೋದರರಲ್ಲಿ ಒಬ್ಬ ಹಿಬ್ರಿಯನನ್ನು ಹೊಡೆಯುವುದನ್ನು ನೋಡಿದನು.

[12] ಅವನು ಸುತ್ತಮುತ್ತ ನೋಡಿ, ಯಾರೂ ಇಲ್ಲವೆಂದು ತಿಳಿದು ಆ ಈಜಿಪ್ಟಿನವನನ್ನು ಕೊಂದುಹಾಕಿ, ಮರಳಿನಲ್ಲಿ ಮುಚ್ಚಿಹಾಕಿದನು.

[13] ಮರುದಿನ ಅವನು ಮತ್ತೆ ಹೊರಗೆ ಹೋದಾಗ, ಹಿಬ್ರಿಯರಾದ ಇಬ್ಬರು ಮನುಷ್ಯರು ಜಗಳವಾಡುತ್ತಿದ್ದರು. ತಪ್ಪು ಮಾಡಿದವನಿಗೆ ಮೋಶೆ, “ಏಕೆ ನಿನ್ನ ಜೊತೆಯವನನ್ನು ಹೊಡೆಯುತ್ತೀ?” ಎಂದನು.

[14] ಅದಕ್ಕವನು, “ಯಾರು ನಿನ್ನನ್ನು ನಮ್ಮ ಮೇಲೆ ಪ್ರಭುವನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ನೇಮಿಸಿದ್ದಾರೆ? ಆ ಈಜಿಪ್ಟಿನವನನ್ನು ಕೊಂದುಹಾಕಿದಂತೆ ನನ್ನನ್ನೂ ಕೊಂದು ಹಾಕಬೇಕೆಂದಿದ್ದೀಯೋ?” ಎಂದನು. ಆಗ ಮೋಶೆಯು ಭಯಪಟ್ಟು, “ನಿಶ್ಚಯವಾಗಿ ನಾನು ಮಾಡಿದ ಕಾರ್ಯವು ತಿಳಿದಿರಬೇಕು,” ಎಂದುಕೊಂಡನು.

[15] ಫರೋಹನು ಈ ವಿಷಯವನ್ನು ಕೇಳಿದಾಗ, ಮೋಶೆಯನ್ನು ಕೊಂದುಹಾಕುವುದಕ್ಕೆ ಪ್ರಯತ್ನಿಸಿದನು. ಆದರೆ ಮೋಶೆಯು ಫರೋಹನ ಎದುರಿನಿಂದ ಓಡಿಹೋಗಿ ಮಿದ್ಯಾನ್ ದೇಶಕ್ಕೆ ವಾಸಿಸಲು ಹೋದನು. ಅಲ್ಲಿ ಒಂದು ಬಾವಿಯ ಬಳಿಯಲ್ಲಿ ಕೂತುಕೊಂಡನು.

[16] ಮಿದ್ಯಾನಿನ ಯಾಜಕನಿಗೆ ಏಳುಮಂದಿ ಪುತ್ರಿಯರಿದ್ದರು. ಇವರು ಬಂದು ತಮ್ಮ ತಂದೆಯ ಕುರಿಮಂದೆಗಳಿಗೆ ನೀರು ಕುಡಿಸುವದಕ್ಕಾಗಿ ನೀರು ಸೇದಿ, ದೋಣಿಗಳನ್ನು ತುಂಬಿಸುತ್ತಿದ್ದರು.

[17] ಕುರುಬರು ಬಂದು ಅವರನ್ನು ಅಲ್ಲಿಂದ ಓಡಿಸಲು, ಮೋಶೆಯು ಎದ್ದು ಬಂದು ಅವರಿಗೆ ಸಹಾಯಮಾಡಿ, ಅವರ ಕುರಿಗಳಿಗೆ ನೀರು ಕುಡಿಸಿದನು.

[18] ಹುಡುಗಿಯರು ತಮ್ಮ ತಂದೆ ರೆಯೂವೇಲನ ಬಳಿಗೆ ಬಂದಾಗ, ಅವನು ಅವರಿಗೆ, “ಏಕೆ ಈ ಹೊತ್ತು ಬೇಗ ಬಂದಿರಿ?” ಎಂದನು.

[19] ಅದಕ್ಕೆ ಅವರು, “ಈಜಿಪ್ಟಿನವನಾದ ಒಬ್ಬ ಮನುಷ್ಯನು ಕುರುಬರ ಕೈಯಿಂದ ನಮ್ಮನ್ನು ತಪ್ಪಿಸಿ, ನಮಗೋಸ್ಕರ ಸಾಕಾಗುವಷ್ಟು ನೀರು ಸೇದಿ, ಮಂದೆಗೆ ಕುಡಿಸಿದನು,” ಎಂದರು.

[20] ಆಗ ರೆಯೂವೇಲನು ತನ್ನ ಪುತ್ರಿಯರಿಗೆ, “ಅವನು ಎಲ್ಲಿದ್ದಾನೆ? ಏಕೆ ಆ ಮನುಷ್ಯನನ್ನು ಬಿಟ್ಟು ಬಂದಿರಿ? ಅವನನ್ನು ಕರೆಯಿರಿ, ಅವನು ಊಟಮಾಡಲಿ,” ಎಂದನು.

[21] ಮೋಶೆಯು ಆ ಮನುಷ್ಯನ ಸಂಗಡ ವಾಸಮಾಡುವುದಕ್ಕೆ ಸಮ್ಮತಿಸಿದನು. ಅವನು ಮೋಶೆಗೆ ತನ್ನ ಮಗಳಾದ ಚಿಪ್ಪೋರಳನ್ನು ಮದುವೆ ಮಾಡಿಕೊಟ್ಟನು.

[22] ಆಕೆಯು ಅವನಿಗೆ ಮಗನನ್ನು ಹೆತ್ತಾಗ, ಮೋಶೆಯು ಅವನಿಗೆ ಗೇರ್ಷೋಮ್ ಎಂದು ಹೆಸರಿಟ್ಟನು ಏಕೆಂದರೆ ಅವನು, “ನಾನು ಪರದೇಶದಲ್ಲಿ ಅನ್ಯನಾಗಿದ್ದೇನೆ,” ಎಂದನು.

[23] ಹೀಗೆ ಬಹಳ ದಿನಗಳಾದ ಮೇಲೆ ಈಜಿಪ್ಟಿನ ಅರಸನು ಸತ್ತನು. ಇಸ್ರಾಯೇಲರು ದಾಸತ್ವದ ಕಾರಣದಿಂದ ನರಳಾಡುತ್ತಾ ಮೊರೆಯಿಡುತ್ತಿದ್ದರು. ದಾಸತ್ವದ ನಿಮಿತ್ತವಾಗಿ ಅವರ ಕೂಗು ದೇವರ ಬಳಿಗೆ ಮುಟ್ಟಿತು.

[24] ದೇವರು ಅವರ ನರಳಾಟವನ್ನು ಕೇಳಿದಾಗ, ಅವರು ಅಬ್ರಹಾಮ, ಇಸಾಕ ಮತ್ತು ಯಾಕೋಬನ ಸಂಗಡ ತಾವು ಮಾಡಿದ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡರು.

[25] ದೇವರು ಇಸ್ರಾಯೇಲರನ್ನು ನೋಡಿ ಅವರಲ್ಲಿ ಕನಿಕರಗೊಂಡರು.

ವಿಮೋಚನಕಾಂಡ — Chapters