Skip to content
Opens in a new window
Listen to this chapter • 11:25

[1] ಯೆಹೋವ ದೇವರು ಈಜಿಪ್ಟಿನಲ್ಲಿ ಮೋಶೆ ಆರೋನರ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,

[2] “ಎಲ್ಲಾ ಮಾಸಗಳಲ್ಲಿ ಇದೇ ನಿಮಗೆ ಆದಿಮಾಸವಾಗಿರಬೇಕು. ಇದು ನಿಮಗೆ ವರುಷದ ಮೊದಲನೆಯ ತಿಂಗಳಾಗಿರಬೇಕು.

[3] ಇಸ್ರಾಯೇಲ್ ಸಭೆಗೆಲ್ಲಾ ನೀವು ಹೇಳಬೇಕಾದದ್ದೇನೆಂದರೆ, ಈ ತಿಂಗಳಿನ ಹತ್ತನೆಯ ದಿನದಲ್ಲಿ ಅವರು ತಮಗೆ ಪ್ರತಿ ಗೋತ್ರಗಳ ಪ್ರತಿಯೊಂದು ಕುಟುಂಬಕ್ಕೆ ಒಂದರಂತೆ ಕುರಿಮರಿಯನ್ನು ತೆಗೆದುಕೊಳ್ಳಬೇಕು.

[4] ಆ ಕುರಿಮರಿಯನ್ನು ಪೂರ್ತಿಯಾಗಿ ತಿನ್ನುವುದಕ್ಕೆ ಕುಟುಂಬವು ಚಿಕ್ಕದಾಗಿದ್ದರೆ, ತನ್ನ ಮನೆಗೆ ಸಮೀಪವಾಗಿರುವ ತನ್ನ ನೆರೆಯವನ ಕುಟುಂಬದಲ್ಲಿ ಲೆಕ್ಕನೋಡಿ ಅವರೊಂದಿಗೆ ಪಾಲು ಹೊಂದಲಿ. ಒಬ್ಬೊಬ್ಬನು ತಿನ್ನುವ ಅಳತೆಯ ಪ್ರಕಾರ ಕುರಿಮರಿಯನ್ನು ತೆಗೆದುಕೊಳ್ಳಲಿ.

[5] ನೀವು ಆಯ್ದುಕೊಳ್ಳುವ ಕುರಿಮರಿಯು ದೋಷರಹಿತವಾಗಿರುವ ಒಂದು ವರ್ಷದ ಗಂಡುಮರಿಯಾಗಿರಬೇಕು. ನೀವು ಕುರಿಗಳಿಂದಾಗಲಿ, ಆಡುಗಳಿಂದಾಗಲಿ ತೆಗೆದುಕೊಳ್ಳಬಹುದು.

[6] ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಳ್ಳಬೇಕು. ತರುವಾಯ ಸಂಜೆಯಲ್ಲಿ ಇಸ್ರಾಯೇಲಿನ ಜನಾಂಗದವರೆಲ್ಲರೂ ಅವುಗಳನ್ನು ವಧಿಸಬೇಕು.

[7] ಅವರು ರಕ್ತದಲ್ಲಿ ಸ್ವಲ್ಪ ತೆಗೆದು, ಕುರಿಮರಿಯ ಮಾಂಸವನ್ನು ಭೋಜನಮಾಡುವ ಮನೆಗಳ ಬಾಗಿಲಿನ ನಿಲುವು ಪಟ್ಟಿಗಳಿಗೂ, ಮೇಲಿನ ಪಟ್ಟಿಗೂ ಹಚ್ಚಬೇಕು.

[8] ಆ ರಾತ್ರಿಯಲ್ಲಿಯೇ ಮಾಂಸವನ್ನು ಸುಟ್ಟು, ಅದನ್ನೂ, ಹುಳಿಯಿಲ್ಲದ ರೊಟ್ಟಿಗಳನ್ನೂ ಕಹಿಯಾದ ಪಲ್ಯಗಳ ಸಂಗಡ ತಿನ್ನಬೇಕು.

[9] ಅದರಲ್ಲಿ ಯಾವುದನ್ನೂ ಹಸಿಯಾದದ್ದನ್ನಾಗಲಿ, ನೀರಿನಲ್ಲಿ ಬೇಯಿಸಿಯಾಗಲಿ ತಿನ್ನದೆ, ಅದರ ತಲೆ, ತೊಡೆ, ಒಳಗಿನವುಗಳ ಸಹಿತವಾಗಿ ಬೆಂಕಿಯಲ್ಲಿ ಸುಟ್ಟೇ ಅದನ್ನು ತಿನ್ನಬೇಕು.

[10] ಅದರಲ್ಲಿ ಬೆಳಗಿನವರೆಗೆ ಏನನ್ನೂ ಉಳಿಸಬಾರದು. ಬೆಳಗಿನವರೆಗೆ ಅದರಲ್ಲಿ ಉಳಿದದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.

[11] ನೀವು ಅದನ್ನು ತಿನ್ನತಕ್ಕ ರೀತಿ ಇದೇ: ನೀವು ನಿಮ್ಮ ನಡುಕಟ್ಟಿಕೊಂಡು, ಕೆರಮೆಟ್ಟಿಕೊಂಡು ಊರುಗೋಲನ್ನು ಹಿಡಿದುಕೊಂಡು ತ್ವರೆಯಾಗಿ ಅದನ್ನು ತಿನ್ನಬೇಕು, ಅದು ಯೆಹೋವ ದೇವರ ಪಸ್ಕವಾಗಿದೆ.

[12] “ಏಕೆಂದರೆ ನಾನು ಈ ರಾತ್ರಿ ಈಜಿಪ್ಟ್ ದೇಶದಲ್ಲಿರುವ ಎಲ್ಲಾ ಮನುಷ್ಯರಲ್ಲಿಯೂ, ಪಶುಗಳಲ್ಲಿಯೂ ಇರುವ ಚೊಚ್ಚಲಾದವುಗಳನ್ನು ಸಂಹರಿಸುವೆನು. ಈಜಿಪ್ಟಿನ ದೇವರುಗಳಿಗೆಲ್ಲಾ ನಾನು ನ್ಯಾಯತೀರಿಸುವೆನು. ನಾನೇ ಯೆಹೋವ ದೇವರು.

[13] ಆದರೆ ನೀವು ಇರುವ ಎಲ್ಲಾ ಮನೆಗಳ ಮೇಲೆ ರಕ್ತವು ನಿಮಗೆ ಗುರುತಾಗಿರುವುದು. ಆ ರಕ್ತವನ್ನು ನಾನು ನೋಡುವಾಗ, ನಿಮ್ಮನ್ನು ದಾಟಿಹೋಗುವೆನು. ಈಜಿಪ್ಟ್ ದೇಶವನ್ನು ನಾನು ಸಂಹರಿಸುವ ಸಮಯದಲ್ಲಿ, ನಿಮ್ಮನ್ನು ನಾಶಮಾಡುವ ಯಾವ ಉಪದ್ರವವು ನಿಮ್ಮ ಮೇಲೆ ಬರುವುದಿಲ್ಲ.

[14] “ಈ ದಿನವು ನಿಮಗೆ ಜ್ಞಾಪಕಾರ್ಥವಾಗಿರುವುದು. ನೀವು ಅದನ್ನು ಯೆಹೋವ ದೇವರಿಗೆ ಹಬ್ಬವಾಗಿ ತಲತಲಾಂತರಗಳಲ್ಲಿ ಆಚರಿಸಬೇಕು. ಅದನ್ನು ಶಾಶ್ವತ ನಿಯಮವೆಂದು ಎಂದೆಂದಿಗೂ ಆಚರಿಸಬೇಕು.

[15] ಏಳು ದಿನಗಳವರೆಗೆ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲಿಯೇ ಹುಳಿಹಿಟ್ಟನ್ನು ನಿಮ್ಮ ಮನೆಯೊಳಗಿಂದ ತೆಗೆದುಹಾಕಬೇಕು. ಏಕೆಂದರೆ ಮೊದಲನೆಯ ದಿನದಿಂದ ಏಳನೆಯ ದಿನದವರೆಗೆ ಹುಳಿರೊಟ್ಟಿ ತಿನ್ನುವವರನ್ನು ಇಸ್ರಾಯೇಲಿನೊಳಗಿಂದ ಬಹಿಷ್ಕರಿಸಬೇಕು.

[16] ಇದಲ್ಲದೆ ಮೊದಲನೆಯ ದಿನದಲ್ಲಿ ಪರಿಶುದ್ಧ ದೇವಾರಾಧನೆಗಾಗಿ ಸಭೆ ಸೇರಬೇಕು, ಏಳನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆ ಸೇರಬೇಕು. ಊಟಕ್ಕೆ ಬೇಕಾದದ್ದನ್ನು ಮಾಡುವುದನ್ನು ಬಿಟ್ಟು, ಆ ದಿನಗಳಲ್ಲಿ ಯಾವ ತರವಾದ ಕೆಲಸವನ್ನೂ ಮಾಡಬಾರದು.

[17] “ನೀವು ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಬೇಕು. ಏಕೆಂದರೆ ಆ ದಿನದಲ್ಲಿಯೇ ನಾನು ನಿಮ್ಮ ಸೈನ್ಯಗಳನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿದ್ದೇನೆ. ಆದಕಾರಣ ನಿಮ್ಮ ಸಂತತಿಗಳಲ್ಲಿ ಅದನ್ನು ಶಾಶ್ವತ ನಿಯಮವೆಂದು ಎಂದೆಂದಿಗೂ ಆಚರಿಸಬೇಕು.

[18] ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆಯಿಂದ ಅದೇ ತಿಂಗಳಿನ ಇಪ್ಪತ್ತೊಂದನೆಯ ದಿನ ಸಂಜೆಯವರೆಗೆ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು.

[19] ಏಳು ದಿನಗಳವರೆಗೆ ಹುಳಿ ಹಿಟ್ಟು ನಿಮ್ಮ ಮನೆಗಳಲ್ಲಿ ಸಿಕ್ಕಬಾರದು, ಏಕೆಂದರೆ ಹುಳಿ ಬೆರೆಸಿದ್ದನ್ನು ಯಾರು ತಿನ್ನುವರೋ ಅವರು ಪರದೇಶದವರಾಗಲಿ, ಸ್ವದೇಶದವರಾಗಲಿ ಅವರನ್ನು ಇಸ್ರಾಯೇಲ್ ಸಭೆಯೊಳಗಿಂದ ಬಹಿಷ್ಕರಿಸಬೇಕು.

[20] ಹುಳಿ ಕಲಸಿದ್ದು ಯಾವುದೇ ಆಗಿರಲಿ ನೀವು ತಿನ್ನಬಾರದು. ನಿಮ್ಮ ಎಲ್ಲಾ ನಿವಾಸಗಳಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನೇ ತಿನ್ನಬೇಕು,” ಎಂದು ಹೇಳಿದರು.

[21] ಆಗ ಮೋಶೆಯು ಇಸ್ರಾಯೇಲಿನ ಎಲ್ಲಾ ಹಿರಿಯರನ್ನು ಕರೆದು ಅವರಿಗೆ, “ನಿಮ್ಮ ಕುಟುಂಬಗಳ ಪ್ರಕಾರ ಕುರಿಗಳನ್ನು ಆಯ್ದುಕೊಂಡು ಪಸ್ಕಹಬ್ಬಕ್ಕಾಗಿ ಕೊಯ್ಯಿರಿ.

[22] ಹಿಸ್ಸೋಪ ಗಿಡದ ಕಟ್ಟನ್ನು ತೆಗೆದುಕೊಂಡು, ಬೋಗುಣಿಯಲ್ಲಿರುವ ರಕ್ತದಲ್ಲಿ ಅದನ್ನು ಅದ್ದಿ, ಬಾಗಿಲಿನ ಮೇಲೆ ಅಡ್ಡ ಪಟ್ಟಿಗೂ, ಅದರ ಪಕ್ಕದಲ್ಲಿರುವ ಎರಡು ನಿಲುವು ಕಂಬಗಳಿಗೂ ಹಚ್ಚಿರಿ. ನಿಮ್ಮಲ್ಲಿ ಯಾರೂ ಬೆಳಗಾಗುವವರೆಗೆ ಮನೆಯ ಬಾಗಿಲನ್ನು ಬಿಟ್ಟುಹೋಗಬಾರದು.

[23] ಏಕೆಂದರೆ ಯೆಹೋವ ದೇವರು ಈಜಿಪ್ಟಿನವರನ್ನು ಸಂಹರಿಸುವುದಕ್ಕಾಗಿ ಹಾದುಹೋಗುವರು. ಅವರು ಅಡ್ಡ ಪಟ್ಟಿಯ ಮೇಲೂ, ಅದರ ಪಕ್ಕದ ಎರಡು ನಿಲುವು ಕಂಬಗಳ ಮೇಲೂ ರಕ್ತವನ್ನು ನೋಡಿದಾಗ, ಸಂಹಾರಕನು ನಿಮ್ಮ ಮನೆಗಳೊಳಗೆ ಬಂದು ನಿಮ್ಮನ್ನು ಸಂಹಾರಮಾಡದಂತೆ, ಯೆಹೋವ ದೇವರು ನಿಮ್ಮ ಬಾಗಿಲುಗಳನ್ನು ದಾಟಿಹೋಗುವರು.

[24] “ಇದನ್ನು ಒಂದು ಶಾಸನವಾಗಿ ನೀವೂ, ನಿಮ್ಮ ಪುತ್ರರೂ ಸದಾಕಾಲಕ್ಕೂ ಆಚರಿಸತಕ್ಕದ್ದು.

[25] ಯೆಹೋವ ದೇವರು ಕೊಡುವೆನೆಂದು ಪ್ರಮಾಣ ಮಾಡಿದ ದೇಶಕ್ಕೆ ನೀವು ಬಂದಾಗ, ಈ ಆಚರಣೆಯನ್ನು ನೀವು ಕೈಗೊಳ್ಳಬೇಕು.

[26] ನಿಮ್ಮ ಮಕ್ಕಳು, ‘ಈ ಆಚರಣೆಯ ಅರ್ಥವೇನು?’ ಎಂದು ಕೇಳಿದಾಗ,

[27] ನೀವು ಅವರಿಗೆ, ‘ಯೆಹೋವ ದೇವರು ಈಜಿಪ್ಟ್ ದೇಶದಲ್ಲಿ ಈಜಿಪ್ಟಿನವರನ್ನು ಸಂಹರಿಸಿ, ನಮ್ಮ ಮನೆಗಳನ್ನು ಕಾಪಾಡುವುದಕ್ಕಾಗಿ ಇಸ್ರಾಯೇಲರ ಮನೆಗಳನ್ನು ದಾಟಿಹೋದ ಯೆಹೋವ ದೇವರ ಪಸ್ಕ ಬಲಿಯ ಆಚರಣೆಯನ್ನು ನಡೆಸುತ್ತಿದ್ದೇವೆ,’ ಎಂದು ನೀವು ಹೇಳಬೇಕು,” ಎಂದನು. ಆಗ ಜನರು ತಲೆಬಾಗಿಸಿ ಆರಾಧಿಸಿದರು.

[28] ಯೆಹೋವ ದೇವರು ಮೋಶೆ ಆರೋನರಿಗೆ ಆಜ್ಞಾಪಿಸಿದ ಮೇರೆಗೆ ಇಸ್ರಾಯೇಲರು ಮಾಡಿದರು.

[29] ಮಧ್ಯರಾತ್ರಿಯಲ್ಲಿ ಸಿಂಹಾಸನದ ಮೇಲೆ ಕೂತುಕೊಂಡ ಫರೋಹನ ಚೊಚ್ಚಲು ಮಗನು ಮೊದಲುಗೊಂಡು, ಸೆರೆಯಲ್ಲಿದ್ದ ಸೆರೆಯವನ ಚೊಚ್ಚಲು ಮಗನವರೆಗೂ, ಎಂದರೆ ಈಜಿಪ್ಟ್ ದೇಶದಲ್ಲಿದ್ದ ಎಲ್ಲಾ ಚೊಚ್ಚಲು ಮಕ್ಕಳನ್ನೂ, ಪಶುಗಳಲ್ಲಿ ಚೊಚ್ಚಲಾದವುಗಳೆಲ್ಲವನ್ನೂ ಯೆಹೋವ ದೇವರು ಸಂಹರಿಸಿದರು.

[30] ಆಗ ಫರೋಹನೂ, ಅವನ ಎಲ್ಲಾ ಅಧಿಕಾರಿಗಳೂ, ಎಲ್ಲಾ ಈಜಿಪ್ಟಿನವರೂ ರಾತ್ರಿಯಲ್ಲಿ ಎದ್ದರು. ಆ ಈಜಿಪ್ಟಿನಲ್ಲಿ ದೊಡ್ಡ ಗೋಳಾಟವಾಯಿತು. ಏಕೆಂದರೆ ಅಲ್ಲಿ ಸತ್ತವರು ಇಲ್ಲದ ಒಂದು ಮನೆಯಾದರೂ ಇರಲಿಲ್ಲ.

[31] ಫರೋಹನು ರಾತ್ರಿಯಲ್ಲಿ ಮೋಶೆ ಆರೋನರನ್ನು ಕರೆಯಿಸಿ ಅವರಿಗೆ, “ನೀವು ಮತ್ತು ಇಸ್ರಾಯೇಲರೆಲ್ಲರೂ ಎದ್ದು ನನ್ನ ಜನರೊಳಗಿಂದ ಹೊರಟು ಹೋಗಿರಿ. ನೀವು ಹೇಳಿದ ಹಾಗೆಯೇ, ಯೆಹೋವ ದೇವರನ್ನು ಆರಾಧಿಸುವುದಕ್ಕೆ ಹೊರಟುಹೋಗಿರಿ.

[32] ನೀವು ಹೇಳಿದಂತೆ ನಿಮ್ಮ ಕುರಿದನಗಳನ್ನು ತೆಗೆದುಕೊಳ್ಳಿರಿ. ನನ್ನನ್ನು ಸಹ ಆಶೀರ್ವದಿಸಿರಿ,” ಎಂದನು.

[33] ಇದಲ್ಲದೆ ಈಜಿಪ್ಟಿನವರು, “ನಾವೆಲ್ಲರೂ ಸಾಯುತ್ತೇವೆ,” ಎಂದು ಹೇಳಿ, ಅವರನ್ನು ತ್ವರೆಯಾಗಿ ದೇಶದೊಳಗಿಂದ ಕಳುಹಿಸಿಬಿಡುವ ಹಾಗೆ ಜನರನ್ನು ಒತ್ತಾಯಮಾಡಿದರು.

[34] ಆದ್ದರಿಂದ ಜನರು ಹಿಟ್ಟಿಗೆ ಹುಳಿ ಹಾಕುವುದಕ್ಕಿಂತ ಮುಂಚೆ, ಅಡಿಗೆ ಮಾಡುವ ಪಾತ್ರೆಗಳ ಸಂಗಡ ಬಟ್ಟೆಗಳಲ್ಲಿ ಕಟ್ಟಿ, ಹೆಗಲಿನ ಮೇಲೆ ಹೊತ್ತುಕೊಂಡು ಹೋದರು.

[35] ಇಸ್ರಾಯೇಲರು ಮೋಶೆಯು ಹೇಳಿದಂತೆ ಮಾಡಿ, ಬೆಳ್ಳಿಬಂಗಾರದ ಒಡವೆಗಳನ್ನೂ, ಬಟ್ಟೆಗಳನ್ನೂ ಈಜಿಪ್ಟಿನವರಿಂದ ಕೇಳಿ ಪಡೆದರು.

[36] ಯೆಹೋವ ದೇವರು ಈಜಿಪ್ಟಿನವರ ಎದುರಿನಲ್ಲಿ ಜನರ ಮೇಲೆ ದಯೆ ತೋರಿಸಿದ್ದರಿಂದ, ಅವರು ಕೇಳಿದ್ದನ್ನು ಕೊಟ್ಟರು. ಹೀಗೆ ಅವರು ಈಜಿಪ್ಟಿನವರ ಸೊತ್ತನ್ನು ಸುಲಿದುಕೊಂಡರು.

[37] ಆಗ ಇಸ್ರಾಯೇಲರಲ್ಲಿ ಮಕ್ಕಳಲ್ಲದೆ ಗಂಡಸರು ಮಾತ್ರ ಆರು ಲಕ್ಷ ಜನರು ಕಾಲುನಡಿಗೆಯಾಗಿ ರಮ್ಸೇಸನ್ನು ಬಿಟ್ಟು ಸುಕ್ಕೋತಿಗೆ ಪ್ರಯಾಣಮಾಡಿದರು.

[38] ಬೇರೆ ಜನಸಮೂಹವೂ ಕುರಿದನ ಮೊದಲಾದ ಪಶುಗಳ ಬಹುದೊಡ್ಡ ಹಿಂಡೂ ಇಸ್ರಾಯೇಲರ ಸಂಗಡ ಹೋದವು.

[39] ಆಗ ಅವರು ಈಜಿಪ್ಟಿನಿಂದ ತಂದಿದ್ದ ನಾದಿದ ಹಿಟ್ಟು ಇನ್ನೂ ಹುಳಿಯಾಗದ ಕಾರಣ, ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿದರು. ಏಕೆಂದರೆ ಅವರನ್ನು ಅಲ್ಲಿ ನಿಲ್ಲಗೊಡದೆ ಈಜಿಪ್ಟಿನಿಂದ ಓಡಿಸಿಬಿಟ್ಟಿದ್ದರು. ಅವರು ತಮಗಾಗಿ ಯಾವ ಆಹಾರವನ್ನೂ ಸಿದ್ಧಪಡಿಸಿಕೊಂಡಿರಲಿಲ್ಲ.

[40] ಇಸ್ರಾಯೇಲರು ಈಜಿಪ್ಟಿನಲ್ಲಿ ಪ್ರವಾಸವಾಗಿ ವಾಸಮಾಡಿದ್ದ ಕಾಲವು ನಾನೂರ ಮೂವತ್ತು ವರ್ಷಗಳಾಗಿದ್ದವು.

[41] ನಾನೂರ ಮೂವತ್ತು ವರ್ಷಗಳು ತೀರಿದ ತರುವಾಯ, ಅದೇ ದಿನದಲ್ಲಿ ಯೆಹೋವ ದೇವರ ಸೈನ್ಯಗಳೆಲ್ಲಾ ಈಜಿಪ್ಟ್ ದೇಶವನ್ನು ಬಿಟ್ಟು ಹೊರಗೆ ಹೋದವು.

[42] ದೇವರು ಈಜಿಪ್ಟ್ ದೇಶದಿಂದ ಅವರನ್ನು ಹೊರಗೆ ತಂದ ಕಾರಣ, ಇದು ಯೆಹೋವ ದೇವರಿಗೆ ಆಚರಿಸಬೇಕಾದ ರಾತ್ರಿಯಾಗಿತ್ತು. ಇಸ್ರಾಯೇಲರು ತಮ್ಮ ಸಂತತಿಗಳಲ್ಲಿ ಯೆಹೋವ ದೇವರಿಗೆ ಆಚರಿಸಬೇಕಾದ ರಾತ್ರಿಯು ಇದೇ.

[43] ಯೆಹೋವ ದೇವರು ಮೋಶೆ ಆರೋನರಿಗೆ, “ಪಸ್ಕದ ಶಾಸನವು ಇದೆ: “ವಿದೇಶಿಯರಲ್ಲಿ ಯಾರೂ ಪಸ್ಕಭೋಜನವನ್ನು ತಿನ್ನಬಾರದು.

[44] ಆದರೆ ಕ್ರಯಕ್ಕೆ ತೆಗೆದುಕೊಂಡ ಪ್ರತಿಯೊಬ್ಬ ಗುಲಾಮನು ಸುನ್ನತಿ ಮಾಡಿಸಿಕೊಂಡ ತರುವಾಯ, ಅಂಥವನು ಅದನ್ನು ತಿನ್ನಬಹುದು.

[45] ಪರದೇಶದವರೂ, ಕೂಲಿಯವರೂ, ಅದನ್ನು ತಿನ್ನಬಾರದು.

[46] “ಒಂದೇ ಮನೆಯಲ್ಲಿ ಅದನ್ನು ತಿನ್ನಬೇಕು. ಆ ಮಾಂಸದಲ್ಲಿ ಸ್ವಲ್ಪ ಅಂಶವನ್ನಾದರೂ ಮನೆಯ ಹೊರಗೆ ತೆಗೆದುಕೊಂಡು ಹೋಗಬಾರದು. ಪಶುವಿನ ಎಲುಬುಗಳಲ್ಲಿ ಒಂದನ್ನಾದರೂ ಮುರಿಯಬಾರದು.

[47] ಇಸ್ರಾಯೇಲಿನ ಸಮೂಹದಲ್ಲಿರುವವರೆಲ್ಲರೂ ಇದನ್ನು ಆಚರಿಸಬೇಕು.

[48] “ನಿಮ್ಮ ಜೊತೆಯಲ್ಲಿ ವಾಸಮಾಡಿದ ಪರದೇಶದವನು ಯೆಹೋವ ದೇವರಿಗೆ ಪಸ್ಕವನ್ನು ಆಚರಿಸಬೇಕೆಂದಿದ್ದರೆ, ಅವನ ಗಂಡಸರೆಲ್ಲಾ ಸುನ್ನತಿ ಮಾಡಿಸಿಕೊಳ್ಳಲಿ. ತರುವಾಯ ಅವನು ಅದನ್ನು ಆಚರಿಸುವುದಕ್ಕೆ ಸಮೀಪಬರಲಿ, ಅಂಥವರು ಸ್ವದೇಶದಲ್ಲಿ ಹುಟ್ಟಿದವರಂತೆ ಇರುವರು. ಆದರೆ ಸುನ್ನತಿ ಮಾಡಿಸಿಕೊಳ್ಳದ ಒಬ್ಬನಾದರೂ ಅದನ್ನು ತಿನ್ನಬಾರದು.

[49] ಸ್ವದೇಶದಲ್ಲಿ ಹುಟ್ಟಿದವನಿಗೂ, ನಿಮ್ಮಲ್ಲಿ ಪ್ರವಾಸಿಯಾಗಿರುವ ಅನ್ಯನಿಗೂ ಒಂದೇ ನಿಯಮವಿರಲಿ,” ಎಂದು ಹೇಳಿದರು.

[50] ಇಸ್ರಾಯೇಲರೆಲ್ಲಾ ಯೆಹೋವ ದೇವರು ಮೋಶೆ ಆರೋನರಿಗೆ ಆಜ್ಞಾಪಿಸಿದಂತೆಯೇ ಮಾಡಿದರು.

[51] ಅದೇ ದಿನದಲ್ಲಿ ಯೆಹೋವ ದೇವರು ಇಸ್ರಾಯೇಲರನ್ನು ಅವರ ಸೈನ್ಯಗಳ ಪ್ರಕಾರ ಈಜಿಪ್ಟ್ ದೇಶದೊಳಗಿಂದ ಹೊರಗೆ ತಂದರು.

ವಿಮೋಚನಕಾಂಡ — Chapters