[1] “ಒಬ್ಬನು ಎತ್ತನ್ನಾಗಲಿ, ಕುರಿಯನ್ನಾಗಲಿ ಕದ್ದು ಕೊಯ್ದರೆ, ಇಲ್ಲವೆ ಅದನ್ನು ಮಾರಿದರೆ, ಅವನು ಒಂದು ಎತ್ತಿಗೆ ಬದಲಾಗಿ ಐದು ಎತ್ತುಗಳನ್ನೂ, ಒಂದು ಕುರಿಗೆ ನಾಲ್ಕು ಕುರಿಗಳನ್ನೂ ಕೊಡಬೇಕು.
[2] “ಒಬ್ಬ ಕಳ್ಳನು ಮನೆ ಮುರಿಯುವಾಗಲೇ ಕೈಗೆ ಸಿಕ್ಕಿದಾಗ ಅವನನ್ನು ಹೊಡೆದುಕೊಂದರೆ, ಹೊಡೆದವನ ರಕ್ತ ಸುರಿಸಬಾರದು.
[3] ಅವನು ಕಳ್ಳತನ ಮಾಡುವಾಗ ಸೂರ್ಯೋದಯವಾದರೆ, ಹೊಡೆದವನ ರಕ್ತ ಸುರಿಸಬೇಕು. “ಕಳ್ಳನು ಕದ್ದದ್ದನ್ನೆಲ್ಲಾ ಪೂರ್ತಿಯಾಗಿ ಹಿಂದಿರುಗಿಸಬೇಕು. ಅವನಲ್ಲಿ ಕೊಡಲು ಇಲ್ಲದ ಪಕ್ಷಕ್ಕೆ ಅವನ ಕಳ್ಳತನಕ್ಕಾಗಿ ಅವನನ್ನು ಗುಲಾಮನನ್ನಾಗಿ ಮಾರಬೇಕು.
[4] ಕಳ್ಳತನ ಮಾಡಿದ ಎತ್ತಾಗಲಿ, ಕತ್ತೆಯಾಗಲಿ, ಕುರಿಯಾಗಲಿ ಕದ್ದವನ ಬಳಿಯಲ್ಲಿ ಜೀವವುಳ್ಳದ್ದಾಗಿ ಸಿಕ್ಕಿದರೆ ಅವನು ಎರಡರಷ್ಟು ಈಡು ಕೊಡಬೇಕು.
[5] “ಒಬ್ಬನು ಇನ್ನೊಬ್ಬನ ಹೊಲದಲ್ಲಿ ತನ್ನ ಪಶುಗಳನ್ನು ಬಿಟ್ಟು ಬೆಳೆಯನ್ನೂ, ದ್ರಾಕ್ಷಿ ತೋಟವನ್ನೂ ಮೇಯಿಸಿದರೆ, ಅವನು ತನ್ನ ಸ್ವಂತ ಹೊಲದ ಉತ್ತಮ ಭಾಗವನ್ನೂ, ದ್ರಾಕ್ಷಿ ತೋಟದಲ್ಲಿನ ಉತ್ತಮವಾದದ್ದನ್ನೂ ಈಡು ಕೊಡಬೇಕು.
[6] “ಬೆಂಕಿಹತ್ತಿ ಅದು ಮುಳ್ಳಿನ ಕೊಂಪೆಗೆ ತಗುಲಿ, ಸಿವುಡುಗಳ ಬಣವೆಗಳನ್ನಾಗಲಿ, ನಿಂತ ಬೆಳೆಯನ್ನಾಗಲಿ, ಹೊಲವನ್ನಾಗಲಿ ಸುಟ್ಟುಬಿಟ್ಟರೆ, ಆ ಬೆಂಕಿಯನ್ನು ಹಚ್ಚಿದವನು ಖಂಡಿತವಾಗಿ ಈಡು ಕೊಡಬೇಕು.
[7] “ಒಬ್ಬನು ತನ್ನ ನೆರೆಯವನಿಗೆ ತನ್ನ ಹಣವನ್ನಾಗಲಿ, ವಸ್ತುಗಳನ್ನಾಗಲಿ ಇಟ್ಟುಕೊಳ್ಳುವುದಕ್ಕೆ ಕೊಟ್ಟಾಗ, ಅದು ಅವನ ಮನೆಯಿಂದ ಕಳ್ಳತನವಾದರೆ, ಕಳ್ಳತನ ಮಾಡಿದವನು ಸಿಕ್ಕಿದರೆ, ಅವನು ಎರಡರಷ್ಟು ಕೊಡಬೇಕು.
[8] ಕಳ್ಳನು ಸಿಕ್ಕದೆ ಹೋದರೆ ಮನೆಯ ಯಜಮಾನನು ತನ್ನ ನೆರೆಯವನ ವಸ್ತುಗಳನ್ನು ಅವನು ಮುಟ್ಟಲಿಲ್ಲವೆಂದು ವಿಚಾರಿಸುವುದಕ್ಕೆ ದೇವರ ಸನ್ನಿಧಿಯಲ್ಲಿ ಅವನನ್ನು ಹಾಜರುಪಡಿಸಬೇಕು.
[9] ಎತ್ತು, ಕತ್ತೆ, ಕುರಿ ವಸ್ತ್ರಗಳ ವಿಷಯವಾದ ಎಲ್ಲಾ ಅಪರಾಧಗಳಿಗೋಸ್ಕರ ಇಲ್ಲವೆ ಕಳೆದುಹೋದ ಯಾವ ತರದ ವಸ್ತುಗಳ ವಿಷಯದಲ್ಲಿ ಒಬ್ಬನು ಇನ್ನೊಬ್ಬನ ಬಳಿಯಲ್ಲಿ ಅದನ್ನು ಕಂಡು, ‘ಇದು ತನ್ನದೆಂದು,’ ಹೇಳಿದ ಪಕ್ಷಕ್ಕೆ ಆ ಇಬ್ಬರ ವ್ಯಾಜ್ಯವು ದೇವರ ಸನ್ನಿಧಿಗೆ ಬರಬೇಕು. ನ್ಯಾಯಾಧಿಪತಿಗಳು ಯಾರನ್ನು ಅಪರಾಧಿಯೆಂದು ನಿರ್ಣಯಿಸುವರೋ, ಅವನು ಎರಡರಷ್ಟು ತನ್ನ ನೆರೆಯವನಿಗೆ ಕೊಡಬೇಕು.
[10] “ಒಬ್ಬನು ತನ್ನ ನೆರೆಯವನಿಗೆ ಕತ್ತೆಯನ್ನಾದರೂ ಎತ್ತನ್ನಾದರೂ ಕುರಿಯನ್ನಾದರೂ ಬೇರೆ ಯಾವ ಪಶುವನ್ನಾದರೂ ಕಾಯುವುದಕ್ಕೆ ಕೊಟ್ಟಾಗ, ಅದು ಸತ್ತರೆ, ಇಲ್ಲವೆ ಊನವಾದರೆ, ಇಲ್ಲವೆ ಯಾರೂ ತಿಳಿಯದಂತೆ ಸುಲಿಗೆಯಾದರೆ,
[11] ತಾನು ತನ್ನ ನೆರೆಯವನ ವಸ್ತುವನ್ನು ತೆಗೆದುಕೊಳ್ಳಲಿಲ್ಲವೆಂದು ಅವರಿಬ್ಬರ ಮಧ್ಯದಲ್ಲಿ ಯೆಹೋವ ದೇವರ ಮುಂದೆ ಪ್ರಮಾಣಮಾಡಬೇಕು. ಅದನ್ನು ಪಶುವಿನ ಯಜಮಾನನು ಒಪ್ಪಿದರೆ ಅವನು ಈಡುಕೊಡಬಾರದು.
[12] ಆದರೆ ಅದು ಅವನ ಬಳಿಯಿಂದ ಕಳ್ಳತನವಾಗಿ ಹೋಗಿದ್ದರೆ, ಯಜಮಾನನಿಗೆ ಈಡು ಕೊಡಬೇಕು.
[13] ಕಾಡುಮೃಗವು ಅದನ್ನು ಕೊಂದಿದ್ದರೆ, ಅದರ ಹೆಣವನ್ನು ಸಾಕ್ಷಿಗಾಗಿ ತರಲಿ. ಕಾಡುಮೃಗ ಕೊಂದಿದ್ದಕ್ಕೆ ಈಡುಕೊಡಬೇಕಾದ ಅವಶ್ಯಕತೆ ಇಲ್ಲ.
[14] “ಒಬ್ಬನು ತನ್ನ ನೆರೆಯವನಿಂದ ಪಶುವನ್ನು ಎರವಲಾಗಿ ತೆಗೆದುಕೊಂಡಿರಲಾಗಿ ಅದರ ಒಡೆಯನು ಅದರ ಹತ್ತಿರ ಇಲ್ಲದಿರುವಾಗ, ಆ ಪಶುವಿಗೆ ಊನವಾದರೆ, ಇಲ್ಲವೆ ಅದು ಸತ್ತರೆ ಅದಕ್ಕೆ ಅವನು ಖಂಡಿತವಾಗಿ ಈಡು ಕೊಡಬೇಕು.
[15] ಆದರೆ ಅದರ ಯಜಮಾನನು ಅದರ ಸಂಗಡ ಇದ್ದರೆ ಈಡು ಕೊಡದೆಯಿರಲಿ. ಅದು ಬಾಡಿಗೆಗೆ ತಂದಿದ್ದರೆ ಅದರ ಬಾಡಿಗೆಯಲ್ಲಿಯೇ ಎಣಿಕೆಯಾಗಲಿ.
[16] “ಒಬ್ಬನು ಕನ್ನಿಕೆಯನ್ನು ಮೋಸಗೊಳಿಸಿ, ಅವಳ ಸಂಗಡ ಮಲಗಿದರೆ ಅವಳು ತನ್ನ ಹೆಂಡತಿಯಾಗುವಂತೆ ಆಕೆಗೆ ಖಂಡಿತವಾಗಿ ತೆರವನ್ನು ಕೊಡಬೇಕು.
[17] ಆಕೆಯ ತಂದೆಗೆ ಆಕೆಯನ್ನು ಕೊಡುವುದಕ್ಕೆ ಮನಸ್ಸಿಲ್ಲದಿದ್ದರೆ, ಅವನಿಗೆ ಕನ್ನಿಕೆಯ ತೆರವಿನ ಪ್ರಕಾರ ಹಣ ಸಲ್ಲಿಸಬೇಕು.
[18] “ಮಾಟಗಾರ್ತಿಯನ್ನು ಬದುಕಲು ಬಿಡಬಾರದು.
[19] “ಪಶುವಿನ ಸಂಗಡ ಸಂಗಮಿಸುವ ಯಾರಾದರೂ ಸರಿ, ಅಂಥವನಿಗೆ ಮರಣದಂಡನೆಯಾಗಬೇಕು.
[20] “ಯೆಹೋವ ದೇವರು ಹೊರತಾಗಿ ಮತ್ತೊಬ್ಬ ದೇವರಿಗೆ ಯಜ್ಞ ಅರ್ಪಿಸುವವನು ಸಂಪೂರ್ಣವಾಗಿ ನಾಶವಾಗಬೇಕು.
[21] “ಪರದೇಶಸ್ಥನನ್ನು ಉಪದ್ರವ ಪಡಿಸಬೇಡಿರಿ ಮತ್ತು ಬಾಧಿಸಲೂ ಬೇಡಿರಿ. ಏಕೆಂದರೆ ನೀವು ಈಜಿಪ್ಟ್ ದೇಶದಲ್ಲಿ ಪರದೇಶಿಗಳಾಗಿದ್ದೀರಿ.
[22] “ಯಾವ ವಿಧವೆಯನ್ನು, ದಿಕ್ಕಿಲ್ಲದ ಮಗುವನ್ನು ಬಾಧಿಸಬೇಡಿರಿ.
[23] ನೀವು ಯಾವ ರೀತಿಯಲ್ಲಿ ಅವರನ್ನು ಬಾಧಿಸಿದರೂ ಅವರು ಕೂಗಿದರೆ ನಾನು ನಿಶ್ಚಯವಾಗಿ ಅವರ ಕೂಗನ್ನು ಕೇಳುವೆನು.
[24] ಆಗ ನನ್ನ ಕೋಪವು ಉರಿಯುವುದು. ಖಡ್ಗದಿಂದ ನಿಮ್ಮನ್ನು ಕೊಲ್ಲುವೆನು. ನಿಮ್ಮ ಹೆಂಡತಿಯರು ವಿಧವೆಯರಾಗುವರು. ನಿಮ್ಮ ಮಕ್ಕಳು ದಿಕ್ಕಿಲ್ಲದವರಾಗುವರು.
[25] “ನಿಮ್ಮ ಬಳಿಯಲ್ಲಿ ಬಡವರಾಗಿರುವ ನನ್ನ ಜನರಿಗೆ ಹಣವನ್ನು ಸಾಲವಾಗಿ ಕೊಟ್ಟರೆ, ಅವನಿಂದ ಬಡ್ಡಿ ತೆಗೆದುಕೊಳ್ಳಬಾರದು.
[26] ಇಲ್ಲವೆ ಅವನ ಮೇಲೆ ಬಡ್ಡಿ ಹೊರಿಸಬೇಡ. ನಿಮ್ಮ ನೆರೆಯವನ ಮೇಲಂಗಿಯನ್ನು ಅಡವು ಇಟ್ಟುಕೊಂಡಿದ್ದರೆ, ಸೂರ್ಯನು ಮುಳುಗುವುದರೊಳಗಾಗಿ ಅವನಿಗೆ ಹಿಂದಕ್ಕೆ ಕೊಡಬೇಕು.
[27] ಏಕೆಂದರೆ ಅದು ಅವನಿಗೆ ಒಂದೇ ಹೊದಿಕೆಯಾಗಿದೆ. ಅದೇ ಅವನ ಮೈಗೆ ಉಡುಪು. ಅವನು ಯಾವುದನ್ನು ಹೊದ್ದುಕೊಂಡು ಮಲಗಿಯಾನು? ಅವನು ನನಗೆ ಮೊರೆಯಿಟ್ಟರೆ ನಾನು ಕೇಳುವೆನು. ಏಕೆಂದರೆ ನಾನು ಅನುಕಂಪ ಉಳ್ಳವನು.
[28] “ದೇವರನ್ನು ದೂಷಿಸಬೇಡ, ನಿನ್ನ ಜನರ ಅಧಿಕಾರಿಗಳನ್ನು ಶಪಿಸಬೇಡ.
[29] “ನಿನ್ನ ಧಾನ್ಯಗಳನ್ನೂ ಪಾನಗಳನ್ನೂ ನನಗೆ ಅರ್ಪಿಸುವುದಕ್ಕೆ ತಡಮಾಡಬೇಡ. “ನಿನ್ನ ಮಕ್ಕಳಲ್ಲಿ ಚೊಚ್ಚಲಾದವರನ್ನು ನನಗೆ ಮೀಸಲಾಗಿಡಬೇಕು.
[30] ಅದರಂತೆಯೇ ನಿಮ್ಮ ದನಕುರಿಗಳನ್ನೂ ನನಗೆ ಸಮರ್ಪಿಸಬೇಕು. ಅದು ಏಳು ದಿನಗಳು ತಾಯಿಯ ಬಳಿಯಲ್ಲಿರಲಿ, ಎಂಟನೆಯ ದಿನದಲ್ಲಿ ಅದನ್ನು ನನಗೆ ಸಮರ್ಪಿಸಬೇಕು.
[31] “ನೀವು ನನಗೆ ಪರಿಶುದ್ಧ ಜನರಾಗಿರಬೇಕು. ಆದ್ದರಿಂದ ಹೊಲದಲ್ಲಿ ಕಾಡುಮೃಗ ಕೊಂದದ್ದನ್ನು ನೀವು ತಿನ್ನಬಾರದು, ಅದನ್ನು ನಾಯಿಗಳಿಗೆ ಹಾಕಬೇಕು.