Skip to content
Opens in a new window
Listen to this chapter • 7:19

[1] “ಗುಡಾರವನ್ನು ಹತ್ತು ಪರದೆಗಳಿಂದ ಮಾಡಿ, ನಯವಾಗಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ಕೌಶಲ್ಯದ ಕೆಲಸದಿಂದಲೂ ಮಾಡಿದ ಕೆರೂಬಿಗಳುಳ್ಳವುಗಳಾಗಿಯೂ ಇರಬೇಕು.

[2] ಎಲ್ಲಾ ಪರದೆಗಳೂ ಒಂದೇ ಅಳತೆಯವುಗಳಾಗಿರಬೇಕು. ಪ್ರತಿಯೊಂದು ಪರದೆಯು ಸುಮಾರು ಹದಿಮೂರು ಮೀಟರ್ ಉದ್ದ ಮತ್ತು ಎರಡು ಮೀಟರ್ ಅಗಲವಿರಬೇಕು.

[3] ಐದು ಪರದೆಗಳನ್ನು ಒಂದಕ್ಕೊಂದು ಜೋಡಿಸಬೇಕು ಮತ್ತು ಇನ್ನುಳಿದ ಐದು ಪರದೆಗಳನ್ನೂ ಒಂದಕ್ಕೊಂದು ಜೋಡಿಸಬೇಕು.

[4] ಕೊನೆಯ ಪರದೆಯ ಅಂಚಿನ ಒಂದು ಜೋಡಣೆಯ ಸ್ಥಳದಲ್ಲಿ ನೀಲಿ ದಾರಿನ ಕುಣಿಕೆಗಳನ್ನು ಮಾಡಿ, ಎರಡನೆಯ ಜೋಡಣೆಯ ಕಟ್ಟಕಡೆಯ ಪರದೆಯ ಅಂಚಿನಲ್ಲಿಯೂ ಅದೇ ಪ್ರಕಾರ ಮಾಡಬೇಕು.

[5] ಒಂದು ಪರದೆಯನ್ನು ಜೋಡಿಸುವ ಸ್ಥಳದಲ್ಲಿ ಇರುವ ಇನ್ನೊಂದು ಪರದೆಯ ಕೊನೆಯಲ್ಲಿ ಐವತ್ತು ಕುಣಿಕೆಗಳನ್ನು ಮಾಡಬೇಕು. ಆ ಕುಣಿಕೆಗಳು ಒಂದಕ್ಕೊಂದು ಎದುರುಬದುರಾಗಿ ಹಿಡಿದುಕೊಳ್ಳುವವುಗಳಾಗಿರಬೇಕು.

[6] ಬಂಗಾರದ ಐವತ್ತು ಕೊಂಡಿಗಳನ್ನು ಮಾಡಿ, ಅವುಗಳಿಂದ ಪರದೆಗಳನ್ನು ಒಂದಕ್ಕೊಂದು ಜೋಡಿಸಬೇಕು. ಹೀಗೆ ಅದು ಒಂದೇ ಗುಡಾರವಾಗಬೇಕು.

[7] “ಇದಲ್ಲದೆ ನೀನು ಗುಡಾರದ ಮೇಲೆ ಹೊದಿಸುವುದಕ್ಕಾಗಿ ಮೇಕೆಯ ಕೂದಲಿನಿಂದ ಹನ್ನೊಂದು ಪರದೆಗಳನ್ನು ಮಾಡಬೇಕು.

[8] ಒಂದೊಂದು ಪರದೆಯು ಸುಮಾರು ಹದಿಮೂರುವರೆ ಮೀಟರ್ ಉದ್ದ ಮತ್ತು ಒಂದುವರೆ ಮೀಟರ್ ಅಗಲ ಇರಬೇಕು. ಹನ್ನೊಂದು ಪರದೆಗಳೂ ಒಂದೇ ಅಳತೆಯಾಗಿರಬೇಕು.

[9] ಐದು ಪರದೆಗಳನ್ನು ಒಂದಾಗಿ ಜೋಡಿಸಿ ಇನ್ನುಳಿದ ಆರು ಪರದೆಗಳನ್ನು ಒಂದಾಗಿ ಜೋಡಿಸಿ, ಆರನೆಯ ಪರದೆಯನ್ನು ಗುಡಾರದ ಮುಂಭಾಗದಲ್ಲಿ ಮಡಿಸಿ ತೂಗಾಡಬಿಡಬೇಕು.

[10] ಜೋಡಿಸುವಾಗ ಕೊನೆಯ ಒಂದು ಪರದೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನು, ಜೋಡಣೆಯಲ್ಲಿರುವ ಕೊನೆಯ ಎರಡನೆಯ ಪರದೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನು ಮಾಡಬೇಕು.

[11] ಇದಲ್ಲದೆ ಕಂಚಿನ ಐವತ್ತು ಕೊಂಡಿಗಳನ್ನು ಮಾಡಿ, ಕೊಂಡಿಗಳನ್ನು ಕುಣಿಕೆಗಳಲ್ಲಿ ಸಿಕ್ಕಿಸಿ, ಒಂದೇ ಡೇರೆ ಆಗುವಂತೆ ಜೋಡಿಸಬೇಕು.

[12] ಗುಡಾರದ ಪರದೆಗಳನ್ನು ಮಿಕ್ಕಿದ ತೂಗಾಡುವಂಥದ್ದು ಎಂದರೆ ಉಳಿದ ಅರ್ಧ ಪರದೆಯು ಗುಡಾರದ ಹಿಂಭಾಗದಲ್ಲಿ ತೂಗಾಡಲಿ.

[13] ಗುಡಾರದ ಪರದೆಗಳ ಉದ್ದದಲ್ಲಿ ಈಚೆ ಆಚೆ ಮಿಕ್ಕಿದ ಮೊಳವು ಗುಡಾರದ ಈಚೆ ಆಚೆಯಲ್ಲಿ ಅದನ್ನು ಮುಚ್ಚುವುದಕ್ಕಾಗಿ ತೂಗಾಡಲಿ.

[14] ಗುಡಾರದ ಮೇಲ್ಹೊದಿಕೆಯನ್ನು ಕೆಂಪು ಬಣ್ಣದಲ್ಲಿ ಅದ್ದಿ ತೆಗೆದ ಟಗರುಗಳ ಚರ್ಮದಿಂದ ಮಾಡಬೇಕು, ಅದರ ಮೇಲೆ ಕಡಲುಹಂದಿಯ ಚರ್ಮದ ಮೇಲ್ಹೊದಿಕೆಯನ್ನು ಮಾಡಬೇಕು.

[15] “ಗುಡಾರಕ್ಕೆ ಜಾಲಿ ಮರದಿಂದ ಚೌಕಟ್ಟುಗಳನ್ನು ಮಾಡಬೇಕು.

[16] ಒಂದೊಂದು ಚೌಕಟ್ಟಿನ ಉದ್ದವು ಸುಮಾರು ನಾಲ್ಕುವರೆ ಮೀಟರ್ ಮತ್ತು ಅಗಲ ಅರವತ್ತೆಂಟು ಸೆಂಟಿಮೀಟರ್ ಇರಬೇಕು.

[17] ಒಂದು ಚೌಕಟ್ಟಿಗೆ ಒಂದಕ್ಕೊಂದು ಸರಿಯಾದ ಅಂತರದಲ್ಲಿ ಎರಡು ಕೈಗಳನ್ನು ಮಾಡಬೇಕು. ಅದೇ ಪ್ರಕಾರ ಗುಡಾರದ ಎಲ್ಲಾ ಚೌಕಟ್ಟುಗಳಿಗೆ ಮಾಡಬೇಕು.

[18] ಗುಡಾರದ ದಕ್ಷಿಣ ಭಾಗದಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮಾಡಬೇಕು.

[19] ಇಪ್ಪತ್ತು ಚೌಕಟ್ಟುಗಳ ಕೆಳಗೆ ನಾಲ್ವತ್ತು ಬೆಳ್ಳಿಯ ಗದ್ದಿಗೇ ಕಲ್ಲುಗಳನ್ನು ಮಾಡಬೇಕು ಮತ್ತು ಒಂದೊಂದು ಚೌಕಟ್ಟಿನ ಕೆಳಗೆ ಅದರ ಎರಡು ಪಟ್ಟಿಗಳಿಗಾಗಿ ಎರಡೆರಡು ಕುಳಿಗಳನ್ನು ಮಾಡಬೇಕು.

[20] ಹಾಗೆಯೇ ಗುಡಾರದ ಉತ್ತರ ದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನೂ,

[21] ಮತ್ತು ಒಂದೊಂದು ಚೌಕಟ್ಟಿನ ಕೆಳಗೆ ಎರಡೆರಡು ಗದ್ದಿಗೇ ಕಲ್ಲುಗಳಂತೆ ನಲವತ್ತು ಬೆಳ್ಳಿಯ ಗದ್ದಿಗೇ ಕಲ್ಲುಗಳನ್ನೂ,

[22] ಗುಡಾರದ ಹಿಂಭಾಗಕ್ಕೆ ಅಂದರೆ ಪಶ್ಚಿಮದ ಕಡೆಗೆ ಆರು ಚೌಕಟ್ಟುಗಳನ್ನು ಮಾಡಬೇಕು.

[23] ಗುಡಾರದ ಹಿಂಭಾಗದ ಎರಡು ಮೂಲೆಗಳಿಗೆ ಬೇರೆ ಎರಡು ಚೌಕಟ್ಟುಗಳನ್ನು ಮಾಡಬೇಕು.

[24] ಈ ಮೂಲೆಗಳನ್ನು ಅಡಿಯಲ್ಲಿ ಜೋಡಿಸಿರಬೇಕು. ಮೇಲ್ಭಾಗದಲ್ಲಿಯೂ ಒಂದೇ ಬಳೆಗೆ ಜೋಡಿಸಿರಬೇಕು. ಇದೇ ರೀತಿಯಲ್ಲಿ ಅವು ಎರಡು ಮೂಲೆಗಳಲ್ಲಿ ಎರಡಕ್ಕೂ ಇರಬೇಕು.

[25] ಹೀಗೆ ಅವು ಎಂಟು ಚೌಕಟ್ಟುಗಳೂ ಒಂದೊಂದು ಚೌಕಟ್ಟಿನ ಕೆಳಗೆ ಎರಡೆರಡು ಕೂರುಗದ್ದಿಗೇ ಕಲ್ಲುಗಳೂ ಇರುವುದರಿಂದ ಅವುಗಳಿಗೆ ಹದಿನಾರು ಬೆಳ್ಳಿಯ ಕೂರುಗದ್ದಿಗೇ ಕಲ್ಲುಗಳೂ ಇರಬೇಕು.

[26] “ಜಾಲಿ ಮರದಿಂದ ಅಗುಳಿಗಳನ್ನು ಮಾಡಬೇಕು. ಗುಡಾರದ ಒಂದು ಕಡೆಯ ಚೌಕಟ್ಟುಗಳಿಗೆ ಐದು ಅಗುಳಿಗಳನ್ನು,

[27] ಗುಡಾರದ ಇನ್ನೊಂದು ಭಾಗದ ಚೌಕಟ್ಟುಗಳಿಗೆ ಐದು ಅಗುಳಿಗಳನ್ನು, ಅದರ ಹಿಂದುಗಡೆಯ ಅಂದರೆ ಪಶ್ಚಿಮ ಭಾಗದಲ್ಲಿರುವ ಚೌಕಟ್ಟುಗಳಿಗೆ ಐದು ಅಗುಳಿಗಳನ್ನು ಮಾಡಬೇಕು.

[28] ಮಧ್ಯದ ಅಗುಳಿಯು ಚೌಕಟ್ಟುಗಳ ನಡುವೆ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ಮುಟ್ಟಿರಬೇಕು.

[29] ಆ ಚೌಕಟ್ಟುಗಳನ್ನು ಬಂಗಾರದಿಂದ ಹೊದಿಸಬೇಕು. ಅವುಗಳಿಗೆ ಬಂಗಾರದಿಂದ ಬಳೆಗಳನ್ನು ಮಾಡಬೇಕು. ಅಗುಳಿಗಳನ್ನು ಬಂಗಾರದಿಂದ ಹೊದಿಸಬೇಕು.

[30] “ಹೀಗೆ ಬೆಟ್ಟದ ಮೇಲೆ ನಾನು ನಿನಗೆ ತೋರಿಸಿದ ಕ್ರಮದ ಪ್ರಕಾರ ಗುಡಾರವನ್ನು ನಿಲ್ಲಿಸಬೇಕು.

[31] “ಪರದೆಯನ್ನು ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಮಾಡಬೇಕು. ಅದರ ಮೇಲೆ ಕೌಶಲ್ಯದಿಂದ ಕಸೂತಿಹಾಕಿ ಮಾಡಿದ ಕೆರೂಬಿಗಳುಳ್ಳದ್ದನ್ನಾಗಿ ಅದನ್ನು ಮಾಡಬೇಕು.

[32] ಜಾಲಿ ಮರದ ನಾಲ್ಕು ಸ್ತಂಭಗಳನ್ನು ಮಾಡಿ, ಬಂಗಾರ ತಗಡುಗಳಿಂದ ಅವುಗಳನ್ನು ಹೊದಿಸಿದರು. ಅವುಗಳಿಗೆ ಬಂಗಾರದ ಕೊಂಡಿಗಳನ್ನು ಮಾಡಿ, ಬೆಳ್ಳಿಯ ನಾಲ್ಕು ಗದ್ದಿಗೇ ಕಲ್ಲುಗಳ ಮೇಲೆ ಊರಿಕೊಂಡಿರುವ ಜಾಲಿ ಮರದ ಸ್ತಂಭಗಳಲ್ಲಿ ಅದನ್ನು ತೂಗು ಹಾಕಬೇಕು.

[33] ಆ ಪರದೆಯನ್ನು ಕೊಂಡಿಗಳ ಕೆಳಗೆ ತೂಗುಹಾಕಿ, ಪರದೆಯೊಳಗೆ ಒಡಂಬಡಿಕೆಯ ಮಂಜೂಷವನ್ನು ತರಬೇಕು. ಪರಿಶುದ್ಧ ಸ್ಥಳಕ್ಕೂ ಮಹಾಪರಿಶುದ್ಧ ಸ್ಥಳಕ್ಕೂ ಮಧ್ಯದಲ್ಲಿ ಆ ಪರದೆಯನ್ನು ವಿಂಗಡಿಸಬೇಕು.

[34] ಮಹಾಪರಿಶುದ್ಧ ಸ್ಥಳದಲ್ಲಿ ಒಡಂಬಡಿಕೆಯ ಮಂಜೂಷದ ಮೇಲೆ ಕರುಣಾಸನವನ್ನು ಇಡಬೇಕು.

[35] ಇದಲ್ಲದೆ ಗುಡಾರದ ಉತ್ತರ ಕಡೆಯಲ್ಲಿ ಪರದೆಯ ಹೊರಗೆ ಮೇಜನ್ನು ಇಡಬೇಕು ಮತ್ತು ದೀಪಸ್ತಂಭವನ್ನು ಅದರ ಎದುರಾಗಿ ದಕ್ಷಿಣದ ದಿಕ್ಕಿನಲ್ಲಿ ಇಡಬೇಕು.

[36] “ಗುಡಾರದ ಬಾಗಿಲಿಗೆ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರುಗಳಿಂದ ಹೊಸೆದು ಕಸೂತಿ ಕೆಲಸಮಾಡಿದ ಪರದೆಯನ್ನು ಮಾಡಬೇಕು.

[37] ಆ ಪರದೆಗೆ ಜಾಲಿ ಮರದ ಐದು ಕಂಬಗಳನ್ನು ಮಾಡಿ, ಅವುಗಳನ್ನು ಬಂಗಾರದಿಂದ ಹೊದಿಸಬೇಕು. ಅವುಗಳ ಕೊಂಡಿಗಳು ಬಂಗಾರದವುಗಳಾಗಿರಬೇಕು. ಅವುಗಳಿಗೆ ಐದು ಗದ್ದಿಗೇ ಕಲ್ಲುಗಳನ್ನು ಕಂಚಿನಿಂದ ಎರಕಹೊಯಿಸಬೇಕು.

ವಿಮೋಚನಕಾಂಡ — Chapters