[1] ಇಸ್ರಾಯೇಲರು ಈಜಿಪ್ಟನ್ನು ಬಿಟ್ಟ ಮೂರನೆಯ ತಿಂಗಳಿನ ಅದೇ ದಿನದಲ್ಲಿ ಸೀನಾಯಿ ಮರುಭೂಮಿಗೆ ಬಂದರು.
[2] ಅವರು ರೆಫೀದೀಮಿನಿಂದ ಹೊರಟು, ಸೀನಾಯಿ ಮರುಭೂಮಿಗೆ ಬಂದು, ಮರುಭೂಮಿಯಲ್ಲಿ ಡೇರೆ ಹಾಕಿ, ಬೆಟ್ಟಕ್ಕೆದುರಾಗಿ ಇಳಿದುಕೊಂಡರು.
[3] ಮೋಶೆಯು ದೇವರ ಸನ್ನಿಧಿಗೆ ಬೆಟ್ಟದ ಮೇಲೆ ಹೋದನು. ಆಗ ಯೆಹೋವ ದೇವರು ಸೀನಾಯಿ ಪರ್ವತದ ಮೇಲಿನಿಂದ ಅವನನ್ನು ಕರೆದು ಅವನಿಗೆ, “ನೀನು ಯಾಕೋಬನ ಮನೆತನದವರಾದ ಇಸ್ರಾಯೇಲರಿಗೆ ಇದನ್ನು ತಿಳಿಸು:
[4] ‘ನಾನು ಈಜಿಪ್ಟಿನವರಿಗೆ ಮಾಡಿದ್ದನ್ನೂ, ಹದ್ದು ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಮೇಲೆ ಹೊತ್ತು ಬರುವಂತೆ ನಿಮ್ಮನ್ನು ಈ ಸ್ಥಳಕ್ಕೆ ಬರಮಾಡಿದ್ದನ್ನೆಲ್ಲಾ ನೀವು ನೋಡಿದ್ದೀರಿ.
[5] ಆದ್ದರಿಂದ ಈಗ ನೀವು ನನ್ನ ಮಾತನ್ನು ಕೇಳಿ, ನನ್ನ ಒಡಂಬಡಿಕೆಯನ್ನು ಕಾಪಾಡಿದರೆ, ಸಮಸ್ತ ಜನರಲ್ಲಿ ನೀವು ನನ್ನ ಸಂಗ್ರಹಿಸಿದ ಸೊತ್ತಾಗಿರುವಿರಿ. ಏಕೆಂದರೆ ಭೂಮಿಯೆಲ್ಲಾ ನನ್ನದೇ.
[6] ನೀವು ನನಗೆ ಯಾಜಕ ರಾಜ್ಯವೂ ಪರಿಶುದ್ಧ ಜನಾಂಗವೂ ಆಗಿರುವಿರಿ.’ ಇಸ್ರಾಯೇಲರಿಗೆ ನೀನು ಹೇಳಬೇಕಾದ ಮಾತುಗಳು ಇವೇ,” ಎಂದರು.
[7] ಆಗ ಮೋಶೆಯು ಇಳಿದುಬಂದು ಜನರ ಹಿರಿಯರನ್ನು ಕರೆದು, ಯೆಹೋವ ದೇವರು ತನಗೆ ಆಜ್ಞಾಪಿಸಿದ ಈ ಮಾತುಗಳನ್ನೆಲ್ಲಾ ಅವರ ಮುಂದೆ ಇಟ್ಟನು.
[8] ಜನರೆಲ್ಲಾ ಒಂದಾಗಿ ಉತ್ತರಕೊಟ್ಟು, “ಯೆಹೋವ ದೇವರು ಹೇಳಿದ್ದನ್ನೆಲ್ಲಾ ಮಾಡುತ್ತೇವೆ,” ಎಂದು ಹೇಳಿದರು. ಆಗ ಮೋಶೆಯು ಜನರ ಮಾತುಗಳನ್ನು ಯೆಹೋವ ದೇವರಿಗೆ ಹೇಳಿದನು.
[9] ಯೆಹೋವ ದೇವರು ಮೋಶೆಗೆ, “ನಾನು ನಿನ್ನ ಸಂಗಡ ಮಾತನಾಡುವುದನ್ನು ಜನರು ಕೇಳುವ ಹಾಗೆಯೂ ಅವರು ಸದಾಕಾಲ ನಿನ್ನನ್ನು ನಂಬುವಂತೆಯೂ ದಟ್ಟವಾದ ಮೇಘದಲ್ಲಿ ನಾನು ನಿನ್ನ ಬಳಿಗೆ ಬರುತ್ತೇನೆ,” ಎಂದರು. ಮೋಶೆಯು ಜನರ ಮಾತುಗಳನ್ನು ಯೆಹೋವ ದೇವರಿಗೆ ತಿಳಿಸಿದನು.
[10] ಆಗ ಯೆಹೋವ ದೇವರು ಮೋಶೆಗೆ, “ಜನರ ಬಳಿಗೆ ಹೋಗಿ ಈ ಹೊತ್ತೂ ನಾಳೆಯೂ ಅವರನ್ನು ಶುದ್ಧಮಾಡು. ಅವರು ತಮ್ಮ ವಸ್ತ್ರಗಳನ್ನು ತೊಳೆದುಕೊಳ್ಳಲಿ.
[11] ಮೂರನೆಯ ದಿನದಲ್ಲಿ ಅವರು ಸಿದ್ಧವಾಗಿರಲಿ. ಏಕೆಂದರೆ ಮೂರನೆಯ ದಿನದಲ್ಲಿ ಯೆಹೋವ ದೇವರು ಸಮಸ್ತ ಜನರ ಕಣ್ಣೆದುರಿನಲ್ಲಿ ಸೀನಾಯಿ ಪರ್ವತಕ್ಕೆ ಇಳಿದು ಬರುವರು.
[12] ಜನರಿಗೋಸ್ಕರ ಸುತ್ತಲೂ ಮೇರೆಗಳನ್ನು ಮಾಡಿಸಿ, ‘ಅವರು ಬೆಟ್ಟವನ್ನು ಏರದಂತೆಯೂ ಅದರ ಮೇರೆಯನ್ನು ಮುಟ್ಟದಂತೆಯೂ ಜಾಗ್ರತೆಯಾಗಿರಬೇಕು. ಬೆಟ್ಟವನ್ನು ಮುಟ್ಟಿದವರೆಲ್ಲಾ ಖಂಡಿತವಾಗಿ ಸತ್ತು ಹೋಗುವರು.
[13] ಯಾರೂ ಅಂಥವರನ್ನು ಮುಟ್ಟಬಾರದು. ಮುಟ್ಟಿದ ಪಶುವಾಗಲಿ, ಮನುಷ್ಯನಾಗಲಿ ನಿಶ್ಚಯವಾಗಿ ಕಲ್ಲೆಸೆದು ಕೊಲ್ಲಬೇಕು. ಇಲ್ಲವೆ ಈಟಿಯಿಂದ ತಿವಿಯಬೇಕು.’ ದೀರ್ಘವಾಗಿ ತುತೂರಿ ಊದುವ ಸಮಯದಲ್ಲಿ ಅವರು ಬೆಟ್ಟದ ಬಳಿಗೆ ಬರಬೇಕು,” ಎಂದರು.
[14] ಆಗ ಮೋಶೆಯು ಬೆಟ್ಟದಿಂದಿಳಿದು ಜನರನ್ನು ಶುದ್ಧಿಮಾಡಿದನು. ಅವರು ತಮ್ಮ ವಸ್ತ್ರಗಳನ್ನು ತೊಳೆದುಕೊಂಡರು.
[15] ಅವನು ಜನರಿಗೆ, “ಮೂರನೆಯ ದಿನಕ್ಕಾಗಿ ಸಿದ್ಧರಾಗಿರಿ, ನೀವು ಲೈಂಗಿಕ ಸಂಬಂಧದಿಂದ ದೂರವಾಗಿರಿ,” ಎಂದನು.
[16] ಮೂರನೆಯ ದಿನದಲ್ಲಿ ಉದಯವಾದಾಗ, ಬೆಟ್ಟದ ಮೇಲೆ ಗುಡುಗು, ಮಿಂಚು, ದಟ್ಟವಾದ ಮೇಘ ಮತ್ತು ತುತೂರಿಯ ಮಹಾ ಧ್ವನಿ ಉಂಟಾದವು. ಪಾಳೆಯದಲ್ಲಿದ್ದ ಜನರೆಲ್ಲರೂ ನಡುಗಿದರು.
[17] ಆಗ ಮೋಶೆಯು ದೇವರನ್ನು ಸಂಧಿಸುವುದಕ್ಕೆ ಜನರನ್ನು ಪಾಳೆಯದೊಳಗಿಂದ ಹೊರಗೆ ಬರಮಾಡಿದನು. ಆಗ ಅವರು ಬೆಟ್ಟದ ಕೆಳಗೆ ನಿಂತುಕೊಂಡರು.
[18] ಯೆಹೋವ ದೇವರು ಅಗ್ನಿಯೊಳಗೆ ಬೆಟ್ಟದ ಮೇಲೆ ಇಳಿದಿದ್ದರಿಂದ ಸೀನಾಯಿ ಬೆಟ್ಟದಲ್ಲೆಲ್ಲಾ ಹೊಗೆ ಹಾಯುತ್ತಿತ್ತು. ಅದರ ಹೊಗೆಯು ಆವಿಗೆಯ ಹೊಗೆಯಂತೆ ಏರಿ ಬರುತ್ತಾ ಇತ್ತು. ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು.
[19] ತುತೂರಿಯ ಧ್ವನಿಯು ಬರಬರುತ್ತಾ ಹೆಚ್ಚಾಗುತ್ತಾ ಇತ್ತು. ಆಗ ಮೋಶೆಯು ದೇವರೊಡನೆ ಮಾತನಾಡಿದನು. ಅವನಿಗೆ ದೇವರು ಉತ್ತರಕೊಟ್ಟರು.
[20] ಯೆಹೋವ ದೇವರು ಸೀನಾಯಿ ಬೆಟ್ಟದ ತುದಿಯಲ್ಲಿ ಇಳಿದುಬಂದು ಮೋಶೆಯನ್ನು ಬೆಟ್ಟದ ತುದಿಗೆ ಕರೆದರು. ಮೋಶೆಯು ಮೇಲೆ ಹೋದನು.
[21] ಯೆಹೋವ ದೇವರು ಮೋಶೆಗೆ, “ನೀನು ಇಳಿದು ಹೋಗಿ ಜನರನ್ನು ಎಚ್ಚರಿಸಬೇಕು. ಅವರು ಯೆಹೋವ ದೇವರನ್ನು ನೋಡುವದಕ್ಕಾಗಿ ಮುಂದೆ ಬಂದರೆ, ಅವರಲ್ಲಿ ಬಹಳ ಜನರು ಸಾಯುವರು.
[22] ಯೆಹೋವ ದೇವರ ಸಮೀಪಕ್ಕೆ ಬರುವ ಯಾಜಕರು ಸಹ ಯೆಹೋವ ದೇವರು ಅವರನ್ನು ಸಾಯಿಸದಂತೆ ತಮ್ಮನ್ನು ಶುದ್ಧಿಮಾಡಿಕೊಳ್ಳಲಿ, ಇಲ್ಲವಾದರೆ ಅವರನ್ನೂ ನಾನು ತಟ್ಟನೆ ನಾಶಮಾಡುವೆನು,” ಎಂದರು.
[23] ಮೋಶೆಯು ಯೆಹೋವ ದೇವರಿಗೆ, “ಜನರು ಸೀನಾಯಿ ಬೆಟ್ಟವನ್ನು ಏರಲಾರರು. ಬೆಟ್ಟಕ್ಕೆ ಮೇರೆಗಳನ್ನು ಹಾಕಿ ಅದನ್ನು ಶುದ್ಧಮಾಡೆಂದು ನೀವೇ ನಮ್ಮನ್ನು ಎಚ್ಚರಿಸಿದ್ದೀರಿ,” ಎಂದನು.
[24] ಆಗ ಯೆಹೋವ ದೇವರು ಅವನಿಗೆ, “ನೀನು ಇಳಿದು ಹೋಗಿ, ಆರೋನನನ್ನು ಕರೆದುಕೊಂಡು ಇಲ್ಲಿಗೆ ಬಾ. ಆದರೆ ಯೆಹೋವ ದೇವರಿಂದ ಸಂಹಾರವಾಗದಂತೆ ಯಾಜಕರೂ ಜನರೂ ಮುಂದೆ ಯೆಹೋವ ದೇವರ ಬಳಿಗೆ ಬಾರದೇ ಇರಲಿ,” ಎಂದರು.
[25] ಮೋಶೆಯು ಜನರ ಬಳಿಗೆ ಇಳಿದು ಹೋಗಿ ಅವರಿಗೆ ಇದನ್ನೆಲ್ಲಾ ಹೇಳಿದನು.