Skip to content
Opens in a new window
Listen to this chapter • 8:38

[1] ಯೆಹೋವ ದೇವರು ಮೋಶೆಗೆ, “ಮೊದಲಿನವುಗಳ ಹಾಗೆ ಎರಡು ಕಲ್ಲಿನ ಹಲಗೆಗಳನ್ನು ಕೆತ್ತಿಸಿಕೋ. ಆಗ ನೀನು ಒಡೆದ ಆ ಮೊದಲನೆಯ ಹಲಗೆಗಳ ಮೇಲೆ ಇದ್ದ ವಾಕ್ಯಗಳನ್ನು ಈ ಹಲಗೆಗಳ ಮೇಲೆ ನಾನು ಬರೆಯುವೆನು.

[2] ಬೆಳಿಗ್ಗೆ ನೀನು ಸಿದ್ಧನಾಗಿ ಸೀನಾಯಿ ಬೆಟ್ಟವನ್ನೇರಿ, ಆ ಬೆಟ್ಟದ ತುದಿಯ ಮೇಲೆ ನನ್ನ ಸನ್ನಿಧಿಯಲ್ಲಿ ನಿಂತಿರಬೇಕು.

[3] ಆದರೆ ಯಾರೂ ನಿನ್ನ ಸಂಗಡ ಮೇಲಕ್ಕೆ ಬರಬಾರದು. ಬೆಟ್ಟದ ಮೇಲೆ ಎಲ್ಲಿಯೂ ಯಾರೂ ಕಾಣಿಸಬಾರದು, ಆ ಬೆಟ್ಟದ ಎದುರಿನಲ್ಲಿ ದನಕುರಿಗಳು ಸಹ ಮೇಯಬಾರದು,” ಎಂದು ಹೇಳಿದರು.

[4] ಆಗ ಮೋಶೆಯು ಮೊದಲಿನವುಗಳಂತೆ ಎರಡು ಕಲ್ಲಿನ ಹಲಗೆಗಳನ್ನು ಕೆತ್ತಿಸಿಕೊಂಡನು. ಬೆಳಿಗ್ಗೆ ಎದ್ದು ಯೆಹೋವ ದೇವರು ತನಗೆ ಆಜ್ಞಾಪಿಸಿದಂತೆ ಕಲ್ಲಿನ ಎರಡು ಹಲಗೆಗಳನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಸೀನಾಯಿ ಬೆಟ್ಟದ ಮೇಲೆ ಹೋದನು.

[5] ಆಗ ಯೆಹೋವ ದೇವರು ಮೇಘದಲ್ಲಿ ಇಳಿದುಬಂದು ಅಲ್ಲಿ ಅವನ ಸಂಗಡ ನಿಂತುಕೊಂಡು, ಯೆಹೋವ ದೇವರು ತಮ್ಮ ಹೆಸರನ್ನು ಪ್ರಕಟಮಾಡಿದರು.

[6] ಯೆಹೋವ ದೇವರು ಅವನೆದುರಿಗೆ ಹಾದು ಹೋಗಿ, “ಯೆಹೋವ ದೇವರು, ಯೆಹೋವ ದೇವರು, ಕರುಣಾಳುವು, ಕೃಪಾಳುವು, ದೀರ್ಘಶಾಂತನು, ಮಹಾ ಪ್ರೀತಿಯುಳ್ಳವನು ಮತ್ತು ಸತ್ಯದಲ್ಲಿ ಸಮೃದ್ಧಿಯಾದಾತನೂ

[7] ಸಾವಿರ ತಲೆಗಳವರೆಗೂ ಕರುಣೆ ತೋರಿಸುವಾತನು. ದೋಷವನ್ನು, ಅಪರಾಧವನ್ನು, ಪಾಪವನ್ನು ಕ್ಷಮಿಸುವಾತನು ಆದರೂ ಅಪರಾಧಿಯನ್ನು ಶಿಕ್ಷಿಸದೆ ಬಿಡದವನೂ ತಂದೆಗಳ ದೋಷವನ್ನು ಮಕ್ಕಳ ಮೇಲೆಯೂ ಮೊಮ್ಮಕ್ಕಳ ಮೇಲೆಯೂ ಮೂರನೆಯ ಮತ್ತು ನಾಲ್ಕನೆಯ ತಲೆಗಳವರೆಗೂ ಶಿಕ್ಷಿಸುವಾತನು,” ಎಂದು ಪ್ರಕಟಿಸಿಕೊಂಡರು.

[8] ಆಗ ಮೋಶೆಯು ತ್ವರೆಪಟ್ಟು ನೆಲಕ್ಕೆ ಬಾಗಿ ಅವರನ್ನು ಆರಾಧಿಸಿದನು.

[9] ಅವನು, ಕರ್ತನೇ, “ಈಗ ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರಕಿದರೆ, ನನ್ನ ಕರ್ತನೇ ತಾವೇ ನಮ್ಮ ಸಂಗಡ ಬರಬೇಕು. ಇದು ಮಾತು ಕೇಳದ ಹಟಮಾರಿ ಜನಾಂಗವೇ ಹೌದು. ಆದರೂ ನಮ್ಮ ದೋಷವನ್ನೂ ಪಾಪವನ್ನೂ ಮನ್ನಿಸಿ ನಮ್ಮನ್ನು ನಿಮ್ಮ ಸೊತ್ತಾಗಿ ತೆಗೆದುಕೊಳ್ಳಿ,” ಎಂದನು.

[10] ಅದಕ್ಕೆ ಯೆಹೋವ ದೇವರು, “ನಾನು ಒಂದು ಒಡಂಬಡಿಕೆಯನ್ನು ಮಾಡುತ್ತೇನೆ. ಸಮಸ್ತ ಭೂಮಿಯಲ್ಲಿಯೂ ಯಾವ ಜನಾಂಗದಲ್ಲಿಯೂ ಹಿಂದೆಂದಿಗೂ ಮಾಡದಿರುವಂಥ ಅದ್ಭುತಗಳನ್ನು ನಿನ್ನ ಎಲ್ಲಾ ಜನರ ಮುಂದೆ ಮಾಡುವೆನು. ನೀನು ಯಾರ ಮಧ್ಯದಲ್ಲಿ ಇರುವೆಯೋ ಆ ಜನರೂ ಯೆಹೋವ ದೇವರ ಕಾರ್ಯವನ್ನು ನೋಡುವರು ಏಕೆಂದರೆ ನಾನು ನಿಮಗೆ ಮಾಡುವಂಥದ್ದು ಭಯಂಕರವಾಗಿರುವುದು.

[11] ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವುದನ್ನು ಅನುಸರಿಸಿ ನಡೆಯಬೇಕು. ಹಿತ್ತಿಯರನ್ನೂ ಅಮೋರಿಯರನ್ನೂ ಕಾನಾನ್ಯರನ್ನೂ, ಪೆರಿಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ನಿಮ್ಮ ಮುಂದೆಯೇ ಹೊರಡಿಸಿಬಿಡುತ್ತೇನೆ.

[12] ನೀನು ಹೋಗುವ ದೇಶದ ನಿವಾಸಿಗಳ ಸಂಗಡ ಒಪ್ಪಂದವನ್ನು ಮಾಡದಂತೆ ನೋಡಿಕೋ. ಒಂದು ವೇಳೆ ಮಾಡಿದರೆ ಅದು ನಿಮ್ಮ ಮಧ್ಯದಲ್ಲಿ ಉರುಲಾಗಿರುವುದು.

[13] ಆದರೆ ಅವರ ಬಲಿಪೀಠಗಳನ್ನು ಒಡೆದುಹಾಕಬೇಕು. ಅವರ ಪವಿತ್ರ ಕಲ್ಲುಕಂಬಗಳನ್ನು ಒಡೆದು, ಅಶೇರವೆಂಬ ವಿಗ್ರಹಸ್ತಂಭಗಳನ್ನು ಕಡಿದುಹಾಕಬೇಕು.

[14] ಏಕೆಂದರೆ, ‘ರೋಷವುಳ್ಳವನು,’ ಎಂದು ಹೆಸರುಳ್ಳ ಯೆಹೋವ ದೇವರು ರೋಷವುಳ್ಳ ದೇವರಾಗಿರುವುದರಿಂದ ನೀನು ಬೇರೆ ದೇವರುಗಳನ್ನು ಆರಾಧಿಸಬಾರದು.

[15] “ನೀನು ಆ ದೇಶದ ನಿವಾಸಿಗಳ ಸಂಗಡ ಒಪ್ಪಂದ ಮಾಡಿಕೊಳ್ಳದಂತೆ ಎಚ್ಚರದಿಂದಿರು. ಅವರು ಅನ್ಯದೇವರುಗಳನ್ನು ಆರಾಧಿಸಿ, ಅವುಗಳಿಗೆ ಯಜ್ಞ ಅರ್ಪಿಸುವ ಸಮಯದಲ್ಲಿ ಒಬ್ಬನು ನಿನ್ನನ್ನು ಕರೆದಾನು, ನೀನು ಅವನ ಯಜ್ಞಭೋಜನವನ್ನು ಮಾಡಬೇಕಾದೀತು.

[16] ಇದಲ್ಲದೆ ಅವರ ಪುತ್ರಿಯರನ್ನು ನಿನ್ನ ಪುತ್ರರಿಗೋಸ್ಕರ ತೆಗೆದುಕೊಳ್ಳಬೇಕಾಗಬಹುದು. ತೆಗೆದುಕೊಂಡರೆ ಅವರ ಪುತ್ರಿಯರು ತಮ್ಮ ದೇವರುಗಳನ್ನು ಆರಾಧಿಸಿ, ನಿಮ್ಮ ಪುತ್ರರನ್ನೂ ಅನ್ಯದೇವರುಗಳ ಆರಾಧನೆಯೆಂಬ ವ್ಯಭಿಚಾರಕ್ಕೆ ಎಳೆಯಬಹುದು.

[17] “ನಿಮಗಾಗಿ ದೇವರುಗಳ ಎರಕ ಹೊಯ್ದ ವಿಗ್ರಹಗಳನ್ನು ಮಾಡಿಕೊಳ್ಳಬಾರದು.

[18] “ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸಬೇಕು. ನಾನು ನಿಮಗೆ ಆಜ್ಞಾಪಿಸಿದಂತೆ ಚೈತ್ರ ಮಾಸದ ಏಳು ದಿವಸ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಏಕೆಂದರೆ ಅಬೀಬ ತಿಂಗಳಿನಲ್ಲಿ ನೀವು ಈಜಿಪ್ಟ್ ದೇಶವನ್ನು ಬಿಟ್ಟು ಬಂದಿದ್ದೀರಿ.

[19] “ಪ್ರಥಮ ಗರ್ಭಫಲವೆಲ್ಲಾ ಅಂದರೆ ನಿಮ್ಮ ಪಶುಗಳಾಗಲಿ, ಎತ್ತುಗಳಾಗಲಿ, ಟಗರುಗಳಾಗಲಿ ಮೊದಲು ಹುಟ್ಟುವವುಗಳೆಲ್ಲಾ ಗಂಡಾಗಿದ್ದರೆ ಅವು ನನ್ನವೇ.

[20] ಕತ್ತೆಮರಿಗೆ ಬದಲಾಗಿ ಕುರಿಮರಿಯನ್ನು ವಿಮೋಚಿಸಬೇಕು. ನೀನು ವಿಮೋಚಿಸದೆ ಹೋದರೆ, ಕುತ್ತಿಗೆಯನ್ನು ಮುರಿಯಬೇಕು. ನಿನ್ನ ಪುತ್ರರಲ್ಲಿ ಚೊಚ್ಚಲಾದವರನ್ನೆಲ್ಲಾ ವಿಮೋಚಿಸಬೇಕು. “ನನ್ನ ಮುಂದೆ ಯಾರೂ ಬರಿಗೈಯಿಂದ ಕಾಣಿಸಿಕೊಳ್ಳಬಾರದು.

[21] “ಆರು ದಿನಗಳು ಕೆಲಸಮಾಡಿ, ಏಳನೆಯ ದಿನದಲ್ಲಿ ವಿಶ್ರಮಿಸಿಕೊಳ್ಳಬೇಕು. ಬಿತ್ತುವ ಕಾಲದಲ್ಲಿಯೂ ಕೊಯ್ಯುವ ಕಾಲದಲ್ಲಿಯೂ ಏಳನೆಯ ದಿನದಲ್ಲಿ ವಿಶ್ರಮಿಸಿಕೊಳ್ಳಬೇಕು.

[22] “ಪ್ರಥಮ ಗೋಧಿ ಸುಗ್ಗಿಯ ವಾರಗಳ ಹಬ್ಬವನ್ನು ಮತ್ತು ವರ್ಷದ ಕೊನೆಯಲ್ಲಿ ಬೆಳೆ ಸಂಗ್ರಹದ ಹಬ್ಬವನ್ನು ಆಚರಿಸಬೇಕು.

[23] ವರುಷಕ್ಕೆ ಮೂರು ಸಾರಿ ನಿಮ್ಮ ಗಂಡು ಮಕ್ಕಳೆಲ್ಲಾ ಸಾರ್ವಭೌಮ ಯೆಹೋವ ದೇವರ ಮುಂದೆ ಅಂದರೆ ಇಸ್ರಾಯೇಲಿನ ದೇವರ ಮುಂದೆ ಬರಬೇಕು.

[24] ಏಕೆಂದರೆ ನಾನು ಜನಾಂಗಗಳನ್ನು ನಿಮ್ಮ ಸನ್ನಿಧಿಯಿಂದ ಹೊರಡಿಸಿಬಿಟ್ಟು, ನಿಮ್ಮ ಮೇರೆಗಳನ್ನು ವಿಸ್ತಾರ ಮಾಡುವೆನು. ವರ್ಷಕ್ಕೆ ಮೂರು ಸಾರಿ ನೀವು ನಿಮ್ಮ ಯೆಹೋವ ದೇವರ ಮುಂದೆ ಬರುವ ಸಮಯದಲ್ಲಿ ಯಾರೂ ನಿಮ್ಮ ಭೂಮಿಯನ್ನು ಅಪಹರಿಸಲು ಆಶೆಪಡುವುದಿಲ್ಲ.

[25] “ಬಲಿ ಅರ್ಪಣೆಯ ರಕ್ತವನ್ನು ಹುಳಿಯಿರುವ ರೊಟ್ಟಿಯ ಸಂಗಡ ಅರ್ಪಿಸಬಾರದು. ಇಲ್ಲವೆ ಪಸ್ಕಹಬ್ಬದ ಬಲಿಯಲ್ಲಿ ಯಾವುದೂ ಬೆಳಗಿನವರೆಗೆ ಉಳಿಸಬಾರದು.

[26] “ನಿಮ್ಮ ಭೂಮಿಯ ಪ್ರಥಮ ಫಲಗಳಲ್ಲಿ ಅತ್ಯುತ್ತಮವಾದದ್ದನ್ನು ನಿಮ್ಮ ಯೆಹೋವ ದೇವರ ಆಲಯಕ್ಕೆ ತರಬೇಕು. “ಮೇಕೆಯ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು,” ಎಂದು ಹೇಳಿದರು.

[27] ಯೆಹೋವ ದೇವರು ಮೋಶೆಗೆ ಹೀಗೆ ಹೇಳಿದರು, “ನೀನು ಈ ವಾಕ್ಯಗಳನ್ನು ಬರೆ. ಏಕೆಂದರೆ ಈ ವಾಕ್ಯಗಳ ಪ್ರಕಾರವೇ ನಾನು ನಿನ್ನ ಮತ್ತು ಇಸ್ರಾಯೇಲಿನ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡಿದ್ದೇನೆ.”

[28] ಮೋಶೆಯು ಹಗಲಿರುಳು ನಲವತ್ತು ದಿವಸ ರೊಟ್ಟಿಯನ್ನು ತಿನ್ನದೇ, ನೀರನ್ನು ಕುಡಿಯದೇ ಅಲ್ಲಿ ಯೆಹೋವ ದೇವರ ಸಂಗಡ ಇದ್ದನು. ದೇವರು ಒಡಂಬಡಿಕೆಯ ವಾಕ್ಯಗಳಾದ ಹತ್ತು ಆಜ್ಞೆಗಳನ್ನು ಹಲಗೆಗಳ ಮೇಲೆ ಬರೆದರು.

[29] ಮೋಶೆಯು ಸಾಕ್ಷಿಯ ಎರಡು ಹಲಗೆಗಳನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಸೀನಾಯಿ ಬೆಟ್ಟದಿಂದ ಇಳಿದಾಗ, ಅವನು ಯೆಹೋವ ದೇವರ ಸಂಗಡ ಬೆಟ್ಟದಲ್ಲಿ ಮಾತನಾಡಿದ್ದರಿಂದ ಅವನ ಮುಖವು ಪ್ರಕಾಶಿಸುತ್ತದೆಂದು ಬೆಟ್ಟದಿಂದ ಇಳಿದಾಗ ಮೋಶೆಗೆ ತಿಳಿಯಲಿಲ್ಲ.

[30] ಆದರೆ ಆರೋನನು ಮತ್ತು ಇಸ್ರಾಯೇಲರೆಲ್ಲರೂ ಮೋಶೆಯನ್ನು ನೋಡಿದಾಗ, ಇಗೋ, ಅವನ ಮುಖವು ಪ್ರಕಾಶಿಸುತ್ತಿತ್ತು. ಆದ್ದರಿಂದ ಅವರು ಅವನ ಹತ್ತಿರ ಬರುವುದಕ್ಕೆ ಭಯಪಟ್ಟರು.

[31] ಮೋಶೆಯು ಅವರನ್ನು ಕರೆದಾಗ, ಆರೋನನು ಮತ್ತು ಸಭೆಯ ಮುಖ್ಯಸ್ಥರೆಲ್ಲರೂ ಅವನ ಬಳಿಗೆ ತಿರುಗಿ ಬಂದರು. ಆಗ ಮೋಶೆಯು ಅವರ ಸಂಗಡ ಮಾತನಾಡಿದನು.

[32] ತರುವಾಯ ಇಸ್ರಾಯೇಲರೆಲ್ಲರೂ ಹತ್ತಿರ ಬಂದರು. ಆಗ ಅವನು ಅವರಿಗೆ, ಯೆಹೋವ ದೇವರು ತನಗೆ ಸೀನಾಯಿ ಬೆಟ್ಟದಲ್ಲಿ ಹೇಳಿದವುಗಳನ್ನೆಲ್ಲಾ ಆಜ್ಞಾಪಿಸಿ ಹೇಳಿದನು.

[33] ಮೋಶೆಯು ಅವರ ಸಂಗಡ ಮಾತನಾಡಿ ಮುಗಿಸುವವರೆಗೂ ಅವನು ತನ್ನ ಮುಖದ ಮೇಲೆ ಮುಸುಕು ಹಾಕಿಕೊಂಡನು.

[34] ಆದರೆ ಮೋಶೆಯು ಯೆಹೋವ ದೇವರ ಸನ್ನಿಧಿಯಲ್ಲಿ ಆತನ ಸಂಗಡ ಮಾತನಾಡುವುದಕ್ಕೆ ಒಳಗೆ ಪ್ರವೇಶಿಸಿ ಹೊರಗೆ ಬರುವವರೆಗೆ ಆ ಮುಸುಕನ್ನು ತೆಗೆದು ಬಿಡುತ್ತಿದ್ದನು. ಅವನು ಹೊರಗೆ ಬಂದು ತನಗೆ ಆಜ್ಞಾಪಿಸಿದ್ದನ್ನು ಇಸ್ರಾಯೇಲರಿಗೆ ಹೇಳಿದನು.

[35] ಆಗ ಮೋಶೆಯ ಮುಖವು ಪ್ರಕಾಶಿಸುವುದನ್ನು ಇಸ್ರಾಯೇಲರು ನೋಡಿದ್ದರು. ಮೋಶೆ ದೇವರ ಸಂಗಡ ಮಾತನಾಡುವುದಕ್ಕೆ ಹೋಗುವವರೆಗೆ ಅವನು ತನ್ನ ಮುಖದ ಮೇಲೆ ತಿರುಗಿ ಮುಸುಕನ್ನು ಹಾಕಿಕೊಳ್ಳುತ್ತಿದ್ದನು.

ವಿಮೋಚನಕಾಂಡ — Chapters