Skip to content
Opens in a new window
Listen to this chapter • 7:16

[1] ತರುವಾಯ ಯೆಹೋವ ದೇವರು ಮೋಶೆಗೆ, “ಫರೋಹನ ಬಳಿಗೆ ಹೋಗು, ಏಕೆಂದರೆ ನಾನು ನನ್ನ ಅದ್ಭುತ ಸೂಚಕಕಾರ್ಯಗಳನ್ನು ಅವನ ಮುಂದೆ ತೋರಿಸುವುದಕ್ಕಾಗಿ ಅವನ ಹೃದಯವನ್ನೂ ಅವನ ಅಧಿಕಾರಿಗಳ ಹೃದಯಗಳನ್ನೂ ಕಠಿಣ ಮಾಡಿದ್ದೇನೆ.

[2] ಇದಲ್ಲದೆ ನೀನು ನಿನ್ನ ಮಕ್ಕಳಿಗೂ ನಿನ್ನ ಮಕ್ಕಳ ಮಕ್ಕಳಿಗೂ ನಾನು ಈಜಿಪ್ಟಿನಲ್ಲಿ ಏನು ಮಾಡಿದೆನೆಂದೂ, ನಾನೇ ಯೆಹೋವ ದೇವರೆಂದೂ ನೀವು ತಿಳಿದುಕೊಳ್ಳುವಂತೆ ನಾನು ಅವರ ಮಧ್ಯದಲ್ಲಿ ಮಾಡಿದ ಅದ್ಭುತ ಸೂಚಕಕಾರ್ಯಗಳನ್ನು ತಿಳಿಸಬೇಕು,” ಎಂದು ಹೇಳಿದರು.

[3] ಮೋಶೆ ಆರೋನರು ಫರೋಹನ ಬಳಿಗೆ ಬಂದು ಅವನಿಗೆ, “ಹಿಬ್ರಿಯರ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ನನ್ನ ಸನ್ನಿಧಿಯಲ್ಲಿ ನೀನು ಎಷ್ಟು ಕಾಲ ತಲೆ ತಗ್ಗಿಸದಿರುವೆ? ನನ್ನನ್ನು ಆರಾಧಿಸುವಂತೆ ನನ್ನ ಜನರನ್ನು ಹೋಗಗೊಡಿಸು.

[4] ನೀನು ನನ್ನ ಜನರನ್ನು ಹೋಗಗೊಡಿಸದಿದ್ದರೆ, ನಾಳೆಯೇ ನಾನು ನಿನ್ನ ರಾಜ್ಯದಲ್ಲಿ ಮಿಡತೆಗಳನ್ನು ಬರಮಾಡುವೆನು.

[5] ಒಬ್ಬನು ಭೂಮಿಯನ್ನು ಕಾಣುವುದಕ್ಕಾಗದಷ್ಟು ಅವು ಭೂಮಿಯನ್ನೆಲ್ಲಾ ಮುಚ್ಚಿಕೊಳ್ಳುವುವು. ಇದಲ್ಲದೆ ಅವು ಆಲಿಕಲ್ಲಿನ ಮಳೆಯಿಂದ ಹಾಳಾಗದೆ ನಿಮಗಾಗಿ ಉಳಿದಿರುವುದೆಲ್ಲವನ್ನೂ, ಹೊಲಗಳಲ್ಲಿ ಚಿಗುರಿರುವ ಪ್ರತಿಯೊಂದು ಮರವನ್ನೂ ತಿಂದುಬಿಡುವುವು.

[6] ಅವು ನಿನ್ನ ಮನೆಗಳಲ್ಲಿಯೂ ನಿನ್ನ ಅಧಿಕಾರಿಗಳ ಮನೆಗಳಲ್ಲಿಯೂ ಈಜಿಪ್ಟಿನ ಎಲ್ಲಾ ಮನೆಗಳಲ್ಲಿಯೂ ತುಂಬಿಕೊಳ್ಳುವುವು. ನಿನ್ನ ತಂದೆ ಅಲ್ಲದೆ ನಿನ್ನ ತಂದೆಯ ತಂದೆಗಳಾಗಲಿ, ಭೂಮಿಯ ಮೇಲೆ ಇದ್ದಂದಿನಿಂದ ಇಂದಿನವರೆಗೂ ಅಂಥ ಮಿಡತೆಯ ದಂಡನ್ನು ಯಾರೂ ನೋಡಿಲ್ಲ,’ ” ಎಂದು ಮೋಶೆ ಹೇಳಿ ಫರೋಹನ ಬಳಿಯಿಂದ ಹೊರಟುಹೋದನು.

[7] ಫರೋಹನ ಅಧಿಕಾರಿಗಳು ಅವನಿಗೆ, “ಇವನು ಎಷ್ಟು ಕಾಲ ನಮಗೆ ಉರುಲಾಗಿರಬೇಕು. ಆ ಜನರು ತಮ್ಮ ದೇವರಾದ ಯೆಹೋವ ದೇವರಿಗೆ ಆರಾಧನೆ ಮಾಡುವಂತೆ ಅವರನ್ನು ಕಳುಹಿಸಿಬಿಡು. ಈಜಿಪ್ಟ್ ನಾಶವಾಯಿತೆಂದು ನಿನಗೆ ಇನ್ನೂ ತಿಳಿಯಲಿಲ್ಲವೋ?” ಎಂದರು.

[8] ಆದುದರಿಂದ ಫರೋಹನು ಮೋಶೆ ಮತ್ತು ಆರೋನರನ್ನು ಪುನಃ ಕರೆಯಿಸಿ ಅವರಿಗೆ, “ನೀವು ಹೋಗಿ ನಿಮ್ಮ ದೇವರಾದ ಯೆಹೋವ ದೇವರಿಗೆ ಆರಾಧನೆ ಮಾಡಿರಿ, ಆದರೆ ಹೋಗುವವರು ಯಾರ‍್ಯಾರು?” ಎಂದು ಕೇಳಿದನು.

[9] ಅದಕ್ಕೆ ಮೋಶೆಯು ಅವನಿಗೆ, “ನಮ್ಮ ಚಿಕ್ಕವರನ್ನೂ ವೃದ್ಧರನ್ನೂ ಕರೆದುಕೊಂಡು ಹೋಗುತ್ತೇವೆ. ಇದಲ್ಲದೆ ನಮ್ಮ ಪುತ್ರಪುತ್ರಿಯರನ್ನೂ ನಮ್ಮ ದನಕುರಿಗಳನ್ನೂ ತೆಗೆದುಕೊಂಡು ಹೋಗುತ್ತೇವೆ. ಏಕೆಂದರೆ ನಾವು ಯೆಹೋವ ದೇವರಿಗಾಗಿ ಹಬ್ಬವನ್ನು ಮಾಡಬೇಕು,” ಎಂದನು.

[10] ಫರೋಹನು ಅವರಿಗೆ, “ನಾನು ನಿಮ್ಮ ಮಡದಿ ಮಕ್ಕಳನ್ನೂ ಕಳುಹಿಸಿಕೊಟ್ಟು, ಯೆಹೋವ ದೇವರು ನಿಮ್ಮ ಸಂಗಡ ಇರಲಿ ಎಂದು ನಾನು ಹೇಳಬಯಸುವಿರೋ? ಇಲ್ಲಾ! ನೀವು ಕೇಡು ಮಾಡಲು ನಿರ್ಧರಿಸಿರುವಿರಿ?

[11] ಹಾಗೆ ಮಾಡದೆ, ಗಂಡಸರಾದ ನೀವು ಮಾತ್ರ ಹೋಗಿ ಯೆಹೋವ ದೇವರಿಗೆ ಆರಾಧನೆ ಮಾಡಿರಿ, ಏಕೆಂದರೆ ಇದನ್ನೇ ನೀವು ಬಯಸಿದಿರಿ,” ಎಂದನು. ತರುವಾಯ ಫರೋಹನು ಅವರನ್ನು ತನ್ನ ಸನ್ನಿಧಿಯಿಂದ ಹೊರಡಿಸಿಬಿಟ್ಟನು.

[12] ಆಗ ಯೆಹೋವ ದೇವರು ಮೋಶೆಗೆ, “ಮಿಡತೆಗಳಿಗಾಗಿ ನಿನ್ನ ಕೈಯನ್ನು ಈಜಿಪ್ಟಿನ ಮೇಲೆ ಚಾಚು. ಅವು ಈಜಿಪ್ಟಿನ ಮೇಲೆ ಬಂದು, ಆಲಿಕಲ್ಲಿನ ಮಳೆಯು ದೇಶದಲ್ಲಿ ಉಳಿಸಿದ ಹಸುರಾದದ್ದನ್ನೆಲ್ಲಾ ತಿಂದುಬಿಡಲಿ,” ಎಂದರು.

[13] ಮೋಶೆಯು ತನ್ನ ಕೋಲನ್ನು ಈಜಿಪ್ಟ್ ದೇಶದ ಮೇಲೆ ಚಾಚಿದಾಗ, ಯೆಹೋವ ದೇವರು ಹಗಲಲ್ಲೂ ರಾತ್ರಿಯಲ್ಲೂ ಪೂರ್ವದಿಕ್ಕಿನಿಂದ ಗಾಳಿಯನ್ನು ಬರಮಾಡಿದರು. ಉದಯವಾದಾಗ ಆ ಗಾಳಿಯು ಮಿಡತೆಗಳನ್ನು ಅಟ್ಟಿಕೊಂಡು ಬಂದಿತು.

[14] ಹೀಗೆ ಮಿಡತೆಗಳ ಉಪದ್ರವ ಈಜಿಪ್ಟ್ ದೇಶದಲ್ಲೆಲ್ಲಾ ಬಂದು, ಈಜಿಪ್ಟಿನ ಎಲ್ಲಾ ಮೇರೆಗಳಲ್ಲಿ ದೊಡ್ಡ ಸಮೂಹವಾಗಿ ಸೇರಿಕೊಂಡವು. ಅವುಗಳಂಥವು ಹಿಂದೆ ಎಂದಿಗೂ ಇರಲಿಲ್ಲ, ಅನಂತರವೂ ಇರಲಾರವು.

[15] ಏಕೆಂದರೆ ಅವು ಭೂಮಿಯನ್ನೆಲ್ಲಾ ಮುತ್ತಿಕೊಂಡದ್ದರಿಂದ, ಆ ದೇಶದಲ್ಲಿ ಕತ್ತಲಾಯಿತು. ಅವು ಭೂಮಿಯ ಎಲ್ಲಾ ಸೊಪ್ಪನ್ನೂ, ಆಲಿಕಲ್ಲಿನ ಮಳೆಯು ಉಳಿಸಿದ ಎಲ್ಲಾ ಫಲವನ್ನೂ ತಿಂದುಬಿಟ್ಟವು. ಮರಗಳಲ್ಲಾಗಲಿ, ಹೊಲದ ಗಿಡಗಳಲ್ಲಾಗಲಿ ಹಸುರಾದದ್ದು ಈಜಿಪ್ಟ್ ದೇಶದಲ್ಲೆಲ್ಲಿಯೂ ಉಳಿಯಲಿಲ್ಲ.

[16] ಆಗ ಫರೋಹನು ಮೋಶೆ ಆರೋನರನ್ನು ತ್ವರೆಯಾಗಿ ಕರೆಯಿಸಿ ಅವರಿಗೆ, “ನಾನು ನಿಮ್ಮ ದೇವರಾದ ಯೆಹೋವ ದೇವರಿಗೂ, ನಿಮಗೂ ವಿರೋಧವಾಗಿ ಪಾಪಮಾಡಿದ್ದೇನೆ.

[17] ಹೀಗಿರುವುದರಿಂದ ಈಗ ಒಂದೇ ಸಾರಿ ಮಾತ್ರ ನನ್ನ ಪಾಪವನ್ನು ಕ್ಷಮಿಸಬೇಕು. ಈ ಮರಣಕರವಾದ ಉಪದ್ರವವನ್ನು ನನ್ನಿಂದ ತೊಲಗಿಸುವಂತೆ ನಿಮ್ಮ ದೇವರಾದ ಯೆಹೋವ ದೇವರನ್ನು ಬೇಡಿಕೊಳ್ಳಿರಿ,” ಎಂದನು.

[18] ಆಗ ಮೋಶೆ ಫರೋಹನನ್ನು ಬಿಟ್ಟು ಹೋಗಿ ಯೆಹೋವ ದೇವರನ್ನು ಬೇಡಿಕೊಂಡನು.

[19] ಯೆಹೋವ ದೇವರು ಬಲವಾದ ಪಶ್ಚಿಮ ಗಾಳಿಯನ್ನು ಬೀಸುವಂತೆ ಮಾಡಿದರು. ಅದು ಮಿಡತೆಗಳನ್ನು ಎತ್ತಿಕೊಂಡು ಹೋಗಿ ಕೆಂಪು ಸಮುದ್ರದಲ್ಲಿ ಹಾಕಿತು. ಈಜಿಪ್ಟ್ ಮೇರೆಗಳಲ್ಲೆಲ್ಲಾ ಒಂದು ಮಿಡತೆಯಾದರೂ ಉಳಿಯಲಿಲ್ಲ.

[20] ಆದರೆ ಯೆಹೋವ ದೇವರು ಫರೋಹನ ಹೃದಯವನ್ನು ಕಠಿಣ ಮಾಡಿದ್ದರಿಂದ, ಅವನು ಇಸ್ರಾಯೇಲರನ್ನು ಕಳುಹಿಸದೆ ಹೋದನು.

[21] ಆಗ ಯೆಹೋವ ದೇವರು ಮೋಶೆಗೆ, “ಈಜಿಪ್ಟ್ ದೇಶದಲ್ಲಿ ಕತ್ತಲೆ ಕವಿದು ಗಾಡಾಂಧಕಾರವಾಗುವಂತೆ ನಿನ್ನ ಕೈಯನ್ನು ಆಕಾಶದ ಕಡೆಗೆ ಚಾಚು,” ಎಂದರು.

[22] ಮೋಶೆಯು ಆಕಾಶದ ಕಡೆಗೆ ಕೈಚಾಚಿದಾಗ, ಈಜಿಪ್ಟ್ ದೇಶದಲ್ಲೆಲ್ಲಾ ಮೂರು ದಿನಗಳವರೆಗೆ ಘೋರವಾದ ಕತ್ತಲೆ ಕವಿಯಿತು.

[23] ಮೂರು ದಿನಗಳವರೆಗೆ ಅವರು ಒಬ್ಬರನ್ನೊಬ್ಬರು ನೋಡಲಾಗಲಿಲ್ಲ. ಯಾರೂ ತಮ್ಮ ಸ್ಥಳವನ್ನು ಬಿಟ್ಟು ಏಳಲಿಲ್ಲ. ಆದರೆ ಇಸ್ರಾಯೇಲರಿಗೆಲ್ಲಾ ಅವರು ವಾಸಿಸುವ ಸ್ಥಳದಲ್ಲಿ ಅವರಿಗೆ ಬೆಳಕಿತ್ತು.

[24] ಆಗ ಫರೋಹನು ಮೋಶೆಯನ್ನು ಕರೆಯಿಸಿ ಅವನಿಗೆ, “ನೀವು ಹೋಗಿ ಯೆಹೋವ ದೇವರಿಗೆ ಆರಾಧನೆ ಮಾಡಿರಿ. ನಿಮ್ಮ ಕುರಿದನಗಳು ಮಾತ್ರ ಇಲ್ಲಿರಲಿ. ನಿಮ್ಮ ಮಡದಿ ಮಕ್ಕಳೂ ನಿಮ್ಮ ಸಂಗಡ ಹೋಗಲಿ,” ಎಂದನು.

[25] ಅದಕ್ಕೆ ಮೋಶೆಯು ಅವನಿಗೆ, “ನಮ್ಮ ದೇವರಾದ ಯೆಹೋವ ದೇವರಿಗೆ ಅರ್ಪಿಸುವುದಕ್ಕಾಗಿ ಯಜ್ಞಗಳನ್ನೂ ದಹನಬಲಿಗಳನ್ನೂ ತೆಗೆದುಕೊಂಡು ಹೋಗಲು ಅಪ್ಪಣೆಬೇಕು.

[26] ನಮ್ಮ ಪಶುಪ್ರಾಣಿಗಳನ್ನೂ ನಾವು ನಮ್ಮ ಸಂಗಡ ತೆಗೆದುಕೊಂಡು ಹೋಗುವೆವು. ಒಂದು ಗೊರಸನ್ನೂ ಬಿಡಲಾರೆವು. ಏಕೆಂದರೆ ನಮ್ಮ ದೇವರಾದ ಯೆಹೋವ ದೇವರಿಗೆ ಆರಾಧನೆ ಮಾಡುವುದಕ್ಕೆ ಅವುಗಳಿಂದಲೇ ಬಲಿ ಅರ್ಪಿಸಬೇಕು. ಯೆಹೋವ ದೇವರಿಗೆ ಯಾವ ಅರ್ಪಣೆ ಮಾಡಬೇಕೆಂಬುದು ಅಲ್ಲಿಗೆ ಹೋಗುವವರೆಗೂ ನಮಗೆ ತಿಳಿಯದು,” ಎಂದನು.

[27] ಆದರೆ ಯೆಹೋವ ದೇವರು ಫರೋಹನ ಹೃದಯವನ್ನು ಕಠಿಣ ಮಾಡಿದ್ದರಿಂದ, ಅವನು ಅವರನ್ನು ಕಳುಹಿಸಲಾರದೆ ಹೋದನು.

[28] ಆಗ ಫರೋಹನು ಮೋಶೆಗೆ, “ನನ್ನನ್ನು ಬಿಟ್ಟು ಹೋಗು. ಇನ್ನು ನನ್ನ ಮುಖವನ್ನು ನೋಡದಂತೆ ಎಚ್ಚರ. ಏಕೆಂದರೆ ನೀನು ನನ್ನ ಮುಖವನ್ನು ನೋಡಿದ ದಿನದಲ್ಲಿ ಸಾಯುವೆ,” ಎಂದನು.

[29] ಮೋಶೆಯು ಅವನಿಗೆ, “ನೀನು ಸರಿಯಾಗಿ ಹೇಳಿದ್ದೀ. ಇನ್ನು ಮೇಲೆ ನಾನು ನಿನ್ನ ಮುಖವನ್ನು ನೋಡುವುದಿಲ್ಲ,” ಎಂದನು.

ವಿಮೋಚನಕಾಂಡ — Chapters