[1] ಇಸ್ರಾಯೇಲರು ಐಗುಪ್ತ ದೇಶದಿಂದ ಹೊರಟ ಎರಡನೆಯ ವರ್ಷದ ಎರಡನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಸೀನಾಯಿ ಅರಣ್ಯದಲ್ಲಿ ದೇವದರ್ಶನದ ಗುಡಾರದೊಳಗೆ ಯೆಹೋವನು ಮೋಶೆಯ ಸಂಗಡ ಹೀಗೆ ಮಾತನಾಡಿದನು,
[2] “ಇಸ್ರಾಯೇಲರ ಸರ್ವಸಮೂಹದ ಗಂಡಸರನ್ನು ಗೋತ್ರದ ಕುಟುಂಬಗಳ ಪ್ರಕಾರ ಹೆಸರು ಹಿಡಿದು ಒಬ್ಬೊಬ್ಬರನ್ನಾಗಿ ಲೆಕ್ಕಿಸಬೇಕು.
[3] ಇಸ್ರಾಯೇಲರಲ್ಲಿ ಸೈನಿಕರಾಗಿ ಹೊರಡತಕ್ಕವರನ್ನು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರೆಲ್ಲರನ್ನು ಸೈನ್ಯಸೈನ್ಯವಾಗಿ ನೀನೂ ಆರೋನನೂ ಲೆಕ್ಕಹಾಕಬೇಕು.
[4] ಈ ಕೆಲಸಕ್ಕಾಗಿ ಕುಲದಲ್ಲಿ ಆಯಾ ಕುಲದ ಒಂದೊಂದು ಮುಖ್ಯಸ್ಥನಾಗಿರುವ ಒಬ್ಬೊಬ್ಬ ಸಹಾಯಕನಿರಬೇಕು ಹಾಗೂ ತನ್ನ ಕುಲಕ್ಕಾಗಿ ಹೋರಾಡುವ ಜನರನ್ನು ಮುಖ್ಯಸ್ಥನು ಮುನ್ನಡೆಸಬೇಕು.
[5] ನಿಮಗೆ ಸಹಾಯಮಾಡಬೇಕಾದ ಪುರುಷರು ಯಾರಾರೆಂದರೆ: ರೂಬೇನ್ ಕುಲದಿಂದ ಶೆದೇಯೂರನ ಮಗನಾದ ಎಲೀಚೂರ್,
[6] ಸಿಮೆಯೋನ್ ಕುಲದಿಂದ ಚೂರೀಷದ್ದೈಯ ಮಗನಾದ ಶೆಲುಮೀಯೇಲ್,
[7] ಯೆಹೂದ ಕುಲದಿಂದ ಅಮ್ಮೀನಾದಾಬನ ಮಗನಾದ ನಹಶೋನ್,
[8] ಇಸ್ಸಾಕಾರ್ ಕುಲದಿಂದ ಚೂವಾರನ ಮಗನಾದ ನೆತನೇಲ್,
[9] ಜೆಬುಲೂನ್ ಕುಲದಿಂದ ಹೇಲೋನನ ಮಗನಾದ ಎಲೀಯಾಬ್,
[10] ಯೋಸೇಫನ ವಂಶದವರಲ್ಲಿ: ಎಫ್ರಾಯೀಮ್ ಕುಲದಿಂದ ಅಮ್ಮೀಹೂದನ ಮಗನಾದ ಎಲೀಷಾಮಾ, ಮನಸ್ಸೆ ಕುಲದಿಂದ ಪೆದಾಚೂರನ ಮಗನಾದ ಗಮ್ಲೀಯೇಲ್,
[11] ಬೆನ್ಯಾಮೀನ್ ಕುಲದಿಂದ ಗಿದ್ಯೋನಿಯ ಮಗನಾದ ಅಬೀದಾನ್,
[12] ದಾನ್ ಕುಲದಿಂದ ಅಮ್ಮೀಷದ್ದೈಯ ಮಗನಾದ ಅಹೀಗೆಜೆರ್,
[13] ಆಶೇರ್ ಕುಲದಿಂದ ಒಕ್ರಾನನ ಮಗನಾದ ಪಗೀಯೇಲ್,
[14] ಗಾದ್ ಕುಲದಿಂದ ರೆಗೂವೇಲನ ಮಗನಾದ ಎಲ್ಯಾಸಾಫ್,
[15] ನಫ್ತಾಲಿ ಕುಲದಿಂದ ಏನಾನನ ಮಗನಾದ ಅಹೀರ.”
[16] ಇವರು ಸರ್ವಸಮೂಹದೊಳಗಿಂದ ಆಯ್ದುಕೊಂಡು ನೇಮಕವಾದವರು. ಇವರು ತಮ್ಮ ಕುಲಗಳಲ್ಲಿ ಪ್ರಧಾನಪುರುಷರು ಹಾಗೂ ಇಸ್ರಾಯೇಲಿನ ಕುಲಗಳ ಪ್ರಮುಖರು.
[17] ಹೆಸರಿನಿಂದ ಸೂಚಿತರಾದ ಈ ಪುರುಷರನ್ನು ಮೋಶೆಯು ಮತ್ತು ಆರೋನನು ಆರಿಸಿಕೊಂಡರು.
[18] ಅವರು ಎರಡನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಸಮಸ್ತ ಪುರುಷರನ್ನೂ ಸಮೂಹದವರೆಲ್ಲರನ್ನೂ ಕೂಡಿಸಿದರು. ಇಪ್ಪತ್ತು ವರ್ಷ ಹಾಗೂ ಮೇಲ್ಪಟ್ಟ ವಯಸ್ಸುಳ್ಳವರೆಲ್ಲರೂ ಒಬ್ಬೊಬ್ಬರಾಗಿ ಗೋತ್ರ ಕುಟುಂಬಗಳ ಪ್ರಕಾರ ತಮ್ಮತಮ್ಮ ವಂಶಾವಳಿಯನ್ನು ಬರೆಯಿಸಿಕೊಂಡರು.
[19] ಹೀಗೆ ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಮೋಶೆ ಸೀನಾಯಿ ಅರಣ್ಯದಲ್ಲಿ ಅವರನ್ನು ಲೆಕ್ಕಮಾಡಿ ಮೊಟ್ಟಮೊದಲು ಜನಗಣತಿ ಪ್ರಾರಂಭಿಸಿದನು.
[20] ಇಸ್ರಾಯೇಲಿನ ಚೊಚ್ಚಲ ಮಗನಾದ ರೂಬೇನನ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಲೆಕ್ಕಮಾಡಲ್ಪಟ್ಟರು.
[21] ರೂಬೇನನ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟ ಗಂಡಸರು - 46,500 ಮಂದಿ.
[22] ಸಿಮೆಯೋನನ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷಕ್ಕೆ ಮೇಲ್ಪಟ್ಟ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರು ಹಿಡಿದು ಲೆಕ್ಕಿಸಲ್ಪಟ್ಟರು.
[23] ಸಿಮೆಯೋನನ ಗೋತ್ರದಲ್ಲಿ ಎಣಿಕೆಯಾದ ಗಂಡಸರು - 59,300 ಮಂದಿ.
[24] ಗಾದ್ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಲೆಕ್ಕಮಾಡಲ್ಪಟ್ಟರು.
[25] ಗಾದ್ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟ ಗಂಡಸರು - 45,650 ಮಂದಿ.
[26] ಯೆಹೂದ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರು ಹಿಡಿದು ಲೆಕ್ಕಿಸಲ್ಪಟ್ಟರು.
[27] ಯೆಹೂದ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟ ಗಂಡಸರು - 74,600 ಮಂದಿ.
[28] ಇಸ್ಸಾಕಾರ್ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರು ಹಿಡಿದು ಲೆಕ್ಕಿಸಲ್ಪಟ್ಟರು.
[29] ಇಸ್ಸಾಕಾರ್ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟ ಗಂಡಸರು - 54,400 ಮಂದಿ.
[30] ಜೆಬುಲೂನ್ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರು ಹಿಡಿದು ಲೆಕ್ಕಿಸಲ್ಪಟ್ಟರು.
[31] ಜೆಬುಲೂನ್ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟ ಗಂಡಸರು - 57,400 ಮಂದಿ.
[32] ಯೋಸೇಫನಿಂದ ಹುಟ್ಟಿದವರೊಳಗೆ ಎಫ್ರಾಯೀಮ್ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರು ಹಿಡಿದು ಲೆಕ್ಕಿಸಲ್ಪಟ್ಟರು.
[33] ಎಫ್ರಾಯೀಮ್ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟ ಗಂಡಸರು - 40,500 ಮಂದಿ.
[34] ಮನಸ್ಸೆ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರು ಹಿಡಿದು ಲೆಕ್ಕಿಸಲ್ಪಟ್ಟರು.
[35] ಮನಸ್ಸೆ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟ ಗಂಡಸರು - 32,200 ಮಂದಿ.
[36] ಬೆನ್ಯಾಮೀನ್ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರು ಹಿಡಿದು ಲೆಕ್ಕಿಸಲ್ಪಟ್ಟರು.
[37] ಬೆನ್ಯಾಮೀನ್ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟ ಗಂಡಸರು - 35,400 ಮಂದಿ.
[38] ದಾನ್ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರು ಹಿಡಿದು ಲೆಕ್ಕಿಸಲ್ಪಟ್ಟರು.
[39] ದಾನ್ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟ ಗಂಡಸರು - 62,700 ಮಂದಿ.
[40] ಆಶೇರ್ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರು ಹಿಡಿದು ಲೆಕ್ಕಿಸಲ್ಪಟ್ಟರು.
[41] ಆಶೇರ್ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟ ಗಂಡಸರು - 41,500 ಮಂದಿ.
[42] ನಫ್ತಾಲಿ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರು ಹಿಡಿದು ಲೆಕ್ಕಿಸಲ್ಪಟ್ಟರು.
[43] ನಫ್ತಾಲಿ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟ ಗಂಡಸರು - 53,400 ಮಂದಿ.
[44] ಮೋಶೆ, ಆರೋನನೂ ಮತ್ತು ಇಸ್ರಾಯೇಲಿನ ಹನ್ನೆರಡು ಕುಲಗಳ ನಾಯಕರು ಲೆಕ್ಕಮಾಡಿದ ಇಸ್ರಾಯೇಲರ ಜನರು ಇವರೇ.
[45] ಇಸ್ರಾಯೇಲರಲ್ಲಿ ಲೆಕ್ಕಿಸಲ್ಪಟ್ಟವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರಾಗಿದ್ದು ಸೈನಿಕರಾಗಿ ಹೊರಡತಕ್ಕವರನ್ನು ಲೆಕ್ಕಿಸಿದರು.
[46] ಗಂಡಸರ ಒಟ್ಟು ಸಂಖ್ಯೆ - 6,03,550 ಮಂದಿ.
[47] ಆದರೆ ಅವರೊಡನೆ ಲೇವಿ ಕುಲದ ಕುಟುಂಬಗಳು ಲೆಕ್ಕಿಸಲ್ಪಡಲಿಲ್ಲ.
[48] ಏಕೆಂದರೆ ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನೆಂದರೆ,
[49] “ನೀನು ಇಸ್ರಾಯೇಲರನ್ನು ಎಣಿಸುವಾಗ ಲೇವಿ ಕುಲದವರನ್ನು ಎಣಿಸಬಾರದು.
[50] ಆಜ್ಞಾಶಾಸನಗಳಿರುವ ಗುಡಾರವನ್ನೂ ಅದರ ಸಾಮಾನು, ಉಪಕರಣ ಇವುಗಳನ್ನೂ ನೋಡಿಕೊಳ್ಳುವುದಕ್ಕಾಗಿ ಲೇವಿಯರನ್ನು ನೇಮಿಸಬೇಕು. ಅವರು ಆ ಗುಡಾರವನ್ನೂ ಮತ್ತು ಅದರ ಸಾಮಾನುಗಳನ್ನೂ ಹೊರುವುದಕ್ಕಾಗಿ ಇರಬೇಕು. ಅವರು ಅದರ ಸೇವೆಯನ್ನು ಮಾಡುವವರಾಗಿ ಅದರ ಸುತ್ತಲೂ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು.
[51] ಗುಡಾರವು ಹೊರಡುವಾಗ ಲೇವಿಯರೇ ಅದನ್ನು ಬಿಚ್ಚಬೇಕು; ಇಳಿದುಕೊಳ್ಳುವಾಗ ಲೇವಿಯರೇ ಅದನ್ನು ಹಾಕಬೇಕು. ಇತರರು ಹತ್ತಿರಕ್ಕೆ ಬಂದರೆ ಅವರಿಗೆ ಮರಣಶಿಕ್ಷೆಯಾಗಬೇಕು.
[52] ಇಸ್ರಾಯೇಲರ ಆಯಾ ಸೈನ್ಯಗಳು ತಮ್ಮ ಡೇರೆಗಳನ್ನು ತಮ್ಮತಮ್ಮ ದಂಡಿನ ಧ್ವಜದ ಹತ್ತಿರ ಹಾಕಿಕೊಳ್ಳಬೇಕು.
[53] ಆದರೆ ಲೇವಿಯರು ಮಾತ್ರ ತಮ್ಮ ಡೇರೆಗಳನ್ನು ದೇವದರ್ಶನದ ಗುಡಾರದ ಸುತ್ತಲೂ ಹಾಕಿಕೊಳ್ಳಬೇಕು. ಹೀಗಾದರೆ ಯೆಹೋವನ ಕೋಪವು ಇಸ್ರಾಯೇಲರ ಮೇಲೆ ಬರುವುದಕ್ಕೆ ಆಸ್ಪದವಿರುವುದಿಲ್ಲ. ಲೇವಿಯರು ದೇವದರ್ಶನದ ಗುಡಾರವನ್ನು ಕಾಯುವವರಾಗಿರಬೇಕು.”
[54] ಇಸ್ರಾಯೇಲರು ಯೆಹೋವನು ಮೋಶೆಗೆ ಆಜ್ಞಾಪಿಸಿದ ಪ್ರಕಾರವೇ ಎಲ್ಲವನ್ನು ಮಾಡಿದರು.