Skip to content
Opens in a new window
Listen to this chapter • 4:40

[1] ಯೆಹೋವನು ಮೋಶೆ ಮತ್ತು ಆರೋನರಿಗೆ ಹೀಗೆ ಆಜ್ಞಾಪಿಸಿದನು,

[2] “ಯೆಹೋವನಾದ ನಾನು ಒಂದು ನಿಯಮವನ್ನು ನೇಮಿಸಿದ್ದೇನೆ, ಅದೇನೆಂದರೆ: ಎಂದೂ ನೊಗವನ್ನು ಹೊರದ ಮತ್ತು ಯಾವ ದೋಷವಿಲ್ಲದ ಪೂರ್ಣಾಂಗವಾದ ಕೆಂದಾಕಳನ್ನು ನಿಮಗೆ ತಂದುಕೊಡಬೇಕೆಂದು ಇಸ್ರಾಯೇಲರಿಗೆ ಆಜ್ಞಾಪಿಸು.

[3] ಅದನ್ನು ನೀವು ಯಾಜಕನಾದ ಎಲ್ಲಾಜಾರನ ಕೈಗೆ ಒಪ್ಪಿಸಬೇಕು. ಅವನು ಅದನ್ನು ಪಾಳೆಯದ ಹೊರಗೆ ಹೊರಡಿಸಿಕೊಂಡು ಹೋಗಿ ತನ್ನ ಎದುರೇ ಒಬ್ಬನ ಕೈಯಿಂದ ವಧೆಮಾಡಿಸಬೇಕು.

[4] ತರುವಾಯ ಯಾಜಕನಾದ ಎಲ್ಲಾಜಾರನು ಅದರ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ದೇವದರ್ಶನದ ಗುಡಾರದ ಮುಂಭಾಗದ ಕಡೆಗೆ ಏಳು ಸಾರಿ ಚಿಮಿಕಿಸಬೇಕು.

[5] ಆಗ ಅವನು ಆ ಆಕಳನ್ನು ಚರ್ಮ, ಮಾಂಸ, ರಕ್ತ, ಕಲ್ಮಷಗಳ ಸಹಿತವಾಗಿ ತನ್ನ ಎದುರಿನಲ್ಲಿಯೇ ಸುಡಿಸಿಬಿಡಬೇಕು.

[6] ಯಾಜಕನು ದೇವದಾರುಮರದ ಕಟ್ಟಿಗೆಯನ್ನೂ, ಹಿಸ್ಸೋಪ್ ಗಿಡದ ಬರಲನ್ನೂ, ರಕ್ತವರ್ಣವುಳ್ಳ ದಾರವನ್ನೂ ತೆಗೆದುಕೊಂಡು ಆ ಆಕಳನ್ನು ಸುಡುವ ಬೆಂಕಿಯಲ್ಲಿ ಹಾಕಬೇಕು.

[7] ಆ ಯಾಜಕನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿದ ನಂತರ ಪಾಳೆಯದೊಳಗೆ ಬರಬಹುದು. ಆದರೆ ಆ ದಿನದ ಸಾಯಂಕಾಲದವರೆಗೆ ಅವನು ಅಶುದ್ಧನಾಗಿರಬೇಕು.

[8] ಆ ಆಕಳನ್ನು ಸುಟ್ಟವನೂ ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿ ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರಬೇಕು.

[9] “ಶುದ್ಧನಾದವನೊಬ್ಬನು ಆ ಆಕಳಿನ ಬೂದಿಯನ್ನು ಕೂಡಿಸಿ ಪಾಳೆಯದ ಹೊರಗೆ ಶುದ್ಧವಾದ ಸ್ಥಳದಲ್ಲಿ ಇಡಬೇಕು. ಅದನ್ನು ಇಸ್ರಾಯೇಲರ ಸಮೂಹದವರ ಉಪಯೋಗಕ್ಕಾಗಿ ನೀವು ಜೋಪಾನಮಾಡಬೇಕು. ಆದುದರಿಂದ ಶುದ್ಧೀಕರಣದ ನೀರನ್ನು ಸಿದ್ಧಪಡಿಸುವುದಕ್ಕಾಗಿ ಅದನ್ನು ಅಲ್ಲೇ ಇಟ್ಟಿರಬೇಕು. ಅದು ಅಶುದ್ಧವಾದದ್ದು.

[10] ಆ ಕೆಂದಾಕಳ ಬೂದಿಯನ್ನು ಕೂಡಿಸಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರಬೇಕು. ಇದು ಇಸ್ರಾಯೇಲರಿಗೂ ಮತ್ತು ಅವರಲ್ಲಿರುವ ಪ್ರವಾಸಿಗರಿಗೂ ಶಾಶ್ವತ ನಿಯಮವಾಗಿದೆ.

[11] “ಮನುಷ್ಯನ ಶವ ಸೋಂಕಿದವನು ಏಳು ದಿನಗಳವರೆಗೆ ಅಶುದ್ಧನಾಗಿರಬೇಕು.

[12] ಮೂರನೆಯ ದಿನದಲ್ಲಿ ಆ ಬೂದಿಯಿಂದ ದೋಷಪರಿಹಾರ ಮಾಡಿಕೊಂಡು ಏಳನೆಯ ದಿನದಲ್ಲಿ ಶುದ್ಧನಾಗುವನು. ಮೂರನೆಯ ದಿನದಲ್ಲಿ ಅವನು ದೋಷಪರಿಹಾರ ಮಾಡಿಕೊಳ್ಳದೆ ಹೋದರೆ ಏಳನೆಯ ದಿನದಲ್ಲಿಯೂ ಶುದ್ಧನಾಗುವುದಿಲ್ಲ.

[13] ಮನುಷ್ಯನ ಶವ ಸೋಂಕಿದವನು ದೋಷಪರಿಹಾರವನ್ನು ಮಾಡಿಕೊಳ್ಳದೆಹೋದರೆ ಅವನು ಯೆಹೋವನ ಗುಡಾರವನ್ನು ಅಪವಿತ್ರಪಡಿಸುವನು. ಅಂಥವನನ್ನು ಇಸ್ರಾಯೇಲರಿಂದ ತೆಗೆದುಹಾಕಬೇಕು. ಶುದ್ಧೀಕರಣದ ನೀರನ್ನು ತನ್ನ ಮೇಲೆ ಚಿಮಿಕಿಸಿಕೊಳ್ಳದೆ ಇರುವುದರಿಂದ ಅವನು ಅಶುದ್ಧನು. ಅವನ ಅಶುದ್ಧತ್ವವು ಇನ್ನೂ ಅವನ ಮೇಲೆ ಇರುವುದು.

[14] “ಯಾರಾದರೂ ಡೇರೆಯಲ್ಲಿ ಸತ್ತರೆ ಅವನ ವಿಷಯವಾದ ನಿಯಮವೇನೆಂದರೆ: ಆ ಡೇರೆಯಲ್ಲಿರುವವರೆಲ್ಲರೂ ಮತ್ತು ಅದರೊಳಗೆ ಪ್ರವೇಶಿಸುವವರು ಏಳು ದಿನಗಳವರೆಗೆ ಅಶುದ್ಧರಾಗಿರಬೇಕು.

[15] ಮುಚ್ಚಳ ಹಾಕದೆ ತೆರೆದಿರುವ ಎಲ್ಲಾ ಪಾತ್ರೆಗಳು ಅಶುದ್ಧವಾಗಿರುವವು.

[16] ಬಯಲಿನಲ್ಲಿರುವ ಯಾವನಾದರೂ ಕತ್ತಿಯಿಂದ ಕೊಲ್ಲಲ್ಪಟ್ಟವನಾದರೂ, ಯಾವನಿಗಾದರೂ ಮನುಷ್ಯನ ಶವವಾಗಲಿ, ಮನುಷ್ಯನ ಎಲುಬಾಗಲಿ, ಸಮಾಧಿಯಾಗಲಿ ಸೋಂಕಿದರೆ ಅವನು ಏಳು ದಿನಗಳವರೆಗೆ ಅಶುದ್ಧನಾಗಿರಬೇಕು.

[17] “ಅಶುದ್ಧನಾದವನನ್ನು ಶುದ್ಧಪಡಿಸಬೇಕಾದರೆ ಆ ದೋಷಪರಿಹಾರಕವಾದ ಬೂದಿಯಲ್ಲಿ ಸ್ವಲ್ಪವನ್ನು ಪಾತ್ರೆಯಲ್ಲಿ ಇಟ್ಟು, ಅದರ ಮೇಲೆ ಶುದ್ಧವಾದ ನೀರನ್ನು ಹಾಕಬೇಕು.

[18] ಆಗ ಶುದ್ಧನಾದವನೊಬ್ಬನು ಆ ನೀರನ್ನು ಹಿಸ್ಸೋಪ್ ಗಿಡದ ಬರಲಿಂದ ಮನುಷ್ಯನು ಸತ್ತ ಆ ಡೇರೆಯ ಮೇಲೆಯೂ, ಅದರಲ್ಲಿದ್ದ ಸಾಮಾನುಗಳ ಮತ್ತು ಮನುಷ್ಯರ ಮೇಲೆಯೂ ಚಿಮಿಕಿಸಬೇಕು. ಹಾಗೆಯೇ ಎಲುಬಾಗಲಿ, ಹತವಾದವನ ಅಥವಾ ಬೇರೆ ಮನುಷ್ಯನ ಶವವಾಗಲಿ, ಸಮಾಧಿಯಾಗಲಿ ಯಾವನಿಗೆ ಸೋಂಕುವುದೋ ಅವನ ಮೇಲೆಯೂ ನೀರನ್ನು ಚಿಮಿಕಿಸಬೇಕು.

[19] ಶುದ್ಧನಾದವನು ಮೂರನೆಯ ದಿನದಲ್ಲಿಯೂ, ಏಳನೆಯ ದಿನದಲ್ಲಿಯೂ ಅಶುದ್ಧನಾದವನ ಮೇಲೆ ಅದನ್ನು ಚಿಮಿಕಿಸಬೇಕು. ಅಶುದ್ಧನಾದವನು ಏಳನೆಯ ದಿನದಲ್ಲಿ ದೋಷಪರಿಹಾರ ಹೊಂದಿದವನಾಗಿ ತನ್ನ ಬಟ್ಟೆಗಳನ್ನು ಒಗೆದುಕೊಂಡು, ಸ್ನಾನಮಾಡಿ ಸಾಯಂಕಾಲದಲ್ಲಿ ಶುದ್ಧನಾಗುವನು.

[20] ಅಶುದ್ಧನಾಗಿ ದೋಷಪರಿಹಾರ ಮಾಡಿಕೊಳ್ಳದವನು ಯೆಹೋವನ ಆಲಯವನ್ನು ಅಪವಿತ್ರಪಡಿಸಿದ ಕಾರಣ ಸಭೆಯಿಂದ ತೆಗೆಯಲ್ಪಡಬೇಕು. ಶುದ್ಧೀಕರಣದ ನೀರನ್ನು ತನ್ನ ಮೇಲೆ ಚಿಮಿಕಿಸಿಕೊಳ್ಳದೆ ಹೋದುದರಿಂದ ಅವನು ಅಶುದ್ಧನಾಗುವನು.

[21] “ಇದು ಇಸ್ರಾಯೇಲರಿಗೆ ಶಾಶ್ವತ ನಿಯಮವಾಗಿರುವುದು. ಶುದ್ಧೀಕರಣದ ಆ ನೀರನ್ನು ಚಿಮಿಕಿಸಿದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು ಮತ್ತು ಆ ನೀರು ಯಾರಿಗೆ ಸೋಂಕುವುದೋ ಅವನು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರಬೇಕು.

[22] ಅಶುದ್ಧನಿಗೆ ಸೋಂಕಿದ ವಸ್ತು ಯಾವುದೇ ಆಗಲಿ ಅಶುದ್ಧವೆಂದು ನೀವು ತಿಳಿದುಕೊಳ್ಳಬೇಕು. ಅದು ಯಾರಿಗೆ ಸೋಂಕುವುದೋ ಅವನೂ ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರಬೇಕು.”

ಅರಣ್ಯಕಾಂಡ — Chapters