[1] ಯೆಹೋವನು ಮೋಶೆಯ ಸಂಗಡ ಮಾತನಾಡಿ,
[2] “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ಯಾವನಾದರೂ ಮನುಷ್ಯರ ಪ್ರಾಣಗಳನ್ನು ಯೆಹೋವನಿಗೆ ಹರಕೆಮಾಡಿ ಪ್ರತಿಷ್ಠಿಸಿದರೆ, ಅವುಗಳನ್ನು ಬಿಡಿಸುವುದಕ್ಕೆ ದೇವರ ಸೇವೆಗೆ ನೇಮಕವಾದ ಶೆಕೆಲ್ ಮೇರೆಗೆ ನೀವು ಅವನಿಂದ ಕೊಡಿಸಬೇಕಾದ ಈಡು ಹೀಗಿರಬೇಕು.
[3] ಇಪ್ಪತ್ತು ವರ್ಷದಿಂದ ಅರುವತ್ತು ವರ್ಷದ ವರೆಗಿನ ವಯಸ್ಸುಳ್ಳ ಪುರುಷನಿಗೋಸ್ಕರ, ದೇವಾಲಯದ ಶೆಕೆಲ್ ಗೆ ಸರಿಯಾಗಿ ಐವತ್ತು ಶೆಕೆಲ್ ಬೆಳ್ಳಿಯನ್ನು ಸಮರ್ಪಿಸಬೇಕು.
[4] ಅದೇ ವಯಸ್ಸಿನ ಸ್ತ್ರೀಗೋಸ್ಕರ ಮೂವತ್ತು ಶೆಕೆಲ್ ಬೆಳ್ಳಿಯನ್ನು ಕೊಡಬೇಕು.
[5] ಐದು ವರ್ಷದ ವಯಸ್ಸಿನಿಂದ ಇಪ್ಪತ್ತು ವರ್ಷದ ವಯಸ್ಸಿನ ವರೆಗೆ ಪುರುಷನಿಗೋಸ್ಕರ ಇಪ್ಪತ್ತು ಶೆಕೆಲ್ ಬೆಳ್ಳಿಯನ್ನು ಮತ್ತು ಸ್ತ್ರೀಗೋಸ್ಕರ ಹತ್ತು ಶೆಕೆಲ್ ಬೆಳ್ಳಿಯನ್ನು ಕೊಡಬೇಕು.
[6] ಒಂದು ತಿಂಗಳಿನ ವಯಸ್ಸು ಮೊದಲುಗೊಂಡು ಐದು ವರ್ಷದ ವಯಸ್ಸಿನ ಹುಡುಗನಿಗೋಸ್ಕರ ಐದು ಶೆಕೆಲ್ ಬೆಳ್ಳಿಯನ್ನು, ಹುಡುಗಿಗೋಸ್ಕರ ಮೂರು ಶೆಕೆಲ್ ಬೆಳ್ಳಿಯನ್ನು ಕೊಡಬೇಕು.
[7] ಅರವತ್ತು ವರ್ಷಗಳ ಪ್ರಾಯವನ್ನು ದಾಟಿದ ಪುರುಷನಿಗೋಸ್ಕರ ಹದಿನೈದು ಶೆಕೆಲ್ ಬೆಳ್ಳಿಯನ್ನು ಮತ್ತು ಸ್ತ್ರೀಗೋಸ್ಕರ ಹತ್ತು ಶೆಕೆಲ್ ಬೆಳ್ಳಿಯನ್ನು ಕೊಡಬೇಕು.
[8] ಯಾವನಾದರೂ ಬಡವನಾಗಿ ನೇಮಕವಾದ ಹಣವನ್ನು ಕೊಡಲಾರದೆ ಹೋದರೆ, ಅವನು ಹರಕೆಮಾಡಿ ಪ್ರತಿಷ್ಠಿಸಿದ ಮನುಷ್ಯನನ್ನು ಯಾಜಕನ ಮುಂದೆ ನಿಲ್ಲಿಸಬೇಕು. ಯಾಜಕನು ಹರಕೆಮಾಡಿದವನ ಸ್ಥಿತಿಗತಿಗೆ ತಕ್ಕಂತೆ ಅವನು ಕೊಡಬೇಕಾದ ಹಣ ಇಷ್ಟೆಂದು ನಿರ್ಣಯಿಸಬೇಕು.
[9] “‘ಯೆಹೋವನಿಗೆ ಸಮರ್ಪಿಸಬಹುದಾದ ಪಶುವನ್ನು ಯಾವನಾದರೂ ಹರಕೆಮಾಡಿ ಪ್ರತಿಷ್ಠಿಸಿದ್ದಾದರೆ ಅದು ದೇವರ ಸೊತ್ತಾಗಿರಬೇಕು.
[10] ಅದನ್ನು ಬದಲಾಯಿಸಬಾರದು, ಕೆಟ್ಟದ್ದಕ್ಕೆ ಬದಲಾಗಿ ಒಳ್ಳೆಯದನ್ನೂ ಇಲ್ಲವೇ ಒಳ್ಳೆಯದಕ್ಕೆ ಬದಲಾಗಿ ಕೆಟ್ಟದ್ದನ್ನೂ, ಒಂದಕ್ಕೆ ಬದಲಾಗಿ ಬೇರೊಂದನ್ನೂ ಕೊಡಬಾರದು. ಅವನು ಗೊತ್ತುಮಾಡಿದ ಪಶುವಿಗೆ ಬದಲಾಗಿ ಬೇರೊಂದು ಪಶುವನ್ನು ಪ್ರತ್ಯೇಕಿಸಿಟ್ಟಿರುವ ಪಕ್ಷಕ್ಕೆ, ಮೊದಲನೆಯ ಪಶುವೂ ಹಾಗೂ ಅದಕ್ಕೆ ಬದಲಾಗಿ ಇಟ್ಟ ಪಶುವೂ ಎರಡೂ ಯೆಹೋವನದಾಗಿರಬೇಕು.
[11] ಯೆಹೋವನಿಗೆ ಸಮರ್ಪಿಸಬೇಕಾದ ಪಶುವು ಅಶುದ್ಧವಾಗಿದ್ದರೆ, ಅದನ್ನು ಯಾಜಕನ ಮುಂದೆ ನಿಲ್ಲಿಸಬೇಕು.
[12] ಅದು ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ಯಾಜಕನು ನೋಡಿಕೊಂಡು ಅದರ ಬೆಲೆ ಇಷ್ಟೆಂದು ನಿರ್ಣಯಿಸಬೇಕು; ಯಾಜಕನು ನಿರ್ಣಯಿಸಿದ ಬೆಲೆಯೇ ಅಂತಿಮವಾದದ್ದು ಸ್ಥಿರವಾಗಿರುವುದು.
[13] ಹರಕೆಮಾಡಿದವನು ಅದನ್ನು ಬಿಡಿಸಿಕೊಳ್ಳಬೇಕೆಂದಿದ್ದರೆ ಅದರ ಕ್ರಯದೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು.
[14] “‘ಯಾವನಾದರೂ ತನ್ನ ಮನೆಯನ್ನು ಯೆಹೋವನಿಗೆ ಮೀಸಲಾಗಿ ಪ್ರತಿಷ್ಠಿಸಿದರೆ, ಯಾಜಕನು ಅದು ಉತ್ತಮವಾದ ಮನೆಯೋ ಅಲ್ಲವೋ ಎಂದು ಪರೀಕ್ಷಿಸಿ ಬೆಲೆಯನ್ನು ನಿರ್ಣಯಿಸಬೇಕು; ಯಾಜಕನು ನಿರ್ಣಯಿಸಿದ ಬೆಲೆ ಅಂತಿಮವಾಗಿರುವುದು.
[15] ಹರಕೆಮಾಡಿದವನು ಪ್ರತಿಷ್ಠೆ ಮಾಡಿದ ಆ ಮನೆಯನ್ನು ಬಿಡಿಸಿಕೊಳ್ಳಬೇಕೆಂದಿದ್ದರೆ ಅದರ ಕ್ರಯದೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು; ಆಗ ಆ ಮನೆ ಅವನದಾಗುವುದು.
[16] “‘ಯಾವನಾದರೂ ಪಿತ್ರಾರ್ಜಿತ ಭೂಮಿಯಲ್ಲಿ ಒಂದು ಭಾಗವನ್ನು ಯೆಹೋವನಿಗೆ ಹರಕೆಮಾಡಿ ಪ್ರತಿಷ್ಠಿಸಿದರೆ, ಅದರಲ್ಲಿ ಇಷ್ಟು ಬೀಜವನ್ನು ಬಿತ್ತತಕ್ಕದ್ದು ಎಂದು ಆಲೋಚಿಸಿ ಅದರ ಬೆಲೆಯನ್ನು ನಿರ್ಣಯಿಸಬೇಕು. ಒಂದು ಓಮೆರ್ ಜವೆಗೋದಿಯನ್ನು ಬಿತ್ತಬಹುದಾದ ಹೊಲವು ಐವತ್ತು ಶೆಕೆಲ್ ಬೆಳ್ಳಿಯ ಬೆಲೆ ಬಾಳುವುದು.
[17] ಅವನು ಜೂಬಿಲಿ ಸಂವತ್ಸರದಿಂದ ಆ ಹೊಲವನ್ನು ಪ್ರತಿಷ್ಠಿಸಿದರೆ ಈ ಕ್ರಯ ಸ್ಥಿರವಾಗಿರುವುದು.
[18] ಜೂಬಿಲಿ ಸಂವತ್ಸರದ ತರುವಾಯ ಪ್ರತಿಷ್ಠೆ ಮಾಡಿದ ಭೂಮಿಯನ್ನು ಹರಕೆಮಾಡಿದರೆ, ಮುಂದಣ ಜೂಬಿಲಿ ಸಂವತ್ಸರಕ್ಕೆ ಕಳೆಯಬೇಕಾದ ವರ್ಷಗಳ ಸಂಖ್ಯೆಯ ಮೇರೆಗೆ ಅದರ ಬೆಲೆಯನ್ನು ಕಡಿಮೆಮಾಡಬೇಕು.
[19] ಹರಕೆಮಾಡಿದವನು ಅದನ್ನು ಬಿಡಿಸಿಕೊಳ್ಳಬೇಕೆಂದಿರುವ ಪಕ್ಷಕ್ಕೆ ಅದರ ಕ್ರಯದೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು; ಆಗ ಆ ಹೊಲ ಅವನದಾಗಿರುವುದು.
[20] ತಾನು ಅದನ್ನು ಬಿಡಿಸಿಕೊಳ್ಳದೆ ಮತ್ತೊಬ್ಬನಿಗೆ ಮಾರಿದರೆ ಮುಂದೆ ಅದನ್ನು ಬಿಡಿಸಿಕೊಳ್ಳುವ ಅಧಿಕಾರವಿರುವುದಿಲ್ಲ.
[21] ಬಿಡುಗಡೆಯಾಗುವ ಜೂಬಿಲಿ ಸಂವತ್ಸರದಲ್ಲಿ ಆ ಹೊಲವು ಯೆಹೋವನಿಗೆ ಪವಿತ್ರವಾದ ಹೊಲದಂತೆ ಆತನ ಸೊತ್ತಾಗಿಯೇ ಇರಬೇಕು; ಅದು ಯಾಜಕರ ವಶದಲ್ಲಿರಬೇಕು.
[22] “‘ಯಾವನಾದರೂ ಕ್ರಯಕ್ಕೆ ತೆಗೆದುಕೊಂಡ ಹೊಲವನ್ನು ಅಂದರೆ ಪಿತ್ರಾರ್ಜಿತ ಭೂಮಿಗೆ ಸೇರದಿರುವ ಹೊಲವನ್ನು ಯೆಹೋವನಿಗೆ ಹರಕೆಮಾಡಿ ಪ್ರತಿಷ್ಠಿಸಿದರೆ,
[23] ಯಾಜಕನು ಮುಂದಣ ಜೂಬಿಲಿ ಸಂವತ್ಸರದ ತನಕ ಇರುವ ವರ್ಷಗಳಿಗೆ ತಕ್ಕಂತೆ ಅದರ ಬೆಲೆಯನ್ನು ನಿರ್ಣಯಿಸಬೇಕು. ಪ್ರತಿಷ್ಠಿಸಿದವನು ನಿರ್ಣಯಿಸಲ್ಪಟ್ಟ ಹಣವನ್ನು ಯೆಹೋವನಿಗೆ ಮೀಸಲಾದದ್ದೆಂದು ಭಾವಿಸಿ ಅದೇ ದಿನದಲ್ಲಿ ಕೊಟ್ಟುಬಿಡಬೇಕು.
[24] ಜೂಬಿಲಿ ಸಂವತ್ಸರದಲ್ಲಿ ಆ ಹೊಲವು ಮಾರಿದವನಿಗೆ ಅಂದರೆ ಯಾರ ಪಿತ್ರಾರ್ಜಿತ ಭೂಮಿಗೆ ಸೇರಿದೆಯೋ ಅವನಿಗೆ ಪುನಃ ಬರಬೇಕು.
[25] ದೇವರ ಸೇವೆಯಲ್ಲಿ ನೇಮಕವಾದ ಎಲ್ಲಾ ತೂಕವು ದೇವಾಲಯದ ಶೆಕೆಲ್ ಮೇರೆಗೆ ಇರಬೇಕು. ಇಪ್ಪತ್ತು ಗೇರಾ ತೂಕವು ಒಂದು ಶೆಕೆಲಿಗೆ ಸಮವಾಗಿರಬೇಕೆಂದು ಯಾವಾಗಲೂ ನಿರ್ಣಯಿಸಬೇಕು.
[26] “‘ಶುದ್ಧ ಪಶುವಿನಲ್ಲಿ ಚೊಚ್ಚಲಾಗಿ ಹುಟ್ಟಿದ್ದು ಯೆಹೋವನದಾಗಿರುವುದರಿಂದ ಅದನ್ನು ಯಾರೂ ಹರಕೆಯಾಗಿ ಕೊಡಬಾರದು; ಹೋರಿಯಾಗಿದ್ದರೂ, ಆಡು ಅಥವಾ ಕುರಿಯಾಗಿದ್ದರೂ ಅದು ಯೆಹೋವನ ಸೊತ್ತೇ.
[27] ಅಶುದ್ಧ ಪಶುವಿನಲ್ಲಿ ಚೊಚ್ಚಲಮರಿ ಹುಟ್ಟಿದ್ದಾದರೆ ಹರಕೆಮಾಡಿದವನು ನಿರ್ಣಯವಾದ ಬೆಲೆಯೊಂದಿಗೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಟ್ಟು ಅದನ್ನು ಬಿಡಿಸಿಕೊಳ್ಳಬಹುದು. ಅವನು ಬಿಡಿಸದೆ ಹೋದರೆ ಅದನ್ನು ನಿರ್ಣಯಿಸಲ್ಪಟ್ಟ ಕ್ರಯಕ್ಕೆ ಮಾರಬೇಕು.
[28] “‘ಯಾವನಾದರೂ ಮನುಷ್ಯನನ್ನಾಗಲಿ, ಪಶುಪ್ರಾಣಿಯನ್ನಾಗಲಿ, ಪಿತ್ರಾರ್ಜಿತ ಭೂಮಿಯನ್ನಾಗಲಿ ಅಥವಾ ಬೇರೆ ಯಾವುದನ್ನಾಗಲಿ ಯಾವ ಷರತ್ತೂ ಇಲ್ಲದೆ ಸಂಪೂರ್ಣವಾಗಿ ಯೆಹೋವನದಾಗಿರುವುದಕ್ಕೆ ಹರಕೆಮಾಡಿ ಕೊಟ್ಟರೆ, ಅದನ್ನು ಮಾರಲೂ ಬಾರದು, ಬಿಡಿಸಿಕೊಳ್ಳಲೂ ಬಾರದು. ಕೇವಲ ಯೆಹೋವನದಾಗಿರುವುದಕ್ಕೆ ಸಮರ್ಪಿಸುವಂಥದೆಲ್ಲಾ ಯೆಹೋವನಿಗೆ ಮೀಸಲಾಗಿಯೇ ಇರಬೇಕು.
[29] ಕೇವಲ ಯೆಹೋವನ ಸೊತ್ತಾಗುವುದಕ್ಕೆ ಒಪ್ಪಿಸಲ್ಪಟ್ಟದ್ದು ಮನುಷ್ಯ ಜಾತಿಯಾದರೆ ಬಿಡಿಸುವುದಕ್ಕಾಗದು; ಅವನಿಗೆ ಮರಣವೇ ಆಗಬೇಕು.
[30] “‘ಹೊಲದ ಬೆಳೆಯಾಗಲಿ ಇಲ್ಲವೇ ತೋಟದ ಹಣ್ಣುಗಳಾಗಲಿ ಭೂಮಿಯಿಂದುಂಟಾದ ಎಲ್ಲಾ ಆದಾಯದಲ್ಲಿ ಹತ್ತನೆಯ ಒಂದು ಪಾಲು ಯೆಹೋವನದಾಗಿರಬೇಕು, ಅದು ಯೆಹೋವನಿಗೆ ಮೀಸಲಾದದ್ದು.
[31] ಯಾವನಾದರೂ ತಾನು ಕೊಡಬೇಕಾದ ಹತ್ತನೆಯ ಒಂದು ಪಾಲಿನಲ್ಲಿ ಏನಾದರೂ ಬಿಡಿಸಿಕೊಳ್ಳಬೇಕೆಂದಿದ್ದರೆ ಅಷ್ಟರೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು.
[32] ದನಗಳಾಗಲಿ ಇಲ್ಲವೇ ಹಿಂಡಿನ ಆಡು ಅಥವಾ ಕುರಿಗಳಾಗಲಿ ಕುರುಬನು ಲೆಕ್ಕಮಾಡಿದ ಎಲ್ಲಾ ಪಶುಗಳಲ್ಲಿ ಪ್ರತಿ ಹತ್ತನೆಯದು ಯೆಹೋವನಿಗೆ ಮೀಸಲಾಗಿರಬೇಕು.
[33] ಆ ಪಶುವು ಒಳ್ಳೇದೋ ಅಥವಾ ಕೆಟ್ಟದ್ದೋ ಎಂದು ನೋಡಬಾರದು; ಅದನ್ನು ಬದಲಾಯಿಸಬಾರದು. ಕೊಡಬೇಕಾದವನು ಅದನ್ನು ಬದಲಾಯಿಸಿದ್ದಾದರೆ ಅವನು ಮೊದಲು ಲೆಕ್ಕಿಸಿದ್ದೂ ಮತ್ತು ಅದಕ್ಕೆ ಬದಲಾಗಿ ಇಟ್ಟದ್ದೂ ಎರಡೂ ಯೆಹೋವನದಾಗಿರಬೇಕು; ಅದನ್ನು ಬಿಡಿಸಿಕೊಳ್ಳುವ ಅಧಿಕಾರವಿರುವುದಿಲ್ಲ’” ಎಂದು ಹೇಳಿದನು.
[34] ಯೆಹೋವನು ಸೀನಾಯಿ ಬೆಟ್ಟದಲ್ಲಿ ಮೋಶೆಯ ಮೂಲಕ ಇಸ್ರಾಯೇಲರಿಗೆ ಕೊಟ್ಟ ಆಜ್ಞೆಗಳು ಇವೇ.