[1] ಇಸ್ರಾಯೇಲರು ಶಿಟ್ಟೀಮಿನಲ್ಲಿ ವಾಸವಾಗಿದ್ದಾಗ ಅವರು ಮೋವಾಬ್ ಸ್ತ್ರೀಯರೊಡನೆ ಸಹವಾಸ ಮಾಡುವವರಾದರು.
[2] ಆ ಸ್ತ್ರೀಯರು ತಮ್ಮ ದೇವತೆಗಳಿಗೆ ಮಾಡಿದ ಔತಣದ ಯಜ್ಞಗಳಿಗೆ ಇಸ್ರಾಯೇಲರನ್ನು ಆಹ್ವಾನಿಸಿದರು. ಇವರು ಆ ಭೋಜನವನ್ನು ಮಾಡಿ ಅವರ ದೇವತೆಗಳಿಗೆ ನಮಸ್ಕರಿಸುವವರಾದರು.
[3] ಹೀಗೆ ಇಸ್ರಾಯೇಲರು ಪೆಗೋರದ ಬಾಳನ ಭಕ್ತರಾದರು. ಯೆಹೋವನ ಕೋಪವು ಅವರ ಮೇಲೆ ಹೆಚ್ಚಾಯಿತು.
[4] ಆದುದರಿಂದ ಯೆಹೋವನು ಮೋಶೆಗೆ, “ನೀನು ಜನರ ಮುಖಂಡರೆಲ್ಲರನ್ನೂ ಹಿಡಿಸಿ ಅವರನ್ನು ಯೆಹೋವನಿಗೋಸ್ಕರ ಬಹಿರಂಗವಾಗಿ ಕೊಲ್ಲಿಸಬೇಕು. ಹೀಗೆ ಯೆಹೋವನ ಕೋಪಾಗ್ನಿಯನ್ನು ಇಸ್ರಾಯೇಲರಿಂದ ತೊಲಗಿಸಬೇಕು” ಎಂದು ಹೇಳಿದನು.
[5] ಆದಕಾರಣ ಮೋಶೆ ಇಸ್ರಾಯೇಲರ ಮುಖಂಡರಿಗೆ, “ಪೆಗೋರದ ಬಾಳ್ ನನ್ನು ಪೂಜಿಸುವ ಜನರು ನಿಮ್ಮ ವಶದಲ್ಲಿದ್ದರೆ ಅಂಥವನಿಗೆ ಮರಣ ಶಿಕ್ಷೆಯನ್ನು ವಿಧಿಸಬೇಕು” ಎಂದು ಆಜ್ಞಾಪಿಸಿದನು.
[6] ಇಸ್ರಾಯೇಲರಲ್ಲಿ ಒಬ್ಬನು ಮೋಶೆ ಮತ್ತು ಇಸ್ರಾಯೇಲರ ಸರ್ವಸಮೂಹದವರ ಎದುರಿನಲ್ಲಿಯೇ ತನ್ನ ಸಹೋದರರೊಳಗೆ ಒಬ್ಬ ಮಿದ್ಯಾನ್ ಸ್ತ್ರೀಯನ್ನು ತನ್ನ ಮನೆಯೊಳಗೆ ಕರೆದುಕೊಂಡು ಬಂದನು.
[7] ಕೂಡಲೆ ಮಹಾಯಾಜಕನಾದ ಆರೋನನ ಮೊಮ್ಮಗನೂ, ಎಲ್ಲಾಜಾರನ ಮಗನಾದ ಫೀನೆಹಾಸನು ಸಭೆಯ ಮಧ್ಯದಲ್ಲಿ ಎದ್ದು ಈಟಿಯನ್ನು ಕೈಯಲ್ಲಿ ಹಿಡಿದುಕೊಂಡನು.
[8] ಅವನು ಇಸ್ರಾಯೇಲನ ಹಿಂದೆ ಹೋಗಿ ಅವನು ಮಲಗುವ ಕೋಣೆಯನ್ನು ಪ್ರವೇಶಿಸಿ ಅವರಿಬ್ಬರನ್ನೂ ಅಂದರೆ ಆ ಇಸ್ರಾಯೇಲನನ್ನೂ ಮತ್ತು ಆ ಸ್ತ್ರೀಯನ್ನೂ ಒಂದೇ ಬಾರಿಗೆ ಹೊಟ್ಟೆಯನ್ನು ತಿವಿದು ಕೊಂದುಹಾಕಿದನು. ಆಗ ಇಸ್ರಾಯೇಲರಿಗೆ ಉಂಟಾಗಿದ್ದ ವ್ಯಾಧಿಯು ನಿಂತು ಹೋಯಿತು.
[9] ಈಗಾಗಲೇ ಆ ವ್ಯಾಧಿಯಿಂದ ಇಪ್ಪತ್ತನಾಲ್ಕು ಸಾವಿರ ಮಂದಿ ಮರಣ ಹೊಂದಿದರು.
[10] ಆಗ ಯೆಹೋವನು ಮೋಶೆಯ ಸಂಗಡ ಮಾತನಾಡಿ,
[11] “ನಾನು ನನ್ನ ಗೌರವವನ್ನು ಕಾಪಾಡಿಕೊಳ್ಳುವ ಪ್ರಕಾರ ಮಹಾಯಾಜಕನಾದ ಆರೋನನ ಮೊಮ್ಮಗನೂ, ಎಲ್ಲಾಜಾರನ ಮಗನಾದ ಫೀನೆಹಾಸನು ನನ್ನ ಗೌರವವನ್ನು ಕಾಪಾಡಿದ್ದರಿಂದ ಇಸ್ರಾಯೇಲರ ಮೇಲಿದ್ದ ನನ್ನ ಕೋಪವನ್ನು ತೊಲಗಿಸಿದ್ದಾನೆ. ಹೀಗಿರುವುದರಿಂದ ನಾನು ನನ್ನ ಗೌರವವನ್ನು ಕಾಪಾಡಿಕೊಳ್ಳುವುದಕ್ಕಾಗಿ ಇಸ್ರಾಯೇಲರನ್ನು ನಿರ್ಮೂಲಮಾಡಬೇಕಾದ ಅಗತ್ಯವಿಲ್ಲ.
[12] ಆದಕಾರಣ ನಾನು ಅವನ ಸಂಗಡ ಸ್ನೇಹದ ಒಡಂಬಡಿಕೆ ಮಾಡಿಕೊಳ್ಳುತ್ತೇನೆ ಎಂದು ಎಲ್ಲರಿಗೂ ತಿಳಿಸು.
[13] ಅವನಿಗೂ, ಅವನ ತರುವಾಯ ಅವನ ಸಂತತಿಯವರಿಗೂ ಯಾಜಕತ್ವವು ಶಾಶ್ವತವಾಗಿಯೇ ಇರುವುದೆಂದು ಒಡಂಬಡಿಕೆ ಮಾಡುತ್ತೇನೆ. ಅವನು ತನ್ನ ದೇವರ ಗೌರವವನ್ನು ಹೆಚ್ಚಿಸಿ ಇಸ್ರಾಯೇಲರಿಗೋಸ್ಕರ ದೋಷಪರಿಹಾರವನ್ನು ಮಾಡಿದುದರಿಂದ ನಾನು ಅವನಿಗೆ ಈ ಮಾತನ್ನು ಕೊಟ್ಟಿದ್ದೇನೆ” ಎಂದು ಹೇಳಿದನು.
[14] ಆ ಮಿದ್ಯಾನ್ ಸ್ತ್ರೀಯೊಡನೆ ಹತವಾದವನ ಆ ಇಸ್ರಾಯೇಲಿನವನ ಹೆಸರು ಜಿಮ್ರಿ, ಅವನು ಸಿಮೆಯೋನ್ಯ ಕುಲದವರಲ್ಲಿ ಗೋತ್ರ ಪ್ರಧಾನನಾದ ಸಾಲೂ ಎಂಬುವನ ಮಗನು.
[15] ಹತವಾದ ಆ ಮಿದ್ಯಾನ್ ಸ್ತ್ರೀಯ ಹೆಸರು ಕೊಜ್ಬೀ, ಅವಳು ಮಿದ್ಯಾನ್ಯರಲ್ಲಿ ಗೋತ್ರ ಪ್ರಧಾನನಾದ ಚೂರ್ ಎಂಬುವನ ಮಗಳು.
[16] ತರುವಾಯ ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನೆಂದರೆ,
[17] “ನೀನು ಮಿದ್ಯಾನ್ಯರನ್ನು ವೈರಿಯೆಂದು ತಿಳಿದು ಸಂಹರಿಸಬೇಕು.
[18] ಅವರು ಪೆಗೋರದ ವಿಷಯದಲ್ಲಿಯೂ, ಮಿದ್ಯಾನ್ಯರ ಅಧಿಪತಿಯ ಮಗಳಾದ ಕೊಜ್ಬೀ ಎಂಬ ಸ್ತ್ರೀಯ ವಿಷಯದಲ್ಲಿಯೂ ನಿಮ್ಮನ್ನು ಮೋಸಗೊಳಿಸಿ ಹಿಂಸಿಸಿದ್ದಾರೆ. ಆ ಸ್ತ್ರೀಯು ಪೆಗೋರದ ಘಟನೆಗಳ ನಿಮಿತ್ತ ಘೋರ ವ್ಯಾಧಿ ಉಂಟಾದಾಗ ಹತಳಾದವಳು.”