Skip to content
Opens in a new window
Listen to this chapter • 7:11

[1] ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,

[2] “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ನಾನು ನಿಮ್ಮ ವಾಸಕ್ಕಾಗಿ ಕೊಡುವ ದೇಶಕ್ಕೆ ನೀವು ಸೇರಿದ ನಂತರ,

[3] ಯೆಹೋವನಿಗೆ ಪರಿಮಳವನ್ನು ಉಂಟುಮಾಡುವುದಕ್ಕಾಗಿ ಪಶುಗಳಿಂದಾಗಲಿ, ಆಡುಕುರಿ ಹಿಂಡುಗಳಿಂದಾಗಲಿ ಒಂದು ಪಶುವನ್ನು ಹೋಮಮಾಡುವವನು, ಸರ್ವಾಂಗಹೋಮ ಮಾಡುವುದಕ್ಕೂ, ಹರಕೆಸಲ್ಲಿಸುವುದಕ್ಕೂ, ಕೃತಜ್ಞತೆಯನ್ನು ತೋರಿಸುವುದಕ್ಕೂ, ಹಬ್ಬವನ್ನು ಆಚರಿಸುವುದಕ್ಕೂ ಸಮಾಧಾನಯಜ್ಞಮಾಡಿದರೆ,

[4] ಅದರೊಂದಿಗೆ ಯೆಹೋವನಿಗೆ ಕಾಣಿಕೆಯಾಗಿ ಧಾನ್ಯನೈವೇದ್ಯ ಸಮರ್ಪಿಸುವಾಗ ಒಂದುವರೆ ಸೇರು ಎಣ್ಣೆ ಬೆರಸಿದ ಮೂರು ಸೇರು ಗೋದಿಯ ಹಿಟ್ಟನ್ನೂ ಸೇರಿಸಬೇಕು.

[5] ಪಾನದ್ರವ್ಯಕ್ಕಾಗಿ ಒಂದುವರೆ ಸೇರು ದ್ರಾಕ್ಷಾರಸವನ್ನೂ ತರಬೇಕು. ನೀವು ಸರ್ವಾಂಗಹೋಮ ಅಥವಾ ಸಮಾಧಾನಯಜ್ಞವಾಗಿ ಕಾಣಿಕೆಯಾಗಿ ಒಂದೊಂದು ಕುರಿಯೊಂದಿಗೂ ದಹನ ಬಲಿಯನ್ನು ಸಮರ್ಪಿಸಬೇಕು.

[6] “‘ಇದಲ್ಲದೆ ಟಗರಿನೊಂದಿಗೆ ಯೆಹೋವನಿಗೆ ಪರಿಮಳವನ್ನು ಉಂಟುಮಾಡುವುದಕ್ಕೆ, ಧಾನ್ಯನೈವೇದ್ಯಕ್ಕಾಗಿ ಎರಡು ಸೇರು ಎಣ್ಣೆ ಬೆರಸಿದ ಆರು ಸೇರು ಗೋದಿಯ ಹಿಟ್ಟನ್ನೂ,

[7] ಪಾನದ್ರವ್ಯವಾಗಿ ಯೆಹೋವನಿಗೆ ಸುವಾಸನೆಯಾಗಿ ಎರಡು ಸೇರು ದ್ರಾಕ್ಷಾರಸವನ್ನೂ ತಂದು ಸಮರ್ಪಿಸಬೇಕು.

[8] “‘ನೀನು ಸರ್ವಾಂಗಹೋಮ, ಹರಕೆಸಲ್ಲಿಸುವ ಯಜ್ಞ, ಬೇರೆ ವಿಧವಾದ ಸಮಾಧಾನಯಜ್ಞ ಇವುಗಳಿಗಾಗಿ ಹೋರಿಯನ್ನು ಯೆಹೋವನಿಗೆ ದಹನ ಬಲಿಗಾಗಿ ಸಿದ್ಧಮಾಡುವಾಗ,

[9] ಅವನು ಧಾನ್ಯನೈವೇದ್ಯಕ್ಕಾಗಿ ಮೂರು ಸೇರು ಎಣ್ಣೆ ಬೆರಸಿದ ಒಂಭತ್ತು ಸೇರು ಗೋದಿಯ ಹಿಟ್ಟನ್ನೂ, ಒಂದು ಹೋರಿಯೊಂದಿಗೆ ತರಬೇಕು.

[10] ಪಾನದ್ರವ್ಯಕ್ಕಾಗಿ ಮೂರು ಸೇರು ದ್ರಾಕ್ಷಾರಸವನ್ನೂ ತಂದು ಸಮರ್ಪಿಸಬೇಕು. ಇದು ಯೆಹೋವನಿಗೆ ಸುವಾಸನೆಯ ಸುಗಂಧ ಹೋಮವಾಗುವುದು.

[11] “‘ಕುರಿ, ಆಡು, ಟಗರು, ಹೋರಿ ಇವುಗಳಲ್ಲಿ ಪ್ರತಿಯೊಂದು ಪಶುವಿನ ಸಂಗಡ ಈ ಪ್ರಕಾರ ನೀವು ನೈವೇದ್ಯಮಾಡಬೇಕು.

[12] ನೀವು ಸಮರ್ಪಿಸುವ ಪಶುಗಳ ಲೆಕ್ಕದ ಪ್ರಕಾರವೇ ಒಂದೊಂದು ಪಶುವಿನ ಸಂಗಡ ಈ ರೀತಿಯಾಗಿ ಸಮರ್ಪಿಸಬೇಕು.

[13] ಸ್ವದೇಶದವರೆಲ್ಲರೂ ಯೆಹೋವನಿಗೆ ಸುಗಂಧ ಹೋಮವನ್ನು ಸಮರ್ಪಿಸುವಾಗ ಈ ರೀತಿಯಾಗಿ ಮಾಡಬೇಕು.

[14] ನಿಮ್ಮ ಮಧ್ಯದಲ್ಲಿ ಇಲ್ಲವೆ ನಿಮ್ಮ ಸಂತತಿಯವರ ಮಧ್ಯದಲ್ಲಿ ಒಕ್ಕಲಿರುವ ಅನ್ಯದೇಶದವನಾಗಲಿ ಅಥವಾ ಇಳಿದುಕೊಂಡಿರುವ ಯಾರೇ ಆಗಲಿ ಯೆಹೋವನಿಗೆ ಸುಗಂಧ ಹೋಮ ಮಾಡಬೇಕಾದರೆ ನಿಮ್ಮಂತೆಯೇ ಅವನೂ ಮಾಡಬೇಕು.

[15] ಸರ್ವರಿಗೂ ಅಂದರೆ ನಿಮಗೂ, ನಿಮ್ಮಲ್ಲಿರುವ ಅನ್ಯದೇಶದವರಿಗೂ ಒಂದೇ ನಿಯಮವಿರಬೇಕು; ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತವಾದ ನಿಯಮ. ಯೆಹೋವನ ಸನ್ನಿಧಿಯಲ್ಲಿ ನೀವು ಹೇಗೋ, ಅನ್ಯದೇಶದವನೂ ಸಹ ಹಾಗೆಯೇ ಇರುವನು.

[16] ನಿಮಗೂ, ನಿಮ್ಮ ಬಳಿಯಲ್ಲಿ ಒಕ್ಕಲಿರುವ ಅನ್ಯದೇಶದವನಿಗೂ ಒಂದೇ ವಿಧವಾದ ನಿಯಮಗಳಿರಬೇಕು.’”

[17] ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,

[18] “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ನಾನು ನಿಮ್ಮನ್ನು ಕರೆದುಕೊಂಡುಹೋಗುವ ದೇಶಕ್ಕೆ ನೀವು ಸೇರಿದ ನಂತರ,

[19] ನೀವು ಭೂಮಿಯಿಂದ ಬೆಳೆದ ಬೆಳೆಯನ್ನು ಉಪಯೋಗಿಸುವಾಗ, ಸ್ವಲ್ಪವನ್ನು ಯೆಹೋವನಿಗೋಸ್ಕರ ಕಾಣಿಕೆಯಾಗಿ ಪ್ರತ್ಯೇಕಿಸಬೇಕು.

[20] ನೀವು ಕಣದಲ್ಲಿ ತುಳಿಸಿದ ದವಸದಲ್ಲಿ ಸ್ವಲ್ಪವನ್ನು ಯೆಹೋವನದೆಂದು ಪ್ರತ್ಯೇಕಿಸುವ ಪ್ರಕಾರವೇ ಕಣಕದಿಂದ ಮಾಡುವ ಮೊದಲನೆಯ ರೊಟ್ಟಿಯನ್ನೂ ಕಾಣಿಕೆಯಾಗಿ ಪ್ರತ್ಯೇಕಿಸಬೇಕು.

[21] “‘ನೀವೂ ಮತ್ತು ನಿಮ್ಮ ಸಂತತಿಯವರೂ ಕಣಕದಿಂದ ಮಾಡುವ ಮೊದಲನೆಯ ರೊಟ್ಟಿಯನ್ನು ಯೆಹೋವನಿಗೋಸ್ಕರ ಕಾಣಿಕೆಯಾಗಿ ಪ್ರತ್ಯೇಕಿಸಬೇಕು.

[22] ನಾನು ಮೋಶೆಗೆ ಹೇಳಿದ ಈ ಎಲ್ಲಾ ಆಜ್ಞೆಗಳಿಗೆ ನೀವು ವಿಧೇಯರಾಗಿರದಿದ್ದರೆ,

[23] ಆತನು ನಿಮಗೆ ಆಜ್ಞೆಗಳನ್ನು ಕೊಟ್ಟ ದಿನದಿಂದ ಮೊದಲುಗೊಂಡು ನಿಮಗೂ ಮತ್ತು ನಿಮ್ಮ ಸಂತತಿಗೂ ಮೋಶೆಯ ಮುಖಾಂತರ ಆಜ್ಞಾಪಿಸಿದಂತೆ ನೀವು ಮಾಡದೆ ಹೋದರೆ,

[24] ಯಾವಾಗಲಾದರೂ ಸಮೂಹದವರು ತಿಳಿಯದೆ ಮೀರಿ ದ್ರೋಹಿಗಳಾದರೆ, ಸರ್ವಸಮೂಹದವರೆಲ್ಲರು ಒಟ್ಟಾಗಿ ಯೆಹೋವನಿಗೆ ಸುವಾಸನೆಯನ್ನು ಉಂಟುಮಾಡುವುದಕ್ಕಾಗಿ ಸರ್ವಾಂಗಹೋಮವಾಗಿ ಒಂದು ಹೋರಿಯನ್ನೂ, ನೈವೇದ್ಯಕ್ಕಾಗಿ ಅದಕ್ಕೆ ನೇಮಿತವಾದ ಧಾನ್ಯದ್ರವ್ಯಗಳನ್ನೂ ಮತ್ತು ಪಾನದ್ರವ್ಯಗಳನ್ನೂ, ದೋಷಪರಿಹಾರ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು.

[25] ಯಾಜಕನು ಇಸ್ರಾಯೇಲರ ಸರ್ವಸಮೂಹದವರಿಗೋಸ್ಕರ ದೋಷಪರಿಹಾರವನ್ನು ಮಾಡಿದಾಗ ಅವರಿಗೆ ಕ್ಷಮಾಪಣೆಯಾಗುವುದು. ಅವರು ಆ ತಪ್ಪನ್ನು ತಿಳಿಯದೆ ಮಾಡಿದುದರಿಂದ ಮತ್ತು ಅವರು ಅದನ್ನು ಪರಿಹರಿಸುವುದಕ್ಕಾಗಿ ಯೆಹೋವನ ಸನ್ನಿಧಿಯಲ್ಲಿ ಕಾಣಿಕೆಯಾಗಿ ಸರ್ವಾಂಗ ಹೋಮವನ್ನೂ, ದೋಷಪರಿಹಾರಕ ಯಜ್ಞವನ್ನೂ ಮಾಡಿಸಿದ್ದರಿಂದ,

[26] ಜನರೆಲ್ಲರೂ ಆ ತಪ್ಪನ್ನು ತಿಳಿಯದೆ ಮಾಡಿದ್ದರಿಂದ, ಇಸ್ರಾಯೇಲರ ಸರ್ವಸಮೂಹದವರಿಗೂ, ಅವರಲ್ಲಿ ಇಳಿದುಕೊಂಡಿರುವ ಅನ್ಯದೇಶದವರಿಗೂ ಕ್ಷಮಾಪಣೆಯಾಗುವುದು.

[27] “‘ಯಾವನಾದರೂ ತಿಳಿಯದೆ ತಪ್ಪು ಮಾಡಿದರೆ ಅವನು ದೋಷಪರಿಹಾರಕ ಯಜ್ಞಕ್ಕಾಗಿ ಒಂದು ವರ್ಷದ ಆಡನ್ನು ಸಮರ್ಪಿಸಬೇಕು.

[28] ತಿಳಿಯದೆ ತಪ್ಪು ಮಾಡಿದವನಿಗೋಸ್ಕರ ಯಾಜಕನು ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡಿದಾಗ ಅವನಿಗೆ ಕ್ಷಮಾಪಣೆಯಾಗುವುದು.

[29] ಈ ವಿಷಯದಲ್ಲಿ ಇಸ್ರಾಯೇಲರಲ್ಲಿರುವ ಸ್ವದೇಶದವರಿಗೂ, ಅನ್ಯದೇಶದವರಿಗೂ ಒಂದೇ ನಿಯಮವಿರಬೇಕು,

[30] ಆದರೆ ಸ್ವದೇಶದವನಾಗಲಿ, ಅನ್ಯದೇಶದವನಾಗಲಿ ಯಾವನಾದರೂ ಮನಃಪೂರ್ವಕವಾಗಿ ಹಟದಿಂದ ಪಾಪವನ್ನು ಮಾಡಿದರೆ ಅವನು ಯೆಹೋವನನ್ನು ದೂಷಿಸಿದವನಾದುದರಿಂದ ಕುಲದಿಂದ ಹೊರಗೆ ಹಾಕಬೇಕು.

[31] ಆ ಮನುಷ್ಯನು ಯೆಹೋವನ ಮಾತನ್ನು ತಾತ್ಸಾರಮಾಡಿ ಆತನ ಆಜ್ಞೆಯನ್ನು ಮೀರಿದುದರಿಂದ ಕುಲದಿಂದ ಹೊರಗೆ ಹಾಕಬೇಕು. ಅವನು ತನ್ನ ಪಾಪದ ಫಲವನ್ನು ಅನುಭವಿಸಲಿ.’”

[32] ಇಸ್ರಾಯೇಲರು ಮರುಭೂಮಿಯಲ್ಲಿ ಇದ್ದಾಗ ಒಬ್ಬನು ಸಬ್ಬತ್ ದಿನದಲ್ಲಿ ಕಟ್ಟಿಗೆ ಕೂಡಿಸುವುದನ್ನು ಕಂಡರು.

[33] ಅದನ್ನು ನೋಡಿದವರು ಅವನನ್ನು ಮೋಶೆ, ಆರೋನರ ಮತ್ತು ಸರ್ವಸಮೂಹದವರ ಬಳಿಗೆ ಹಿಡಿದುಕೊಂಡು ಬಂದರು.

[34] ಅಂಥವನಿಗೆ ವಿಧಿಸಬೇಕಾದ ಶಿಕ್ಷೆಯ ವಿಷಯದಲ್ಲಿ ಆ ವರೆಗೂ ನಿಯಮವೇ ಇರಲಿಲ್ಲವಾದ ಕಾರಣ ಅವರು ಅವನನ್ನು ಕಾವಲಲ್ಲಿಟ್ಟರು.

[35] ತರುವಾಯ ಯೆಹೋವನು ಮೋಶೆಗೆ, “ಆ ಮನುಷ್ಯನಿಗೆ ಮರಣಶಿಕ್ಷೆಯಾಗಬೇಕು; ಸರ್ವಸಮೂಹದವರ ಪಾಳೆಯದ ಹೊರಗೆ ಅವನನ್ನು ಕಲ್ಲೆಸೆದು ಕೊಲ್ಲಬೇಕು” ಎಂದು ಆಜ್ಞಾಪಿಸಿದನು.

[36] ಯೆಹೋವನು ಮೋಶೆಗೆ ಅಪ್ಪಣೆಕೊಟ್ಟಂತೆ ಸರ್ವಸಮೂಹದವರು ಆ ಮನುಷ್ಯನನ್ನು ಪಾಳೆಯದ ಹೊರಗೆ ಹಿಡಿದುಕೊಂಡುಹೋಗಿ ಕಲ್ಲೆಸೆದು ಕೊಂದರು.

[37] ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,

[38] “ನೀನು ಇಸ್ರಾಯೇಲರ ಸಂತತಿಯವರ ಸಂಗಡ ಮಾತನಾಡಿ, ಅವರು ತಮ್ಮ ವಸ್ತ್ರಗಳ ಮೂಲೆಗಳಲ್ಲಿ ಗೊಂಡೆಗಳನ್ನು ಕಟ್ಟಿಕೊಳ್ಳಬೇಕು, ಪ್ರತಿಯೊಂದು ಗೊಂಡೆಯೂ ಒಂದೊಂದು ನೀಲಿ ದಾರದಿಂದ ಕಟ್ಟಿರಬೇಕು ಎಂದು ಅವರಿಗೆ ಆಜ್ಞಾಪಿಸು.

[39] ಆ ಗೊಂಡೆಗಳ ಉಪಯೋಗವೇನೆಂದರೆ, ನೀವು ಅವುಗಳನ್ನು ನೋಡುವಾಗ ನನ್ನ ಆಜ್ಞೆಗಳನ್ನೆಲ್ಲಾ ನೆನಪಿಗೆ ತಂದುಕೊಂಡು ಅದನ್ನು ನಡೆಸಬೇಕು ಮತ್ತು ನೀವು ಪೂರ್ವದಲ್ಲಿ ನನಗೆ ದೇವದ್ರೋಹಿಗಳಾಗಿ ಮನಸ್ಸಿಗೂ, ಕಣ್ಣಿಗೂ ತೋರಿದಂತೆ

[40] ದಾರಿ ತಪ್ಪಿ ನಡೆದ ಪ್ರಕಾರ ಇನ್ನು ಮುಂದೆ ನಡೆಯದೆ, ನನ್ನ ಆಜ್ಞೆಗಳನ್ನೆಲ್ಲಾ ಲಕ್ಷಿಸಿ ಅನುಸರಿಸಿ ನಿಮ್ಮ ದೇವರಿಗೆ ಪ್ರತಿಷ್ಠಿತರಾಗಿರಬೇಕೆಂಬುದೇ.

[41] ನಿಮ್ಮ ದೇವರಾದ ಯೆಹೋವನು ನಾನೇ, ನಿಮ್ಮ ದೇವರಾಗುವುದಕ್ಕಾಗಿ ನಿಮ್ಮನ್ನು ಐಗುಪ್ತ ದೇಶದೊಳಗಿಂದ ಬರಮಾಡಿದ ನಿಮ್ಮ ದೇವರಾದ ಯೆಹೋವನು ನಾನೇ.”

ಅರಣ್ಯಕಾಂಡ — Chapters