[1] ಆಗ ಬಿಳಾಮನು ಬಾಲಾಕನಿಗೆ, “ಇಲ್ಲಿ ಏಳು ಯಜ್ಞವೇದಿಗಳನ್ನು ಕಟ್ಟಿಸು ಮತ್ತು ಏಳು ಹೋರಿಗಳನ್ನು ಮತ್ತು ಏಳು ಟಗರುಗಳನ್ನು ಸಿದ್ಧಪಡಿಸಬೇಕು” ಎಂದು ಹೇಳಿದನು.
[2] ಬಾಲಾಕನು ಹಾಗೆಯೇ ಮಾಡಿದನು. ಬಾಲಾಕನು ಮತ್ತು ಬಿಳಾಮನು ಪ್ರತಿ ಯಜ್ಞವೇದಿಯ ಮೇಲೆ ಒಂದು ಹೋರಿಯನ್ನು ಮತ್ತು ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದರು.
[3] ಬಿಳಾಮನು ಬಾಲಾಕನಿಗೆ, “ನೀನು ಸರ್ವಾಂಗಹೋಮದ ಸ್ಥಳದಲ್ಲೇ ಇರು. ನಾನು ಸ್ವಲ್ಪ ದೂರ ಹೋಗಿ ಬರುತ್ತೇನೆ. ಯೆಹೋವನು ನನಗೆ ಎದುರಾಗಿ ಬಂದು, ಆತನು ನನಗೆ ಏನನ್ನು ಸೂಚಿಸುವನೋ ಅದನ್ನು ನಿನಗೆ ತಿಳಿಸುವೆನು” ಎಂದು ಹೇಳಿ ಮರವಿಲ್ಲದ ಒಂದು ಎತ್ತರವಾದ ಸ್ಥಳಕ್ಕೆ ಹೋದನು.
[4] ದೇವರು ಬಿಳಾಮನಿಗೆ ಎದುರಾಗಿ ಬಂದಾಗ ಬಿಳಾಮನು ಆತನಿಗೆ, “ನಾನು ಆ ಏಳು ಯಜ್ಞವೇದಿಗಳನ್ನು ಕಟ್ಟಿಸಿ ಒಂದೊಂದು ಯಜ್ಞವೇದಿಯಲ್ಲಿ ಒಂದು ಹೋರಿಯನ್ನು, ಒಂದು ಟಗರನ್ನು ಸರ್ವಾಂಗಹೋಮವಾಗಿ ಸಮರ್ಪಿಸಿದ್ದೇನೆ” ಎಂದು ಹೇಳಿದನು.
[5] ಯೆಹೋವನು ಬಿಳಾಮನಿಗೆ ಅವನು ಹೇಳಬೇಕಾದ ಮಾತನ್ನು ಕಲಿಸಿಕೊಟ್ಟು, “ನೀನು ಬಾಲಾಕನ ಬಳಿಗೆ ಹಿಂತಿರುಗಿ ಹೋಗಿ ಹೀಗೆ ಹೇಳಬೇಕು” ಎಂದು ಆಜ್ಞಾಪಿಸಿದನು.
[6] ಬಿಳಾಮನು ಬಾಲಾಕನ ಬಳಿಗೆ ಹಿಂತಿರುಗಿ ಬಂದಾಗ ಬಾಲಾಕನು ತಾನು ಸರ್ವಾಂಗಹೋಮವನ್ನು ಸಮರ್ಪಿಸಿದ್ದ ಯಜ್ಞವೇದಿಯ ಹತ್ತಿರ ನಿಂತಿದ್ದನು. ಮೋವಾಬ್ಯರ ಪ್ರಧಾನರೆಲ್ಲರೂ ಅವನ ಬಳಿಯಲ್ಲಿದ್ದರು.
[7] ಆಗ ಬಿಳಾಮನು ಪದ್ಯರೂಪವಾಗಿ ಪ್ರವಾದಿಸಿದ್ದೇನೆಂದರೆ, “ಬಾಲಾಕನು ನನ್ನನ್ನು ಆರಾಮಿನಿಂದ ಕರೆಯಿಸಿದನು, ಮೋವಾಬ್ಯರ ಅರಸನು ಪೂರ್ವ ಪರ್ವತಗಳಿಂದ ನನ್ನನ್ನು ಬರಮಾಡಿದನು, ‘ನೀನು ಬಂದು ಯಾಕೋಬ ವಂಶದವರನ್ನು ನನಗಾಗಿ ಶಪಿಸಬೇಕು.’ ‘ಇಸ್ರಾಯೇಲರನ್ನು ಎದುರಿಸುವುದಕ್ಕೆ ಬಾ.’
[8] ದೇವರು ಶಪಿಸದವನನ್ನು ನಾನು ಹೇಗೆ ಶಪಿಸಲಿ? ಯೆಹೋವನು ಎದುರಿಸದವನನ್ನು ನಾನು ಹೇಗೆ ಎದುರಿಸಲಿ?
[9] ಬಂಡೆಗಳ ಶಿಖರದಿಂದ ನಾನು ಅವರನ್ನು ನೋಡುತ್ತೇನೆ; ಗುಡ್ಡದಿಂದ ಅವರನ್ನು ದೃಷ್ಟಿಸುತ್ತೇನೆ. ಆ ಜನಾಂಗವು ಪ್ರತ್ಯೇಕವಾಗಿ ವಾಸಿಸುವುದು. ಆ ಜನಾಂಗವು ಇತರ ಜನಾಂಗಗಳಂತೆ ಸಾಧಾರಣ ಜನರೆಂದು ಎಣಿಸಲ್ಪಡುವುದಿಲ್ಲ.
[10] ಯಾಕೋಬನ ಧೂಳನ್ನು ಲೆಕ್ಕಿಸುವುದಕ್ಕೆ ಯಾರಿಂದಾದಿತು? ಇಸ್ರಾಯೇಲಿನ ನಾಲ್ಕನೆಯ ಒಂದು ಭಾಗವನ್ನಾದರೂ ಲೆಕ್ಕಿಸುವುದಕ್ಕೆ ಯಾರಿಂದಾದಿತು? ನೀತಿವಂತನು ಸಾಯುವಂತೆ ನಾನು ಸಾಯಬೇಕು. ಅವರಿಗುಂಟಾಗುವ ಅವಸಾನವು ನನಗೂ ಆಗಬೇಕು!” ಎಂದನು.
[11] ಬಾಲಾಕನು ಬಿಳಾಮನಿಗೆ, “ನೀನು ನನಗೆ ಮಾಡಿದ್ದೇನು? ನನ್ನ ಶತ್ರುಗಳನ್ನು ಶಪಿಸುವುದಕ್ಕೆ ಕರೆಯಿಸಿದೆನು. ನೀನು ಅವರನ್ನು ಶಪಿಸದೆ ಆಶೀರ್ವಾದವನ್ನೇ ಮಾಡಿದೆ” ಎಂದು ಹೇಳಿದನು.
[12] ಅದಕ್ಕೆ ಬಿಳಾಮನು, “ಯೆಹೋವನು ಹೇಳುವ ಮಾತನ್ನೇ ನಾನು ಹೇಳಬೇಕಾಗಿದೆಯಲ್ಲವೇ?” ಎಂದನು.
[13] ಆಗ ಬಾಲಾಕನು, “ದಯಮಾಡಿ ನನ್ನ ಕೂಡ ಇನ್ನೊಂದು ಸ್ಥಳಕ್ಕೆ ಬಾ. ಅಲ್ಲಿಂದ ಅವರನ್ನು ನೋಡಬಹುದು. ಆದರೆ ಅವರೆಲ್ಲರನ್ನು ನೋಡದೆ ಸಮೀಪದಲ್ಲಿ ಇರುವವರನ್ನು ಮಾತ್ರ ನೋಡುವಿ. ಅಲ್ಲಿ ನನಗಾಗಿ ಅವರನ್ನು ಶಪಿಸಬೇಕು” ಎಂದನು.
[14] ಹೀಗೆ ಬಾಲಾಕನು ಬಿಳಾಮನನ್ನು ಪಿಸ್ಗಾ ಬೆಟ್ಟದ ತುದಿಯಲ್ಲಿರುವ ಚೋಫೀಮ್ ಬಯಲು ಎಂಬ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿಯೂ ಏಳು ಯಜ್ಞವೇದಿಗಳನ್ನು ಕಟ್ಟಿಸಿ ಪ್ರತಿಯೊಂದು ಯಜ್ಞವೇದಿಯಲ್ಲಿ ಒಂದು ಹೋರಿಯನ್ನೂ, ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದನು.
[15] ಬಿಳಾಮನು ಬಾಲಾಕನಿಗೆ, “ನೀನು ಇಲ್ಲೇ ಸರ್ವಾಂಗಹೋಮ ಮಾಡಿರುವ ಸ್ಥಳದಲ್ಲಿ ನಿಂತುಕೋ. ನಾನು ಆ ಕಡೆಗೆ ಹೋಗಿ ಯೆಹೋವನನ್ನು ಎದುರುಗೊಳ್ಳುವೆನು” ಎಂದು ಹೇಳಿದನು.
[16] ಯೆಹೋವನು ಬಿಳಾಮನಿಗೆ ಎದುರಾಗಿ ಬಂದು ಅವನು ಹೇಳಬೇಕಾದ ಮಾತನ್ನು ಕಲಿಸಿಕೊಟ್ಟನು. ಆಗ ಅವನು ಹೇಳಿದ್ದೇನೆಂದರೆ, “ನೀನು ಬಾಲಾಕನ ಬಳಿಗೆ ತಿರುಗಿ ಹೋಗಿ ಹೀಗೆ ಹೇಳಬೇಕು” ಎಂದನು.
[17] ಬಿಳಾಮನು ಬಾಲಾಕನ ಬಳಿಗೆ ಬಂದಾಗ ಬಾಲಾಕನು ತಾನು ಸರ್ವಾಂಗಹೋಮವನ್ನು ಸಮರ್ಪಿಸಿದ ವೇದಿಯ ಹತ್ತಿರ ನಿಂತಿದ್ದನು. ಮೋವಾಬ್ಯರ ಪ್ರಧಾನರು ಅವನ ಸಂಗಡ ಇದ್ದರು. ಬಾಲಾಕನು, “ಯೆಹೋವನು ಏನು ಹೇಳಿದ್ದಾನೆ?” ಎಂದನು.
[18] ಬಿಳಾಮನು ಪದ್ಯರೂಪವಾಗಿ ಪ್ರವಾದಿಸಿದ್ದೇನೆಂದರೆ, “ಬಾಲಾಕನೇ, ಎದ್ದು ಕಿವಿಗೊಟ್ಟು ಕೇಳು. ಚಿಪ್ಪೋರನ ಮಗನೇ, ನನ್ನ ಮಾತನ್ನು ಲಾಲಿಸು.
[19] ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ. ಮಾನವನಂತೆ ಮನಸ್ಸನ್ನು ಬದಲಾಯಿಸುವವನಲ್ಲ. ತಾನು ಹೇಳಿದ ಪ್ರಕಾರ ನಡೆಯದಿರುತ್ತಾನೆಯೇ? ಮಾತುಕೊಟ್ಟ ನಂತರ ನೆರವೇರಿಸುವುದಿಲ್ಲವೋ?
[20] ಅವರನ್ನು ಆಶೀರ್ವದಿಸುವುದಕ್ಕೆ ನನಗೆ ಅಪ್ಪಣೆಯಾಯಿತು. ಆತನು ಆಶೀರ್ವದಿಸಿದ ನಂತರ ನಾನು ಬದಲಾಯಿಸಲಾರೆನು.
[21] ಈ ಯಾಕೋಬನಲ್ಲಿ ಯಾವ ಆಪತ್ತಿನ ಸೂಚನೆಯೂ ಕಾಣುವುದಿಲ್ಲ ಅಥವಾ ಇಸ್ರಾಯೇಲರಿಗೆ ಯಾವ ವಿಪತ್ತಿನ ಸೂಚನೆಯೂ ತೋರುವುದಿಲ್ಲ. ಅವರಿಗೆ ದೇವರಾಗಿರುವ ಯೆಹೋವನು ಅವರ ಸಂಗಡ ಇದ್ದಾನೆ, ಅವರು ತಮ್ಮ ಅರಸನಿಗಾಗಿ ಮಾಡುವ ಜಯ ಘೋಷವು ಕೇಳಿಸುತ್ತ ಇದೆ.
[22] ಅವರನ್ನು ಐಗುಪ್ತ ದೇಶದಿಂದ ಕರೆದುಕೊಂಡು ಬಂದವನು ದೇವರೇ, ಅವರು ಕಾಡುಕೋಣದಷ್ಟು ಬಲವುಳ್ಳವರು.
[23] ಯಾಕೋಬರಿಗೆ ವಿರುದ್ಧವಾದ ಶಕುನವಿಲ್ಲ, ಇಸ್ರಾಯೇಲರಲ್ಲಿ ಕಣಿ ಕೇಳುವುದಿಲ್ಲ. ಬದಲಾಗಿ, ಯಾಕೋಬ ಮತ್ತು ಇಸ್ರಾಯೇಲರ ವಿಷಯದಲ್ಲಿ ಹೀಗೆ ಹೇಳುವರು. ‘ದೇವರು ಮಾಡುವ ಕೆಲಸವನ್ನು ನೋಡಿರಿ!’
[24] ಇಗೋ, ಜನಾಂಗದವರು ಎದ್ದು ಪ್ರಾಯದ ಸಿಂಹದಂತೆ ನಿಂತಿದ್ದಾರೆ; ಸಿಂಹವು ಮೃಗವನ್ನು ಕೊಂದು ಮಾಂಸವನ್ನು ತಿಂದು ತೃಪ್ತಿಹೊಂದದ ಹೊರತು ಮಲಗುವುದಿಲ್ಲ ತಾನು ಬೇಟೆಯಾಡಿದ ರಕ್ತವನ್ನು ಕುಡಿದು ಮಲಗುವುದು.”
[25] ಆಗ ಬಾಲಾಕನು ಬಿಳಾಮನಿಗೆ, “ನೀನು ಅವರನ್ನು ಶಪಿಸಲೂ ಬೇಡ; ಆಶೀರ್ವದಿಸಲೂ ಬೇಡ” ಎಂದು ಹೇಳಿದನು.
[26] ಅದಕ್ಕೆ ಬಿಳಾಮನು ಬಾಲಾಕನಿಗೆ ಉತ್ತರವಾಗಿ, “ಯೆಹೋವನು ಆಜ್ಞಾಪಿಸುವುದನ್ನೆಲ್ಲಾ ನಾನು ಹೇಳಬೇಕೆಂದು ನಿನಗೆ ಹೇಳಲಿಲ್ಲವೇ?” ಎಂದನು.
[27] ತರುವಾಯ ಬಾಲಾಕನು ಬಿಳಾಮನಿಗೆ, “ಬೇರೊಂದು ಸ್ಥಳಕ್ಕೆ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಬಾ; ಅಲ್ಲಿಯಾದರೂ ನೀನು ಅವರನ್ನು ಶಪಿಸುವುದಕ್ಕೆ ದೇವರು ಅನುಮತಿ ಕೊಡಬಹುದು” ಎಂದು ಹೇಳಿದನು.
[28] ಆದಕಾರಣ ಬಾಲಾಕನು ಬಿಳಾಮನನ್ನು ಪೆಗೋರ್ ಎಂಬ ಬೆಟ್ಟದ ತುದಿಗೆ ಕರೆದುಕೊಂಡು ಹೋದನು. ಆ ಬೆಟ್ಟದ ಮೇಲಿನಿಂದ ಕೆಳಗಿರುವ ಯೆಷೀಮೋನ್ ಎಂಬ ಅರಣ್ಯಪ್ರದೇಶವು ಕಾಣಿಸುತ್ತದೆ.
[29] ಆಗ ಬಿಳಾಮನು ಬಾಲಾಕನಿಗೆ, “ಇಲ್ಲಿಯೂ ಏಳು ಯಜ್ಞವೇದಿಗಳನ್ನು ಕಟ್ಟಿಸಿ ಏಳು ಹೋರಿಗಳನ್ನೂ, ಏಳು ಟಗರುಗಳನ್ನೂ ಸಿದ್ಧಮಾಡು” ಎಂದು ಹೇಳಿದನು
[30] ಬಿಳಾಮನ ಅಪ್ಪಣೆಯ ಪ್ರಕಾರ ಬಾಲಾಕನು ಪ್ರತಿಯೊಂದು ಯಜ್ಞ ವೇದಿಯಲ್ಲಿ ಒಂದು ಹೋರಿಯನ್ನೂ. ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದನು.