Skip to content
Opens in a new window
Listen to this chapter • 6:59

[1] ಆಗ ಯೆಹೋವನು ಆರೋನನಿಗೆ, “ದೇವದರ್ಶನದ ಗುಡಾರದ ವಿಷಯದಲ್ಲಿ ಅಕ್ರಮವೇನಾದರೂ ನಡೆದರೆ ನೀನೂ, ನಿನ್ನ ಸಂತತಿಯವರೂ, ನಿನ್ನ ಕುಲದವರೆಲ್ಲರೂ ಆ ದೋಷದ ಫಲವನ್ನು ಅನುಭವಿಸಬೇಕು. ಯಾಜಕತ್ವದ ವಿಷಯದಲ್ಲಿ ಅಕ್ರಮವೇನಾದರೂ ನಡೆದರೆ ನೀನೂ, ನಿನ್ನ ಸಂತತಿಯವರು ಮಾತ್ರವೇ ಆ ದೋಷದ ಫಲವನ್ನು ಅನುಭವಿಸಬೇಕು.

[2] ನಿನ್ನ ಕುಲದ ಮೂಲಪುರುಷನಾದ ಲೇವಿ ವಂಶದವರನ್ನು ನೀನು ಹತ್ತಿರಕ್ಕೆ ಕರೆದು ಜೊತೆಯಲ್ಲಿರಿಸಿಕೊಂಡು ನಿನ್ನ ಕೈಕೆಳಗೆ ಸೇವೆಮಾಡಿಸಬೇಕು. ಆದರೆ ಆಜ್ಞಾಶಾಸನಗಳಿರುವ ಗುಡಾರದ ಮುಂದೆ ನೀನೂ, ನಿನ್ನ ಮಕ್ಕಳೂ ಮಾತ್ರ ಸೇವೆಮಾಡಬೇಕು.

[3] ಲೇವಿಯರು ನಿನ್ನ ಅಪ್ಪಣೆಯ ಪ್ರಕಾರ ನಡೆದು ಗುಡಾರವನ್ನು ಕಾಯಬೇಕು. ಆದರೆ ಪವಿತ್ರಸ್ಥಾನದ ವಸ್ತುಗಳ ಹತ್ತಿರವಾಗಲಿ ಅಥವಾ ಯಜ್ಞವೇದಿಯ ಹತ್ತಿರವಾಗಲಿ ಅವರು ಬರಬಾರದು, ಬಂದರೆ ಅವರು ಸಾಯುವುದು ಮಾತ್ರವಲ್ಲದೆ ನೀವೂ ಸಾಯುವಿರಿ.

[4] ಅವರೇ ನಿನ್ನ ಜೊತೆಯಲ್ಲಿದ್ದು ದೇವದರ್ಶನದ ಗುಡಾರವನ್ನು ನೋಡಿಕೊಂಡು ಅದರ ಸಕಲ ಸೇವಾಕಾರ್ಯವನ್ನು ಮಾಡಬೇಕು. ಇತರ ಕುಲದವರು ನಿಮ್ಮ ಹತ್ತಿರಕ್ಕೆ ಬರಬಾರದು.

[5] ಇನ್ನು ಮುಂದೆ ಇಸ್ರಾಯೇಲರ ಮೇಲೆ ದೇವರ ಕೋಪವುಂಟಾಗದಂತೆ, ನೀವೇ ದೇವಸ್ಥಾನದ ವಸ್ತುಗಳನ್ನೂ, ಯಜ್ಞವೇದಿಯನ್ನೂ ನೋಡಿಕೊಳ್ಳಬೇಕು.

[6] ಇಗೋ, ನಾನು ಇಸ್ರಾಯೇಲರೊಳಗಿಂದ ನಿನ್ನ ಕುಲದವರಾದ ಲೇವಿಯರನ್ನು ಆರಿಸಿಕೊಂಡಿದ್ದೇನೆ. ಅವರು ಯೆಹೋವನಿಗೆ ಸಮರ್ಪಿಸಲ್ಪಟ್ಟ ಕಾಣಿಕೆಯಂತೆ ನಿನ್ನ ವಶದಲ್ಲಿಯೇ ಇದ್ದಾರೆ. ಅವರೇ ದೇವದರ್ಶನದ ಗುಡಾರದ ಸೇವಾಕಾರ್ಯವನ್ನು ಮಾಡಬೇಕು.

[7] ನೀನೂ, ನಿನ್ನ ಸಂತತಿಯವರೂ ಯಾಜಕೋದ್ಯೋಗವನ್ನು ಕೈಕೊಂಡವರಾಗಿ ಯಜ್ಞವೇದಿಯ ಮತ್ತು ತೆರೆಯ ಒಳಗಿನ ಕಾರ್ಯಗಳನ್ನು ನಡೆಸಬೇಕು. ಅವುಗಳ ಸೇವಾಕಾರ್ಯವನ್ನು ನೀವೇ ಮಾಡಬೇಕು. ನಾನು ಯಾಜಕತ್ವವನ್ನು ನಿಮಗೆ ದಾನವಾಗಿ ಅನುಗ್ರಹಿಸಿದ್ದೇನೆ. ಇತರರು ಅದಕ್ಕೆ ಕೈಹಾಕಿದರೆ ಅವರಿಗೆ ಮರಣಶಿಕ್ಷೆಯಾಗಬೇಕು” ಎಂದನು.

[8] ಯೆಹೋವನು ಆರೋನನಿಗೆ ಆಜ್ಞಾಪಿಸಿದ್ದೇನೆಂದರೆ, “ಇಸ್ರಾಯೇಲರು ನನಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸುವ ಪದಾರ್ಥಗಳನ್ನೆಲ್ಲಾ ಹಾಗೂ ದೇವರ ಪರಿಶುದ್ಧ ವಸ್ತುಗಳನ್ನೆಲ್ಲಾ ನಾನು ನಿನ್ನ ಮತ್ತು ನಿನ್ನ ಸಂತತಿಯವರ ಪಾಲಾಗುವುದಕ್ಕೆ ದಾನಮಾಡಿದ್ದೇನೆ. ಅವು ಸದಾಕಾಲವೂ ನಿಮಗೇ ಸಲ್ಲಬೇಕು.

[9] ಬೆಂಕಿಯಲ್ಲಿ ಹೋಮಮಾಡದೆ ಉಳಿದಿರುವ ಮಹಾ ಪರಿಶುದ್ಧ ವಸ್ತುಗಳು ನಿನಗೆ ಕಾಣಿಕೆಯಾಗಿ ಸಲ್ಲಬೇಕು. ಇಸ್ರಾಯೇಲರು ನನಗೆ ಸಮರ್ಪಿಸುವ ಎಲ್ಲಾ ಧಾನ್ಯದ್ರವ್ಯ, ದೋಷಪರಿಹಾರಕ ಯಜ್ಞ, ಪ್ರಾಯಶ್ಚಿತ್ತಯಜ್ಞ ಇವುಗಳಲ್ಲಿ ಹೋಮಶೇಷವು ಮಹಾಪರಿಶುದ್ಧವಾದುದರಿಂದ ನಿನಗೂ ನಿನ್ನ ಸಂತತಿಯವರಿಗೂ ಸಲ್ಲಬೇಕು.

[10] ನೀವು ಮಹಾಪರಿಶುದ್ಧವಾದ ಒಂದು ಸ್ಥಳದಲ್ಲಿ ಅವುಗಳನ್ನು ಊಟಮಾಡಬೇಕು. ನಿಮ್ಮಲ್ಲಿರುವ ಗಂಡಸರೆಲ್ಲರೂ ಅವುಗಳನ್ನು ತಿನ್ನಬಹುದು. ಅವು ಮಹಾಪರಿಶುದ್ಧವಾದವುಗಳೆಂದು ನೀವು ತಿಳಿದುಕೊಳ್ಳಬೇಕು.

[11] “ಇದಲ್ಲದೆ ಇಸ್ರಾಯೇಲರು ಮಾಡುವ ಸಮಾಧಾನಯಜ್ಞಗಳಿಂದ ನನಗೋಸ್ಕರ ಪ್ರತ್ಯೇಕಿಸಿಕೊಡುವ ದ್ರವ್ಯಗಳೂ, ನೈವೇದ್ಯವಾಗಿ ನಿವಾಳಿಸುವ ದ್ರವ್ಯಗಳೂ ನಿಮಗೆ ಸೇರಬೇಕು. ಇವು ನಿನಗೂ, ನಿನ್ನ ಸಂತತಿಯವರಾದ ಸ್ತ್ರೀಪುರುಷರೆಲ್ಲರಿಗೂ ಶಾಶ್ವತ ನಿಯಮವಾಗಿ ಸಲ್ಲಬೇಕೆಂದು ಅನುಗ್ರಹಿಸಿದ್ದೇನೆ. ಇವುಗಳನ್ನು ನಿಮ್ಮ ಮನೆಗಳಲ್ಲಿರುವ ಶುದ್ಧರಾದವರೆಲ್ಲರೂ ಊಟ ಮಾಡಬಹುದು.

[12] ಇಸ್ರಾಯೇಲರು ಯೆಹೋವನಿಗೆ ಸಮರ್ಪಿಸುವ ಪ್ರಥಮಫಲಗಳು ಯಾವುವೆಂದರೆ: ಎಣ್ಣೆ, ದ್ರಾಕ್ಷಾರಸ, ಧಾನ್ಯ ಇವುಗಳಲ್ಲಿ ಶ್ರೇಷ್ಠವಾದದ್ದು ನಿನಗೇ ಸೇರಬೇಕೆಂದು ವಿಧಿಸಿದ್ದೇನೆ.

[13] ಅವರು ತಮ್ಮ ದೇಶದ ಎಲ್ಲಾ ಬೆಳೆಗಳಲ್ಲಿ ಯೆಹೋವನಿಗೋಸ್ಕರ ತರುವ ಪ್ರಥಮಫಲಗಳು ನಿನಗೇ ಸಲ್ಲಬೇಕು. ನಿಮ್ಮ ಮನೆಗಳಲ್ಲಿ ಶುದ್ಧರಾಗಿರುವ ಎಲ್ಲರೂ ಅವುಗಳನ್ನು ಊಟಮಾಡಬಹುದು.

[14] ಕೇವಲ ಯೆಹೋವನಿಗೋಸ್ಕರ ಇರುವುದಕ್ಕೆ ಇಸ್ರಾಯೇಲರು ಹರಕೆಮಾಡಿ ಸಮರ್ಪಿಸುವುದೆಲ್ಲವೂ ನಿನಗೆ ಸೇರಬೇಕು.

[15] ಮನುಷ್ಯರಲ್ಲಾಗಲಿ, ಪಶುಗಳಲ್ಲಾಗಲಿ ಅವರು ಯೆಹೋವನಿಗೆ ಸಮರ್ಪಿಸುವ ಸಕಲಪ್ರಾಣಿಗಳಲ್ಲಿ ಚೊಚ್ಚಲಾದದ್ದು ನಿನಗೆ ಸಲ್ಲಬೇಕು. ಆದರೆ ಮನುಷ್ಯರ ಚೊಚ್ಚಲಮಕ್ಕಳಿಗೂ, ಅಪವಿತ್ರವಾದ ಪಶುಗಳ ಮರಿಗಳಿಗೂ ಬದಲಾಗಿ ನೀನು ಈಡನ್ನು ತೆಗೆದುಕೊಂಡು ಅವುಗಳನ್ನು ಬಿಟ್ಟುಬಿಡಬೇಕು.

[16] ಹೀಗೆ ಬಿಟ್ಟುಬಿಡಬೇಕಾದ ಶಿಶುಗಳು ಒಂದು ತಿಂಗಳಿನ ಪ್ರಾಯಕ್ಕೆ ಬಂದಾಗ, ನೀವು ಗೊತ್ತು ಮಾಡಿದ ಈಡನ್ನು ದೇವರ ಸೇವೆಗೆ ನೇಮಕವಾದ ಇಪ್ಪತ್ತು ಗೇರಾ ತೂಕದ ಶೆಕೆಲ್ ಪ್ರಕಾರ ಐದು ಶೆಕೆಲ್ ತೆಗೆದುಕೊಂಡು ಅವುಗಳನ್ನು ಬಿಟ್ಟುಬಿಡಬೇಕು.

[17] “ಆಕಳಿನ ಮತ್ತು ಆಡುಕುರಿಗಳ ಚೊಚ್ಚಲುಮರಿಗಳು ದೇವರ ಸೊತ್ತಾಗಿರುವುದರಿಂದ ಅವುಗಳನ್ನು ಬಿಡಬಾರದು. ಅವುಗಳ ರಕ್ತವನ್ನು ಯಜ್ಞವೇದಿಗೆ ಚಿಮುಕಿಸಿಬೇಕು, ಅವುಗಳ ಕೊಬ್ಬನ್ನು ಯೆಹೋವನಿಗೆ ಸುಗಂಧಹೋಮಮಾಡಬೇಕು.

[18] ಅವುಗಳ ಮಾಂಸವು ಸಮಾಧಾನಯಜ್ಞಗಳಲ್ಲಿ ನೈವೇದ್ಯವಾಗಿ ನಿವಾಳಿಸುವ ಎದೆಯ ಭಾಗದಂತೆಯೂ, ಬಲತೊಡೆಯಂತೆಯೂ ನಿನಗೇ ಸಲ್ಲಬೇಕು.

[19] ಇಸ್ರಾಯೇಲರು ಯೆಹೋವನಿಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸುವ ದೇವರ ವಸ್ತುಗಳೆಲ್ಲಾ ನಿನಗೂ, ನಿನ್ನ ಸಂತತಿಯವರಾದ ಸ್ತ್ರೀಪುರುಷರೆಲ್ಲರಿಗೂ ಸದಾಕಾಲವೂ ಸಲ್ಲಬೇಕೆಂದು ನಾನು ಅನುಗ್ರಹಮಾಡಿದ್ದೇನೆ. ಇದು ಯೆಹೋವನ ಸನ್ನಿಧಿಯಲ್ಲಿ ನಿನ್ನೊಡನೆಯೂ, ನಿನ್ನ ಸಂತತಿಯೊಡನೆಯೂ ಮಾಡಲ್ಪಟ್ಟ ಶಾಶ್ವತವಾದ ಉಪ್ಪಿನ ಒಡಂಬಡಿಕೆಯಾಗಬೇಕು” ಎಂದು ಹೇಳಿದನು.

[20] ಇದಲ್ಲದೆ ಯೆಹೋವನು ಆರೋನನಿಗೆ ಹೇಳಿದ್ದೇನೆಂದರೆ, “ಇಸ್ರಾಯೇಲರ ದೇಶದಲ್ಲಿ ನಿನ್ನ ಸ್ವಂತಕ್ಕಾಗಿ ಯಾವ ಸ್ವತ್ತು ಇರಬಾರದು. ಅವರೊಂದಿಗೆ ನಿನಗೆ ಪಾಲು ಇರುವುದಿಲ್ಲ. ಇಸ್ರಾಯೇಲರ ಮಧ್ಯದಲ್ಲಿ ನಾನೇ ನಿನಗೆ ಪಾಲಾಗಿಯೂ ಮತ್ತು ಸ್ವತ್ತಾಗಿಯೂ ಇದ್ದೇನೆ.

[21] “ಲೇವಿಯರು ದೇವದರ್ಶನದ ಗುಡಾರದ ಸೇವಾಕಾರ್ಯವನ್ನು ಮಾಡುವುದಕ್ಕಾಗಿ ಇಸ್ರಾಯೇಲರಿಂದ ಸಕಲ ಪದಾರ್ಥಗಳ ಹತ್ತನೆಯ ಪಾಲನ್ನು ಗೊತ್ತುಮಾಡಿ ಕೊಟ್ಟಿದ್ದೇನೆ.

[22] ಇನ್ನು ಮುಂದೆ ಇಸ್ರಾಯೇಲರು ದೇವದರ್ಶನದ ಗುಡಾರದ ಹತ್ತಿರಕ್ಕೆ ಬರಬಾರದು, ಬಂದರೆ ಅವರು ಆ ದೋಷದಿಂದ ಸತ್ತುಹೋಗುವರು.

[23] ಲೇವಿಯರೇ ದೇವದರ್ಶನದ ಗುಡಾರದ ಸೇವಾಕಾರ್ಯವನ್ನು ಮಾಡಬೇಕು. ಅದರ ಸಂಬಂಧವಾಗಿ ಅವರು ಮಾಡುವ ಪಾಪಫಲವನ್ನು ತಾವೇ ಅನುಭವಿಸಬೇಕು. ಇದು ನಿಮಗೂ, ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮವಾಗಿರಬೇಕು. ಆದರೆ ಇಸ್ರಾಯೇಲರ ಮಧ್ಯದಲ್ಲಿ ಲೇವಿಯರಿಗೆ ಸ್ವಂತವಾದ ಸ್ವತ್ತು ಇರುವುದಿಲ್ಲ.

[24] ಇಸ್ರಾಯೇಲರು ಪ್ರತ್ಯೇಕಿಸಿ ಯೆಹೋವನಿಗೆ ಸಮರ್ಪಿಸುವ ಹತ್ತನೆಯ ಒಂದು ಭಾಗವನ್ನು ಲೇವಿಯರಿಗೆ ಸ್ವತ್ತಾಗಿ ಕೊಟ್ಟಿದ್ದೇನೆ. ಆದುದರಿಂದ ಲೇವಿಯರಿಗೆ ‘ಇತರ ಇಸ್ರಾಯೇಲರೊಂದಿಗೆ ಪಾಲು ದೊರೆಯುವುದಿಲ್ಲ’” ಎಂದು ಹೇಳಿದ ಮಾತಿಗೆ ಇದೇ ಕಾರಣ.

[25] ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ,

[26] “ನೀನು ಲೇವಿಯರಿಗೆ ಹೀಗೆ ಆಜ್ಞಾಪಿಸಬೇಕು, ‘ಇಸ್ರಾಯೇಲರ ಸ್ವಂತಕ್ಕಾಗಿ ನಾನು ನೇಮಿಸಿರುವ ಹತ್ತನೆಯ ಒಂದು ಭಾಗವನ್ನು ಪ್ರತ್ಯೇಕಿಸಿ ಯೆಹೋವನಿಗೆ ಸಮರ್ಪಿಸಬೇಕು.

[27] ನೀವು ಹೀಗೆ ಸಮರ್ಪಿಸಿದ ಹತ್ತನೆಯ ಒಂದು ಭಾಗದ ಕಣದಲ್ಲಿನ ಧಾನ್ಯವನ್ನೂ, ದ್ರಾಕ್ಷಿತೊಟ್ಟಿಯ ರಸದಿಂದ ಬರಬೇಕಾದ ದಶಮಾಂಶವೆಂದು ಪರಿಗಣಿಸಲ್ಪಡುವುದು.

[28] ಇಸ್ರಾಯೇಲರಿಂದ ನಿಮಗೆ ಸಲ್ಲುವ ಹತ್ತನೆಯ ಒಂದು ಭಾಗವನ್ನು ಯೆಹೋವನಿಗೆ ಪ್ರತ್ಯೇಕಿಸಿ ಯಾಜಕನಾದ ಆರೋನನಿಗೆ ಒಪ್ಪಿಸಬೇಕು.

[29] ನಿಮಗೆ ಕೊಡಲ್ಪಡುವ ಸಕಲ ಪದಾರ್ಥಗಳಲ್ಲಿಯೂ ನೀವು ಉತ್ತಮ ಭಾಗವನ್ನೇ ದೇವರ ವಸ್ತುವಾಗುವುದಕ್ಕೆ ಯೋಗ್ಯಭಾಗವನ್ನೇ ಯೆಹೋವನಿಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸಬೇಕು’

[30] ಆದುದರಿಂದ ನೀನು ಲೇವಿಯರಿಗೆ ಹೀಗೆ ಹೇಳಬೇಕು, ‘ನಿಮಗೆ ದೊರಕಿದ್ದರಲ್ಲಿ ನೀವು ಉತ್ತಮವಾದದ್ದನ್ನೇ ಪ್ರತ್ಯೇಕಿಸಿ ಸಮರ್ಪಿಸಿದ ಮೇಲೆ ಉಳಿದದ್ದನ್ನು ಕಣದಲ್ಲಿನ ದವಸದ ಹಾಗೂ, ದ್ರಾಕ್ಷಿತೊಟ್ಟಿಯ ರಸವೆಂದು ಭಾವಿಸಿ ಉಪಯೋಗಿಸಿಕೊಳ್ಳಬಹುದು.

[31] ನೀವೂ, ನಿಮ್ಮ ಮನೆಯವರೂ ಅದನ್ನು ಎಲ್ಲಾ ಸ್ಥಳಗಳಲ್ಲಿ ಊಟಮಾಡಬಹುದು. ನೀವು ದೇವದರ್ಶನದ ಗುಡಾರದ ಸೇವಾಕಾರ್ಯವನ್ನು ಮಾಡಿದ್ದಕ್ಕೆ ಅದು ನಿಮಗೆ ದೊರೆಯುವ ಪ್ರತಿಫಲ.

[32] ಅದರಲ್ಲಿ ಉತ್ತಮ ಭಾಗವನ್ನು ಯೆಹೋವನಿಗೋಸ್ಕರ ಪ್ರತ್ಯೇಕಿಸಿದ ನಂತರ ನೀವು ಉಳಿದ ವಿಷಯದಲ್ಲಿ ಯಾವ ದೋಷಕ್ಕೂ ಗುರಿಯಾಗುವುದಿಲ್ಲ. ಇಸ್ರಾಯೇಲರು ಸಮರ್ಪಿಸುವ ದೇವರ ವಸ್ತುಗಳನ್ನು ಅಪವಿತ್ರಮಾಡಿದರೆ ನೀವು ಸಾಯುವಿರಿ’” ಎಂದನು.

ಅರಣ್ಯಕಾಂಡ — Chapters