Skip to content
Opens in a new window
Listen to this chapter • 8:57

[1] ಯೆಹೋವನು ಮೋಶೆ ಮತ್ತು ಆರೋನರಿಗೆ ಆಜ್ಞಾಪಿಸಿದ್ದೇನೆಂದರೆ,

[2] “ನೀನು ಲೇವಿಯರೊಳಗೆ ಕೆಹಾತ್ಯರನ್ನು ಅವರ ಗೋತ್ರಕುಟುಂಬಗಳ ಪ್ರಕಾರ ಲೆಕ್ಕಿಸಬೇಕು.

[3] ಮೂವತ್ತರಿಂದ ಐವತ್ತು ವರ್ಷದವರೆಗೂ ವಯಸ್ಸುಳ್ಳವರನ್ನು ಎಣಿಕೆಮಾಡು, ಅವರು ದೇವದರ್ಶನದ ಗುಡಾರದ ಸೇವೆ ಮಾಡಬೇಕು.

[4] ದೇವದರ್ಶನ ಗುಡಾರದ ವಿಷಯದಲ್ಲಿ ಕೆಹಾತ್ಯರು ಮಾಡಬೇಕಾದ ಕೆಲಸ ಯಾವುದೆಂದರೆ; ಅವರು ಮಹಾಪರಿಶುದ್ಧ ವಸ್ತುಗಳನ್ನು ನೋಡಿಕೊಳ್ಳಬೇಕು.

[5] ದಂಡು ಹೊರಡುವಾಗ, ಆರೋನನೂ ಮತ್ತು ಅವನ ಮಕ್ಕಳೂ ಒಳಗೆ ಬಂದು ಮಹಾಪವಿತ್ರಸ್ಥಾನವನ್ನು ಮರೆಮಾಡುವ ತೆರೆಯನ್ನು ಇಳಿಸಿ ಅದರಿಂದ ಮಂಜೂಷದ ಆಜ್ಞಾಶಾಸನವನ್ನು ಮುಚ್ಚಿಬಿಟ್ಟು,

[6] ಅದರ ಮೇಲೆ ಹಸನಾದ ತೊಗಲನ್ನೂ ಮತ್ತು ನೀಲಿ ಬಟ್ಟೆಯನ್ನೂ ಹೊದಿಸಿ, ಮಂಜೂಷದ ಬಳೆಗಳಲ್ಲಿ ಹೊರುವ ಕೋಲುಗಳನ್ನು ಸೇರಿಸಬೇಕು.

[7] ಬಳಿಕ ಅವರು ಯೆಹೋವನ ಸಮ್ಮುಖದಲ್ಲಿರುವ ಮೇಜಿನ ಮೇಲೆ ನೀಲಿ ಬಟ್ಟೆಯನ್ನು ಹಾಸಿ ಅದರ ಮೇಲೆ ಮೇಜಿಗೆ ಸೇರಿದ ಪಾತ್ರೆಗಳನ್ನೂ, ಧೂಪಾರತಿಗಳನ್ನೂ, ಹೂಜಿಗಳನ್ನೂ, ಪಾನದ್ರವ್ಯಾರ್ಪಣೆಯ ಬಟ್ಟಲುಗಳನ್ನೂ ಇಡಬೇಕು. ಯಾವಾಗಲೂ ಇರಬೇಕಾದ ರೊಟ್ಟಿಗಳು ಅದರ ಮೇಲೆ ಇರಬೇಕು.

[8] ಇವೆಲ್ಲವುಗಳ ಮೇಲೆ ಅವರು ಕಡುಗೆಂಪಾದ ಬಟ್ಟೆಯನ್ನು ಹಾಸಿ, ಹಸನಾದ ತೊಗಲನ್ನು ಹೊದಿಸಿ ಹೊರುವ ಕೋಲುಗಳನ್ನು ಸೇರಿಸಬೇಕು.

[9] ಆ ಮೇಲೆ ಅವರು ದೀಪಸ್ತಂಭವನ್ನೂ ಅದಕ್ಕೆ ಸಂಬಂಧಪಟ್ಟ ಹಣತೆಗಳನ್ನೂ, ಎಣ್ಣೆಯ ಪಾತ್ರೆಗಳನ್ನೂ

[10] ನೀಲಿಬಟ್ಟೆಯಿಂದ ಮುಚ್ಚಿಬಿಟ್ಟು ಅದಕ್ಕೂ ಅದರ ಎಲ್ಲಾ ಉಪಕರಣಗಳಿಗೂ ಹಸನಾದ ತೊಗಲನ್ನು ಹೊದಿಸಿ ಅವುಗಳನ್ನು ಅಡ್ಡದಂಡಕ್ಕೆ ಕಟ್ಟಬೇಕು.

[11] ತರುವಾಯ ಅವರು ಬಂಗಾರದ ಯಜ್ಞವೇದಿಯ ಮೇಲೆ ನೀಲಿಬಟ್ಟೆಯನ್ನು ಹಾಸಿ, ಹಸನಾದ ತೊಗಲನ್ನು ಹೊದಿಸಿ ಹೊರುವ ಕೋಲುಗಳನ್ನು ಅಡ್ಡ ದಂಡಕ್ಕೆ ಕಟ್ಟಬೇಕು.

[12] ದೇವಸ್ಥಾನದ ಸರ್ವ ಉಪಕರಣಗಳನ್ನೆಲ್ಲಾ ನೀಲಿಬಟ್ಟೆಯಲ್ಲಿ ಇಟ್ಟು, ಹಸನಾದ ತೊಗಲನ್ನು ಹೊದಿಸಿ ಅಡ್ಡ ದಂಡಕ್ಕೆ ಕಟ್ಟಬೇಕು.

[13] ಅವರು ಯಜ್ಞವೇದಿಯ ಬೂದಿಯನ್ನು ತೆಗೆದುಬಿಟ್ಟು ಆ ಯಜ್ಞವೇದಿಯ ಮೇಲೆ ನೇರಳೆ ವರ್ಣದ ಬಟ್ಟೆಯನ್ನು ಹಾಸಿದರು.

[14] ಅದಕ್ಕೆ ಸಂಬಂಧಪಟ್ಟ ಅಗ್ಗಿಷ್ಟಿಕೆಗಳು, ಮುಳ್ಳುಗಳು, ಸಲಿಕೆಗಳು, ಬೋಗುಣಿಗಳು ಮುಂತಾದ ಉಪಕರಣಗಳನ್ನೆಲ್ಲಾ ಮೇಲೆ ಇಟ್ಟು ಹಸನಾದ ತೊಗಲನ್ನು ಹೊದಿಸಿ ಹೊರುವ ಕೋಲುಗಳನ್ನು ಹಾಕಬೇಕು.

[15] ದಂಡು ಹೊರಡುವಾಗ ಆರೋನನೂ ಮತ್ತು ಅವನ ಮಕ್ಕಳೂ ದೇವಸ್ಥಾನದ ಎಲ್ಲಾ ಸಾಮಾನುಗಳನ್ನು ಮುಚ್ಚಿ ಸಿದ್ಧಮಾಡಿದ ನಂತರ ಕೆಹಾತ್ಯರು ಅವುಗಳನ್ನು ಹೊರುವುದಕ್ಕೆ ಬರಬೇಕು. ಇವರು ದೇವಸ್ಥಾನದ ಸಾಮಾನುಗಳನ್ನು ಮುಟ್ಟಬಾರದು, ಮುಟ್ಟಿದರೆ ಸತ್ತು ಹೋಗುವರು. ದೇವದರ್ಶನದ ಗುಡಾರದ ಸಾಮಾನುಗಳಲ್ಲಿ ಕೆಹಾತ್ಯರು ಹೊರಬೇಕಾದವುಗಳು ಇವೇ.

[16] ಮಹಾಯಾಜಕ ಆರೋನನ ಮಗನಾದ ಎಲ್ಲಾಜಾರನು ದೀಪದ ಎಣ್ಣೆಯನ್ನೂ, ಪರಿಮಳಧೂಪವನ್ನೂ, ನಿತ್ಯವಾಗಿ ನೈವೇದ್ಯಮಾಡುವ ಧಾನ್ಯದ್ರವ್ಯವನ್ನೂ, ಅಭಿಷೇಕತೈಲವನ್ನೂ ತನ್ನ ವಶದಲ್ಲಿ ಇಟ್ಟುಕೊಳ್ಳಬೇಕು. ಅದಲ್ಲದೆ ದೇವದರ್ಶನದ ಗುಡಾರದ ಎಲ್ಲಾ ಭಾಗಗಳೂ ಅದರಲ್ಲಿಯೂ ಅದರ ಪಾತ್ರೆಗಳಲ್ಲಿಯೂ ಇರುವ ಸಮಸ್ತ ವಸ್ತುಗಳೂ ಅವನ ಮೇಲ್ವಿಚಾರಣೆಯಲ್ಲಿರಬೇಕು.”

[17] ಯೆಹೋವನು ಮೋಶೆ ಮತ್ತು ಆರೋನನ ಸಂಗಡ ಮಾತನಾಡಿ ಆಜ್ಞಾಪಿಸಿದ್ದೇನೆಂದರೆ,

[18] “ಕೆಹಾತ್ಯರ ಗೋತ್ರಕುಟುಂಬಗಳವರು ಲೇವಿಯರೊಡನೆ ಉಳಿಯದೆ ನಾಶವಾಗುವುದಕ್ಕೆ ಆಸ್ಪದಕೊಡಬೇಡಿರಿ.

[19] ಅವರು ಮಹಾಪರಿಶುದ್ಧ ವಸ್ತುಗಳ ಹತ್ತಿರಕ್ಕೆ ಬಂದು ಸಾಯದಂತೆ ನೀವು ಅವರ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು.

[20] ಕೆಹಾತ್ಯರು ಒಳಗೆ ಬಂದು, ಒಂದು ಕ್ಷಣವು ಆ ಪರಿಶುದ್ಧ ವಸ್ತುಗಳನ್ನು ನೋಡಬಾರದು; ನೋಡಿದರೆ ಸತ್ತೇ ಹೋಗುವರು. ಆರೋನನೂ ಮತ್ತು ಅವನ ಮಕ್ಕಳೂ ಒಳಗೆ ಪ್ರವೇಶಿಸಿ ಅವರ ಕೆಲಸಗಳನ್ನು ಅವರವರ ಹೊರೆಗಳನ್ನೂ ಅವರಿಗೆ ನೇಮಿಸಬೇಕು” ಎಂದನು.

[21] ಯೆಹೋವನು ಮೋಶೆಯ ಸಂಗಡ ಮಾತನಾಡಿ ಆಜ್ಞಾಪಿಸಿದ್ದೇನೆಂದರೆ,

[22] “ನೀನು ಗೇರ್ಷೋನ್ಯರ ಗೋತ್ರಕುಟುಂಬಗಳ ಪ್ರಕಾರ ಎಣಿಕೆಮಾಡಬೇಕು.

[23] ಮೂವತ್ತರಿಂದ ಐವತ್ತು ವರ್ಷದವರೆಗೂ ವಯಸ್ಸುಳ್ಳವರಾಗಿ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾದವರನ್ನು ಎಣಿಕೆಮಾಡಬೇಕು.

[24] ಸೇವಾಕಾರ್ಯ ಮಾಡುವುದರಲ್ಲಿಯೂ, ಹೊರೆಗಳನ್ನು ಹೊರುವುದರಲ್ಲಿಯೂ ಗೇರ್ಷೋನ್ಯರ ಗೋತ್ರಕುಟುಂಬದವರು ಮಾಡಬೇಕಾದ ಸೇವೆ ಯಾವುದೆಂದರೆ;

[25] ಅವರು ದೇವದರ್ಶನದ ಗುಡಾರದ ಬಟ್ಟೆಗಳನ್ನು ಹೊರಬೇಕು ಅಂದರೆ ಗುಡಾರ, ಅದರ ಹೊದಿಕೆ, ಅದರ ಮೇಲಣ ಹಸನಾದ ಪ್ರಾಣಿಯ ತೊಗಲಿನ ಹೊದಿಕೆ,

[26] ದೇವದರ್ಶನದ ಗುಡಾರದ ಬಾಗಿಲಿನ ಪರದೆ, ಗುಡಾರದ ಮತ್ತು ಯಜ್ಞವೇದಿಯ ಸುತ್ತಣ ಅಂಗಳದ ತೆರೆಗಳು, ಅದರ ಬಾಗಿಲಿನ ಪರದೆಗಳು, ಹಗ್ಗಗಳು, ಎಲ್ಲಾ ಉಪಕರಣಗಳು ಇವುಗಳನ್ನು ಹೊರಬೇಕು ಮತ್ತು ಇವುಗಳಿಗೆ ಸಂಬಂಧಪಟ್ಟ ಎಲ್ಲಾ ಕೆಲಸವನ್ನು ಅವರು ಮಾಡಬೇಕು.

[27] ಗೇರ್ಷೋನ್ಯರು ಹೊರೆ ಹೊರುವುದರಲ್ಲಿಯೂ ಬೇರೆ ಸೇವಾಕಾರ್ಯ ಮಾಡುವುದರಲ್ಲಿಯೂ ಆರೋನನ ಮತ್ತು ಅವನ ಮಕ್ಕಳ ಅಪ್ಪಣೆಯ ಪ್ರಕಾರವೇ ನಡೆಯಬೇಕು. ನೀವೇ ಹೊರೆಗಳನ್ನು ಗೊತ್ತುಮಾಡಿ ಅವರವರ ವಶಕ್ಕೆ ಕೊಡಬೇಕು.

[28] ದೇವದರ್ಶನದ ಗುಡಾರದ ವಿಷಯದಲ್ಲಿ ಗೇರ್ಷೋನ್ಯರ ಗೋತ್ರಕುಟುಂಬದವರು ಮಾಡಬೇಕಾದ ಕೆಲಸ ಇದೇ. ಮಹಾಯಾಜಕನಾದ ಆರೋನನ ಮಗನಾದ ಈತಾಮಾರನು ಅವರ ಮೇಲ್ವಿಚಾರಣೆ ಮಾಡಬೇಕು.

[29] “ನೀನು ಮೆರಾರೀಯರನ್ನು ಅವರ ಗೋತ್ರಕುಟುಂಬಗಳ ಪ್ರಕಾರ ಲೆಕ್ಕಿಸಬೇಕು.

[30] ಮೂವತ್ತರಿಂದ ಐವತ್ತು ವರ್ಷದವರೆಗೂ ವಯಸ್ಸುಳ್ಳ ದೇವದರ್ಶನದ ಗುಡಾರದ ಸೇವೆ ಮಾಡಲು ಅರ್ಹರಾದವರನ್ನು ಲೆಕ್ಕಿಸಬೇಕು.

[31] ದೇವದರ್ಶನದ ಗುಡಾರದ ವಿಷಯದಲ್ಲಿ ಅವರು ಮಾಡಬೇಕಾದ ಕೆಲಸ ಯಾವುದೆಂದರೆ: ಅವರು ಗುಡಾರದ ಚೌಕಟ್ಟುಗಳನ್ನು, ಅಗುಳಿಗಳನ್ನು, ಕಂಬಗಳನ್ನು, ಅವುಗಳ ಗದ್ದಿಗೆಕಲ್ಲುಗಳನ್ನು,

[32] ಅಂಗಳದ ಕಂಬಗಳನ್ನು, ಇವುಗಳ ಗದ್ದಿಗೆಕಲ್ಲುಗಳನ್ನೂ, ಗೂಟಗಳನ್ನೂ, ಹಗ್ಗಗಳನ್ನೂ ಎಲ್ಲಾ ಉಪಕರಣಗಳನ್ನೂ ಹೊರಬೇಕು; ಇವುಗಳಿಗೆ ಸಂಬಂಧಪಟ್ಟ ಎಲ್ಲಾ ಕೆಲಸವನ್ನು ಅವರು ಮಾಡಬೇಕು. ಅವರವರ ಜವಾಬ್ದಾರಿಗಳನ್ನೆಲ್ಲಾ ನೀವು ಹೆಸರು ಹೇಳಿ ಗೊತ್ತುಮಾಡಬೇಕು.

[33] ದೇವದರ್ಶನದ ಗುಡಾರದ ವಿಷಯದಲ್ಲಿ ಮೆರಾರೀಯರ ಗೋತ್ರಕುಟುಂಬದವರು ಮಾಡಬೇಕಾದ ಕೆಲಸ ಇದೇ. ಅವರು ಮಹಾಯಾಜಕ ಆರೋನನ ಮಗನಾದ ಈತಾಮಾರನ ಅಧೀನದಲ್ಲಿದ್ದು ಕಾರ್ಯಗಳನ್ನು ಮಾಡಬೇಕು” ಎಂದನು.

[34] ಮೋಶೆ ಮತ್ತು ಆರೋನರೂ, ಸಮೂಹದ ಪ್ರಧಾನರೂ ಕೆಹಾತ್ಯರನ್ನು ಅವರ ಗೋತ್ರಕುಟುಂಬಗಳ ಪ್ರಕಾರ ಎಣಿಕೆ ಮಾಡಿದರು.

[35] ಅವರು ಮೂವತ್ತರಿಂದ ಐವತ್ತು ವರ್ಷದವರೆಗೂ ವಯಸ್ಸುಳ್ಳ ದೇವದರ್ಶನದ ಗುಡಾರದ ಸೇವೆ ಮಾಡಲು ಯೋಗ್ಯರಾದವರನ್ನು ಎಣಿಕೆಮಾಡಿದರು.

[36] ಅವರಲ್ಲಿ ಗೋತ್ರಕುಟುಂಬಗಳ ಪ್ರಕಾರ ಎಣಿಕೆಯಾದವರು 2,750 ಮಂದಿ.

[37] ಯೆಹೋವನು ಮೋಶೆಗೆ ಕೊಟ್ಟ ಅಪ್ಪಣೆಯ ಮೇರೆಗೆ ಮೋಶೆ ಆರೋನರು ಕೆಹಾತ್ಯರ ಗೋತ್ರಕುಟುಂಬವನ್ನು ಲೆಕ್ಕಿಸಲಾಗಿ ಅವರಲ್ಲಿ ದೇವದರ್ಶನದ ಗುಡಾರದ ಕೆಲಸವನ್ನು ಮಾಡತಕ್ಕವರು ಇಷ್ಟೇ ಜನರು.

[38] ಗೇರ್ಷೋನ್ಯರನ್ನು ಅವರ ಗೋತ್ರಕುಟುಂಬಗಳ ಪ್ರಕಾರ ಲೆಕ್ಕಿಸಿದರು.

[39] ಮೂವತ್ತರಿಂದ ಐವತ್ತು ವರ್ಷದವರೆಗೂ ವಯಸ್ಸುಳ್ಳವರಾಗಿ ದೇವದರ್ಶನದ ಗುಡಾರದ ಸೇವೆ ಮಾಡಲು ಅರ್ಹರದವರನ್ನು ಎಣಿಕೆಮಾಡಿದರು.

[40] ಗುಡಾರದ ಕೆಲಸಕ್ಕೆ ಸೇರತಕ್ಕವರೆಂದು ಗೋತ್ರಕುಟುಂಬಗಳ ಪ್ರಕಾರ ಲೆಕ್ಕಿಸಲ್ಪಟ್ಟವರು 2,630 ಮಂದಿ.

[41] ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಮತ್ತು ಆರೋನರು ಗೇರ್ಷೋನ್ಯರ ಗೋತ್ರಕುಟುಂಬದವರನು ಎಣಿಕೆಮಾಡಿದಾಗ ಅವರಲ್ಲಿ ದೇವದರ್ಶನದ ಗುಡಾರದ ಕೆಲಸವನ್ನು ಮಾಡತಕ್ಕವರು ಇಷ್ಟೇ ಜನರು.

[42] ಮೆರಾರೀಯರಲ್ಲಿ ಅವರ ಗೋತ್ರಕುಟುಂಬಗಳ ಪ್ರಕಾರ ಎಣಿಕೆ ಮಾಡಿದರು.

[43] ಮೂವತ್ತರಿಂದ ಐವತ್ತು ವರ್ಷದವರೆಗೂ ವಯಸ್ಸುಳ್ಳವರಾಗಿ ದೇವದರ್ಶನದ ಗುಡಾರದ ಸೇವೆ ಮಾಡಲು ಅರ್ಹರಾದವರನ್ನು ಎಣಿಕೆ ಮಾಡಿದರು.

[44] ಗುಡಾರದ ಕೆಲಸಕ್ಕೆ ಸೇರಿದವರೆಂದು ಗೋತ್ರಕುಟುಂಬಗಳ ಪ್ರಕಾರ ಲೆಕ್ಕಿಸಲ್ಪಟ್ಟವರು 3,200 ಮಂದಿ.

[45] ಯೆಹೋವನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಮೋಶೆ ಮತ್ತು ಆರೋನರು ಮೆರಾರೀಯರ ಗೋತ್ರಕುಟುಂಬವನ್ನು ಎಣಿಕೆ ಮಾಡಿದಾಗ ಅವರ ಸಂಖ್ಯೆ ಇಷ್ಟೇ ಎಂದು ಗೊತ್ತಾಯಿತು.

[46] ಮೋಶೆ ಮತ್ತು ಆರೋನರೂ ಇಸ್ರಾಯೇಲರ ಪ್ರಧಾನರೂ ಲೇವಿಯರಲ್ಲಿ ಅವರ ಗೋತ್ರಕುಟುಂಬಗಳ ಪ್ರಕಾರ ಲೆಕ್ಕಿಸಿದರು.

[47] ಮೂವತ್ತರಿಂದ ಐವತ್ತು ವರ್ಷದವರೆಗೂ ವಯಸ್ಸುಳ್ಳವರಾಗಿ ದೇವದರ್ಶನದ ಗುಡಾರದ ಸೇವೆ ಮಾಡಲು ಅರ್ಹರಾದವರನ್ನು ಎಣಿಕೆ ಮಾಡಿದರು. ದೇವದರ್ಶನದ ಗುಡಾರದ ಸೇವಕಾರ್ಯವನ್ನು ಮಾಡಲೂ, ಅದರ ಜವಾಬ್ದಾರಿಗಳನ್ನು ನಿರ್ವಹಿಸುವವರನ್ನು ಗೋತ್ರಕುಟುಂಬಗಳ ಪ್ರಕಾರ ಲೆಕ್ಕಿಸಿದರು.

[48] ಗೋತ್ರಕುಟುಂಬಗಳ ಪ್ರಕಾರ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ 8,580.

[49] ಯೆಹೋವನು ಮೋಶೆಗೆ ಆಜ್ಞಾಪಿಸಿದ ಮೇರೆಗೆ ಅವನಿಂದ ಪ್ರತಿಯೊಬ್ಬನಿಗೆ ಅವನವನ ಕೆಲಸವೂ, ಜವಾಬ್ದಾರಿಯೂ ನಿಗದಿಪಡಿಸಲಾಯಿತು. ಹೀಗೆ ಯೆಹೋವನ ಆಜ್ಞೆಯ ಮೇರೆಗೆ ಲೆಕ್ಕವಾಯಿತು.

ಅರಣ್ಯಕಾಂಡ — Chapters