Skip to content
Opens in a new window
Listen to this chapter • 9:55

[1] ಆಗ ಲೇವಿಯನ ಮರಿಮಗನೂ, ಕೆಹಾತನ ಮೊಮ್ಮಗನೂ, ಇಚ್ಚಾರನ ಮಗನೂ ಆದ ಕೋರಹನು ಮತ್ತು ರೂಬೇನ್ ಕುಲದವರಲ್ಲಿ ಎಲೀಯಾಬನ ಮಕ್ಕಳಾದ ದಾತಾನನೂ, ಅಬೀರಾಮನೂ ಮತ್ತು ಪೆಲೆತನ ಮಗನಾದ ಓನನೂ, ಕೆಲವು ಜನರನ್ನು ಕೂಡಿಸಿದರು.

[2] ಇಸ್ರಾಯೇಲರ ಸಮೂಹದವರಲ್ಲಿದ್ದ ಮುಖ್ಯಸ್ಥರೂ, ಪ್ರಸಿದ್ಧರಾಗಿ ಹೆಸರು ಹೊಂದಿದ ಇನ್ನೂರೈವತ್ತು ಜನರು ಮೋಶೆಗೆ ವಿರುದ್ಧವಾಗಿ ಪ್ರತಿಭಟಿಸಿ ತಿರುಗಿಬಿದ್ದರು.

[3] ಅವರು ಒಟ್ಟಾಗಿ ಕೂಡಿಕೊಂಡು ಮೋಶೆ ಮತ್ತು ಆರೋನರ ಬಳಿಗೆ ಬಂದು ಅವರಿಗೆ, “ನೀವು ಹೆಚ್ಚು ಅಧಿಕಾರ ನಡೆಸುತ್ತೀರಿ. ಈ ಸಮೂಹದವರಲ್ಲಿ ಪ್ರತಿಯೊಬ್ಬನು ದೇವರಿಗೆ ಪ್ರತಿಷ್ಠಿತನಾದವನು, ಯೆಹೋವನು ಇವರೆಲ್ಲರ ಮಧ್ಯದಲ್ಲಿ ಇದ್ದಾನೆ. ಹೀಗಿರಲಾಗಿ ಯೆಹೋವನ ಸಮೂಹದವರಿಗಿಂತಲೂ ನಿಮ್ಮನ್ನು ನೀವೇ ಹೆಚ್ಚಿಸಿಕೊಳ್ಳುವುದು ಏಕೆ?” ಎಂದು ಕೇಳಿದರು.

[4] ಮೋಶೆ ಆ ಮಾತನ್ನು ಕೇಳಿ ಬೋರಲುಬಿದ್ದನು.

[5] ಮೋಶೆಯು ಕೋರಹನಿಗೂ ಮತ್ತು ಅವನ ಎಲ್ಲಾ ಸಮೂಹದವರಿಗೂ, “ತನ್ನವರು ಯಾರು ಎಂಬುದನ್ನು ಯೆಹೋವನು ನಾಳೆ ತಿಳಿಸುವನು. ಯಾರನ್ನು ಯೆಹೋವನು ಪ್ರತಿಷ್ಠಿಸಿದ್ದಾನೋ, ಯಾರನ್ನು ಆದುಕೊಂಡಿದ್ದಾನೋ ಅವರನ್ನು ಮಾತ್ರ ಆತನು ತನ್ನ ಹತ್ತಿರಕ್ಕೆ ಬರಗೊಡಿಸುವನು.

[6] ನೀವು ಇದನ್ನು ಮಾಡಿರಿ, ಕೋರಹನೂ ಮತ್ತು ಅವನ ಸಮೂಹದವರೆಲ್ಲರೂ ಧೂಪಾರತಿಗಳನ್ನು ತೆಗೆದುಕೊಂಡು,

[7] ಅವುಗಳಲ್ಲಿ ಕೆಂಡಗಳನ್ನಿಟ್ಟು ನಾಳೆ ಯೆಹೋವನ ಸನ್ನಿಧಿಯಲ್ಲಿ ಧೂಪಹಾಕಿರಿ. ಆಗ ಯೆಹೋವನು ಯಾರನ್ನು ಮೆಚ್ಚುವನೋ ಅವನೇ ದೇವರಿಗೆ ಪ್ರತಿಷ್ಠಿತನೆಂದು ತಿಳಿದುಕೊಳ್ಳುವಿರಿ. ಲೇವಿಯರೇ, ನಿಮ್ಮ ವರ್ತನೆ ಅತಿಯಾಯಿತು” ಎಂದು ಹೇಳಿದನು.

[8] ಪುನಃ ಮೋಶೆ ಕೋರಹನಿಗೆ, “ಲೇವಿಯ ಸಂತಾನದವರೇ, ಈಗ ಕೇಳಿರಿ,

[9] ಇಸ್ರಾಯೇಲರ ದೇವರಾದ ಯೆಹೋವನು ತನ್ನ ಗುಡಾರದ ಸೇವಾಕಾರ್ಯವನ್ನು ಮಾಡುವುದಕ್ಕೂ, ಸರ್ವಸಮೂಹದವರಿಗೋಸ್ಕರ ಸೇವೆಯನ್ನು ಮಾಡುವುದಕ್ಕೂ ನಿಮ್ಮನ್ನು ಹತ್ತಿರ ಬರಮಾಡಿಕೊಂಡು, ಸಮೂಹದವರಿಂದ ನಿಮ್ಮನ್ನು ಪ್ರತ್ಯೇಕಿಸಿದ್ದು ನಿಮಗೆ ಅಲ್ಪವಾಗಿ ತೋರುತ್ತದೋ?

[10] ಆತನು ನಿನ್ನನ್ನೂ, ನಿನ್ನ ಸ್ವಕುಲದವರಾದ ಲೇವಿಯರನ್ನೂ ತನ್ನ ಹತ್ತಿರ ಬರಮಾಡಿಕೊಂಡಿದ್ದಾನೆ. ನೀವು ಸಹ ಯಾಜಕತ್ವವನ್ನು ಬಯಸುತ್ತಿರೋ?

[11] ನೀನು ಮತ್ತು ನಿನ್ನ ಸಮೂಹದವರೆಲ್ಲರು ಯೆಹೋವನಿಗೆ ವಿರುದ್ಧವಾಗಿ ಕೂಡಿಕೊಂಡಿರಿ, ನನಗೆ ವಿಧೇಯನಾಗಿ ನಡೆಯುವ ಆರೋನನ ವಿರುದ್ಧವಾಗಿ ನೀವು ಗುಣಗುಟ್ಟುವುದೇಕೆ?” ಎಂದು ಕೇಳಿದನು.

[12] ಮೋಶೆಯು, ಎಲೀಯಾಬನ ಮಕ್ಕಳಾದ ದಾತಾನ್ ಮತ್ತು ಅಬೀರಾಮರನ್ನು ಕರೆದುಕೊಂಡು ಬರಲು ಹೇಳಿದರು ಅವರು ಅವನಿಗೆ, “ನಾವು ಬರುವುದಿಲ್ಲ.

[13] ನೀನು ಹಾಲೂ ಮತ್ತು ಜೇನೂ ಹರಿಯುವ ದೇಶದಿಂದ ಕರೆದುಕೊಂಡು ಬಂದು ನಮ್ಮನ್ನು ಮರುಭೂಮಿಯಲ್ಲಿ ಸಾಯಿಸುವುದು ನಿನಗೆ ಸಾಕಾಗಲಿಲ್ಲವೋ? ನೀನು ನಮ್ಮ ಮೇಲೆ ದೊರೆತನ ಮಾಡಬೇಕು ಎಂದು ಕೋರುತ್ತಿಯೋ?

[14] ಅಷ್ಟು ಮಾತ್ರವೇ ಅಲ್ಲ, ನೀನು ಹಾಲೂ ಜೇನೂ ಹರಿಯುವ ದೇಶಕ್ಕೆ ನಮ್ಮನ್ನು ಸೇರಿಸಲಿಲ್ಲ; ಹೊಲಗಳನ್ನೂ, ದ್ರಾಕ್ಷಿತೋಟಗಳನ್ನೂ ನಮಗೆ ಸ್ವಂತಕ್ಕೆ ಕೊಡಲೇ ಇಲ್ಲ; ಈ ಜನರ ಕಣ್ಣಿಗೆ ಮಣ್ಣು ಹಾಕಬೇಕೆಂದಿದ್ದೀಯೋ? ನಾವು ಬರುವುದಿಲ್ಲ” ಎಂದು ಹೇಳಿದನು.

[15] ಅದಕ್ಕೆ ಮೋಶೆಯು ಬಹಳ ಕೋಪಗೊಂಡು ಯೆಹೋವನಿಗೆ, “ನೀನು ಅವರ ನೈವೇದ್ಯವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಬೇಡ; ನಾನು ಅವರಿಂದ ಒಂದು ಕತ್ತೆಯನ್ನಾದರೂ ತೆಗೆದುಕೊಂಡವನಲ್ಲ; ಅವರಲ್ಲಿ ಒಬ್ಬನಿಗಾದರೂ ಹಾನಿ ಮಾಡಿದವನಲ್ಲ” ಎಂದು ಮನವಿಮಾಡಿದನು.

[16] ಮೋಶೆ ಕೋರಹನಿಗೆ, “ನಾಳೆ ನೀನೂ, ನಿನ್ನ ಸಮೂಹದವರೆಲ್ಲರೂ ಮತ್ತು ಆರೋನನೂ ಯೆಹೋವನ ಸನ್ನಿಧಿಗೆ ಬರಬೇಕು.

[17] ಅವರಲ್ಲಿ ಒಬ್ಬೊಬ್ಬನು ತನ್ನ ತನ್ನ ಧೂಪಾರತಿಗಳನ್ನು, ಒಟ್ಟಾಗಿ ಇನ್ನೂರೈವತ್ತು ಧೂಪಾರತಿಯನ್ನು ತೆಗೆದುಕೊಂಡು ಧೂಪಹಾಕಿ ಯೆಹೋವನ ಸನ್ನಿಧಿಗೆ ಬರಬೇಕು. ಹಾಗೆಯೇ ನೀನು ಮತ್ತು ಆರೋನನು ನಿಮ್ಮ ನಿಮ್ಮ ಧೂಪಾರತಿಗಳನ್ನು ತೆಗೆದುಕೊಂಡು ಬರಬೇಕು” ಎಂದು ಹೇಳಿದನು.

[18] ಅದಕ್ಕೆ ಅನುಸಾರವಾಗಿ ಅವರೆಲ್ಲರೂ ತಮ್ಮ ತಮ್ಮ ಧೂಪಾರತಿಗಳನ್ನು ಕೈಯಲ್ಲಿ ತೆಗೆದುಕೊಂಡು ಅವುಗಳಲ್ಲಿ ಕೆಂಡಗಳನ್ನಿಟ್ಟು ಧೂಪದ್ರವ್ಯಗಳನ್ನು ಹಾಕಿ ಮೋಶೆ ಮತ್ತು ಆರೋನರ ಜೊತೆಯಲ್ಲಿ ದೇವದರ್ಶನದ ಗುಡಾರದ ಬಾಗಿಲಿನಲ್ಲಿ ನಿಂತುಕೊಂಡರು.

[19] ಅದಲ್ಲದೆ ಕೋರಹನು ತಮಗೆ ಎದುರಾದ ಸರ್ವಸಮೂಹದವರನ್ನು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರಕ್ಕೆ ಕೂಡಿಸಿದನು. ಆಗ ಯೆಹೋವನ ತೇಜಸ್ಸು ಸಮೂಹದವರೆಲ್ಲರಿಗೂ ಕಾಣಿಸಿತು.

[20] ಯೆಹೋವನು ಮೋಶೆ ಮತ್ತು ಆರೋನನ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,

[21] “ನೀವು ಈ ಸರ್ವಸಮೂಹದವರಿಂದ ಪ್ರತ್ಯೇಕವಾಗಿ ನಿಲ್ಲಿರಿ; ನಾನು ಇವರನ್ನು ಒಂದು ಕ್ಷಣದಲ್ಲಿ ದಹಿಸಿಬಿಡುತ್ತೇನೆ” ಎಂದು ಆಜ್ಞಾಪಿಸಿದನು.

[22] ಅವರು ಬೋರಲುಬಿದ್ದು, “ದೇವರೇ, ಎಲ್ಲಾ ಮನುಷ್ಯರ ಆತ್ಮಗಳಿಗೆ ದೇವರಾಗಿರುವವನೇ, ಇವರಲ್ಲಿ ದೋಷಿಯಾದವನು ಒಬ್ಬನೇ ಆಗಿರಲಾಗಿ ಸರ್ವಸಮೂಹದವರೆಲ್ಲರ ಮೇಲೆ ಕೋಪಗೊಳ್ಳಬಹುದೋ?” ಎಂದು ಬಿನ್ನೈಸಿದನು.

[23] ಆಗ ಯೆಹೋವನು ಮೋಶೆಗೆ ಉತ್ತರವಾಗಿ,

[24] “ಇಸ್ರಾಯೇಲರ ಸಮೂಹದವರಿಗೆ, ‘ಕೋರಹ, ದಾತಾನ್ ಮತ್ತು ಅಬೀರಾಮರ ಗುಡಾರದಿಂದ ದೂರವಿರಬೇಕು’ ಎಂದು ಅವರಿಗೆ ಆಜ್ಞಾಪಿಸು” ಎಂದು ಹೇಳಿದನು.

[25] ಆಗ ಮೋಶೆ ಎದ್ದು ದಾತಾನ್ ಮತ್ತು ಅಬೀರಾಮರ ಬಳಿಗೆ ಹೋದನು; ಇಸ್ರಾಯೇಲರ ಹಿರಿಯರು ಅವನ ಹಿಂದೆ ಹೋದರು.

[26] ಅವನು ಇಸ್ರಾಯೇಲರ ಸಮೂಹದವರಿಗೆ, “ನೀವು ಈ ದುಷ್ಟರ ಡೇರೆಗಳ ಬಳಿಯಲ್ಲಿ ಇರದೆ ದೂರ ಹೋಗಬೇಕು; ಇವರ ಸೊತ್ತಿನಲ್ಲಿ ಯಾವುದನ್ನೂ ಮುಟ್ಟಬಾರದು; ಇವರ ದೋಷಗಳಿಗಾಗಿ ಉಂಟಾಗುವ ಶಿಕ್ಷೆ ನಿಮ್ಮನ್ನೂ ಕೊಚ್ಚಿಕೊಂಡು ಹೋದೀತು” ಎಂದು ಹೇಳಿದನು.

[27] ಆದಕಾರಣ ಅವರೆಲ್ಲರೂ ಕೋರಹ, ದಾತಾನ್ ಮತ್ತು ಅಬೀರಾಮರ ಗುಡಾರದಿಂದ ದೂರ ಹೋದರು. ದಾತಾನ್ ಮತ್ತು ಅಬೀರಾಮರೂ ಅವರ ಹೆಂಡತಿ, ಮಕ್ಕಳು ಮತ್ತು ಅವರಿಗೆ ಸಂಬಂಧಪಟ್ಟವರೆಲ್ಲರೂ ಹೊರಗೆ ಬಂದು ತಮ್ಮ ತಮ್ಮ ಡೇರೆಗಳ ಬಾಗಿಲುಗಳಲ್ಲಿ ನಿಂತುಕೊಂಡರು.

[28] ಆಗ ಮೋಶೆ ಜನರಿಗೆ, “ಈ ಕಾರ್ಯಗಳೆಲ್ಲಾ ನನ್ನ ಆಲೋಚನೆಯಿಂದ ಆಗಲಿಲ್ಲವೆಂದೂ ಮತ್ತು ಯೆಹೋವನೇ ಇವುಗಳನ್ನು ನಡಿಸುವುದಕ್ಕೆ ನನ್ನನ್ನು ಕಳುಹಿಸಿದನೆಂದೂ ನೀವೇ ತಿಳಿದುಕೊಳ್ಳುವಿರಿ.

[29] ಹೇಗೆಂದರೆ, ಎಲ್ಲರೂ ಸಾಯುವ ರೀತಿಯಲ್ಲೇ ಇವರು ಸತ್ತರೆ, ಇಲ್ಲವೆ ಎಲ್ಲರಿಗೂ ಸಂಭವಿಸುವ ಗತಿ ಇವರಿಗುಂಟಾದರೆ ಯೆಹೋವನು ನನ್ನನ್ನು ಕಳುಹಿಸಲಿಲ್ಲವೆಂದು ತಿಳಿದುಕೊಳ್ಳಬೇಕು.

[30] ಆದರೆ ಯೆಹೋವನು ಇವರಿಗೋಸ್ಕರ ಭೂಮಿಯು ಬಾಯ್ದೆರೆದು ಇವರನ್ನೂ, ಇವರ ಸರ್ವಸ್ವವನ್ನೂ ನುಂಗಿ, ಇವರು ಸಜೀವಿಗಳಾಗಿ ಪಾತಾಳಕ್ಕೆ ಹೋಗಿಬಿಟ್ಟರೆ, ಇವರು ಯೆಹೋವನನ್ನು ತಿರಸ್ಕರಿಸಿದವರೆಂದು ನೀವು ತಿಳಿದುಕೊಳ್ಳಬೇಕು” ಎಂದು ಹೇಳಿದನು.

[31] ಮೋಶೆ ಈ ಮಾತುಗಳನ್ನು ಹೇಳಿ ಮುಗಿಸಿದ ಕೂಡಲೆ ಆ ಮನುಷ್ಯರ ಕೆಳಗಿದ್ದ ನೆಲವು ಸೀಳಿತು.

[32] ಭೂಮಿಯು ಬಾಯ್ದೆರೆದು ಅವರನ್ನೂ ಮತ್ತು ಕೋರಹನಿಗೆ ಸೇರಿದ ಮನುಷ್ಯರೆಲ್ಲರನ್ನೂ, ಅವರ ಸರ್ವಸ್ವವನ್ನೂ ನುಂಗಿಬಿಟ್ಟಿತು.

[33] ಅವರು ಸಜೀವಿಗಳಾಗಿ ತಮ್ಮ ಸರ್ವಸ್ವ ಸಹಿತವಾಗಿ ಪಾತಾಳಕ್ಕೆ ಹೋಗಿಬಿಟ್ಟರು, ಭೂಮಿಯು ಅವರನ್ನು ಮುಚ್ಚಿಕೊಂಡಿತು. ಹೀಗೆ ಅವರು ಸಮೂಹದವರೊಳಗಿಂದ ನಾಶವಾದರು.

[34] ಅವರ ಸುತ್ತಲಿದ್ದ ಇಸ್ರಾಯೇಲರೆಲ್ಲರೂ ಹೆದರಿಕೊಂಡು, “ಭೂಮಿಯು ನಮ್ಮನ್ನೂ ಸಹ ನುಂಗಿಬಿಟ್ಟೀತು!” ಎಂದು ಹೇಳಿ ಓಡಿಹೋದರು.

[35] ನಂತರ ಯೆಹೋವನ ಬಳಿಯಿಂದ ಬೆಂಕಿಹೊರಟು, ಧೂಪವನ್ನು ಅರ್ಪಿಸುತ್ತಿದ್ದ ಆ ಇನ್ನೂರೈವತ್ತು ಮಂದಿಯನ್ನು ದಹಿಸಬಿಟ್ಟಿತು.

[36] ಆಗ ಯೆಹೋವನು ಮೋಶೆಯ ಸಂಗಡ ಮಾತನಾಡಿ

[37] “ಯಾಜಕನಾದ ಆರೋನನ ಮಗನಾದ ಎಲ್ಲಾಜಾರನಿಗೆ, ಧೂಪಾರತಿಗಳು ಪರಿಶುದ್ಧವಾಗಿರುವುದರಿಂದ ದಹಿಸಲ್ಪಟ್ಟವರ ಮಧ್ಯದಿಂದ ಆ ಧೂಪಾರತಿಗಳನ್ನು ತೆಗೆಯಬೇಕೆಂದು ಆಜ್ಞಾಪಿಸು ಮತ್ತು ನೀನು ಅವುಗಳಲ್ಲಿರುವ ಕೆಂಡಗಳನ್ನು ದೂರ ಚೆಲ್ಲು.

[38] ತಮ್ಮ ಪಾಪಗಳಿಂದ ಪ್ರಾಣವನ್ನು ಕಳೆದುಕೊಂಡ ಆ ದೋಷಿಗಳ ಧೂಪಾರತಿಗಳು ಯೆಹೋವನ ಸನ್ನಿಧಿಗೆ ತಂದ ಕಾರಣ ಅವು ಪರಿಶುದ್ಧವಾದವು. ಆದುದರಿಂದ ಅವುಗಳನ್ನು ತಗಡುಗಳನ್ನಾಗಿ ಮಾಡಿ, ಯಜ್ಞವೇದಿಗೆ ಮುಚ್ಚಳವನ್ನು ಮಾಡಿಸಬೇಕು. ಇಸ್ರಾಯೇಲರಿಗೆ ಅವು ಗುರುತುಗಳಾಗಿರಬೇಕು” ಎಂದು ಹೇಳಿದನು.

[39] ಆಗ ಯಾಜಕನಾದ ಎಲ್ಲಾಜಾರನು ಯೆಹೋವನು ಮೋಶೆಯ ಮೂಲಕ ಹೇಳಿದ ಅಪ್ಪಣೆಯ ಪ್ರಕಾರ ದಹಿಸಿಹೋದವರು ಅರ್ಪಿಸಿದ ಆ ತಾಮ್ರದ ಧೂಪಾರತಿಗಳನ್ನು ತೆಗೆದುಕೊಂಡು ತಗಡುಗಳಾಗಿ ಮಾಡಿಸಿ, ಯಜ್ಞವೇದಿಯನ್ನು ಮುಚ್ಚಿದನು.

[40] ಆರೋನನ ಸಂತಾನಕ್ಕೆ ಸೇರದ ಬೇರೆ ಜನರು ಯೆಹೋವನ ಸನ್ನಿಧಿಗೆ ಬಂದು ಧೂಪವನ್ನು ಸಮರ್ಪಿಸಬಾರದು. ಸಮರ್ಪಿಸಿದರೆ ಕೋರಹನಿಗೂ ಮತ್ತು ಅವನ ಸಮೂಹದವರಿಗೂ ಆದ ಸ್ಥಿತಿಯೇ ಇವರಿಗೂ ಉಂಟಾಗುವುದೆಂಬುದನ್ನು ಇಸ್ರಾಯೇಲರಿಗೆ ಜ್ಞಾಪಿಸುವುದಕ್ಕೆ ಗುರುತಾಯಿತು.

[41] ಮರುದಿನ ಇಸ್ರಾಯೇಲರ ಸರ್ವಸಮೂಹದವರು ಮೋಶೆ ಮತ್ತು ಆರೋನರ ಮೇಲೆ ಗುಣುಗುಟ್ಟಿ, “ನೀವೇ ಯೆಹೋವನ ಜನರನ್ನು ಸಾಯಿಸಿದಿರಿ” ಎಂದು ಹೇಳುವವರಾದರು.

[42] ಸರ್ವಸಮೂಹದವರೆಲ್ಲರೂ ಹೀಗೆ ಮೋಶೆ ಮತ್ತು ಆರೋನರಿಗೆ ವಿರುದ್ಧವಾಗಿ ಸೇರಿ ಬಂದಾಗ ದೇವದರ್ಶನದ ಗುಡಾರದ ಮೇಲೆ, ಮೇಘವು ಆವರಿಸಿಕೊಂಡಿತು ಮತ್ತು ಯೆಹೋವನ ತೇಜಸ್ಸು ಅಲ್ಲಿ ಕಾಣಿಸಿತು.

[43] ಮೋಶೆ ಮತ್ತು ಆರೋನರು ದೇವದರ್ಶನದ ಗುಡಾರದ ಮುಂಭಾಗಕ್ಕೆ ಬಂದರು.

[44] ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,

[45] “ನೀವಿಬ್ಬರೂ ಸಮೂಹದವರಲ್ಲಿ ಇರದೆ ಬೇರೆ ನಿಲ್ಲಬೇಕು. ನಾನು ಒಂದು ಕ್ಷಣಮಾತ್ರದಲ್ಲಿ ಅವರನ್ನು ದಹಿಸಿಬಿಡುತ್ತೇನೆ” ಎಂದು ಹೇಳಿದನು. ಆಗ ಮೋಶೆ ಮತ್ತು ಆರೋನರು ಬೋರಲುಬಿದ್ದರು.

[46] ಮೋಶೆಯು ಆರೋನನಿಗೆ, “ಯೆಹೋವನ ಕೋಪದಿಂದ ಈ ಜನರೊಳಗೆ ಘೋರವ್ಯಾಧಿಯು ಪ್ರಾರಂಭವಾಯಿತು. ನೀನು ಧೂಪಾರತಿಯನ್ನು ತೆಗೆದುಕೊಂಡು ಅದರಲ್ಲಿ ಯಜ್ಞವೇದಿಯಿಂದ ಕೆಂಡಗಳನ್ನು ಇಟ್ಟು ಧೂಪಹಾಕಿ, ಸಮೂಹದವರ ಬಳಿಗೆ ಬೇಗ ಹೋಗಿ ಅವರಿಗೋಸ್ಕರ ದೋಷಪರಿಹಾರವನ್ನು ಮಾಡಬೇಕು” ಎಂದು ಹೇಳಿದನು.

[47] ಮೋಶೆ ಹೇಳಿದಂತೆ ಆರೋನನು ಧೂಪಾರತಿಯನ್ನು ತೆಗೆದುಕೊಂಡು ಸಮೂಹದವರ ಮಧ್ಯಕ್ಕೆ ಓಡಿದಾಗ ಘೋರವ್ಯಾಧಿಯು ಜನರೊಳಗೆ ಪ್ರಾರಂಭವಾಗಿತ್ತು. ಆದುದರಿಂದ ಅವನು ಧೂಪಹಾಕಿ ಜನರಿಗೋಸ್ಕರ ದೋಷಪರಿಹಾರವನ್ನು ಮಾಡಿದನು.

[48] ಅವನು ಸತ್ತವರಿಗೂ, ಬದುಕುವವರಿಗೂ ಮಧ್ಯದಲ್ಲಿ ನಿಂತುಕೊಂಡುದರಿಂದ ಆ ವ್ಯಾಧಿಯು ಶಮನವಾಯಿತು.

[49] ಕೋರಹನ ನಿಮಿತ್ತ ಸತ್ತುಹೋದವರ ಹೊರತಾಗಿ ಆ ವ್ಯಾಧಿಯಿಂದ ಸತ್ತವರ ಸಂಖ್ಯೆ ಹದಿನಾಲ್ಕು ಸಾವಿರದ ಏಳುನೂರು ಮಂದಿ.

[50] ಆ ವ್ಯಾಧಿ ಶಮನವಾದಾಗ ಆರೋನನು ದೇವದರ್ಶನದ ಗುಡಾರದ ಬಾಗಿಲಿಗೆ ಮೋಶೆಯ ಬಳಿಗೆ ಹಿಂತಿರುಗಿ ಬಂದನು.

ಅರಣ್ಯಕಾಂಡ — Chapters