[1] ಯೋಸೇಫನ ಕುಮಾರ ಮನಸ್ಸೆಯ ವಂಶದವರೊಳಗೆ ಮನಸ್ಸೆಗೆ ಹುಟ್ಟಿದ ಮಾಕೀರನ ಮರಿಮಗನೂ, ಗಿಲ್ಯಾದನ ಮೊಮ್ಮಗನೂ ಹೇಫೆರನ ಮಗನಾದ ಚಲ್ಪಹಾದನ ಹೆಣ್ಣುಮಕ್ಕಳಾದ ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ ಎಂಬುವವರು ಮೋಶೆಯ ಬಳಿ ಒಂದು ವಿಜ್ಞಾಪನೆಯನ್ನು ಮಾಡಿಕೊಳ್ಳುವುದಕ್ಕೆ ಬಂದರು.
[2] ಅವರು ದೇವದರ್ಶನದ ಗುಡಾರದ ಬಾಗಿಲಿನ ಬಳಿಯಲ್ಲಿ ಮೋಶೆ, ಮಹಾಯಾಜಕನಾದ ಎಲ್ಲಾಜಾರ್, ಕುಲಾಧಿಪತಿಗಳು, ಸರ್ವಸಮೂಹದವರೆಲ್ಲರ ಮುಂದೆ ನಿಂತು ಅವರಿಗೆ,
[3] “ನಮ್ಮ ತಂದೆ ಮರುಭೂಮಿಯಲ್ಲಿ ಸತ್ತುಹೋದನು. ಅವನು ಕೋರಹನ ಸಮೂಹದವರು ಯೆಹೋವನಿಗೆ ವಿರುದ್ಧವಾಗಿ ತಿರುಗಿಬಿದ್ದವರೊಳಗೆ ಸೇರಿದವನಲ್ಲ. ಅವನು ಸತ್ತದ್ದು ಸ್ವಂತ ಕರ್ಮಫಲವೇ. ಅವನಿಗೆ ಗಂಡು ಮಕ್ಕಳಿಲ್ಲ.
[4] ನಮ್ಮ ತಂದೆಗೆ ಗಂಡು ಮಗನಿಲ್ಲದ ಕಾರಣದಿಂದ ಅವನ ಹೆಸರು ಕುಲದಿಂದ ತೆಗೆದು ಹಾಕುವುದು ನ್ಯಾಯವೋ? ತಂದೆಯ ಕುಲದವರೊಂದಿಗೆ ನಮಗೂ ಸ್ವತ್ತನ್ನು ಕೊಡಬೇಕು” ಎಂದು ಕೇಳಿಕೊಂಡರು.
[5] ಮೋಶೆಯು ಅವರ ವಿಜ್ಞಾಪನೆಯನ್ನು ಯೆಹೋವನ ಸಮ್ಮುಖದಲ್ಲಿ ವಿಚಾರಿಸಿದನು.
[6] ಯೆಹೋವನು ಮೋಶೆಯ ಸಂಗಡ ಮಾತನಾಡಿ ಆಜ್ಞಾಪಿಸಿದ್ದೇನೆಂದರೆ,
[7] “ಚಲ್ಪಹಾದನ ಹೆಣ್ಣು ಮಕ್ಕಳು ಹೇಳುವುದು ನ್ಯಾಯವಾಗಿದೆ. ಅವರ ತಂದೆಯ ಕುಲದವರೊಂದಿಗೆ ಅವರಿಗೂ ನೀನು ಸ್ವತ್ತನ್ನು ಕೊಡಬೇಕು. ತಂದೆಯ ಸ್ವತ್ತು ಅವರಿಗೆ ಬರಲಿ.
[8] “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ಯಾವನಾದರೂ ಮಗನಿಲ್ಲದೆ ಸತ್ತರೆ ಅವನ ಸ್ವತ್ತು ಅವನ ಮಗಳಿಗೆ ಆಗಬೇಕು.
[9] ಮಗಳೂ ಇಲ್ಲದ ಪಕ್ಷಕ್ಕೆ ಅವನ ಸ್ವತ್ತನ್ನು ಅವನ ಅಣ್ಣತಮ್ಮಂದಿರಿಗೆ ಕೊಡಬೇಕು.
[10] ಅಣ್ಣತಮ್ಮಂದಿರಿಲ್ಲದ ಪಕ್ಷಕ್ಕೆ ಅವನ ಸ್ವತ್ತನ್ನು ತಂದೆಯ ಅಣ್ಣತಮ್ಮಂದಿರಿಗೆ ಕೊಡಬೇಕು.
[11] ಇವರೂ ಇಲ್ಲದಿದ್ದರೆ ಕುಲದವರಲ್ಲಿ ಸಮೀಪಬಂಧುವಿಗೆ ಕೊಡಬೇಕು. ಇವನೇ ಆ ಸ್ವತ್ತನ್ನು ಅನುಭವಿಸಲಿ. ಯೆಹೋವನು ಮೋಶೆಗೆ ಅಪ್ಪಣೆಮಾಡಿದ ಈ ತೀರ್ಮಾನವು ಇಸ್ರಾಯೇಲರಿಗೆ ನ್ಯಾಯನಿಯಮಗಳಾಗಿರಬೇಕು.’”
[12] ಯೆಹೋವನು ಮೋಶೆಗೆ, “ನೀನು ಈ ಅಬಾರೀಮ್ ಬೆಟ್ಟವನ್ನು ಹತ್ತಿ ನಾನು ಇಸ್ರಾಯೇಲರಿಗೆ ವಾಗ್ದಾನಮಾಡಿದ ದೇಶವನ್ನು ನೋಡು.
[13] ನಿನ್ನ ಅಣ್ಣನಾದ ಆರೋನನು ಪೂರ್ವಿಕರ ಬಳಿಗೆ ಸೇರಿದಂತೆಯೇ ನೀನೂ ಆ ದೇಶವನ್ನು ನೋಡಿದ ಮೇಲೆ ಸೇರಬೇಕು.
[14] ಚಿನ್ ಅರಣ್ಯದಲ್ಲಿ ಇಸ್ರಾಯೇಲರ ಸಮೂಹದವರು ನನ್ನೊಡನೆ ವಿವಾದಿಸಿದಾಗ ನೀವಿಬ್ಬರೂ ನನ್ನ ಗೌರವವನ್ನು ಅವರ ಎದುರಿನಲ್ಲಿ ಕಾಪಾಡದೆ ನನ್ನ ಆಜ್ಞೆಯನ್ನು ಉಲ್ಲಂಘಿಸಿದ್ದರಿಂದ ಆ ದೇಶವನ್ನು ಸೇರಬಾರದು” ಎಂದು ಹೇಳಿದೆನು. ಚಿನ್ ಅರಣ್ಯದಲ್ಲಿನ ಮೆರೀಬಾ ಕಾದೇಶಿನ ಪ್ರವಾಹದ ಹತ್ತಿರ ನಡೆದ ಸಂಗತಿಯನ್ನು ಸೂಚಿಸಿ ಇದನ್ನು ಹೇಳಿದನು.
[15] ಆಗ ಮೋಶೆಯು ಯೆಹೋವನ ಸಂಗಡ ಮಾತನಾಡಿ,
[16] “ಎಲ್ಲಾ ಮನುಷ್ಯರ ಆತ್ಮಗಳ ದೇವರಾದ ಯೆಹೋವನು ಈ ಜನ ಸಮೂಹದ ಮೇಲೆ ಒಬ್ಬ ಮನುಷ್ಯನನ್ನು ಇಡಲಿ.
[17] ಯೆಹೋವನು ಅವರ ಮುಂದಾಗಿ ಹೋಗಲಿ ಅಥವಾ ಅವರನ್ನು ಮುನ್ನಡೆಸಲು, ಮುಂದಾಗಿ ಬರಲಿ ಅವರನ್ನು ಹಿಂದಕ್ಕೆ ಕರೆದುಕೊಂಡು ಬರಲು, ಒಬ್ಬ ನಾಯಕನನ್ನು ನೇಮಿಸು ನಿನ್ನವರಾದ ಈ ಜನ ಸಮೂಹವು ಕುರುಬನಿಲ್ಲದ ಕುರಿಗಳಂತೆ ಆಗಬಾರದು” ಎಂದು ಬೇಡಿದನು.
[18] ಅದಕ್ಕೆ ಯೆಹೋವನು ಮೋಶೆಗೆ, “ನೂನನ ಮಗನಾದ ಯೆಹೋಶುವನಲ್ಲಿ ನನ್ನ ಆತ್ಮವು ವಾಸಿಸುತ್ತಿದೆ,
[19] ಅವನನ್ನು ಮಹಾಯಾಜಕನಾದ ಎಲ್ಲಾಜಾರನ ಮತ್ತು ಸಮೂಹದವರೆಲ್ಲರ ಮುಂದೆ ನಿಲ್ಲಿಸಿ ಅವನ ಮೇಲೆ ಕೈಯಿಟ್ಟು ಅವರ ಎದುರಿನಲ್ಲೇ ಅಧಿಕಾರವನ್ನು ಕೊಡಬೇಕು.
[20] ಇಸ್ರಾಯೇಲರ ಸಮೂಹದವರೆಲ್ಲರೂ ಅವನಿಗೆ ವಿಧೇಯರಾಗಿರುವಂತೆ ನಿನ್ನ ಬಗ್ಗೆ ಇರುವ ಗೌರವವನ್ನು ಅವನಿಗೆ ಕೊಡಬೇಕು.
[21] ಯೆಹೋವನ ಚಿತ್ತವನ್ನು ತಿಳಿದುಕೊಳ್ಳುವುದಕ್ಕೆ ಅವನು ಮಹಾಯಾಜಕನಾದ ಎಲ್ಲಾಜಾರನ ಹತ್ತಿರ ಬರಬೇಕು. ಎಲ್ಲಾಜಾರನು ಯೆಹೋವನ ಸನ್ನಿಧಿಯಲ್ಲಿ ಊರೀಮಿನ ನ್ಯಾಯದ ಪ್ರಕಾರ ಅವನಿಗೋಸ್ಕರ ವಿಚಾರಣೆಯನ್ನು ಮಾಡಬೇಕು. ಯೆಹೋಶುವನೂ ಮತ್ತು ಇಸ್ರಾಯೇಲರ ಸರ್ವಸಮೂಹದವರೂ ಅವನ ಮಾತಿನಂತೆ ಹೊರಡಬೇಕು, ಹಿಂತಿರುಗಬೇಕು, ಅವನ ಮಾತಿನಂತೆ ನಡೆಯಬೇಕು.” ಎಂದು ಆಜ್ಞಾಪಿಸಿದನು.
[22] ಯೆಹೋವನ ಅಪ್ಪಣೆಯ ಪ್ರಕಾರ ಮೋಶೆಯು ಯೆಹೋಶುವನನ್ನು ಮಹಾಯಾಜಕನಾದ ಎಲ್ಲಾಜಾರನ ಮತ್ತು ಸರ್ವಸಮೂಹದವರ ಮುಂದೆ ನಿಲ್ಲಿಸಿದನು.
[23] ಅವನ ಮೇಲೆ ತನ್ನ ಕೈಗಳನ್ನಿಟ್ಟು ಯೆಹೋವನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವನಿಗೆ ಅಧಿಕಾರವನ್ನು ಕೊಟ್ಟನು.