Skip to content
Opens in a new window
Listen to this chapter • 5:11

[1] ಇಸ್ರಾಯೇಲರು ಐಗುಪ್ತ ದೇಶವನ್ನು ಬಿಟ್ಟುಬಂದ ಎರಡನೆಯ ವರ್ಷದ ಮೊದಲನೆಯ ತಿಂಗಳಿನಲ್ಲಿ, ಸೀನಾಯಿ ಅರಣ್ಯದಲ್ಲಿ ಯೆಹೋವನು ಮೋಶೆಗೆ,

[2] “ಇಸ್ರಾಯೇಲರು ಪಸ್ಕಹಬ್ಬ ಆಚರಿಸಲು ನೇಮಕವಾದ ಕಾಲದಲ್ಲಿ ಆಚರಿಸಲು ಹೇಳು.

[3] ನಾನು ನೇಮಿಸಿದ ಆಜ್ಞಾವಿಧಿಗಳ ಪ್ರಕಾರ ನೇಮಕವಾದ ಕಾಲದಲ್ಲಿಯೇ ಅಂದರೆ ಈ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆಯ ವೇಳೆಯಲ್ಲಿ ನೀವು ಅದನ್ನು ಆಚರಿಸಬೇಕು” ಎಂದು ಹೇಳಿದನು.

[4] ಆದಕಾರಣ ಮೋಶೆ ಇಸ್ರಾಯೇಲರಿಗೆ, ನೀವು ಪಸ್ಕಹಬ್ಬವನ್ನು ಆಚರಿಸಬೇಕೆಂದು ಆಜ್ಞಾಪಿಸಿದನು.

[5] ಹಾಗೆಯೇ ಅವರು ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆಯ ವೇಳೆಯಲ್ಲಿ ಸೀನಾಯಿ ಅರಣ್ಯದಲ್ಲಿ ಪಸ್ಕಹಬ್ಬವನ್ನು ಆಚರಿಸಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಎಲ್ಲವನ್ನು ಇಸ್ರಾಯೇಲರು ಮಾಡಿದರು.

[6] ಆದರೆ ಕೆಲವು ಜನರಿಗೆ ಮನುಷ್ಯನ ಶವಸೋಂಕು ಇದ್ದುದರಿಂದ ಅಶುದ್ಧರಾಗಿ ಆ ದಿನದಲ್ಲಿ ಪಸ್ಕಹಬ್ಬವನ್ನು ಆಚರಿಸಲಾಗದೆ ಮೋಶೆ ಮತ್ತು ಆರೋನರ ಬಳಿಗೆ ಬಂದರು.

[7] ಈ ಜನರು ಮೋಶೆಗೆ “ಮನುಷ್ಯನ ಶವಸೋಂಕಿದರಿಂದ ನಾವು ಅಶುದ್ಧರಾದೆವು. ನಾವು ಉಳಿದ ಇಸ್ರಾಯೇಲರೊಡನೆ ನೇಮಕವಾದ ಕಾಲದಲ್ಲಿ ಯೆಹೋವನಿಗೆ ಯಜ್ಞವನ್ನು ಸಮರ್ಪಿಸುವುದಕ್ಕೆ ಅಪ್ಪಣೆಯಿಲ್ಲವೋ?” ಎಂದು ಕೇಳಿದರು.

[8] ಅದಕ್ಕೆ ಮೋಶೆ ಅವರಿಗೆ, “ಸ್ವಲ್ಪ ಕಾದುಕೊಂಡಿರಿ. ನಿಮ್ಮ ವಿಷಯದಲ್ಲಿ ಯೆಹೋವನು ಏನು ಅಪ್ಪಣೆಮಾಡುವನೋ ನಾನು ವಿಚಾರಿಸುತ್ತೇನೆ” ಎಂದು ಹೇಳಿದನು.

[9] ಆಗ ಯೆಹೋವನು ಮೋಶೆ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,

[10] “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ನಿಮ್ಮಲ್ಲಿಯಾಗಲಿ, ನಿಮ್ಮ ಸಂತತಿಯವರಲ್ಲಿಯಾಗಲಿ ಶವ ಸೋಂಕಿನಿಂದ ಅಶುದ್ಧರಾದವರೂ ಅಥವಾ ದೂರ ಪ್ರಯಾಣದಲ್ಲಿರುವವರೂ ಯೆಹೋವನ ಆಜ್ಞಾನುಸಾರ ಪಸ್ಕಹಬ್ಬವನ್ನು ಆಚರಿಸಲೇಬೇಕು.’

[11] ಅಂಥವರು ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆಯ ವೇಳೆಯಲ್ಲಿ ಅದನ್ನು ಆಚರಿಸಬೇಕು. ಆ ಪಶುವಿನ ಮಾಂಸವನ್ನು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿಯಾದ ಸೊಪ್ಪುಗಳ ಸಂಗಡ ಊಟಮಾಡಬೇಕು.

[12] ಅದರಲ್ಲಿ ಸ್ವಲ್ಪವನ್ನಾದರೂ ಮರುದಿನದವರೆಗೆ ಉಳಿಸಬಾರದು. ಆ ಪಶುವಿನ ಒಂದು ಎಲುಬನ್ನಾದರೂ ಮುರಿಯಬಾರದು. ಅಂತೂ ಪಸ್ಕಹಬ್ಬದ ವಿಷಯವಾಗಿರುವ ವಿಧಿನಿಯಮಗಳ ಪ್ರಕಾರವೇ ಅದನ್ನು ಆಚರಿಸಬೇಕು.

[13] ಆದರೆ ಯಾವನಾದರೂ ಶುದ್ಧನಾಗದೆ, ಪ್ರಯಾಣಮಾಡದೆ ಇದ್ದು ಪಸ್ಕಹಬ್ಬವನ್ನು ಆಚರಿಸಲು ತಪ್ಪಿದರೆ ಅವನನ್ನು ಕುಲದಿಂದ ಹೊರಗೆ ಹಾಕಬೇಕು. ಅವನು ಯೆಹೋವನಿಂದ ನೇಮಿತವಾದ ಯಜ್ಞವನ್ನು ನೇಮಕವಾದ ಕಾಲದಲ್ಲಿ ಸಮರ್ಪಿಸದೆ ಹೋದುದರಿಂದ ತನ್ನ ದೋಷಫಲವನ್ನು ಅನುಭವಿಸಬೇಕು.

[14] “ನಿಮ್ಮಲ್ಲಿ ಪ್ರವಾಸಿಯಾಗಿರುವ ಅನ್ಯದೇಶದವನು ಯೆಹೋವನಿಗೆ ಪಸ್ಕಹಬ್ಬವನ್ನು ಆಚರಿಸಬೇಕೆಂದು ಅಪೇಕ್ಷಿಸಿದರೆ ಅದರ ವಿಷಯವಾದ ಆಜ್ಞಾವಿಧಿಗಳ ಪ್ರಕಾರವೇ ಅದನ್ನು ಆಚರಿಸಲಿ. ಪರದೇಶದವನಿಗೂ ಸ್ವದೇಶದವನಿಗೂ ಒಂದೇ ನಿಯಮವಿರಬೇಕು.”

[15] ಇಸ್ರಾಯೇಲರು ದೇವದರ್ಶನದ ಗುಡಾರವನ್ನು ಎತ್ತಿ ನಿಲ್ಲಿಸಿದ ದಿನದಲ್ಲಿ ಮೇಘವು ದೇವದರ್ಶನದ ಗುಡಾರವನ್ನು ಆವರಿಸಿಕೊಂಡಿತು. ಅದು ಸಂಜೆಯಿಂದ ಮುಂಜಾನೆಯವರೆಗೆ ಬೆಂಕಿಯಂತೆ ಕಾಣಿಸುತ್ತಿತ್ತು.

[16] ನಿತ್ಯವೂ ಹಾಗೆಯೇ ಕಾಣಿಸುತ್ತಿತ್ತು; ಮೇಘವು ದೇವದರ್ಶನದ ಗುಡಾರವನ್ನು ಆವರಿಸಿಕೊಂಡಿತು. ರಾತ್ರಿವೇಳೆಯಲ್ಲಿ ಆ ಮೇಘವು ಬೆಂಕಿಯಂತೆ ಕಾಣಿಸುತ್ತಿತ್ತು.

[17] ಆ ಮೇಘವು ಗುಡಾರದಿಂದ ಮೇಲಕ್ಕೆ ಎದ್ದಾಗ ಇಸ್ರಾಯೇಲರು ಮುಂದಕ್ಕೆ ಪ್ರಯಾಣಮಾಡುತ್ತಿದ್ದರು. ಆ ಮೇಘವು ಎಲ್ಲಿ ನಿಲ್ಲುವುದೋ ಅಲ್ಲಿ ಇಸ್ರಾಯೇಲರು ತಮ್ಮ ಡೇರೆಗಳನ್ನು ಹಾಕಿಕೊಳ್ಳುತ್ತಿದ್ದರು.

[18] ಯೆಹೋವನ ಅಪ್ಪಣೆಯನ್ನು ಹೊಂದಿ ಇಸ್ರಾಯೇಲರು ಪ್ರಯಾಣಮಾಡುತ್ತಿದ್ದರು, ಯೆಹೋವನ ಅಪ್ಪಣೆಯನ್ನು ಹೊಂದಿ ಅವರು ತಮ್ಮ ಡೇರೆಗಳನ್ನು ಹಾಕಿಕೊಳ್ಳುತ್ತಿದ್ದರು. ಆ ಮೇಘವು ದೇವದರ್ಶನದ ಗುಡಾರದ ಮೇಲಿರುವ ತನಕ ಅವರು ಇದ್ದ ಸ್ಥಳದಲ್ಲೇ ಇರುತ್ತಿದ್ದರು.

[19] ಆ ಮೇಘವು ಬಹುದಿನದವರೆಗೂ ದೇವದರ್ಶನದ ಗುಡಾರದ ಮೇಲೆ ಇರುವಾಗ ಇಸ್ರಾಯೇಲರು ಯೆಹೋವನ ಸೂಚನೆಯನ್ನು ಅನುಸರಿಸಿ ಪ್ರಯಾಣ ಮಾಡದೆ ಇರುತ್ತಿದ್ದರು.

[20] ಒಂದೊಂದು ವೇಳೆಯಲ್ಲಿ ಮೇಘವು ಕೆಲವು ದಿನಗಳು ಮಾತ್ರ ಗುಡಾರದ ಮೇಲೆ ನಿಂತಿರುತ್ತಿತ್ತು. ಯೆಹೋವನ ಆಜ್ಞಾನುಸಾರವಾಗಿ ಅವರು ಇಳಿದುಕೊಳ್ಳುತ್ತಿದ್ದರು. ಯೆಹೋವನ ಆಜ್ಞಾನುಸಾರವಾಗಿ ತಮ್ಮ ಡೇರೆಗಳನ್ನು ತೆಗೆದುಕೊಂಡು ಹೊರಡುತ್ತಿದ್ದರು.

[21] ಕೆಲವು ಸಮಯಗಳಲ್ಲಿ ಮೇಘವು ಸಾಯಂಕಾಲದಿಂದ ಬೆಳಗ್ಗಿನವರೆಗೆ ಇರುತ್ತಿತ್ತು. ಬೆಳಗ್ಗೆ ಅದು ಮೇಲಕ್ಕೆ ಏಳುವಾಗ ಜನರು ಪ್ರಯಾಣಮಾಡುತ್ತಿದ್ದರು. ಕೆಲವು ಸಮಯಗಳಲ್ಲಿ ಅದು ಹಗಲಿರುಳು ನಿಂತಿರುತ್ತಿತ್ತು. ಅದು ಯಾವಾಗ ಮೇಲೇಳುತ್ತಿತ್ತೋ ಆಗ ಜನರು ಹೊರಡುತ್ತಿದ್ದರು.

[22] ಆ ಮೇಘವು ದೇವದರ್ಶನದ ಗುಡಾರದ ಮೇಲೆ ನಿಂತಿರುವುದು ಎರಡು ದಿನವಾದರೂ, ಒಂದು ತಿಂಗಳಾದರೂ, ಒಂದು ವರ್ಷವಾದರೂ ಅಲ್ಲಿಯ ತನಕ ಇಸ್ರಾಯೇಲರು ಪ್ರಯಾಣಮಾಡದೆ ಅಲ್ಲೇ ಇಳಿದುಕೊಂಡಿರುತ್ತಿದ್ದರು. ಮೇಘವು ಏಳುವಾಗ ಅವರು ಹೊರಡುತ್ತಿದ್ದರು.

[23] ಯೆಹೋವನ ಆಜ್ಞೆಯ ಪ್ರಕಾರ ಅವರು ಡೇರೆಗಳನ್ನು ಹಾಕಿಕೊಳ್ಳುತ್ತಿದ್ದರು. ಯೆಹೋವನ ಆಜ್ಞೆಯ ಪ್ರಕಾರವೇ ಅವರು ಡೇರೆಗಳನ್ನು ತೆಗೆದುಕೊಂಡು ಹೊರಡುತ್ತಿದ್ದರು. ಯೆಹೋವನು ಮೋಶೆಯ ಮೂಲಕವಾಗಿ ಆಜ್ಞಾಪಿಸಿದಂತೆಯೇ ಅವರು ಯೆಹೋವನ ಸೂಚನೆಗಳನ್ನು ಅನುಸರಿಸಿ ನಡೆಯುತ್ತಿದ್ದರು.

ಅರಣ್ಯಕಾಂಡ — Chapters