Skip to content
Opens in a new window
Listen to this chapter • 7:19

[1] ರೂಬೇನ್ ಕುಲದವರಿಗೂ, ಗಾದ್ ಕುಲದವರಿಗೂ ಬಹಳ ದನಕುರಿಗಳಿದ್ದವು. ಯಗ್ಜೇರ್, ಗಿಲ್ಯಾದ್ ಎಂಬ ಪ್ರದೇಶವನ್ನು ನೋಡಿದಾಗ ಅವು ದನಕುರಿಗಳ ಮೇವಿಗೆ ತಕ್ಕ ಸ್ಥಳವೆಂದು ತಿಳಿದುಕೊಂಡರು.

[2] ಗಾದ್ ಮತ್ತು ರೂಬೇನ್ ಸಂತತಿಯವರು ಮೋಶೆ ಮತ್ತು ಮಹಾಯಾಜಕನಾದ ಎಲ್ಲಾಜಾರನು ಬಳಿಗೂ, ಸಮೂಹದ ಪ್ರಧಾನರ ಬಳಿಗೂ ಬಂದು ಹೇಳಿದ್ದೇನೆಂದರೆ,

[3] “ಅಟಾರೋತ್, ದೀಬೋನ್, ಯಗ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್,

[4] ಇವು ಯೆಹೋವನು ಇಸ್ರಾಯೇಲರ ಸಮೂಹಕ್ಕೆ ಅಧೀನಪಡಿಸಿದ ಪಟ್ಟಣಗಳು. ದನಕುರಿಗಳ ಮೇವಿಗೆ ತಕ್ಕ ಪ್ರದೇಶವಾಗಿದೆ. ನಿಮ್ಮ ದಾಸರಾದ ನಮಗೆ ಬಹಳ ದನ ಕುರಿಗಳುಂಟು.

[5] ಆದಕಾರಣ ನೀವು, ದಾಸರಾದ ನಮ್ಮ ಮೇಲೆ ದಯೆ ಇಟ್ಟು ನಮ್ಮನ್ನು ಯೊರ್ದನ್ ನದಿಯ ಆಚೆಗೆ ಬರಮಾಡಿದ ಈ ಪ್ರದೇಶವನ್ನೇ ಸ್ವತ್ತಾಗಿ ಕೊಡಬೇಕು” ಎಂದು ಕೇಳಿಕೊಂಡರು.

[6] ಮೋಶೆಯು ಗಾದ್ ಮತ್ತು ರೂಬೇನ್ ಸಂತಾನದವರಿಗೆ, “ನಿಮ್ಮ ಸಹೋದರರು ಯದ್ಧಕ್ಕೆ ಹೋಗುವಾಗ ನೀವು ಅಲ್ಲೇ ಕುಳಿತುಕೊಂಡಿರಬೇಕೇನು?

[7] ಯೆಹೋವನು ಇಸ್ರಾಯೇಲರಿಗೆ ಕೊಟ್ಟ ದೇಶಕ್ಕೆ ಅವರು ಹೋಗದಂತೆ ನೀವು ಏಕೆ ಅವರಿಗೆ ಅಧೈರ್ಯವನ್ನು ಹುಟ್ಟಿಸುತ್ತೀರಿ?

[8] ಆ ದೇಶವನ್ನು ನೋಡಿಕೊಂಡು ಬರುವುದಕ್ಕೆ ನಾನು ಕಾದೇಶ್ ಬರ್ನೇಯದಿಂದ ನಿಮ್ಮ ತಂದೆಯರನ್ನು ಕಳುಹಿಸಿದಾಗ ಅವರೂ ಹಾಗೆಯೇ ಮಾಡಿದರು.

[9] ಅವರು ಎಷ್ಕೋಲ್ ತಗ್ಗಿಗೆ ಬಂದು ಆ ದೇಶವನ್ನು ನೋಡಿ ಇಸ್ರಾಯೇಲರಿಗೆ ಅಧೈರ್ಯವನ್ನು ಹುಟ್ಟಿಸಿದ್ದರಿಂದ ಇಸ್ರಾಯೇಲರು ತಮಗೆ ಯೆಹೋವನು ವಾಗ್ದಾನಮಾಡಿದ ದೇಶಕ್ಕೆ ಹೋಗಲು ಆಗಲಿಲ್ಲ.

[10] ಆ ಕಾಲದಲ್ಲಿ ಯೆಹೋವನು ಕೋಪಗೊಂಡವನಾಗಿ ಪ್ರಮಾಣಮಾಡಿ,

[11] ‘ಐಗುಪ್ತ ದೇಶದೊಳಗಿಂದ ಬಂದ ಈ ಜನರೊಳಗೆ ಯಾರೂ ನನ್ನನ್ನು ಪೂರ್ಣಮನಸ್ಸಿನಿಂದ ಅನುಸರಿಸದೆ ಹೋದುದರಿಂದ ನಾನು ಅಬ್ರಹಾಮ್, ಇಸಾಕ್, ಯಾಕೋಬರಿಗೆ ಪ್ರಮಾಣ ಪೂರ್ವಕವಾಗಿ ಕೊಟ್ಟ ದೇಶವನ್ನು, ಅವರೊಳಗೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಿನ ವಯಸ್ಸಿನವರಲ್ಲಿ

[12] ಕೆನಿಜ್ಜೀಯನಾದ ಯೆಫುನ್ನೆಯ ಮಗನಾದ ಕಾಲೇಬನೂ ಮತ್ತು ನೂನನ ಮಗನಾದ ಯೆಹೋಶುವನೂ ಇವರಿಬ್ಬರೇ ಹೊರತು ಯಾರೂ ನೋಡುವುದೇ ಇಲ್ಲ’” ಎಂದು ಖಂಡಿತವಾಗಿ ಹೇಳಿದನು.

[13] ಯೆಹೋವನು ಇಸ್ರಾಯೇಲರ ಮೇಲೆ ಕೋಪಗೊಂಡವನಾಗಿ ತನ್ನ ದೃಷ್ಟಿಯಲ್ಲಿ ಕೆಟ್ಟ ನಡತೆಯುಳ್ಳ ಆ ಸಂತತಿಯವರೆಲ್ಲರೂ ನಾಶವಾಗುವ ತನಕ ನಲ್ವತ್ತು ವರ್ಷ, ಇಸ್ರಾಯೇಲರನ್ನು ಮರುಭೂಮಿಯಲ್ಲೇ ತಿರುಗಾಡುವಂತೆ ಮಾಡಿದನು.

[14] “ಈ ದುಷ್ಟ ಸಂತತಿಯವರಾದ ನೀವು ನಿಮ್ಮ ತಂದೆಗಳಿಗೆ ಬದಲಾಗಿ ಬಂದು ಇಸ್ರಾಯೇಲರ ಮೇಲಿದ್ದ ಯೆಹೋವನ ರೋಷಾಗ್ನಿಯನ್ನು ಮತ್ತಷ್ಟು ಹೆಚ್ಚಿಸುತ್ತೀರಿ.

[15] ನೀವು ಆತನನ್ನು ಹಿಂಬಾಲಿಸದೆ ಇರುವ ಕಾರಣ ಆತನು ಆ ಜನರನ್ನು ಮರುಭೂಮಿಯಲ್ಲಿ ಇರಿಸಿದರೆ, ಈ ಸಮಸ್ತ ಜನಾಂಗವನ್ನು ನೀವೇ ನಾಶ ಮಾಡುವಿರಿ” ಎಂದು ಹೇಳಿದನು.

[16] ಆಗ ಅವರು ಮೋಶೆಯ ಬಳಿಗೆ ಬಂದು, “ನಾವು ಇಲ್ಲಿ ನಮ್ಮ ದನಕುರಿಗಳಿಗೋಸ್ಕರ ದೊಡ್ಡಿಗಳನ್ನೂ, ನಮ್ಮ ಕುಟುಂಬಗಳಿಗೋಸ್ಕರ ಊರುಗಳನ್ನು ಕಟ್ಟಿಕೊಳ್ಳುವೆವು.

[17] ನಾವಾದರೋ ಇಸ್ರಾಯೇಲರನ್ನು ಅವರವರ ಸ್ಥಳಗಳಿಗೆ ಸೇರಿಸುವವರೆಗೂ ಯುದ್ಧಕ್ಕೆ ಸನ್ನದ್ಧರಾಗಿ ಅವರ ಮುಂದೆ ನಡೆಯುವೆವು. ಅಷ್ಟರಲ್ಲಿ ನಮ್ಮ ಕುಟುಂಬಗಳವರು ಈ ದೇಶದ ನಿವಾಸಿಗಳ ಭಯದ ದೆಸೆಯಿಂದ ಕೋಟೆಕೋತ್ತಲುಗಳುಳ್ಳ ಊರುಗಳಲ್ಲಿ ವಾಸಿಸಲಿ.

[18] ಇಸ್ರಾಯೇಲರೆಲ್ಲರೂ ತಮ್ಮ ತಮ್ಮ ಸ್ವತ್ತುಗಳನ್ನು ಸ್ವತಂತ್ರಿಸಿಕೊಳ್ಳುವ ವರೆಗೂ ನಾವು ನಮ್ಮ ಮನೆಗಳಿಗೆ ತಿರುಗಿ ಹೋಗುವುದಿಲ್ಲ.

[19] ನಮಗೆ ಯೊರ್ದನ್ ನದಿಯ ಆಚೆ ಪೂರ್ವ ದಿಕ್ಕಿನಲ್ಲಿ ಸ್ವತ್ತನ್ನು ಅಪೇಕ್ಷಿಸುವುದಿಲ್ಲ” ಎಂದರು.

[20] ಅದಕ್ಕೆ ಮೋಶೆ ಅವರಿಗೆ, “ನೀವು ಯೆಹೋವನ ಮಾತಿನಂತೆ ನಡೆದರೆ ನಿಮ್ಮಲ್ಲಿರುವ ಭಟರೆಲ್ಲರೂ ಯುದ್ಧಸನ್ನದ್ಧರಾಗಿ,

[21] ಯೊರ್ದನ್ ನದಿಯ ಆಚೆಗೆ ಹೋಗಿ ಯೆಹೋವನು ತನ್ನ ವೈರಿಗಳನ್ನು ಹೊರಡಿಸಿಬಿಟ್ಟು ಆ ದೇಶವನ್ನು ಸ್ವಾಧೀನಮಾಡಿಕೊಳ್ಳುವ ತನಕ ಆತನ ಮುಂದೆ

[22] ಯುದ್ಧಮಾಡಿ ತರುವಾಯ ನೀವು ತಿರುಗಿ ಬಂದು ಆತನ ದೃಷ್ಟಿಯಲ್ಲೂ, ಇಸ್ರಾಯೇಲರ ದೃಷ್ಟಿಯಲ್ಲೂ ನಿರ್ದೋಷಿಗಳಾಗಿರುವಿರಿ ಮತ್ತು ಈ ದೇಶವು ಯೆಹೋವನ ಸನ್ನಿಧಿಯಲ್ಲೇ ನಿಮಗೆ ಸ್ವತ್ತಾಗಿರುವುದು.

[23] “ಆದರೆ ನೀವು ಹಾಗೆ ಮಾಡದೆ ಹೋದರೆ, ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದವರಾಗುವಿರಿ ಮತ್ತು ನಿಮ್ಮ ಪಾಪವು ನಿಮ್ಮನ್ನು ಹಿಡಿಯುವ ತನಕ ಹುಡುಕಿಕೊಂಡೇ ಬರುವುದು ಎಂದು ತಿಳಿದುಕೊಳ್ಳಿರಿ.

[24] ನೀವು ನಿಮ್ಮ ಕುಟುಂಬಗಳಿಗೋಸ್ಕರ ಊರುಗಳನ್ನೂ, ದನಕುರಿಗಳಿಗೋಸ್ಕರ ದೊಡ್ಡಿಗಳನ್ನೂ ಕಟ್ಟಿಕೊಂಡ ತರುವಾಯ ನಿಮ್ಮ ಮಾತಿನ ಪ್ರಕಾರ ಮಾಡಿರಿ” ಎಂದನು.

[25] ಅದಕ್ಕೆ ಗಾದ್ಯರೂ ಮತ್ತು ರೂಬೇನ್ಯರೂ ಮೋಶೆಗೆ, “ಸ್ವಾಮಿಯವರ ಅಪ್ಪಣೆಯ ಪ್ರಕಾರ ದಾಸರಾದ ನಾವು ಮಾಡುತ್ತೇವೆ ಎಂದರು.

[26] ನಮ್ಮ ಮಕ್ಕಳು, ಹೆಂಡತಿಯರೂ, ದನಕುರಿಗಳು ನಮ್ಮ ಸಂಪತ್ತು ಇಲ್ಲೇ ಗಿಲ್ಯಾದ್ ದೇಶದ ಊರುಗಳಲ್ಲಿ ಇರಲಿ.

[27] ನಿನ್ನ ದಾಸರಾದ ನಮ್ಮಲ್ಲಿ ಯುದ್ಧಸನ್ನದ್ಧರೆಲ್ಲರೂ ಸ್ವಾಮಿಯವರ ಅಪ್ಪಣೆಯ ಪ್ರಕಾರ ಯೆಹೋವನ ಮುಂದುಗಡೆಯಲ್ಲಿ ಹೊರಟು ನದಿಯನ್ನು ದಾಟಿ ಯುದ್ಧಮಾಡುವೆವು” ಎಂದು ಉತ್ತರ ಕೊಟ್ಟರು.

[28] ಆದಕಾರಣ ಮೋಶೆ ಅವರ ವಿಷಯವಾಗಿ ಮಹಾಯಾಜಕ ಎಲ್ಲಾಜಾರನಿಗೂ, ನೂನನ ಮಗನಾದ ಯೆಹೋಶುವನಿಗೂ ಇಸ್ರಾಯೇಲರ ಮತ್ತು ಗೋತ್ರಗಳ ಕುಲಾಧಿಪತಿಗಳಿಗೂ ಆಜ್ಞೆಮಾಡಿದನು.

[29] ಮೋಶೆಯು ಅವರಿಗೆ, “ಗಾದ್ಯರಲ್ಲಿಯೂ, ರೂಬೇನ್ಯರಲ್ಲಿಯೂ ಯುದ್ಧಸನ್ನದ್ಧರಾದವರೆಲ್ಲರೂ ನಿಮ್ಮೊಡನೆ ಯೊರ್ದನ್ ನದಿಯನ್ನು ದಾಟಿ ಯೆಹೋವನ ಮುಂದೆ ಯುದ್ಧಮಾಡಿದರೆ ಕಾನಾನ್ ದೇಶವನ್ನು ನೀವು ಸ್ವಾಧೀನಮಾಡಿಕೊಂಡಾಗ ನೀವು ಗಿಲ್ಯಾದ್ ಪ್ರದೇಶವನ್ನು ಅವರಿಗೆ ಸ್ವಾಸ್ತ್ಯವಾಗುವುದಕ್ಕೆ ಕೊಡಬೇಕು.

[30] ಆದರೆ ಅವರು ನಿಮ್ಮೊಡನೆ ಯುದ್ಧಕ್ಕೆ ಹೋಗದಿದ್ದರೆ ಕಾನಾನ್ ದೇಶದಲ್ಲಿಯೇ ಅವರಿಗೆ ಸ್ವಾಸ್ತ್ಯವಾಗಬೇಕು” ಎಂದು ಹೇಳಿದನು.

[31] ಅದಕ್ಕೆ ಗಾದ್ಯರೂ ರೂಬೇನ್ಯರೂ ಉತ್ತರವಾಗಿ, “ಯೆಹೋವನು ನಿನ್ನ ದಾಸರಾದ ನಮಗೆ ಆಜ್ಞಾಪಿಸಿದಂತೆಯೇ ಮಾಡುವೆವು.

[32] ನಾವು ಯೆಹೋವನ ಮುಂದೆ ಯುದ್ಧಸನ್ನದ್ಧರಾಗಿ ಕಾನಾನ್ ದೇಶಕ್ಕೆ ಹೊರಡುವೆವು, ಆಗ ಯೊರ್ದನ್ ನದಿಯ ಆಚೆಯೇ ನಮಗೆ ಸ್ವತ್ತು ದೊರಕಬೇಕು” ಎಂದರು.

[33] ಹೀಗೆ ಮೋಶೆಯು ಗಾದ್ಯರಿಗೂ, ರೂಬೇನ್ಯರಿಗೂ, ಯೋಸೇಫನ ಮಗನಾದ ಮನಸ್ಸೆಯ ಕುಲದವರಲ್ಲಿ ಅರ್ಧಜನರಿಗೂ, ಅಮೋರಿಯರ ಅರಸನಾದ ಸೀಹೋನನ ರಾಜ್ಯವನ್ನೂ, ಬಾಷಾನಿನ ಅರಸನಾದ ಓಗನ ರಾಜ್ಯವನ್ನೂ, ಅವುಗಳ ಎಲ್ಲಾ ಊರುಗಳನ್ನೂ ಮತ್ತು ಆ ಊರುಗಳಿಗೆ ಸೇರಿದ ಭೂಮಿಗಳನ್ನೂ ಕೊಟ್ಟನು.

[34] ಗಾದ್ಯನ ಮಕ್ಕಳು ದೀಬೋನ್, ಅಟಾರೋತ್, ಅರೋಯೇರ್ ಊರುಗಳನ್ನು ಹೊಸದಾಗಿ ಕಟ್ಟಿಸಿದರು.

[35] ಆಟ್ರೋತ್ಷೋಫಾನ್, ಯಗ್ಜೇರ್, ಯೊಗ್ಬೆಹಾ,

[36] ಬೇತ್‌ನಿಮ್ರಾ ಮತ್ತು ಬೇತ್ ಹಾರಾನಿನ ಸುತ್ತ ಗೋಡೆಗಳುಳ್ಳ ಊರುಗಳನ್ನು ಹೊಸದಾಗಿ ಕಟ್ಟಿಕೊಂಡರು. ತಮ್ಮ ದನಕುರಿಗಳಿಗೋಸ್ಕರ ದೊಡ್ಡಿಗಳನ್ನು ಕಟ್ಟಿಕೊಂಡರು.

[37] ರೂಬೇನ್ಯರ ಮಕ್ಕಳು ಹೆಷ್ಬೋನ್, ಎಲೆಯಾಲೆ, ಕಿರ್ಯಾತಯಿಮ್ ಊರುಗಳನ್ನು ಹೊಸದಾಗಿ ಕಟ್ಟಿಸಿದರು.

[38] ಸಿಬ್ಮಾ ಎಂಬ ಊರುಗಳನ್ನೂ, ಬೇರೆ ಹೆಸರಿನಿಂದ ಉಚ್ಚರಿಸತಕ್ಕ ನೆಬೋ, ಬಾಳ್ಮೆಯೋನ್ ಎಂಬವುಗಳನ್ನೂ ಹೊಸದಾಗಿ ಕಟ್ಟಿ ಅವುಗಳಿಗೆ ಬೇರೆ ಹೆಸರುಗಳನ್ನು ಇಟ್ಟರು.

[39] ಮನಸ್ಸೆಯ ಮಗನಾದ ಮಾಕೀರನ ವಂಶದವರು ಗಿಲ್ಯಾದಿಗೆ ಹೋಗಿ ಅದನ್ನು ಸ್ವಾಧೀನಮಾಡಿಕೊಂಡು ಅಲ್ಲಿದ್ದ ಅಮೋರಿಯರನ್ನು ಹೊರಡಿಸಿಬಿಟ್ಟರು.

[40] ಮೋಶೆಯು ಮನಸ್ಸೆಯ ಮಗನಾದ ಮಾಕೀರನ ಸಂತತಿಯವರಿಗೆ ಗಿಲ್ಯಾದ್ ಪ್ರದೇಶವನ್ನು ಕೊಡಲಾಗಿ ಅವರು ಅಲ್ಲೇ ವಾಸಮಾಡಿಕೊಂಡರು.

[41] ಮನಸ್ಸೆಯ ವಂಶದವನಾದ ಯಾಯೀರನು ಯುದ್ಧಕ್ಕೆ ಹೊರಟು ಅಮೋರಿಯರ ಗ್ರಾಮಗಳನ್ನು ಸ್ವಾಧೀನಮಾಡಿಕೊಂಡು ಅವುಗಳಿಗೆ ಯಾಯೀರನ ಗ್ರಾಮಗಳೆಂದು ಹೆಸರಿಟ್ಟನು.

[42] ನೋಬಹನು ಯುದ್ಧಕ್ಕೆ ಹೊರಟು ಕೆನಾತ್ ಎಂಬ ಪಟ್ಟಣವನ್ನೂ ಮತ್ತು ಅದಕ್ಕೆ ಸೇರಿದ ಊರುಗಳನ್ನೂ ಜಯಿಸಿ ಅದಕ್ಕೆ ನೋಬಹ ಎಂದು ತನ್ನ ಹೆಸರನ್ನೇ ಕೊಟ್ಟನು.

ಅರಣ್ಯಕಾಂಡ — Chapters