Skip to content
Opens in a new window
Listen to this chapter • 5:52

[1] ಮೋಶೆ ಮತ್ತು ಆರೋನರ ಕೈಕೆಳಗೆ ಐಗುಪ್ತ ದೇಶದೊಳಗಿಂದ ಸೈನ್ಯಸೈನ್ಯವಾಗಿ ಹೊರಟ ಇಸ್ರಾಯೇಲರ ಪ್ರಯಾಣಗಳ ವಿವರ:

[2] ಮೋಶೆ ಯೆಹೋವನ ಅಪ್ಪಣೆಯ ಪ್ರಕಾರ ಇಸ್ರಾಯೇಲರ ಪ್ರಯಾಣಗಳ ವಿವರಗಳನ್ನು ಬರೆದನು.

[3] ಮೊದಲನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಪಸ್ಕಹಬ್ಬದ ಮರುದಿನದಲ್ಲಿ ಇಸ್ರಾಯೇಲರು ಐಗುಪ್ತ್ಯರ ಎದುರಿನಲ್ಲೇ ರಮ್ಸೇಸಿನಿಂದ ಹೊರಟರು.

[4] ಆ ಕಾಲದಲ್ಲಿ ಯೆಹೋವನು ಐಗುಪ್ತ್ಯರ ದೇವತೆಗಳನ್ನು ಶಿಕ್ಷಿಸಿ, ಐಗುಪ್ತ್ಯರ ಚೊಚ್ಚಲಮಕ್ಕಳನ್ನು ಸಂಹರಿಸಿದ್ದರಿಂದ ಅವರು ಆ ಮಕ್ಕಳ ಶವಗಳನ್ನು ಸಮಾಧಿಮಾಡುತ್ತಿದ್ದರು.

[5] ಇಸ್ರಾಯೇಲರು ರಮ್ಸೇಸಿನಿಂದ ಹೊರಟು ಸುಕ್ಕೋತಿನಲ್ಲಿ ಇಳಿದುಕೊಂಡರು.

[6] ಸುಕ್ಕೋತಿನಿಂದ ಹೊರಟು ಅರಣ್ಯದ ಅಂಚಿನಲ್ಲಿರುವ ಏತಾಮಿನಲ್ಲಿ ಇಳಿದುಕೊಂಡರು.

[7] ಏತಾಮಿನಿಂದ ಹೊರಟು ಬಾಳ್ಚೆಫೋನಿಗೆ ಎದುರಾಗಿರುವ ಪೀಹಹೀರೋತಿಗೆ ತಿರುಗಿಕೊಂಡು ಮಿಗ್ದೋಲಿನ ಪೂರ್ವದಲ್ಲಿ ಇಳಿದುಕೊಂಡರು.

[8] ಪೀಹಹೀರೋತಿನಿಂದ ಹೊರಟು ಸಮುದ್ರದ ಮಧ್ಯದಲ್ಲೇ ನಡೆದು ಅರಣ್ಯಕ್ಕೆ ಬಂದರು. ಏತಾಮಿನ ಅರಣ್ಯದಲ್ಲಿ ಮೂರು ದಿನ ಪ್ರಯಾಣಮಾಡಿ ಮಾರಾ ಎಂಬ ಸ್ಥಳದಲ್ಲಿ ಇಳಿದುಕೊಂಡರು.

[9] ಮಾರಾದಿಂದ ಹೊರಟು ಏಲೀಮಿಗೆ ಬಂದರು. ಅಲ್ಲಿ ಹನ್ನೆರಡು ನೀರಿನ ಒರತೆಗಳೂ, ಎಪ್ಪತ್ತು ಖರ್ಜೂರದ ಮರಗಳೂ ಇದ್ದುದರಿಂದ ಅಲ್ಲಿಯೇ ಇಳಿದುಕೊಂಡರು.

[10] ಏಲೀಮಿನಿಂದ ಹೊರಟು ಕೆಂಪು ಸಮುದ್ರದ ದಡದಲ್ಲಿ ಇಳಿದುಕೊಂಡರು.

[11] ಕೆಂಪು ಸಮುದ್ರದಿಂದ ಹೊರಟು ಸೀನ್ ಮರುಭೂಮಿಯಲ್ಲಿ ಇಳಿದುಕೊಂಡರು.

[12] ಸೀನ್ ಮರುಭೂಮಿಯಿಂದ ಹೊರಟು ದೊಪ್ಕದಲ್ಲಿ ಇಳಿದುಕೊಂಡರು.

[13] ದೊಪ್ಕದಿಂದ ಹೊರಟು ಆಲೂಷಿನಲ್ಲಿ ಇಳಿದುಕೊಂಡರು.

[14] ಆಲೂಷಿನಿಂದ ಹೊರಟು ರೆಫೀದೀಮಿನಲ್ಲಿ ಇಳಿದುಕೊಂಡರು. ಅಲ್ಲಿ ಜನರಿಗೆ ಕುಡಿಯುವುದಕ್ಕೆ ನೀರು ಸಿಕ್ಕಲಿಲ್ಲ.

[15] ರೆಫೀದೀಮಿನಿಂದ ಹೊರಟು ಸೀನಾಯಿ ಮರುಭೂಮಿಯಲ್ಲಿ ಇಳಿದುಕೊಂಡರು.

[16] ಸೀನಾಯಿ ಮರುಭೂಮಿಯಿಂದ ಹೊರಟು ಕಿಬ್ರೋತ್ ಹತಾವದಲ್ಲಿ ಇಳಿದುಕೊಂಡರು.

[17] ಕಿಬ್ರೋತ್ ಹತಾವದಿಂದ ಹೊರಟು ಹಚೇರೋತಿನಲ್ಲಿ ಇಳಿದುಕೊಂಡರು.

[18] ಹಚೇರೋತಿನಿಂದ ಹೊರಟು ರಿತ್ಮದಲ್ಲಿ ಇಳಿದುಕೊಂಡರು.

[19] ರಿತ್ಮದಿಂದ ಹೊರಟು ರಿಮ್ಮೋನ್ ಪೆರೆಚಿನಲ್ಲಿ ಇಳಿದುಕೊಂಡರು.

[20] ರಿಮ್ಮೋನ್ ಪೆರೆಚಿನಿಂದ ಹೊರಟು ಲಿಬ್ನದಲ್ಲಿ ಇಳಿದುಕೊಂಡರು.

[21] ಲಿಬ್ನದಿಂದ ಹೊರಟು ರಿಸ್ಸದಲ್ಲಿ ಇಳಿದುಕೊಂಡರು.

[22] ರಿಸ್ಸದಿಂದ ಹೊರಟು ಕೆಹೇಲಾತದಲ್ಲಿ ಇಳಿದುಕೊಂಡರು.

[23] ಕೆಹೇಲಾತದಿಂದ ಹೊರಟು ಶೆಫೆರ್ ಬೆಟ್ಟದಲ್ಲಿ ಇಳಿದುಕೊಂಡರು.

[24] ಶೆಫೆರ್ ಬೆಟ್ಟದಿಂದ ಹೊರಟು ಹರಾದದಲ್ಲಿ ಇಳಿದುಕೊಂಡರು.

[25] ಹರಾದದಿಂದ ಹೊರಟು ಮಖೇಲೋತಿನಲ್ಲಿ ಇಳಿದುಕೊಂಡರು.

[26] ಮಖೇಲೋತಿನಿಂದ ಹೊರಟು ತಹತಿನಲ್ಲಿ ಇಳಿದುಕೊಂಡರು.

[27] ತಹತಿನಿಂದ ಹೊರಟು ತೆರಹದಲ್ಲಿ ಇಳಿದುಕೊಂಡರು.

[28] ತೆರಹದಿಂದ ಹೊರಟು ಮಿತ್ಕದಲ್ಲಿ ಇಳಿದುಕೊಂಡರು.

[29] ಮಿತ್ಕದಿಂದ ಹೊರಟು ಹಷ್ಮೋನದಲ್ಲಿ ಇಳಿದುಕೊಂಡರು.

[30] ಹಷ್ಮೋನದಿಂದ ಹೊರಟು ಮೋಸೇರೋತಿನಲ್ಲಿ ಇಳಿದುಕೊಂಡರು.

[31] ಮೋಸೇರೋತಿನಿಂದ ಹೊರಟು ಬೆನೇಯಾಕಾನಿನಲ್ಲಿ ಇಳಿದುಕೊಂಡರು.

[32] ಬೆನೇಯಾಕಾನಿನಿಂದ ಹೊರಟು ಹೋರ್ಹಗಿದ್ಗಾದಿನಲ್ಲಿ ಇಳಿದುಕೊಂಡರು.

[33] ಹೋರ್ಹಗಿದ್ಗಾದಿನಿಂದ ಹೊರಟು ಯೊಟ್ಬಾತದಲ್ಲಿ ಇಳಿದುಕೊಂಡರು.

[34] ಯೊಟ್ಬಾತದಿಂದ ಹೊರಟು ಅಬ್ರೋನದಲ್ಲಿ ಇಳಿದುಕೊಂಡರು.

[35] ಅಬ್ರೋನದಿಂದ ಹೊರಟು ಎಚ್ಯೋನ್ ಗೆಬೆರಿನಲ್ಲಿ ಇಳಿದುಕೊಂಡರು.

[36] ಎಚ್ಯೋನ್ ಗೆಬೆರಿನಿಂದ ಹೊರಟು ಕಾದೇಶೆಂಬ ಚಿನ್ ಮರುಭೂಮಿಯಲ್ಲಿ ಇಳಿದುಕೊಂಡರು.

[37] ಕಾದೇಶಿನಿಂದ ಹೊರಟು ಎದೋಮ್ಯರ ದೇಶದ ಅಂಚಿನಲ್ಲಿರುವ ಹೋರ್ ಬೆಟ್ಟದ ಬಳಿಯಲ್ಲಿ ಇಳಿದುಕೊಂಡರು.

[38] ಮಹಾಯಾಜಕನಾದ ಆರೋನನು ಯೆಹೋವನಿಂದ ಅಪ್ಪಣೆಯನ್ನು ಹೊಂದಿ ಹೋರ್ ಬೆಟ್ಟವನ್ನು ಹತ್ತಿ, ಇಸ್ರಾಯೇಲರು ಐಗುಪ್ತ ದೇಶದಿಂದ ಹೊರಟ ನಲ್ವತ್ತನೆಯ ವರ್ಷದ ಐದನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಅಲ್ಲೇ ಪ್ರಾಣಬಿಟ್ಟನು.

[39] ಆರೋನನು ಹೋರ್ ಬೆಟ್ಟದಲ್ಲಿ ಸತ್ತಾಗ ಅವನು ನೂರ ಇಪ್ಪತ್ತಮೂರು ವರ್ಷದವನಾಗಿದ್ದನು.

[40] ಇಸ್ರಾಯೇಲರು ಬರುತ್ತಾರೆಂಬ ವರ್ತಮಾನವನ್ನು ಕಾನಾನ್ ದೇಶದ ದಕ್ಷಿಣ ಪ್ರಾಂತ್ಯದಲ್ಲಿ ವಾಸವಾಗಿದ್ದ ಕಾನಾನ್ಯನಾದ ಅರಾದ್ ಪಟ್ಟಣದ ಅರಸನು ಕೇಳಿದನು.

[41] ಇಸ್ರಾಯೇಲರು ಹೋರ್ ಬೆಟ್ಟದಿಂದ ಹೊರಟು ಚಲ್ಮೋನದಲ್ಲಿ ಇಳಿದುಕೊಂಡರು.

[42] ಚಲ್ಮೋನದಿಂದ ಹೊರಟು ಪೂನೋನಿನಲ್ಲಿ ಇಳಿದುಕೊಂಡರು.

[43] ಪೂನೋನಿನಿಂದ ಹೊರಟು ಓಬೋತಿನಲ್ಲಿ ಇಳಿದುಕೊಂಡರು.

[44] ಓಬೋತಿನಿಂದ ಹೊರಟು ಮೋವಾಬ್ಯರ ಗಡಿಯಲ್ಲಿರುವ ಯೊರ್ದನ್ ನದಿಯ ಆಚೆಯಿರುವ ಇಯ್ಯೀಮಿನಲ್ಲಿ ಇಳಿದುಕೊಂಡರು.

[45] ಇಯ್ಯೀಮಿನಿಂದ ಹೊರಟು ದೀಬೋನ್ ಗಾದಿನಲ್ಲಿ ಇಳಿದುಕೊಂಡರು.

[46] ದೀಬೋನ್ ಗಾದಿನಿಂದ ಹೊರಟು ಅಲ್ಮೋನ್ ದಿಬ್ಲಾತಯಿಮಿನಲ್ಲಿ ಇಳಿದುಕೊಂಡರು.

[47] ಅಲ್ಮೋನ್ ದಿಬ್ಲಾತಯಿಮಿನಿಂದ ಹೊರಟು ಅಬಾರೀಮ್ ಬೆಟ್ಟಗಳಲ್ಲಿರುವ ನೇಬೋವಿನ ಪೂರ್ವದಲ್ಲಿ ಇಳಿದುಕೊಂಡರು.

[48] ಅಬಾರೀಮ್ ಬೆಟ್ಟಗಳಿಂದ ಹೊರಟು ಯೆರಿಕೋ ಪಟ್ಟಣದ ಹತ್ತಿರ ಯೊರ್ದನ್ ನದಿಯ ತೀರದಲ್ಲಿ ಮೋವಾಬ್ಯರ ಮೈದಾನದಲ್ಲಿ ಇಳಿದುಕೊಂಡರು.

[49] ಅವರು ಮೋವಾಬ್ಯರ ಮೈದಾನದಲ್ಲಿ ಬೇತ್ ಯೆಷೀಮೋತಿನಿಂದ ಆಬೇಲ್ ಶಿಟ್ಟೀಮಿನವರೆಗೂ ಯೊರ್ದನ್ ನದಿಯ ತೀರದಲ್ಲಿ ಇಳಿದುಕೊಂಡರು.

[50] ಯೊರ್ದನ್ ನದಿಯ ತೀರದಲ್ಲಿ ಯೆರಿಕೋ ಪಟ್ಟಣದ ಹತ್ತಿರವಿರುವ ಮೋವಾಬ್ಯರ ಮೈದಾನದಲ್ಲಿ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ,

[51] “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ನೀವು ಯೊರ್ದನ್ ನದಿಯನ್ನು ದಾಟಿ ಕಾನಾನ್ ದೇಶವನ್ನು ಸೇರಿದಾಗ,

[52] ಆ ದೇಶದ ನಿವಾಸಿಗಳನ್ನೆಲ್ಲಾ ಹೊರಡಿಸಿಬಿಟ್ಟು ಅವರ ವಿಚಿತ್ರವಾದ ಕಲ್ಲುಗಳನ್ನೂ, ಲೋಹವಿಗ್ರಹಗಳನ್ನೂ ನಾಶಮಾಡಿ ಅವರ ಪೂಜಾಸ್ಥಳಗಳನ್ನು ಹಾಳುಮಾಡಬೇಕು.

[53] ನಾನು ನಿಮಗೆ ಆ ದೇಶವನ್ನು ಸ್ವದೇಶವಾಗುವುದಕ್ಕೆ ಕೊಟ್ಟದರಿಂದ ನೀವು ಅದನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಿಸಬೇಕು.

[54] ನೀವು ಚೀಟುಹಾಕಿ ಆ ದೇಶವನ್ನು ನಿಮ್ಮನಿಮ್ಮ ಕುಟುಂಬಗಳಿಗೆ ಹಂಚಿಕೊಳ್ಳಬೇಕು. ಹೆಚ್ಚು ಮಂದಿಯುಳ್ಳ ಕುಟುಂಬಕ್ಕೆ ಹೆಚ್ಚಾಗಿಯೂ, ಕಡಿಮೆಯಾದ ಕುಟುಂಬಕ್ಕೆ ಕಡಿಮೆಯಾಗಿಯೂ ಸ್ವತ್ತು ದೊರಕಬೇಕು. ಒಂದೊಂದು ಕುಟುಂಬದ ಚೀಟು ಯಾವ ಯಾವ ಸ್ಥಳವನ್ನು ಸೂಚಿಸುವುದೋ ಆ ಸ್ಥಳದಲ್ಲಿಯೇ ಆ ಕುಟುಂಬದ ಸ್ವಾಸ್ತ್ಯವಿರಬೇಕು. ಒಂದೊಂದು ಕುಲದ ಕುಟುಂಬಗಳು ಒಂದೇ ಪ್ರದೇಶದಲ್ಲಿರಬೇಕು.

[55] ನೀವು ದೇಶದ ನಿವಾಸಿಗಳನ್ನು ಹೊರಡಿಸಿಬಿಡದೆ ಹೋದರೆ ಅವರಲ್ಲಿ ನೀವು ಉಳಿಸಿದವರು ನಿಮಗೆ ಕಣ್ಣುಚುಚ್ಚುವ ಮುಳ್ಳುಗಳಂತೆಯೂ, ಪಕ್ಕೆತಿವಿಯುವ ಶೂಲಗಳಂತೆಯೂ, ಆಗಿ ನೀವು ವಾಸಿಸುವ ದೇಶದಲ್ಲಿ ನಿಮಗೆ ಕಂಟಕರಾಗಿರುವರು.

[56] ಅದಲ್ಲದೆ ನಾನು ಅವರಿಗೆ ಏನು ಮಾಡಬೇಕೆಂದು ಯೋಚಿಸಿದೇನೋ ಹಾಗೆ ನಿಮಗೂ ಮಾಡುವೆನು.’”

ಅರಣ್ಯಕಾಂಡ — Chapters