Skip to content
Opens in a new window
Listen to this chapter • 6:14

[1] ಯೆಹೋವನು ಮೋಶೆಯ ಸಂಗಡ ಮಾತನಾಡಿ, ಆಜ್ಞಾಪಿಸಿದ್ದೇನೆಂದರೆ,

[2] “ನೀನು ಬೆಳ್ಳಿಯ ತಗಡಿನಿಂದ ಎರಡು ತುತ್ತೂರಿಗಳನ್ನು ಮಾಡಿಸಬೇಕು. ಜನಸಮೂಹದವರನ್ನು ಕೂಡಿಸುವುದಕ್ಕೂ ಮತ್ತು ದಂಡುಗಳನ್ನು ಹೊರಡಿಸುವುದಕ್ಕೂ ಅವುಗಳನ್ನು ಉಪಯೋಗಿಸಬೇಕು.

[3] ನೀನು ತುತ್ತೂರಿಗಳನ್ನು ಊದಿಸುವಾಗ ಜನಸಮೂಹದವರೆಲ್ಲರೂ ನಿನ್ನ ಹತ್ತಿರ ದೇವದರ್ಶನದ ಗುಡಾರದ ಬಾಗಿಲಿಗೆ ಕೂಡಿಬರಬೇಕು.

[4] ನೀನು ಒಂದನ್ನು ಮಾತ್ರ ಊದಿಸುವಾಗ ಇಸ್ರಾಯೇಲರ ಕುಲಾಧಿಪತಿಗಳಾದ ಪ್ರಧಾನರು ನಿನ್ನ ಬಳಿಗೆ ಕೂಡಿಬರಬೇಕು.

[5] ನೀನು ಆರ್ಭಟವಾಗಿ ಊದಿಸುವಾಗ ಪೂರ್ವದಿಕ್ಕಿನ ದಂಡುಗಳು ಹೊರಡಬೇಕು.

[6] ಎರಡನೆಯ ಸಾರಿ ಆರ್ಭಟವಾಗಿ ಊದಿಸುವಾಗ ದಕ್ಷಿಣ ದಿಕ್ಕಿನ ದಂಡುಗಳು ಹೊರಡಬೇಕು. ಹೀಗೆ ಪ್ರಯಾಣಕ್ಕೆ ಹೊರಡಬೇಕಾದಾಗ ಆರ್ಭಟವಾಗಿಯೇ ಊದಿಸಬೇಕು.

[7] ಜನಸಮೂಹದವರು ಕೂಡಿಬರಬೇಕಾದಾಗ ಸಾಧಾರಣವಾಗಿ ಊದಿಸಬೇಕೇ ಹೊರತು ಆರ್ಭಟವಾಗಿ ಊದಿಸಬಾರದು.

[8] “ಆರೋನನ ವಂಶಸ್ಥರಾದ ಯಾಜಕರೇ ಆ ತುತ್ತೂರಿಗಳನ್ನು ಊದಬೇಕು. ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮವಾಗಿರಲಿ.

[9] ನೀವು ಸ್ವದೇಶವನ್ನು ಸೇರಿದ ಮೇಲೆ ನಿಮ್ಮನ್ನು ಉಪದ್ರವಪಡಿಸುವ ಶತ್ರುಗಳನ್ನು ಎದುರಿಸುವುದಕ್ಕಾಗಿ ಯುದ್ಧಕ್ಕೆ ಹೊರಡುವಾಗ ಆ ತುತ್ತೂರಿಗಳನ್ನು ಆರ್ಭಟವಾಗಿ ಊದಿಸಬೇಕು. ಆಗ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಜ್ಞಾಪಕಕ್ಕೆ ತಂದುಕೊಂಡು ಶತ್ರುಗಳ ಕೈಯಿಂದ ರಕ್ಷಿಸುವನು.

[10] ಇದಲ್ಲದೆ ನೀವು ಉತ್ಸವ ಕಾಲಗಳಲ್ಲಿಯು, ಹಬ್ಬಗಳಲ್ಲಿಯು, ಅಮಾವಾಸ್ಯೆಗಳಲ್ಲಿಯು ಸರ್ವಾಂಗಹೋಮಗಳನ್ನೂ, ಸಮಾಧಾನಯಜ್ಞಗಳನ್ನೂ ಸಮರ್ಪಿಸುವಾಗ ಆ ತುತ್ತೂರಿಗಳನ್ನು ಊದಿಸಬೇಕು. ಆ ತುತ್ತೂರಿಯ ಧ್ವನಿಯು ನಿಮ್ಮನ್ನು ನಿಮ್ಮ ದೇವರ ಜ್ಞಾಪಕಕ್ಕೆ ತರುವುದು, ನಾನೇ ನಿಮ್ಮ ದೇವರಾದ ಯೆಹೋವನು.”

[11] ಎರಡನೆಯ ವರ್ಷದ ಎರಡನೆಯ ತಿಂಗಳಿನ ಇಪ್ಪತ್ತನೆಯ ದಿನದಲ್ಲಿ ದೇವದರ್ಶನದ ಗುಡಾರದ ಮೇಲಿದ್ದ ಮೇಘವು ಮೇಲಕ್ಕೆ ಎದ್ದಿತು.

[12] ಆದುದರಿಂದ ಇಸ್ರಾಯೇಲರು ಸೀನಾಯಿ ಅರಣ್ಯವನ್ನು ಬಿಟ್ಟು ಮುಂದೆ ಮುಂದೆ ಪ್ರಯಾಣಮಾಡಿದರು. ತರುವಾಯ ಆ ಮೇಘವು ಪಾರಾನ್ ಅರಣ್ಯದಲ್ಲಿ ನಿಂತಿತು.

[13] ಯೆಹೋವನು ಮೋಶೆಯ ಮೂಲಕ ಆಜ್ಞಾಪಿಸಿದ ರೀತಿಯಲ್ಲಿ ಅವರು ಪ್ರಯಾಣಮಾಡಿದ್ದು ಇದೇ ಮೊದಲನೆಯ ಸಾರಿ.

[14] ಮುಂಭಾಗದಲ್ಲಿ ಯೆಹೂದ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ಹೊರಟರು. ಅವರಿಗೆ ಸೇನಾನಾಯಕನಾಗಿ ಇದ್ದವನು ಅಮ್ಮೀನಾದಾಬನ ಮಗನಾದ ನಹಶೋನನು.

[15] ಇಸ್ಸಾಕಾರ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಚೂವಾರನ ಮಗನಾದ ನೆತನೇಲನು.

[16] ಜೆಬುಲೂನ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಹೇಲೋನನ ಮಗನಾದ ಎಲೀಯಾಬನು.

[17] ತರುವಾಯ ದೇವದರ್ಶನದ ಗುಡಾರವನ್ನು ಇಳಿಸಿದಾಗ ಗೇರ್ಷೋನ್ಯರು ಮತ್ತು ಮೆರಾರೀಯರೂ ಅದನ್ನು ಹೊತ್ತುಕೊಂಡು ಹೊರಟರು.

[18] ಆಮೇಲೆ ರೂಬೇನ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ಹೊರಟರು. ಅವರಿಗೆ ಸೇನಾನಾಯಕನಾಗಿ ಇದ್ದವನು ಶೆದೇಯೂರನ ಮಗನಾದ ಎಲೀಚೂರನು.

[19] ಸಿಮೆಯೋನ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಚೂರೀಷದ್ದೈಯ ಮಗನಾದ ಶೆಲುಮೀಯೇಲನು.

[20] ಗಾದ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ದೆಗೂವೇಲನ ಮಗನಾದ ಎಲ್ಯಾಸಾಫನು.

[21] ಅವರ ಹಿಂದೆ ಕೆಹಾತ್ಯರು ದೇವಾಲಯದ ಸಾಮಾನುಗಳನ್ನು ಹೊತ್ತುಕೊಂಡು ಹೊರಟರು. ಅವರು ಬರುವಷ್ಟರೊಳಗೆ ಉಳಿದ ಲೇವಿಯರು ದೇವದರ್ಶನದ ಗುಡಾರವನ್ನು ನಿಲ್ಲಿಸಿದರು.

[22] ಆ ಮೇಲೆ ಎಫ್ರಾಯೀಮ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ಹೊರಟರು. ಅವರಿಗೆ ಸೇನಾನಾಯಕನಾಗಿ ಇದ್ದವನು ಅಮ್ಮೀಹೂದನ ಮಗನಾದ ಎಲೀಷಾಮನು.

[23] ಮನಸ್ಸೆ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಪೆದಾಚೂರನ ಮಗನಾದ ಗಮ್ಲೀಯೇಲನು.

[24] ಬೆನ್ಯಾಮೀನ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಗಿದ್ಯೋನಿಯ ಮಗನಾದ ಅಬೀದಾನನು.

[25] ಆ ಮೇಲೆ ಎಲ್ಲಾ ದಂಡುಗಳ ಹಿಂಭಾಗದಲ್ಲಿ ದಾನ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ಹೊರಟರು. ಅವರ ಸೇನಾನಾಯಕನಾಗಿ ಇದ್ದವನು ಅಮ್ಮೀಷದ್ದೈಯ ಮಗನಾದ ಅಹೀಗೆಜೆರನು.

[26] ಆಶೇರ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಒಕ್ರಾನನ ಮಗನಾದ ಪಗೀಯೇಲನು.

[27] ನಫ್ತಾಲಿ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಏನಾನನ ಮಗನಾದ ಅಹೀರನು.

[28] ಈ ರೀತಿಯಲ್ಲಿ ಇಸ್ರಾಯೇಲರು ಸೈನ್ಯಸೈನ್ಯವಾಗಿ ಹೊರಟು ಪ್ರಯಾಣಮಾಡಿದರು.

[29] ಮೋಶೆಯು ತನ್ನ ಮಾವನಾಗಿದ್ದ ಮಿದ್ಯಾನ್ಯನಾದ ರೆಗೂವೇಲನ ಮಗನಾದ ಹೋಬಾಬನಿಗೆ, “ಯೆಹೋವನು ನಮಗೆ ಕೊಡುತ್ತೇನೆಂದು ವಾಗ್ದಾನ ಮಾಡಿದ ದೇಶಕ್ಕೆ ನಾವು ಪ್ರಯಾಣಮಾಡುತ್ತಾ ಇದ್ದೇವೆ. ಇಸ್ರಾಯೇಲರಿಗೆ ಒಳಿತನ್ನು ಉಂಟುಮಾಡುತ್ತೇನೆಂದು ಯೆಹೋವನು ತಾನೇ ಹೇಳಿದ್ದಾನೆ. ಆದುದರಿಂದ ನೀನೂ ನಮ್ಮ ಜೊತೆಯಲ್ಲಿ ಬಾ; ನಮ್ಮಿಂದ ನಿನಗೂ ಒಳ್ಳೆಯದಾಗುವುದು” ಎಂದು ಹೇಳಿದನು.

[30] ಆದರೆ ಹೋಬಾಬನು ಮೋಶೆಗೆ, “ನಾನು ಬರುವುದಿಲ್ಲ; ನನ್ನ ಸ್ವದೇಶಕ್ಕೆ, ನನ್ನ ಸ್ವಜನರ ಬಳಿಗೆ ಹೋಗುತ್ತೇನೆ” ಎಂದು ಹೇಳಿದನು.

[31] ಅದಕ್ಕೆ ಮೋಶೆಯು ಉತ್ತರವಾಗಿ, “ನಮ್ಮನ್ನು ಬಿಟ್ಟು ಹೋಗಬೇಡವೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. ಈ ಮರುಭೂಮಿಯಲ್ಲಿ ಡೇರೆಗಳನ್ನು ಹಾಕುವ ಸ್ಥಳಗಳು ನಿನಗೆ ಮಾತ್ರ ಗೊತ್ತಿದೆ. ಆದುದರಿಂದ ನೀನು ನಮಗೆ ಕಣ್ಣಾಗಿರಬೇಕು.

[32] ನೀನು ನಮ್ಮ ಸಂಗಡ ಬಂದರೆ ಯೆಹೋವನು ನಮಗೆ ಮಾಡುವ ಒಳ್ಳೆಯದನ್ನೆಲ್ಲಾ ನಾವು ನಿನಗೂ ಉಂಟಾಗುವಂತೆ ಮಾಡುವೆವು” ಎಂದು ಹೇಳಿದನು.

[33] ಅವರು ಯೆಹೋವನ ಬೆಟ್ಟವನ್ನು ಬಿಟ್ಟು ಮೂರು ದಿನದ ಪ್ರಯಾಣದಷ್ಟು ದೂರ ಹೋದರು. ಇಳಿದುಕೊಳ್ಳಲು ಸೂಕ್ತವಾದ ಸ್ಥಳವನ್ನು ನೋಡುವುದಕ್ಕಾಗಿ ಯೆಹೋವನ ಒಡಂಬಡಿಕೆಯ ಮಂಜೂಷವು ಆ ಮೂರು ದಿನಗಳು ಅವರ ಮುಂದಾಗಿ ಹೋಗುತ್ತಿತ್ತು.

[34] ಅವರು ಪಾಳೆಯದಿಂದ ಹೊರಡುವಾಗ ಹಗಲು ಹೊತ್ತಿನಲ್ಲಿ ಯೆಹೋವನ ಮೇಘವು ಅವರ ಮೇಲೆ ಇರುತ್ತಿತ್ತು.

[35] ಯೆಹೋವನ ಮಂಜೂಷ ಪೆಟ್ಟಿಗೆಯು ಹೊರಡುವಾಗ ಮೋಶೆ, “ಯೆಹೋವನೇ, ಎದ್ದು ಹೊರಡೋಣವಾಗಲಿ; ನಿನ್ನ ವೈರಿಗಳು ಚದರಿಹೋಗಲಿ; ನಿನ್ನ ಶತ್ರುಗಳು ಬೆನ್ನು ತೋರಿಸಿ ಓಡಿಹೋಗಲಿ” ಎಂದು ಹೇಳುವನು.

[36] ಅದು ನಿಂತಾಗ ಅವನು, “ಯೆಹೋವನೇ, ಇಸ್ರಾಯೇಲರ ಲಕ್ಷಾಂತರ ಕುಟುಂಬಗಳ ಮಧ್ಯದಲ್ಲಿ ಮರಳಿ ಆಗಮಿಸು” ಎಂದು ಹೇಳುವನು.

ಅರಣ್ಯಕಾಂಡ — Chapters