Skip to content
Opens in a new window
Listen to this chapter • 4:25

[1] ಇಸ್ರಾಯೇಲರಿಗೆ ಶುಭವಾಗಬೇಕೆಂಬುದು ಯೆಹೋವನ ಚಿತ್ತವೆಂದು ಬಿಳಾಮನು ತಿಳಿದು ಮೊದಲಿನಂತೆ ಶಕುನ ನೋಡುವುದಕ್ಕೆ ಹೋಗದೆ ಅರಣ್ಯದ ಕಡೆಗೆ ಮುಖವನ್ನು ತಿರುಗಿಸಿಕೊಂಡನು.

[2] ಬಿಳಾಮನು ಕಣ್ಣೆತ್ತಿ ನೋಡಲಾಗಿ ಕುಲಗಳ ಪ್ರಕಾರ ಡೇರೆಗಳನ್ನು ಹಾಕಿಕೊಂಡಿದ್ದ ಇಸ್ರಾಯೇಲರು ಅವನಿಗೆ ಕಾಣಿಸಿದರು. ಆಗ ಅವನು ದೇವರಾತ್ಮಪ್ರೇರಿತನಾಗಿ,

[3] ಹೀಗೆ ಪ್ರವಾದಿಸಿದನು, “ಬೆಯೋರನ ಮಗನಾದ ಬಿಳಾಮನು ಹೇಳಿದ್ದು, ಮನೋದೃಷ್ಟಿಯಿಂದ ನೋಡುವ ಪುರುಷನು ನುಡಿದದ್ದು.

[4] ದೇವರ ಮಾತುಗಳನ್ನು ಕೇಳುವವನಾಗಿಯೂ, ಸರ್ವಶಕ್ತನ ದರ್ಶನವನ್ನು ಹೊಂದುವವನಾಗಿಯೂ ಪರವಶವಾಗಿ ತೆರೆದ ಕಣ್ಣುಳ್ಳವನೂ ಹೇಳಿದ್ದು.

[5] ಯಾಕೋಬೇ, ನಿಮ್ಮ ಡೇರೆಗಳು ಎಷ್ಟೋ ಚೆಲುವಾಗಿವೆ, ಇಸ್ರಾಯೇಲರೇ, ನಿಮ್ಮ ನಿವಾಸಗಳು ಎಷ್ಟೋ ರಮ್ಯವಾಗಿವೆ.

[6] ಅವು ಕಣಿವೆಗಳ ಹಾಗೆಯೇ ವಿಸ್ತರಿಸಿದೆ. ನದಿಯ ಬಳಿಯಲ್ಲಿರುವ ತೋಟಗಳಂತೆಯೂ, ಯೆಹೋವನು ನೆಟ್ಟ ಅಗರು ಮರಗಳ ಹಾಗೆಯೂ ನೀರಿನ ಬಳಿಯಲ್ಲಿರುವ ದೇವದಾರುವೃಕ್ಷಗಳಿಗೂ ಸಮಾನವಾಗಿವೆ.

[7] ತನ್ನ ತೊಟ್ಟಿಗಳಿಂದ ನೀರು ಹರಿಯುತ್ತಲೇ ಇದೆ, ಅವರ ಬಿತ್ತನೆಗೆ ಬೇಕಾದಷ್ಟು ನೀರು ಇರುವುದು. ಅವರ ಅರಸನು ಅಗಾಗ್ ರಾಜನಿಗಿಂತಲೂ ದೊಡ್ಡವನಾಗಿರುವನು. ಅವರ ರಾಜ್ಯವು ಅಭಿವೃದ್ಧಿಯಲ್ಲಿರುವುದು.

[8] ದೇವರು ಅವನನ್ನು ಐಗುಪ್ತ ದೇಶದಿಂದ ಕರೆದುಕೊಂಡು ಬಂದನು. ಅವರು ಕಾಡುಕೋಣದಷ್ಟು ಬಲವುಳ್ಳವರು. ಅವರು ಶತ್ರುಜನರನ್ನು ನಿರ್ಮೂಲಮಾಡುವರು. ವೈರಿಗಳ ಎಲುಬುಗಳನ್ನು ಮುರಿದುಹಾಕುವರು. ಅವರನ್ನು ಬಾಣಗಳಿಂದ ಗಾಯಪಡಿಸುವರು.

[9] ಆ ಜನಾಂಗವು ಸಿಂಹದಂತೆ ಕಾಲುಮುದುರಿ ಹೊಂಚುಹಾಕಿಕೊಂಡಿದೆ, ಮೃಗೇಂದ್ರನಿಗೆ ಸಮನಾದ ಆ ಜನರನ್ನು ಕೆಣಕುವುದು ಯಾರಿಂದಾದೀತು? ಇಸ್ರಾಯೇಲರೇ, ನಿಮ್ಮನ್ನು ಆಶೀರ್ವದಿಸುವವನಿಗೆ ಆಶೀರ್ವಾದವೂ, ಶಪಿಸುವವನಿಗೆ ಶಾಪವೂ ಉಂಟಾಗುವುದು” ಎಂದನು.

[10] ಆಗ ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು ಚಪ್ಪಾಳೆಹೊಡೆದು ಅವನಿಗೆ, “ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆದೆನು. ಆದರೆ ಇಗೋ, ನೀನು ಅವರನ್ನು ಮೂರು ಸಾರಿಯೂ ಆಶೀರ್ವದಿಸಿದೆ.

[11] ಆದಕಾರಣ ನನ್ನನ್ನು ಬಿಟ್ಟು ನಿನ್ನ ಊರಿಗೆ ಹೋಗಿಬಿಡು. ನಿನ್ನನ್ನು ಬಹಳವಾಗಿ ಸನ್ಮಾನಿಸಿ ಘನಪಡಿಸುವೆನೆಂದು ಹೇಳಿಕೊಂಡೆನು. ಆದರೆ ನಿನಗೆ ಸನ್ಮಾನಮಾಡದಂತೆ ಯೆಹೋವನು ಅಡ್ಡಿಮಾಡಿದ್ದಾನೆ” ಎಂದು ಹೇಳಿದನು.

[12] ಅದಕ್ಕೆ ಬಿಳಾಮನು ಬಾಲಾಕನಿಗೆ, “ನೀನು ನನ್ನ ಬಳಿ ಕಳುಹಿಸಿದ ಸೇವಕನಿಗೆ,

[13] ‘ಬಾಲಾಕನು ನನಗೆ ತನ್ನ ಮನೇ ತುಂಬುವಷ್ಟು ಬೆಳ್ಳಿಬಂಗಾರವನ್ನು ದಾನಮಾಡಿದರೂ ನಾನು ಯೆಹೋವನ ಆಜ್ಞೆಯನ್ನು ಮೀರಿ ನನ್ನ ಇಷ್ಟದಂತೆ ಒಳ್ಳೇಯದನ್ನಾದರೂ, ಕೆಟ್ಟದ್ದನ್ನಾದರೂ ಮಾಡಲಾರೆ. ಯೆಹೋವನು ಏನು ಹೇಳುತ್ತಾನೋ ಅದನ್ನೇ ಮಾತನಾಡುವೆನು ಎಂದು ಹೇಳಲಿಲ್ಲವೋ?’

[14] ಈಗ ನಾನು ನನ್ನ ಜನರ ಬಳಿಗೆ ಹೋಗುತ್ತೇನೆ. ಆದರೆ ಕಡೆಗೆ ಆ ಜನರು ನಿನ್ನ ಜನರಿಗೆ ಮುಂದಿನ ದಿನಗಳಲ್ಲಿ ಏನು ಮಾಡುವರೋ ಅದನ್ನು ನಿನಗೆ ತಿಳಿಸುತ್ತೇನೆ” ಎಂದನು.

[15] ಬಿಳಾಮನು ಪದ್ಯರೂಪವಾಗಿ ಪ್ರವಾದಿಸಿದನು, “ಬೆಯೋರನ ಮಗನಾದ ಬಿಳಾಮನಿಗುಂಟಾದ ದೈವೋಕ್ತಿ, ಮನೋದೃಷ್ಟಿಯಿಂದ ನೋಡುವ ಪುರುಷನು ನುಡಿದದ್ದು.

[16] ದೇವರ ಮಾತುಗಳನ್ನು ಕೇಳುವವನೂ, ಪರಾತ್ಪರನಾದ ದೇವರ ಜ್ಞಾನವನ್ನು ಪಡೆದವನೂ, ಪರವಶವಾಗಿ ಕಣ್ಣುತೆರೆದು, ಸರ್ವಶಕ್ತನ ದರ್ಶನವನ್ನು ಹೊಂದುವವನೂ ಆಗಿರುವ ಪುರುಷನು ನುಡಿದದ್ದು.

[17] ನಾನು ಅವನನ್ನು ನೋಡುವೆನು, ಈಗಲ್ಲ. ಆತನನ್ನು ದೃಷ್ಟಿಸುವೆನು, ಆದರೆ ಸಮೀಪದಲ್ಲಿ ಅಲ್ಲ. ಯಾಕೋಬ ವಂಶದವರಲ್ಲಿ ನಕ್ಷತ್ರವು ಉದಯಿಸುವುದು. ಇಸ್ರಾಯೇಲರಲ್ಲಿ ರಾಜದಂಡವು ಏಳುವುದು. ಅದು ಮೋವಾಬ್ಯರ ತಲೆಯನ್ನು ಸೀಳಿಹಾಕುವುದು ಸೇತನ ಎಲ್ಲಾ ಮಕ್ಕಳನ್ನು ಸಂಹರಿಸಿವುದು.

[18] ಅದಲ್ಲದೆ ಇಸ್ರಾಯೇಲರು ಎದೋಮ್ಯರ ದೇಶವನ್ನೂ ಸ್ವಾಧೀನಪಡಿಸಿಕೊಂಡಿದ್ದಾರೆ, ಹಗೆಗಳಾದ ಸೇಯೀರಿನವರು ಅವನಿಗೆ ಅಧೀನರಾದರು.

[19] ಇಸ್ರಾಯೇಲರೋ ಬಲಗೊಂಡವರು, ಯಾಕೋಬ್ಯರಿಗೇ ದೊರೆತನವಾಯಿತು, ಪಟ್ಟಣಗಳಿಂದ ತಪ್ಪಿಸಿಕೊಂಡವರೂ ನಾಶವಾದರು” ಎಂದನು.

[20] ತರುವಾಯ ಅಮಾಲೇಕ್ಯರನ್ನು ನೋಡಿ ಅವರ ವಿಷಯದಲ್ಲಿ ಪ್ರವಾದಿಸಿದ್ದೇನೆಂದರೆ, “ಅಮಾಲೇಕ್ಯರು ಜನಾಂಗಗಳಲ್ಲಿ ಪ್ರಮುಖರಲ್ಲವೇ, ಆದರೂ ನಾಶನವೇ ಅವರ ಗತಿ.”

[21] ಬಳಿಕ ಅವನು ಕೇನ್ಯರನ್ನು ನೋಡಿ ಅವರ ವಿಷಯದಲ್ಲಿ ಪ್ರವಾದಿಸಿದ್ದೇನೆಂದರೆ, “ನಿಮ್ಮ ನಿವಾಸ ಸ್ಥಳವು ಶಾಶ್ವತವಾಗಿಯೇ ತೋರುತ್ತದೆ, ಬೆಟ್ಟದ ತುದಿಯಲ್ಲಿ ಗೂಡನ್ನು ಮಾಡಿಕೊಂಡಿದ್ದೀರಿ.

[22] ಆದರೂ ಕೇನ್ಯರೂ ನಾಶವಾಗುವರು. ಅದು ಎಷ್ಟು ದೂರ ಅನ್ನುತ್ತೀರೋ? ಅಶ್ಶೂರ್ಯರೇ ನಿಮ್ಮನ್ನು ಸೆರೆಹಿಡಿದುಕೊಂಡು ಹೋಗುವರು.”

[23] ಅವನು ಮತ್ತೂ ಕಡೆಯದಾಗಿ ಪ್ರವಾದಿಸಿದ್ದೇನೆಂದರೆ, “ಅಯ್ಯೋ! ದೇವರು ಹೀಗೆ ಮಾಡುವಾಗ ಯಾರು ಉಳಿಯುವರು?

[24] ಕಿತ್ತೀಮೆಂಬ ಸ್ಥಳದಿಂದ ಜನರು ಹಡಗುಗಳಲ್ಲಿ ಬಂದು ಅಶ್ಶೂರ್ಯರನ್ನೂ ಏಬೆರ್ ಜನರನ್ನೂ ಸೋಲಿಸುವರು; ಅವರಿಗೂ ನಾಶನವುಂಟಾಗುವುದು” ಎಂದನು.

[25] ತರುವಾಯ ಬಿಳಾಮನು ಸ್ವದೇಶಕ್ಕೆ ತಿರುಗಿ ಹೋದನು, ಬಾಲಾಕನೂ ಹೊರಟುಹೋದನು.

ಅರಣ್ಯಕಾಂಡ — Chapters