Skip to content
Opens in a new window
Listen to this chapter • 2:31

[1] ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ,

[2] “ನೀನು ಇಸ್ರಾಯೇಲರ ಸಂಗಡ ಮಾತನಾಡಿ, ‘ಅವರ ಪೂರ್ವಿಕರ ಒಂದೊಂದು ಕುಲದ ಅಧಿಪತಿಯಿಂದ ಗೋತ್ರಗಳ ಪ್ರಕಾರವಾಗಿ ಒಂದೊಂದು ಕೋಲುಗಳನ್ನು ತೆಗೆದುಕೊಳ್ಳಬೇಕು. ಗೋತ್ರಗಳ ಪ್ರಕಾರವಾಗಿ ಒಬ್ಬೊಬ್ಬ ಪ್ರಧಾನರ ಹೆಸರಿನಲ್ಲಿ ಹನ್ನೆರಡು ಕೋಲುಗಳನ್ನು ತೆಗೆದುಕೊಳ್ಳಬೇಕು. ಅವನವನ ಕೋಲಿನ ಮೇಲೆ ಅವರ ಹೆಸರನ್ನು ಬರೆಯಿಸಬೇಕು.

[3] ಲೇವಿ ಕುಲಕ್ಕೂ ಒಂದು ಕೋಲು ಇರುವುದರಿಂದ ಅದರ ಮೇಲೆ ಆರೋನನ ಹೆಸರನ್ನು ಬರೆಯಿಸಬೇಕು ಏಕೆಂದರೆ ಅವರ ಪೂರ್ವಿಕರ ಗೋತ್ರದ ಮುಖ್ಯಸ್ಥನಿಗೆ ಒಂದು ಕೋಲು ಇರಬೇಕು.

[4] ನೀನು ಆ ಕೋಲುಗಳನ್ನು ದೇವದರ್ಶನದ ಗುಡಾರದಲ್ಲಿ ಆಜ್ಞಾಶಾಸನಗಳ ಮುಂದೆ ನಾನು ನಿಮಗೆ ದರ್ಶನಕೊಡುವ ಸ್ಥಳದಲ್ಲಿ ಇಡಬೇಕು.

[5] ನಾನು ಯಾರನ್ನು ಆಯ್ದುಕೊಳ್ಳುತ್ತೇನೋ ಅವನ ಕೋಲು ಚಿಗುರುವುದು. ಇಸ್ರಾಯೇಲರು ನಿಮ್ಮಿಬ್ಬರ ವಿರುದ್ಧವಾಗಿ ಗುಣುಗುಟ್ಟುವುದನ್ನು ನಾನು ನಿಲ್ಲಿಸಿ ಬಿಡುವೆನು’” ಎಂದನು.

[6] ಅದಕ್ಕೆ ಮೋಶೆಯು ಇಸ್ರಾಯೇಲರ ಸಂಗಡ ಮಾತನಾಡಿದನು. ಅವರ ಕುಲಾಧಿಪತಿಗಳೆಲ್ಲರೂ ಕುಲಕ್ಕೆ ಒಂದು ಕೋಲಿನ ಪ್ರಕಾರ ಹನ್ನೆರಡು ಕೋಲುಗಳನ್ನು ಅವನ ಕೈಗೆ ಕೊಟ್ಟರು. ಅವುಗಳೊಡನೆ ಆರೋನನ ಕೋಲೂ ಇತ್ತು.

[7] ಮೋಶೆ ಆ ಕೋಲುಗಳನ್ನು ಆಜ್ಞಾಶಾಸನಗಳಿರುವ ಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿ ಇಟ್ಟನು.

[8] ಮರುದಿನ ಮೋಶೆಯು ಆಜ್ಞಾಶಾಸನಗಳಿರುವ ಗುಡಾರದಲ್ಲಿ ಹೋಗಿ ನೋಡಲಾಗಿ ಅಗೋ, ಲೇವಿ ಕುಲಕ್ಕೋಸ್ಕರ ಆರೋನನಿಗೆ ಕೊಟ್ಟಿದ್ದ ಕೋಲು ಚಿಗುರಿ, ಮೊಗ್ಗುಬಿಟ್ಟು ಹೂವಾಗಿ ಬಾದಾಮಿ ಹಣ್ಣುಗಳನ್ನು ಫಲಿಸಿತ್ತು!

[9] ಮೋಶೆ ಆ ಕೋಲುಗಳನ್ನೆಲ್ಲಾ ಯೆಹೋವನ ಸನ್ನಿಧಿಯಿಂದ ಇಸ್ರಾಯೇಲರ ಬಳಿಗೆ ತಂದು ತೋರಿಸಿದನು. ಅವರು ನೋಡಿ ತಮ್ಮತಮ್ಮ ಕೋಲುಗಳನ್ನು ಪರೀಕ್ಷಿಸಿ ತೆಗೆದುಕೊಂಡರು.

[10] ತರುವಾಯ ಯೆಹೋವನು ಮೋಶೆಗೆ, “ಆರೋನನ ಕೋಲನ್ನು ತಿರುಗಿ ಆಜ್ಞಾಶಾಸನಗಳ ಮುಂದೆ ಇಡಬೇಕು. ಅದು ತಿರುಗಿಬೀಳುವವರಿಗೆ ದೃಷ್ಟಾಂತವಾಗಿ ಅಲ್ಲೇ ಇರಬೇಕು. ಇವರು ಇನ್ನು ಮುಂದೆ ನನಗೆ ವಿರುದ್ಧವಾಗಿ ಗುಣುಗುಟ್ಟಿ ನಾಶವಾಗದಂತೆ ನೀನು ಹೀಗೆ ಮಾಡು” ಎಂದು ಆಜ್ಞಾಪಿಸಿದನು.

[11] ಯೆಹೋವನ ಅಪ್ಪಣೆಯ ಪ್ರಕಾರವೇ ಮೋಶೆ ಮಾಡಿದನು.

[12] ಇಸ್ರಾಯೇಲರು ಮೋಶೆಯ ಬಳಿಗೆ ಬಂದು ಅವನಿಗೆ, “ನಾವು ಇಲ್ಲಿ ಸಾಯುತ್ತೇವೆ; ಇಲ್ಲವೇ ನಾಶವಾಗಿ ಹೋಗುತ್ತೇವೆ.

[13] ಯೆಹೋವನ ಗುಡಾರದ ಹತ್ತಿರಕ್ಕೆ ಬರುವವರೆಲ್ಲರೂ ಸಾಯುತ್ತಾರಷ್ಟೆ; ನಾವೆಲ್ಲರೂ ಹಾಗೆಯೇ ಸಾಯಬೇಕೇನು?” ಎಂದು ಕೇಳಿದರು.

ಅರಣ್ಯಕಾಂಡ — Chapters