Skip to content
Opens in a new window
Listen to this chapter • 7:34

[1] ಯೆಹೋವನು ಮೋಶೆಯ ಸಂಗಡ ಮಾತನಾಡಿ,

[2] “ನೀನು ಇಸ್ರಾಯೇಲರಿಗೋಸ್ಕರ ಮಿದ್ಯಾನ್ಯರಿಗೆ ಪ್ರತಿದಂಡನೆಯನ್ನು ಮಾಡಬೇಕು. ಅನಂತರ ನೀನು ಪೂರ್ವಿಕರ ಬಳಿಗೆ ಸೇರಬೇಕು” ಎಂದು ಹೇಳಿದನು.

[3] ಆಗ ಮೋಶೆಯು ಇಸ್ರಾಯೇಲರಿಗೆ, “ನಿಮ್ಮೊಳಗಿಂದ ಕೆಲವರು ಮಿದ್ಯಾನ್ಯರಿಗೆ ವಿರುದ್ಧವಾಗಿ ಯುದ್ಧಕ್ಕೆ ಸಿದ್ಧಮಾಡಿಕೊಳ್ಳಬೇಕು. ಯೆಹೋವನ ಪ್ರತಿದಂಡನೆಯನ್ನು ಅವರಿಗೆ ತೀರಿಸಬೇಕು.

[4] ಇಸ್ರಾಯೇಲರ ಒಂದೊಂದು ಕುಲದಿಂದ ಸಾವಿರ ಜನ ಭಟರನ್ನು ಮಿದ್ಯಾನ್ಯರಿಗೆ ವಿರುದ್ಧವಾಗಿ ಯುದ್ಧಕ್ಕೆ ಕಳುಹಿಸಬೇಕು.”

[5] ಆದಕಾರಣ ಇಸ್ರಾಯೇಲರು ಕುಲವೊಂದಕ್ಕೆ ಸಾವಿರ ಮಂದಿಯ ಮೇರೆಗೆ ಯುದ್ಧಕ್ಕೆ ಸನ್ನದ್ಧರಾದ ಹನ್ನೆರಡು ಸಾವಿರ ಮಂದಿಯನ್ನು ಎಣಿಕೆಮಾಡಿ ಕಳುಹಿಸಿದರು.

[6] ಮೋಶೆಯು ಇವರನ್ನು ಯುದ್ಧಕ್ಕೆ ಕಳುಹಿಸುವಾಗ ಕುಲವೊಂದಕ್ಕೆ ಸಾವಿರ ಭಟರನ್ನು, ಮಹಾಯಾಜಕನಾದ ಎಲ್ಲಾಜಾರನ ಮಗನಾದ ಫೀನೆಹಾಸನನ್ನು, ದೇವರ ಸಾಮಾನುಗಳನ್ನೂ, ಆಜ್ಞಾತುತೂರಿಗಳನ್ನೂ ತೆಗೆದುಕೊಂಡು ಅವರೊಡನೆ ಹೋಗಬೇಕೆಂದು ಆಜ್ಞಾಪಿಸಿದನು.

[7] ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಅವರು ಮಿದ್ಯಾನ್ಯರೊಡನೆ ಯುದ್ಧಮಾಡಿ ಗಂಡಸರೆಲ್ಲರನ್ನೂ ಸಂಹಾರಮಾಡಿದರು.

[8] ಖಡ್ಗದಿಂದ ಹತರಾದವರಲ್ಲಿ ಎವೀ, ರೆಕೆಮ್, ಚೂರ್, ಹೂರ್, ರೆಬಾ ಎಂಬ ಮಿದ್ಯಾನ್ಯರ ಐದು ಮಂದಿ ರಾಜರು ಇದ್ದರು. ಅದಲ್ಲದೆ ಬೆಯೋರನ ಮಗನಾದ ಬಿಳಾಮನನ್ನು ಕೊಂದುಬಿಟ್ಟರು.

[9] ಇಸ್ರಾಯೇಲರು ಮಿದ್ಯಾನ್ಯರ ಎಲ್ಲಾ ಹೆಂಗಸರನ್ನೂ, ಮಕ್ಕಳನ್ನೂ ಸೆರೆಹಿಡಿದು ಎಲ್ಲಾ ದನಕುರಿಗಳನ್ನೂ, ಆಸ್ತಿಯನ್ನೂ ಸೂರೆಮಾಡಿದರು.

[10] ಅವರು ಇದ್ದ ಎಲ್ಲಾ ಊರುಗಳನ್ನೂ, ಪಾಳೆಯಗಳನ್ನೂ ಸುಟ್ಟುಬಿಟ್ಟರು.

[11] ಒಂದನ್ನೂ ಬಿಡದೆ ಮನುಷ್ಯರನ್ನೂ, ಪಶುಗಳನ್ನೂ ಸೆರೆಹಿಡಿದರು.

[12] ಮತ್ತು ಅವರು ಸೆರೆಯವರನ್ನೂ, ಪಶುಗಳನ್ನೂ, ಆಸ್ತಿಯನ್ನೂ ತೆಗೆದುಕೊಂಡು ಯೆರಿಕೋ ಪಟ್ಟಣದ ಎದುರಾಗಿ ಯೊರ್ದನ್ ನದಿಯ ತೀರದಲ್ಲಿ ಮೋವಾಬ್ಯರ ಮೈದಾನದಲ್ಲಿದ್ದ ಪಾಳೆಯಕ್ಕೆ ಮೋಶೆ, ಮಹಾಯಾಜಕನಾದ ಎಲ್ಲಾಜಾರ್ ಮತ್ತು ಇಸ್ರಾಯೇಲರ ಸರ್ವಸಮೂಹದವರ ಬಳಿಗೆ ಬಂದರು.

[13] ಮೋಶೆಯೂ, ಮಹಾಯಾಜಕನಾದ ಎಲ್ಲಾಜಾರನೂ, ಸಮೂಹದ ಪ್ರಧಾನರೂ ಪಾಳೆಯದ ಹೊರಗೆ ಹೋಗಿ ಅವರನ್ನು ಎದುರುಗೊಂಡರು.

[14] ಆಗ ಮೋಶೆಯು ಯುದ್ಧ ಭೂಮಿಯಿಂದ ಬಂದ ಸೈನ್ಯದ ಸಹಸ್ರಾಧಿಪತಿಗಳ ಮತ್ತು ಶತಾಧಿಪತಿಗಳ ಮೇಲೆ ಕೋಪಗೊಂಡನು.

[15] ಮೋಶೆಯು ಅವರಿಗೆ, “ನೀವು ಹೆಂಗಸರನ್ನೆಲ್ಲಾ ಉಳಿಸಿದ್ದೇನು?

[16] ಪೆಗೋರದ ಬಾಳನ ಸಂಗತಿಯಲ್ಲಿ ಬಿಳಾಮನ ಆಲೋಚನೆಯನ್ನು ಅನುಸರಿಸಿ ಇಸ್ರಾಯೇಲರನ್ನು ಯೆಹೋವನಿಗೆ ದ್ರೋಹಿಗಳನ್ನಾಗಿ ಮಾಡಿ ಸಮೂಹದವರಲ್ಲಿ ಘೋರವ್ಯಾಧಿ ಉಂಟಾಗುವಂತೆ ಮಾಡಿದವರು ಇವರೇ ಅಲ್ಲವೇ.

[17] ಆದಕಾರಣ ನೀವು ಈ ಗುಂಪಿನಲ್ಲಿರುವ ಎಲ್ಲಾ ಗಂಡು ಮಕ್ಕಳನ್ನೂ, ಪುರುಷ ಸಂಗಮಾಡಿದ ಎಲ್ಲಾ ಹೆಂಗಸರನ್ನೂ ಕೊಲ್ಲಬೇಕು.

[18] ಪುರುಷ ಸಂಗಮಾಡದಿರುವ ಕನ್ಯೆಯರನ್ನು ನಿಮಗೋಸ್ಕರ ಉಳಿಸಿಕೊಳ್ಳಬೇಕು.

[19] ನೀವಾದರೋ ಏಳು ದಿನದವರೆಗೂ ಪಾಳೆಯದ ಹೊರಗೆ ಇರಬೇಕು. ಮನುಷ್ಯ ಪ್ರಾಣತೆಗೆದವರೂ, ಶವಸೋಂಕಿದವರೂ, ನಿಮ್ಮವರಾದರೂ, ಸೆರೆಯವರಾದರೂ ಮೂರನೆಯ ಮತ್ತು ಏಳನೆಯ ದಿನಗಳಲ್ಲಿ ದೋಷಪರಿಹಾರ ಮಾಡಿಕೊಳ್ಳಬೇಕು.

[20] ಅದಲ್ಲದೆ ಎಲ್ಲಾ ಬಟ್ಟೆಗಳನ್ನೂ, ತೊಗಲಿನ ಸಾಮಾನನ್ನೂ, ಮೇಕೆ ಕೂದಲಿನ ವಸ್ತ್ರಗಳನ್ನು ಮರದ ವಸ್ತುಗಳನ್ನು ಶುದ್ಧ ಮಾಡಿಕೊಳ್ಳಬೇಕು” ಎಂದು ಹೇಳಿದನು.

[21] ಮಹಾಯಾಜಕನಾದ ಎಲ್ಲಾಜಾರನು ಯುದ್ಧಕ್ಕೆ ಹೋಗಿದ್ದ ಭಟರಿಗೆ ಹೀಗೆಂದನು, “ಯೆಹೋವನು ಮೋಶೆಗೆ ಅಪ್ಪಣೆಮಾಡಿದ ನಿಯಮ ಏನೆಂದರೆ,

[22] ಬೆಂಕಿಯನ್ನು ತಡೆಯುವ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ತವರ, ಸೀಸ ಮೊದಲಾದವುಗಳನ್ನು ಬೆಂಕಿದಾಟಿಸಿ ಶುದ್ಧಮಾಡಬೇಕು,

[23] ಅವುಗಳನ್ನು ಹೊಲೆ ಹೋಗಲಾಡಿಸುವ ನೀರಿನಿಂದಲೂ ಶುದ್ಧಮಾಡಬೇಕು. ಬೆಂಕಿಯಿಂದ ಸುಡಲಾರದ ವಸ್ತುಗಳನ್ನು ನೀರಿನಿಂದ ತೊಳೆದು ಶುದ್ಧಮಾಡಬೇಕು.

[24] ಏಳನೆಯ ದಿನದಲ್ಲಿ ನಿಮ್ಮ ಬಟ್ಟೆಗಳನ್ನು ಒಗೆದುಕೊಂಡ ನಂತರ ಶುದ್ಧರಾಗುವಿರಿ. ಆ ಮೇಲೆ ನೀವು ಪಾಳೆಯದೊಳಗೆ ಬರಬಹುದು” ಎಂದು ಹೇಳಿದನು.

[25] ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,

[26] “ನೀನೂ, ಮಹಾಯಾಜಕನಾದ ಎಲ್ಲಾಜಾರನೂ, ಕುಲಾಧಿಪತಿಗಳೂ ಸಮೂಹದವರ ಕೈಗೆ ಸಿಕ್ಕಿದ ಮನುಷ್ಯರನ್ನೂ, ಪಶುಗಳನ್ನೂ ಲೆಕ್ಕಿಸಿ,

[27] ಒಟ್ಟು ಎರಡು ಭಾಗಮಾಡಿ ಯುದ್ಧಕ್ಕೆ ಹೋದ ಭಟರಿಗೆ ಅರ್ಧವನ್ನೂ, ಮಿಕ್ಕ ಸಮೂಹದವರಿಗೆ ಅರ್ಧವನ್ನೂ ಹಂಚಿಕೊಡಬೇಕು.

[28] ಯುದ್ಧಕ್ಕೆ ಹೋದ ಭಟರಿಗೆ ಬರುವ ಭಾಗದಿಂದ ಮನುಷ್ಯ, ದನ, ಕತ್ತೆ, ಆಡು, ಕುರಿ ಇವುಗಳಲ್ಲಿ ನೀನು ಐನೂರರಲ್ಲಿ ಒಂದರ ಮೇರೆಗೆ ಯೆಹೋವನಿಗೆ ಕಪ್ಪವನ್ನು ಎತ್ತಬೇಕು.

[29] ಅವರ ಅರ್ಧಪಾಲಿನಿಂದ ಅದನ್ನು ತೆಗೆದುಕೊಂಡು ಯೆಹೋವನಿಗೆ ಅರ್ಪಣೆಯಾಗಿ ಮಹಾಯಾಜಕನಾದ ಎಲ್ಲಾಜಾರನಿಗೆ ಒಪ್ಪಿಸಬೇಕು.

[30] ಉಳಿದ ಇಸ್ರಾಯೇಲರಿಗೆ ಬರುವ ಭಾಗದಿಂದ ಮನುಷ್ಯ, ದನ, ಕತ್ತೆ, ಆಡು, ಕುರಿ ಇವುಗಳಲ್ಲಿ ಐವತ್ತರಲ್ಲಿ ಒಂದರ ಮೇರೆಗೆ ತೆಗೆದುಕೊಂಡು ಯೆಹೋವನ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಡಬೇಕು” ಎಂದು ಆಜ್ಞಾಪಿಸಿದನು.

[31] ಯೆಹೋವನ ಅಪ್ಪಣೆಯ ಮೇರೆಗೆ ಮೋಶೆಯೂ, ಮಹಾಯಾಜಕನಾದ ಎಲ್ಲಾಜಾರನೂ ಮಾಡಿದರು.

[32] ಭಟರು ತಂದ ಸುಲಿಗೆಯಲ್ಲಿ ಹಂಚಿಕೊಳ್ಳುವುದಕೋಸ್ಕರ ಉಳಿದದ್ದು ಎಷ್ಟೆಂದರೆ: ಕುರಿಗಳು - 6,75,000,

[33] ದನಗಳು - 72,000,

[34] ಕತ್ತೆಗಳು - 61,000,

[35] ಕನ್ಯೆಯರು - 32,000.

[36] ಯುದ್ಧಕ್ಕೆ ಹೋಗಿದ್ದ ಭಟರಿಗೆ ದೊರಕಿದ ಅರ್ಧ ಭಾಗವಾಗಿರುವ ಕುರಿಗಳು - 3,37,500.

[37] ಕುರಿಗಳಿಂದ ಯೆಹೋವನಿಗೆ ಬಂದ ಕಪ್ಪ - 675.

[38] ಹಾಗೆಯೇ ಅವರಿಗೆ ದೊರಕಿದ 36,000, ಎತ್ತುಗಳಲ್ಲಿ ಯೆಹೋವನಿಗೆ ಬಂದ ಕಪ್ಪ - 72.

[39] ಕತ್ತೆಗಳಲ್ಲಿ - 30,500 ಯೆಹೋವನಿಗೆ ಬಂದ ಕಪ್ಪ - 61

[40] 16,000 ಕನ್ಯೆಯರಲ್ಲಿ, ಯೆಹೋವನಿಗೆ ಬಂದ ಕಪ್ಪ - 32 ಕನ್ಯೆಯರು.

[41] ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಆ ಕಪ್ಪವನ್ನು ಯೆಹೋವನಿಗೋಸ್ಕರ ಪ್ರತ್ಯೇಕಿಸಿ ಮಹಾಯಾಜಕನಾದ ಎಲ್ಲಾಜಾರನಿಗೆ ಒಪ್ಪಿಸಿದನು.

[42] ಇಸ್ರಾಯೇಲರ ಭಟರು ತಂದ ಸುಲಿಗೆಯಲ್ಲಿ ಮೋಶೆ ಪ್ರತ್ಯೇಕಿಸಿ ಹಂಚಿದ ಅರ್ಧ ಭಾಗ

[43] ಎಷ್ಟೆಂದರೆ - 3,37,500 ಆಡುಕುರಿಗಳು.

[44] ಎತ್ತುಗಳು - 36,000,

[45] ಕತ್ತೆಗಳು - 30,500,

[46] ಕನ್ಯೆಯರು - 16,000, ಇಷ್ಟು ಇಸ್ರಾಯೇಲ ಸಮೂಹದವರ ಪಾಲಿಗೆ ಬಂದವು.

[47] ಇವುಗಳಲ್ಲಿ ಮೋಶೆಯು ಯೆಹೋವನ ಅಪ್ಪಣೆಯ ಪ್ರಕಾರ ಇಸ್ರಾಯೇಲರಲ್ಲಿ ಐವತ್ತರಲ್ಲಿ ಒಂದರ ಮೇರೆಗೆ ತೆಗೆದುಕೊಂಡು ಯೆಹೋವನ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಟ್ಟನು.

[48] ಆಗ ದಂಡಿನ ಸಹಸ್ರಾಧಿಪತಿಗಳೂ ಮೋಶೆಯ ಬಳಿಗೆ ಬಂದು ಅವನಿಗೆ,

[49] “ನಿನ್ನ ದಾಸರಾದ ನಾವು ನಮ್ಮ ಅಧಿಕಾರದೊಳಗೆ ಇದ್ದ ಭಟರನ್ನು ಲೆಕ್ಕಿಸಲಾಗಿ ಒಬ್ಬನಾದರೂ ಕಡಿಮೆಯಾಗಿಲ್ಲವೆಂದು ಗೊತ್ತಾಯಿತು.

[50] ಆದಕಾರಣ ಯೆಹೋವನು ಕಾಪಾಡಿದ ನಮ್ಮ ಪ್ರಾಣಗಳಿಗೆ ಈಡಾಗಿ ಆತನಿಗೋಸ್ಕರ ಪ್ರಾಯಶ್ಚಿತ್ತ ಕಾಣಿಕೆಯಾಗಿ ನಮ್ಮಲ್ಲಿ ಒಬ್ಬೊಬ್ಬನು ತನಗೆ ಸಿಕ್ಕಿದ ಚಿನ್ನದ ಒಡವೆಗಳಲ್ಲಿ ತೋಳ್ಬಳೆ, ಕಡಗ, ಮುದ್ರೆಯುಂಗರ, ಮುರುವು, ಕಂಠಮಾಲೆ ಮುಂತಾದವುಗಳನ್ನು ತಂದಿದ್ದೇವೆ” ಎಂದರು.

[51] ಅವರು ಕೊಟ್ಟ ಆ ಚಿನ್ನದ ಒಡವೆಗಳನ್ನು ಮೋಶೆಯೂ, ಮಹಾಯಾಜಕ ಎಲ್ಲಾಜಾರನೂ ತೆಗೆದುಕೊಂಡರು. ಅವುಗಳೆಲ್ಲಾ ವಿಚಿತ್ರವಾದ ಆಭರಣಗಳು.

[52] ಸಹಸ್ರಾಧಿಪತಿಗಳೂ, ಶತಾಧಿಪತಿಗಳೂ ಯೆಹೋವನಿಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸಿದ ಕಾಣಿಕೆಯ ಒಟ್ಟು ತೂಕ - 16,750 ತೊಲೆ.

[53] ಅದಲ್ಲದೆ ದಂಡಿನವರೆಲ್ಲರೂ ಸ್ವಂತಕ್ಕಾಗಿ ಲೂಟಿಯನ್ನು ತೆಗೆದುಕೊಂಡರು.

[54] ಸಹಸ್ರಾಧಿಪತಿಗಳೂ, ಶತಾಧಿಪತಿಗಳೂ, ಕೊಟ್ಟ ಚಿನ್ನವನ್ನು ಮೋಶೆಯೂ, ಮಹಾಯಾಜಕ ಎಲ್ಲಾಜಾರನೂ ತೆಗೆದುಕೊಂಡು ಇಸ್ರಾಯೇಲರ ವಿಷಯದಲ್ಲಿ ಯೆಹೋವನಿಗೆ ಜ್ಞಾಪಕ ಮಾಡುವುದಕ್ಕಾಗಿ ದೇವದರ್ಶನದ ಗುಡಾರದೊಳಗೆ ತಂದರು.

ಅರಣ್ಯಕಾಂಡ — Chapters