Skip to content
Opens in a new window
Listen to this chapter • 5:56

[1] ಯೊರ್ದನ್ ನದಿಯ ತೀರದಲ್ಲಿ ಯೆರಿಕೋ ಪಟ್ಟಣದ ಹತ್ತಿರವಿರುವ ಮೋವಾಬ್ಯರ ಮೈದಾನದಲ್ಲಿ ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,

[2] “ಇಸ್ರಾಯೇಲರು ತಾವು ಹೊಂದುವ ಸ್ವತ್ತಿನಲ್ಲಿ ಕೆಲವು ಪಟ್ಟಣಗಳನ್ನೂ, ಆ ಪಟ್ಟಣಗಳ ಸುತ್ತಲಿನ ಭೂಮಿಯನ್ನೂ ಲೇವಿಯರಿಗೆ ವಾಸಕ್ಕಾಗಿ ಕೊಡಬೇಕೆಂದು ಅವರಿಗೆ ಆಜ್ಞಾಪಿಸು.

[3] ಆ ಪಟ್ಟಣಗಳು ಲೇವಿಯರ ವಾಸ ಸ್ಥಳವಾಗುವುದು. ಸುತ್ತಲಿರುವ ಭೂಮಿಗಳು ಅವರ ದನಕುರಿಗಳಿಗಾಗಿಯೂ ಮತ್ತು ಪಶುಗಳಿಗಾಗಿಯೂ ಇರುವವು.

[4] ನೀವು ಲೇವಿಯರಿಗೆ ಕೊಡುವ ಪಟ್ಟಣಗಳು ಸುತ್ತಲಿನ ಭೂಮಿಯ ಪ್ರತಿಯೊಂದು ಪಟ್ಟಣಗಳ ಗೋಡೆಯಿಂದ ನಾಲ್ಕು ಕಡೆಯಲ್ಲಿಯೂ ಸಾವಿರ ಮೊಳದಷ್ಟು ವಿಸ್ತರಿಸಿಕೊಂಡಿರಬೇಕು.

[5] ನೀವು ಪಟ್ಟಣದ ಹೊರಗಡೆ ಪೂರ್ವ ದಿಕ್ಕಿನಲ್ಲಿ ಎರಡು ಸಾವಿರ ಮೊಳ, ದಕ್ಷಿಣದಲ್ಲಿ ಎರಡು ಸಾವಿರ ಮೊಳ, ಪಶ್ಚಿಮದಲ್ಲಿ ಎರಡು ಸಾವಿರ ಮೊಳ, ಉತ್ತರದಲ್ಲಿ ಎರಡು ಸಾವಿರ ಮೊಳ, ಅಳೆಯಬೇಕು. ಮಧ್ಯದಲ್ಲಿ ಪಟ್ಟಣಗಳಿರಬೇಕು. ಹೀಗೆ ಅವರ ಪಟ್ಟಣಗಳ ಉಪನಗರಗಳು ಇರಬೇಕು.

[6] ಮನುಷ್ಯನನ್ನು ಹತ್ಯೆಮಾಡಿದವರು ಆಶ್ರಯಕ್ಕಾಗಿ ಓಡಿ ಹೋಗುವುದಕ್ಕೋಸ್ಕರ ನೀವು ನೇಮಿಸುವ ಆರು ಆಶ್ರಯನಗರಗಳನ್ನೂ, ಬೇರೆ ನಲ್ವತ್ತೆರಡು ಪಟ್ಟಣಗಳನ್ನೂ ಅಂತು ನಲ್ವತ್ತೆಂಟು ಪಟ್ಟಣಗಳನ್ನು ಲೇವಿಯರಿಗೆ ಕೊಡಬೇಕು.

[7] ನೀವು ಲೇವಿಯರಿಗೆ ಹುಲ್ಲುಗಾವಲುಗಳ ಸಂಗಡ ಕೊಡಬೇಕಾದ ಸಮಸ್ತ ಪಟ್ಟಣಗಳು ನಲ್ವತ್ತೆಂಟಾಗಿರಬೇಕು.

[8] ಇಸ್ರಾಯೇಲರ ಸ್ವತ್ತಿನಲ್ಲಿ ಆಯಾ ಕುಲದ ಸ್ವತ್ತಿನ ಪ್ರಮಾಣಕ್ಕೆ ತಕ್ಕ ಹಾಗೆ ಹೆಚ್ಚಾದ ಜನರುಳ್ಳವರಿಂದ ಹೆಚ್ಚಾಗಿಯೂ, ಕಡಿಮೆಯಾದ ಜನರಿಂದ ಕಡಿಮೆಯಾಗಿಯೂ ಲೇವಿಯರಿಗೋಸ್ಕರ ಊರುಗಳನ್ನು ಕೊಡಿಸಬೇಕು.”

[9] ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,

[10] “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ನೀವು ಯೊರ್ದನ್ ನದಿಯನ್ನು ದಾಟಿ ಕಾನಾನ್ ದೇಶವನ್ನು ಸೇರಿದ ನಂತರ,

[11] ಆಶ್ರಯ ಸ್ಥಾನಗಳಾಗುವುದಕ್ಕೆ ಪಟ್ಟಣಗಳನ್ನು ನೇಮಿಸಬೇಕು. ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಅವುಗಳಲ್ಲಿ ಒಂದಕ್ಕೆ ಓಡಿಹೋಗಿ ಸುರಕ್ಷಿತನಾಗಿರಬಹುದು.

[12] ಅವನು ಸಭೆಯವರಿಂದ ತೀರ್ಪು ಹೊಂದುವುದಕ್ಕಿಂತ ಮೊದಲೇ ಹತವಾದವನ ಸಮೀಪಬಂಧುವಿನಿಂದ ಸಾಯದಂತೆ ಆ ಆಶ್ರಯ ಪಟ್ಟಣಗಳು ನಿಮ್ಮೊಳಗೆ ಇರಬೇಕು.

[13] ಹೀಗೆ ಆರು ಪಟ್ಟಣಗಳನ್ನು ಆಶ್ರಯದ ಪಟ್ಟಣಗಳಾಗಿ ನೇಮಿಸಬೇಕು.

[14] ನೀವು ಯೊರ್ದನ್ ನದಿಯ ಆಚೆಯಲ್ಲಿ ಮೂರು ಮತ್ತು ಕಾನಾನ್ ದೇಶದಲ್ಲಿ ಮೂರು ಪಟ್ಟಣಗಳನ್ನು ನೇಮಿಸಬೇಕು. ಅವು ಆಶ್ರಯದ ಪಟ್ಟಣಗಳಾಗಿ ಇರಬೇಕು.

[15] ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಇಸ್ರಾಯೇಲನಾಗಲಿ, ಪರದೇಶದವನಾಗಲಿ ಮತ್ತು ನಿಮ್ಮಲ್ಲಿ ಇಳಿದುಕೊಂಡವನಾಗಲಿ ಆ ಆರು ಪಟ್ಟಣಗಳೊಳಗೆ ಒಂದಕ್ಕೆ ಓಡಿಹೋಗಿ ಆಶ್ರಯಹೊಂದಬಹುದು.

[16] “‘ಯಾವನಾದರೂ ಕಬ್ಬಿಣದ ಆಯುಧದಿಂದ ಮತ್ತೊಬ್ಬನನ್ನು ಹೊಡೆದು ಕೊಂದರೆ ಅವನು ನರಹತ್ಯೆ ಮಾಡಿದವನೆಂದು ನೀವು ನಿರ್ಣಯಿಸಬೇಕು. ಅಂಥವನಿಗೆ ಮರಣಶಿಕ್ಷೆಯಾಗಬೇಕು.

[17] ಯಾವನಾದರೂ ಮನುಷ್ಯನನ್ನು ಕೊಲ್ಲುವಷ್ಟು ದೊಡ್ಡ ಕಲ್ಲನ್ನು ಕೈಯಲ್ಲಿ ಹಿಡಿದು ಮತ್ತೊಬ್ಬನನ್ನು ಹೊಡೆದು ಕೊಂದರೆ ಅವನು ನರಹತ್ಯೆ ಮಾಡಿದವನೇ. ಅವನಿಗೆ ಮರಣಶಿಕ್ಷೆಯಾಗಬೇಕು.

[18] ಯಾವನಾದರೂ ಮನುಷ್ಯನನ್ನು ಕೊಲ್ಲುವಷ್ಟು ದೊಡ್ಡ ಮರದ ಆಯುಧವನ್ನು ಕೈಯಲ್ಲಿ ಹಿಡಿದು ಮತ್ತೊಬ್ಬನನ್ನು ಹೊಡೆದು ಕೊಂದರೆ ಅವನು ನರಹತ್ಯೆಮಾಡಿದವನೇ. ಅವನಿಗೆ ಮರಣಶಿಕ್ಷೆಯಾಗಬೇಕು.

[19] ನರಹತ್ಯೆಮಾಡಿದವನು ಎಲ್ಲಿ ಸಿಕ್ಕಿದರೂ ಅವನನ್ನು ಕೊಲ್ಲಬೇಕಾದವನು ಯಾರೆಂದರೆ ಹತವಾದವನ ಸಮೀಪಬಂಧುವೇ.

[20] ಯಾವನಾದರೂ ಮತ್ತೊಬ್ಬನನ್ನು ಹಗೆಮಾಡಿ ನೂಕುವುದರಿಂದಾಗಲಿ, ಸಮಯ ನೋಡಿಕೊಂಡು ಅವನ ಮೇಲೆ ಏನಾದರೂ ಎಸೆಯುವುದರಿಂದಾಗಲಿ,

[21] ಇಲ್ಲವೆ ದ್ವೇಷದಿಂದ ಕೈಯಾರೆ ಹೊಡೆಯುವುದರಿಂದಾಗಲಿ ಕೊಂದರೆ ಅವನು ನರಹತ್ಯೆಮಾಡಿದವನೇ. ಅವನಿಗೆ ಮರಣಶಿಕ್ಷೆಯಾಗಬೇಕು. ಹತವಾದವನ ಸಮೀಪಬಂಧುವು ಅವನನ್ನು ಎಲ್ಲಿ ಕಂಡರೂ ಕೊಲ್ಲಬೇಕು.

[22] “‘ಆದರೆ ಒಬ್ಬನು ಯಾವ ದ್ವೇಷವೂ ಇಲ್ಲದೆ ಆಕಸ್ಮಾತ್ತಾಗಿ ನೂಕುವುದರಿಂದಾಗಲಿ, ಹಾನಿಮಾಡುವ ಸಮಯವನ್ನು ನೋಡಿಕೊಳ್ಳದೆ ಏನಾದರೂ ಎಸೆಯುವುದರಿಂದಾಗಲಿ,

[23] ಕೊಲ್ಲುವಷ್ಟು ದೊಡ್ಡ ಕಲ್ಲನ್ನು ತಿಳಿಯದೆ ಬೀಳಿಸುವುದರಿಂದಾಗಲಿ ಮತ್ತೊಬ್ಬನು ಸತ್ತರೆ ಅವನು ಆ ಮನುಷ್ಯನಿಗೆ ವೈರಿಯಾಗಿರದೆಯೂ ಹಾನಿಯನ್ನು ಮಾಡಬೇಕೆಂಬ ಅಭಿಪ್ರಾಯವಿಲ್ಲದೆಯೂ ಇದ್ದ ಪಕ್ಷಕ್ಕೆ,

[24] ಸಭೆಯವರು ಹತ್ಯೆಮಾಡಿದವನಿಗೂ, ಹತವಾದವನ ಸಮೀಪಬಂಧುವಿಗೂ ಈ ಸಂಗತಿಗಳಿಗೆ ಅನುಸಾರವಾಗಿ ನ್ಯಾಯತೀರಿಸಬೇಕು.

[25] ಸಭೆಯು ಹತ್ಯಮಾಡಿದವನನ್ನು ಆ ಸಮೀಪ ಬಂಧುವಿನ ಕೈಯಿಂದ ತಪ್ಪಿಸಿ ಅವನು ಓಡಿಹೋಗಿದ್ದ ಆಶ್ರಯನಗರಕ್ಕೆ ತಿರುಗಿ ಸೇರಿಸಬೇಕು. ಪಟ್ಟಾಭಿಷೇಕ ಹೊಂದಿದ ಮಹಾಯಾಜಕನು ಜೀವದಿಂದಿರುವ ತನಕ ಅವನು ಆ ಪಟ್ಟಣದಲ್ಲೇ ವಾಸಿಸಬೇಕು.

[26] “‘ಆ ಹತ್ಯೆಮಾಡಿದವನು ಯಾವಾಗಲಾದರೂ ತಾನು ಓಡಿಹೋಗಿದ್ದು ಆಶ್ರಯಪಟ್ಟಣದ ಮೇರೆಯ ಹೊರಗೆ ಹೋಗಿರುವಾಗ,

[27] ಹತವಾದವನ ಸಮೀಪಬಂಧುವು ಅವನನ್ನು ಆಶ್ರಯಪಟ್ಟಣದ ಹೊರಗೆ ಕಂಡು ಕೊಂದುಹಾಕಿದರೆ ಅವನು ಕೊಲೆಪಾತಕನಾಗುವುದಿಲ್ಲ.

[28] ಮಹಾಯಾಜಕನು ಜೀವದಿಂದಿರುವ ತನಕ ಅವನು ಆಶ್ರಯ ಪಟ್ಟಣದೊಳಗೆ ಇರಬೇಕಾಗಿತ್ತು. ಮಹಾಯಾಜಕನು ತೀರಿಹೋದ ನಂತರ ಅವನು ತನ್ನ ಸ್ವಾಸ್ತ್ಯವಿರುವ ಸ್ಥಳಕ್ಕೆ ಹೋಗಬಹುದು.

[29] “‘ನೀವೂ, ನಿಮ್ಮ ಸಂತತಿಯವರೂ ನಿಮ್ಮ ಎಲ್ಲಾ ವಾಸಸ್ಥಳಗಳಲ್ಲಿ ಈ ಮಾತುಗಳಿಗೆ ಅನುಸಾರವಾಗಿ ನ್ಯಾಯತೀರಿಸಬೇಕು.

[30] ಯಾವನಾದರೂ ಮತ್ತೊಬ್ಬನನ್ನು ಕೊಂದಾಗ ನೀವು ಸಾಕ್ಷಿಗಳನ್ನು ವಿಚಾರಿಸಿಕೊಂಡು ಅವನಿಗೆ ಮರಣಶಿಕ್ಷೆಯನ್ನು ವಿಧಿಸಬಾರದು.

[31] “‘ಮರಣಶಿಕ್ಷೆಗೆ ಪಾತ್ರನಾದ ಕೊಲೆಪಾತಕನನ್ನು ಉಳಿಸುವುದಕ್ಕೆ ಈಡನ್ನು ತೆಗೆದುಕೊಳ್ಳಬಾರದು. ಅವನಿಗೆ ಮರಣಶಿಕ್ಷೆಯೇ ಆಗಬೇಕು.

[32] ನೀವು ಆಶ್ರಯಪಟ್ಟಣಕ್ಕೆ ಓಡಿಹೋದವನಿಂದ ಧನವನ್ನು ತೆಗೆದುಕೊಂಡು ಮಹಾಯಾಜಕನು ಜೀವದಿಂದಿರುವಾಗಲೇ ಸ್ವಸ್ಥಳಕ್ಕೆ ಹೋಗಗೊಡಿಸಬಾರದು. ಅವನಿಗೆ ಮರಣಶಿಕ್ಷೆಯೇ ಆಗಬೇಕು.

[33] “‘ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇಶವು ಅಪವಿತ್ರವಾಗುವುದಿಲ್ಲ. ರಕ್ತವು ದೇಶವನ್ನು ಅಪವಿತ್ರ ಮಾಡುವುದು. ಕೊಲ್ಲಲ್ಪಟ್ಟವನ ರಕ್ತಕ್ಕಾಗಿ ಕೊಂದವನ ರಕ್ತದಿಂದಲೇ ಹೊರತು ಬೇರೆ ಪ್ರಾಯಶ್ಚಿತ್ತವಿಲ್ಲ.

[34] ನೀವು ವಾಸಿಸುವ ದೇಶವನ್ನು ಅಪವಿತ್ರಮಾಡಬಾರದು. ಯೆಹೋವನೆಂಬ ನಾನೇ ಇಸ್ರಾಯೇಲರ ಮಧ್ಯದಲ್ಲಿ ವಾಸಿಸುತ್ತೇನೆ.’”

ಅರಣ್ಯಕಾಂಡ — Chapters