Skip to content
Opens in a new window
Listen to this chapter • 5:50

[1] ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,

[2] “ಕುಷ್ಠರೋಗಿಗಳನ್ನು, ಸಾಂಕ್ರಾಮಿಕವಾದ ಚರ್ಮರೋಗ ಇರುವವರನ್ನು, ಮೇಹಸ್ರಾವವುಳ್ಳವರನ್ನು ಹಾಗು ಹೆಣದ ಸೋಂಕಿನಿಂದ ಅಶುದ್ಧರಾದವರನ್ನು ಪಾಳೆಯದಿಂದ ಹೊರಡಿಸಬೇಕೆಂದು ಇಸ್ರಾಯೇಲರಿಗೆ ಆಜ್ಞಾಪಿಸು.

[3] ಅಂಥವರು ಗಂಡಸರೇ ಆಗಲಿ ಅಥವಾ ಹೆಂಗಸರೇ ಆಗಲಿ, ಅವರೆಲ್ಲರನ್ನೂ ಪಾಳೆಯದಿಂದ ಹೊರಗೆಹಾಕಬೇಕು. ನಾನೇ ಅವರ ಪಾಳೆಯದಲ್ಲಿ ವಾಸವಾಗಿರುವುದರಿಂದ ಅವರು ಅದನ್ನು ಅಪವಿತ್ರ ಮಾಡಬಾರದು.”

[4] ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲರು ಹಾಗೆಯೇ ಮಾಡಿದರು. ಇಸ್ರಾಯೇಲರು ಯೆಹೋವನಿಗೆ ವಿಧೇಯರಾಗಿ ಅಶುದ್ಧರಾದವರನ್ನೆಲ್ಲಾ ಪಾಳೆಯದಿಂದ ಹೊರಗೆ ಕಳುಹಿಸಿದರು.

[5] ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,

[6] “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು: ಯಾವ ಪುರುಷನಾಗಲಿ, ಸ್ತ್ರೀಯಾಗಲಿ ಮತ್ತೊಬ್ಬನನ್ನು ಮೋಸಗೊಳಿಸುವುದರಿಂದ ಯೆಹೋವನಿಗೆ ದ್ರೋಹಮಾಡಿ ಅಪರಾಧಿಗಳಾದರೆ,

[7] ಅಂಥವರು ತಮ್ಮ ಅಪರಾಧವನ್ನು ಅರಿಕೆಮಾಡಬೇಕು. ಅದಲ್ಲದೆ ಅಪರಾಧ ಮಾಡಿದವನು ನಷ್ಟಪಟ್ಟವನಿಗೆ ಮೂಲದ್ರವ್ಯದ ಬೆಲೆಗೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಸೇರಿಸಿ ಕೊಡಬೇಕು.

[8] “ಆದರೆ ದಂಡವನ್ನು ತೆಗೆದುಕೊಳ್ಳುವವನು ಮೃತನಾಗಿ ಅವನ ಸಂಬಂಧಿಕರು ಯಾರೂ ಇಲ್ಲದಿದ್ದರೆ, ಆ ದ್ರವ್ಯವು ಯೆಹೋವನಿಗೆ ಸೇರಬೇಕು. ಆ ದ್ರವ್ಯ ಮತ್ತು ದೋಷಪರಿಹಾರಕ್ಕಾಗಿ ಸಮರ್ಪಿಸಲ್ಪಡುವ ಪ್ರಾಯಶ್ಚಿತ್ತದ ಟಗರು ಈ ಎರಡೂ ಯಾಜಕನಿಗೆ ಸೇರಬೇಕು.

[9] ಇಸ್ರಾಯೇಲರು ಪರಿಶುದ್ಧವಾದ ವಸ್ತುಗಳಿಂದ ಪ್ರತ್ಯೇಕಿಸಿ ತರುವ ಕಾಣಿಕೆಗಳೆಲ್ಲಾ ಯಾಜಕನಿಗೇ ಸಲ್ಲಬೇಕು.

[10] ಪ್ರತಿ ಮನುಷ್ಯನು ಯೆಹೋವನಿಗೆ ಮೀಸಲಾಗಿಟ್ಟದ್ದನ್ನು ಯಾವ ಯಾಜಕನಿಗೆ ತಂದು ಒಪ್ಪಿಸುತ್ತಾನೋ ಅದು ಆ ಯಾಜಕನದ್ದಾಗಿರುತ್ತದೆ.”

[11] ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,

[12] “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು: ‘ಯಾರ ಹೆಂಡತಿ ತಪ್ಪು ದಾರಿ ಹಿಡಿದು ಗಂಡನಿಗೆ ಅಪನಂಬಿಗಸ್ತಳಾಗಿ,

[13] ಯಾರ ಕೈಗೆ ಸಿಕ್ಕದೆಯೂ ಸಾಕ್ಷಿ ಇಲ್ಲದೆಯೂ ರಹಸ್ಯವಾಗಿಯೇ ಪರಪುರುಷನೊಡನೆ ಸಂಗಮಿಸಿ ಗಂಡನಿಗೆ ದ್ರೋಹಿಯಾಗಿ ಅಶುದ್ಧಳಾದ ಸಂದರ್ಭದಲ್ಲಿ,

[14] ಅಥವಾ ಅವಳು ಹಾಗೆ ಮಾಡದೆ ಅಶುದ್ಧಳಾಗದ ಸಂದರ್ಭದಲ್ಲಿಯೂ, ಆಕೆಯು ಕೆಟ್ಟುಹೋದಳೆಂಬ ಸಂಶಯ ಗಂಡನಿಗೆ ಬಂದರೆ,

[15] ಆಗ ಅವನು ಮಾಡಬೇಕಾದದ್ದೇನೆಂದರೆ, ಆ ಪುರುಷನು ತನ್ನ ಹೆಂಡತಿಯನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು ಮತ್ತು ಅವಳ ಸಂಗತಿಯನ್ನು ವಿಚಾರಿಸುವುದಕ್ಕಾಗಿ ಅವನು ಯಾಜಕನಿಗೆ ಮೂರು ಸೇರು ಜವೆಗೋದಿಯ ಹಿಟ್ಟನ್ನು ಕಾಣಿಕೆಯಾಗಿ ತಂದುಕೊಡಬೇಕು. ಅದು ವ್ಯಭಿಚಾರ ಸಂಶಯವನ್ನು ಸೂಚಿಸುವುದಕ್ಕೂ ಮತ್ತು ಪಾಪವನ್ನು ಹೊರಪಡಿಸುವುದಕ್ಕೂ ಯೆಹೋವನಿಗೆ ನೈವೇದ್ಯವಾದ ಕಾಣಿಕೆಯಾದುದರಿಂದ ಆ ಹಿಟ್ಟಿನ ಮೇಲೆ ಎಣ್ಣೆಯನ್ನು ಹೊಯ್ಯಲೂಬಾರದು, ಧೂಪವನ್ನು ಇಡಲೂಬಾರದು.

[16] “‘ಯಾಜಕನು ಅವಳನ್ನು ಕರೆದು ಯೆಹೋವನ ಸಮ್ಮುಖದಲ್ಲಿ ನಿಲ್ಲಿಸಬೇಕು.

[17] ಯಾಜಕನು ಮಣ್ಣಿನ ಪಾತ್ರೆಯಲ್ಲಿ ಪರಿಶುದ್ಧ ಜಲವನ್ನು ತೆಗೆದುಕೊಂಡು, ದೇವದರ್ಶನದ ಗುಡಾರದ ನೆಲದಿಂದ ಸ್ವಲ್ಪ ಧೂಳನ್ನು ಆ ನೀರಿನಲ್ಲಿ ಹಾಕಬೇಕು.

[18] ಯಾಜಕನು ಆ ಸ್ತ್ರೀಯನ್ನು ಯೆಹೋವನ ಸಮ್ಮುಖದಲ್ಲಿ ನಿಲ್ಲಿಸಿ, ಅವಳ ತಲೆಯ ಮೇಲಿರುವ ಮುಸುಕನ್ನು ತೆಗೆದು, ಕೂದಲನ್ನು ಕೆದರಿಸಿ ವ್ಯಭಿಚಾರದ ಸಂಶಯವನ್ನು ಸೂಚಿಸುವ ಆ ನೈವೇದ್ಯದ ಹಿಟ್ಟನ್ನು ಅವಳ ಕೈಯಲ್ಲಿ ಇಟ್ಟು, ಶಾಪವನ್ನುಂಟುಮಾಡುವ ವಿಷಕರವಾದ ಆ ನೀರನ್ನು ಯಾಜಕನು ತನ್ನ ಕೈಯಲ್ಲಿ ಹಿಡಿದುಕೊಳ್ಳಬೇಕು.

[19] ಯಾಜಕನೂ ಅವಳಿಂದ ಪ್ರಮಾಣಮಾಡಿಸಿ ಹೀಗೆ ಹೇಳಬೇಕು, “ಒಬ್ಬ ಪರಪುರುಷನ ಸಂಗಮಮಾಡದಿದ್ದರೆ, ನಿನ್ನ ಗಂಡನನ್ನು ಬಿಟ್ಟು ನೀನು ಜಾರತ್ವ ಮಾಡದೇ ನಿರಪರಾಧಿಯಾಗಿದ್ದರೆ ಶಪಿಸಲ್ಪಟ್ಟ ವಿಷಕರವಾದ ಈ ನೀರು ನಿನಗೆ ಯಾವ ಹಾನಿಯನ್ನು ಮಾಡುವುದಿಲ್ಲ.

[20] ಆದರೆ ನೀನು ನಿನ್ನ ಗಂಡನನ್ನು ಬಿಟ್ಟು ಪರಪುರುಷನೊಡನೆ ಜಾರತ್ವಮಾಡಿ ಅಶುದ್ಧಳಾಗಿದ್ದರೆ ನಿನ್ನ ಗಂಡನನ್ನು ಬಿಟ್ಟು ಮತ್ತೊಬ್ಬನೊಡನೆ ನೀನು ಸಂಗಮಿಸಿದ್ದರೆ,”

[21] “ಯೆಹೋವನು ನಿನ್ನ ತೊಡೆಗಳು ಕ್ಷೀಣವಾಗಿ ಹೋಗುವಂತೆ, ನಿನ್ನ ಹೊಟ್ಟೆಯು ಉಬ್ಬುವಂತೆ ಮಾಡಿ ನಿನ್ನನ್ನು ನಿನ್ನ ಜನರ ಮಧ್ಯದಲ್ಲಿ ಶಾಪಗ್ರಸ್ತಳನ್ನಾಗಿ ನೇಮಿಸಲಿ.

[22] ಶಾಪವನ್ನುಂಟುಮಾಡುವ ಈ ನೀರು ನಿನ್ನೊಳಗೆ ಸೇರಿ ನಿನ್ನ ಹೊಟ್ಟೆಯು ಉಬ್ಬುವಂತೆ ನಿನ್ನ ತೊಡೆಗಳು ಕ್ಷೀಣವಾಗಿ ಹೋಗುವಂತೆ ನಿನ್ನ ಜನನೇಂದ್ರಿಯಗಳು ಬತ್ತಿ ಹೋಗುವಂತೆ ಮಾಡುವುದು.” ಅದಕ್ಕೆ ಆ ಸ್ತ್ರೀಯು, “ನಾನು ಅಪರಾಧಿಯಾಗಿದ್ದರೆ ಹಾಗೆಯೇ ಆಗಲಿ” ಎಂದು ಹೇಳಬೇಕು.

[23] “‘ಇದಲ್ಲದೆ ಯಾಜಕನು ಈ ಶಾಪವಚನಗಳನ್ನು ಸುರುಳಿಯಲ್ಲಿ ಬರೆದು, ವಿಷಕರ ಜಲದಲ್ಲಿ ಆ ಶಾಪವಚನವನ್ನು ತೊಳೆಯಬೇಕು.

[24] ಶಾಪವನ್ನುಂಟುಮಾಡುವ ವಿಷಕರವಾದ ನೀರನ್ನು ಆ ಸ್ತ್ರೀಗೆ ಕುಡಿಸಬೇಕು. ಆಗ ಶಪಿಸುವ ನೀರು ಅವಳಲ್ಲಿ ಸೇರಿ ವಿಷಕರವಾಗುವುದು.

[25] ಬಳಿಕ ಯಾಜಕನು ಆ ಸ್ತ್ರೀಯ ಕೈಯಿಂದ ವ್ಯಭಿಚಾರದ ಸಂಶಯ ಸೂಚಕವಾದ ಕಾಣಿಕೆಯನ್ನು ತೆಗೆದುಕೊಂಡು, ಆ ಕಾಣಿಕೆಯನ್ನು ಯೆಹೋವನ ಸಮ್ಮುಖದಲ್ಲಿ ನೈವೇದ್ಯಮಾಡಿ ಯಜ್ಞವೇದಿಯ ಹತ್ತಿರ ತರಬೇಕು.

[26] ಆಗ ಯಾಜಕನು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ಕಾಣಿಕೆಯಿಂದ ಒಂದು ಹಿಡಿಯನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಸುಟ್ಟು ಆ ನೀರನ್ನು ಸ್ತ್ರೀಗೆ ಕುಡಿಸಬೇಕು.

[27] ಅವಳು ಅಶುದ್ಧಳಾಗಿ ಗಂಡನಿಗೆ ದ್ರೋಹಮಾಡಿದವಳಾಗಿದ್ದರೆ ಆ ನೀರನ್ನು ಕುಡಿದ ನಂತರ ಆ ನೀರು ಅವಳೊಳಗೆ ಸೇರಿ ವಿಷವಾಗುವುದರಿಂದ ಅವಳ ಹೊಟ್ಟೆ ಉಬ್ಬುವುದು, ಅವಳ ತೊಡೆಗಳು ಕ್ಷೀಣವಾಗಿ ಹೋಗುವವು. ಆಗ ಆ ಸ್ತ್ರೀಯು ತನ್ನ ಜನರ ಮಧ್ಯದಲ್ಲಿ ಶಾಪಗ್ರಸ್ತಳಾಗುವಳು.

[28] ಆದರೆ ಆ ಸ್ತ್ರೀಯು ಪರಿಶುದ್ಧಳಾಗಿ ನಿರಪರಾಧಿಯಾದ ಪಕ್ಷಕ್ಕೆ ಯಾವ ಹಾನಿಯನ್ನು ಅನುಭವಿಸದೆ ಸಂತಾನವನ್ನು ಪಡೆಯುವಳು.

[29] ಒಬ್ಬ ಹೆಂಡತಿ ತನ್ನ ಗಂಡನನ್ನು ಬಿಟ್ಟು ಜಾರತ್ವಮಾಡಿ ಅಶುದ್ಧಳಾದರೆ ಇಂತಹ ವ್ಯಭಿಚಾರದ ಸಂಶಯವನ್ನು ಪರಿಹರಿಸುವ ನಿಯಮ ಇದೇ.

[30] ಗಂಡನು ಹೆಂಡತಿಯ ವಿಷಯದಲ್ಲಿ ಸಂಶಯ ಪಟ್ಟರೆ ಅವನು ಅವಳನ್ನು ಯೆಹೋವನ ಸಮ್ಮುಖದಲ್ಲಿ ತಂದು ನಿಲ್ಲಿಸಬೇಕು. ಯಾಜಕನು ಅವಳ ವಿಷಯದಲ್ಲಿ ಈ ವಿಧಿನಿಯಮವನ್ನು ನೆರವೇರಿಸಬೇಕು.

[31] ಆಗ ಗಂಡನು ನಿರಪರಾಧಿಯಾಗುವನು. ಆ ಹೆಂಡತಿಯು ತನ್ನ ಅಕ್ರಮವನ್ನು ಹೊತ್ತುಕೊಳ್ಳುವಳು.’”

ಅರಣ್ಯಕಾಂಡ — Chapters