[1] ಆಗ ಜನಸಮೂಹದವರೆಲ್ಲರೂ ತಮ್ಮ ಸ್ವರ ಎತ್ತಿ ಆ ರಾತ್ರಿಯೆಲ್ಲಾ ಗೋಳಾಡಿದರು.
[2] ಇಸ್ರಾಯೇಲರೆಲ್ಲರೂ ಮೋಶೆ ಮತ್ತು ಆರೋನರಿಗೆ ವಿರುದ್ಧವಾಗಿ ಗುಣುಗುಟ್ಟಿ, “ನಾವು ಈ ಮರುಭೂಮಿಯಲ್ಲಿ ಸಾಯುವುದಕ್ಕಿಂತ ಐಗುಪ್ತ ದೇಶದಲ್ಲಿಯೇ ಸತ್ತಿದ್ದರೆ ಎಷ್ಟೋ ಒಳ್ಳೆಯದಾಗಿತ್ತು
[3] ಯೆಹೋವನು ನಮ್ಮನ್ನು ಯಾಕೆ ಕತ್ತಿಯ ಬಾಯಿಂದ ಸಾಯಿಸುವುದಕ್ಕೆ ಈ ದೇಶಕ್ಕೆ ಕರೆದುಕೊಂಡು ಬಂದನು. ನಮ್ಮ ಹೆಂಡತಿಯರು ಮತ್ತು ಮಕ್ಕಳು ಬೇರೆಯವರ ಪಾಲಾಗುವರು. ನಾವು ಐಗುಪ್ತ ದೇಶಕ್ಕೆ ತಿರುಗಿ ಹೋಗುವುದು ಒಳ್ಳೆಯದಲ್ಲವೇ” ಎಂದು ಮಾತನಾಡಿಕೊಂಡರು.
[4] ಹೀಗೆ ಅವರು ಒಬ್ಬರ ಸಂಗಡಲೊಬ್ಬರು, “ನಾವು ಬೇರೆ ನಾಯಕನನ್ನು ನೇಮಿಸಿಕೊಂಡು ಐಗುಪ್ತ ದೇಶಕ್ಕೆ ಹಿಂತಿರುಗಿ ಹೋಗೋಣ” ಎಂದು ಮಾತನಾಡಿಕೊಂಡರು.
[5] ಆಗ ಮೋಶೆ ಮತ್ತು ಆರೋನರು ಇಸ್ರಾಯೇಲರ ಸರ್ವಸಮೂಹದವರ ಮುಂದೆ ಅಡ್ಡಬಿದ್ದರು.
[6] ಕಾನಾನ್ ದೇಶವನ್ನು ಸಂಚರಿಸಿ ನೋಡಿದವರಲ್ಲಿ ನೂನನ ಮಗನಾದ ಯೆಹೋಶುವನು ಮತ್ತು ಯೆಫುನ್ನೆಯ ಮಗನಾದ ಕಾಲೇಬನೂ ತಮ್ಮ ಬಟ್ಟೆಗಳನ್ನು ಹರಿದುಕೊಂಡರು.
[7] ಅವರು ಇಸ್ರಾಯೇಲರ ಸರ್ವಸಮೂಹದವರಿಗೆ ಹೀಗೆ ಹೇಳಿದರು, “ನಾವು ಸಂಚರಿಸಿ ನೋಡಿದ ದೇಶವು ಅತ್ಯುತ್ತಮವಾದದ್ದು.
[8] ಯೆಹೋವನು ನಮ್ಮನ್ನು ಮೆಚ್ಚಿಕೊಂಡರೆ ಹಾಲೂ, ಜೇನೂ ಹರಿಯುವ ಆ ದೇಶಕ್ಕೆ ನಮ್ಮನ್ನು ಸೇರಿಸಿ ಅದನ್ನು ನಮ್ಮ ಸ್ವಾಧೀನಕ್ಕೆ ಕೊಡುವನು.
[9] ಹೀಗಿರುವುದರಿಂದ ಯೆಹೋವನಿಗೆ ತಿರುಗಿಬೀಳಬೇಡಿರಿ. ಇದಲ್ಲದೆ ಆ ದೇಶದ ಜನರಿಗೆ ಭಯಪಡಬೇಡಿರಿ. ಏಕೆಂದರೆ ನಾವು ಅವರನ್ನು ಸುಲಭವಾಗಿ ಜಯಿಸಿಬಿಡುವೆವು. ಅವರಿಗೆ ನೆರಳಾಗಿದ್ದ ದೇವರು ಅವರನ್ನು ಕೈಬಿಟ್ಟಿದ್ದಾನೆ, ಯೆಹೋವನು ನಮ್ಮ ಸಂಗಡ ಇದ್ದಾನೆ. ಅವರಿಗೆ ಭಯಪಡಬೇಡಿರಿ” ಎಂದರು.
[10] ಆದರೆ ಜನಸಮೂಹದವರೆಲ್ಲರೂ ಅವರ ಮಾತುಗಳನ್ನು ಕೇಳದೆ, ಅವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಹೇಳಿಕೊಳ್ಳುತ್ತಿರುವಾಗ, ಯೆಹೋವನ ತೇಜಸ್ಸು ದೇವದರ್ಶನದ ಗುಡಾರದಲ್ಲಿ ಪ್ರಕಾಶಿಸಿ ಇಸ್ರಾಯೇಲರೆಲ್ಲರಿಗೂ ಕಾಣಿಸಿಕೊಂಡಿತು.
[11] ಯೆಹೋವನು ಮೋಶೆಗೆ, “ಈ ಜನರು ಇನ್ನು ಎಷ್ಟರವರೆಗೆ ನನ್ನನ್ನು ಅಲಕ್ಷ್ಯಮಾಡುವರು? ನಾನು ನಡೆಸಿದ ಎಲ್ಲಾ ಮಹತ್ಕಾರ್ಯಗಳನ್ನು ಇವರು ಪ್ರತ್ಯಕ್ಷವಾಗಿ ನೋಡಿದಾಗ್ಯೂ ಇನ್ನು ಎಷ್ಟು ದಿನ ನನ್ನನ್ನು ನಂಬದೆ ಇರುವರು?
[12] ನಾನು ಇವರಿಗೆ ವ್ಯಾಧಿಯನ್ನು ಉಂಟುಮಾಡಿ ಇವರನ್ನು ನಿರ್ಮೂಲಮಾಡುವೆನು. ಈ ಜನರಿಗಿಂತ ನಿನ್ನನ್ನು ದೊಡ್ಡದಾಗಿಯೂ, ಬಲಿಷ್ಠವಾಗಿಯೂ ಇರುವ ಜನಾಂಗವಾಗುವಂತೆ ಮಾಡುವೆನು” ಎಂದು ಹೇಳಿದನು.
[13] ಅದಕ್ಕೆ ಮೋಶೆಯು ಯೆಹೋವನಿಗೆ, “ನೀನು ಹೀಗೆ ಮಾಡುವುದಾದರೆ ಐಗುಪ್ತ್ಯರು ಈ ಸುದ್ದಿಯನ್ನು ಕೇಳುವರು. ಅವರ ಕೈಯಿಂದ ನೀನು ಈ ಜನರನ್ನು ಭುಜಪರಾಕ್ರಮದಿಂದ ಬಿಡಿಸಿದ ಈ ಸಂಗತಿಯನ್ನು ಈ ಕಾನಾನ್ ದೇಶದ ನಿವಾಸಿಗಳಿಗೆ ತಿಳಿಸುವರು.
[14] ಅಲ್ಲದೆ ಯೆಹೋವನಾದ ನೀನು ಇಸ್ರಾಯೇಲರ ಮಧ್ಯದಲ್ಲಿ ಇರುವ ಸಂಗತಿಯನ್ನು, ನೀನು ಇಸ್ರಾಯೇಲರಿಗೆ ಪ್ರತ್ಯಕ್ಷವಾಗಿ ಕಾಣಿಸಿಕೊಳ್ಳುವುದನ್ನು, ಹಗಲಿನಲ್ಲಿ ಮೇಘಸ್ತಂಭದಲ್ಲಿಯೂ, ರಾತ್ರಿಯಲ್ಲಿ ಅಗ್ನಿಸ್ತಂಭದಲ್ಲಿಯೂ ಇದ್ದು ಇವರ ಮುಂದೆ ನಡೆದುಹೋಗುವುದಾಗಿ ಹಾಗೂ ನೀನಿರುವ ಮೇಘವು ಇಸ್ರಾಯೇಲರ ಮೇಲೆ ಇರುವುದಾಗಿಯೂ ಈ ದೇಶದವರು ಕೇಳಿದ್ದಾರೆ.
[15] ಹೀಗಿರಲಾಗಿ ನೀನು ಒಂದೇ ಪೆಟ್ಟಿನಿಂದ ಈ ಜನರನ್ನೆಲ್ಲಾ ಸಾಯಿಸಿದರೆ ನಿನ್ನ ಪ್ರಖ್ಯಾತಿಯನ್ನು ಕೇಳಿದ ಜನಾಂಗದವರು ನಿನ್ನ ವಿಷಯದಲ್ಲಿ,
[16] “‘ಯೆಹೋವನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶದಲ್ಲಿ ಆ ಜನರನ್ನು ಸೇರಿಸುವುದಕ್ಕೆ ಶಕ್ತಿಸಾಲದೆ, ಅವರನ್ನು ಅರಣ್ಯದಲ್ಲಿ ಕೊಂದುಹಾಕಿಬಿಟ್ಟನು’ ಎಂದು ಮಾತನಾಡಿಕೊಳ್ಳುವರು.
[17] ಈಗ ನೀನು ಹೇಳಿದ ಪ್ರಕಾರ ಯೆಹೋವನ ಬಲವು ದೊಡ್ಡದಾಗಿರಲಿ ಎಂದು ಬೇಡಿಕೊಳ್ಳುತ್ತೇನೆ. ನಿನ್ನ ವಿಷಯದಲ್ಲಿ,
[18] ‘ಯೆಹೋವನು ದೀರ್ಘಶಾಂತನು, ದಯೆಯುಳ್ಳವನು, ಅಪರಾಧ ಪಾಪಗಳನ್ನು ಕ್ಷಮಿಸುವವನು, ಆದರೂ ಅಪರಾಧಿಗಳನ್ನು ಶಿಕ್ಷಿಸದೆ ಬಿಡದವನು, ತಂದೆಗಳ ಪಾಪಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುವವನು’ ಎಂದು ಹೇಳಿದ್ದಿ.
[19] ನಾವು ಐಗುಪ್ತ ದೇಶದಿಂದ ಬಂದ ದಿನದಿಂದ ಮೊದಲುಗೊಂಡು ಇದುವರೆಗೆ ನೀನು ಈ ಜನರ ಪಾಪಗಳನ್ನು ಕ್ಷಮಿಸಿದ ಪ್ರಕಾರವೇ ಈಗಲೂ ಮಹಾಕೃಪೆಯಿಂದ ಇವರ ಪಾಪವನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ” ಎಂದು ಪ್ರಾರ್ಥಿಸಿದನು.
[20] ಅದಕ್ಕೆ ಯೆಹೋವನು, “ನಿನ್ನ ಪ್ರಾರ್ಥನೆಯ ಮೇರೆಗೆ ನಾನು ಅವರನ್ನು ಕ್ಷಮಿಸಿದ್ದೇನೆ.
[21] ಆದರೆ ನನ್ನ ಜೀವದಾಣೆ, ಯೆಹೋವನ ಮಹಿಮೆಯು ಭೂಲೋಕದಲ್ಲೆಲ್ಲಾ ತುಂಬಿರುವುದು.
[22] ಈ ಮನುಷ್ಯರೆಲ್ಲರು ಐಗುಪ್ತ ದೇಶದಲ್ಲಿಯೂ, ಮರುಭೂಮಿಯಲ್ಲಿಯೂ, ನಾನು ನಡೆಸಿರುವ ಮಹತ್ಕಾರ್ಯಗಳನ್ನೂ, ನನ್ನ ಮಹಿಮೆಯನ್ನೂ ನೋಡಿದರೂ ನನ್ನ ಮಾತಿಗೆ ಕಿವಿಗೊಡದೆ, ಪದೇ ಪದೇ ನನ್ನನ್ನು ಪರೀಕ್ಷಿಸಿದ್ದರಿಂದ
[23] ನಾನು ಅವರ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ಇವರಲ್ಲಿ ಯಾರೂ ನೋಡುವುದಿಲ್ಲ; ನನ್ನನ್ನು ಅಲಕ್ಷ್ಯಮಾಡಿದ ಇವರಲ್ಲಿ ಯಾರೂ ಅದನ್ನು ನೋಡುವುದಿಲ್ಲ.
[24] ನನ್ನ ದಾಸನಾದ ಕಾಲೇಬನಿಗೆ ಅವರಂಥ ಮನಸ್ಸುಳ್ಳವನಾಗಿರದೆ ಮನಃಪೂರ್ವಕವಾಗಿ ನನ್ನ ಮಾತನ್ನು ಅನುಸರಿಸಿ ನಡೆದುದ್ದರಿಂದ ಅವನು ಸಂಚರಿಸಿದ ಆ ದೇಶದಲ್ಲಿ ಅವನನ್ನು ಸೇರಿಸುವೆನು, ಅವನ ಸಂತತಿಯವರು ಅದನ್ನು ಸ್ವಾಧೀನಪಡಿಸಿಕೊಳ್ಳುವರು.
[25] ಅಮಾಲೇಕ್ಯರೂ, ಕಾನಾನ್ಯರೂ ಆ ತಗ್ಗಿನಲ್ಲಿ ವಾಸವಾಗಿದ್ದಾರೆ. ನೀವು ನಾಳೆ ಹಿಂದಿರುಗಿ ಕೆಂಪು ಸಮುದ್ರಕ್ಕೆ ಹೋಗುವ ದಾರಿಯಲ್ಲಿ ಅರಣ್ಯಕ್ಕೆ ಪ್ರಯಾಣಮಾಡಬೇಕು” ಎಂದು ಹೇಳಿದನು.
[26] ಯೆಹೋವನು ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ,
[27] “ನನಗೆ ವಿರುದ್ಧವಾಗಿ ಗುಣುಗುಟ್ಟುವ ಈ ದುಷ್ಟ ಸಮೂಹದವರನ್ನು ನಾನು ಎಷ್ಟು ದಿನ ಸಹಿಸಿಕೊಳ್ಳಲಿ? ಇಸ್ರಾಯೇಲರು ನನಗೆ ವಿರುದ್ಧವಾಗಿ ಗುಣುಗುಟ್ಟುವ ಮಾತುಗಳು ನನಗೆ ಕೇಳಿಸಿದವು.
[28] ನೀನು ಅವರಿಗೆ ಹೀಗೆ ಹೇಳಬೇಕು, ‘ಯೆಹೋವನು ಹೇಳುವುದೇನೆಂದರೆ, ನನ್ನ ಜೀವದಾಣೆ, ನೀವು ನನಗೆ ಕೇಳಿಸುವಂತೆ ಅಂದುಕೊಂಡ ಪ್ರಕಾರವೇ ನಾನು ಮಾಡುತ್ತೇನೆ; ನಿಮ್ಮ ಶವಗಳು ಈ ಅರಣ್ಯದಲ್ಲಿಯೇ ಬೀಳುವವು.
[29] ನೀವು ನನಗೆ ವಿರುದ್ಧವಾಗಿ ಗುಣುಗುಟ್ಟಿದ್ದರಿಂದ ನಿಮ್ಮಲ್ಲಿ ಎಣಿಕೆಯಾದವರೆಲ್ಲರು ಅಂದರೆ ಇಪ್ಪತ್ತು ವರ್ಷಕ್ಕಿಂತ ಹೆಚ್ಚು ವಯಸ್ಸುಳ್ಳವರೆಲ್ಲರೂ ಅರಣ್ಯದಲ್ಲಿಯೇ ಸಾಯುವರು.
[30] ಯೆಫುನ್ನೆಯ ಮಗನಾದ ಕಾಲೇಬನು ಮತ್ತು ನೂನನ ಮಗನಾದ ಯೆಹೋಶುವನು ಇವರಿಬ್ಬರೇ ಹೊರತು ನಿಮ್ಮಲ್ಲಿ ಯಾರೂ ನಿಮ್ಮ ವಾಸಕ್ಕಾಗಿ ನಾನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶವನ್ನು ಸೇರುವುದಿಲ್ಲ.
[31] ಆದರೆ ಇತರರ ಪಾಲಾಗುವರೆಂದು ನೀವು ಹೇಳಿದ ನಿಮ್ಮ ಚಿಕ್ಕ ಮಕ್ಕಳನ್ನು ಅಲ್ಲಿಗೆ ಸೇರಿಸುವೆನು. ನೀವು ಬೇಡವೆಂದು ಹೇಳಿದ ದೇಶವನ್ನು ಅವರು ಅನುಭವಿಸುವರು.
[32] ನೀವಂತೂ ಈ ಅರಣ್ಯದಲ್ಲಿ ಸಾಯುವಿರಿ.
[33] ನಿಮ್ಮೆಲ್ಲರ ಶವಗಳು ಈ ಮರುಭೂಮಿಯಲ್ಲಿ ಬೀಳುವವರೆಗೂ ನೀವು ಮಾಡಿದ ದ್ರೋಹದ ಫಲವನ್ನು ನಿಮ್ಮ ಮಕ್ಕಳು ಅನುಭವಿಸುವವರಾಗಿ ನಲ್ವತ್ತು ವರ್ಷ ಮರುಭೂಮಿಯಲ್ಲಿ ವಾಸಿಸಬೇಕು.
[34] ನೀವು ಆ ದೇಶವನ್ನು ಸಂಚರಿಸಿ ನೋಡಿದ ನಲ್ವತ್ತು ದಿನಗಳ ಪ್ರಕಾರ, ಒಂದು ದಿನಕ್ಕೆ ಒಂದು ವರ್ಷವಾಗಿ ಈ ಪ್ರಕಾರ ನಲ್ವತ್ತು ವರ್ಷ ನಿಮ್ಮ ಪಾಪಫಲವನ್ನು ಅನುಭವಿಸುವವರಾಗಿ ನಾನು ಕೈಬಿಟ್ಟವರ ಗತಿ ಎಂಥದೆಂದು ತಿಳಿದುಕೊಳ್ಳಬೇಕು.
[35] ಇದು ಯೆಹೋವನೆಂಬ ನಾನೇ ಹೇಳಿದ ಮಾತು. ನನಗೆ ವಿರುದ್ಧವಾಗಿ ಸೇರಿರುವ ಈ ದುಷ್ಟ ಸಮೂಹದವರೆಲ್ಲರಿಗೆ ಈ ಮಾತಿನ ಪ್ರಕಾರವೇ ಮಾಡುತ್ತೇನೆ. ಈ ಅರಣ್ಯದಲ್ಲಿಯೇ ಇವರೆಲ್ಲರೂ ಸಾಯಬೇಕು’” ಎಂದು ಹೇಳಿದನು.
[36] ಆ ದೇಶವನ್ನು ಸಂಚರಿಸಿ ನೋಡುವುದಕ್ಕೆ ಮೋಶೆಯಿಂದ ಕಳುಹಿಸಲ್ಪಟ್ಟ ಮನುಷ್ಯರು ಹಿಂದಿರುಗಿ ಬಂದು ಆ ದೇಶದ ವಿಷಯದಲ್ಲಿ ಅಶುಭ ಸಮಾಚಾರವನ್ನು ಹೇಳಿ ಸರ್ವಸಮೂಹದವರನ್ನು ಮೋಶೆಗೆ ವಿರುದ್ಧವಾಗಿ ಗುಣುಗುಟ್ಟುವಂತೆ ಮಾಡಿದರು.
[37] ಅಶುಭ ಸಮಾಚಾರವನ್ನು ತಂದ ಆ ಮನುಷ್ಯರು ಯೆಹೋವನ ಸನ್ನಿಧಿಯಲ್ಲಿ ವ್ಯಾಧಿಯಿಂದ ಸತ್ತರು.
[38] ಆ ದೇಶವನ್ನು ಸಂಚರಿಸಿ ನೋಡುವುದಕ್ಕೆ ಹೋಗಿದ್ದ ಮನುಷ್ಯರಲ್ಲಿ ನೂನನ ಮಗನಾದ ಯೆಹೋಶುವನು ಮತ್ತು ಯೆಫುನ್ನೆಯ ಮಗನಾದ ಕಾಲೇಬನು ಮಾತ್ರ ಉಳಿದರು.
[39] ಮೋಶೆ ಯೆಹೋವನ ಮಾತುಗಳನ್ನೆಲ್ಲಾ ಇಸ್ರಾಯೇಲರಿಗೆ ತಿಳಿಸಲಾಗಿ ಅವರು ಬಹಳ ದುಃಖಪಟ್ಟರು.
[40] ಮರುದಿನ ಬೆಳಿಗ್ಗೆ ಜನರು ಎದ್ದು, “ನಾವು ಪಾಪ ಮಾಡಿರುವುದು ನಿಜ; ಯೆಹೋವನು ವಾಗ್ದಾನ ಮಾಡಿದ ಸ್ಥಳಕ್ಕೆ ಹತ್ತೋಣ ಬನ್ನಿ” ಎಂದು ಹೇಳಿಕೊಳ್ಳುತ್ತಾ ಆ ಬೆಟ್ಟದ ಮೇಲಕ್ಕೆ ಹತ್ತಿಹೋದರು.
[41] ಆದರೆ ಮೋಶೆ ಅವರಿಗೆ, “ನೀವು ಯಾಕೆ ಹೀಗೆ ಮಾಡಿ ಯೆಹೋವನ ಆಜ್ಞೆಯನ್ನು ಮೀರುತ್ತೀರಿ? ಇದು ಸಫಲವಾಗುವುದಿಲ್ಲ.
[42] ಯೆಹೋವನು ನಿಮ್ಮ ಸಂಗಡ ಇರುವುದಿಲ್ಲ, ಹತ್ತಬೇಡಿರಿ. ನೀವು ಶತ್ರುಗಳ ಮುಂದೆ ನಿಲ್ಲಲಾರದೆ ಬಿದ್ದು ಸತ್ತುಹೋಗುವಿರಿ.
[43] ಅಲ್ಲಿ ಅಮಾಲೇಕ್ಯರೂ, ಕಾನಾನ್ಯರೂ ನಿಮ್ಮ ಎದುರಿನಲ್ಲಿ ಇರುವುದರಿಂದ ನೀವು ಅವರ ಕತ್ತಿಯಿಂದ ಸತ್ತುಹೋಗುವಿರಿ. ನೀವು ಯೆಹೋವನ ಮಾತನ್ನು ಅನುಸರಿಸದೆ ತಿರುಗಿಬಿದ್ದ ಕಾರಣ ಆತನು ನಿಮ್ಮೊಂದಿಗೆ ಇರುವುದಿಲ್ಲ” ಎಂದು ಹೇಳಿದನು.
[44] ಆದರೂ ಅವರು ಹಟಮಾಡಿ ಆ ಬೆಟ್ಟವನ್ನು ಹತ್ತಿದರು. ಯೆಹೋವನ ಒಡಂಬಡಿಕೆಯ ಮಂಜೂಷವಾಗಲಿ ಮೋಶೆಯಾಗಲಿ ಪಾಳೆಯವನ್ನು ಬಿಟ್ಟು ಹೊರಡಲಿಲ್ಲ.
[45] ಆಗ ಆ ಬೆಟ್ಟದ ಸೀಮೆಯಲ್ಲಿ ವಾಸವಾಗಿದ್ದ ಅಮಾಲೇಕ್ಯರೂ ಮತ್ತು ಕಾನಾನ್ಯರೂ ಇಳಿದು ಬಂದು ಇಸ್ರಾಯೇಲರನ್ನು ಹೊಡೆದು ಹೊರ್ಮಾ ಪಟ್ಟಣದವರೆಗೂ ಬೆನ್ನಟ್ಟಿ ಸಂಹರಿಸಿದರು.