[1] ಆ ಘೋರವಾದ ವ್ಯಾಧಿ ನಿಂತ ಮೇಲೆ ಯೆಹೋವನು ಮೋಶೆಗೂ ಮತ್ತು ಆರೋನನ ಮಗನೂ, ಯಾಜಕನೂ ಆಗಿರುವ ಎಲ್ಲಾಜಾರನ ಸಂಗಡ ಮಾತನಾಡಿ,
[2] “ನೀವು ಇಸ್ರಾಯೇಲರ ಸರ್ವಸಮೂಹದವರಲ್ಲಿ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಿನ ವಯಸ್ಸುಳ್ಳವರನ್ನು ಅಂದರೆ ಯುದ್ಧಕ್ಕೆ ಹೊರಡತಕ್ಕವರನ್ನು ಗೋತ್ರಗೋತ್ರಗಳ ಪ್ರಕಾರ ಲೆಕ್ಕಿಸಬೇಕು” ಎಂದು ಆಜ್ಞಾಪಿಸಿದನು.
[3] ಆಗ ಮೋಶೆಯೂ ಯಾಜಕನಾದ ಎಲ್ಲಾಜಾರನೂ ಮೋವಾಬ್ಯರ ಬಯಲುಗಳಲ್ಲಿ ಯೆರಿಕೋ ಪಟ್ಟಣಕ್ಕೆ ಎದುರಾಗಿ ಯೊರ್ದನ್ ನದಿಯ ಹತ್ತಿರ ಅವರ ಸಂಗಡ ಮಾತನಾಡಿ,
[4] “ಯೆಹೋವನು ಮೋಶೆಗೆ ಅಜ್ಞಾಪಿಸಿದಂತೆ ಐಗುಪ್ತ ದೇಶದಿಂದ ಹೊರಟ್ಟಿದ್ದ ಮತ್ತು ಮಹಾಯಾಜಕನಾದ ಎಲ್ಲಾಜಾರನೂ ಯೊರ್ದನ್ ನದಿಯ ತೀರದಲ್ಲಿ ಮೋವಾಬ್ಯರ ಮೈದಾನದಲ್ಲಿ ಇಸ್ರಾಯೇಲರಲ್ಲಿ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಿನ ವಯಸ್ಸುಳ್ಳವರನ್ನು ಲೆಕ್ಕಿಸಿರಿ” ಎಂದನು.
[5] ಇಸ್ರಾಯೇಲನ ಚೊಚ್ಚಲು ಮಗನಾದ ರೂಬೇನನಿಂದುಂಟಾದ ಕುಟುಂಬಗಳು ಯಾವುವೆಂದರೆ: ಹನೋಕನ ವಂಶಸ್ಥರಾದ ಹನೋಕ್ಯರು, ಪಲ್ಲೂವಿನ ವಂಶಸ್ಥರಾದ ಪಲ್ಲೂವಿನವರು,
[6] ಹೆಚ್ರೋನನ ವಂಶಸ್ಥರಾದ ಹೆಚ್ರೋನ್ಯರು, ಕರ್ಮೀಯ ವಂಶಸ್ಥರಾದ ಕರ್ಮೀಯರು ಇವರೇ.
[7] ಇವರೇ ರೂಬೇನ್ಯರ ಕುಟುಂಬದವರು, ಇವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 43,730 ಮಂದಿ.
[8] ಪಲ್ಲೂವಿನ ಮಗನು ಎಲೀಯಾಬ್.
[9] ಎಲೀಯಾಬನ ಮಕ್ಕಳು: ನೆಮೂವೇಲ್, ದಾತಾನ್, ಅಬೀರಾಮ್ ಎಂಬುವವರೇ. ಕೋರಹನ ಗುಂಪಿನವರು ಯೆಹೋವನಿಗೆ ವಿರುದ್ಧವಾಗಿ ವಿವಾದಿಸಿದ ಕಾಲದಲ್ಲಿ ಅವರೊಳಗೆ ಸೇರಿಕೊಂಡು ಮೋಶೆ ಮತ್ತು ಆರೋನರಿಗೆ ವಿರುದ್ಧವಾಗಿ ವಿವಾದಿಸಿದ ಆಲೋಚನಾಕರ್ತರಾದ ದಾತಾನ್ ಮತ್ತು ಅಬೀರಾಮರು ಇವರೇ.
[10] ಭೂಮಿಯು ಬಾಯ್ದೆರೆದು ಅವರನ್ನೂ ಮತ್ತು ಕೋರಹನನ್ನೂ ನುಂಗಿಬಿಟ್ಟಿತು ಮತ್ತು ಬೆಂಕಿಯು ಆ ಗುಂಪಿನವರಲ್ಲಿ ಬೇರೆ ಇನ್ನೂರೈವತ್ತು ಮಂದಿಯನ್ನು ದಹಿಸಿ ಇಸ್ರಾಯೇಲರಿಗೆ ಎಚ್ಚರಿಕೆಯನ್ನು ಉಂಟುಮಾಡಿತು.
[11] ಆ ಗುಂಪಿನವರೆಲ್ಲರು ಸತ್ತರೂ ಕೋರಹನ ಮಕ್ಕಳು ಆ ಕಾಲದಲ್ಲಿ ಸಾಯಲಿಲ್ಲ.
[12] ಸಿಮೆಯೋನ್ ಕುಲದ ಕುಟುಂಬಗಳು ಯಾವುವೆಂದರೆ: ನೆಮೂವೇಲನ ವಂಶಸ್ಥರಾದ ನೆಮೂವೇಲ್ಯರು, ಯಾಮೀನನ ವಂಶಸ್ಥರಾದ ಯಾಮೀನ್ಯರು, ಯಾಕೀನನ ವಂಶಸ್ಥರಾದ ಯಾಕೀನ್ಯರು,
[13] ಜೆರಹನ ವಂಶಸ್ಥರಾದ ಜೆರಹಿಯರು, ಸೌಲನ ವಂಶಸ್ಥರಾದ ಸೌಲ್ಯರು ಇವರೇ.
[14] ಸಿಮೆಯೋನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 22,200 ಮಂದಿ.
[15] ಗಾದ್ ಕುಲದ ಕುಟುಂಬಗಳು ಯಾವುವೆಂದರೆ: ಚೆಫೋನನ ವಂಶಸ್ಥರಾದ ಚೆಫೋನ್ಯರು, ಹಗ್ಗೀಯ ವಂಶಸ್ಥರಾದ ಹಗ್ಗೀಯರು, ಶೂನೀಯ ವಂಶಸ್ಥರಾದ ಶೂನೀಯರು,
[16] ಒಜ್ನೀಯ ವಂಶಸ್ಥರಾದ ಒಜ್ನೀಯರು, ಏರೀಯ ವಂಶಸ್ಥರಾದ ಏರೀಯರು,
[17] ಅರೋದನ ವಂಶಸ್ಥರಾದ ಅರೋದ್ಯರು, ಅರೇಲೀಯ ವಂಶಸ್ಥರಾದ ಅರೇಲೀಯರು ಇವರೇ.
[18] ಗಾದ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 40,500 ಮಂದಿ.
[19] ಯೆಹೂದನ ಮಕ್ಕಳಲ್ಲಿ ಏರ್ ಮತ್ತು ಓನಾನರು ಕಾನಾನ್ ದೇಶದಲ್ಲೇ ಸತ್ತರು.
[20] ಯೆಹೂದನ ಕುಲದಲ್ಲಿ ಉಳಿದ ಕುಟುಂಬಗಳು ಯಾವುವೆಂದರೆ: ಶೇಲಹನ ವಂಶಸ್ಥರಾದ ಶೇಲಾನ್ಯರು, ಪೆರೆಹನ ವಂಶಸ್ಥರಾದ ಪೆರೆಚ್ಯರು, ಜೆರಹನ ವಂಶಸ್ಥರಾದ ಜೆರಹಿಯರು ಇವರೇ.
[21] ಪೆರೆಚನಿಂದುಂಟಾದ ಕುಟುಂಬಗಳು: ಹೆಚ್ರೋನನ ವಂಶಸ್ಥರಾದ ಹೆಚ್ರೋನ್ಯರೂ ಹಾಮೂಲನ ವಂಶಸ್ಥರಾದ ಹಾಮೂಲ್ಯರೂ.
[22] ಯೆಹೂದ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 76,500 ಮಂದಿ.
[23] ಇಸ್ಸಾಕಾರ್ ಕುಲದ ಕುಟುಂಬಗಳು ಯಾವುವೆಂದರೆ: ತೋಲನ ವಂಶಸ್ಥರಾದ ತೋಲಾಯರು, ಪುವ್ವನ ವಂಶಸ್ಥರಾದ ಪೂನ್ಯರು,
[24] ಯಾಶೂಬನ ವಂಶಸ್ಥರಾದ ಯಾಶೂಬ್ಯರು, ಶಿಮ್ರೋನನ ವಂಶಸ್ಥರಾದ ಶಿಮ್ರೋನ್ಯರು ಇವರೇ.
[25] ಇಸ್ಸಾಕಾರ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 64,300 ಮಂದಿ.
[26] ಜೆಬುಲೂನ್ ಕುಲದ ಕುಟುಂಬಗಳು ಯಾವುವೆಂದರೆ: ಸೆರೆದನ ವಂಶಸ್ಥರಾದ ಸೆರೆದ್ಯರು, ಏಲೋನನ ವಂಶಸ್ಥರಾದ ಏಲೋನ್ಯರು, ಯಹಲೇಲನ ವಂಶಸ್ಥರಾದ ಯಹಲೇಲ್ಯರು.
[27] ಜೆಬುಲೂನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 60,500 ಮಂದಿ.
[28] ಕುಟುಂಬಗಳ ಪ್ರಕಾರ ಯೋಸೇಫನ ಮಕ್ಕಳು ಮನಸ್ಸೆ ಮತ್ತು ಎಫ್ರಾಯೀಮ್.
[29] ಮನಸ್ಸೆ ಕುಲದ ಕುಟುಂಬಗಳು ಯಾವುವೆಂದರೆ: ಮಾಕೀರನ ವಂಶಸ್ಥರಾದ ಮಾಕೀರ್ಯರು, ಮಾಕೀರನ ಮಗನಾದ ಗಿಲ್ಯಾದನ ವಂಶಸ್ಥರಾದ ಗಿಲ್ಯಾದ್ಯರು ಇವರೇ.
[30] ಗಿಲ್ಯಾದನ ವಂಶದವರು ಯಾರೆಂದರೆ: ಈಯೆಜೆರನ ವಂಶಸ್ಥರಾದ ಈಯೆಜೆರ್ಯರು, ಹೇಲೆಕನ ವಂಶಸ್ಥರಾದ ಹೇಲೆಕ್ಯರು,
[31] ಅಸ್ರೀಯೇಲನ ವಂಶಸ್ಥರಾದ ಅಸ್ರೀಯೇಲ್ಯರು, ಶೆಕೆಮನ ವಂಶಸ್ಥರಾದ ಶೆಕೆಮ್ಯರು,
[32] ಶೆಮೀದಾಯನ ವಂಶಸ್ಥರಾದ ಶೆಮೀದಾಯರು, ಹೇಫೆರನ ವಂಶಸ್ಥರಾದ ಹೇಫೆರ್ಯರು ಇವರೇ.
[33] ಹೇಫೆರನ ಮಗನಾದ ಚಲ್ಪಹಾದನಿಗೆ ಹೆಣ್ಣು ಮಕ್ಕಳು ಹುಟ್ಟಿದರೇ ಹೊರತು ಗಂಡುಮಕ್ಕಳು ಹುಟ್ಟಲಿಲ್ಲ. ಅವನ ಹೆಣ್ಣುಮಕ್ಕಳು: ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ ಎಂಬುವವರೇ.
[34] ಮನಸ್ಸೆ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 52,700 ಮಂದಿ.
[35] ಎಫ್ರಾಯೀಮ್ ಕುಲದ ಕುಟುಂಬಗಳು ಯಾವುವೆಂದರೆ: ಶೂತೆಲಹನ ವಂಶಸ್ಥರಾದ ಶೂತೆಲಹ್ಯರು, ಬೆಕೆರನ ವಂಶಸ್ಥರಾದ ಬೆಕೆರ್ಯರು, ತಹನನ ವಂಶಸ್ಥರಾದ ತಹನಿಯರು,
[36] ಶೂತೆಲಹನ ಮಗನಾದ ಏರಾನನ ವಂಶಸ್ಥರಾದ ಏರಾನ್ಯರು ಇವರೇ.
[37] ಎಫ್ರಾಯೀಮ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 32,500 ಮಂದಿ. ಇದೇ ಯೋಸೇಫ್ ವಂಶದ ಕುಟುಂಬಗಳ ವಿವರ.
[38] ಬೆನ್ಯಾಮೀನ್ ಕುಲದ ಕುಟುಂಬಗಳು ಯಾವುವೆಂದರೆ: ಬೆಲಗನ ವಂಶಸ್ಥರಾದ ಬೆಲಗ್ಯರು, ಅಷ್ಬೇಲನ ವಂಶಸ್ಥರಾದ ಅಷ್ಬೇಲ್ಯರು, ಅಹೀರಾಮನ ವಂಶಸ್ಥರಾದ ಅಹೀರಾಮ್ಯರು,
[39] ಶೂಫಾಮನ ವಂಶಸ್ಥರಾದ ಶೂಫಾಮ್ಯರು, ಹೊಫಾಮನ ವಂಶಸ್ಥರಾದ ಹೊಫಾಮ್ಯರು ಇವರೇ.
[40] ಬೆಲಗನಿಗೆ ಅರ್ದ್, ನಾಮಾನ್ ಎಂಬ ಇಬ್ಬರು ಮಕ್ಕಳಿದ್ದರು. ಅರ್ದನ ವಂಶದವರು ಅರ್ದ್ಯರು, ನಾಮಾನನ ವಂಶದವರು ನಾಮಾನ್ಯರು.
[41] ಬೆನ್ಯಾಮೀನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 45,600 ಮಂದಿ.
[42] ದಾನ್ ಕುಲದ ಕುಟುಂಬಗಳು ಯಾವುವೆಂದರೆ: ಶೂಹಾಮನ ವಂಶಸ್ಥರಾದ ಶೂಹಾಮ್ಯರು.
[43] ಶೂಹಾಮ್ಯರ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 64,400 ಮಂದಿ.
[44] ಆಶೇರ್ ಕುಲದ ಕುಟುಂಬಗಳು: ಇಮ್ನಾಹನ ವಂಶಸ್ಥರಾದ ಇಮ್ನಾಹ್ಯರು, ಇಷ್ವೀಯ ವಂಶಸ್ಥರಾದ ಇಷ್ವೀಯರು, ಬೆರೀಯನ ವಂಶಸ್ಥರಾದ ಬೆರೀಯರು.
[45] ಬೆರೀಯನ ಮಕ್ಕಳಿಂದುಂಟಾದ ಕುಟುಂಬಗಳು: ಹೇಬೆರನ ವಂಶಸ್ಥರಾದ ಹೇಬೆರ್ಯರು, ಮಲ್ಕೀಯೇಲನ ವಂಶಸ್ಥರಾದ ಮಲ್ಕೀಯೇಲ್ಯರು.
[46] ಆಶೇರನಿಗೆ ಸೆರಹಳೆಂಬ ಮಗಳು ಸಹ ಇದ್ದಳು.
[47] ಆಶೇರ್ ಕುಲದವರಾದ ಇವರಲ್ಲಿ ಲೆಕ್ಕಿಸಲ್ಪಟ್ಟವರು 53,400 ಮಂದಿ.
[48] ನಫ್ತಾಲಿ ಕುಲದ ಕುಟುಂಬಗಳು: ಯಹಚೇಲನ ವಂಶಸ್ಥರಾದ ಯಹಚೇಲ್ಯರು, ಗೂನೀಯ ವಂಶಸ್ಥರಾದ ಗೂನೀಯರು,
[49] ಯೇಚೆರನ ವಂಶಸ್ಥರಾದ ಯೇಚೆರ್ಯರು, ಶಿಲ್ಲೇಮನ ವಂಶಸ್ಥರಾದ ಶಿಲ್ಲೇಮ್ಯರು.
[50] ನಫ್ತಾಲಿ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 45,400 ಮಂದಿ.
[51] ಇಸ್ರಾಯೇಲರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 6,01,730.
[52] ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನೆಂದರೆ,
[53] “ನೀವು ಈ ಕುಲಗಳಿಗೆ ಅವರವರ ಸಂಖ್ಯೆಯ ಪ್ರಕಾರ ಆ ದೇಶವನ್ನು ಸ್ವದೇಶವಾಗುವಂತೆ ಹಂಚಿಕೊಡಬೇಕು.
[54] ಹೆಚ್ಚು ಮಂದಿಯುಳ್ಳ ಕುಲಕ್ಕೆ ಹೆಚ್ಚಾಗಿಯೂ, ಕಡಿಮೆ ಮಂದಿಯುಳ್ಳ ಕುಲಕ್ಕೆ ಕಡಿಮೆಯಾಗಿಯೂ ಕೊಡಬೇಕು. ಲೆಕ್ಕಿಸಿದ ಸಂಖ್ಯೆಯ ಪ್ರಕಾರವೇ ಪ್ರತಿಯೊಂದು ಕುಲಕ್ಕೆ ಭೂಮಿಯನ್ನು ಸ್ವತ್ತಾಗಿ ಕೊಡಬೇಕು.
[55] ಪ್ರತಿಯೊಂದು ಕುಲದ ಪಿತೃವಿನ ಹೆಸರನ್ನು ಬರೆದು ಚೀಟುಹಾಕಿ ಆಯಾ ಕುಲಕ್ಕೆ ಸ್ವತ್ತನ್ನು ಗೊತ್ತು ಮಾಡಬೇಕು.
[56] ಹೆಚ್ಚು ಮಂದಿಯುಳ್ಳ ಕುಲಕ್ಕಾಗಲಿ, ಕಡಿಮೆಯಾದ ಕುಲಕ್ಕಾಗಲಿ ಚೀಟು ಬಂದ ಪ್ರಕಾರವೇ ಸ್ವತ್ತನ್ನು ಗೊತ್ತುಮಾಡಬೇಕು.”
[57] ಲೇವಿಯರೊಳಗೆ ಲೆಕ್ಕಿಸಲ್ಪಟ್ಟ ಕುಟುಂಬಗಳು: ಗೇರ್ಷೋನನ ವಂಶದವರಾದ ಗೇರ್ಷೋನ್ಯರು, ಕೆಹಾತನ ವಂಶದವರಾದ ಕೆಹಾತ್ಯರು, ಮೆರಾರೀಯ ವಂಶದವರಾದ ಮೆರಾರೀಯರು.
[58] ಲೇವಿ ಕುಲದವರ ಕುಟುಂಬಗಳು: ಲಿಬ್ನೀಯರ ಕುಟುಂಬ, ಹೆಬ್ರೋನ್ಯರ ಕುಟುಂಬ, ಮಹ್ಲೀಯರ ಕುಟುಂಬ, ಮೂಷೀಯರ ಕುಟುಂಬ, ಕೋರಹಿಯರ ಕುಟುಂಬ ಇವುಗಳೇ. ಕೆಹಾತನು ಅಮ್ರಾಮನನ್ನು ಪಡೆದನು.
[59] ಅಮ್ರಾಮನ ಹೆಂಡತಿ ಯಾರೆಂದರೆ: ಐಗುಪ್ತ ದೇಶದಲ್ಲಿ ಲೇವಿಯಿಂದ ಹುಟ್ಟಿದ ಯೋಕೆಬೆದಳು. ಈಕೆಯಲ್ಲಿ ಅಮ್ರಾಮನಿಂದ ಆರೋನನೂ, ಮೋಶೆಯೂ ಮತ್ತು ಇವರ ಅಕ್ಕ ಮಿರ್ಯಾಮಳೂ ಹುಟ್ಟಿದರು.
[60] ಆರೋನನಿಂದ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್ ಎಂಬುವವರು ಹುಟ್ಟಿದರು.
[61] ನಾದಾಬ್ ಮತ್ತು ಅಬೀಹೂ ಎಂಬಿಬ್ಬರು ಯೆಹೋವನ ಸನ್ನಿಧಿಯಲ್ಲಿ ಆತನು ಆಜ್ಞಾಪಿಸದೆ ಇದ್ದ ಬೇರೆ ಬೆಂಕಿಯಿಂದ ಧೂಪವನ್ನು ಸಮರ್ಪಿಸಿದ್ದರಿಂದ ಸತ್ತುಹೋದರು.
[62] ಬೇರೆ ಇಸ್ರಾಯೇಲರಿಗೆ ಸ್ವತ್ತು ದೊರಕಿದಂತೆ ಲೇವಿಯರಿಗೆ ಸ್ವತ್ತು ದೊರೆಯದೆ ಹೋದುದರಿಂದ ಅವರು ಇಸ್ರಾಯೇಲರೊಡನೆ ಲೆಕ್ಕಿಸಲ್ಪಡಲಿಲ್ಲ ಲೇವಿಯರೊಳಗೆ ಒಂದು ತಿಂಗಳು ಮೊದಲುಗೊಂಡು ಹೆಚ್ಚು ವಯಸ್ಸುಳ್ಳ ಗಂಡಸರನ್ನು ಲೆಕ್ಕಿಸಲಾಗಿ ಅವರ ಸಂಖ್ಯೆ - 23,000 ಮಂದಿ.
[63] ಯೊರ್ದನ್ ನದಿಯ ತೀರದಲ್ಲಿ ಯೆರಿಕೋ ಪಟ್ಟಣದ ಹತ್ತಿರ ಮೋವಾಬ್ಯರ ಮೈದಾನದಲ್ಲಿ ಮೋಶೆಯೂ ಮತ್ತು ಯಾಜಕನಾದ ಎಲ್ಲಾಜಾರನೂ ಇಸ್ರಾಯೇಲರ ಜನಸಂಖ್ಯೆಯನ್ನು ಲೆಕ್ಕಿಸಿದರು.
[64] ಮೋಶೆಯೂ ಮತ್ತು ಯಾಜಕನಾದ ಆರೋನನೂ ಸೀನಾಯಿ ಅರಣ್ಯದಲ್ಲಿ ಇಸ್ರಾಯೇಲರ ಸಂಖ್ಯೆಯಲ್ಲಿ ಲೆಕ್ಕಿಸಲ್ಪಟ್ಟವರೊಳಗೆ ಒಬ್ಬರಾದರೂ ಇವರಲ್ಲಿ ಇರಲಿಲ್ಲ.
[65] ಅವರೆಲ್ಲರೂ ಅರಣ್ಯದಲ್ಲಿಯೇ ಸಾಯುವರೆಂದು ಯೆಹೋವನು ಅವರ ವಿಷಯದಲ್ಲಿ ಹೇಳಿದ್ದನು. ಆದುದರಿಂದ ಯೆಫುನ್ನೆಯ ಮಗನಾದ ಕಾಲೇಬ್ ಮತ್ತು ನೂನನ ಮಗನಾದ ಯೆಹೋಶುವ ಇವರಿಬ್ಬರ ಹೊರತಾಗಿ ಅವರಲ್ಲಿ ಯಾರೂ ಉಳಿಯಲಿಲ್ಲ.