Skip to content
Opens in a new window
Listen to this chapter • 5:11

[1] ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,

[2] “ನೀನು ಇಸ್ರಾಯೇಲರಿಗೆ ಆಜ್ಞಾಪಿಸಿ ಅವರಿಗೆ, ‘ನನಗೆ ಸುಗಂಧಹೋಮಮಾಡುವುದಕ್ಕಾಗಿ ಇಸ್ರಾಯೇಲರು ನನಗೋಸ್ಕರ ತರುವ ಆಹಾರವನ್ನು ನೇಮಕವಾದ ಕಾಲಗಳಲ್ಲಿ ತಂದು ಎಚ್ಚರಿಕೆಯಿಂದ ಸಮರ್ಪಿಸಬೇಕೆಂದು ಅವರಿಗೆ ಆಜ್ಞಾಪಿಸು.’

[3] ಇದರ ವಿಷಯದಲ್ಲಿ ನೀನು ಹೇಳಬೇಕಾದುದೇನೆಂದರೆ, ‘ನೀವು ಪ್ರತಿದಿನವೂ ಯೆಹೋವನಿಗೆ ಸರ್ವಾಂಗಹೋಮಕ್ಕಾಗಿ ದೋಷವಿಲ್ಲದ ಒಂದು ವರ್ಷದ ಎರಡು ಕುರಿಮರಿಗಳನ್ನು ಸಮರ್ಪಿಸಬೇಕು.

[4] ಹೊತ್ತಾರೆಯಲ್ಲಿ ಒಂದು ಕುರಿಯನ್ನು, ಸಾಯಂಕಾಲದಲ್ಲಿ ಒಂದು ಕುರಿಯನ್ನೂ ಸಮರ್ಪಿಸಬೇಕು.

[5] ನೀವು ಧಾನ್ಯನೈವೇದ್ಯಕ್ಕಾಗಿ ಒಂದುವರೆ ಸೇರು ಶ್ರೇಷ್ಠವಾದ ಎಣ್ಣೆಯನ್ನೂ, ಮೂರು ಸೇರು ಹಿಟ್ಟನ್ನು ಬೆರೆಸಿ ಸಮರ್ಪಿಸಬೇಕು.

[6] ನೀವು ಪ್ರತಿನಿತ್ಯವೂ ಯೆಹೋವನಿಗೆ ಸುಗಂಧಕರವಾದ ಈ ಸರ್ವಾಂಗಹೋಮವನ್ನು ಮಾಡಬೇಕೆಂಬುದಾಗಿ ಸೀನಾಯಿ ಬೆಟ್ಟದಲ್ಲಿ ನೇಮಕವಾಯಿತು.

[7] ಒಂದು ಕುರಿಮರಿಯೊಂದಿಗೆ ಪರಿಶುದ್ಧ ಸ್ಥಳದಲ್ಲಿ ಒಂದುವರೆ ಸೇರು ಅಮಲೇರುವ ದ್ರಾಕ್ಷಾರಸದ ಪಾನದ್ರವ್ಯ ಅರ್ಪಣೆಗಾಗಿ, ಯೆಹೋವನಿಗೋಸ್ಕರ ಹೊಯ್ದುಬಿಡಬೇಕು.

[8] ಸಾಯಂಕಾಲದಲ್ಲಿ ಇನ್ನೊಂದು ಕುರಿಯನ್ನು ಹೋಮಮಾಡುವಾಗ ಹೊತ್ತಾರೆಯಲ್ಲಿ ಮಾಡಿದ ಪ್ರಕಾರವೇ ಅದರೊಂದಿಗೆ ಧಾನ್ಯದ್ರವ್ಯ, ಪಾನದ್ರವ್ಯಗಳನ್ನೂ ಸಮರ್ಪಿಸಬೇಕು. ಅದು ಯೆಹೋವನಿಗೆ ಸುಗಂಧಕರ ಹೋಮವಾಗಿರುವುದು.

[9] “‘ಸಬ್ಬತ್ ದಿನದಲ್ಲಿ ಧಾನ್ಯ ಸಮರ್ಪಣೆಗಾಗಿ ಎರಡು ಪೂರ್ಣಾಂಗವಾದ ದೋಷವಿಲ್ಲದ ಒಂದು ವರ್ಷದ ಕುರಿಮರಿಯನ್ನು, ಎಣ್ಣೆ ಬೆರಸಿದ ಆರು ಸೇರು ಹಿಟ್ಟನ್ನೂ, ಅದಕ್ಕೆ ತಕ್ಕ ಪಾನದ ಸಮರ್ಪಣೆಯನ್ನು ಮಾಡಬೇಕು.

[10] ನಿತ್ಯ ಸರ್ವಾಂಗಹೋಮವು ಹೊರತು ಪ್ರತಿ ಸಬ್ಬತ್ತಿಗೆ ತಕ್ಕ ಸರ್ವಾಂಗಹೋಮವು, ಅದರ ಪಾನದ್ರವ್ಯದ ಅರ್ಪಣೆಯೂ ಆಗಬೇಕು.

[11] “‘ಪ್ರತಿ ತಿಂಗಳ ಆರಂಭದಲ್ಲಿ ನೀವು ಸರ್ವಾಂಗಹೋಮಕ್ಕಾಗಿ ಎರಡು ಟಗರು, ಏಳು ಪೂರ್ಣಾಂಗವಾದ ಒಂದು ವರ್ಷದ ದೋಷವಿಲ್ಲದ ಕುರಿಮರಿಗಳು ಇವುಗಳನ್ನು ಯೆಹೋವನಿಗೆ ಸಮರ್ಪಿಸಬೇಕು.

[12] ಒಂದೊಂದು ಹೋರಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಒಂಭತ್ತು ಸೇರು ಹಿಟ್ಟನ್ನೂ, ಟಗರಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಬೆರಸಿದ ಆರು ಸೇರು ಹಿಟ್ಟನ್ನು ಸೇರಿಸಬೇಕು.

[13] ಕುರಿಮರಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಬೆರಸಿದ ಮೂರು ಸೇರು ಹಿಟ್ಟನ್ನು ಯೆಹೋವನಿಗೆ ಸುಗಂಧವಾಸನೆಯ ಸರ್ವಾಂಗಹೋಮಕ್ಕಾಗಿ ಬೆಂಕಿಯಿಂದ ಮಾಡಿದ ಬಲಿಯೂ ಇದೇ.

[14] ಇವುಗಳಿಗೆ ತಕ್ಕ ಪಾನದ್ರವ್ಯಾರ್ಪಣೆ ಯಾವುದೆಂದರೆ: ಒಂದೊಂದು ಹೋರಿಗೆ ಮೂರು ಸೇರು ದ್ರಾಕ್ಷಾರಸವನ್ನು, ಟಗರಿಗೆ ಎರಡು ಸೇರು ದ್ರಾಕ್ಷಾರಸವನ್ನು, ಕುರಿಗೆ ಒಂದುವರೆ ಸೇರು ದ್ರಾಕ್ಷಾರಸವನ್ನು, ವರ್ಷದ ಪ್ರತಿ ತಿಂಗಳಿನ ಆರಂಭದಲ್ಲಿ ಹೀಗೆ ಸರ್ವಾಂಗಹೋಮವನ್ನು ಮಾಡಬೇಕು.

[15] ನಿತ್ಯ ಸರ್ವಾಂಗಹೋಮ ಹೊರತು ದೋಷಪರಿಹಾರ ಯಜ್ಞಕ್ಕಾಗಿ ಒಂದು ಹೋತವನ್ನು ಅದಕ್ಕೆ ತಕ್ಕ ಪಾನದ ಅರ್ಪಣೆಯನ್ನು ಯೆಹೋವನಿಗೆ ಸಮರ್ಪಿಸಬೇಕು.

[16] “‘ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಯೆಹೋವನು ನೇಮಿಸಿದ ಹಬ್ಬವಾಗಬೇಕು.

[17] ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಜಾತ್ರೆ ಪ್ರಾರಂಭವಾಗುವುದು; ಏಳು ದಿನಗಳವರೆಗೂ ಹುಳಿಯಿಲ್ಲದ ರೊಟ್ಟಿಗಳನ್ನು ಊಟಮಾಡಬೇಕು.

[18] ಮೊದಲನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆಕೂಡಬೇಕು. ಆ ದಿನದಲ್ಲಿ ಯಾವ ಉದ್ಯೋಗವನ್ನು ನಡೆಸಬಾರದು.

[19] ಯೆಹೋವನಿಗೆ ಸರ್ವಾಂಗಹೋಮಕ್ಕಾಗಿ ಎರಡು ಹೋರಿಗಳನ್ನೂ, ಒಂದು ಟಗರನ್ನೂ ಮತ್ತು ಒಂದು ವರ್ಷದ ಏಳು ಕುರಿಗಳನ್ನೂ ಸಮರ್ಪಿಸಬೇಕು. ಈ ಪಶುಗಳೂ ಪೂರ್ಣಾಂಗವಾಗಿ ದೋಷವಿಲ್ಲದೆಯೇ ಇರಬೇಕು.

[20] ಇವುಗಳೊಂದಿಗೆ ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಹಿಟ್ಟನ್ನು ತಂದುಕೊಡಬೇಕು. ಹೋರಿಗೆ ಒಂಭತ್ತು ಸೇರು, ಟಗರಿಗೆ ಆರು ಸೇರು,

[21] ಏಳು ಕುರಿಮರಿಯಲ್ಲಿ ಒಂದೊಂದಕ್ಕೆ ಎಣ್ಣೆ ಬೆರೆಸಿದ ಮೂರು ಸೇರನ್ನು,

[22] ಅದಲ್ಲದೆ ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು.

[23] ಪ್ರತಿ ದಿನದ ಪ್ರಾತಃಕಾಲದಲ್ಲಿ ಸರ್ವಾಂಗಹೋಮವಲ್ಲದೆ ಇವುಗಳನ್ನು ಹೆಚ್ಚಾಗಿ ಸಮರ್ಪಿಸಬೇಕು.

[24] ಆ ಏಳು ದಿನಗಳಲ್ಲಿಯೂ ನಿತ್ಯ ಸರ್ವಾಂಗಹೋಮವನ್ನು ಸಮರ್ಪಿಸುವುದಲ್ಲದೆ ಮೇಲೆ ಹೇಳಿದ ಕ್ರಮದ ಪ್ರಕಾರ ಪ್ರತಿದಿನವೂ ಹೋಮರೂಪವಾಗಿ ಯೆಹೋವನಿಗೆ ಆಹಾರವನ್ನು, ಪಾನದ್ರವ್ಯವನ್ನು ಸಹ ಸಮರ್ಪಿಸಿ ಆತನಿಗೋಸ್ಕರ ಸುವಾಸನೆಯನ್ನುಂಟುಮಾಡಬೇಕು.

[25] ಏಳನೆಯ ದಿನದಲ್ಲೂ ಸಭೆಕೂಡಬೇಕು. ಆ ದಿನದಲ್ಲಿ ಯಾವ ಉದ್ಯೋಗವನ್ನು ನಡೆಸಬಾರದು.

[26] “‘ಪಸ್ಕವಾದ ಏಳು ವಾರಗಳ ಮೇಲೆ ನೀವು ಹೊಸ ಬೆಳೆಯ ಗೋದಿಯನ್ನು ಯೆಹೋವನಿಗೆ ನೈವೇದ್ಯಮಾಡುವಾಗ ಪ್ರಥಮಫಲಾರ್ಪಣೆಯ ದಿನದಲ್ಲಿ ನೀವು ಯಾವ ಉದ್ಯೋಗವನ್ನು ನಡೆಸದೆ ದೇವಾರಾಧನೆಗಾಗಿ ಸಭೆಕೂಡಬೇಕು.

[27] ಆ ದಿನದಲ್ಲಿ ನೀವು ಯೆಹೋವನಿಗೆ ಸುವಾಸನೆಯನ್ನು ಉಂಟುಮಾಡುವುದಕ್ಕೋಸ್ಕರ ಸರ್ವಾಂಗಹೋಮಕ್ಕಾಗಿ ಎರಡು ಹೋರಿ, ಒಂದು ಟಗರು, ಒಂದು ವರ್ಷದ ಏಳು ಕುರಿಗಳು ಇವುಗಳನ್ನೂ,

[28] ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಹಿಟ್ಟನ್ನು ಹಾಗೂ ಪ್ರತಿಯೊಂದು ಟಗರಿಗೆ ಒಂಭತ್ತು ಸೇರು,

[29] ಹೋರಿಗೆ ಆರು ಸೇರು, ಕುರಿಗೆ ಮೂರು ಸೇರು ಹಿಟ್ಟನ್ನೂ,

[30] ದೋಷಪರಿಹಾರ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು.

[31] ಈ ಪಶುಗಳೆಲ್ಲಾ ಪೂರ್ಣಾಂಗವಾಗಿ ಕುಂದುಕೊರತೆ ಇಲ್ಲದೆ ಇರಬೇಕು. ನಿತ್ಯ ಸರ್ವಾಂಗಹೋಮ ಮತ್ತು ಅದಕ್ಕೆ ಸೇರಿದ ಧಾನ್ಯದ್ರವ್ಯ, ನೈವೇದ್ಯ ಇವುಗಳನ್ನಲ್ಲದೆ ಮೇಲೆ ಕಂಡ ಯಜ್ಞಗಳನ್ನೂ ಅವುಗಳೊಡನೆ ಕೊಡಬೇಕಾದ ಪಾನದ್ರವ್ಯ, ನೈವೇದ್ಯಗಳನ್ನೂ ಹೆಚ್ಚಾಗಿ ಸಮರ್ಪಿಸಬೇಕು.’”

ಅರಣ್ಯಕಾಂಡ — Chapters