Skip to content
Opens in a new window
Listen to this chapter • 12:28

[1] ಸನ್ಮಾನ್ಯ ಥೆಯೊಫಿಲರೇ, ನಮ್ಮ ಮಧ್ಯದಲ್ಲಿ ನಡೆದಿರುವ ಘಟನೆಗಳ ವರದಿಯನ್ನು ಬರೆದಿಡಲು ಅನೇಕರು ಪ್ರಯತ್ನಿಸಿದ್ದಾರೆ.

[2] ಮೊದಲಿನಿಂದ ಕಣ್ಣಾರೆ ಕಂಡವರೂ ದೇವರ ವಾಕ್ಯದ ಸೇವಕರೂ ನಮಗೆ ಕೊಟ್ಟಿರುವ ರೀತಿಯಲ್ಲಿಯೇ ಬರೆದಿದ್ದಾರೆ.

[3] ಆದ್ದರಿಂದ ನಾನು ಸಹ ಮೊದಲಿನಿಂದ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೋಧಿಸಿ, ಅವುಗಳನ್ನು ಕ್ರಮವಾಗಿ ನಿಮಗೆ ಬರೆಯುವುದು ಒಳ್ಳೆಯದೆಂದು ನನಗೆ ತೋಚಿತು.

[4] ಹೀಗೆ ನಿಮಗೆ ಬೋಧಿಸಿರುವ ವಿಷಯಗಳು ಖಚಿತವೆಂದು ನಿಮಗೆ ತಿಳಿದುಬರುವುದು.

[5] ಯೂದಾಯದ ಅರಸನಾಗಿದ್ದ ಹೆರೋದನ ದಿನಗಳಲ್ಲಿ, ಅಬೀಯನ ವರ್ಗಕ್ಕೆ ಸೇರಿದ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಇವನ ಹೆಂಡತಿಯ ಹೆಸರು ಎಲಿಸಬೇತ್. ಇವಳು ಆರೋನನ ವಂಶದವಳು.

[6] ಇವರಿಬ್ಬರೂ ಕರ್ತದೇವರ ಎಲ್ಲಾ ಆಜ್ಞೆಗಳನ್ನೂ ತೀರ್ಪುಗಳನ್ನೂ ತಪ್ಪಿಲ್ಲದೆ ಕೈಕೊಂಡು, ದೇವರ ಮುಂದೆ ನೀತಿವಂತರಾಗಿದ್ದರು.

[7] ಆದರೆ ಎಲಿಸಬೇತಳು ಬಂಜೆಯಾದುದರಿಂದ ಅವರಿಗೆ ಮಕ್ಕಳಿರಲಿಲ್ಲ, ಇದಲ್ಲದೆ ಅವರಿಬ್ಬರೂ ಬಹಳ ವಯಸ್ಸಾದವರಾಗಿದ್ದರು.

[8] ಹೀಗಿರಲಾಗಿ ಜಕರೀಯನು ತನ್ನ ವರ್ಗದ ಸರದಿಯ ಪ್ರಕಾರ ದೇವರ ಮುಂದೆ ಯಾಜಕ ಸೇವೆಯನ್ನು ಮಾಡುತ್ತಿದ್ದಾಗ,

[9] ಯಾಜಕೋದ್ಯೋಗದ ಪದ್ಧತಿಯಂತೆ, ಅವನು ಕರ್ತದೇವರ ಆಲಯವನ್ನು ಪ್ರವೇಶಿಸಿ ಧೂಪವನ್ನು ಅರ್ಪಿಸುವದಕ್ಕೆ ಚೀಟು ಹಾಕಿದಾಗ, ಅದು ಅವನ ಪಾಲಿಗೆ ಬಿದ್ದಿತು.

[10] ಧೂಪಾರ್ಪಣೆಯ ಸಮಯದಲ್ಲಿ ಸೇರಿದ ಜನರೆಲ್ಲರೂ ಹೊರಗೆ ಪ್ರಾರ್ಥಿಸುತ್ತಿದ್ದರು.

[11] ಆಗ ಧೂಪವೇದಿಯ ಬಲಗಡೆಯಲ್ಲಿ ನಿಂತುಕೊಂಡಿದ್ದ, ಕರ್ತದೇವರ ದೂತನು ಅವನಿಗೆ ಕಾಣಿಸಿಕೊಂಡನು.

[12] ಜಕರೀಯನು ದೂತನನ್ನು ಕಂಡು, ಚಕಿತಗೊಂಡು ಭಯಭ್ರಾಂತನಾದನು.

[13] ಆದರೆ ದೂತನು ಅವನಿಗೆ, “ಜಕರೀಯನೇ; ಭಯಪಡಬೇಡ, ದೇವರು ನಿನ್ನ ವಿಜ್ಞಾಪನೆಯನ್ನು ಕೇಳಿದ್ದಾರೆ. ನಿನ್ನ ಹೆಂಡತಿ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು, ನೀನು ಅವನಿಗೆ, ‘ಯೋಹಾನ’ ಎಂದು ಹೆಸರನ್ನಿಡಬೇಕು.

[14] ಅನೇಕರು ಅವನ ಜನನಕ್ಕೆ ಸಂತೋಷಪಡುವರು, ನಿನಗೆ ಆನಂದವೂ ಉಲ್ಲಾಸವೂ ಆಗುವುದು,

[15] ಅವನು ಕರ್ತದೇವರ ದೃಷ್ಟಿಯಲ್ಲಿ ಮಹಾಪುರುಷನಾಗಿರುವನು. ದ್ರಾಕ್ಷಾರಸವನ್ನಾಗಲಿ, ಮದ್ಯವನ್ನಾಗಲಿ ಅವನು ಕುಡಿಯುವುದಿಲ್ಲ, ಅವನು ತಾಯಿಯ ಗರ್ಭದಿಂದಲೇ ಪವಿತ್ರಾತ್ಮ ಭರಿತನಾಗಿರುವನು.

[16] ಅವನು ಇಸ್ರಾಯೇಲರಲ್ಲಿ ಅನೇಕರನ್ನು ಅವರ ಕರ್ತದೇವರ ಕಡೆಗೆ ತಿರುಗಿಸುವನು.

[17] ಅವನು ತಂದೆಯರ ಹೃದಯಗಳನ್ನು ಮಕ್ಕಳ ಕಡೆಗೂ ಅವಿಧೇಯರನ್ನು ನೀತಿವಂತರ ಜ್ಞಾನದ ಕಡೆಗೂ ತಿರುಗಿಸಿ, ಕರ್ತ ದೇವರಿಗೋಸ್ಕರ ಜನರನ್ನು ಸಿದ್ಧಮಾಡುವುದಕ್ಕೆ ಎಲೀಯನ ಆತ್ಮದಿಂದಲೂ ಶಕ್ತಿಯಿಂದಲೂ ಕರ್ತದೇವರ ಮುಂದೆ ಹೋಗುವನು,” ಎಂದು ಹೇಳಿದನು.

[18] ಜಕರೀಯನು ಆ ದೇವದೂತನಿಗೆ, “ಇದನ್ನು ನಾನು ಯಾವುದರಿಂದ ತಿಳಿದುಕೊಳ್ಳಲಿ? ನಾನು ಮುದುಕನು; ನನ್ನ ಹೆಂಡತಿಯೂ ಪ್ರಾಯ ಮೀರಿದವಳು,” ಎಂದನು.

[19] ಅದಕ್ಕೆ ಆ ದೂತನು ಉತ್ತರವಾಗಿ, “ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು. ನಿನ್ನ ಸಂಗಡ ಮಾತನಾಡುವುದಕ್ಕೂ ಈ ಸಂತೋಷದ ವರ್ತಮಾನವನ್ನು ನಿನಗೆ ತಿಳಿಸುವುದಕ್ಕೂ ದೇವರು ನನ್ನನ್ನು ಕಳುಹಿಸಿದ್ದಾರೆ.

[20] ಸಕಾಲದಲ್ಲಿ ನೆರವೇರುವ ನನ್ನ ಮಾತುಗಳನ್ನು ನೀನು ನಂಬದೆ ಹೋದಕಾರಣ, ಈ ಸಂಗತಿಗಳು ಈಡೇರುವ ದಿನದವರೆಗೆ ನೀನು ಮಾತನಾಡಲಾರದೆ ಮೂಕನಾಗಿರುವಿ,” ಎಂದನು.

[21] ಆಗ, ಜಕರೀಯನಿಗಾಗಿ ಕಾದುಕೊಂಡಿದ್ದ ಜನರು ಅವನು ದೇವಾಲಯದೊಳಗೆ ತಡಮಾಡಿದ್ದಕ್ಕೆ ಆಶ್ಚರ್ಯಪಟ್ಟರು.

[22] ಜಕರೀಯನು ಹೊರಗೆ ಬಂದಾಗ, ಅವರೊಂದಿಗೆ ಏನೂ ಮಾತನಾಡಲಾಗಲಿಲ್ಲ. ಅವನು ಅವರಿಗೆ ಸನ್ನೆಮಾಡುತ್ತಾ ಮೂಕನಾಗಿಯೇ ಇದ್ದುದರಿಂದ, ಅವರು ದೇವಾಲಯದಲ್ಲಿ ಅವನಿಗೆ ಏನೋ ದರ್ಶನವಾಗಿರಬೇಕೆಂದು ಗ್ರಹಿಸಿದರು.

[23] ತನ್ನ ಸೇವೆಯ ದಿನಗಳು ಮುಗಿದ ನಂತರ, ಜಕರೀಯನು ತನ್ನ ಮನೆಗೆ ಹೊರಟುಹೋದನು.

[24] ಕೆಲವು ದಿನಗಳಾದ ಮೇಲೆ, ಅವನ ಹೆಂಡತಿ ಎಲಿಸಬೇತಳು ಗರ್ಭಿಣಿಯಾಗಿ, ಐದು ತಿಂಗಳು ಮನೆಯಲ್ಲಿ ಮರೆಯಾಗಿದ್ದಳು.

[25] ಅವಳು, “ಜನರಲ್ಲಿ ನನಗಿದ್ದ ಅವಮಾನವನ್ನು ತೆಗೆದುಹಾಕುವುದಕ್ಕಾಗಿ ಕರ್ತದೇವರು ನನ್ನ ಮೇಲೆ ದಯೆತೋರಿಸಿ ಈ ದಿನಗಳಲ್ಲಿ ನನಗೆ ಹೀಗೆ ಮಾಡಿದ್ದಾರೆ,” ಎಂದು ಹೇಳಿದಳು.

[26] ಎಲಿಸಬೇತಳು ಗರ್ಭಿಣಿಯಾದ ಆರನೆಯ ತಿಂಗಳಲ್ಲಿ, ಗಲಿಲಾಯ ಪ್ರಾಂತದ ನಜರೇತೆಂಬ ಊರಿಗೆ, ದೇವರು ಗಬ್ರಿಯೇಲನೆಂಬ ದೇವದೂತನನ್ನು,

[27] ದಾವೀದನ ವಂಶದ ಯೋಸೇಫನಿಗೆ, ನಿಶ್ಚಯವಾಗಿದ್ದ ಮರಿಯಳೆಂಬ ಒಬ್ಬ ಕನ್ನಿಕೆಯ ಬಳಿಗೆ ಕಳುಹಿಸಿದರು.

[28] ಆ ದೇವದೂತನು ಆಕೆಗೆ, “ಅತ್ಯಂತ ದಯೆ ಹೊಂದಿದವಳೇ! ನಿನಗೆ ಶುಭವಾಗಲಿ, ಪ್ರಭುವು ನಿನ್ನೊಂದಿಗಿದ್ದಾರೆ,” ಎಂದು ಹೇಳಿದನು.

[29] ಮರಿಯಳು ದೇವದೂತನ ಮಾತಿಗೆ ಬಹಳವಾಗಿ ಕಳವಳಗೊಂಡು, “ಇದು ಎಂಥಾ ಶುಭಾಶಯ?” ಎಂದು ತನ್ನ ಮನದಲ್ಲಿ ಯೋಚಿಸತೊಡಗಿದಳು.

[30] ಆ ದೇವದೂತನು ಆಕೆಗೆ, “ಮರಿಯಳೇ, ಹೆದರಬೇಡ. ನೀನು ದೇವರ ದಯೆಯನ್ನು ಹೊಂದಿರುವಿ.

[31] ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವೆ, ಅವರಿಗೆ ‘ಯೇಸು’ ಎಂದು ಹೆಸರಿಡಬೇಕು.

[32] ಅವರು ದೊಡ್ಡವರಾಗಿ ಮಹೋನ್ನತರ ಪುತ್ರ ಎಂದು ಎನಿಸಿಕೊಳ್ಳುವರು. ಕರ್ತದೇವರು ಅವರ ತಂದೆ ದಾವೀದನ ಸಿಂಹಾಸನವನ್ನು ಅವರಿಗೆ ಕೊಡುವರು.

[33] ಅವರು ಯಾಕೋಬನ ವಂಶವನ್ನು ಸದಾಕಾಲ ಆಳುವರು; ಅವರ ರಾಜ್ಯಕ್ಕೆ ಅಂತ್ಯವೇ ಇರುವುದಿಲ್ಲ,” ಎಂದು ಹೇಳಿದನು.

[34] ಮರಿಯಳು ಆ ದೇವದೂತನಿಗೆ, “ಇದು ಹೇಗಾಗುವುದು, ನಾನು ಕನ್ಯೆ?” ಎಂದಳು.

[35] ಆ ದೇವದೂತನು ಉತ್ತರವಾಗಿ ಮರಿಯಳಿಗೆ, “ಪವಿತ್ರಾತ್ಮ ನಿನ್ನ ಮೇಲೆ ಬರಲು, ಮಹೋನ್ನತ ದೇವರ ಶಕ್ತಿಯು ನಿನ್ನನ್ನು ಆವರಿಸುವುದು. ಆದ್ದರಿಂದ ನಿನ್ನಿಂದ ಹುಟ್ಟುವ ಆ ಪವಿತ್ರ ಶಿಶುವು ದೇವರ ಪುತ್ರ ಎನಿಸಿಕೊಳ್ಳುವುದು.

[36] ನಿನ್ನ ಬಂಧು ಎಲಿಸಬೇತಳು ಸಹ ತನ್ನ ಮುಪ್ಪಿನ ಪ್ರಾಯದಲ್ಲಿ ಒಬ್ಬ ಮಗನನ್ನು ಹೆರಲಿದ್ದಾಳೆ. ಬಂಜೆಯಾಗಿದ್ದ ಆಕೆಗೆ ಇದು ಆರನೆಯ ತಿಂಗಳು.

[37] ದೇವರಿಂದ ಬರುವ ಯಾವ ತಕ್ಕ ಮಾತು ಎಂದಿಗೂ ಅಸಾಧ್ಯವಾಗಿರುವುದಿಲ್ಲ,” ಎಂದು ಹೇಳಿದನು.

[38] ಮರಿಯಳು, “ಇಗೋ ನಾನು ಕರ್ತದೇವರ ದಾಸಿ, ನಿನ್ನ ತಕ್ಕ ಮಾತಿನಂತೆ ನನಗಾಗಲಿ,” ಎಂದಳು. ಆಗ ದೇವದೂತನು ಆಕೆಯ ಬಳಿಯಿಂದ ಹೊರಟುಹೋದನು.

[39] ಆ ಕಾಲದಲ್ಲಿ ಮರಿಯಳು ಬೆಟ್ಟದ ಸೀಮೆಯ ಯೆಹೂದದಲ್ಲಿರುವ ಒಂದು ಊರಿಗೆ ಅವಸರವಾಗಿ ಹೊರಡಲು ಸಿದ್ಧಳಾದಳು.

[40] ಅಲ್ಲಿ ಜಕರೀಯನ ಮನೆಯನ್ನು ಪ್ರವೇಶಿಸಿ, ಎಲಿಸಬೇತಳನ್ನು ವಂದಿಸಿದಳು.

[41] ಮರಿಯಳ ವಂದನೆಯನ್ನು ಕೇಳಿದಾಗ, ಎಲಿಸಬೇತಳ ಗರ್ಭದಲ್ಲಿದ್ದ ಕೂಸು ನಲಿದಾಡಿತು ಮತ್ತು ಎಲಿಸಬೇತಳು ಪವಿತ್ರಾತ್ಮ ಭರಿತಳಾಗಿ

[42] ಮಹಾಧ್ವನಿಯಿಂದ: “ಸ್ತ್ರೀಯರಲ್ಲಿ ನೀನು ಧನ್ಯಳೇ, ನಿನ್ನಲ್ಲಿ ಹುಟ್ಟುವ ಶಿಶುವೂ ಆಶೀರ್ವಾದ ಹೊಂದಿದ್ದು!

[43] ನನ್ನ ಕರ್ತದೇವರ ತಾಯಿಯು, ನನ್ನ ಬಳಿಗೆ ಬರುವಷ್ಟು ನಾನು ದಯೆ ಹೊಂದಿದ್ದು ಏಕೆ?

[44] ಇಗೋ, ನಿನ್ನ ವಂದನೆಯ ಧ್ವನಿಯು ನನ್ನ ಕಿವಿಗಳಲ್ಲಿ ಬಿದ್ದ ಕೂಡಲೇ, ಶಿಶುವು ನನ್ನ ಗರ್ಭದಲ್ಲಿ ಉಲ್ಲಾಸದಿಂದ ನಲಿದಾಡಿತು.

[45] ಕರ್ತದೇವರು ತಮಗೆ ಹೇಳಿದವುಗಳು ನೆರವೇರುವುವು ಎಂದು ನಂಬಿದವಳು ಧನ್ಯಳು,” ಎಂದು ಹೇಳಿದಳು.

[46] ಆಗ ಮರಿಯಳು ಹೀಗೆ ಹೇಳಿದ್ದು: “ನನ್ನ ಪ್ರಾಣವು ಕರ್ತದೇವರನ್ನು ಸ್ತುತಿಸುತ್ತದೆ,

[47] ನನ್ನ ಆತ್ಮವು ನನ್ನ ರಕ್ಷಕ ದೇವರಲ್ಲಿ ಉಲ್ಲಾಸಗೊಂಡಿದೆ.

[48] ದೇವರು ತಮ್ಮ ದಾಸಿಯ ದೀನಸ್ಥಿತಿಯನ್ನು ಲಕ್ಷಿಸಿದ್ದಾರೆ. ಇಂದಿನಿಂದ ತಲತಲಾಂತರದವರೆಲ್ಲರೂ ನನ್ನನ್ನು ಧನ್ಯಳೆಂದು ಕರೆಯುವರು,

[49] ಪರಾಕ್ರಮಿಯಾದ ದೇವರು ನನಗೆ ಮಹಾಕಾರ್ಯಗಳನ್ನು ಮಾಡಿದ್ದಾರೆ, ಅವರ ಹೆಸರು ಪವಿತ್ರವಾದದ್ದು.

[50] ದೇವರಲ್ಲಿ ಭಯಭಕ್ತಿಯುಳ್ಳವರ ಮೇಲೆ, ಅವರ ಕರುಣೆಯು ತಲತಲಾಂತರಗಳಿಗೂ ಇರುವುದು.

[51] ದೇವರು ತಮ್ಮ ಭುಜಪರಾಕ್ರಮವನ್ನು ಮಾಡಿ; ಹೃದಯದ ಯೋಚನೆಯಲ್ಲಿ ಗರ್ವಿಷ್ಠರಾದವರನ್ನು ಚದರಿಸಿಬಿಟ್ಟಿದ್ದಾರೆ.

[52] ಅಧಿಪತಿಗಳನ್ನು ಅವರ ಸಿಂಹಾಸನಗಳಿಂದ ಕೆಳಗೆ ದಬ್ಬಿ, ದೀನರನ್ನು ಮೇಲಕ್ಕೆ ಎತ್ತಿದ್ದಾರೆ.

[53] ಹಸಿದವರನ್ನು ಒಳ್ಳೆಯವುಗಳಿಂದ ತುಂಬಿಸಿ, ಐಶ್ವರ್ಯವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಟ್ಟಿದ್ದಾರೆ.

[54] ನಮ್ಮ ಪಿತೃಗಳಾದ ಅಬ್ರಹಾಮನಿಗೂ ಅವನ ಸಂತತಿಗೂ ತಾವು ವಾಗ್ದಾನಮಾಡಿದ ತಮ್ಮ ನಿತ್ಯ ಕರುಣೆಯನ್ನು ಜ್ಞಾಪಕಮಾಡಿಕೊಂಡು, ತಮ್ಮ ಸೇವಕನಾದ ಇಸ್ರಾಯೇಲನಿಗೆ, ದೇವರು ಸಹಾಯ ಮಾಡಿದ್ದಾರೆ.”

[56] ಮರಿಯಳು ಸುಮಾರು ಮೂರು ತಿಂಗಳು ಎಲಿಸಬೇತಳ ಜೊತೆಯಲ್ಲಿದ್ದು, ಅನಂತರ ತನ್ನ ಮನೆಗೆ ಹಿಂತಿರುಗಿ ಹೋದಳು.

[57] ಎಲಿಸಬೇತಳಿಗೆ ಹೆರಿಗೆಯ ಕಾಲ ಬಂದಾಗ, ಆಕೆಯು ಒಬ್ಬ ಮಗನನ್ನು ಹೆತ್ತಳು.

[58] ಕರ್ತದೇವರು ತಮ್ಮ ಮಹಾಕರುಣೆಯನ್ನು ಆಕೆಯ ಮೇಲೆ ತೋರಿಸಿದ್ದನ್ನು ಆಕೆಯ ನೆರೆಯವರೂ ಬಂಧುಗಳೂ ಕೇಳಿ, ಆಕೆಯ ಕೂಡ ಸಂತೋಷಪಟ್ಟರು.

[59] ಅವರು ಎಂಟನೆಯ ದಿನ ಆ ಮಗುವಿಗೆ ಸುನ್ನತಿ ಮಾಡಿಸುವುದಕ್ಕಾಗಿ ಬಂದು, ಅವನ ತಂದೆಯ ಹೆಸರಿನಂತೆ ಮಗನನ್ನು ಜಕರೀಯನೆಂದು ನಾಮಕರಣ ಮಾಡಲಿದ್ದರು.

[60] ಆದರೆ ಅದಕ್ಕೆ ಶಿಶುವಿನ ತಾಯಿಯು ಉತ್ತರವಾಗಿ, “ಹಾಗಲ್ಲ! ಅವನಿಗೆ ‘ಯೋಹಾನ’ ಎಂದು ಹೆಸರಿಡಬೇಕು,” ಎಂದಳು.

[61] ಬಂದಿದ್ದವರು ಆಕೆಗೆ, “ನಿನ್ನ ಬಂಧುಬಳಗದವರಲ್ಲಿ ಆ ಹೆಸರಿನವರು ಒಬ್ಬರೂ ಇಲ್ಲವಲ್ಲಾ,” ಎಂದರು.

[62] ಶಿಶುವನ್ನು ಯಾವ ಹೆಸರಿನಿಂದ ಕರೆಯಬೇಕೆಂದು, ಅವನ ತಂದೆಗೆ ಅವರು ಸನ್ನೆಮಾಡಿದರು.

[63] ಆಗ ಜಕರೀಯನು ಒಂದು ಬರೆಯುವ ಹಲಗೆಯನ್ನು ಕೇಳಿ, “ಶಿಶುವಿನ ಹೆಸರು ಯೋಹಾನ,” ಎಂದು ಬರೆದನು. ಆಗ ಅವರೆಲ್ಲರೂ ಆಶ್ಚರ್ಯಪಟ್ಟರು.

[64] ಕೂಡಲೇ ಜಕರೀಯನಿಗೆ ಮಾತು ಬಂತು, ಅವನ ನಾಲಿಗೆಯು ಸಡಿಲವಾಯಿತು, ಅವನು ಮಾತನಾಡಿ, ದೇವರನ್ನು ಕೊಂಡಾಡಿದನು.

[65] ಈ ಘಟನೆಯಿಂದ ಸುತ್ತಲೂ ವಾಸಮಾಡುತ್ತಿದ್ದವರೆಲ್ಲರಿಗೆ ಭಯವುಂಟಾಯಿತು, ಯೂದಾಯದ ಬೆಟ್ಟದ ಪ್ರಾಂತದಲ್ಲೆಲ್ಲಾ ಈ ಸಂಗತಿಗಳನ್ನು ಮಾತನಾಡಿಕೊಳ್ಳುತ್ತಿದ್ದರು.

[66] ಕೇಳಿದವರೆಲ್ಲರೂ ವಿಸ್ಮಯಗೊಂಡು, “ಈ ಮಗುವು ಎಂಥವನಾಗುವನೋ?” ಎಂದು ತಮ್ಮ ಮನಸ್ಸಿನಲ್ಲಿ ಪ್ರಶ್ನಿಸಿಕೊಂಡರು. ಕರ್ತದೇವರ ಹಸ್ತವು ಈ ಮಗುವಿನ ಮೇಲೆ ಇತ್ತು.

[67] ಆಗ ಮಗುವಿನ ತಂದೆ ಜಕರೀಯನು ಪವಿತ್ರಾತ್ಮಭರಿತನಾಗಿ ಹೀಗೆಂದು ಪ್ರವಾದಿಸಿದನು:

[68] “ಇಸ್ರಾಯೇಲಿನ ಕರ್ತದೇವರಿಗೆ ಸ್ತೋತ್ರವಾಗಲಿ, ದೇವರು ತಮ್ಮ ಜನರನ್ನು ಸಂಧಿಸಿ ಅವರನ್ನು ವಿಮೋಚಿಸಿದ್ದಾರೆ.

[69] ಪುರಾತನದಿಂದ ಅವರು ತಮ್ಮ ಪವಿತ್ರ ಪ್ರವಾದಿಗಳ ಬಾಯಿಂದ ಮಾತನಾಡಿದ ಪ್ರಕಾರ, ದೇವರು ತಮ್ಮ ಸೇವಕ ದಾವೀದನ ಮನೆತನದಿಂದ, ನಮಗಾಗಿ ಬಲವಾದ ರಕ್ಷಣೆಯ ಕರ್ತದೇವರನ್ನು ಎಬ್ಬಿಸಿದ್ದಾರೆ.

[71] ಇದನ್ನು, ನಾವು ನಮ್ಮ ಶತ್ರುಗಳಿಂದಲೂ ನಮ್ಮನ್ನು ದ್ವೇಷಮಾಡುವವರ ಕೈಯಿಂದಲೂ ರಕ್ಷಣೆ ಹೊಂದುವಂತೆಯೂ

[72] ನಮ್ಮ ಪಿತೃಗಳಿಗೆ ಕರುಣೆ ತೋರಿಸುವಂತೆಯೂ ನಮ್ಮ ಪಿತೃವಾದ ಅಬ್ರಹಾಮನಿಗೆ ಆಣೆಯಿಟ್ಟು ಪ್ರಮಾಣ ಮಾಡಿದಂತೆಯೂ ತಮ್ಮ ಪವಿತ್ರ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡವನಾಗಿಯೂ

[74] ನಾವು ನಮ್ಮ ಶತ್ರುಗಳ ಕೈಯಿಂದ ಬಿಡುಗಡೆಹೊಂದಿ ನಿರ್ಭಯವುಳ್ಳವರಾಗಿಯೂ

[75] ನಮ್ಮ ಜೀವಮಾನದ ಎಲ್ಲಾ ದಿನಗಳಲ್ಲಿ ದೇವರ ಮುಂದೆ ಪವಿತ್ರತೆಯಿಂದಲೂ ನೀತಿಯಿಂದಲೂ ಅವರನ್ನೇ ಸೇವಿಸುವವರಾಗುವಂತೆಯೂ ಈ ಪ್ರಕಾರ ಮಾಡಿದ್ದಾರೆ.

[76] “ನನ್ನ ಮಗುವೇ, ನೀನಾದರೋ ಮಹೋನ್ನತರ ಪ್ರವಾದಿ ಎಂದು ಎನಿಸಿಕೊಳ್ಳುವೆ. ಯಾಕೆಂದರೆ, ನೀನು ಕರ್ತದೇವರ ಮಾರ್ಗಗಳನ್ನು ಸಿದ್ಧಮಾಡುವುದಕ್ಕೆ, ಅವರ ಮುಂದೆ ಹೋಗುವೆ.

[77] ನೀನು ಜನರ ಪಾಪಕ್ಷಮಾಪಣೆಯ ಮೂಲಕ ರಕ್ಷಣೆ ಹೊಂದುವ ತಿಳುವಳಿಕೆಯನ್ನು ಕೊಡುವೆ,

[78] ನಮ್ಮ ದೇವರ ಮಮತೆಯ ಕರುಣೆಯಿಂದಲೇ, ಸ್ವರ್ಗದಿಂದ ನಮಗೆ ಅರುಣೋದಯವು ಉಂಟಾಗಿ

[79] ಕತ್ತಲೆಯಲ್ಲಿಯೂ ಮರಣದ ನೆರಳಿನಲ್ಲಿಯೂ ವಾಸಿಸುವವರಿಗೆ ಪ್ರಕಾಶಿಸಿ, ನಮ್ಮ ಪಾದಗಳನ್ನು ಸಮಾಧಾನದ ಮಾರ್ಗದಲ್ಲಿ ನಡೆಸುವಂತೆ ಮಾಡುವೆ.”

[80] ಆ ಶಿಶುವಾದ ಯೋಹಾನನು ಬೆಳೆದು, ಆತ್ಮದಲ್ಲಿ ಬಲಗೊಂಡು; ತನ್ನನ್ನು ಇಸ್ರಾಯೇಲರಿಗೆ ತೋರ್ಪಡಿಸಿಕೊಳ್ಳುವ ದಿನದವರೆಗೆ ಅರಣ್ಯದಲ್ಲಿದ್ದನು.

ಲೂಕ — Chapters