[1] ಆ ದಿವಸಗಳಲ್ಲಿ ಒಂದು ದಿನ ಯೇಸು ದೇವಾಲಯದ ಅಂಗಳದಲ್ಲಿ ಜನರಿಗೆ ಬೋಧಿಸುತ್ತಾ, ಸುವಾರ್ತೆಯನ್ನು ಸಾರುತ್ತಿದ್ದರು. ಮುಖ್ಯಯಾಜಕರೂ ನಿಯಮ ಬೋಧಕರೂ ಹಿರಿಯರೊಂದಿಗೆ ಅವರ ಬಳಿಗೆ ಬಂದು
[2] ಯೇಸುವಿಗೆ, “ನೀವು ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತೀರಿ? ನಿಮಗೆ ಈ ಅಧಿಕಾರವನ್ನು ಕೊಟ್ಟವರು ಯಾರು? ನಮಗೆ ಹೇಳಿ,” ಎಂದರು.
[3] ಅದಕ್ಕೆ ಯೇಸು ಅವರಿಗೆ, “ನಾನು ಸಹ ನಿಮ್ಮನ್ನು ಒಂದು ವಿಷಯ ಕೇಳುತ್ತೇನೆ, ನನಗೆ ಉತ್ತರಕೊಡಿರಿ.
[4] ಯೋಹಾನನಿಗೆ ದೀಕ್ಷಾಸ್ನಾನವನ್ನು ಕೊಡುವ ಅಧಿಕಾರ ಪರಲೋಕದಿಂದ ಬಂದದ್ದೋ ಇಲ್ಲವೇ ಮನುಷ್ಯರಿಂದಲೋ?” ಎಂದು ಕೇಳಿದರು.
[5] ಆಗ ಅವರು ತಮ್ಮೊಳಗೆ, “ ‘ಪರಲೋಕದಿಂದ’ ಎಂದು ನಾವು ಹೇಳಿದರೆ ಆತನು, ‘ನೀವು ಏಕೆ ಅವನನ್ನು ನಂಬಲಿಲ್ಲ?’ ಎಂದು ಕೇಳುವರು.
[6] ‘ಮನುಷ್ಯರಿಂದ ಬಂತು,’ ಎಂದು ನಾವು ಹೇಳಿದರೆ, ಜನರೆಲ್ಲಾ ನಮಗೆ ಕಲ್ಲೆಸೆಯುವರು. ಏಕೆಂದರೆ ಯೋಹಾನನು ಒಬ್ಬ ಪ್ರವಾದಿಯೆಂದು ಅವರು ಒಪ್ಪಿದ್ದಾರೆ,” ಎಂದು ಆಲೋಚಿಸಿ,
[7] “ಅದು ಎಲ್ಲಿಂದಲೋ ನಮಗೆ ಗೊತ್ತಿಲ್ಲ,” ಎಂದು ಉತ್ತರಕೊಟ್ಟರು.
[8] ಆಗ ಯೇಸು ಅವರಿಗೆ, “ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು.
[9] ಬಳಿಕ ಯೇಸು ಜನರಿಗೆ ಈ ಸಾಮ್ಯವನ್ನು ಹೇಳಿದರು: “ಒಬ್ಬನು ದ್ರಾಕ್ಷಿಯ ತೋಟವನ್ನು ನೆಟ್ಟು, ಅದನ್ನು ರೈತರಿಗೆ ಗೇಣಿಗೆ ಕೊಟ್ಟು, ದೀರ್ಘಕಾಲ ದೂರದೇಶಕ್ಕೆ ಪ್ರವಾಸಹೋದನು.
[10] ಫಲದ ಕಾಲ ಬಂದಾಗ ಅವನು ತನಗೆ ಬರಬೇಕಾಗಿದ್ದ ದ್ರಾಕ್ಷಿತೋಟದ ಫಲವನ್ನು ಕೊಡುವಂತೆ ತನ್ನ ಸೇವಕನನ್ನು ಅವರ ಬಳಿಗೆ ಕಳುಹಿಸಿದನು. ಆದರೆ ಆ ಗೇಣಿಗೆದಾರರು ಅವನನ್ನು ಹೊಡೆದು, ಬರಿಗೈಯಲ್ಲಿ ಕಳುಹಿಸಿಬಿಟ್ಟರು.
[11] ಯಜಮಾನನು ಪುನಃ ಮತ್ತೊಬ್ಬ ಸೇವಕನನ್ನು ಕಳುಹಿಸಿದನು. ಅವರು ಎರಡನೆಯವನನ್ನೂ ಸಹ ಹೊಡೆದು, ಅವಮಾನಪಡಿಸಿ ಬರಿಗೈಯಲ್ಲಿ ಕಳುಹಿಸಿಬಿಟ್ಟರು.
[12] ಆ ಯಜಮಾನನು ಮೂರನೆಯವನನ್ನು ಕಳುಹಿಸಿದನು. ಆಗ ಅವರು ಅವನನ್ನೂ ಗಾಯಪಡಿಸಿ ಹೊರಗೆ ಹಾಕಿದರು.
[13] “ಆಗ ದ್ರಾಕ್ಷಿಯ ತೋಟದ ಯಜಮಾನನು, ‘ನಾನೇನು ಮಾಡಲಿ? ನಾನು ನನ್ನ ಪ್ರಿಯ ಮಗನನ್ನೇ ಕಳುಹಿಸುವೆನು, ಬಹುಶಃ ಅವರು ಅವನಿಗಾದರೂ ಮರ್ಯಾದೆಕೊಟ್ಟಾರು,’ ಎಂದುಕೊಂಡನು.
[14] “ಆದರೆ ಗೇಣಿಗೆದಾರರು ಅವನನ್ನು ಕಂಡಾಗ ತಮ್ಮತಮ್ಮೊಳಗೆ, ‘ಇವನೇ ಬಾಧ್ಯಸ್ಥನು. ಇವನನ್ನು ನಾವು ಕೊಂದು ಹಾಕೋಣ. ಆಗ ಆಸ್ತಿ ನಮ್ಮದಾಗುವುದು,’ ಎಂದು ಒಳಸಂಚು ಮಾಡಿಕೊಂಡರು.
[15] ಹಾಗೆಯೇ, ಅವರು ಅವನನ್ನು ದ್ರಾಕ್ಷಿತೋಟದ ಹೊರಗೆ ಹಾಕಿ ಕೊಂದರು. “ಹೀಗಿರಲಾಗಿ ದ್ರಾಕ್ಷಿತೋಟದ ಯಜಮಾನನು ಅವರಿಗೆ ಏನು ಮಾಡುವನು?
[16] ಅವನು ಬಂದು ಆ ಗೇಣಿಗೆದಾರರನ್ನು ಸಂಹರಿಸಿ ದ್ರಾಕ್ಷಿಯ ತೋಟವನ್ನು ಬೇರೆಯವರಿಗೆ ಒಪ್ಪಿಸುವನು,” ಎಂದರು. ಜನರು ಇದನ್ನು ಕೇಳಿದಾಗ, “ಹಾಗೆ ಎಂದಿಗೂ ಆಗಬಾರದು!” ಎಂದರು.
[17] ಆಗ ಯೇಸು ಅವರನ್ನು ದಿಟ್ಟಿಸಿ ನೋಡಿ, “ಹಾಗಾದರೆ, “ ‘ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು,’ ಎಂದು ಪವಿತ್ರ ವೇದದಲ್ಲಿ ಬರೆದಿರುವುದರ ಅರ್ಥ ಏನು?
[18] ಆ ಕಲ್ಲಿನ ಮೇಲೆ ಬೀಳುವವನು ತುಂಡುತುಂಡಾಗುವನು; ಆದರೆ ಅದೇ ಕಲ್ಲು ಯಾವನ ಮೇಲೆ ಬೀಳುವುದೋ ಅವನನ್ನು ಅದು ಜಜ್ಜಿ ಹೋಗುವಂತೆ ಮಾಡುವುದು,” ಎಂದರು.
[19] ಅದೇ ಗಳಿಗೆಯಲ್ಲಿ ನಿಯಮ ಬೋಧಕರೂ ಮುಖ್ಯಯಾಜಕರೂ ಯೇಸುವನ್ನು ಬಂಧಿಸುವುದಕ್ಕೆ ಹವಣಿಸಿದರು. ಏಕೆಂದರೆ ಯೇಸು ತಮಗೆ ವಿರೋಧವಾಗಿಯೇ ಈ ಸಾಮ್ಯವನ್ನು ಹೇಳಿದ್ದಾರೆಂದು ಅವರು ತಿಳಿದುಕೊಂಡರು. ಆದರೂ ಅವರು ಜನರಿಗೆ ಭಯಪಟ್ಟರು.
[20] ಅವರು ಯೇಸುವನ್ನು ಹೊಂಚಿ ನೋಡುತ್ತಾ, ಮಾತಿನಲ್ಲಿ ಅವರನ್ನು ಸಿಕ್ಕಿಸುವಂತೆ ಅಧಿಪತಿಗೂ ಅಧಿಕಾರಕ್ಕೂ ಒಪ್ಪಿಸಿಕೊಡಲು, ನೀತಿವಂತರೆಂದು ನಟಿಸುವ ಗೂಢಚಾರರನ್ನು ಕಳುಹಿಸಿದರು.
[21] ಅವರು ಯೇಸುವಿಗೆ, “ಗುರುವೇ, ನೀವು ಮುಖ ದಾಕ್ಷಿಣ್ಯವಿಲ್ಲದೆ ಸರಿಯಾಗಿ ಬೋಧಿಸುತ್ತೀರಿ ಮತ್ತು ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವರಾಗಿದ್ದೀರೆಂದು ನಾವು ಬಲ್ಲೆವು.
[22] ಆದ್ದರಿಂದ ಕೈಸರನಿಗೆ ತೆರಿಗೆ ಕೊಡುವುದು ನಮಗೆ ಮೋಶೆಯ ನಿಯಮಕ್ಕೆ ಅನುಸಾರವಾದದ್ದೋ?” ಎಂದು ಕೇಳಿದರು.
[23] ಆದರೆ ಯೇಸು ಅವರ ಕುಯುಕ್ತಿಯನ್ನು ತಿಳಿದು ಅವರಿಗೆ,
[24] “ಒಂದು ಬೆಳ್ಳಿ ನಾಣ್ಯವನ್ನು ತೋರಿಸಿರಿ. ಇದರಲ್ಲಿರುವುದು ಯಾರ ಮುದ್ರೆ? ಯಾರ ಲಿಪಿ?” ಎಂದು ಅವರನ್ನು ಕೇಳಲು ಅವರು, “ಕೈಸರನದು,” ಎಂದರು.
[25] ಆಗ ಯೇಸು ಅವರಿಗೆ, “ಹಾಗಾದರೆ ಕೈಸರನದನ್ನು ಕೈಸರನಿಗೂ ದೇವರದ್ದನ್ನು ದೇವರಿಗೂ ಕೊಡಿರಿ,” ಎಂದರು.
[26] ಯೇಸು ಜನರ ಮುಂದೆ ಬಹಿರಂಗವಾಗಿ ಹೇಳಿದ ಮಾತಿನಲ್ಲಿ ಅವರು ತಪ್ಪು ಕಂಡುಹಿಡಿಯಲಾರದೆ ಹೋದರು. ಯೇಸುವಿನ ಉತ್ತರಗಳಿಗಾಗಿ ಆಶ್ಚರ್ಯಪಟ್ಟು ಸುಮ್ಮನಾದರು.
[27] ಪುನರುತ್ಥಾನವನ್ನು ಅಲ್ಲಗಳೆಯುವ ಸದ್ದುಕಾಯರಲ್ಲಿ ಕೆಲವರು, ಯೇಸುವಿನ ಬಳಿಗೆ ಬಂದು ಅವರಿಗೆ,
[28] “ಬೋಧಕರೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಸಹೋದರನು ಅವನ ಪತ್ನಿಯನ್ನು ಮದುವೆಯಾಗಿ ತನ್ನ ಸಹೋದರನಿಗಾಗಿ ಸಂತಾನವನ್ನು ಪಡೆಯಬೇಕೆಂದು ಮೋಶೆ ನಮಗೆ ಬರೆದಿಟ್ಟಿದ್ದಾನೆ.
[29] ಹೀಗೆ ಏಳುಮಂದಿ ಸಹೋದರರಿದ್ದರು. ಮೊದಲನೆಯವನು ಆ ಸ್ತ್ರೀಯನ್ನು ಮದುವೆಯಾಗಿ ಸಂತಾನವಿಲ್ಲದೆ ಮೃತಪಟ್ಟನು.
[30] ಎರಡನೆಯವನೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದೆ ಮೃತನಾದನು.
[31] ಮೂರನೆಯವನು ಆಕೆಯನ್ನು ಮದುವೆಯಾದನು, ಅದೇ ರೀತಿಯಲ್ಲಿ ಏಳು ಜನರು ಸಹ ಮದುವೆಯಾಗಿ ಮಕ್ಕಳಿಲ್ಲದೆ ನಿಧನರಾದರು.
[32] ಕೊನೆಗೆ, ಆ ಸ್ತ್ರೀಯು ಸಹ ಮರಣಹೊಂದಿದಳು.
[33] ಹಾಗಾದರೆ, ಪುನರುತ್ಥಾನದಲ್ಲಿ ಅವರು ಜೀವಂತವಾಗಿ ಎದ್ದಾಗ ಅವರಲ್ಲಿ ಆಕೆಯು ಯಾರ ಪತ್ನಿಯಾಗಿರುವಳು? ಏಕೆಂದರೆ ಏಳುಮಂದಿಯೂ ಅವಳನ್ನು ಮದುವೆ ಮಾಡಿಕೊಂಡಿದ್ದರಲ್ಲಾ?” ಎಂದರು.
[34] ಅದಕ್ಕೆ ಯೇಸು ಉತ್ತರವಾಗಿ, “ಈ ಲೋಕದ ಜನರು ಮದುವೆ ಮಾಡಿಕೊಳ್ಳುತ್ತಾರೆ. ಮದುವೆ ಮಾಡಿಕೊಡುತ್ತಾರೆ.
[35] ಆದರೆ ಮುಂಬರುವ ಲೋಕದಲ್ಲಿ ಸತ್ತವರು ಪುನರುತ್ಥಾನವನ್ನು ಹೊಂದಿ, ಯೋಗ್ಯರೆಂದು ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆಮಾಡಿಕೊಡುವುದೂ ಇಲ್ಲ.
[36] ಅವರು ಇನ್ನೆಂದಿಗೂ ಸಾಯುವುದಿಲ್ಲ. ಏಕೆಂದರೆ ಅವರು ಪುನರುತ್ಥಾನದ ಮಕ್ಕಳೂ ದೇವದೂತರಿಗೆ ಸರಿಸಮಾನರೂ ಆಗಿರುವುದರಿಂದ, ಅವರು ದೇವರ ಮಕ್ಕಳಾಗಿದ್ದಾರೆ.
[37] ಆದರೆ ಉರಿಯುವ ಪೊದೆಯ ಬಳಿ ಕರ್ತದೇವರು, ‘ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು,’ ಎಂದು ತಿಳಿಸಿ ಸತ್ತವರು ಏಳುತ್ತಾರೆಂಬದನ್ನು ಮೋಶೆಗೆ ವ್ಯಕ್ತಪಡಿಸಿದ್ದಾರೆ.
[38] ದೇವರು ಜೀವಿತರಿಗೆ ದೇವರಾಗಿದ್ದಾರೆ ಹೊರತು ಸತ್ತವರಿಗಲ್ಲ. ಏಕೆಂದರೆ ಎಲ್ಲರೂ ಅವರಿಗಾಗಿ ಜೀವಿಸುತ್ತಾರೆ,” ಎಂದರು.
[39] ಆಗ ನಿಯಮ ಬೋಧಕರಲ್ಲಿ ಕೆಲವರು ಪ್ರತ್ಯುತ್ತರವಾಗಿ, “ಬೋಧಕರೇ, ನೀವು ಸರಿಯಾಗಿ ಹೇಳಿದಿರಿ,” ಎಂದರು.
[40] ಯಾರೂ ಯೇಸುವಿಗೆ ಯಾವ ಪ್ರಶ್ನೆಯನ್ನು ಕೇಳುವುದಕ್ಕೂ ಧೈರ್ಯಗೊಳ್ಳಲಿಲ್ಲ.
[41] ಯೇಸು ಅವರಿಗೆ, “ಕ್ರಿಸ್ತನು ದಾವೀದನ ಪುತ್ರನೆಂದು ಜನರು ಹೇಳುವುದು ಹೇಗೆ?
[42] ದಾವೀದನು ತಾನೇ ಕೀರ್ತನೆಗಳ ಗ್ರಂಥದಲ್ಲಿ ಹೀಗೆ ಹೇಳಿದ್ದಾನೆ: “ ‘ಕರ್ತದೇವರು ನನ್ನ ಕರ್ತದೇವರಿಗೆ: “ನಾನು ನಿನ್ನ ವಿರೋಧಿಗಳನ್ನು
[43] ನಿನ್ನ ಪಾದಗಳ ಪೀಠವಾಗಿ ಮಾಡುವವರೆಗೂ ನನ್ನ ಬಲಪಾರ್ಶ್ವದಲ್ಲಿ ನೀನು ಕುಳಿತುಕೊಂಡಿರು.” ’
[44] ಆದಕಾರಣ ದಾವೀದನು ತಾನೇ ಅವರನ್ನು, ‘ನನ್ನ ಕರ್ತದೇವರು,’ ಎಂದು ಕರೆಯುವಾಗ, ಅವರು ದಾವೀದನ ಪುತ್ರನಾಗುವುದು ಹೇಗೆ?” ಎಂದು ಕೇಳಿದರು.
[45] ಜನರೆಲ್ಲರೂ ಕೇಳುತ್ತಿದ್ದಾಗ ಯೇಸು ತಮ್ಮ ಶಿಷ್ಯರಿಗೆ,
[46] “ನಿಯಮ ಬೋಧಕರ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಅವರು ನಿಲುವಂಗಿಯನ್ನು ತೊಟ್ಟುಕೊಂಡು ತಿರುಗಾಡುವುದಕ್ಕೆ ಬಯಸುವವರೂ ಮಾರುಕಟ್ಟೆ ಬೀದಿಗಳಲ್ಲಿ ವಂದನೆಗಳನ್ನೂ ಸಭಾಮಂದಿರಗಳಲ್ಲಿ ಅತ್ಯುನ್ನತ ಆಸನಗಳನ್ನೂ ಔತಣಗಳಲ್ಲಿ ಮುಖ್ಯಸ್ಥಾನಗಳನ್ನೂ ಬಯಸುವವರಾಗಿದ್ದಾರೆ;
[47] ಇವರು ವಿಧವೆಯರ ಮನೆಗಳನ್ನು ದೋಚಿ ನಟನೆಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ. ಇಂಥವರು ಹೆಚ್ಚಾದ ದಂಡನೆಯನ್ನು ಹೊಂದುವರು,” ಎಂದರು.