[1] ತಮ್ಮ ಎಲ್ಲಾ ಮಾತುಗಳನ್ನು ಜನರೆಲ್ಲರೂ ಕೇಳುವಂತೆ ಹೇಳಿ ಮುಗಿಸಿದ ಮೇಲೆ, ಯೇಸು ಕಪೆರ್ನೌಮಿಗೆ ಪ್ರವೇಶಿಸಿದರು.
[2] ಆಗ ಒಬ್ಬ ಶತಾಧಿಪತಿಗೆ, ಪ್ರಿಯನಾಗಿದ್ದ ಸೇವಕ, ಅಸ್ವಸ್ಥನಾಗಿ ಸಾಯುವುದರಲ್ಲಿದ್ದನು.
[3] ಅವನು ಯೇಸುವಿನ ವಿಷಯ ಕೇಳಿದಾಗ, ಬಂದು ತನ್ನ ಸೇವಕನನ್ನು ಗುಣಮಾಡಬೇಕೆಂದು ಬೇಡಿಕೊಳ್ಳುವಂತೆ ಯೆಹೂದ್ಯರ ಹಿರಿಯರನ್ನು ಅವರ ಬಳಿಗೆ ಕಳುಹಿಸಿದನು.
[4] ಅವರು ಯೇಸುವಿನ ಬಳಿಗೆ ಬಂದು ಅವರಿಗೆ, “ನೀವು ಇದನ್ನು ಮಾಡುವುದಕ್ಕೆ ಅವನು ಯೋಗ್ಯನು,
[5] ಏಕೆಂದರೆ ಅವನು ನಮ್ಮ ಜನಾಂಗವನ್ನು ಪ್ರೀತಿಸುವುದಲ್ಲದೆ ನಮಗಾಗಿ ಒಂದು ಸಭಾಮಂದಿರವನ್ನು ಕಟ್ಟಿಸಿದ್ದಾನೆ,” ಎಂದು ಆಸಕ್ತಿಯಿಂದ ಬೇಡಿಕೊಂಡರು.
[6] ಯೇಸು ಅವರೊಂದಿಗೆ ಹೋದರು. ಅವರು ಮನೆಗೆ ಇನ್ನೂ ಸ್ವಲ್ಪ ದೂರ ಇರುವಾಗಲೇ ಶತಾಧಿಪತಿಯು ಸ್ನೇಹಿತರನ್ನು ಯೇಸುವಿನ ಬಳಿಗೆ ಕಳುಹಿಸಿ, “ಕರ್ತದೇವರೇ, ನಿಮ್ಮನ್ನು ತೊಂದರೆ ಪಡಿಸಿಕೊಳ್ಳಬೇಡಿರಿ, ನನ್ನ ಮನೆಯೊಳಗೆ ನೀವು ಬರುವಷ್ಟು ಯೋಗ್ಯತೆ ನನಗಿಲ್ಲ.
[7] ನಾನು ನಿಮ್ಮ ಬಳಿಗೆ ಬರುವುದಕ್ಕೆ ಯೋಗ್ಯನೆಂದು ಎಣಿಸಿಕೊಳ್ಳಲಿಲ್ಲ. ಆದರೆ ನೀವು ಒಂದು ಮಾತು ಹೇಳಿರಿ, ಆಗ ನನ್ನ ಸೇವಕ ಗುಣಹೊಂದುವನು.
[8] ನಾನು ಸಹ ಮತ್ತೊಬ್ಬ ಅಧಿಕಾರಿಯ ಕೈಕೆಳಗಿರುವವನು, ನನ್ನ ಅಧೀನದಲ್ಲಿಯೂ ಸೈನಿಕರಿದ್ದಾರೆ ಮತ್ತು ನಾನು ಒಬ್ಬನಿಗೆ, ‘ಹೋಗು,’ ಎಂದರೆ ಅವನು ಹೋಗುತ್ತಾನೆ, ಮತ್ತೊಬ್ಬನಿಗೆ ‘ಬಾ,’ ಎಂದರೆ ಅವನು ಬರುತ್ತಾನೆ. ನನ್ನ ಸೇವಕನಿಗೆ, ‘ಇದನ್ನು ಮಾಡು,’ ಎಂದರೆ ಅವನು ಮಾಡುತ್ತಾನೆ,” ಎಂದು ಹೇಳಿ ಕಳುಹಿಸಿದನು.
[9] ಯೇಸು ಅವನ ಈ ಮಾತುಗಳನ್ನು ಕೇಳಿದಾಗ, ಆಶ್ಚರ್ಯಪಟ್ಟು ತಿರುಗಿಕೊಂಡು ತಮ್ಮನ್ನು ಹಿಂಬಾಲಿಸುತ್ತಿದ್ದ ಗುಂಪಿಗೆ, “ನಾನು ನಿಮಗೆ ಹೇಳುವುದೇನೆಂದರೆ, ಇಂಥ ಮಹಾ ನಂಬಿಕೆಯನ್ನು ನಾನು ಇಸ್ರಾಯೇಲ್ ಜನರಲ್ಲಿಯೂ ಸಹ ಕಾಣಲಿಲ್ಲ,” ಎಂದರು.
[10] ಶತಾಧಿಪತಿಯ ಕಡೆಯಿಂದ ಬಂದವರು ಮನೆಗೆ ಹಿಂದಿರುಗಿದಾಗ ಅಸ್ವಸ್ಥನಾಗಿದ್ದ ಆ ಸೇವಕ ಸ್ವಸ್ಥನಾಗಿರುವುದನ್ನು ಕಂಡರು.
[11] ಇದಾದ ಮೇಲೆ, ಯೇಸು ನಾಯಿನ್ ಎಂಬ ಪಟ್ಟಣಕ್ಕೆ ಹೋದರು. ಆಗ ಅವರ ಶಿಷ್ಯರೂ ಜನರ ದೊಡ್ಡ ಗುಂಪೂ ಅವರ ಸಂಗಡ ಹೋದರು.
[12] ಯೇಸು ಪಟ್ಟಣ ದ್ವಾರದ ಸಮೀಪಕ್ಕೆ ಬಂದಾಗ, ಸತ್ತು ಹೋಗಿದ್ದ ಒಬ್ಬನನ್ನು ಹೊತ್ತುಕೊಂಡು ಹೋಗುತ್ತಿದ್ದರು, ಅವನು ತನ್ನ ತಾಯಿಗೆ ಒಬ್ಬನೇ ಮಗನು, ಆಕೆಯು ವಿಧವೆಯಾಗಿದ್ದಳು. ಪಟ್ಟಣದ ಬಹಳ ಜನರು ಆಕೆಯೊಂದಿಗೆ ಇದ್ದರು.
[13] ಕರ್ತದೇವರು ಆಕೆಯನ್ನು ಕಂಡು, ಆಕೆಯ ಮೇಲೆ ಕನಿಕರಪಟ್ಟು, “ಅಳಬೇಡ” ಎಂದರು.
[14] ಅನಂತರ ಯೇಸು ಬಂದು ಶವದ ಚಟ್ಟವನ್ನು ಮುಟ್ಟಿದಾಗ, ಅದನ್ನು ಹೊತ್ತುಕೊಂಡಿದ್ದವರು ಹಾಗೆಯೇ ನಿಂತರು. ಆಗ ಯೇಸು, “ಯುವಕನೇ, ನಾನು ನಿನಗೆ ಹೇಳುತ್ತೇನೆ, ಎದ್ದೇಳು!” ಎಂದರು.
[15] ಆಗ ಸತ್ತವನು ಎದ್ದು ಕುಳಿತುಕೊಂಡು ಮಾತನಾಡಲಾರಂಭಿಸಿದನು. ಯೇಸು ಅವನನ್ನು ಅವನ ತಾಯಿಗೆ ಒಪ್ಪಿಸಿದರು.
[16] ಆಗ ಅವರೆಲ್ಲರೂ ಭಯಭಕ್ತಿಯಿಂದ ಕೂಡಿದವರಾಗಿ, “ನಮ್ಮ ಮಧ್ಯದಲ್ಲಿ ಒಬ್ಬ ಮಹಾ ಪ್ರವಾದಿಯು ಎದ್ದಿದ್ದಾರೆ; ದೇವರು ತಮ್ಮ ಜನರಿಗೆ ಸಹಾಯಮಾಡಲು ಬಂದಿದ್ದಾರೆ,” ಎಂದು ದೇವರನ್ನು ಮಹಿಮೆಪಡಿಸುತ್ತಾ ಹೇಳಿದರು.
[17] ಯೇಸುವಿನ ವಿಷಯವಾದ ಈ ಸುದ್ದಿಯು ಯೂದಾಯದ ಎಲ್ಲಾ ಪ್ರಾಂತಕ್ಕೂ, ಸುತ್ತಲಿನ ಎಲ್ಲಾ ಪ್ರಾಂತಕ್ಕೂ ಹರಡಿತು.
[18] ಯೋಹಾನನ ಶಿಷ್ಯರು ಈ ಎಲ್ಲಾ ವಿಷಯಗಳನ್ನು ಅವನಿಗೆ ತಿಳಿಯಪಡಿಸಿದರು,
[19] ಆಗ ಯೋಹಾನನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, “ಬರಬೇಕಾದ ಕ್ರಿಸ್ತನು ನೀನೋ ಇಲ್ಲವೇ ನಾವು ಇನ್ನೊಬ್ಬನಿಗಾಗಿ ಎದುರು ನೋಡಬೇಕೋ?” ಎಂದು ಕರ್ತದೇವರನ್ನು ಕೇಳಲು ಅವರ ಬಳಿಗೆ ಕಳುಹಿಸಿದನು.
[20] ಅವರು ಯೇಸುವಿನ ಬಳಿಗೆ ಬಂದು, “ ‘ಬರಬೇಕಾದವರು ನೀವೋ? ಇಲ್ಲವೆ ನಾವು ಬೇರೊಬ್ಬರಿಗಾಗಿ ಎದುರು ನೋಡಬೇಕೋ?’ ಎಂದು ಕೇಳುವುದಕ್ಕಾಗಿ ಸ್ನಾನಿಕ ಯೋಹಾನನು ನಮ್ಮನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ,” ಎಂದು ಹೇಳಿದರು.
[21] ಅದೇ ಸಮಯದಲ್ಲಿ ರೋಗಗಳಿಂದಲೂ ವ್ಯಾಧಿಗಳಿಂದಲೂ ದುರಾತ್ಮಗಳಿಂದಲೂ ಪೀಡಿತರಾದ ಅನೇಕರನ್ನು ಯೇಸು ಗುಣಪಡಿಸುತ್ತಿದ್ದರು, ಕುರುಡರಾದ ಅನೇಕರಿಗೆ ದೃಷ್ಟಿ ನೀಡುತ್ತಿದ್ದರು.
[22] ತರುವಾಯ ಯೇಸು ಅವರಿಗೆ, “ನೀವು ಕಂಡು ಕೇಳಿದವುಗಳನ್ನು ಹೋಗಿ ಯೋಹಾನನಿಗೆ ತಿಳಿಸಿರಿ: ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಮರಣಹೊಂದಿದವರು ಜೀವ ಪಡೆಯುತ್ತಾರೆ ಮತ್ತು ಬಡವರಿಗೆ ಸುವಾರ್ತೆ ಸಾರಲಾಗುತ್ತದೆ.
[23] ನನ್ನ ವಿಷಯದಲ್ಲಿ ವಿಶ್ವಾಸ ಕಳೆದುಕೊಳ್ಳದವನೇ ಧನ್ಯನು,” ಎಂದರು.
[24] ಯೋಹಾನನ ಶಿಷ್ಯರು ಹೊರಟುಹೋದ ಮೇಲೆ, ಯೇಸು ಯೋಹಾನನ ವಿಷಯವಾಗಿ ಮಾತನಾಡಲಾರಂಭಿಸಿ ಜನರಿಗೆ, “ನೀವು ಯಾವುದನ್ನು ಕಾಣುವುದಕ್ಕಾಗಿ ಅರಣ್ಯಕ್ಕೆ ಹೋದಿರಿ? ಗಾಳಿಗೆ ಓಲಾಡುವ ದಂಟನ್ನೋ?
[25] ಇಲ್ಲವಾದರೆ, ನೀವು ಏನನ್ನು ಕಾಣುವುದಕ್ಕಾಗಿ ಹೋದಿರಿ? ನಯವಾದ ಉಡುಪನ್ನು ಧರಿಸಿದ್ದ ಮನುಷ್ಯನನ್ನೋ? ಶೋಭಾಯಮಾನವಾದ ಉಡುಪನ್ನು ಧರಿಸಿಕೊಂಡು ಸುಖವಾಗಿ ಜೀವಿಸುವವರು ಅರಮನೆಗಳಲ್ಲಿ ಇರುತ್ತಾರೆ.
[26] ಹಾಗಾದರೆ ಏನು ಕಾಣುವುದಕ್ಕಾಗಿ ಹೋದಿರಿ? ಒಬ್ಬ ಪ್ರವಾದಿಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನನ್ನು ನೋಡಿದಿರಿ, ಎಂದು ನಾನು ನಿಮಗೆ ಹೇಳುತ್ತೇನೆ.
[27] ಯಾರ ವಿಷಯವಾಗಿ ಪವಿತ್ರ ವೇದದಲ್ಲಿ ಬರೆದಿತ್ತೋ ಅವನೇ ಇವನು: “ ‘ಇಗೋ, ನಿನ್ನ ದಾರಿಯನ್ನು ನಿನ್ನ ಮುಂದೆ ಸಿದ್ಧಮಾಡುವಂತೆ ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ,’
[28] ನಾನು ನಿಮಗೆ ಹೇಳುವುದೇನೆಂದರೆ, ಸ್ತ್ರೀಯರಲ್ಲಿ ಹುಟ್ಟಿದವರಲ್ಲಿ ಸ್ನಾನಿಕ ಯೋಹಾನನಿಗಿಂತ ದೊಡ್ಡವನು ಇಲ್ಲ; ಆದರೆ ದೇವರ ರಾಜ್ಯದಲ್ಲಿ ಅತ್ಯಂತ ಚಿಕ್ಕವನು ಅವನಿಗಿಂತಲೂ ದೊಡ್ಡವನಾಗಿದ್ದಾನೆ,” ಎಂದರು.
[29] ಯೋಹಾನನಿಂದ ಉಪದೇಶ ಕೇಳಿದ ಎಲ್ಲಾ ಜನರೂ ಸುಂಕದವರೂ ಸಹ, ಯೇಸುವಿನ ಮಾತುಗಳನ್ನು ಕೇಳಿದಾಗ, ದೇವರ ಮಾರ್ಗವು ಸರಿಯಾಗಿದೆಯೆಂದು ಒಪ್ಪಿಕೊಂಡರು, ಏಕೆಂದರೆ ಅವರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದರು.
[30] ಆದರೆ ಫರಿಸಾಯರೂ ಮೋಶೆಯ ನಿಯಮ ಪಂಡಿತರೂ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳದೆ ಹೋದದ್ದರಿಂದ ತಮ್ಮ ವಿಷಯದಲ್ಲಿರುವ ದೇವರ ಸಂಕಲ್ಪವನ್ನು ತಿರಸ್ಕಾರ ಮಾಡಿದರು.
[31] ಅನಂತರ ಯೇಸು ಜನರಿಗೆ, “ಈ ಕಾಲದ ಜನರನ್ನು, ನಾನು ಯಾವುದಕ್ಕೆ ಹೋಲಿಸಲಿ? ಅವರು ಯಾವುದಕ್ಕೆ ಹೋಲಿಕೆಯಾಗಿದ್ದಾರೆ?
[32] ಅವರು ಸಂತೆಯಲ್ಲಿ ಕುಳಿತುಕೊಂಡು ಒಬ್ಬರನ್ನೊಬ್ಬರು ಕರೆಯುತ್ತಾ: “ ‘ನಾವು ನಿಮಗಾಗಿ ಕೊಳಲೂದಿದೆವು, ನೀವು ಕುಣಿಯಲಿಲ್ಲ, ನಾವು ನಿಮಗಾಗಿ ಶೋಕಗೀತೆ ಹಾಡಿದೆವು, ನೀವು ಅಳಲಿಲ್ಲ,’ ಎಂದು ಹೇಳುವ ಮಕ್ಕಳಿಗೆ ಹೋಲಿಕೆಯಾಗಿದ್ದಾರೆ.
[33] “ಸ್ನಾನಿಕ ಯೋಹಾನನು ರೊಟ್ಟಿಯನ್ನು ತಿನ್ನದೆಯೂ ದ್ರಾಕ್ಷಾರಸವನ್ನು ಕುಡಿಯದೆಯೂ ಬಂದನು, ಅದಕ್ಕೆ ನೀವು, ‘ಅವನಿಗೆ ದೆವ್ವ ಹಿಡಿದಿದೆ,’ ಎನ್ನುತ್ತೀರಿ.
[34] ಮನುಷ್ಯಪುತ್ರನಾದ ನಾನು ಅನ್ನಪಾನ ಸೇವಿಸುವವನಾಗಿ ಬಂದೆನು, ಆದರೆ ನೀವು, ‘ಇಗೋ, ಹೊಟ್ಟೆಬಾಕನು, ಕುಡುಕನು, ಸುಂಕದವರ ಮತ್ತು ಪಾಪಿಗಳ ಸ್ನೇಹಿತನು,’ ಎನ್ನುತ್ತೀರಿ.
[35] ಆದರೆ ಜ್ಞಾನವನ್ನು ಅನ್ವಯಿಸಿಕೊಳ್ಳುವಾಗಲೇ ಜ್ಞಾನದ ಗುಣಲಕ್ಷಣಗಳು ಸ್ಪಷ್ಟವಾಗಿರುವುದು,” ಎಂದರು.
[36] ಆಗ ಫರಿಸಾಯರಲ್ಲಿ ಒಬ್ಬನು ಯೇಸು ತನ್ನೊಂದಿಗೆ ಊಟ ಮಾಡಬೇಕೆಂದು ಅಪೇಕ್ಷಿಸಿದನು, ಆಗ ಯೇಸು ಆ ಫರಿಸಾಯನ ಮನೆಯೊಳಕ್ಕೆ ಹೋಗಿ ಊಟಕ್ಕೆ ಕುಳಿತುಕೊಂಡರು.
[37] ಆ ಪಟ್ಟಣದಲ್ಲಿದ್ದ ಫರಿಸಾಯನ ಮನೆಯಲ್ಲಿ ಯೇಸು ಊಟಕ್ಕೆ ಕುಳಿತುಕೊಂಡಿದ್ದಾರೆಂದು ಒಬ್ಬ ಪಾಪಿ ಸ್ತ್ರೀಯು ತಿಳಿದು, ಸುಗಂಧ ತೈಲದ ಭರಣಿಯನ್ನು ತಂದು,
[38] ಅವರ ಪಾದಗಳ ಬಳಿಯಲ್ಲಿ ನಿಂತು, ಅಳುತ್ತಾ ಅವರ ಪಾದಗಳನ್ನು ಕಣ್ಣೀರಿನಿಂದ ತೊಳೆಯಲಾರಂಭಿಸಿ, ತನ್ನ ತಲೆಕೂದಲಿನಿಂದ ಒರೆಸಿ, ಅವರ ಪಾದಗಳಿಗೆ ಮುದ್ದಿಟ್ಟು ಆ ತೈಲವನ್ನು ಹಚ್ಚಿದಳು.
[39] ಆಗ ಯೇಸುವನ್ನು ಆಮಂತ್ರಿಸಿದ ಫರಿಸಾಯನು, ಅದನ್ನು ಕಂಡು ತನ್ನೊಳಗೆ, “ಈ ಮನುಷ್ಯ ಒಬ್ಬ ಪ್ರವಾದಿಯಾಗಿದ್ದರೆ, ತನ್ನನ್ನು ಮುಟ್ಟುತ್ತಿದ್ದವಳು ಯಾರು, ಎಂಥಾ ಹೆಂಗಸು ಎಂದು ತಿಳಿದುಕೊಳ್ಳುತ್ತಿದ್ದನು. ಅವಳು ಒಬ್ಬ ಪಾಪಿ,” ಎಂದು ಅಂದುಕೊಂಡನು.
[40] ಆಗ ಯೇಸು ಅವನಿಗೆ, “ಸೀಮೋನನೇ, ನಾನು ನಿನಗೆ ಹೇಳಬೇಕಾದ ಒಂದು ವಿಷಯವಿದೆ,” ಎಂದರು. ಸೀಮೋನನು ಯೇಸುವಿಗೆ, “ಗುರುವೇ, ಹೇಳಿ” ಎಂದನು.
[41] ಆಗ ಯೇಸು, “ಸಾಲಕೊಡುವ ಒಬ್ಬನಿಗೆ ಇಬ್ಬರು ಸಾಲಗಾರರಿದ್ದರು, ಒಬ್ಬನು ಐದು ನೂರು ಬೆಳ್ಳಿ ನಾಣ್ಯಗಳನ್ನೂ, ಮತ್ತೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನೂ ಕೊಡಬೇಕಾಗಿತ್ತು.
[42] ಆದರೆ ಅವರಿಬ್ಬರಿಗೂ ಸಾಲತೀರಿಸುವುದಕ್ಕೆ ಹಣ ಇರಲಿಲ್ಲ. ಅವನು ಅವರಿಬ್ಬರ ಸಾಲವನ್ನೂ ರದ್ದುಮಾಡಿಬಿಟ್ಟನು. ಆದ್ದರಿಂದ ಅವರಲ್ಲಿ ಯಾರು ಬಹಳವಾಗಿ ಅವನನ್ನು ಪ್ರೀತಿಸುವರು?” ಎಂದು ಕೇಳಿದರು.
[43] ಅದಕ್ಕೆ ಸೀಮೋನನು ಉತ್ತರವಾಗಿ, “ಯಾರಿಗೆ ಅವನು ಹೆಚ್ಚಾಗಿ ರದ್ದು ಮಾಡಿದನೋ ಅವನೇ ಎಂದು ತೋರುತ್ತದೆ,” ಎಂದನು. ಆಗ ಯೇಸು ಅವನಿಗೆ, “ನೀನು ಸರಿಯಾಗಿ ತೀರ್ಪು ಮಾಡಿದೆ,” ಎಂದರು.
[44] ತರುವಾಯ ಯೇಸು ಆ ಸ್ತ್ರೀಯ ಕಡೆಗೆ ತಿರುಗಿಕೊಂಡು ಸೀಮೋನನಿಗೆ, “ಈ ಸ್ತ್ರೀಯನ್ನು ಕಂಡಿದ್ದೀಯಾ? ನಾನು ನಿನ್ನ ಮನೆಯೊಳಗೆ ಪ್ರವೇಶಿಸಿದಾಗ ನನ್ನ ಪಾದಗಳಿಗೆ ನೀನು ನೀರು ಕೊಡಲಿಲ್ಲ. ಇವಳಾದರೋ ನನ್ನ ಪಾದಗಳನ್ನು ತನ್ನ ಕಣ್ಣೀರಿನಿಂದ ತೊಳೆದು ತನ್ನ ತಲೆಕೂದಲಿನಿಂದ ಅವುಗಳನ್ನು ಒರೆಸಿದ್ದಾಳೆ.
[45] ನೀನು ನನಗೆ ಮುದ್ದು ಕೊಡಲಿಲ್ಲ. ಆದರೆ ನಾನು ಒಳಗೆ ಬಂದಾಗಿನಿಂದ ಈ ಸ್ತ್ರೀಯು ನನ್ನ ಪಾದಗಳಿಗೆ ಮುದ್ದಿಡುವುದನ್ನು ಬಿಡಲಿಲ್ಲ.
[46] ನೀನು ನನ್ನ ತಲೆಗೆ ಎಣ್ಣೆ ಹಚ್ಚಲಿಲ್ಲ, ಆದರೆ ಈ ಸ್ತ್ರೀಯು ನನ್ನ ಪಾದಗಳಿಗೆ ಸುಗಂಧ ತೈಲವನ್ನು ಹಚ್ಚಿದ್ದಾಳೆ.
[47] ಬಹಳವಾಗಿರುವ ಇವಳ ಪಾಪಗಳು ಕ್ಷಮಿಸಲಾಗಿವೆ. ಏಕೆಂದರೆ ಇವಳು ಬಹಳವಾಗಿ ಪ್ರೀತಿಸಿದಳು. ಆದರೆ ಕಡಿಮೆ ಕ್ಷಮೆ ಪಡೆದವನು ಕಡಿಮೆ ಪ್ರೀತಿಸುವನು ಎಂದು ನಾನು ನಿನಗೆ ಹೇಳುತ್ತೇನೆ,” ಎಂದರು.
[48] ಯೇಸು ಆಕೆಗೆ, “ನಿನ್ನ ಪಾಪಗಳು ಕ್ಷಮಿಸಲಾಗಿವೆ,” ಎಂದರು.
[49] ಯೇಸುವಿನ ಸಂಗಡ ಊಟಕ್ಕೆ ಕುಳಿತವರು, “ಪಾಪಗಳನ್ನು ಸಹ ಕ್ಷಮಿಸುವುದಕ್ಕೆ ಈತನು ಯಾರು?” ಎಂದು ತಮ್ಮತಮ್ಮೊಳಗೆ ಅಂದುಕೊಳ್ಳಲಾರಂಭಿಸಿದರು.
[50] ಯೇಸು ಆ ಸ್ತ್ರೀಗೆ, “ನಿನ್ನ ನಂಬಿಕೆಯು ನಿನ್ನನ್ನು ರಕ್ಷಿಸಿದೆ, ಸಮಾಧಾನದಿಂದ ಹೋಗು,” ಎಂದರು.