Skip to content
Opens in a new window
Listen to this chapter • 9:18

[1] ಆಗ ಅಲ್ಲಿ ಕೂಡಿದ್ದವರೆಲ್ಲರೂ ಎದ್ದು ಯೇಸುವನ್ನು ಪಿಲಾತನ ಬಳಿಗೆ ಕರೆದುಕೊಂಡು ಹೋದರು.

[2] ಅವರು ಯೇಸುವಿನ ಮೇಲೆ ದೂರು ಹೇಳಲಾರಂಭಿಸಿ, “ಈ ನಮ್ಮ ಜನಾಂಗವು ದಂಗೆಯೇಳುವಂತೆಯೂ ತಾನೇ ಕ್ರಿಸ್ತನೆಂಬ ಒಬ್ಬ ಅರಸನಾಗಿದ್ದೇನೆಂದೂ ಹೇಳಿ ಕೈಸರನಿಗೆ ತೆರಿಗೆ ಕೊಡದಂತೆ ಈತನು ಅಡ್ಡಿಮಾಡುತ್ತಿರುವುದನ್ನೂ ನಾವು ಕಂಡಿದ್ದೇವೆ,” ಎಂದರು.

[3] ಆಗ ಪಿಲಾತನು ಯೇಸುವಿಗೆ, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು. ಅದಕ್ಕೆ ಯೇಸು ಅವರಿಗೆ, “ನೀವೇ ಹೇಳುತ್ತಿದ್ದೀರಿ,” ಎಂದರು.

[4] ತರುವಾಯ ಪಿಲಾತನು, ಮುಖ್ಯಯಾಜಕರಿಗೂ ಜನರಿಗೂ, “ಈ ಮನುಷ್ಯನಲ್ಲಿ ನಾನು ಯಾವ ತಪ್ಪನ್ನೂ ಕಾಣಲಿಲ್ಲ,” ಎಂದನು.

[5] ಅದಕ್ಕೆ ಅವರು, “ಈತನು ಗಲಿಲಾಯ ಪ್ರಾಂತ ಮೊದಲುಗೊಂಡು ಈ ಸ್ಥಳದವರೆಗೂ ಯೂದಾಯ ಪ್ರಾಂತದ ಎಲ್ಲಾ ಕಡೆಗೂ ಬೋಧಿಸುತ್ತಾ, ಜನರನ್ನು ಕ್ರಾಂತಿಗೆ ಪ್ರೇರೇಪಿಸುತ್ತಿದ್ದಾನೆ,” ಎಂದು ಒತ್ತಾಯ ಪೂರ್ವಕವಾಗಿ ಹೇಳಿದರು.

[6] ಪಿಲಾತನು ಗಲಿಲಾಯದ ವಿಷಯವಾಗಿ ಕೇಳಿದಾಗ, “ಈ ಮನುಷ್ಯನು ಗಲಿಲಾಯದವನೋ?” ಎಂದು ವಿಚಾರಿಸಿದನು.

[7] ಯೇಸು ಹೆರೋದನ ಅಧಿಕಾರಕ್ಕೆ ಸಂಬಂಧ ಪಟ್ಟವನೆಂದು ತಿಳಿದ ಕೂಡಲೇ ಅದೇ ಸಮಯದಲ್ಲಿ ಯೆರೂಸಲೇಮಿನಲ್ಲಿಯೇ ಇದ್ದ ಹೆರೋದನ ಬಳಿಗೆ ಯೇಸುವನ್ನು ಕಳುಹಿಸಿದನು.

[8] ಹೆರೋದನು ಯೇಸುವನ್ನು ಕಂಡಾಗ, ಅತ್ಯಂತ ಸಂತೋಷಪಟ್ಟನು. ಏಕೆಂದರೆ ಅವನು ಯೇಸುವಿನ ವಿಷಯವಾಗಿ ಅನೇಕ ಸಂಗತಿಗಳನ್ನು ಕೇಳಿದ್ದರಿಂದ, ಅವರನ್ನು ಕಾಣಲು ಬಹಳ ಕಾಲದಿಂದ ಆಶೆಪಟ್ಟಿದ್ದನು. ಅವರಿಂದಾಗುವ ಸೂಚಕಕಾರ್ಯವನ್ನು ಕಾಣಲು ನಿರೀಕ್ಷಿಸುತ್ತಿದ್ದನು.

[9] ಅವನು ಯೇಸುವನ್ನು ಅನೇಕ ಪ್ರಶ್ನೆಗಳನ್ನು ಕೇಳಿದರೂ ಯೇಸು ಅವನಿಗೆ ಏನೂ ಉತ್ತರ ಕೊಡಲಿಲ್ಲ.

[10] ಮುಖ್ಯಯಾಜಕರೂ ನಿಯಮ ಬೋಧಕರು ನಿಂತುಕೊಂಡು ಬಲವಾಗಿ ಯೇಸುವಿನ ಮೇಲೆ ದೂರುಗಳನ್ನು ಹೇಳುತ್ತಿದ್ದರು.

[11] ಆಗ ಹೆರೋದನು ತನ್ನ ಸೈನಿಕರೊಂದಿಗೆ ಯೇಸುವನ್ನು ತಿರಸ್ಕರಿಸಿ, ಹಾಸ್ಯಮಾಡಿ, ಅವರ ಮೇಲೆ ರಾಜವಸ್ತ್ರವನ್ನು ಹೊದಿಸಿ ಅವರನ್ನು ತಿರುಗಿ ಪಿಲಾತನ ಬಳಿಗೆ ಕಳುಹಿಸಿದನು.

[12] ಪಿಲಾತನೂ ಹೆರೋದನೂ ಅದೇ ದಿನದಲ್ಲಿ ಒಬ್ಬರಿಗೊಬ್ಬರು ಸ್ನೇಹಿತರಾದರು. ಏಕೆಂದರೆ ಅದುವರೆಗೂ ಅವರು ವೈರಿಗಳಾಗಿದ್ದರು.

[13] ಪಿಲಾತನು ಮುಖ್ಯಯಾಜಕರನ್ನೂ ಅಧಿಕಾರಿಗಳನ್ನೂ ಜನರನ್ನೂ ಒಟ್ಟಾಗಿ ಕರೆಯಿಸಿ ಅವರಿಗೆ,

[14] “ಜನರು ತಿರುಗಿ ಬೀಳುವಂತೆ ಮಾಡುತ್ತಾನೆಂದು ನೀವು ಈತನನ್ನು ನನ್ನ ಬಳಿಗೆ ತಂದಿದ್ದೀರಿ. ಇಗೋ, ನೀವು ಈತನ ಮೇಲೆ ತಂದಿರುವ ದೂರುಗಳನ್ನು ನಾನು ನಿಮ್ಮ ಮುಂದೆಯೇ ವಿಚಾರಿಸಿದಾಗ ಈತನಲ್ಲಿ ನನಗೆ ಯಾವ ಅಪರಾಧವೂ ಕಾಣಲಿಲ್ಲ.

[15] ಮಾತ್ರವಲ್ಲದೆ, ಈತನನ್ನು ನಮ್ಮ ಬಳಿಗೆ ಕಳುಹಿಸಿದ ಹೆರೋದ ಅರಸನಿಗೂ ಸಹ ಈತನಲ್ಲಿ ಯಾವ ಅಪರಾಧವೂ ಕಾಣಲಿಲ್ಲ. ಇಗೋ, ಈತನಲ್ಲಿ ಮರಣಕ್ಕೆ ಯೋಗ್ಯವಾದದ್ದೇನೂ ಕಾಣಲಿಲ್ಲ.

[16] ಹೀಗಿರುವುದರಿಂದ ನಾನು ಈತನನ್ನು ದಂಡಿಸಿ ಬಿಟ್ಟುಬಿಡುತ್ತೇನೆ,” ಎಂದನು.

[17] ಏಕೆಂದರೆ ಅಧಿಪತಿಯು ಸೆರೆಯಾಳು ಒಬ್ಬನನ್ನು ಹಬ್ಬದಲ್ಲಿ ಜನರಿಗೋಸ್ಕರ ಬಿಡಿಸುವುದು ಪದ್ಧತಿಯಾಗಿತ್ತು.

[18] ಆಗ ಅವರೆಲ್ಲರೂ ಆ ಕ್ಷಣವೇ, “ಈತನಿಗೆ ಮರಣದಂಡನೆ ವಿಧಿಸಿರಿ, ನಮಗೆ ಬರಬ್ಬನನ್ನು ಬಿಡುಗಡೆಮಾಡು,” ಎಂದು ಬೊಬ್ಬೆಹಾಕಿದರು.

[19] ಬರಬ್ಬನು ಪಟ್ಟಣದಲ್ಲಿ ನಡೆದ ದಂಗೆ ಮತ್ತು ಕೊಲೆಯ ನಿಮಿತ್ತ ಸೆರೆಯಲ್ಲಿ ಹಾಕಿದವನಾಗಿದ್ದನು.

[20] ಪಿಲಾತನು ಯೇಸುವನ್ನು ಬಿಡಿಸಬೇಕೆಂದು ಮನಸ್ಸುಳ್ಳವನಾಗಿ ಮತ್ತೊಮ್ಮೆ ಜನರಲ್ಲಿ ಮನವಿ ಮಾಡಿಕೊಂಡನು.

[21] ಅವರಾದರೋ, “ಈತನನ್ನು ಶಿಲುಬೆಗೆ ಹಾಕಿಸು, ಈತನನ್ನು ಶಿಲುಬೆಗೆ ಹಾಕಿಸು!” ಎಂದು ಆರ್ಭಟಿಸತೊಡಗಿದರು.

[22] ಪಿಲಾತನು ಮೂರನೆಯ ಸಾರಿ ಅವರಿಗೆ, “ಏಕೆ? ಈತನು ಮಾಡಿದ ಅಪರಾಧವೇನು? ಈತನಲ್ಲಿ ಮರಣದಂಡನೆಗೆ ಕಾರಣವಾದದ್ದೇನೂ ನನಗೆ ಕಾಣಲಿಲ್ಲ. ಆದ್ದರಿಂದ ನಾನು ಈತನನ್ನು ದಂಡಿಸಿ ಬಿಟ್ಟುಬಿಡುತ್ತೇನೆ,” ಎಂದನು.

[23] ಆದರೆ ಯೇಸುವನ್ನು ಶಿಲುಬೆಗೆ ಹಾಕಿಸಬೇಕೆಂದು ಜನರು ಆರ್ಭಟಿಸುತ್ತಾ, ಒತ್ತಾಯಮಾಡಿದರು. ಹೀಗೆ ಅವರ ಕೂಗಾಟವೇ ಗೆದ್ದಿತು.

[24] ಪಿಲಾತನು ಅವರು ಕೇಳಿಕೊಂಡಂತೆಯೇ ಆಗಲಿ ಎಂದು ನಿರ್ಣಯಿಸಿದನು.

[25] ಇದಲ್ಲದೆ ಪಿಲಾತನು ಜನರು ಬರಬ್ಬನನ್ನು ಎಂದರೆ, ದಂಗೆ ಮತ್ತು ಕೊಲೆಯ ನಿಮಿತ್ತ ಸೆರೆಮನೆಯೊಳಗೆ ಹಾಕಿದವನನ್ನು ಅವರಿಗೆ ಬಿಟ್ಟುಕೊಟ್ಟು, ಯೇಸುವನ್ನೋ ಅವರ ಇಷ್ಟಕ್ಕೆ ಒಪ್ಪಿಸಿದನು.

[26] ಸೈನಿಕರು ಯೇಸುವನ್ನು ತೆಗೆದುಕೊಂಡು ಹೋಗುತ್ತಿರುವಾಗ ಹೊಲದಿಂದ ಬರುತ್ತಿದ್ದ ಕುರೇನೆದ ಸೀಮೋನನೆಂಬವನನ್ನು ಹಿಡಿದು, ಅವನ ಮೇಲೆ ಶಿಲುಬೆಯನ್ನು ಹೊರಿಸಿ, ಯೇಸುವಿನ ಹಿಂದೆ ಹೊತ್ತುಕೊಂಡು ಹೋಗುವಂತೆ ಮಾಡಿದರು.

[27] ಜನರ ಮಹಾ ಸಮೂಹ ಯೇಸುವಿನ ಹಿಂದೆ ಹೊರಟಿತು. ಅವರಲ್ಲಿ ಯೇಸುವಿಗಾಗಿ ಶೋಕಿಸುತ್ತಾ, ಗೋಳಾಡುತ್ತಿದ್ದ ಮಹಿಳೆಯರು ಸಹ ಇದ್ದರು.

[28] ಯೇಸು ಅವರ ಕಡೆಗೆ ತಿರುಗಿಕೊಂಡು, “ಯೆರೂಸಲೇಮಿನ ಪುತ್ರಿಯರೇ, ನನಗಾಗಿ ಅಳಬೇಡಿರಿ. ನಿಮಗಾಗಿಯೂ ನಿಮ್ಮ ಮಕ್ಕಳಿಗಾಗಿ ಅಳಿರಿ.

[29] ಏಕೆಂದರೆ, ‘ಇಗೋ, ಬಂಜೆಯರೂ ಹೆರದವರೂ ಹಾಲು ಕುಡಿಸದವರೂ ಧನ್ಯರು,’ ಎಂದು ಜನರು ಹೇಳುವ ದಿವಸಗಳು ಬರುತ್ತವೆ.

[30] ಆಗ ಅವರು, “ ‘ಬೆಟ್ಟಗಳಿಗೆ, “ನಮ್ಮ ಮೇಲೆ ಬೀಳಿರಿ!” ಗುಡ್ಡಗಳಿಗೆ, “ನಮ್ಮನ್ನು ಮುಚ್ಚಿಕೊಳ್ಳಿರಿ!” ’ ಎಂದು ಹೇಳಲಾರಂಭಿಸುವರು.

[31] ಅವರು ಹಸಿ ಮರಕ್ಕೆ ಇವುಗಳನ್ನು ಮಾಡಿದರೆ, ಒಣ ಮರಕ್ಕೆ ಇನ್ನೇನು ಮಾಡಿಯಾರು?” ಎಂದರು.

[32] ಅಪರಾಧಿಗಳಾದ ಬೇರೆ ಇಬ್ಬರನ್ನು ಕೂಡ ಯೇಸುವಿನೊಂದಿಗೆ ಮರಣದಂಡನೆಗಾಗಿ ಕರೆದುಕೊಂಡು ಹೋದರು.

[33] ಅವರು “ತಲೆಬುರುಡೆಯ ಸ್ಥಳ” ಎಂದು ಕರೆಯಲಾಗುವ ಸ್ಥಳಕ್ಕೆ ಬಂದಾಗ, ಅಲ್ಲಿ ಯೇಸುವನ್ನು ಶಿಲುಬೆಗೆ ಹಾಕಿದರು. ಆ ಅಪರಾಧಿಗಳಲ್ಲಿ ಒಬ್ಬನನ್ನು ಯೇಸುವಿನ ಬಲಗಡೆಯಲ್ಲಿ ಮತ್ತೊಬ್ಬನನ್ನು ಅವರ ಎಡಗಡೆಯಲ್ಲಿ ಶಿಲುಬೆಗೆ ಹಾಕಿದರು.

[34] ಆಗ ಯೇಸು, “ತಂದೆಯೇ, ಇವರನ್ನು ಕ್ಷಮಿಸಿ, ತಾವು ಏನು ಮಾಡುತ್ತಿದ್ದಾರೆಂದು ಅರಿಯರು,” ಎಂದರು. ಸೈನಿಕರಾದರೋ ಯೇಸುವಿನ ಉಡುಪನ್ನು ಚೀಟುಹಾಕಿ, ಹಂಚಿಕೊಂಡರು.

[35] ಜನರು ನೋಡುತ್ತಾ ನಿಂತುಕೊಂಡಿದ್ದರು. ಅವರೊಂದಿಗೆ ಅಧಿಕಾರಿಗಳು ಸಹ ಯೇಸುವನ್ನು ಅಪಹಾಸ್ಯಮಾಡಿ, “ಬೇರೆಯವರನ್ನು ರಕ್ಷಿಸಿದ ಈತನು ದೇವರು ಆರಿಸಿಕೊಂಡ ಕ್ರಿಸ್ತನಾಗಿದ್ದರೆ, ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ,” ಎಂದರು.

[36] ಸೈನಿಕರು ಸಹ ಯೇಸುವಿನ ಬಳಿಗೆ ಬಂದು ಅವರನ್ನು ಹಾಸ್ಯಮಾಡಿ ಯೇಸುವಿಗೆ ಹುಳಿರಸವನ್ನು ಕೊಟ್ಟು,

[37] “ನೀನು ಯೆಹೂದ್ಯರ ಅರಸನಾಗಿದ್ದರೆ ನಿನ್ನನ್ನು ನೀನೇ ರಕ್ಷಿಸಿಕೋ,” ಎಂದರು.

[38] ಯೇಸುವಿನ ಶಿಲುಬೆಯ ಮೇಲ್ಗಡೆಯಲ್ಲಿ ಒಂದು ಲಿಖಿತ ಹೀಗಿತ್ತು: ಈತನು ಯೆಹೂದ್ಯರ ಅರಸನು.

[39] ಶಿಲುಬೆಗೆ ಹಾಕಿದ್ದ ಅಪರಾಧಿಗಳಲ್ಲಿ ಒಬ್ಬನು, “ನೀನು ಕ್ರಿಸ್ತನಾಗಿದ್ದರೆ ನಿನ್ನನ್ನು ರಕ್ಷಿಸಿಕೊಂಡು, ನಮ್ಮನ್ನೂ ರಕ್ಷಿಸು,” ಎಂದು ಯೇಸುವನ್ನು ದೂಷಿಸಿದನು.

[40] ಆದರೆ ಮತ್ತೊಬ್ಬ ಅಫರಾಧಿಯು ಅವನನ್ನು ಖಂಡಿಸುತ್ತಾ, “ನೀನು ಇದೇ ದಂಡನೆಗೆ ಗುರಿಯಾಗಿದ್ದರೂ ದೇವರಿಗೆ ಭಯಪಡುವುದಿಲ್ಲವೋ?

[41] ನಮಗಾದರೋ ನಮ್ಮ ಕೃತ್ಯಕ್ಕೆ ತಕ್ಕ ಶಿಕ್ಷೆ ನ್ಯಾಯವಾಗಿ ಸಿಕ್ಕಿದೆ. ಈತನಾದರೋ ತಪ್ಪಾದದ್ದೇನೂ ಮಾಡಲಿಲ್ಲ,” ಎಂದನು.

[42] ಬಳಿಕ ಅವನು, “ಯೇಸುವೇ, ನೀವು ನಿಮ್ಮ ರಾಜ್ಯದಲ್ಲಿ ಬರುವಾಗ ನನ್ನನ್ನು ನೆನಪುಮಾಡಿಕೊಳ್ಳಿರಿ,” ಎಂದನು.

[43] ಆಗ ಯೇಸು ಅವನಿಗೆ, “ಈ ದಿನವೇ ನೀನು ನನ್ನ ಸಂಗಡ ಪರದೈಸಿನಲ್ಲಿರುವೆ ಎಂದು ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.

[44] ಆಗ ಸುಮಾರು ಮಧ್ಯಾಹ್ನವಾಗಿತ್ತು, ಆ ಹೊತ್ತಿನಿಂದ ಮೂರು ಗಂಟೆಯವರೆಗೆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು.

[45] ಸೂರ್ಯನು ಕಳೆಗುಂದಿದನು ಮತ್ತು ದೇವಾಲಯದ ತೆರೆಯು ಹರಿದು ಎರಡು ಭಾಗವಾಯಿತು.

[46] ಯೇಸು ಮಹಾಧ್ವನಿಯಿಂದ, “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗಳಲ್ಲಿ ಒಪ್ಪಿಸುತ್ತೇನೆ,” ಎಂದು ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು.

[47] ಆಗ ಶತಾಧಿಪತಿಯು, ನಡೆದದ್ದನ್ನು ಕಂಡು, “ಈತನು ನೀತಿವಂತನೇ ಸರಿ,” ಎಂದು ಹೇಳಿ ದೇವರನ್ನು ಮಹಿಮೆಪಡಿಸಿದನು.

[48] ಆ ದೃಶ್ಯವನ್ನು ಕಾಣಲು ಬಂದ ಜನರು ನಡೆದ ಘಟನೆಗಳನ್ನು ಕಂಡು, ತಮ್ಮ ಎದೆಗಳನ್ನು ಬಡಿದುಕೊಂಡು ಹಿಂದಿರುಗಿ ಹೋದರು.

[49] ಯೇಸುವಿಗೆ ಪರಿಚಯವಿದ್ದವರೆಲ್ಲರೂ ಗಲಿಲಾಯದಿಂದ ಅವರನ್ನು ಹಿಂಬಾಲಿಸಿದ ಸ್ತ್ರೀಯರೂ ದೂರದಲ್ಲಿ ನಿಂತು ಇವುಗಳನ್ನು ನೋಡುತ್ತಿದ್ದರು.

[50] ಯೋಸೇಫನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು, ಇವನು ಆಲೋಚನಾ ಸಭೆಯವನೂ ಒಳ್ಳೆಯವನೂ ಮತ್ತು ನೀತಿವಂತನೂ ಆಗಿದ್ದನು.

[51] ಇವನು ಅವರ ತೀರ್ಮಾನಕ್ಕೂ ಕೃತ್ಯಕ್ಕೂ ಒಪ್ಪಿಕೊಂಡಿರಲಿಲ್ಲ. ಇವನು ಯೆಹೂದ್ಯರ ಪಟ್ಟಣವಾದ ಅರಿಮಥಾಯದವನೂ ದೇವರ ರಾಜ್ಯಕ್ಕಾಗಿ ಎದುರುನೋಡುವವನೂ ಆಗಿದ್ದನು.

[52] ಇವನು ಪಿಲಾತನ ಬಳಿಗೆ ಹೋಗಿ, ಯೇಸುವಿನ ದೇಹವನ್ನು ಕೊಡಲು ಬೇಡಿಕೊಂಡನು.

[53] ತರುವಾಯ ಇವನು ಶರೀರವನ್ನು ಕೆಳಗೆ ಇಳಿಸಿ, ನಾರುಬಟ್ಟೆಯಲ್ಲಿ ಸುತ್ತಿ, ಬಂಡೆಯಲ್ಲಿ ಕೊರೆದಿದ್ದ ಸಮಾಧಿಯಲ್ಲಿ ಇಟ್ಟನು, ಅದರಲ್ಲಿ ಅದುವರೆಗೆ ಯಾರನ್ನೂ ಇಟ್ಟಿರಲಿಲ್ಲ.

[54] ಅಂದು ಸಿದ್ಧತೆಯ ದಿನವಾಗಿತ್ತು. ಸಬ್ಬತ್ ದಿನ ಪ್ರಾರಂಭವಾಗಲಿತ್ತು.

[55] ಗಲಿಲಾಯದಿಂದ ಯೇಸುವಿನೊಂದಿಗೆ ಬಂದ ಸ್ತ್ರೀಯರು ಅರಿಮಥಾಯದ ಯೋಸೇಫನೊಂದಿಗೆ ಹೋಗಿ, ಸಮಾಧಿಯನ್ನೂ ದೇಹವನ್ನು ಅದರಲ್ಲಿಟ್ಟ ರೀತಿಯನ್ನೂ ನೋಡಿದರು.

[56] ಅವರು ಮನೆಗೆ ಹಿಂತಿರುಗಿ ಪರಿಮಳ ದ್ರವ್ಯವನ್ನೂ ಸುಗಂಧ ತೈಲವನ್ನೂ ಸಿದ್ಧಪಡಿಸಿಕೊಂಡರು; ಆದರೆ ಮೋಶೆಯ ಆಜ್ಞಾನುಸಾರವಾಗಿ ಸಬ್ಬತ್ ದಿನದಲ್ಲಿ ವಿಶ್ರಮಿಸಿಕೊಂಡರು.

ಲೂಕ — Chapters