Skip to content
Opens in a new window
Listen to this chapter • 11:30

[1] ಯೇಸು ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಅವರಿಗೆ ಎಲ್ಲಾ ದೆವ್ವಗಳನ್ನು ಓಡಿಸುವುದಕ್ಕೂ ರೋಗಗಳನ್ನು ಸ್ವಸ್ಥಮಾಡುವುದಕ್ಕೂ ಅವರಿಗೆ ಶಕ್ತಿಯನ್ನು ಮತ್ತು ಅಧಿಕಾರವನ್ನು ಕೊಟ್ಟರು,

[2] ಶಿಷ್ಯರು ದೇವರ ರಾಜ್ಯವನ್ನು ಸಾರುವುದಕ್ಕೂ ರೋಗಿಗಳನ್ನು ಸ್ವಸ್ಥಮಾಡುವುದಕ್ಕೂ ಯೇಸು ಅವರನ್ನು ಕಳುಹಿಸಿಕೊಟ್ಟರು.

[3] ಯೇಸು ಅವರಿಗೆ, “ನೀವು ಪ್ರಯಾಣಕ್ಕಾಗಿ ಕೋಲು, ಚೀಲ, ರೊಟ್ಟಿ ಅಥವಾ ಹಣವನ್ನು ತೆಗೆದುಕೊಳ್ಳಬೇಡಿರಿ; ಇದಲ್ಲದೆ ನಿಮಗೆ ಎರಡು ಅಂಗಿಗಳೂ ಇರಬಾರದು.

[4] ನೀವು ಯಾವುದಾದರೂ ಮನೆಯನ್ನು ಪ್ರವೇಶಿಸಿದಾಗ, ಅಲ್ಲೇ ಇದ್ದು ಆ ಪಟ್ಟಣದಿಂದ ಹೋಗುವವರೆಗೆ ಆ ಮನೆಯಲ್ಲೇ ವಾಸವಾಗಿದ್ದು, ಅಲ್ಲಿಂದಲೇ ಹೊರಡಿರಿ.

[5] ಯಾರಾದರೂ ನಿಮ್ಮನ್ನು ಸ್ವಾಗತಿಸದೆ ಹೋದರೆ, ನೀವು ಆ ಪಟ್ಟಣದ ಹೊರಗೆ ಹೋದಾಗ ಅವರಿಗೆ ವಿರೋಧವಾಗಿ ಸಾಕ್ಷಿಯಾಗಿರುವಂತೆ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ,” ಎಂದರು.

[6] ಶಿಷ್ಯರು ಪ್ರತಿಯೊಂದು ಹಳ್ಳಿಗೆ ಹೋಗುತ್ತಾ, ಸುವಾರ್ತೆಯನ್ನು ಸಾರುತ್ತಾ, ಎಲ್ಲಾ ಕಡೆಗಳಲ್ಲಿ ರೋಗಿಗಳನ್ನು ಸ್ವಸ್ಥಮಾಡುತ್ತಾ ಹೋದರು.

[7] ಚತುರಾಧಿಪತಿಯಾದ ಹೆರೋದನು ಯೇಸು ಮಾಡಿದವುಗಳನ್ನೆಲ್ಲಾ ಕೇಳಿ ಕಳವಳಗೊಂಡನು. ಏಕೆಂದರೆ ಯೋಹಾನನು ಸತ್ತವರೊಳಗಿಂದ ಎದ್ದಿದ್ದಾನೆಂದು ಕೆಲವರು ಹೇಳುತ್ತಿದ್ದರು.

[8] ಕೆಲವರು ಎಲೀಯನು ಪ್ರತ್ಯಕ್ಷನಾಗಿದ್ದಾನೆಂದೂ ಇನ್ನೂ ಕೆಲವರು ಪ್ರಾಚೀನ ಪ್ರವಾದಿಗಳಲ್ಲಿ ಒಬ್ಬನು ತಿರುಗಿ ಎದ್ದಿದ್ದಾನೆಂದೂ ಹೇಳುತ್ತಿದ್ದರು.

[9] ಆದರೆ ಹೆರೋದನು, “ನಾನು ಯೋಹಾನನನ್ನು ಶಿರಚ್ಛೇದನ ಮಾಡಿದೆ, ನಾನು ಯಾರನ್ನು ಕುರಿತು, ಈ ವಿಷಯಗಳನ್ನು ಕೇಳುತ್ತಿರುವೆ, ಈತನು ಯಾರು?” ಎಂದು ಹೇಳಿ ಅವನು ಯೇಸುವನ್ನು ಕಾಣಲು ಪ್ರಯತ್ನಿಸಿದನು.

[10] ಅಪೊಸ್ತಲರು ಹಿಂದಿರುಗಿ ಬಂದು, ತಾವು ಮಾಡಿದವುಗಳನ್ನೆಲ್ಲಾ ಯೇಸುವಿಗೆ ತಿಳಿಸಿದರು. ಆಗ ಯೇಸು ಬೇತ್ಸಾಯಿದ ಎಂಬ ಹೆಸರಿನ ಪಟ್ಟಣಕ್ಕೆ ಪ್ರತ್ಯೇಕವಾಗಿ ಅವರನ್ನು ಕರೆದುಕೊಂಡು ಹೋದರು.

[11] ಆದರೆ ಜನರು ಅದನ್ನು ತಿಳಿದು ಯೇಸುವನ್ನು ಹಿಂಬಾಲಿಸಿದರು. ಯೇಸು ಅವರನ್ನು ಸ್ವೀಕರಿಸಿ, ದೇವರ ರಾಜ್ಯದ ವಿಷಯವಾಗಿ ಅವರ ಸಂಗಡ ಮಾತನಾಡಿ, ಸ್ವಸ್ಥತೆ ಬೇಕಾಗಿದ್ದವರನ್ನು ಸ್ವಸ್ಥಮಾಡಿದರು.

[12] ಸಂಜೆಯಾಗುತ್ತಿದ್ದಾಗ ಹನ್ನೆರಡು ಮಂದಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಈ ಜನಸಮೂಹವು ಸುತ್ತಲಿರುವ ಊರುಗಳಿಗೂ ಸೀಮೆಗಳಿಗೂ ಹೋಗಿ ಊಟವಸತಿಯನ್ನು ದೊರಕಿಸಿಕೊಳ್ಳುವಂತೆ ಅವರನ್ನು ಕಳುಹಿಸಿಬಿಡಿ. ನಾವು ಇಲ್ಲಿ ನಿರ್ಜನ ಪ್ರದೇಶದಲ್ಲಿ ಇದ್ದೇವಲ್ಲ,” ಎಂದರು.

[13] ಆದರೆ ಯೇಸು ಅವರಿಗೆ, “ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿರಿ,” ಎಂದರು. ಅದಕ್ಕೆ ಅವರು, “ನಮ್ಮಲ್ಲಿ ಐದು ರೊಟ್ಟಿ ಎರಡು ಮೀನುಗಳಿಗಿಂತ ಹೆಚ್ಚೇನು ಇಲ್ಲ. ನಾವು ಹೋಗಿ ಈ ಜನರಿಗೆ ಬೇಕಾಗುವಷ್ಟು ಆಹಾರವನ್ನು ಕೊಂಡುಕೊಂಡು ಬರಬೇಕೆ?” ಎಂದರು.

[14] ಅಲ್ಲಿ ಹೆಚ್ಚು ಕಡಿಮೆ ಗಂಡಸರೇ ಐದು ಸಾವಿರ ಮಂದಿ ಇದ್ದರು. ಆಗ ಯೇಸು ತಮ್ಮ ಶಿಷ್ಯರಿಗೆ, “ಪಂಕ್ತಿಗಳಲ್ಲಿ ಐವತ್ತರಂತೆ ಅವರನ್ನು ಕೂರಿಸಿರಿ,” ಎಂದರು.

[15] ಅವರು ಹಾಗೆಯೇ ಮಾಡಿ, ಎಲ್ಲರನ್ನೂ ಕುಳ್ಳಿರಿಸಿದರು.

[16] ತರುವಾಯ ಯೇಸು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಪರಲೋಕದ ಕಡೆಗೆ ನೋಡಿ, ಅವುಗಳನ್ನು ಆಶೀರ್ವದಿಸಿ ಮುರಿದು, ತಮ್ಮ ಶಿಷ್ಯರಿಗೆ ಕೊಟ್ಟು ಜನರಿಗೆ ಹಂಚುವಂತೆ ತಿಳಿಸಿದರು.

[17] ಅವರೆಲ್ಲರೂ ತಿಂದು ತೃಪ್ತರಾದರು. ಶಿಷ್ಯರು ಉಳಿದ ತುಂಡುಗಳನ್ನು ಕೂಡಿಸಲು ಹನ್ನೆರಡು ಬುಟ್ಟಿಗಳು ತುಂಬಿದವು.

[18] ಯೇಸು ಏಕಾಂತವಾಗಿ ಪ್ರಾರ್ಥಿಸುತ್ತಿದ್ದಾಗ ಅವರ ಶಿಷ್ಯರು ಅವರೊಂದಿಗೆ ಇದ್ದರು, ಆಗ ಯೇಸು ಅವರಿಗೆ, “ಜನರು ನನ್ನನ್ನು ಯಾರೆನ್ನುತ್ತಾರೆ?” ಎಂದು ಕೇಳಿದರು.

[19] ಅವರು ಉತ್ತರವಾಗಿ, “ಸ್ನಾನಿಕನಾದ ಯೋಹಾನನು ಎನ್ನುತ್ತಾರೆ. ಆದರೆ ಕೆಲವರು ಎಲೀಯನು. ಬೇರೆ ಕೆಲವರು ಪೂರ್ವಕಾಲದ ಪ್ರವಾದಿಗಳಲ್ಲಿ ಒಬ್ಬನು ಪುನಃ ಜೀವಂತನಾಗಿದ್ದಾನೆ ಎನ್ನುತ್ತಾರೆ,” ಎಂದು ಹೇಳಿದರು.

[20] ಯೇಸು ಅವರಿಗೆ, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಕೇಳಿದರು. ಆಗ ಪೇತ್ರನು, “ನೀವು ದೇವರು ಕಳುಹಿಸಿಕೊಟ್ಟ ಕ್ರಿಸ್ತನು,” ಎಂದು ಹೇಳಿದನು.

[21] ಯೇಸು ಈ ಸಂಗತಿಯನ್ನು ಯಾರಿಗೂ ಹೇಳಬಾರದೆಂದು ಅವರಿಗೆ ಖಂಡಿತವಾಗಿ ಆಜ್ಞಾಪಿಸಿದರು.

[22] ಅನಂತರ ಯೇಸು, “ಮನುಷ್ಯಪುತ್ರನಾದ ನಾನು ಅನೇಕ ಕಷ್ಟಗಳನ್ನು ಅನುಭವಿಸಿ ಜನನಾಯಕರಿಂದಲೂ ಮುಖ್ಯಯಾಜಕರಿಂದಲೂ ನಿಯಮ ಬೋಧಕರಿಂದಲೂ ತಿರಸ್ಕೃತನಾಗಿ, ಕೊಲೆಗೆ ಗುರಿಯಾಗಿ ಮೂರನೆಯ ದಿನದಲ್ಲಿ ಜೀವಂತವಾಗಿ ಏಳುವುದು ಅಗತ್ಯವಾಗಿದೆ,” ಎಂದು ಎಚ್ಚರಿಸಿದರು.

[23] ಯೇಸು ಅವರೆಲ್ಲರಿಗೆ: “ಯಾರಾದರೂ ನನ್ನ ಶಿಷ್ಯರಾಗುವುದಕ್ಕೆ ಬಯಸಿದರೆ, ಅವರು ತಮ್ಮನ್ನು ನಿರಾಕರಿಸಿ ತಮ್ಮ ಶಿಲುಬೆಯನ್ನು ಪ್ರತಿದಿನ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.

[24] ಯಾರಾದರೂ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವವರು, ಅದನ್ನು ಕಳೆದುಕೊಳ್ಳುವರು, ಆದರೆ ನನ್ನ ನಿಮಿತ್ತವಾಗಿ ಯಾರಾದರೂ ತಮ್ಮ ಪ್ರಾಣವನ್ನು ಕಳೆದುಕೊಳ್ಳುವವರು ಅದನ್ನು ಕಂಡುಕೊಳ್ಳುವರು.

[25] ಒಬ್ಬ ವ್ಯಕ್ತಿ ಲೋಕವನ್ನೆಲ್ಲಾ ಸಂಪಾದಿಸಿಕೊಂಡು, ತನ್ನನ್ನು ತಾನೇ ಹಾಳು ಮಾಡಿಕೊಂಡರೆ, ಇಲ್ಲವೆ ನಷ್ಟಪಡಿಸಿಕೊಂಡರೆ, ಆ ವ್ಯಕ್ತಿಗೆ ಪ್ರಯೋಜನವೇನು?

[26] ಯಾರಾದರೂ ನನ್ನ ಮತ್ತು ನನ್ನ ವಾಕ್ಯಗಳ ವಿಷಯದಲ್ಲಿ ನಾಚಿಕೊಳ್ಳುವುದಾದರೆ, ಮನುಷ್ಯಪುತ್ರನಾದ ನಾನು ಸಹ ನನ್ನ ತಂದೆಯ ಮಹಿಮೆಯೊಡನೆಯೂ ಪರಿಶುದ್ಧ ದೂತರೊಡನೆಯೂ ಬರುವಾಗ, ಅವರ ವಿಷಯದಲ್ಲಿ ನಾಚಿಕೊಳ್ಳುವೆನು.

[27] “ಆದರೆ ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಇಲ್ಲಿ ನಿಂತವರಲ್ಲಿ ಕೆಲವರು ದೇವರ ರಾಜ್ಯವನ್ನು ಕಾಣುವತನಕ ಮರಣವನ್ನು ಹೊಂದುವುದೇ ಇಲ್ಲ,” ಎಂದರು.

[28] ಈ ಮಾತುಗಳನ್ನು ಹೇಳಿ ಸುಮಾರು ಎಂಟು ದಿನಗಳಾದ ಮೇಲೆ ಯೇಸು, ಪೇತ್ರ, ಯೋಹಾನ ಮತ್ತು ಯಾಕೋಬರನ್ನು ಕರೆದುಕೊಂಡು ಪ್ರಾರ್ಥನೆ ಮಾಡುವುದಕ್ಕಾಗಿ ಬೆಟ್ಟವನ್ನೇರಿದರು.

[29] ಯೇಸು ಪ್ರಾರ್ಥನೆ ಮಾಡುತ್ತಿದ್ದಾಗ, ಅವರ ಮುಖಭಾವವು ಬದಲಾಯಿತು ಮತ್ತು ಅವರ ಉಡುಪು ಬೆಳ್ಳಗಾಗಿ ಮಿಂಚುತ್ತಾ ಬಂತು.

[30] ಮೋಶೆ ಮತ್ತು ಎಲೀಯನು ಎಂಬ ಇಬ್ಬರು ಪುರುಷರು ಯೇಸುವಿನೊಂದಿಗೆ ಮಾತನಾಡುತ್ತಿದ್ದರು.

[31] ಇವರು ಮಹಿಮೆಯಲ್ಲಿ ಕಾಣಿಸಿಕೊಂಡು, ಯೇಸು ಯೆರೂಸಲೇಮಿನಲ್ಲಿ ಪೂರೈಸುವುದಕ್ಕಿದ್ದ ಅವರ ಮರಣದ ವಿಷಯವಾಗಿ ಮಾತನಾಡುತ್ತಿದ್ದರು.

[32] ಆದರೆ ಪೇತ್ರನು ಅವನ ಸಂಗಡ ಇದ್ದವರೂ ನಿದ್ರೆಯಿಂದ ಭಾರವುಳ್ಳವರಾಗಿದ್ದರು, ಅವರು ಎಚ್ಚೆತ್ತಾಗ ಯೇಸುವಿನ ಮಹಿಮೆಯನ್ನೂ ಅವರ ಕೂಡ ನಿಂತಿದ್ದ ಇಬ್ಬರು ಪುರುಷರನ್ನೂ ಕಂಡರು.

[33] ಅವರು ಹೋಗುತ್ತಿದ್ದಾಗ ಪೇತ್ರನು ಯೇಸುವಿಗೆ, “ಗುರುವೇ, ನಾವು ಇಲ್ಲೇ ಇರುವುದು ನಮಗೆ ಒಳ್ಳೆಯದು, ನಾವು ನಿಮಗೊಂದು ಮೋಶೆಗೊಂದು ಮತ್ತು ಎಲೀಯನಿಗೊಂದು, ಹೀಗೆ ಮೂರು ಗುಡಾರಗಳನ್ನು ಕಟ್ಟುವೆವು,” ಎಂದನು. ತಾನು ಹೇಳಿದ್ದನ್ನು ಅವನು ಅರಿಯದೆ ಇದ್ದನು.

[34] ಹೀಗೆ ಪೇತ್ರನು ಮಾತನಾಡುತ್ತಿದ್ದಾಗಲೇ, ಮೇಘವು ಬಂದು ಅವರನ್ನು ಕವಿದುಕೊಂಡಿತು ಮತ್ತು ಅವರು ಆ ಮೇಘದೊಳಗೆ ಪ್ರವೇಶಿಸುತ್ತಿದ್ದಾಗ ಶಿಷ್ಯರು ಭಯಪಟ್ಟರು.

[35] ಆಗ ಮೇಘದೊಳಗಿಂದ, “ಈತನು, ನಾನು ಆರಿಸಿಕೊಂಡ ನನ್ನ ಮಗನು, ಈತನ ಮಾತನ್ನು ಕೇಳಿರಿ,” ಎಂದು ಹೇಳುವ ಧ್ವನಿಯಾಯಿತು.

[36] ಧ್ವನಿಯಾದ ನಂತರ, ಅವರು ಯೇಸುವನ್ನು ಮಾತ್ರ ಕಂಡರು. ಅವರು ಕಂಡವುಗಳನ್ನು ಆ ದಿವಸಗಳಲ್ಲಿ ಯಾರಿಗೂ ತಿಳಿಸದೆ ಸುಮ್ಮನಿದ್ದರು.

[37] ಮರುದಿನ, ಅವರು ಬೆಟ್ಟದಿಂದ ಕೆಳಗಿಳಿದು ಬಂದಾಗ, ಬಹಳ ಜನರು ಯೇಸುವನ್ನು ಸಂಧಿಸಿದರು.

[38] ಆಗ ಆ ಗುಂಪಿನೊಳಗಿಂದ ಒಬ್ಬ ಮನುಷ್ಯನು ಕೂಗಿ, “ಬೋಧಕರೇ, ನನ್ನ ಮಗನ ಮೇಲೆ ದೃಷ್ಟಿಯಿಡಿರಿ ಎಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ, ಏಕೆಂದರೆ ಅವನು ನನಗೆ ಒಬ್ಬನೇ ಮಗನು.

[39] ದೆವ್ವವು ಅವನನ್ನು ಹಿಡಿಯುತ್ತಲೇ ಅವನು ಫಕ್ಕನೆ ಕೂಗಿಕೊಳ್ಳುತ್ತಾನೆ; ಇದಲ್ಲದೆ ಬಾಯಲ್ಲಿ ನೊರೆ ಸುರಿಯುವಷ್ಟು ಅವನನ್ನು ಒದ್ದಾಡಿಸುವುದಲ್ಲದೆ ಜಜ್ಜುತ್ತದೆ. ಅದು ಅವನನ್ನು ಬಿಟ್ಟು ಹೋಗುವುದು ಕಷ್ಟ.

[40] ಅದನ್ನು ಓಡಿಸುವಂತೆ, ನಾನು ನಿಮ್ಮ ಶಿಷ್ಯರನ್ನು ಬೇಡಿಕೊಂಡೆನು, ಆದರೆ ಅದು ಅವರಿಂದ ಆಗಲಿಲ್ಲ,” ಎಂದನು.

[41] ಯೇಸು, “ವಿಶ್ವಾಸವಿಲ್ಲದ ಮೂರ್ಖ ಸಂತತಿಯೇ, ಎಷ್ಟು ಕಾಲ ನಾನು ನಿಮ್ಮೊಂದಿಗಿರಲಿ? ಎಷ್ಟು ಕಾಲ ನಿಮ್ಮನ್ನು ಸಹಿಸಲಿ?” ಎಂದು ಹೇಳಿ, “ನಿನ್ನ ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ,” ಎಂದರು.

[42] ಅವನು ಇನ್ನೂ ಬರುತ್ತಿದ್ದಾಗಲೇ, ದೆವ್ವವು ಅವನನ್ನು ಒದ್ದಾಡಿಸಿ ನೆಲಕ್ಕೆ ಅಪ್ಪಳಿಸಿತು. ಯೇಸು ಆ ದೆವ್ವವನ್ನು ಗದರಿಸಿ ಹುಡುಗನನ್ನು ಸ್ವಸ್ಥಮಾಡಿ, ಅವನನ್ನು ಅವನ ತಂದೆಗೆ ಪುನಃ ಒಪ್ಪಿಸಿದರು.

[43] ಆಗ ಜನರೆಲ್ಲರೂ ದೇವರ ಮಹತ್ತಾದ ಶಕ್ತಿಗಾಗಿ ಬೆರಗಾದರು. ಯೇಸು ಮಾಡಿದ ಎಲ್ಲಾ ಕಾರ್ಯಗಳಿಗಾಗಿ ಅವರಲ್ಲಿ ಪ್ರತಿಯೊಬ್ಬನೂ ಆಶ್ಚರ್ಯಪಡುತ್ತಿರುವಲ್ಲಿ, ಯೇಸು ತಮ್ಮ ಶಿಷ್ಯರಿಗೆ,

[44] “ಈ ಮಾತುಗಳನ್ನು ಆಳವಾಗಿ ಗ್ರಹಿಸಿಕೊಳ್ಳಿರಿ: ಏಕೆಂದರೆ ಮನುಷ್ಯಪುತ್ರನಾದ ನಾನು ಮನುಷ್ಯರ ಕೈವಶವಾಗುವೆನು,” ಎಂದು ಹೇಳಿದರು.

[45] ಆದರೆ ಶಿಷ್ಯರು ಈ ಮಾತನ್ನು ತಿಳಿದುಕೊಳ್ಳಲಿಲ್ಲ. ಅವರು ಗ್ರಹಿಸಲಾರದಂತೆ ಅದು ಅವರಿಗೆ ಮರೆಯಾಗಿತ್ತು, ಆ ಮಾತನ್ನು ಕುರಿತು ಯೇಸುವನ್ನು ಕೇಳುವುದಕ್ಕೆ ಅವರು ಭಯಪಟ್ಟರು.

[46] ತಮ್ಮಲ್ಲಿ ಯಾವನು ಎಲ್ಲರಿಗಿಂತ ದೊಡ್ಡವನು ಎಂಬ ತರ್ಕವು ಶಿಷ್ಯರೊಳಗೆ ಎದ್ದಿತು.

[47] ಯೇಸು, ಅವರ ಮನದ ಆಲೋಚನೆಯನ್ನು ತಿಳಿದವರಾಗಿ, ಒಂದು ಮಗುವನ್ನು ತಮ್ಮ ಬಳಿಯಲ್ಲಿ ನಿಲ್ಲಿಸಿ,

[48] “ಯಾರು ಈ ಚಿಕ್ಕ ಮಗುವನ್ನು ನನ್ನ ಹೆಸರಿನಲ್ಲಿ ಸ್ವೀಕರಿಸಿಕೊಳ್ಳುತ್ತಾರೋ ಅವರು ನನ್ನನ್ನೇ ಸ್ವೀಕರಿಸಿಕೊಳ್ಳುತ್ತಾರೆ; ಯಾರು ನನ್ನನ್ನು ಸ್ವೀಕರಿಸಿಕೊಳ್ಳುತ್ತಾರೋ ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸಿಕೊಳ್ಳುತ್ತಾರೆ. ನಿಮ್ಮೆಲ್ಲರಲ್ಲಿ ಚಿಕ್ಕವನಾಗಿರುವವನೇ ದೊಡ್ಡವನಾಗಿರುವನು,” ಎಂದರು.

[49] ಯೋಹಾನನು, “ಬೋಧಕರೇ, ಒಬ್ಬನು ನಿಮ್ಮ ಹೆಸರಿನಲ್ಲಿ ದೆವ್ವಗಳನ್ನು ಓಡಿಸುವುದನ್ನು ನಾವು ಕಂಡು ಅವನಿಗೆ ಅಡ್ಡಿಮಾಡಿದೆವು, ಏಕೆಂದರೆ ಅವನು ನಮ್ಮೊಂದಿಗೆ ಸೇರಿದವನಲ್ಲ,” ಎಂದನು.

[50] ಅದಕ್ಕೆ ಯೇಸು, “ಅವನನ್ನು ತಡೆಯಬೇಡಿರಿ, ನಿಮಗೆ ವಿರೋಧವಾಗಿರದವನು ನಿಮ್ಮ ಪಕ್ಷದವನೇ,” ಎಂದು ಹೇಳಿದರು.

[51] ಯೇಸು ತಾವು ಸ್ವರ್ಗಕ್ಕೆ ಏರಿಹೋಗುವ ಕಾಲ ಬಂದಾಗ, ಯೆರೂಸಲೇಮಿಗೆ ಹೋಗುವುದಕ್ಕಾಗಿ ತಮ್ಮ ಮನಸ್ಸನ್ನು ದೃಢಮಾಡಿಕೊಂಡು

[52] ತಮಗೆ ಮುಂದಾಗಿ ಶಿಷ್ಯರನ್ನು ದೂತರನ್ನಾಗಿ ಕಳುಹಿಸಿದರು. ಅವರು ಹೋಗಿ ಅವರಿಗಾಗಿ ಎಲ್ಲವನ್ನೂ ಸಿದ್ಧಪಡಿಸುವಂತೆ ಸಮಾರ್ಯದ ಒಂದು ಹಳ್ಳಿಯೊಳಕ್ಕೆ ಪ್ರವೇಶಿಸಿದರು.

[53] ಆದರೆ ಸಮಾರ್ಯದವರು ಯೇಸುವನ್ನು ಸ್ವೀಕರಿಸಲಿಲ್ಲ, ಏಕೆಂದರೆ ಯೇಸು ಯೆರೂಸಲೇಮಿಗೆ ಹೋಗುವವರಾಗಿದ್ದರು.

[54] ಯೇಸುವಿನ ಶಿಷ್ಯರಾದ ಯಾಕೋಬ ಮತ್ತು ಯೋಹಾನರು ಇದನ್ನು ಕಂಡು, “ಕರ್ತದೇವರೇ, ಎಲೀಯನು ಮಾಡಿದ ಪ್ರಕಾರ ಇವರನ್ನು ದಹಿಸಿಬಿಡುವಂತೆ ಆಕಾಶದಿಂದ ಬೆಂಕಿ ಬೀಳುವ ಹಾಗೆ ನಾವು ಅಪ್ಪಣೆಕೊಡಲು ನಿಮಗೆ ಒಪ್ಪಿಗೆ ಇದೆಯೋ?” ಎಂದು ಕೇಳಿದರು.

[55] ಆದರೆ ಯೇಸು ಅವರ ಕಡೆ ತಿರುಗಿ ಅವರನ್ನು ಗದರಿಸಿ, “ನೀವು ಎಂಥ ಆತ್ಮದವರಾಗಿದ್ದೀರೆಂದು ನಿಮಗೆ ತಿಳಿಯದು.

[56] ಮನುಷ್ಯಪುತ್ರನಾದ ನಾನು ಮನುಷ್ಯರ ಪ್ರಾಣಗಳನ್ನು ನಾಶಮಾಡುವುದಕ್ಕಾಗಿ ಅಲ್ಲ, ಅವರನ್ನು ರಕ್ಷಿಸುವುದಕ್ಕಾಗಿ ಬಂದೆನು,” ಎಂದು ಹೇಳಿದರು. ಅನಂತರ ಅವರು ಮತ್ತೊಂದು ಹಳ್ಳಿಗೆ ಹೋದರು.

[57] ಅವರು ದಾರಿಯಲ್ಲಿ ಹೋಗುತ್ತಿರುವಾಗ, ಒಬ್ಬನು ಯೇಸುವಿಗೆ, “ನೀವು ಎಲ್ಲಿಗೆ ಹೋದರೂ ನಾನು ನಿಮ್ಮನ್ನು ಹಿಂಬಾಲಿಸುವೆನು” ಎಂದನು.

[58] ಯೇಸು ಅವನಿಗೆ, “ನರಿಗಳಿಗೆ ಗುಹೆಗಳಿವೆ, ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯಪುತ್ರನಾದ ನನಗೆ ತಲೆಯಿಡುವುದಕ್ಕೂ ಸ್ಥಳ ಇಲ್ಲ,” ಎಂದರು.

[59] ಯೇಸು ಮತ್ತೊಬ್ಬನಿಗೆ, “ನನ್ನನ್ನು ಹಿಂಬಾಲಿಸು,” ಎಂದರು. ಆದರೆ ಅವನು, “ಕರ್ತದೇವರೇ, ಮೊದಲು ನಾನು ಹೋಗಿ ನನ್ನ ತಂದೆಯ ಶವಸಂಸ್ಕಾರ ಮಾಡಿಬರಲು ಅನುಮತಿಕೊಡಿರಿ,” ಎಂದನು.

[60] ಯೇಸು ಅವನಿಗೆ, “ಸತ್ತವರೇ ತಮ್ಮವರಲ್ಲಿ ಸತ್ತುಹೋದವರನ್ನು ಸಮಾಧಿ ಮಾಡಿಕೊಳ್ಳಲಿ, ಆದರೆ ನೀನು ಹೋಗಿ ದೇವರ ರಾಜ್ಯವನ್ನು ಸಾರು,” ಎಂದರು.

[61] ಇದಲ್ಲದೆ ಮತ್ತೊಬ್ಬನು ಸಹ, “ಕರ್ತದೇವರೇ, ನಾನು ನಿಮ್ಮನ್ನು ಹಿಂಬಾಲಿಸುವೆನು, ಆದರೆ ನಾನು ಮೊದಲು ಹೋಗಿ ನನ್ನ ಮನೆಯಲ್ಲಿದ್ದವರನ್ನು ಬೀಳ್ಕೊಡುವಂತೆ ನನಗೆ ಅಪ್ಪಣೆಕೊಡಿ,” ಎಂದನು.

[62] ಆಗ ಯೇಸು ಅವನಿಗೆ, “ನೇಗಿಲಿನ ಮೇಲೆ ತನ್ನ ಕೈಯನ್ನಿಟ್ಟು ಹಿಂದಕ್ಕೆ ನೋಡುವವನು ದೇವರ ರಾಜ್ಯಕ್ಕೆ ಯೋಗ್ಯನಲ್ಲ,” ಎಂದರು.

ಲೂಕ — Chapters